ಪೂರ್ವದಿಂದಲೂ ಹೆಸರು ಪಡೆದ ತಿರುಳ್ಗನ್ನಡ ನಾಡಿನ ನಡುಮನೆಯಾದ ಧಾರವಾಡದವರಿಗೆ ಮಾತ್ರ ...( ಉ.ಕ.ಕ-ಕೊನೆಯ ಕಂತು)

ಪೂರ್ವದಿಂದಲೂ ಹೆಸರು ಪಡೆದ ತಿರುಳ್ಗನ್ನಡ ನಾಡಿನ ನಡುಮನೆಯಾದ ಧಾರವಾಡದವರಿಗೆ ಮಾತ್ರ ...( ಉ.ಕ.ಕ-ಕೊನೆಯ ಕಂತು)

೧೯೨೧ ರಲ್ಲಿ ಬೇಂದ್ರೆಯವರು ಹೀಗೆ ಹೇಳಿದ್ದಾರೆ .
" ಈ ಅಪ್ರತಿಕೂಲ ಕಾಲದಲ್ಲಿಯೂ ನಮ್ಮ ಪುರಾಣ ಕವಿಯ ಕಾಲದ ಪೂರ್ವದಿಂದಲೂ ಹೆಸರು ಪಡೆದ ತಿರುಳ್ಗನ್ನಡ ನಾಡಿನ ನಡುಮನೆಯಾದ ಧಾರವಾಡ ಪ್ರಾಂತದಲ್ಲಿರುವ ಕೆಲವು ಜೀವಿಗಳಿಗೆ ಅಸಹ್ಯವಾಗಿತ್ತು. ಬೆಳಗಾಂವಿಗೆ ಹತ್ತಿದ ಮರಾ‍ಠಿಯ ಗ್ರಹಣವು ಈಗೀಗ ಬಿಡಹತ್ತಿದೆ . ಮೈಸೂರವರರಲ್ಲಿ ಈಗೀಗ ಏಕ ಕರ್ನಾಟಕ ಭಾವನೆಯು ಅರೆಮಿಂಚಹತ್ತಿದೆ. ಬಳ್ಳಾರಿಯವರು ಇದೇ ಎಲ್ಲಿಯೋ ಕಣ್ಣು ತಿಕ್ಕುತ್ತಿರುವರು. ಮಂಗಳೂರಿನಲ್ಲಿ ಇದೇ ಎಲ್ಲಿಯೋ ರಾಷ್ಟ್ರೀಯ ವಾಣಿಯು ಶಬ್ದ ಮಾಡುತ್ತಿರುವದು. ಹೈದರಾಬಾದಿನ ಕನ್ನಡಿಗರು ಮಿಸುಕಾಡುತ್ತಿದ್ದರೂ ಇನ್ನೂ ಅವರಿಗೆ ಕನ್ನಡ ಮಂತ್ರದ ಅರ್ಥವೇ ಹೊಳೆದಿಲ್ಲ . ಕಾರವಾರದ ಕನ್ನಡಿಗರು ಚೈತನ್ಯದ ಚಿನ್ಹವನ್ನು ತೋರಿಸಹತ್ತಿದ್ದರೂ ಇನ್ನೂ ಅವರಿಗೆ ಕನ್ನಡ ದೇವಿಯ ಇಡೀ ಮೂರ್ತಿಯು ಕಂಡೇ ಇಲ್ಲ . ಆದರೆ ಧಾರವಾಡದವರಿಗೆ ಮಾತ್ರ ಅಸ್ಪಷ್ಟವಾಗಿಯೇ ಇರಲೊಲ್ಲದೇಕೆ - ಮೊದಲಿನಿಂದ ಕನ್ನಡಮಂತ್ರವೂ , ಕರ್ನಾಟಕ ದೇವಿಯ ಮೂರ್ತಿಯೂ ಕಂಡಿತ್ತು. "

ಕನ್ನಡದ ಈ ನವೋದಯ ಕಾಲದಲ್ಲಿ ಉತ್ತರ ಕರ್ನಾಟಕದಲ್ಲಿ ಸ್ವಾಭಾವಿಕವಾಗಿಯೇ ಧಾರವಾಡವು ಧುರೀಣತ್ವವನ್ನು ವಹಿಸಿತು . ಕನ್ನಡದ ದಾಸಯ್ಯರಾಗಿ ಇಲ್ಲಿಯ ಲೇಖಕರು ನಾಡಿನ ತುಂಬೆಲ್ಲ ಕನ್ನಡದ ಪ್ರಜ್ಞೆ ಪ್ರವಹಿಸುವಂತೆ ಮಾಡಿದರು.

