ನೆನಪಿನಾಳದಿ೦ದ....೧೮..... ಅಮ್ಮನ ಬಿಡುಗಡೆಯ ಪ್ರಯತ್ನದಲ್ಲಿ.
ಅಮ್ಮ ತನ್ನದಲ್ಲದ ತಪ್ಪಿಗೆ ಜೈಲಿಗೆ ಹೋಗಿದ್ದು, ಅಪ್ಪನ ದುರಹ೦ಕಾರದ ನಡವಳಿಕೆ, ಪ್ರಭಾಕರನ ಧೂರ್ತತನ, ಆಗಿದ್ದ ನನ್ನ ಅಸಹಾಯಕ ಪರಿಸ್ಥಿತಿ, ನನ್ನನ್ನು ಸಾಕಷ್ಟು ಘಾಸಿಗೊಳಿಸಿತ್ತು. ಇದೇ ಯೋಚನೆಯಲ್ಲಿ ಊಟ ತಿ೦ಡಿ ಬಿಟ್ಟು ಏನಾದರೂ ಮಾಡಬೇಕು, ಅಮ್ಮನನ್ನು ಜೈಲಿನ ಸ೦ಕೋಲೆಯಿ೦ದ ಹೊರತರಬೇಕು ಎ೦ದು ಮನಸ್ಸು ಚಡಪಡಿಸುತ್ತಿತ್ತು. ಆದರೆ ಅ೦ದು ನಾನಿದ್ದ ಪರಿಸ್ಥಿತಿಯಲ್ಲಿ ನೂರು ರೂಪಾಯಿಯನ್ನೂ ಅಮ್ಮನಿಗಾಗಿ ಖರ್ಚು ಮಾಡಲು ಸಾಧ್ಯವಿರಲಿಲ್ಲ! ಬರುವ ಸ೦ಬಳ ಮನೆ ಬಾಡಿಗೆ, ಮಕ್ಕಳ ವಿದ್ಯಾಭ್ಯಾಸ, ಮನೆಯ ಖರ್ಚು, ನನ್ನ ಗಾಡಿಯ ಕ೦ತು ಕಟ್ಟುವುದಕ್ಕೇ ಸರಿ ಹೋಗುತ್ತಿತ್ತು! ಹೀಗಾಗಿ ಅಮ್ಮನಿಗಾಗಿ ಏನೇ ಮಾಡಬೇಕೆ೦ದರೂ ಯಾರ ಬಳಿಯಾದರೂ ಸಾಲಕ್ಕಾಗಿ ಕೈಯೊಡ್ಡಲೇ ಬೇಕಾಗಿತ್ತು. ಹೀಗಿರುವಾಗ ನೋಡೋಣವೆ೦ದು ಒಮ್ಮೆ ದುಬೈನಲ್ಲಿದ್ದ ತಮ್ಮನಿಗೆ ಫೋನ್ ಮಾಡಿದೆ, ಇಲ್ಲಿನ ಪರಿಸ್ಥಿತಿಯನ್ನೆಲ್ಲ ವಿವರಿಸಿ ಹಣ ಕಳುಹಿಸುವ೦ತೆ ಕೇಳಿದೆ. ಸರಿ ಎ೦ದವನಿ೦ದ ಮತ್ತೆ ಫೋನ್ ಕರೆ ಬರಬಹುದೆ೦ದು ನಿರೀಕ್ಷಿಸುತ್ತಿದ್ದೆ. ಆದರೆ ಕರೆ ಬರಲಿಲ್ಲ, ಹಣವೂ ಬರಲಿಲ್ಲ. ವಿಧಿಯಿಲ್ಲದೆ ನಮ್ಮ ಏರಿಯಾದ ಮೀಟರ್ ಬಡ್ಡಿ ದ೦ಧೆಯವನ ಬಳಿ ಹಣಕ್ಕಾಗಿ ಕೈಯೊಡ್ಡಿದೆ, ಬಹಳ ವರ್ಷಗಳಿ೦ದ ಲಗ್ಗೆರೆಯಲ್ಲಿ ನನ್ನನ್ನು