ಪುನರ್ಜನ್ಮ..

ಪುನರ್ಜನ್ಮ..

ಇಲ್ಲ. ದೇವ್ರಾಣೆ ನಾನು ಪುನರ್ಜನ್ಮದ ಸತ್ಯಾಸತ್ಯತೆಗಳೆ ಬಗ್ಗೆ ಬರೀತಿಲ್ಲ. ಇದು ಸುಮಾರು ಹನ್ನೆರಡು ವರ್ಷಗಳ ಹಿಂದೆ ನನ್ನ ಬದುಕಿನಲ್ಲಿ ನಡೆದ ಒಂದು ಘಟನೆ.
ನಮ್ಮದು ಮಂಡ್ಯ ಜಿಲ್ಲೆ, ಮಳವಳ್ಳಿ ಪಕ್ಕ ಒಂದು ಚಿಕ್ಕ ಹಳ್ಳಿ. ನಮ್ಮೂರಿನಲ್ಲಿ ಗ್ರಾಮ ಪಂಚಾಯ್ತಿ ಕಾರ್ಯಾಲಯ ಇದ್ದಿದ್ರಿಂದ ಅದರ ಜೊತೆ ಒಂದು ಗ್ರಂಥಾಲಯ ಕೂಡ ಇತ್ತು. ಆದಕ್ಕೊಂದು ಸ್ವಂತ ಸರಕಾರಿ ಕಟ್ಟಡವಿರಲಿಲ್ಲ. ನಮ್ಮ ಮನೆ ಪಕ್ಕದಲ್ಲೇ ನಮ್ಮ ತಾತನ ದೊಡ್ಡ ತೊಟ್ಟಿ ಮನೆ ಇತ್ತು. ಅದರ ಹೊರಬಾಗದಲ್ಲಿದ್ದ ಒಂದು ಕೊಠಡಿಯನ್ನು ಗ್ರಂಥಾಲಯಕ್ಕಾಗಿ ಬಿಟ್ಟು ಕೊಟ್ಟಿದ್ದರು..
ಹೀಗಾಗಿ ನಾನೆ ಅಲ್ಲಿನ ಅನ್ ಅಫೀಷಿಯಲ್ ಮೇಲ್ವಿಚಾರಕನಾಗಿದ್ದೆ.. ಅದರ ಬೀಗದ ಕೈ ನನ್ನ ಹತ್ರಾನೆ ಇರ್ತಿತ್ತು.

ಒಂದು ದಿನ ಭಾನುವಾರ, ಮನೇಲಿ ಯಾರು ಇಲ್ಲ, ಲೈಬ್ರರೀಗು ರಜ. ನಾವು ಹುಡುಗರು ಕಳ್ಳ ಪೋಲಿಸ್ ಆಟ ಆಡ್ತಿದ್ವಿ. ನಾನು ಕಳ್ಳ. ಆವಿತುಕೊಳ್ಳೊಕೆ ಜಾಗ ಹುಡುಕ್ತಾ ಲೈಬ್ರರಿಗೆ ಬಂದೆ. ಆ ಕೊಠಡಿಯಲ್ಲಿ ಶವಪೆಟ್ಟಿಗೆ ಆಕಾರದ ಅದಕ್ಕಿಂತ ಸ್ವಲ್ಪ ಚಿಕ್ಕ ಅಳತೆಯ ಮೂರು ಪೆಟ್ಟಿಗೆಗಳಿದ್ದವು. ಆ ಪೆಟ್ಟಿಗೆಗಳನ್ನು ಮರದ ಪಟ್ಟಿ ಜೋಡಿಸಿ ಎರಡು ಸಮ ಕಂಪಾರ್ಟ್ಮೆಂಟ್ಗಳಾಗಿ ವಿಭಜಿಸಲಾಗಿತ್ತು. ನಾನು ಅವಿತುಕೊಳ್ಳಲು ಜಾಗ ಹುಡುಕುತ್ತಾ ಎಲ್ಲಾ ಕಂಪಾರ್ಟ್ಮೆಂಟ್ಗಳ ಮುಚ್ಚಳ ತೆಗೆದು ನೋಡಿದಾಗ ಒಂದು ಖಾಲಿ ಇದ್ದದ್ದು ಕಂಡಿತು. ನನಗೆ ಅವಿತುಕೊಳ್ಳಲು ತಕ್ಷಣ ಸಿಕ್ಕ ಜಾಗ ಅದೆ. ಅದರೊಳಗೆ ಸೇರಿಕೊಂಡು ಮುಚ್ಚಳ ಹಾಕಿಕೊಂಡೆ. ಹೀಗೆ 3x1.5x1.5 ಅಡಿ ಆಳತೆಯ ಒಂದು ಕತ್ತಲೆ ಡಬ್ಬದಲ್ಲಿ ನಾನು ಒಂದೆರಡು ನಿಮಿಷ ಅಲುಗಾಡದೆ ಮೈ ಮುದುಡಿ ಕುಳಿತಿದ್ದೆ. ಪೋಲಿಸ್ ಆಗಿದ್ದವ ಬಂದದ್ದು, ಹುಡುಕಿ ನೋಡಿ ಹೊರಟು ಹೊರಟು ಹೋದದ್ದು ತಿಳಿಯಿತು. ಮತ್ತೆ ಒಂದು ನಿಮಿಷ ಹಾಗೆ ಕಳೆದಾಗ ಉಸಿರು ಕಟ್ಟುತ್ತಿರುವ ಅನುಭವವಾಯ್ತು. ಸರಿ ಮೇಲೆ ಬರೋಣ ಅಂತ ಮುಚ್ಚಳವನ್ನು ಹೊರದಬ್ಬಲು ಪ್ರಯತ್ನಿಸಿದಾಗ ಅದು ಹೊರಗಿನಿಂದ ಲಾಕ್ ಆಗಿದ್ದು ಗೊತ್ತಾಯ್ತು. ಭಯ ಶುರುವಾಯ್ತು, ಕೈ ಕಾಲು ಅಲುಗಾಡಿಸಲೂ ಜಾಗವಿಲ್ಲ. ಹಾಗೆಯೆ ಬೆನ್ನಿನಿಂದ ಗುದ್ದಿ ಮುಚ್ಚಳ ತೆರೆಯಲು ಪ್ರಯತ್ನಿಸಿದೆ, ಸಾಧ್ಯವಾಗಲಿಲ್ಲ.ಗೆಳೆಯರ ಹೆಸರು ಹಿಡಿದು ಕೂಗಿದೆ, ಯಾರೂ ಇಲ್ಲ. ಆ ಕೊಠಡಿ ಮನೆಯ ಹಿಂಭಾಗದಲ್ಲಿದ್ದರಿಂದ ಹೊರಗಿನ ರಸ್ತೆಗೂ ನನ್ನ ಕೂಗು ಕೇಳಿಸುವಂತಿರಲಿಲ್ಲ.
ನಾನು ಅಳಲಾರಂಭಿಸಿದೆ.

