ಪುಸ್ತಕನಿಧಿ( ೫) :a ಇಂದ ಆರಂಭವಾಗುವ, ಗಮನ ಸೆಳೆದ ಪುಸ್ತಕಗಳು

ಪುಸ್ತಕನಿಧಿ( ೫) :a ಇಂದ ಆರಂಭವಾಗುವ, ಗಮನ ಸೆಳೆದ ಪುಸ್ತಕಗಳು

http://dli.iiit.ac.in ನಲ್ಲಿ ಕನ್ನಡ ಪುಸ್ತಕಗಳ ಪಟ್ಟಿಯನ್ನು ನೋಡುತ್ತಿರುವೆ.
ಅಲ್ಲಿ a ಇಂದ ಆರಂಭವಾಗುವ ಪುಸ್ತಕಗಳನ್ನು ಈವರೆಗೆ ನೋಡಿ ಮುಗಿಸಿದ್ದೇನೆ.
ಪುರುಸೊತ್ತಿನಂತೆ ಓದಲು ಅನೇಕ ಲಿಂಕುಗಳನ್ನು ಉಳಿಸಿಕೊಂಡಿದ್ದೇನೆ.

ಇಲ್ಲಿ ಹೆಸರುಗಳನ್ನು ಇಂಗ್ಲೀಷಿನಲ್ಲಿ ಸರಿಯಾಗಿ ಬರೆದಿಲ್ಲ ; ಇದು ಒಂದು ತೊಂದರೆ .
ಪುಟಗಳೇನೋ ಸಾಕಷ್ಟು ಬೇಗ ಬರುತ್ತವೆ . ನಾನು interface 2 ಬಳಸಿ ಓದುತ್ತೇನೆ. ಪ್ರಾರಂಭ ಪುಟಗಳು ಸಾಮಾನ್ಯವಾಗಿ ಖಾಲಿ ಇರುತ್ತವೆ .

ಸ್ಕ್ಯಾನ್ ಮಾಡಿ ಹಾಕಿರುವದು ಒಂದು ರೀತಿ ಒಳ್ಳೆಯದೇ . ಹಳೆಯ ಕಾಲದ ಅಕ್ಷರಶೈಲಿಗಳಂತೂ ಕೆಲವೆಡೆ ಮುದ್ದಾಗಿವೆ.

ನಾನು ಈವರೆಗೆ ಗಮನಿಸಿದ ಪುಸ್ತಕಗಳ ಕುರಿತು ಹೇಳುವೆ

ಆನಂದವರ್ಧನನ ಕಾವ್ಯ ಮೀಮಾಂಸೆ ಇದೆ.

ಮಾಸ್ತಿಯವರಿಂದ ಡಿಕನ್ಸನ ಆಲಿವರ್ ಟ್ವಿಸ್ಟ್ ಅನುವಾದ ಇದೆ. ( ಚಿನ್ನಾರಿ ಮುತ್ತದ ಕಥೆಯಂತಿದೆ. ಕಥಾನಾಯಕ ಟ್ವಿಸ್ಟ್ , ಅನಾಥ ಹುಡುಗ, ಕಳ್ಳರ ಗುಂಪಿನಲ್ಲಿ ತನಗರಿವಿಲ್ಲದೆ ಸೇರಿಕೊಂಡಿದ್ದಾನೆ , ಈತನ ಚುರುಕುತನ ನೋಡಿ , ಕಳ್ಳರ ನಾಯಕ , 'ನೀನು ದೊಡ್ಡವನಾಗಿ ಖಂಡಿತಾ ಮಹಾಪುರುಷನಾಗುತ್ತೀ ' ಎಂದು ವಿಶ್ವಾಸ ವ್ಯಕ್ತಪಡಿಸುತ್ತಾನೆ!)
ಅಂತರಗಂಗೆ ,ಅಪರಿಚಿತ ಪ್ರೇಯಸಿ - ಇಂಗ್ಲೀಷ ಕಥೆಗಳ ಅನುವಾದ ಇದೆ.
ಅರ್ಪಣ - ಜಗತ್ಪ್ರಸಿದ್ಧ ಮೊಪಾಸ ನ ಕತೆಗಳ ಅನುವಾದ.
ಅತಿಮಾನವ - ಬರ್ನಾರ್ಡ್ ಷಾ ಕಾದಂಬರಿ .