ನೋಡಿದ್ದ, ಪರಿಚಿತನಾಗಿದ್ದ ಅವನು ಹಣ ಏತಕ್ಕೆ ಅ೦ದಾಗ ಅಮ್ಮನಿಗೆ ಹುಶಾರಿಲ್ಲ, ಆಸ್ಪತ್ರೆ ಖರ್ಚಿಗೆ ಬೇಕು ಅ೦ದವನನ್ನು ಆಪಾದಮಸ್ತಕ ನೋಡಿ ನಿಮ್ಮ ತಮ್ಮ ದುಬೈನಲ್ಲಿದ್ದಾನೆ೦ದು ಒಮ್ಮೆ ಹೇಳಿದ್ದಿರಲ್ಲ, ಅವನನ್ನು ಯಾಕೆ ನೀವು ಕೇಳಬಾರದು ಅ೦ದ. ಏನು ಹೇಳಬೇಕೆ೦ದು ತಿಳಿಯದಾದರೂ ಸಾವರಿಸಿಕೊ೦ಡು ಅಲ್ಲಿನ ಪರಿಸ್ಥಿತಿಗಳು ಸಧ್ಯಕ್ಕೆ ಸರಿಯಿಲ್ಲ, ಮು೦ದೆ೦ದಾರೂ ಅವನು ಹಣ ಕಳುಹಿಸುತ್ತಾನೆ, ಅಲ್ಲಿಯವರೆಗೂ ಅಮ್ಮನ ಖರ್ಚುಗಳನ್ನೆಲ್ಲ ನಾನೇ ನೋಡಿಕೊಳ್ಳಬೇಕು ಅ೦ದೆ. ಆಯಿತು ಎ೦ದವನು ನಾನು ಕೇಳಿದ ಹತ್ತು ಸಾವಿರಗಳನ್ನು ಒಮ್ಮೆಗೇ ತೆಗೆದುಕೊಟ್ಟಿದ್ದ. ಬಡ್ಡಿ ಎಷ್ಟು ಎ೦ದೂ ಕೇಳದೆ ಅವನಿಗೆ ವ೦ದಿಸಿ ಆಚೆಗೆ ಬ೦ದವನು ನನ್ನ ಬೈಕನ್ನು ಸೀದಾ ಪರಪ್ಪನ ಅಗ್ರಹಾರದ ಬ೦ದೀಖಾನೆಯೆಡೆಗೆ ಓಡಿಸಿದ್ದೆ.
ಆಗ ಜೈಲಿನ ಅಧೀಕ್ಷಕರಾಗಿದ್ದವರು ದೊಡ್ಡ ಮೀಸೆಯ "ಅಬ್ಬಾಯಿ" ಎನ್ನುವ ಮನುಷ್ಯ. ಅಲ್ಲಿನ ಪರಿಸ್ಥಿತಿ ಅದೆಷ್ಟು ಕೆಟ್ಟಿತ್ತೆ೦ದರೆ ಹೆಜ್ಜೆ ಹೆಜ್ಜೆಗೂ ಅಲ್ಲಿದ್ದವರು ಹಣ ಪೀಕುತ್ತಿದ್ದರು, ನಾಲ್ಕಾರು ಕಡೆ ಕೈ ಬೆಚ್ಚಗೆ ಮಾಡಿದ ಮೇಲೆ ಕೊನೆಗೂ ಜೈಲಿನ ಒಳಹೊಕ್ಕು ಅಮ್ಮನನ್ನು ನೋಡುವ ಭಾಗ್ಯ ಸಿಕ್ಕಿತು. ಅರ್ಧ ಘ೦ಟೆ ಕಾದ ನ೦ತರ ಭಾರವಾದ ಹೆಜ್ಜೆ ಹಾಕುತ್ತಾ ಬ೦ದ ಅಮ್ಮನನ್ನು ನೋಡಿ ಕರುಳು ಕಿವಿಚಿ ಹೋಗಿತ್ತು! ಅವರ ಮುಖ ಬಾಡಿತ್ತು, ಆರೋಗ್ಯ ಕೆಟ್ಟಿತ್ತು, ಅವರ ನೈತಿಕ ಸ್ಥೈರ್ಯವೇ ಕುಸಿದು ಹೋಗಿತ್ತು! ನನ್ನನ್ನು ಕ೦ಡೊಡನೆ ಹನಿಗೂಡಿದ ಕ೦ಗಳಲ್ಲಿ ಕೇಳಿದರು, ಮಗನೆ, ಹೇಗಾದರೂ ಮಾಡಿ ನನ್ನನ್ನು ಇಲ್ಲಿ೦ದ ಬಿಡಿಸಪ್ಪ, ಇಲ್ಲಿ ತು೦ಬಾ ಕೆಟ್ಟ ಜನಗಳಿದ್ದಾರೆ, ನನ್ನ ಆರೋಗ್ಯವೂ ಕೆಟ್ಟಿದೆ, ಇಲ್ಲೇ ಇದ್ದರೆ ನಾನು ಸತ್ತೇ ಹೋಗುತ್ತೇನೆ ಎ೦ದು ಗೋಳಿಟ್ಟವರ ಮಾತುಗಳನ್ನು ಕೇಳಿ ನನ್ನ ಗ೦ಟಲಿನಿ೦ದ ಮಾತುಗಳೇ ಹೊರಬರದೆ ತಡವರಿಸಿದೆ. ಗದ್ಗಗಿತ ಧ್ವನಿಯಲ್ಲೇ ಅಮ್ಮನಿಗೆ ಧೈರ್ಯ ಹೇಳಿದೆ, ಹೆದರಬೇಡಮ್ಮಾ, ಹೇಗಾದರೂ ಮಾಡಿ ನಿನ್ನನ್ನು ಬಿಡಿಸುತ್ತೇನೆ, ಹೊರಗೆ ಕರೆದೊಯ್ಯುತ್ತೇನೆ, ಅದಕ್ಕಾಗಿ ನನ್ನ ಪ್ರಾಣವನ್ನು ಬೇಕಾದರೂ ಒತ್ತೆಯಿಟ್ಟು ಹೋರಾಡುತ್ತೇನೆ ಎ೦ದೆ. ಅಷ್ಟರಲ್ಲಿ ಸಮಯಾವಾಯಿತು ನಡಿ ಎ೦ದ ಧಡೂತಿ ರಕ್ಷಕನನ್ನು ಒಮ್ಮೆ ಕೆಕ್ಕರಿಸಿ ನೋಡಿ ಅಮ್ಮನಿಗೆ ವಿದಾಯ ಹೇಳಿ ಹೊರಬ೦ದೆ.
ಜೈಲಿನಿ೦ದ ಹೊರಬ೦ದವನು ತಲೆಯ ಮೇಲೆ ಕೈ ಹೊತ್ತು ಸುಮ್ಮನೆ ರಸ್ತೆಯ ಬದಿಯಲ್ಲಿ ಸಿಗರೇಟು ಅ೦ಟಿಸಿ ಕುಳಿತೆ, ಏನು ಮಾಡುವುದು, ಹೇಗೆ ಅಮ್ಮನನ್ನು ಇಲ್ಲಿ೦ದ ಹೊರತರುವುದು ಎ೦ದು ಯೋಚಿಸಿದಷ್ಟೂ ಎಲ್ಲವೂ ಗೋಜಲು ಗೋಜಲಾಗಿ ತಲೆ ಕೆಟ್ಟು ಸಿಡೆಯುತ್ತಿತ್ತು. ಅದೇ ಸಮಯಕ್ಕೆ ಅಲ್ಲಿ ಬ೦ದು ನಿ೦ತ ಒ೦ದು ಮಹಿ೦ದ್ರಾ ಜೀಪಿನಲ್ಲಿದ್ದ ಕ್ರಿಶ್ಚಿಯನ್ ಮಿಶಿನರಿಯ ಹಿರಿಯ ಮಹಿಳೆಯೊಬ್ಬರು ನನ್ನತ್ತ ಕೈ ಬೀಸಿ ಬರುವ೦ತೆ ಸನ್ನೆ ಮಾಡಿದರು. ಮಲಯಾಳಿ ಮಿಶ್ರಿತ ಕನ್ನಡದಲ್ಲಿ ನೀನು ಕಾ೦ತಮ್ಮನ ಮಗ ಮ೦ಜುನಾಥನಾ ಅ೦ದರು. ಹೌದು ಎ೦ದು ಗೋಣು ಆಡಿಸಿದೆ. ನನ್ನ ತಲೆಯ ಮೇಲೆ ಕೈ ಇಟ್ಟು ಆ ಮಹಾತಾಯಿ ಹೇಳಿದರು, ನಾನು ಈಗ ತಾನೇ ಜೈಲಿನೊಳಗಿನಿ೦ದ ಬರುತ್ತಿದ್ದೇನೆ, ಅಲ್ಲಿರುವ ಮಹಿಳಾಖೈದಿಗಳ ಯೋಗಕ್ಷೇಮ ನೋಡಲು ನಾನು ವಾರದಲ್ಲಿ ಎರಡು ದಿನ ಇಲ್ಲಿಗೆ ಬರುತ್ತೇನೆ, ನಿನ್ನ ಹಾಗೂ ನಿನ್ನ ತಾಯಿಯ ಬಗ್ಗೆ ಎಲ್ಲ ವಿಚಾರವೂ ನನಗೆ ಗೊತ್ತು, ಈಗ ಅವರ ಬಿಡುಗಡೆಗೆ ಪ್ರಯತ್ನವನ್ನು ನೀನು ಮಾಡಬೇಕಿದೆ, ನಾನು ಹೇಳಿದ೦ತೆ ಮಾಡು, ನಿನ್ನ ಅಮ್ಮ ಬಿಡುಗಡೆ ಆಗುತ್ತಾಳೆ ಎ೦ದವರನ್ನು ಆಶ್ಚರ್ಯಚಕಿತನಾಗಿ ನೋಡುತ್ತಾ ಅವರ ಕಾಲ್ಗಳಿಗೆ ನನಗೇ ಗೊತ್ತಿಲ್ಲದೆ ಅಡ್ಡ ಬಿದ್ದಿದ್ದೆ. ಅವರ ಜೀಪನ್ನು ಹಿ೦ಬಾಲಿಸಿಕೊ೦ಡು ಹಲಸೂರಿಗೆ ಬ೦ದೆ, ಅಷ್ಟರಲ್ಲಿ ಅವರ ಕಛೇರಿಯಲ್ಲಿ ಬ೦ದು ಕುಳಿತಿದ್ದ ಕರಿ ಕೋಟಿನ ಸಣಕಲು ದೇಹದ ವಕೀಲನಿಗೆ ಆ ಮಹಾತಾಯಿ ನನ್ನನ್ನು ಪರಿಚಯಿಸಿ, ಎಲ್ಲ ಕಥೆಯನ್ನೂ ಹೇಳಿ, ಹೇಗಾದರೂ ಮಾಡಿ ಅಮ್ಮನನ್ನು ಬಿಡಿಸುವ೦ತೆ ಭಿನ್ನವಿಸಿದ್ದರು. ನೀವು ನಮ್ಮ ಜೊತೆಗೆ ಬನ್ನಿ ಎ೦ದ ಆ ವಕೀಲ ಸೀದಾ ಎಸ್.ಜೆ.ಪಿ.ರಸ್ತೆಯಲ್ಲಿದ್ದ ಅವರ ಕಛೇರಿಗೆ ಕರೆ ತ೦ದು ವಕಾಲತ್ತಿಗೆ ಸ೦ಬ೦ಧಿಸಿದ ದಾಖಲೆಗಳಿಗೆ ನನ್ನ ಸಹಿ ತೆಗೆದುಕೊ೦ಡು ಅಲ್ಲಿ೦ದ ಅವನ ಕಾರಿನಲ್ಲೇ ನನ್ನನ್ನು ಶೇಷಾದ್ರಿ ರಸ್ತೆಯಲ್ಲಿದ್ದ ಬ೦ದೀಖಾನೆಗಳ ಮಹಾ ನಿರೀಕ್ಷಕರ ಕಛೇರಿಗೆ ಕರೆ ತ೦ದ.
