ಪುಷ್ಪಬನದಲ್ಲೊಂದು ಸುತ್ತಾಟ

ಪುಷ್ಪಬನದಲ್ಲೊಂದು ಸುತ್ತಾಟ

ಪುಷ್ಪಬನದಲ್ಲೊಂದು ಸುತ್ತಾಟ ಈ ಜಗತ್ತು ಆ ದೇವರ ಸೃಷ್ಠಿಯ ಒಂದು ಸುಂದರ ಆಲಯ.ಆತನ ಕಲ್ಪನೆ,ಸೃಷ್ಠಿಯ ವೈವಿಧ್ಯತೆ ಬೆರಗುಗೊಳಿಸುವಂಥದ್ದು.ಈ ವೈವಿಧ್ಯಮಯ ಸೃಷ್ಠಿಯಲ್ಲಿ ಅತ್ಯಂತ ಸುಂದರವಾದದ್ದು,ಸುಕೋಮಲವಾದದ್ದು,ಮನಸ್ಸಿಗೆ ಮುದ ನೀಡಿ ಕಣ್ಮನ ತಣಿಸುವ ಸೃಷ್ಠಿಯೆಂದರೆ ಒಂದು ವೈವಿಧ್ಯಮಯ ಪುಷ್ಪರಾಶಿ ಮತ್ತೊಂದು ಬಣ್ಣಬಣ್ಣದ ಪಕ್ಷಿಕುಲಗಳೆಂದು ನನ್ನ ಅನಿಸಿಕೆ.ಈ ಎರಡೂ ಜೀವಿಯ ಸೃಷ್ಠಿಯಲ್ಲಿ ಆ ಭಗವಂತನ ಜಾಣ್ಮೆ, ಬಣ್ಣಗಳ ವಿನ್ಯಾಸ, ಸೌಂದರ್ಯಪ್ರಜ್ಞೆ , ಅತನ ಹೃದಯದ ಮೃದು-ಮಧುರ ಭಾವನೆಗಳು ಮೇಳೈಸಿದೆ. ಸುಂದರ,ವರ್ಣರoಜಿತ,ಪರಿಮಳಯುಕ್ತ ಪುಷ್ಪಗಳಿಗೆ ಮನಸೋಲದವರುಂಟೆ? ಕಣ್ಣಿಗೆ ತಂಪೀಯುವ, ಹಸಿರು ಎಲೆಗಳ ಮರೆಯಲ್ಲಿ ಅರಳಿನಿಂತ ಹೂಗಳೆಂದರೆ ಇಷ್ಟಪಡದವರಾರು? ಆದರೆ ಈ ಹೂಗಳು ತುಂಬಾ ಅಲ್ಪಾಯು.ಮುಂಜಾನೆಯ ಎಳೆಬಿಸಿಲಿಗೆ ಅರಳಿ ಎಲ್ಲರಿಗೂ ಸಂತಸ ನೀಡಿ ಸಂಜೆಗೆ ಮುದುಡಿಹೋಗುವ ಈ ಸುಮಗಳು ನಮಗೆ ಮಾದರಿಯಾಗಿವೆ. ಚಿರಪರಿಚಿತ ಹೂಗಳ ಲೋಕದಲ್ಲಿ ಒಮ್ಮೆ ಕಣ್ಣಾಡಿಸಿ,ಅವುಗಳ ಚೆಲುವನ್ನು ಕಣ್ತುಂಬಿಕೊಳ್ಳಲು ಪುಷ್ಪಬನದಲ್ಲೊಂದು ಸುತ್ತಾಟ ನೆಡೆಸೋಣ ಬನ್ನಿ. ಹೂಗಳಲ್ಲಿ ಸೂರ್ಯಕಾಂತಿ,ತಾವರೆಯಂತೆ ದೊಡ್ಡದೊಡ್ಡ ಹೂಗಳಿರುವಂತೆ ಮಲ್ಲಿಗೆ,ಪಾರಿಜಾತದಂತಹ ಚಿಕ್ಕಚಿಕ್ಕ ಹೂಗಳೂ ತಮ್ಮದೇ ಆದ ವಿನ್ಯಾಸ, ಪರಿಮಳದಿಂದಾಗಿ ಪ್ರಾಮುಖ್ಯತೆ ಪಡೆದಿವೆ.ಕನಕಾಂಬರ, ಗೊರಟೆ,ಸುಗಂಧರಾಜ,ಗಂಟೆಹೂ,ಸಂಪಿಗೆ,ಕೇದಿಗೆ ಹೂಗಳು ನೀಳವಾದುವುಗಳು.