ಪರಿಮಳದ ಹೂಗಳು
-ಲಕ್ಷ್ಮೀಕಾಂತ ಇಟ್ನಾಳ
ನಿನ್ನೆ ನಡೆದ ಒಂದು ಘಟನೆಯನ್ನು ನಿವ್ಮೊಂದಿಗೆ ಹಂಚಿಕೊಳ್ಳಬೇಕೆನಿಸಿದ್ದರಿಂದ ಹೇಳುತ್ತಿದ್ದೇನೆ. ಸಾಯಂಕಾಲ ಏಳು ಘಂಟೆಯ ಸುಮಾರು ಆಫೀಸಿನಿಂದ ಬಂದು ಯಾವುದೋ ಕೆಲಸಕ್ಕಾಗಿ ಮಾರ್ಕೆಟ್ಗೆ ಹೋಗಲು ನನ್ನ ಮನೆಯಾಕೆಯೊಂದಿಗೆ ರೆಡಿಯಾಗಿ ಇನ್ನೇನು ಹೊರಗೆ ಹೊರಡಬೇಕೆನ್ನುವಷ್ಟರಲ್ಲಿ ಬಾಗಿಲು ಕರೆಗಂಟೆ ಸದ್ದಾಯಿತು. ಬಾಗಿಲು ತೆರೆದರೆ ಮುದ್ದಾದ ಎರಡು ಹೆಣ್ಣು ಮಕ್ಕಳು ಕೈಯಲ್ಲಿ ಪೇಪರ್ ಪ್ಯಾಡ ಹಿಡಿದುಕೊಂಡು, ‘ಅಂಕಲ್, ನಿಮ್ಮ ಮನೆಯಲ್ಲಿ ಕೃಷ್ಣನ ಚಿತ್ರವಿದೆಯಾ? ನಮಗೆ ಕೃಷ್ಣನ ಚಿತ್ರ ತೆಗೆಯಬೇಕು’ ಎಂದಾಗ, ನಮಗೆ ಆ ಹೊತ್ತಿನಲ್ಲಿ ಅದು ಇರುವ ಬಗ್ಗೆ ಸರಿಯಾಗಿ ಗೊತ್ತಿರದೇ ಇದ್ದರೂ, ಇದೆ ಬನ್ನಿ ಎಂದು ಸಹಜವಾಗಿ ಅವರನ್ನು ಒಳಕರೆದು ಗೋಡೆಯ ಮೇಲೆ ಎಲ್ಲಾದರೂ ಇರಬಹುದೇನೋ ಎಂದು ಕೃಷ್ಣನ ಫೋಟೊಗಾಗಿ ಅಥವಾ ಚಿತ್ರಗಳಿಗಾಗಿ ನೋಡಿದೆ. ಕಾಣಲಿಲ್ಲ. ಒಳ ರೂಮುಗಳಲ್ಲಿ ಎಲ್ಲಾದರೂ ಇರಬಹುದೇನೋ ಎಂದು ಗೋಡೆಗೆ ನೇತು ಹಾಕಿದ ಒಂದೆರಡು ಕ್ಯಾಲೆಂಡರ್ ಗಳನ್ನು ಪರಿಶೀಲಿಸಿದೆ. ಇಲ್ಲ. ಹಾಂ! ದೇವರ ಕೋಣೆಯಲ್ಲಿ ಇರಬಹುದೇನೋ, ಎಂದು ಅಲ್ಲಿಯೂ ನೋಡಿದೆ. ಮೂರ್ತಿಗಳು ಇವೆ. ಆದರೆ ಚಿತ್ರವಿಲ್ಲ. ಶೋಕೇಶ್ ನಲ್ಲಿರೋ ಮೂರ್ತಿಗಳು ಕಣ್ಣಿಗೆ ಬಿದ್ದವು. ಅವುಗಳನ್ನು ನೋಡಿ ಚಿತ್ರ ತೆಗೆಯಲು ಬರುತ್ತದಲ್ಲ’ ಎಂದಾಗ ತಮಗೆ ಹಾಗೆ ಮೂರ್ತಿ ನೋಡಿ ಚಿತ್ರ ತೆಗೆಯಲು ಬರುವುದಿಲ್ಲ ಎಂದವು. ‘ಅಂಕಲ್, ನಿಮ್ಮ ಮನೆಯಲ್ಲಿ ಭಗವದ್ಗೀತೆ, ರಾಮಾಯಣ, ಮಹಾಭಾರತ ಪುಸ್ತಕಗಳು ಇವೆಯಾ?’ ಎಂದಿತು ಪುಟ್ಟಿ. ಅರೇ! ಹೌದಲ್ಲ ಅಲ್ಲಿ ಸಿಗಬಹುದಲ್ಲಾ ಎಂದು ಬುಕ್ ಶೆಲ್ಫ್ ಕಡೆಗೆ ಹೋಗಿ ಅದರಲ್ಲಿ ಭಗವದ್ಗೀತೆ ಪುಸ್ತಕ ತೆಗೆದೆ. ಅದರಲ್ಲಿ ಕೃಷ್ನನ ಚಿತ್ರವಿತ್ತು. ಆದರೆ ಇದು ಬಿಡಿಸಲು ಕಷ್ಟ , ಬಿಡಿಸಲು ಬರುವುದಿಲ್ಲ ಎಂದಿತು ಪುಟ್ಟಿ. ಮತ್ತೆ ಹುಡುಕಾಟ ಶುರು. ಮಹಾಭಾರತದಲ್ಲಿ ಹೊರ ಒಳ ಪುಟ ನೋಡಿದ್ದಾಯಿತು. ರಾಮಾಯಣದಲ್ಲೂ ಉಹೂಂ, ಯೋಗಿಯ ಆತ್ಮಕಥೆ, ಹಿಮಾಲಯ ಮಹಾತ್ಮರ ಸನ್ನಿಧಿಯಲ್ಲಿ, ಇಂಗ್ಲೀಷ್ ಬುಕ್ಸಗಳು, ಪ್ರವಾಸಿ ಸ್ಥಳಗಳ ಪುಟಗಳನ್ನೆಲ್ಲಾ ತಿರುವಿದ್ದಾಯಿತು, ಸಿಗಲಿಲ್ಲ. ಆಗ ಮನಕ್ಕೆ ಥಟ್ಟನೆ ಹೊಳೆದದ್ದು, ಲ್ಯಾಪ್ಟಾಪ್. ಕಂಪ್ಯೂಟರ್ನಲ್ಲಿ ನೋಡೋಣ ಮಕ್ಳೇ ಎಂದು ಲ್ಯಾಪ್ ಟಾಪ್ನ್ನು ಹಾಲ್ಗೆ ತಂದು ‘ಮಕ್ಕಳಿಗಾಗಿ ಕೃಷ್ಣನ ಪೆನ್ಷಿಲ್ ಡ್ರಾಯಿಂಗ್’ ಎಂದೆಲ್ಲ ಹುಡುಕಿದ ಮೇಲೆ ಅಲ್ಲಿ ನೂರಾರು ಕೃಷ್ಣರು ಅವಿತು ಕುಳಿತಿದ್ದರು. ಆ ಚಿತ್ರಗಳನ್ನು ನೋಡುತ್ತಿದ್ದ ಹಾಗೆಯೇ ಮಕ್ಕಳಿಗಾಗಿದ್ದ ಖುಷಿ ನೋಡಬೇಕಿತ್ತು. ಅವರಿಗೆ ಚಾಪೆ ಹಾಸಿ ಕೊಡುವುದಕ್ಕೂ ಕಾಯದೇ, ಒಂದು ಚಿತ್ರವನ್ನು ಸೆಲೆಕ್ಟ್ ಮಾಡಿ ಅದರ ಮುಂದೆ ಕುಳಿತು ಕೃಷ್ಣನ ಚಿತ್ರವನ್ನು ಬಿಡಿಸಲು ಪ್ರಾರಂಭಿಸಿಬಿಟ್ಟಿದ್ದರು. ಅವರು ಚಿತ್ರ ಬಿಡಿಸುತ್ತಿದ್ದಂತೆಯೇ ನಾವು ಸ್ವಲ್ಪ ಹೊತ್ತು ಟಿ.