ನೀ ಹೀಂಗ ನೋಡಬ್ಯಾಡ ನನ್ನ... (ಬೇಂದ್ರೆ-೨)

ನೀ ಹೀಂಗ ನೋಡಬ್ಯಾಡ ನನ್ನ... (ಬೇಂದ್ರೆ-೨)

ಮೂಕ ವೇದನೆ ಎಂಬ ಒಂದು ನುಡಿಗಟ್ಟಿದೆ. ಹೇಳಲಾರದ ನೋವದು. ಹೇಳಿಕೊಂಡರೂ ವ್ಯಕ್ತವಾಗದ ಭಾವವದು. ಒಳಗೇ ಇಟ್ಟುಕೊಂಡಿದ್ದರೂ, ಉಕ್ಕಿ ಹೊರಗೂ ಕಾಣಿಸುವಂಥ ನೋವದು.

ಬೇಂದ್ರೆಯಂಥ ವ್ಯಕ್ತಿ ಅದನ್ನು ಕಣ್ಣಾರೆ ಕಂಡು, ಸ್ವತಃ ಅನುಭವಿಸಿದಾಗ ಉದ್ಭವವಾದದ್ದು ’ನಾದಲೀಲೆ’ ಸಂಕಲನದ ’ನೀ ಹೀಂಗ ನೋಡಬ್ಯಾಡ ನನ್ನ’ ಕವಿತೆ.

ಎಂಟೇ ದಿನಗಳಲ್ಲಿ ಅವರ ಇಬ್ಬರು ಎಳೆಯ ಮಕ್ಕಳು ತೀರಿಕೊಳ್ಳುತ್ತಾರೆ. ಬೇಂದ್ರೆಯವರಿಗೆ ಆಘಾತವಾಗುತ್ತದೆ. ಅವರಿಗಿಂತ ಹೆಚ್ಚಿನ ಶೋಕ ಅವರ ಮಡದಿಯದು. ಯಾರು ಯಾರಿಗೆ ಸಮಾಧಾನ ಹೇಳಬೇಕು? ತಾನತ್ತರೆ ಕವಿಹೃದಯದ ಗಂಡ ಇನ್ನಷ್ಟು ಶೋಕಪಡುತ್ತಾರೆ ಎಂದುಕೊಂಡು ಅವರ ಮಡದಿ ಸುಮ್ಮನಿದ್ದಾರೆ. ಆದರೆ, ಮಕ್ಕಳನ್ನು ಕಳೆದುಕೊಂಡ ಶೋಕ ಉಕ್ಕುಕ್ಕಿ ಬರುತ್ತಿದೆ. ಅದನ್ನು ಅದುಮಿಟ್ಟುಕೊಂಡು ಆಕೆ ಸುಮ್ಮನೇ ಕೂತಿದ್ದಾರೆ.

ಇದನ್ನು ಬೇಂದ್ರೆ ನೋಡುತ್ತಾರೆ. ಮಡದಿ ಕಣ್ಣೀರು ಸುರಿಸುತ್ತಿಲ್ಲವಾದರೂ ಅವು ಕಣ್ಣಂಚಿನಲ್ಲಿ ಮಡುಗಟ್ಟಿ ನಿಂತಿವೆ. ಮುಖದಲ್ಲಿ ದುಃಖದ ಅಲೆಗಳು. ಆದರೆ, ಗಟ್ಟಿಯಾಗಿ ಅಳುತ್ತಿಲ್ಲ ಅಷ್ಟೇ.

ಆ ನೋವಿನಲ್ಲಿ ದುಃಖ ತುಂಬಿಕೊಂಡ ಕಣ್ಣಿನಿಂದ ಗಂಡನನ್ನು ಆರ್ದ್ರಳಾಗಿ ನೋಡುತ್ತಾಳೆ ಅವರ ಮಡದಿ. ಮಕ್ಕಳನ್ನು ಕಳೆದುಕೊಂಡ ಶೋಕದ ಆ ನೋಟವನ್ನು ತಾಳಿಕೊಳ್ಳುವುದು ಕವಿ ಬೇಂದ್ರೆಯವರಿಗೆ ಆಗಿಲ್ಲ. ಏನಂತ ಸಂತೈಸಬೇಕು? ಹೇಗೆ ಸಮಾಧಾನಿಸಬೇಕು?