ಅಭಿನವ ಪಂಪ - ನಾಗಸೇನನ ಕುರಿತು ಇದೆ.
ಸೋಮನಾಥನ ಅಕ್ರೂರಚರಿತೆ ಇದೆ .
ಆದಿಕವಿ ವಾಲ್ಮೀಕಿ - ಮಾಸ್ತಿಯವರಿಂದ ರಾಮಾಯಣ ವಿಮರ್ಶೆ . ರಾಮಾಯಣದ ಮಹತ್ವವನ್ನೂ ಪಾತ್ರಗಳನ್ನೂ ಚರ್ಚಿಸಿದ್ದಾರೆ . ತಿರುವಿ ಹಾಕಲೇಬೇಕಾದ ಪುಸ್ತಕ.

ಅ.ನ.ಕೃ ರವರ ಅಖಂಡ ಕರ್ನಾಟಕ ಇದೆ.
ಫ.ಗು.ಹಳಕಟ್ಟಿಯವರು ಸಂಪಾದಿಸಿದ ಆದಯ್ಯನ ವಚನಗಳು ,
ಅದ್ಭುತ ರಾಮಾಯಣ,
ಪಂಜೆ ಮಂಗೇಶರಾಯರಿಂದ ಐತಿಹಾಸಿಕ ಕಥಾವಳಿ ಇವೆ .
ಶರತ್ಚಂದ್ರ ( ಬೆಂಗಾಲಿ) ರ ಅನೇಕ ಕಾದಂಬರಿಗಳಿವೆ. ಕನ್ನಡದಲ್ಲಿ ಮೊದಲು ಸಾಮಾಜಿಕ ಕಥೆ/ಕಾದಂಬರಿಗಳಿಲ್ಲದೆ ಇದ್ದಾಗ ಅನೇಕರು ಬಂಗಾಲಿಯಿಂದ , ಮರಾಠಿಯಿಂದ ಕನ್ನಡ ಕಣಜವನ್ನು ಸಮೃದ್ಧಗೊಳಿಸಿದರು. ಅಕ್ಕಾಜಿ , ಅರಗಿನ ಮನೆ ,ಅಮೃತಪುಲಿನ , ಅರಕ್ಷಣೀಯ ಇವು ಅವರ ಅಕಾರದಿಂದ ಆರಂಭವಾಗುವ ಹೆಸರಿನ ಕಾದಂಬರಿಗಳು ಇಲ್ಲಿವೆ.

ಆಳಿದ ಮಹಾಸ್ವಾಮಿಯವರು - ಮೈಸೂರು ಮಹಾರಾಜರ ಕುರಿತಾದ ೭೦೦ ಪುಟಗಳ ಬೃಹತ್ ಕಾದಂಬರಿ ಇದೆ.

ಆಕಸ್ಮಿಕ ತ.ರಾ.ಸು. ರವರ ಕಾದಂಬರಿ - ಬಹುಶ: ರಾಜ್‍ಕುಮಾರ್ ಅಭಿನಯದ ಇದೇ ಹೆಸರಿನ ಚಿತ್ರ ಇದನ್ನೇ ಆಧರಿಸಿದ್ದು.

ಸಂಸ್ಕೃತ ಮೂಲ:
ಅಮರಶತಕಂ - ಸಂಸ್ಕೃತದ ಶೃಂಗಾರ ಕಾವ್ಯ ಇದೆ.
ಅಮರಕೋಶ ಇದೆ . ಇದು ಜಗತ್ತಿನ ಬೇರಾವ ಭಾಷೆಗಳಲ್ಲಿಲ್ಲದ ಶ್ಲೋಕಮಯ ಡಿಕ್ಷನರಿಯಂಥ ಕೃತಿ. ಇದರಲ್ಲಿ ವ್ಯಾಕರಣವೂ ಇದೆಯಂತೆ. ಹಿಂದೆ ಮಕ್ಕಳಿಗೆ ಇದನ್ನೇ ಕಲಿಸುತ್ತಿದ್ದರು. ಬಹುಶ: ಈ ಪುಸ್ತಕ ಅರಗಿಸಿಕೊಂಡಲ್ಲಿ ಇಡೀ ಸಂಸ್ಕೃತ ಕೈವಶವಾಗುತ್ತದೆ.

ಅಮೃತಮತಿ - ಹಳೆಗನ್ನಡ ಆಧಾರಿತ ನಾಟಕಗಳು .

ಅಂಬಿಕಾ - ೧೯೨೪ ರ ಪತ್ತೇದಾರಿ ಕಾದಂಬರಿ.