ವಿ ನೋಡುತ್ತ ಕುಳಿತೆವು. ಸುಮಾರು ಅರ್ಧಘಂಟೆಯ ನಂತರ ಎರಡೂ ಮಕ್ಕಳು ತಾವು ಬಿಡಿಸಿದ ಕೃಷ್ಣನ ಚಿತ್ರವನ್ನು ನಾಚಿಕೆಯಿಂದ ಇಷ್ಟಗಲ ಬಾಯಿ ತೆಗೆದು , ‘ಅಂಕಲ್, ಸರಿಯಾಗಿದೆಯಾ?’ ಎಂದು ತೋರಿಸಿದರು, ವಾ! ನಿಜವಾಗಿಯೂ ತುಂಬ ಅದ್ಭುತ ಒಂದೊಂದು ಕೃಷ್ಣನ ಚಿತ್ರಗಳನ್ನು ಅವು ಬಿಡಿಸಿದ್ದವು, ಕೃಷ್ಣನ ಚಿತ್ರವನ್ನು ಕೇಳುತ್ತ ಬಂದ ಅ ಮಕ್ಕಳಿಗೆ ಆ ಚಿತ್ರವನ್ನು ಒದಗಿಸಿದ್ದಕ್ಕೆ ಸಾರ್ಥಕವೆನಿಸಿತ್ತು.
ಸ್ಕೂಲ್ನಲ್ಲಿ ಮಿಸ್ ಹೋಮ್ ವರ್ಕ ಹೇಳಿರಬಹುದು ಎಂದುಕೊಂಡು ಇದೆಲ್ಲ ಈಗೇಕೆ? ಎಂದೆ. ಅಂಕಲ್, ನಾಳೆ ಇಸ್ಕಾನ್ ದೇವಸ್ಥಾನದಲ್ಲಿ ಓಪನ್ ಡ್ರಾಯಿಂಗ್ ಕಾಂಪಿಟೇಶನ್ ಇದೆ. ಅದಕ್ಕೇ ನಾವಿಬ್ಬರೂ ಹೋಗುತ್ತಿದ್ದೇವೆ’ ಎಂದಿದ್ದಕ್ಕೆ, ‘ಭೇಷ್, ಚನ್ನಾಗಿ ಬಿಡಿಸಿ, ನಿಮಗೆ ಪ್ರೈಜ್ ಬಂದೇ ಬರುತ್ತೆ’ ಎಂದು ಹೇಳಿ, ಅಂದಹಾಗೆ ನಿನ್ನ ಹೆಸರೇನಮ್ಮಾ? ಎಂದೆ ಸಹಜವಾಗಿ, ಅಂಕಲ್, ನಾನು ಝವೇರಿಯಾ ಬಾನು! ಮತ್ತು ಇವಳು ಎಂದು ಇನ್ನೊಬ್ಬಳ ಹೆಸರನ್ನು ಏನೋ ಹೇಳಿದಳು. ನನಗೆ ಥಟ್ಟನೆ ನೆನಪಾದದ್ದು, ಸಾಹಿರ್ ಲುಧಿಯಾನ್ವಿಯ, ವೊಹಮ್ಮದ್ ರಫಿ ಹಾಡಿದ, ಎನ್ ದತ್ತ ಸಂಗೀತದ ‘ಧೂಲ್ ಕಾ ಫೂಲ್’ನ,
‘ತೂ ಹಿಂದು ಬನೇಗಾ ನಾ ಮುಸಲ್ಮಾನ್ ಬನೇಗಾ, ಇನ್ ಸಾನ್ ಕಿ ಔಲಾದ ಹೈ ಇನ್ಸಾನ್ ಬನೇಗಾ’.
ಜಗಕೆ ಪರಿಮಳ ಬೀರಲೆಂದೇ ಅರಳಿದ ಹೂಗಳಂತೆ ಕಂಡ ಆ ಪುಟ್ಟ ಎಂಜೆಲ್ ಗಳಿಗೆ, ಆಯ್ತಮ್ಮಾ ಚನ್ನಾಗಿ ಬಿಡಿಸಿ ಎಂದು ಮತ್ತೊಮ್ಮೆ ವಿಶ್ ಮಾಡಿ ಕಳುಹಿಸಿಕೊಟ್ಟೆ.