ಈ ಸಮಯದಲ್ಲಿ ಇಂಗ್ಲೀಷವೋ , ಮರಾಠಿಯೋ , ಬಂಗಾಲಿಯೋ , ಸಂಸ್ಕೃತವೋ - ಯಾವುದೋ ಭಾಷೆಯಿಂದ ಅನುವಾದವೋ , ಅನುಕರಣವೋ ಮಾಡಿ ಅನೇಕರು ಅನೇಕ ಕೃತಿರಚನೆ ಮಾಡಿದರು. " ಕನ್ನಡ ಭಾಷೆಯ ಅಭಿಮಾನವು ಇದೇ ಕಾಲಕ್ಕೆ ನೆಲೆಯೂರಿತು"

ಉತ್ತರ ಕರ್ನಾಟಕ ದಲ್ಲಿಯೂ ಮತ್ತು ಸಮಗ್ರ ಕನ್ನಡನಾಡಿನಲ್ಲಿಯೂ ಅನೇಕ ವಿಧವಾದ ಕನ್ನಡದ ಕೆಲಸ ನಡೆಯಿತು.
ಒಮ್ಮೆ ಪ್ರಾರಂಭವಾದ ಕನ್ನಡದ ಕೆಲಸ ರಭಸದಿಂದ ಮುಂದುವರಿಯಿತು. ಅದು ಅನೇಕ ಮುಖವಾಗಿದ್ದಿತು.

ಕನ್ನಡದಲ್ಲಿ ಬರೆಯಬೇಕೆಂಬ ಲವಲವಿಕೆ ಪ್ರಾರಂಭವಾದ ಕೂಡಲೇ ಸ್ವಾಭಾವಿಕವಾಗಿಯೇ ಅದಕ್ಕೆ ಅಚ್ಚುಕೂಟ ಬೇಕಾಯಿತು. ಈ ದಿಶೆಯಲ್ಲಿ ಅದ್ಭುತವಾದ ಕೆಲಸವನ್ನು ಮಾಡಿದವರು - ವಿದೇಶೀಯರು , ಮಿಶನರಿಗಳು.

ಕರ್ನಾಟಕ ಸಂಗೀತ ಪದ್ಧತಿಯ ಪುನಶ್ಚೇತನದ ಪ್ರಯತ್ನವೂ ನಡೆಯಿತು .

ಪ್ರಸಿದ್ಧ ಸಂಸ್ಕೃತ ಪಂಡಿತರಾಗಿದ್ದ ಗಲಗಲಿ ಕೂರ್ಮಾಚಾರ್ಯರಂಥವರೂ ಸಹ ( ಇವರ ಸ್ನಾನ ಪ್ರಸಿದ್ಧ ) 'ಪ್ರಾಕೃತ'ವೆನಿಸಿಕೊಂಡ ಕನ್ನಡ ಬಾಷೆಯ ಬಗೆಗೆ ಅಭಿಮಾನ ತಾಳಿದರು . ..... ಶ್ರೀ ಮದಾನಂದತೀರ್ಥರು ತಮ್ಮ ಗ್ರಂಥದಲ್ಲಿ ಹೇಳಿದ ಒಂದು ಯುಕ್ತಿಯನ್ನು ಸ್ವಲ್ಪ ಬದಲಿಸಿ ಹೀಗೆ ಹೇಳಿದ್ದಾರೆ :
ವರಂ ಸ್ವಮಾತೃಗಮನಂ , ವರಂ ಗೋಮಾಂಸಭಕ್ಷಣಂ
ವರಂ ಹತ್ಯಾ , ಸುರಾಪಾನಂ , ನಿಜಭಾಷಾವಿನಿಂದನಾತ್ ||
- ಕೊನೆಗೆ ಮಾತೃ ಭಾಷಾ ಭಕ್ತನಾದ ಕೂರ್ಮಾಚಾರ್ಯ ಗಲಗಲಿ ಎಂದು ರುಜು ಹಾಕಿದ್ದಾರೆ .

ಇಲ್ಲಿಗೆ ಈ ಸರಣಿಯು ಮುಕ್ತಾಯವಾಯಿತು. ಈವರೆಗೆ ಬರೆದ ಈ ಎಲ್ಲ ವಿಷಯಗಳು 'ಹೊಸಗನ್ನಡ ಸಾಹಿತ್ಯದ ಉದಯಕಾಲ ( ಉತ್ತರ ಕರ್ನಾಟಕವನ್ನು ಅನುಲಕ್ಷಿಸಿ ) ' ಎಂಬ ಪುಸ್ತಕದಿಂದ ಆರಿಸಿದ ಕೆಲವು ಕುತೂಹಲಕರ ಭಾಗಗಳು . ಬರೆದವರು ರಾ.ಯ.ಧಾರವಾಡಕರ ಅವರು .ಇದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಪ್ರಕಟಿತ . ಸುಮಾರು ೭೦೦ ಪುಟಗಳಷ್ಟಿದೆ.

ಈ ಎಲ್ಲವನ್ನು ಓದಿದ ನಿಮಗೆ ಧನ್ಯವಾದಗಳು .

Rating
No votes yet