ಇಂಥದೊಂದು ದುಃಖದ ಸಂದರ್ಭದಲ್ಲಿ ಮೂಡಿಬಂದ ಕವಿತೆ ’ನೀ ಹೀಂಗ ನೋಡಬ್ಯಾಡ ನನ್ನ’. ಸಿನಿಮಾದಲ್ಲಿ ಕೇವಲ ಮೂರು ನುಡಿಗಳು ಮಾತ್ರ ಇವೆ. ಪೂರ್ತಿ ಕವಿತೆ ಪಲ್ಲವಿ ಹೊರತುಪಡಿಸಿ ಐದು ನುಡಿಯದು. ಭಾವಗೀತೆಯಾಗಿ ಸಿ. ಅಶ್ವಥ್‌ ಇದನ್ನು ಹಾಡಿದ್ದಾರೆ. http://www.kannadaaudio.com/Songs/Bhaavageethe/BestOfC.Ashwath/Nee.ram . ವಿಡಿಯೋ ಕೊಂಡಿ http://www.videogirmit.com/da-ra-bendre/ni-hinga-nodabyda-e0-b2-a8-e0-b3-80-e0-b2-b9-e0-b2-bf-e0-b2-82-e0-b2-97-e0-b2-a8-e0-b3-8b-e0-b2-a1-e0-b2-ac-e0-b3-8d-e0-b2-af-e0-b2-be-e0-b2-a1-e0-b2-a8-e0-b2-a8-e0-b3-8d-e0-b2-a8-video_381154cc0.html .

ಭಾವಗೀತೆ ಮೊದಲ ಬಾರಿ ಕೇಳಿದಾಗ ಅಂಥ ವಿಶೇಷ ಅನಿಸಲಿಕ್ಕಿಲ್ಲ. ಎರಡು-ಮೂರು ಸಾರಿ ಕೇಳಿದಾಗ, ಬೇಂದ್ರೆ ಗುಂಗು ಆವರಿಸಿಕೊಳ್ಳುವುದು ಖಂಡಿತ. ಸಾಕಷ್ಟು ವಿಡಿಯೋ ಕೊಂಡಿಗಳೂ ಹುಡುಕಿದರೆ ಸಿಗುತ್ತವೆ. ಕವಿತೆಯ ಪೂರ್ತಿ ಪಠ್ಯ ಹೀಗಿದೆ:

ನೀ ಹೀಂಗ ನೋಡಬ್ಯಾಡ ನನ್ನ

ನೀ ಹೀಂಗ ನೋಡಬ್ಯಾಡ ನನ್ನ
ನೀ ಹೀಂಗ ನೋಡಿದರೆ ನನ್ನ ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ ||ಪ||

ಸಂಸಾರ ಸಾಗರದಾಗ, ಲೆಕ್ಕವಿರದಷ್ಟು ದುಃಖದ ಬಂಡಿ
ನಾ ಬಲ್ಲೆ ನನಗೆ ಗೊತ್ತಿಲ್ಲದಿದ್ದರೂ ಎಲ್ಲಿ ಆಚೆಯಾ ದಂಡಿ
ಮಲಗಿರುವ ಕೂಸು ಮಲಗಿರಲಿ ಅಲ್ಲಿ, ಮುಂದಿನದು ದೇವರ ಚಿತ್ತ
ನಾ ತಡೀಲಾರೆ ಅದು, ಯಾಕ ನೋಡತೀ ಮತ್ತ ಮತ್ತ ನೀ ಇತ್ತ?

ತಂಬಲ ಹಾಕದ ತುಂಬ ಕೆಂಪು ಗಿಣಿಗಡಕ ಹಣ್ಣಿನ ಹಾಂಗ
ಇದ್ದಂಥ ತುಟಿಯ ಬಣ್ಣೆತ್ತ ಹಾರಿತು? ಯಾವ ಗಾಳಿಗೆ, ಹೀಂಗ?
ಈ ಗದ್ದ, ಗಲ್ಲ, ಹಣಿ, ಕಣ್ಣು, ಕಂಡು ಮಾರೀಗೆ ಮಾರಿಯ ರೀತಿ
ಸಾವನ ತನ್ನ ಕೈ ಸವರಿತಿಲ್ಲಿ, ಬಂತೆನಗ ಇಲ್ಲದ ಭೀತಿ.