ಮನದ ಮೂಲೆಯಲ್ಲಿ ಎಲ್ಲೋ ಒಂದು ಕಡೆ ‘ರೇ ಆಫ್ ಹೋಪ್’ ಮಿಂಚಿದಂತೆನಿಸಿತು.
ಒಹ್! ಆಗಲೇ ಮುಂಜಾನೆಯ ಏಳು ಗಂಟೆ, ಶ್! ಶಬ್ದ ಮಾಡಬೇಡಿ, ಮಕ್ಕಳು ಈಗ ಚಿತ್ರ ಬಿಡಿಸುತ್ತಿರಬೇಕು.
ಆ ಮಕ್ಕಳಿಗೆ ಪ್ರೈಜ್ ಬರಲೆಂದು ಹಾರೈಸೋಣ.
Comments
ಉ: ಪರಿಮಳದ ಹೂಗಳು
In reply to ಉ: ಪರಿಮಳದ ಹೂಗಳು by makara
ಉ: ಪರಿಮಳದ ಹೂಗಳು
In reply to ಉ: ಪರಿಮಳದ ಹೂಗಳು by makara
ಪ್ರಿಯ ಮಕರ ರವರೇ, ಲಕ್ಷ್ಮೀಕಾಂತ
ಪ್ರಿಯ ಮಕರ ರವರೇ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ತಮ್ಮ ಅಂದಿನ ಪ್ರಿತಿಕ್ರಿಯೆಗೆ ಸ್ಪಂದಿಸಿ, ಪತ್ರಿಕೆಗೂ ರವಾನಿಸಿದ್ದೆ ಈ ಪ್ರಸಂಗವನ್ನು, ' ಕಸ್ತೂರಿ' ಯ ಡಿಸೆಂಬರ - 2012 ರ ಸಂಚಿಕೆಯಲ್ಲಿ 'ದೇವರೂಪಿ ಮಕ್ಕಳು' ಶಿರೋನಾಮೆಯಲ್ಲಿ ಪ್ರಕಟವಾಗಿದೆ ಲೇಖನ. ,ವಿಷಯ ತಮ್ಮೊಂದಿಗೆ ಹಂಚಿಕೊಳ್ಳೋಣ ಅಂತಾ ತಮಗೂ ತಿಳಿಸುತ್ತಿರುವೆ. ಧನ್ವವಾದಗಳು.
In reply to ಪ್ರಿಯ ಮಕರ ರವರೇ, ಲಕ್ಷ್ಮೀಕಾಂತ by lpitnal@gmail.com
ಲಕ್ಷ್ಮೀಕಾಂತ ಇಟ್ನಾಳ ರವರಿಗೆ
ಲಕ್ಷ್ಮೀಕಾಂತ ಇಟ್ನಾಳ ರವರಿಗೆ ವಂದನೆಗಳು
ಮಾನ್ಯರೆ ತಮ್ಮ ಈ ಲೇಖನ ಕಸ್ತೂರಿಯಲ್ಲಿ ಪ್ರಕಟವಾದದ್ದು ಕೇಳಿ ಸಂತೋಷವಾಯಿತು. ಸಂಪದದಲ್ಲಿ ಓದಿದ್ದೇನೆ ಕಸ್ತೂರಿಯಲ್ಲಿ ಪ್ರಕಟವಾದದ್ದನ್ನು ಸಹ ಓದುತ್ತೇನೆ. ಪ್ರಿಂಟ್ ಮೀಡಿಯಾದಲ್ಲಿ ಬರುವ ಲೇಖನಗಳ ಓದುವಿಕೆಯ ಮಜವೆ ಬೇರೆ.ತಮ್ಮ ಲೇಖನ ಪ್ರಕಟವಾದದ್ದಕ್ಕೆ ತಡವಾಗಿ ನನ್ನ ಧನ್ಯವಾದಗಳು.