ಪುಸಕನಿಧಿ - ಪಾಲಿ ಪಬ್ಬ ಪುಷ್ಪಾಂಜಲಿ - ಇನ್ನಷ್ಟು
ಪಾಲಿ ಪಬ್ಬ ಪುಷ್ಪಾಂಜಲಿ ( ಜೀ.ಪಿ. ರಾಜರತ್ನಂ) ಎನ್ನುವ ಪುಸ್ತಕದಿಂದ ಇನ್ನಷ್ಟು .
ಯಾವುದನ್ನು ಮಾಡಿ ಅನುತಾಪ ಪಡುವನು
ಯಾವುದರ ಪಕ್ವ ಫಲವನ್ನು ಅಳುತ್ತ
ಕಣ್ಣೀರಿನೊಂದಿಗೆ ಅನುಭವಿಸುವನು -
ಮಾಡಿದ ಆ ಕೆಲಸ ಒಳ್ಳೆಯದಲ್ಲ .
ಯಾವುದನ್ನು ಮಾಡಿ ಅನುತಾಪ ಪಡನು
ಯಾವುದರ ಪಕ್ವ ಫಲವನ್ನು ಸಂತೋಷದಿಂದ
ಒಳ್ಳೆಯ ಮನಸ್ಸಿನಿಂದ ಅನುಭವಿಸುವನು -
ಮಾಡಿದ ಆ ಕೆಲಸ ಒಳ್ಳೆಯದು .
ಅತ್ತಿತ್ತ ತಿರುಗದೆಯೆ ಅದನಿದನು ನೋಡದೆಯೆ
ಸಂಚಾರಗೈವಾಗ ಗ್ರಾಮಗಳಲಿ
ಏನನೂ ಬಯಸದೆಯೇ ನಡೆದುಹೋಗುವರವರು
ಸವಣರಲಿ ಪ್ರೀತಿ ನನಗದಕೆ .
(ಸವಣ= ಶ್ರಮಣ= ಬೌದ್ಧ ಸನ್ಯಾಸಿ)
ಕಣಜಗಳಲಿ ಏನೂ ಕೂಡಿಹಾಕರು ಅವರು
ಕುಡಿಕೆ ಮಡಿಕೆಗಳ ಅವರು ಶೇಖರಿಸರು
ಪರಿಪೂರ್ಣವಾದುದನು ಬಯಸುವರು ಅವರು
ಸವಣರಲಿ ಪ್ರೀತಿ ನನಗದಕೆ .
(ಪರಿಪೂರ್ಣ=ನಿರ್ವಾಣ)
ಹಣಕಾಸುಗಳನು ಸ್ವೀಕರಿಸರು ಅವರು
ಚಿನ್ನ ಬೆಳ್ಳಿಗಳನು ತೆಗೆದುಕೊಳ್ಳರು
ಅಂದಂದನು ಅಂದಂದು ತಳ್ಳುವರು ಅವರು
ಸವಣರಲಿ ಪ್ರೀತಿ ನನಗದಕೆ .
ಮನೆ ಬಿಟ್ಟು ನಡೆದವರು ; ಅವರವರ ಜನಪದವು ಬೇರೆ ಬೇರೆ ;
ಅವರವರ ಕುಲ ಬೇರೆ ಬೇರೆ .
ಪ್ರೀತಿಯಿಂದಾಚರಿಪನೊಬ್ಬನೊದನಿನ್ನೊಬ್ಬ
ಸವಣರಲಿ ಪ್ರೀತಿ ನನಗದಕೆ .
- ತಥಾಗತರು ಹೇಳುವವರು ; ಕೆಲಸ , ಪ್ರಯತ್ನ ನಿಮ್ಮದೇ .
(ತಥಾಗತ = ಭಗವಾನ್ ಬುದ್ಧ)
ನಿಮಗೆ ಇದು ಇಷ್ಟವಾದರೆ ಪುಸ್ತಕವನ್ನೇ ನೋಡಿ . ಅಂತರ್ಜಾಲದ ಕೊಂಡಿಯು ಹಿಂದಿನ ಬ್ಲಾಗಿನಲ್ಲಿದೆ.