ಧಾರೀಲೆ ನೆನೆದ ಕೈ ಹಿಡಿದೆ ನೀನು ತಣ್ಣಗ ಅಂತನ ತಿಳಿದು
ಬಿಡವೊಲ್ಲಿ ಇನ್ನೂನೂ ಬೂದಿ ಮುಚ್ಚಿದ ಕೆಂಡ ಇದಂತ ಹೊಳೆದು
ಮುಗಿಲನ ಕಪ್ಪರಿಸಿ ನೆಲಕ ಬಿದ್ದರ ನೆಲಕ ನೆಲ ಎಲ್ಲನ್ನ
ಆ ಗಾದಿ ಮಾತು ನಂಬಿ, ನಾನು ದೇವರಂತ ತಿಳಿದಿಯೇನ ನೀನ ನನ್ನ

ಇಬ್ಬನಿ ತೊಳೆದರೂ ಹಾಲು ಮೆತ್ತಿದಾ ಕವಳಿಕಂಟಿಯಾ ಹಣ್ಣು
ಹೊಳೆ ಹೊಳೆವ ಹಾಂಗ ಕಣ್ಣಿರುವ ಹೆಣ್ಣ, ಹೇಳು ನಿನ್ನವೇನ ಈ ಕಣ್ಣು?
ದಿಗಿಲಾಗಿ ಅನ್ನತದ ಜೀವ ನಿನ್ನ ಕಣ್ಣಾರೆ ಕಂಡು ಒಮ್ಮಿಗಿಲ
ಹುಣಿವಿ ಚಂದಿರನ ಹೆಣಾ ಬಂತೊ ಮುಗಿಲಾಗ ತೇಲತ ಹಗಲ !

ನಿನ್ನ ಕಣ್ಣಿನ್ಯಾಗ ಕಾಲೂರಿ ಮಳೆಯು, ನಡನಡಕ ಹುಚ್ಚು ನಗಿ ಯಾಕ
ಹನಿ ಒಡೆಯಲಿಕ್ಕೆ ಬಂದಂಥ ಮೋಡ ತಡಧಾಂಗ ಗಾಳಿಯ ನೆವಕ
ಅತ್ತಾರೆ ಅತ್ತು ಬಿಡು, ಹೊನಲು ಬರಲಿ, ನಕ್ಯಾಕ ಮರಸತೀ ದುಕ್ಕ?
ಎವೆಬಡಿಸಿ ಕೆಡವು, ಬಿರಿಗಣ್ಣು ಬ್ಯಾಡ, ತುಟಿ ಕಚ್ಚಿ ಹಿಡಿಯದಿರು ಬಿಕ್ಕ.

 - ದ.ರಾ. ಬೇಂದ್ರೆ

ತೀರಿಕೊಂಡಿರುವ ಮಗು ಹಾಗೇ ಮಲಗಿರಲಿ ಬಿಡು, ನೀ ಯಾಕೆ ನನ್ನತ್ತ ನೋಡುತ್ತೀ ಎಂದು ಮಡದಿಯನ್ನು ಪ್ರಶ್ನಿಸುತ್ತಲೇ ಬೇಂದ್ರೆ ಹನಿಗಣ್ಣಾಗಿದ್ದಾರೆ. ಮಡದಿಯ ದುಃಖದಲ್ಲಿ ಪಾಲ್ಗೊಂಡಿದ್ದಾರೆ. ಮುಂದಿನದು ದೇವರ ಚಿತ್ತ ಎಂದು ಹೇಳುತ್ತ, ತಾವೂ ಒಬ್ಬ ಸಾಮಾನ್ಯ ಮನುಷ್ಯ ಮಾತ್ರ ಎಂಬುದಕ್ಕೆ ಒತ್ತು ಕೊಟ್ಟಿದ್ದಾರೆ.