ಸುಗಂಧರಾಜದ ಮಾಲೆಗಳು ಜನಪ್ರಿಯವಾಗಲು ಅದರ ಕಂಪು ಮತ್ತು ಹೆಚ್ಚು ಸಮಯ ಬಾಡದಿರುವುದು ಕಾರಣ.ಸಂಪಿಗೆ,ಕೇದಿಗೆ ಹೂಗಳು ಬಣ್ಣ,ಪರಿಮಳಕ್ಕೆ ಪ್ರಸಿದ್ಧಿ ಮತ್ತು ಇವು ವರ್ಷಋತುವಿನಲ್ಲಿ ಹೇರಳವಾಗಿ ಬಿಡುತ್ತವೆ. ಕನಕಾಂಬರ,ಗೊರಟೆ,ಗಂಟೆಹೂಗಳು ಹಗುರವಾದ ಹೂಗಳು.ಸೂರ್ಯಕಾಂತಿ, ಸೇವಂತಿಗೆ, ದಾಸವಾಳ,ಡೇರೆಹೂಗಳು ಅಗಲವಾದ ದಳಗಳನ್ನು ಪಡೆದು ದೊಡ್ಡ ಹೂಗಳೆನ್ನಿಸಿವೆ.ಗಿಡದಲ್ಲಿದ್ದಷ್ಟು ಹೊತ್ತೂ ಸೂರ್ಯಮುಖಿಯಾಗಿಯೇ ಇರುವ ಸೂರ್ಯಕಾಂತಿ ಒಂದು ವಿಶಿಷ್ಟವಾದ ಹೂವಾದರೆ ಸೇವಂತಿಗೆ, ದಾಸವಾಳ,ಡೇರೆಹೂಗಳು ವರ್ಣವಿನ್ಯಾಸದಲ್ಲಿ ತರಾವರಿ ಮಾದರಿಗಳನ್ನು ಹೊಂದಿವೆ.ದಾಸವಾಳ ಶಿವಶಕ್ತಿಯರಿಗೆ ಪ್ರಿಯವಾದ ಹೂವೆಂದು ಪ್ರತೀತಿ. ಘಮಘಮಿಸುವ ಮಲ್ಲಿಗೆ ತುಂಬಾ ಜನಪ್ರಿಯವಾದ ಹೂ.ಹಾಲುಬಿಳುಪಿಗೆ, ಕಂಪಿಗೆ ಎಲ್ಲಾ ಜಾತಿಯ ಮಲ್ಲಿಗೆಗಳೂ ಪ್ರಸಿದ್ಧಿ.ಮೈಸೂರು ಕಡೆ ಹೆಚ್ಚಾಗಿ ಬೆಳೆಯುವ ಮಲ್ಲಿಗೆ ಮೈಸೂರುಮಲ್ಲಿಗೆಯಾದರೆ ಮಂಗಳೂರು ಕಡೆ ಬೆಳೆಯುವ ಮಲ್ಲಿಗೆ ಮಂಗಳೂರುಮಲ್ಲಿಗೆಯಾಗಿ ಪ್ರಸಿದ್ಧಿಯಾಗಿವೆ.ಮೈಸೂರುಮಲ್ಲಿಗೆ ಪ್ರೇಮ,ಪ್ರೀತಿಯಂತಹ ನವಿರು ಭಾವನೆಗಳ ಅಭಿವ್ಯಕ್ತಿಗೆ ಸಂಕೇತ.ಕನ್ನಡದ ಮನೆಮಾತಾದ ಕೆ.ಎಸ್.ನ.ರವರ ಕವನಸಂಕಲನ ’ಮೈಸೂರುಮಲ್ಲಿಗೆ’ಯನ್ನು ಇಲ್ಲಿ ನೆನಪಿಸಿಕೊಳ್ಳದಿರಲು ಸಾಧ್ಯವಿಲ್ಲ.ಇನ್ನು ಸೂಜಿಯಂತೆ ಚೂಪಾದ ದಳಗಳನ್ನು ಹೊಂದಿದ ಸೂಜಿಮಲ್ಲಿಗೆಯದೇ ಇನ್ನೊಂದು ವೈಖರಿ.ಮಲ್ಲಿಗೆಯ ಜಾತಿಯದೇ ಆದ ಮತ್ತೊಂದು ಸುಮವೆಂದರೆ ಮಾಲತಿಪುಷ್ಪ.