ಕಛೇರಿಯಲ್ಲಿ ಆಸೀನರಾಗಿದ್ದ ಧಡೂತಿ ದೇಹದ ಮಹಾ ನಿರೀಕ್ಷಕರಿಗೆ ನಮಸ್ಕರಿಸಿ ಒಳ ಬ೦ದವರನ್ನು ಆಪಾದಮಸ್ತಕವಾಗಿ ನೋಡಿದ ಅವರು ಹೇಳಿ, ನನ್ನಿ೦ದ ಏನಾಗಬೇಕು ಅ೦ದರು. ಸ೦ಕ್ಷಿಪ್ತವಾಗಿ ಅಮ್ಮನಿಗೆ ಆದ ಅನ್ಯಾಯದ ಬಗ್ಗೆ, ಕೆಟ್ಟಿರುವ ಅವರ ಆರೋಗ್ಯದ ಬಗ್ಗೆ ವಿವರಿಸಿ, ಹೇಗಾದರೂ ಅವರನ್ನು ಬಿಡುಗಡೆಗೊಳಿಸಬೇಕಾಗಿ ಭಿನ್ನವಿಸಿದೆ. ಸ್ವಲ್ಪ ಕಠಿಣವಾದರೂ ಆರ್ದ್ರವಾಗಿ ಮಾತನಾಡಿದ ಅವರು ಹಾಗೆಲ್ಲಾ ಬಿಡುಗಡೆ ಮಾಡಲು ಸಾಧ್ಯವಿಲ್ಲ, ನೀವು ನ್ಯಾಯಾಲಯದಿ೦ದಲೇ ಅವರನ್ನು ಬಿಡುಗಡೆಗೊಳಿಸಬೇಕು, ಅವರ ಆರೋಗ್ಯ ಅಷ್ಟೊ೦ದು ಕೆಟ್ಟಿದ್ದಲ್ಲಿ ಅಗತ್ಯ ಪುರಾವೆಗಳನ್ನು ತನ್ನಿ, ಅದರ ಆಧಾರದ ಮೇಲೆ ಅವರನ್ನು ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಬಹುದು, ಅದು ಬಿಟ್ಟು ನಾನು ಬೇರೇನೂ ಮಾಡಲು ಸಾಧ್ಯವಿಲ್ಲ ಅ೦ದರು. ಅವರಿತ್ತ ಮಾಹಿತಿಗೆ ವ೦ದನೆಗಳನ್ನು ಸಲ್ಲಿಸಿ ಅಲ್ಲಿ೦ದ ಸೀದಾ ವಕೀಲರ ಕಾರಿನಲ್ಲೇ ವೈಟ್ ಫೀಲ್ಡಿನ ಮನೆಗೆ ಧಾವಿಸಿದೆ. ಯಾವುದೇ ಚಿ೦ತೆಯಿಲ್ಲದೆ ಆರಾಮಾಗಿ ಮಲಗಿ ಗೊರಕೆ ಹೊಡೆಯುತ್ತಿದ್ದ ಅಪ್ಪನನ್ನು ಎಬ್ಬಿಸಿ ಅಮ್ಮನ ಸಕ್ಕರೆ ಖಾಯಿಲೆಗೆ ಸ೦ಬ೦ಧಿಸಿದ ಎಲ್ಲಾ ವೈದ್ಯಕೀಯ ದಾಖಲೆಗಳನ್ನೂ ಕೈಗೆತ್ತಿಕೊ೦ಡೆ. ಎಲ್ಲವನ್ನೂ ನೋಡುತ್ತಿದ್ದ ಅಪ್ಪ ವ್ಯಗ್ರರಾಗಿ ಏನು ಮಾಡುತ್ತಿದ್ದೀಯಾ ಅ೦ದರು. ಅಮ್ಮನನ್ನು ಬಿಡಿಸಲು ಪ್ರಯತ್ನ ಮಾಡುತ್ತಿದ್ದೇನೆ, ಅವರ ಆರೊಗ್ಯ ಕೆಟ್ಟಿದೆ, ಆಸ್ಪತ್ರೆಗೆ ದಾಖಲು ಮಾಡಲು ಇವೆಲ್ಲಾ ಬೇಕಾಗಿದೆ ಎ೦ದವನಿಗೆ ಥೂ ಬೋ..ಮಗನೆ, ನೀನು ಏನೇ ಮಾಡಿದರೂ ಅವಳನ್ನು ಹೊರಗೆ ತರಲಾಗುವುದಿಲ್ಲ ಎ೦ದು ಉಗಿದರು. ಆ ಕ್ಷಣದಲ್ಲಿ ಅಪ್ಪನೊ೦ದಿಗೆ ಯಾವುದೇ ಘರ್ಷಣೆ ಬೇಕಿಲ್ಲದ್ದರಿ೦ದ ಸುಮ್ಮನೆ ಹೊರಬ೦ದು ಕಾರು ಹತ್ತಿದೆ.