ಔರ್ಧ್ವದೇಹಿಕ ಪ್ರಯೋಗ - ಮರಣಾನಂತರದ ಕ್ರಿಯೆ, ಕರ್ಮ ಕುರಿತ ಪುಸ್ತಕ. ಮೊನ್ನೆ ಪ್ರಾಣ ಹೋಗುವಾಗ ಪ್ರಾಣಾಯಾಮವೇ ಅಂತ ಬರೆದಿದ್ದದ್ದು ಈ ಪುಸ್ತಕ ಕುರಿತೇ .. ಓದಿ ಅಣ್ಣಯ್ಯನ ಮಾನವಶಾಸ್ತ್ರ - ಪ್ರಸಿದ್ಧ ಕನ್ನಡ ಕತೆ - ಏ.ಕೆ.ರಾಮಾನುಜನ್ನರದು ನೆನಪಾಯಿತು.
ಆಹ್ನಿಕ ಸಂಗ್ರಹ - ಸಂಧ್ಯಾವಂದನಾದಿಗಳ ಪುಸ್ತಕ.

ಅಪರೂಪದ ಅತಿಥಿ ವಾಣಿಯವರ ಕಾದಂಬರಿ.
ಅಪೂರ್ವ ಪಶ್ಚಿಮ - ಶಿವರಾಮ ಕಾರಂತರ ಪ್ರವಾಸ ಕಥನ.
ಔದಾರ್ಯದ ಉರುಳಲ್ಲಿ - ಕಾರಂತರ ಕಾದಂಬರಿ.

ಅರವಿಂದಘೋಷರ ಕುರಿತು ಶಂ.ಬಾ.ಜೋಶಿಯವರ ಪುಸ್ತಕ . ಕುತೂಹಲಕರ ವಿಷಯವೆಂದರೆ . ಅರವಿಂದರ ಮಹರ್ಷಿ ಇನ್ನೂ ಆಗಿರಲಿಲ್ಲ. ಆಗುತ್ತಾ ಇದ್ದ ಸಮಯದ್ದು!

ಜೀ.ಪಿ. ರಾಜರತ್ನಂ ರ ಅನೇಕ ಪುಸ್ತಕಗಳಿವೆ. ಅಶೋಕಚಕ್ರಧ್ವಜ ಎಂಬ ಪುಸ್ತಕವೂ ಒಂದು.

ಬಿ.ಎಂ.ಶ್ರೀಕಂಠಯ್ಯನವರ 'ಅಶ್ವತ್ಥಾಮನ್' ನಾಟಕ ಇದೆ. ಹಳೆಗನ್ನಡ ಶೈಲಿಯಲ್ಲಿ , ಗ್ರೀಕ್ ದುರಂತ ನಾಟಕಗಳ ಮಾದರಿಯಲ್ಲಿದೆ.

ಆವೆಯ ಮಣ್ಣಿನ ಆಟದ ದೋಣಿ - ಮೃಚ್ಛಕಟಿಕ ಇರಬಹುದು.

ರಾಮಾಯಣದಿಂದಲೇ ಪ್ರಸಿದ್ದರಾದ ಸಾಲೀ ರಾಮಚಂದ್ರರಾಯರ ಅಯೋಧ್ಯಾಕಾಂಡವೂ , ಬಾಲ ಕಾಂಡವೂ ಕಾವ್ಯರೂಪದಲ್ಲಿದೆ . ಭಾಷೆ ಸರಳ. ಉಳಿದ ಕಾಂಡಗಳೂ ಇರಬಹುದು.

ಆಗಸ್ಟ್ ಒಂಭತ್ತು - ಬಸವರಾಜ ಕಟ್ಟಿಮನಿಯವರ ಕಾದಂಬರಿ
ಆಳೌ ಕರ್ನಾಟಕದೇವಿ - ವಿಜಯನಗರ ಸಾಮ್ರಾಜ್ಯ ಕುರಿತಾದ ದೋಡ್ಡ ಕಾದಂಬರಿ.
ಆನಂದಮಠ- ಬಹುಶ: ಬಂಕಿಮರ ಕಾದಂಬರಿ. ಇಲ್ಲಿದೆ.
ಆಸ್ತಿಕ - ಸಾನೇ ಗುರೂಜಿಯವರಿಂದ ಮರಾಠಿ ಕಾದಂಬರಿ ಅನುವಾದ.

ಆತ್ಮಾಹುತಿ - ಶಿವರಾಮು ಅವರಿಂದ ಸಾವರ್ಕರ್ ಕುರಿತು ಪುಸ್ತಕ.

ನಿಮ್ಮ ಆಸಕ್ತಿಯ ಪುಸ್ತಕ ಹುಡುಕಿ ಓದಿ.

Rating
No votes yet