ದುಂಡುಮಲ್ಲಿಗೆ,ಚೆಂಡುಮಲ್ಲಿಗೆ ಹೂಗಳು ಬೇಸಿಗೆಯಲ್ಲಿಬಿಡುವ ಪುಷ್ಪವಾದರೆ ಜಾಜಿ,ಸೂಜಿಮಲ್ಲಿಗೆಗಳು ಮಳೆಗಾಲದಲ್ಲಿ ಅರಳಿ ಸಂಭ್ರಮಿಸುತ್ತವೆ.ಸ್ವರ್ಗಲೋಕದಿಂದ ಭೂಮಿಗಿಳಿದ ಪುಷ್ಪವೆಂದರೆ ಪಾರಿಜಾತ ಅಥವಾ ಮಂದಾರಪುಷ್ಪ.ಈ ಹೂವು ಶ್ರೀಕೃಷ್ಣನಿಂದ ಭೂಲೋಕಕ್ಕೆ ಬಂತೆಂದು ಪ್ರತೀತಿ. ಹಾಗೆ ಬೆಟ್ಟದ ಮೇಲೆ ಅರಳುವ ಹೂ ಬೆಟ್ಟಮಲ್ಲಿಗೆ. ವಸಂತದೂತ ಕೋಗಿಲೆಯಾದರೆ ವಸಂತದೂತಿಯೆಂದೇ ಹೆಸರು ಪಡೆದ ಸುಮವೆಂದರೆ ಮಾಧವಿಹೂ.ಇರುವಂತಿಗೆ,ಕಾಕಡ ಕೂಡ ಮಲ್ಲಿಗೆ ಜಾತಿಯ ಹೂಗಳು. ಇವಲ್ಲದೆ ಸುರಗಿ,ಸುರಹೊನ್ನೆ,ಬಕುಲ,ಕರವೀರ,ಪಾದರಿ, ವಾಸಂತಿ ಹೀಗೆ ಇನ್ನೂ ಅನೇಕ ಜಾತಿಯ ಸುಮಗಳಿವೆ.ರಾತ್ರಿ ಅರಳಿ ಘಮಘಮಿಸುವ ವಿಶಿಷ್ಟ ಹೂ- ರಾತ್ರಿರಾಣಿ. ಇನ್ನು ರಾಜಠೀವಿಯ ಗುಲಾಬಿಯ ಸೊಗಸನ್ನಂತೂ ವರ್ಣಿಸಲಾಗದು.ವಿವಿಧ ಬಣ್ಣಗಳಿಂದ ನಳನಳಿಸುವ ಗುಲಾಬಿಯ ಚೆಲುವನ್ನು ಮೆಚ್ಚದವರಾರು? ಹೆಂಗೆಳೆಯರ ಮುಡಿಯೇರುವ ಈ ಗುಲಾಬಿ ಪುರುಷರ ಕೋಟುಗಳಲ್ಲೂ ಕಂಗೊಳಿಸುವುದು ವಿಶೇಷ. ಅಡಿಕೆ, ತೆಂಗಿನ ಹೂಗೊನೆಗೆ "ಹೊಂಬಾಳೆ" ಎನ್ನುತ್ತಾರೆ.ಅಡಿಕೆಯ ಹೊಂಬಾಳೆಯನ್ನು ’ಸಿಂಗಾರ’ ಎಂದೂ ಕರೆಯುತ್ತಾರೆ. ಮದುವೆ, ಗೃಹಪ್ರವೇಶ ಮುಂತಾದ ಶುಭಸಮಾರಂಭಗಳಲ್ಲಿ ಕಳಸಕ್ಕೆ ಹೊಂಬಾಳೆ ಇಟ್ಟು ಪೂಜಿಸುವ ಮತ್ತು ದೇವರಿಗೆ ಹೊಂಬಾಳೆ ಅರ್ಪಿಸುವ ಪದ್ಧತಿ ನಮ್ಮಲ್ಲಿದೆ. ಇನ್ನು ನೀರಿನಲ್ಲಿ ಅರಳುವ ಹೂಗಳೆಡೆಗೆ ಗಮನಹರಿಸೋಣ. ಇವುಗಳಲ್ಲಿ ಅತ್ಯಂತ ಪ್ರಮುಖವಾದುವೆಂದರೆ ತಾವರೆ,ನೈದಿಲೆ. ರವಿಯ ಕಿರಣ ಸ್ಪರ್ಶದಿಂದ ತಾವರೆ ಅರಳಿದರೆ ನೈದಿಲೆ ಚಂದ್ರದರ್ಶನದಿಂದ ಪುಳಕಿತಗೊಳ್ಳುತ್ತದೆ.