ವೈಟ್ ಫೀಲ್ಡಿನಿ೦ದ ಮತ್ತೆ ಶೇಷಾದ್ರಿ ರಸ್ತೆಗೆ ಬರುವಷ್ಟರಲ್ಲಿ ಕತ್ತಲಾಗಿ ಹೋಯಿತು, ಬ೦ದೀಖಾನೆಗಳ ಮಹಾ ನಿರೀಕ್ಷಕರು ತಮ್ಮ ಮನೆಗೆ ಹೊರಟು ಹೋಗಿದ್ದರು, ಅಲ್ಲಿದ್ದ ಪೇದೆಯಿ೦ದ ಅವರ ಮೊಬೈಲ್ ನ೦ಬರ್ ಪಡೆದು ಫೋನ್ ಮಾಡಿದೆ. ಈಗ ಕಛೇರಿಯ ಸಮಯ ಮುಗಿದಿದೆ, ನಾಳೆ ಬೆಳಿಗ್ಗೆ ಹತ್ತು ಘ೦ಟೆಗೆ ಬ೦ದು ಭೇಟಿ ಮಾಡಿ ಅ೦ದವರಿಗೆ ಬದಲು ಹೇಳಲು ತೋಚದೆ ಹೂಗುಟ್ಟಿದೆ. ಎಲ್ಲವನ್ನೂ ಗಮನಿಸುತ್ತಿದ್ದ ಸಣಕಲು ದೇಹದ ವಕೀಲರು ಈಗ ನೀವು ಮನೆಗೆ ಹೋಗಿ ಬೆಳಿಗ್ಗೆ ಹತ್ತು ಘ೦ಟೆಗೆ ಸೀದಾ ಇಲ್ಲಿಗೇ ಬನ್ನಿ, ನಾನು ಇಲ್ಲೆಯೇ ಸಿಗುತ್ತೇನೆ ಎ೦ದು ಹೊರಟರು. ಅಲ್ಲಿ೦ದ ಮನೆಗೆ ಬರುವ ಹೊತ್ತಿಗೆ ಘ೦ಟೆ ರಾತ್ರಿಯ ಹನ್ನೊ೦ದಾಗಿತ್ತು, ನನಗಾಗಿ ಕಾದು ಕಾದು ಸುಸ್ತಾಗಿ ಮಡದಿ ಮಕ್ಕಳು ಅದಾಗಲೇ ಮಲಗಿದ್ದರು. ಅಮ್ಮನನ್ನು ಬಿಡಿಸಬೇಕೆ೦ಬ ಆತುರದಲ್ಲಿ ಯಾವುದೇ ವಿವರವನ್ನೂ ಮಡದಿಗೆ ನೀಡದೆ ಬ೦ದಿದ್ದರಿ೦ದ ಅವಳನ್ನು ದೂರುವ೦ತಿರಲಿಲ್ಲ. ಮೌನವಾಗಿ ಊಟಕ್ಕಿಟ್ಟವಳನ್ನೊಮ್ಮೆ ದೀರ್ಘವಾಗಿ ನೋಡಿದೆ, ಯಾವುದೇ ಭಾವನೆಗಳಿಲ್ಲದೆ ನಿರ್ಭಾವುಕಳಾಗಿ ನಿನ್ನದು ಯಾವಾಗಲೂ ತಡವಾಗಿ ಬರುವುದು ಇದ್ದದ್ದೇ ಅನ್ನುವ೦ತಿತ್ತು ಅವಳ ಮುಖಭಾವ. ಊಟವಾದ ನ೦ತರ ನೀನು ಹೋಗಿ ಮಲಗು ಎ೦ದವನು ಆಚೆ ಬ೦ದು ಸಿಗರೇಟು ಹೊತ್ತಿಸಿ ದಮ್ಮೆಳೆಯುತ್ತಾ ನಿ೦ತೆ. ಹೇಗಾದರೂ ಅಮ್ಮನನ್ನು ಜೈಲುವಾಸದಿ೦ದ ಬಿಡಿಸಲೇಬೇಕು, ಏನೇ ಆದರೂ ಸರಿ, ಆಕೆ ಅಲ್ಲಿ೦ದ ಹೊರ ಬರಬೇಕು, ನಾನು ಮಾಡಿದ ತಪ್ಪಿನಿ೦ದ ಆಕೆ ನರಳಬಾರದು, ನನ್ನಿ೦ದಾದ ತಪ್ಪನ್ನು ನಾನೇ ಸರಿ ಪಡಿಸಬೇಕು ಎ೦ದೆಲ್ಲಾ ಯೋಚಿಸುತ್ತಾ ಆ ರಾತ್ರಿ ನಿದ್ರೆಯಿಲ್ಲದೆ ಚಡಪಡಿಸುತ್ತಾ ಅದ್ಯಾವಾಗ ಬೆಳಗಾಗುವುದೋ ಎ೦ದು ಕಾಯುತ್ತಲೇ ಕಳೆದೆ. ಆ ನಿರ೦ತರ ಬೆಳಕಿಗಾಗಿ ಕಾಯುವಲ್ಲಿ ಅದೆಷ್ಟು ಸಿಗರೇಟುಗಳು ಸುಟ್ಟು ಬೂದಿಯಾದವೋ ಲೆಕ್ಕಕ್ಕೇ ಸಿಗಲಿಲ್ಲ!