ಒಂದು ನಿಮಿಷದ ನಂತರ ಮನೆಯ ಒಳಗೆ ಯಾರೋ ಬಾಗಿಲು ಮುಚ್ಚುವ/ತೆರೆಯುವ ಶಬ್ದ ಕೇಳಿತು. ತಾತ ಇರಬಹುದೆಂದು ನಾ ಜೋರಾಗಿ 'ತಾತ, ತಾತ' ಅಂತ ಭಯಪೂರಿತ ಧ್ವನಿಯಲ್ಲಿ ಕೂಗೋಕೆ ಶುರು ಮಾಡಿದೆ. ತಾತನಿಗು ಭಯವಾಗಿರಬೇಕು. ಎಲ್ಲಾ ಕಡೆ ನನಗಾಗಿ ಹುಡುಕಿದಾರೆ. ನಮ್ಮ ಸವಾರಿಯು ನೆಲಕ್ಕಿಂತ ಹೆಚ್ಚಾಗಿ ಮನೆಯ ತೊಲೆಗಳು ಮತ್ತು ಮೋಟು ಗೋಡೆಗಳ ಮೇಲೆ ಸಾಮಾನ್ಯವಾಗಿದ್ರಿಂದ ಎಲ್ಲಾ ಕಡೆ ಹುಡುಕಿದಾರೆ. ನಾನು ಎಲ್ಲೂ ಇಲ್ಲ. ಕೊನೆಗೆ ಅಸ್ಪಷ್ಟವಾಗಿ ಕೇಳುತ್ತಿದ್ದ ನನ್ನ ಧ್ವನಿ ಅನುಕರಿಸಿ ಲೈಬ್ರರಿಗೆ ಬಂದರು. ಡಬ್ಬವೊಂದು ದೆವ್ವ ಹೊಕ್ಕಿಕೊಂಡಂತೆ ಅಲುಗಾಗಾಡುವುದನ್ನು ನೋಡಿ ಮುಚ್ಚಳ ತೆಗೆದರು. ನಾನು ಮಿಂಚಿನ ವೇಗದಲ್ಲಿ ಹೊರಗೆ ಹಾರಿ ಜೋರಾಗಿ ಉಸಿರಾಡುತ್ತಿದ್ದೆ. ತಾತನಿಗೇನನ್ನಿಸಿತೋ ಏನೋ ಬೆನ್ನಿನ ಮೆಲೆ ಸರಿಯಾಗಿ ಒಂದು ಬಾರಿಸಿಸಿದರು. ನಾನು ಎರಡೆ ಕ್ಷಣದಲ್ಲಿ ಅಲ್ಲಿಂದ ಪರಾರಿಯಾಗಿ ಓಡಿದೆ, ಐದು ನಿಮಿಷ ಓಡುತ್ತಲೆ ಇದ್ದೆ..
ಈಗ ತಾತ ಇಲ್ಲ. ಈ ಘಟನೆಯ ನೆನಪು ಇದಿನ್ನೂ ನೆನ್ನೆ ನಡೆದದ್ದು ಎಂಬಂತೆ ಹಸಿರಾಗಿದೆ.ನೆನ್ಸಿಕೊಂಡರೆ ಒಮ್ಮೆ ಮೈ ಕಂಪಿಸುತ್ತದೆ. ಇದನ್ನಿಲ್ಲಿ ಬರೆಯುವಾಗಲಂತೂ ಕೈ ಕೂಡ ನಡುಗುತ್ತಿತ್ತು.

Rating
No votes yet

Comments