ನೆನಪುಗಳ ನಾಯಕಿ, ಕನಸುಗಳ ನಿರೂಪಕಿ!
ಆ ಸಂಜೆ ಹೊತ್ತು... ಅವಳನ್ನೇ ನೆನೆಯುತ್ತಾ ಕೂತಿದ್ದೆ. ಇಳಿ ಬಿಸಿಲಿನ ಎಳೆಗಳು, ಆ ತೆಂಗಿನ ಗರಿಗಳ ಮಧ್ಯೆ ನುಸುಳಿ ನೆಲದ ಮೇಲೆ ಹಾಸಿರುವ ಹಸಿರು ಹುಲ್ಲನ್ನು ಚುಂಬಿಸುತ್ತಿದ್ದವು! ಹದವಾಗಿ ಬೀಸುತ್ತಿರುವ ತಂಪು ಗಾಳಿಗೆ ಹಕ್ಕಿ ಪುಕ್ಕವೊಂದು ತೇಲುತ್ತಾ, ಬೀಳುತ್ತಾ ಮಾಯವಾಯಿತು! ನನ್ನ ಮನಸೂ ಅಷ್ಟೇ ಹಗುರವಾಗಿತ್ತೇನೋ ಎಂಬಂತೆ ಹಲವಾರು ಸಿಹಿ ಯೋಚನೆಗಳು ಸುತ್ತಿ ಸುಳಿದು ಮಾಯವಾಗುತ್ತಿದ್ದವು!
ಅವಳು ಬಂದು ಐದು ವರುಷಗಳಾಯಿತು. ಪ್ರತಿದಿನವೂ 'ಕ್ಷಣ'ಗಳಂತೆಯೇ ಉರುಳಿ ಹೋಯಿತು. ಅವಳನ್ನು ಪಡೆದ ನಾನೆಷ್ಟು ಭಾಗ್ಯಶಾಲಿ! ಅವಳ ಒಂದು ಮುಗ್ಧ ನಗೆ ಸಾಕು ನನ್ನೆದೆಯೊಳಗಿನ ಸೂರ್ಯನುದಯಿಸಲು! ಅವಳ ಆ ಪುಟ್ಟ ನೀಲಿ ಕಂಗಳ ಮಿಂಚು ಸಾಕು ಕಲಕಿರುವ 'ಮನಸಿನ ಕೊಳ' ತಿಳಿಯಾಗಲು! ಅವಳು ನಿದ್ದೆಗೆ ಜಾರಿರಲು ಮೆಲ್ಲನೆದ್ದು ನೋಡಿದ್ದೆ! ಅದೇ ಹೊಳಪು, ಅದೇ ಮಂದಹಾಸ ಮೊಗದಲ್ಲಿ... ಗಾಢ ನಿದ್ದೆಯಲ್ಲೂ... ಹುಣ್ಣಿಮೆಯ ಚಂದ್ರನೇ ವಿಶ್ರಮಿಸುತ್ತಿರುವಂತೆ!
ಹೌದು... ನನಗಿನ್ನೂ ನೆನಪಿದೆ... ಆಕೆ ಮೊದಲ ಬಾರಿಗೆ ನನ್ನ ಕೆನ್ನೆಗೆ ಹೊಡೆದಿದ್ದಳು! ಆದರೂ... ಮನೆ ಮಂದಿಗೆಲ್ಲ ಖುಷಿ, ನಗೆಯ ಹೊಳೆ...! ಕಣ್ಣಂಚಿನ ನೀರನ್ನು ತೋರ್ಪಡಿಸದೆ ನಾನೂ ಅವರ ಜೊತೆಗೂಡಿದೆ... ನಗುವಿನಲ್ಲಿ! ಅಂದ ಹಾಗೆ, ಕಣ್ಣೀರು ಏಕೆ? 'ಸಂತಸಕೋ'? 'ಹೆಮ್ಮೆ'ಗೋ? ಗೊತ್ತಿಲ್ಲ!
ಅವಳ ಹೆಸರಂತೂ ನನ್ನ ಉಸಿರು... ಅವಳ ಕನಸೂ, ನನ್ನ ಕನಸಾಗಬೇಕು. ಅವಳ ಮುಖದಲ್ಲಿ ನಗುವಿಗಷ್ಟೇ ಜಾಗವಿರಬೇಕು... ಎಂದೆಂದಿಗೂ...! ನಿಜ... ಬದುಕು ಅಷ್ಟೊಂದು ಸರಳವಲ್ಲ... ಅದರೂ.. ಆಶಿಸುವುದು ತಪ್ಪಲ್ಲವಲ್ಲ?
ಹಳೆ ನೆನಪುಗಳೂ, ಹೊಸ ಕನಸುಗಳೂ ವಾಸ್ತವದ ಅರಿವಿಲ್ಲದೆ ಮನಸಿನಂಗಳದಲ್ಲಿ ಆಡುತ್ತಿರುವಾಗ... ಯಾರೋ ಕೈ ಹಿಡಿದು ಜಗ್ಗಿದಂತಾಯಿತು! ನೆನಪುಗಳ ಬುತ್ತಿ ಮುಚ್ಚಿಟ್ಟು, ಶೂನ್ಯವನ್ನು ದಿಟ್ಟಿಸುತ್ತಿದ್ದ ಕಣ್ಣುಗಳನ್ನು 'ಎಚ್ಚರ'ಗೊಳಿಸಿ.. ತಿರುಗಿ ನೋಡಿದೆ!
ಒಹ್...! ಅದು ಅವಳೇ...! ನನ್ನ ನೆನಪುಗಳ ನಾಯಕಿ, ಕನಸುಗಳ ನಿರೂಪಕಿ! ನನ್ನ ಮುದ್ದಿನ 'ರಾಜಕುಮಾರಿ'...!
"ಅಪ್ಪಾ...!!! ಇಲ್ಲೇನು ಮಾಡ್ತಾ ಇದ್ದೀಯ? ಅಮ್ಮ ಕರೀತಿದಾಳೆ!!".... ತೊದಲಿದರೂ ನನಗದು ಕೋಗಿಲೆ ಉಲಿದಂತೆ! ನಕ್ಕರೆ ನವಿಲು ಕುಣಿದಂತೆ! ನನಗರಿವಿಲ್ಲದಂತೆ ಸುಮ್ಮನೆ ಮುಗುಳ್ನಕ್ಕು, ಎದ್ದು ನಿಂತೆ. ಈಗ ಇಬ್ಬರೂ ಮನೆಯೊಳಗೆ ಹೆಜ್ಜೆ ಹಾಕತೊಡಗಿದೆವು... ಮುಂದೆ ಕುಣಿ ಕುಣಿಯುತ್ತ ಅವಳೂ... ಹಿಂದೆ, ಅವಳ ಕೈ ಹಿಡಿದುಕೊಂಡು ನಾನೂ...
(ಮೇಲಿರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ!)
Comments
ಉ: ನೆನಪುಗಳ ನಾಯಕಿ, ಕನಸುಗಳ ನಿರೂಪಕಿ!
ಉ: ನೆನಪುಗಳ ನಾಯಕಿ, ಕನಸುಗಳ ನಿರೂಪಕಿ!