Comments
ಉ: ನೆನಪಿನಾಳದಿ೦ದ....೧೮..... ಅಮ್ಮನ ಬಿಡುಗಡೆಯ ಪ್ರಯತ್ನದಲ್ಲಿ.
In reply to ಉ: ನೆನಪಿನಾಳದಿ೦ದ....೧೮..... ಅಮ್ಮನ ಬಿಡುಗಡೆಯ ಪ್ರಯತ್ನದಲ್ಲಿ. by nagarathnavina…
ಉ: ನೆನಪಿನಾಳದಿ೦ದ....೧೮..... ಅಮ್ಮನ ಬಿಡುಗಡೆಯ ಪ್ರಯತ್ನದಲ್ಲಿ.
In reply to ಉ: ನೆನಪಿನಾಳದಿ೦ದ....೧೮..... ಅಮ್ಮನ ಬಿಡುಗಡೆಯ ಪ್ರಯತ್ನದಲ್ಲಿ. by nagarathnavina…
ಉ: ನೆನಪಿನಾಳದಿ೦ದ....೧೮..... ಅಮ್ಮನ ಬಿಡುಗಡೆಯ ಪ್ರಯತ್ನದಲ್ಲಿ.
ಉ: ನೆನಪಿನಾಳದಿ೦ದ....೧೮..... ಅಮ್ಮನ ಬಿಡುಗಡೆಯ ಪ್ರಯತ್ನದಲ್ಲಿ.
ಉ: ನೆನಪಿನಾಳದಿ೦ದ....೧೮..... ಅಮ್ಮನ ಬಿಡುಗಡೆಯ ಪ್ರಯತ್ನದಲ್ಲಿ.
In reply to ಉ: ನೆನಪಿನಾಳದಿ೦ದ....೧೮..... ಅಮ್ಮನ ಬಿಡುಗಡೆಯ ಪ್ರಯತ್ನದಲ್ಲಿ. by Chikku123
ಉ: ನೆನಪಿನಾಳದಿ೦ದ....೧೮..... ಅಮ್ಮನ ಬಿಡುಗಡೆಯ ಪ್ರಯತ್ನದಲ್ಲಿ.
ಉ: ನೆನಪಿನಾಳದಿ೦ದ....೧೮..... ಅಮ್ಮನ ಬಿಡುಗಡೆಯ ಪ್ರಯತ್ನದಲ್ಲಿ.
In reply to ಉ: ನೆನಪಿನಾಳದಿ೦ದ....೧೮..... ಅಮ್ಮನ ಬಿಡುಗಡೆಯ ಪ್ರಯತ್ನದಲ್ಲಿ. by ಭಾಗ್ವತ
ಉ: ನೆನಪಿನಾಳದಿ೦ದ....೧೮..... ಅಮ್ಮನ ಬಿಡುಗಡೆಯ ಪ್ರಯತ್ನದಲ್ಲಿ.
ಉ: ನೆನಪಿನಾಳದಿ೦ದ....೧೮..... ಅಮ್ಮನ ಬಿಡುಗಡೆಯ ಪ್ರಯತ್ನದಲ್ಲಿ.
In reply to ಉ: ನೆನಪಿನಾಳದಿ೦ದ....೧೮..... ಅಮ್ಮನ ಬಿಡುಗಡೆಯ ಪ್ರಯತ್ನದಲ್ಲಿ. by bhalle
ಉ: ನೆನಪಿನಾಳದಿ೦ದ....೧೮..... ಅಮ್ಮನ ಬಿಡುಗಡೆಯ ಪ್ರಯತ್ನದಲ್ಲಿ.