ತಾವರೆಗೆ ನಮ್ಮ ರಾಷ್ಟ್ರ್ಅಪುಷ್ಪವೆಂಬ ಹೆಗ್ಗಳಿಕೆಯಿದೆ. ಕೆಲವು ವಿಶಿಷ್ಟ ಹೂಗಳ ಬಗ್ಗೆ ಈಗ ಒಂದು ಅವಲೋಕನ ಮಾಡೋಣ.ಲಿಂಗದ ನೆತ್ತಿಯ ಮೇಲೆ ನಾಗ ಹೆಡೆಬಿಚ್ಚಿದಂತೆ ಕಾಣುವ ಹೂ ನಾಗಲಿಂಗಪುಷ್ಪ. ವರ್ಷಕ್ಕೊಮ್ಮೆ(ಮೇ ತಿಂಗಳಿನಲ್ಲಿ) ಅರಳಿ ತಿಂಗಳಾನುಗಟ್ಟಲೆ ಬಾಡದೆ ಮುದ ನೀಡುವ ಹೂ ಮೇಫ್ಲವರ್.ಇನ್ನು ಕೀಟಗಳನ್ನು ಭಕ್ಷಿಸುವ ವಿಚಿತ್ರ ಜಾತಿಯ ಹೂಗಳೂ ಈ ಕುಸುಮಲೋಕದಲ್ಲಿವೆ ಎಂಬುದೊಂದು ವಿಸ್ಮಯ. ಅವುಗಳೆಂದರೆ ಹೂಜಿಗಿಡ, ಡ್ರಾಸೆರಾ ಮುಂತಾದುವುಗಳು.ಸುಮಾತ್ರ ದ್ವೀಪದಲ್ಲಿ ಮಾತ್ರ ಕಂಡುಬರುವ ’ರಫ್ಲೇಶಿಯಾ ಅರ್ನೋಲ್ಡಿ" ಎಂಬ ಪುಷ್ಪ ವಿಶ್ವದಲ್ಲಿಯೇ ಅತ್ಯಂತ ದೊಡ್ಡದಾದ ಹೂವಂತೆ.ಇದರ ತೂಕ ೭ ಕೆಜಿ, ಇದರ ದಳಗಳು ೧/೨ ಮೀಟರ್ ನಿಂದ ೧.೬ ಮೀಟರ್ ಉದ್ದ ಮತ್ತು ೧ ಇಂಚು ದಪ್ಪವಾಗಿರುತ್ತದಂತೆ. ಇತ್ತೀಚಿನ ದಿನಗಳಲ್ಲಿ ದೇಶವಿದೇಶಗಳಿಂದ ಆಮದಾದ ತಳಿಗಳಿಂದಾಗಿ ತರಾವರಿಯಾದ, ಆಕರ್ಷಕ ಹೂಗಳ ದೊಡ್ಡ ದಂಡೇ ನಮ್ಮ ಮುಂದಿದೆ. ಶುಭಸಮಾರಂಭಗಳಿಗೆ ಬೊಕ್ಕೆಗಳನ್ನು ತಯಾರಿಸಲು,ಮಂಟಪಗಳನ್ನು ಶೃಂಗರಿಸಲು ಇವುಗಳನ್ನು ಉಪಯೋಗಿಸುತ್ತಾರೆ. ಪುಷ್ಪೋದ್ಯಮ ಈಗ ಒಂದು ಲಾಭದಾಯಕ ಉದ್ಯಮ.ಈಗ ಹೂವುಗಳಿಗೆ ವಿಶ್ವ ಮಾರುಕಟ್ಟೆಯಲ್ಲಿ ಅಪಾರವಾದ ಬೇಡಿಕೆ ಇದೆ. ಅನೇಕ ಬಗೆಯ ಹೂಗಳನ್ನು ಸೌಂದರ್ಯವರ್ಧಕ, ಸುವಾಸನಾಯುಕ್ತ ಪದಾರ್ಥಗಳ ತಯಾರಿಕೆಯಲ್ಲಿ ಮತ್ತು ಔಷಧಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಪುಷ್ಪಗಳ ಬಗ್ಗೆ ಇಷ್ಟೆಲ್ಲ ಹೇಳಿದ ಮೇಲೆ ನನಗೆ ತುಂಬಾ ಪ್ರಿಯವಾದ ಒಂದು ಹೂವಿನ ವಿಚಾರ ಬರೆಯದಿರಲು ಸಾಧ್ಯವೇ? ಅದೇ ’ಶಂಕಾಸು’ ಎಂದರೆ "ತುಂಬೆಹೂವು".