ಪಾಡ್ಯದ ಚಂದಿರ

ಪಾಡ್ಯದ ಚಂದಿರ

 

 

ಹೊತ್ತು ಮುಳುಗಿತು ಸಂಜೆಯಾಯಿತು
ಮತ್ತೆ ಪೂರ್ವದಿ ಬಂದು ಚಂದಿರ
ನಿತ್ತಿಹನು ಗಗನದಲಿ ಜೊನ್ನದ ಸವಿಯ ಮಳೆಯನ್ನು
ಚಿತ್ತವಿನ್ನದರಿಂದ ಬೇರೆಡೆ
ಯೆತ್ತ ಪೋಪುದು? ಬಾನ ಹೆಣ್ಣಿನ
ಕುತ್ತಿಗೆಗೆ ಪದಕವದು ಮೇಣ್ ಪಾಡ್ಯಮಿಯ ಚಂದಿರನು!

- ಹಂಸಾನಂದಿ

 

ಕೊ: ಚಿತ್ರ ಕೃಪೆ - http://sandersonthird.blogspot.com/2010/11/beaver-moon.html

ಕೊ.ಕೊ: ಇಲ್ಲಿ ಪಾಡ್ಯಮಿ ಎಂದು ಹೇಳಲು ವಿಶೇಷ ಕಾರಣವಿದೆ. ಹುಣ್ಣಿಮೆಯ ಮರುದಿನ ಕೃಷ್ಣ ಪಕ್ಷದ ಪಾಡ್ಯದ ಚಂದ್ರನು ನೋಡಲು ಸರಿಸುಮಾರು ಹುಣ್ಣಿಮೆಯ ಚಂದ್ರನಷ್ಟೇ ದೊಡ್ಡದಾಗಿದ್ದು, ಸೂರ್ಯ ಮುಳುಗಿ ೪೦-೪೫ ನಿಮಿಷಗಳ ನಂತರ ಹುಟ್ಟುತ್ತಾನೆ (ಹುಣ್ಣಿಮೆಯ ಚಂದಿರನು ಸೂರ್ಯಾಸ್ತದ ಹೊತ್ತಿಗೇ ಹುಟ್ಟುತ್ತಾನೆ), ಹಾಗಾಗಿ ಪಾಡ್ಯಮಿಯಂದು ಚಂದ್ರ ಹುಟ್ಟುವ ವೇಳೆಗೆ ಸ್ವಲ್ಪ ಕತ್ತಲು ಹೆಚ್ಚಾಗಿದ್ದು, ಮೂಡಣ ದಿಕ್ಕಿನಲ್ಲಿ ಚಂದಿರನ ಸೊಬಗು ಇನ್ನೂ ಹೆಚ್ಚಾಗಿ ಕಾಣುತ್ತದೆ. ಅದಕ್ಕಾಗಿಯೇ, ನಾನು ಹುಣ್ಣಿಮೆಯ ಚಂದ್ರನ ಬದಲು ಪಾಡ್ಯದ ಚಂದ್ರನನ್ನು ಬಾನ ಹೆಣ್ಣಿನ ಕುತ್ತಿಗೆಯ ಪದಕವನ್ನಾಗಿಸಿದ್ದೇನೆ.

ಕೊ,ಕೊ.ಕೊ: ಇದು ಪದ್ಯಪಾನದಲ್ಲಿ  "Rin", "Win", "Bun" ಮತ್ತು  "Sun" ಈ ಪದಗಳನ್ನು ಬಳಸಿ, ಚಂದ್ರೋದಯವನ್ನು ವರ್ಣಿಸಿ ಎಂದು ಕೊಟ್ಟಿದ್ದ ಪ್ರಶ್ನೆಗೆ ನಾನು ಉತ್ತರವಾಗಿ ಬರೆದ  ಭಾಮಿನಿ ಷಟ್ಪದಿಯ ಒಂದು ಪದ್ಯ. ಸಂಜೆ , ಬಂದು, ಚಿತ್ತವಿನ್ನದರಿಂದ - ಈ ಪದಗಳನ್ನು ಗಮನಿಸಿ.
 

 

Rating
No votes yet

Comments