ಮುಖದ ಬಣ್ಣ ಮಾಸಿ ಹೋಗಿ ದುಃಖದಲ್ಲಿ ಮುಳುಗಿರುವ ಮಡದಿಯನ್ನು ಕಂಡು ಅವರ ಕರುಳು ಹಿಂಡಿದೆ.”ತಂಬಲ ಹಾಕದ ತುಂಬ ಕೆಂಪು ಗಿಣಿಗಡಕ ಹಣ್ಣಿನ ಹಾಂಗ,ಇದ್ದಂಥ ತುಟಿಯ ಬಣ್ಣೆತ್ತ ಹಾರಿತು? ಯಾವ ಗಾಳಿಗೆ, ಹೀಂಗ?’ ಎಂದು ಪ್ರಶ್ನಿಸುತ್ತಾರೆ. ಇದ್ದಕ್ಕಿದ್ದಂತೆ ಜೀವನೋತ್ಸಾಹ ಕಳೆದುಕೊಂಡ ಮಡದಿಯ ಮುಖದಲ್ಲಿ ಸಾವಿನ ಕಳೆ ಕಂಡು ಕವಿ ಭೀತರಾಗಿದ್ದಾರೆ. ’ಈ ಗದ್ದ, ಗಲ್ಲ, ಹಣಿ, ಕಣ್ಣು, ಕಂಡು ಮಾರೀಗೆ ಮಾರಿಯ ರೀತಿ, ಸಾವನ ತನ್ನ ಕೈ ಸವರಿತಿಲ್ಲಿ, ಬಂತೆನಗ ಇಲ್ಲದ ಭೀತಿ’ ಎಂದು ಕಳವಳ ವ್ಯಕ್ತಪಡಿಸುತ್ತಾರೆ.

ನಾನೂ ಹುಲುಮಾನವ ಕಣೇ ಎನ್ನುವ ಕವಿ, ’ನಿನ್ನೆಲ್ಲ ದುಃಖವನ್ನು ಇಲ್ಲವಾಗಿಸುವ ಶಕ್ತಿ ನನಗೂ ಇಲ್ಲ. ಮುಗಿಲೇ ಕಳಚಿ ಬಿದ್ದರೆ ಅದನ್ನು ಸಹಿಸುವ ಶಕ್ತಿ ಹೇಗೆ ಬಂದೀತು’ ಎನ್ನುವ ಮೂಲಕ ವ್ಯಕ್ತಪಡಿಸಿದ್ದಾರೆ. ಪೂರ್ಣ ಚಂದಿರನಂಥ ಮಡದಿಯ ಮುಖ, ಸಾವಿನ ಶೋಕದಲ್ಲಿ ಹಗಲು ಹೊತ್ತಿನ ಚಂದಿರನಂತೆ ಮಂಕಾಗಿದೆ ಎಂಬುದನ್ನು ’ಹುಣಿವಿ ಚಂದಿರನ ಹೆಣಾ ಬಂತು ಮುಗಿಲಾಗ ತೇಲುತ ಹಗಲ’ ಎಂದು ಬಣ್ಣಿಸಿದ್ದಾರೆ.