ಹೂವುಗಳಲ್ಲೆಲ್ಲ ಅತಿ ಶ್ರೇಷ್ಟವಾದ ಹೂವೆಂದರೆ ತುಂಬೆ.ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದು ಎಂಬುದು ಈ ಹೂವಿಗೆ ಅನ್ವರ್ಥ.ಈ ಪುಟ್ಟ ಪುಷ್ಪಕ್ಕೆ ರಂಗಿಲ್ಲ,ಸುವಾಸನೆಯಂತೂ ಮೊದಲೇ ಇಲ್ಲ.ಬಣ್ಣ ಬಿಳಿಯದಾದರೇನಂತೆ ಶುಭ್ರತೆಗೆ ಸಂಕೇತವಲ್ಲವೇ? ಪರಿಶುದ್ಧತೆಗೆ,ಸೌಮ್ಯತೆಗೆ ಸಂಕೇತವಲ್ಲವೇ? ತುಂಬೆಹೂವಿಗೆ ಕಾಲದ ನಿಯಮವಿಲ್ಲ.ವರ್ಷದ ಎಲ್ಲಾ ದಿನಗಳಲ್ಲೂ ಅರಳುವ ಪುಷ್ಪವಿದು.ಮುಟ್ಟಿದರೆಲ್ಲಿ ಮಾಸಿ ಹೋಗುವುದೋ ಎಂಬ ಅಗಾಧ ಬಿಳುಪಾದ, ಮೃದುವಾದ ಹೂವಿದು. ಚಿಕ್ಕ ಹೂವಾದ್ದರಿಂದ ಜಂಬ ತಲೆ ಎತ್ತಲು ಸಾಧ್ಯವೇ ಇಲ್ಲ.ರಂಗುರಂಗಾಗಿ ಅರಳಿ ಕಂಗೊಳಿಸುತ್ತಾ ಎಲ್ಲರ ಮನಸೆಳೆಯಬೇಕೆಂಬ ಬೆಡಗು-ಬಿಂಕಗಳಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ ಹರನಿಗೆ ಪ್ರಿಯವಾದ ಪುಷ್ಪ- ತುಂಬೆ.ಮೇಲೆ ತಿಳಿಸಿದ ಎಲ್ಲ ಗುಣದಿಂದಾಗಿಯೇ ತುಂಬೆ ಶಿವನಿಗೆ ಇಷ್ಟವಾಗಿರಬಹುದಲ್ಲವೆ? ಈಗ ಹೇಳಿ, ಎಲ್ಲಾ ಹೂಗಳಿಗಿಂತ ತುಂಬೆಹೂ ಅತಿ ಶ್ರೇಷ್ಟ ಸುಮವಲ್ಲವೆ? ವರ್ಣವೈವಿಧ್ಯತೆ, ವಿನ್ಯಾಸವೈವಿಧ್ಯತೆ,ಸುಕೋಮಲತೆ,ಶುಭ್ರತೆ,ಸುವಾಸನೆ ಪುಷ್ಪಲೋಕಕ್ಕೊಂದು ವಿಶಿಷ್ಟವಾದ ಮೆರಗನ್ನು ನೀಡಿದೆ.ಆಲ್ಪಾಯುಗಳಾದರೂ ಬದುಕು ಸಾರ್ಥಕತೆ ಪಡೆದ ಭಾವ ಪುಷ್ಪಕುಲಕ್ಕಿದೆ.ಇದೇ ನಾವು ಈ ಕುಸುಮಗಳಿಂದ ಕಲಿಯಬೇಕಾದ ಪಾಠ.

Rating
Average: 3 (1 vote)

Comments