ನೀನೊಂದು ಮಾಯೆ

ನೀನೊಂದು ಮಾಯೆ

ನೀನೊಂದು ಮಾಯೆ
ನಿನ್ನ ಮೋಹದ ಬಲೆಯೊಳಗೀಗ
ನಾನು ಕೊಳಲಾಗಿ ಸೂಸುತ್ತಿರುವ ಮುರಳೀನಾದ

ಬಿಟ್ಟರೂ ಬಿಡದ ಮಾಯೆ ನೀನು
ಒಲವಾಗಿ, ಗುರಿಯಾಗಿ , ಕನಸಾಗಿ
ಆವರ್ತನಗೊಳ್ಳುವೆ ಬದುಕೆನ್ನುವ ಸಾರ್ಥದೊಳಗೆ

ನಿನ್ನನ್ನು ಜರಿದವರೆಲ್ಲರಿಗೂ
ನಿನ್ನ ಹೊರತು ಪಯಣವೆಂಬುದು ಕ್ಲಿಷ್ಟ ದಾರಿ
ನಿನ್ನಿಂದ ಮುಕ್ತರೆನ್ನುವವರೂ ಹೊರುತಿಹರಲ್ಲ ನಿನ್ನಯ ಛಾಯೆ!

ನಿರ್ವಿಕಾರಳು ನೀನು, ಸರ್ವಾಂತರ್ಯಾಮಿ
ನಾನೇನು ನಿನ್ನ ಸ್ತುತಿಸಿದರೂ, ತೆಗಳಿದರೂ
ನಿನಗೋ ಯಾರ ಹಂಗಿಲ್ಲ, ನೀ ನಿನ್ನಷ್ಟಕ್ಕೆ ಉಲಿಯುವೆ, ಅಬ್ಬರಿಸುವೆ

ನೀನೇ ಮಾಯೆಯೋ ನಾನೇ ಮಾಯೆಯೋ
ನನ್ನೀ ಅಸ್ತಿತ್ವ ನಿನ್ನದೇ ಕೊಡುಗೆ
ನಿನ್ನ ಗೆಲ್ಲುವೆನೆಂಬ ಯೋಚನೆ, ಹಬ್ಬುವ ದಟ್ಟ ಮಿಥ್ಯ ನೆರಳು

ಅದಕ್ಕೇ ನಿನ್ನ ಬಗೆಗಿನ ಚಿಂತೆಯ ಮರೆತು
ನಿನ್ನ ಮಾಯೆಗೊಳಗಾಗಿ ನುಡಿಸುತ್ತಿರಲು ಮುರಳೀ ನಾದ
ಅದನ್ನೇ ಆಸ್ವಾದಿಸುತ್ತಿದ್ದಾರೆ ಎಂದಿನಂತೆ ಕೇಳುಗರೀಗ

Rating
No votes yet

Comments