ಕೊನೆಯ ನುಡಿಯಂತೂ ಬೇಂದ್ರೆಯವರ ಅದ್ಭುತ ಚಿತ್ರಕ ಶಕ್ತಿಗೆ ಸಾಕ್ಷಿ. ದುಃಖದಿಂದ ಆಘಾತಗೊಂಡಂತಿರುವ ಮಡದಿ ಅಳದಿದ್ದರೆ ಇನ್ನಷ್ಟು ಅನಾಹುತವಾದೀತು ಎಂದು ಕವಿ ಕಳವಳಗೊಂಡಿದ್ದಾರೆ. ’ನಿನ್ನ ಕಣ್ಣಿನ್ಯಾಗ ಕಾಲೂರಿ ಮಳೆಯು, ನಡನಡಕ ಹುಚ್ಚು ನಗಿ ಯಾಕ? ಹನಿ ಒಡೆಯಲಿಕ್ಕೆ ಬಂದಂಥ ಮೋಡ ತಡಧಾಂಗ ಗಾಳಿಯ ನೆವಕ, ಅತ್ತಾರೆ ಅತ್ತು ಬಿಡು, ಹೊನಲು ಬರಲಿ, ನಕ್ಯಾಕ ಮರಸತೀ ದುಕ್ಕ? ಎವೆಬಡಿಸಿ ಕೆಡವು, ಬಿರಿಗಣ್ಣು ಬ್ಯಾಡ, ತುಟಿ ಕಚ್ಚಿ ಹಿಡಿಯದಿರು ಬಿಕ್ಕ’ ಎಂದು ಬೇಡುತ್ತಾರೆ. ದುಃಖದ ಮಳೆ ಕಣ್ಣು ತುಂಬಿಕೊಂಡಿದ್ದರೂ, ಅಳದೇ ಮಡದಿ ಹುಚ್ಚುಚ್ಚಾಗಿ ನಗುತ್ತಿದ್ದಾಳೆ. ಇನ್ನೇನು ಅಬ್ಬರಿಸಿ ಧಾರೆಯಾಗಬೇಕಾದ ಮೋಡ ಗಾಳಿ ಬೀಸಲಿ ಎಂಬ ನೆವಕ್ಕೆ ತಡೆದುಕೊಂಡಂತಿದೆ ಆಕೆಯ ದುಃಖ ಎಂದು ಅಂದುಕೊಳ್ಳುತ್ತಾರೆ. ಅತ್ತು ಬಿಡು ಮಾರಾಯ್ತಿ, ದುಃಖ ಹೊರಬರಲಿ, ನಕ್ಕು ಅದನ್ನು ಹತ್ತಿಕ್ಕಲು ಹೋಗಬೇಡ. ಕಣ್ರೆಪ್ಪೆ ಬಡಿದು ಹನಿ ಕೆಡವು. ಕಣ್ಣು ಅಗಲ ಮಾಡಿ, ತುಟಿ ಕಚ್ಚಿ ದುಃಖ ತಡೆಯದಿರು ಎನ್ನುತ್ತಾರೆ.

ಬೇಂದ್ರೆಯಂಥ ಕವಿಯ ಕವಿತೆಗಳನ್ನು ಶಬ್ದಗಳಲ್ಲಿ ವಿವರಿಸುವುದು ಕಷ್ಟ. ಅದೇನಿದ್ದರೂ ತರಗತಿಯಲ್ಲಿ, ವೇದಿಕೆಯಲ್ಲಿ ವರ್ಣಿಸುವುದಕ್ಕೆ ಉತ್ತಮ. ಎಂಥ ಶಬ್ದಗಾರಿಕೆ ಬಳಸಿದರೂ, ಬೇಂದ್ರೆಯವರ ಕವಿತಾಶಕ್ತಿಯ ಮುಂದೆ ಅವು ಹಗಲು ಹೊತ್ತಿನ ಚಂದ್ರನಂತೆ ಮಂಕಾಗುತ್ತವೆ.

ಮತ್ತೆ ಮತ್ತೆ ’ನೀ ಹೀಂಗ ನೋಡಬ್ಯಾಡ ನನ್ನ’ ಕವಿತೆ ಕೇಳುವಂತಾಗುತ್ತದೆ. ಪ್ರತಿ ಸಾರಿ ಕೇಳಿದರೂ ಅರ್ಥ ಆಳವಾಗುತ್ತ ಹೋಗಿ, ಹೃದಯ ತುಂಬಿ ಬರುತ್ತದೆ. ದುಃಖದ ತೀವ್ರತೆಯನ್ನು ಇದಕ್ಕಿಂತ ಗಾಢವಾಗಿ ವ್ಯಕ್ತಪಡಿಸುವುದು ಸಾಧ್ಯವೆ ಎಂದು ಮನಸ್ಸು ಪ್ರಶ್ನಿಸುತ್ತದೆ. 

ನಿಜ. ಬೇಂದ್ರೆಗೆ ಬೇಂದ್ರೆಯೇ ಸಾಟಿ. 

- ಚಾಮರಾಜ ಸವಡಿ

Rating
Average: 4.9 (9 votes)

Comments