ಪ್ರಗತಿಯ ಇನ್ನೊಂದು ಹೆಸರು ಹಿಂಸೆ?

ಪ್ರಗತಿಯ ಇನ್ನೊಂದು ಹೆಸರು ಹಿಂಸೆ?

ಪ್ರಗತಿಯ ಇನ್ನೊಂದು ಹೆಸರು ಹಿಂಸೆ?

ಉತ್ತರ ಪ್ರದೇಶದಲ್ಲಿ ಮತ್ತೆ ಹಿಂಸೆ ತಾಂಡವವಾಡಿದೆ. ಈ ಬಾರಿ ರಾಜ್ಯದ ಮೂರು ಮುಖ್ಯ ಕೇಂದ್ರಗಳ ನ್ಯಾಯಾಯಲಯಗಳ ಆವರಣಗಳಲ್ಲಿಯೇ ಉಗ್ರರು ತಮ್ಮ ಪ್ರತಾಪ ಮೆರಿದಿದ್ದಾರೆ. ಲಕ್ನೊ, ವಾರಾಣಾಸಿ ಹಾಗೂ ಫೈಜಲಾಬಾದ್ ನಗರಗಳಲ್ಲಿ ಸರಿ ಸುಮಾರು ಒಂದೇ ವೇಳೆಗೆ ಸಂಭವಿಸಿದ ಸೈಕಲ್ ಬಾಂಬ್ ಸ್ಫೋಟಗಳಲ್ಲಿ 15 ಜನ ಸತ್ತಿದ್ದಾರೆ. ನೂರಾರು ಜನ ಗಾಯಗೊಂಡಿದ್ದಾರೆ. ಎಂದಿನಂತೆ ವಿಚಾರಣೆ ಆರಂಭವಾಗಿದೆ. ಶಂಕಿತರ ಅಂದಾಜು ಚಿತ್ರಗಳನ್ನು ಬಿಡುಗಡೆ ಮಾಡಲಾಗಿದೆ. ಕೇಂದ್ರ ಗೃಹ ಮಂತ್ರಿ ಎಂದಿನ ಶೈಲಿಯಲ್ಲಿ ಉಗ್ರರನ್ನು ಮಟ್ಟ ಹಾಕುವ ಮಾತುಗಳನ್ನು ಪುನರುಚ್ಛರಿಸಿದ್ದಾರೆ. ಮತ್ತೆ ಎಂದಿನಂತೆ ಗುಪ್ತಚರ ವಿಭಾಗದ ವೈಫಲ್ಯದ ಮಾತುಗಳನ್ನಾಡಲಾಗುತ್ತಿದೆ. ಮತ್ತೂ ಎಂದಿನಂತೆ, ಮೂರೂ ನಗರಗಳು ಸಾಮಾನ್ಯ ಸ್ಥಿತಿಗೆ ಮರಳಿ ಜನಜೀವನ ಎಂದಿನಂತೆ ಸಾಗಿದೆ!

ಮತ್ತೆ ಎಲ್ಲವೂ ಮರೆತು ಹೋಗುತ್ತದೆ - ಮತ್ತೊಂದು ಸ್ಫೋಟ ಸಂಭವಿಸುವವರೆಗೆ. ಆಧುನಿಕ ಬದುಕು ಹಿಂಸೆಯನ್ನು ತನ್ನ ಅನಿವಾರ್ಯ ಹಾಗೂ ಅವಿಭಾಜ್ಯ ಅಂಗವೆಂದು ಒಪ್ಪಿಕೊಂಡಂತೆ ತೋರುತ್ತಿದೆ. ರಾಷ್ಟ್ರ ಈ ಹಿಂಸೆಯನ್ನು ಹೆಚ್ಚೆಚ್ಚು ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕವೇ ಎದುರಿಸುವ ತೀರ್ಮಾನಕ್ಕೆ ಬಂದಂತಿದೆ. ಏಕೆಂದರೆ, ಈ ಇತ್ತೀಚಿನ ಸ್ಫೋಟಗಳ ಬಗೆಗೆ ನಮ್ಮ ಆಡಳಿತ, ಪೋಲೀಸು ಹಾಗೂ ಮಾಧ್ಯಮದವರು ಚರ್ಚಿಸುತ್ತಿರುವ ರೀತಿ ನೋಡಿ. ಈ ಸ್ಫೋಟದ ಹಿಂದಿನ ಉದ್ದೇಶವೇನು? ಅವರ ಗುರಿ ನ್ಯಾಯಾಯಲಯಗಳೇ ಏಕಾಗಿತ್ತು? ಕಳೆದ ವಾರ ಸಿಕ್ಕಿಹಾಕಿಕೊಂಡ ಇಬ್ಬರು ಉಗ್ರಗಾಮಿಗಳನ್ನು ವಕೀಲರು ಥಳಿಸಿದ್ದೇ ಇದಕ್ಕೆ ಕಾರಣವೇ? ಇಂತಹ ಪುಡಿ ಪ್ರಶ್ನೆಗಳ ಮೂಲಕ ಇವರು ಈ ಹಿಂಸಾಚಾರವನ್ನು ಅರ್ಥ ಮಾಡಿಕೊಳ್ಳಲು ಹೊರಟಿದ್ದಾರೆ. ಆದರೆ ಕಳೆದ 20 ವರ್ಷಗಳಲ್ಲಿ ಭಾರತದಾದ್ಯಂತ ನಿರಂತರವಾಗಿ - ವಿಶೇಷವಾಗಿ ಮುಸ್ಲಿಮರು ಅಧೀಕ ಸಂಖ್ಯೆಯಲ್ಲಿರುವ ಉತ್ತರ ಪ್ರದೇಶದಲ್ಲಿ ಪದೇ ಪದೇ ಸಂಭವಿಸುತ್ತಿರುವ - ಈ ಆಸ್ಫೋಟಗಳ ಹಿಂದಿನ ಮೂಲ ಕಾರಣವೇನು ಎಂಬುದರ ವಿಶ್ಲೇಷಣೆಯ ಗೋಜಿಗೇ ಹೋಗದೆ, ಪ್ರತಿ ಆಸ್ಫೊಟನೆಯ ಹಿಂದಿನ ತಂತ್ರಜ್ಞಾನವನ್ನು ಅರಿಯುವ ಪ್ರಯತ್ನ ಮಾಡುತ್ತಾ: ಆ ಪ್ರಯತ್ನ ಪೂರ್ಣಗೊಳ್ಳುವ ಮುನ್ನವೇ, ಅದಕ್ಕೂ ಮುಂದುವರೆದ ತಂತ್ರಜ್ಞಾನವನ್ನಾಧರಿಸಿದ ಇನ್ನೊಂದು ಸ್ಫೋಟವನ್ನು ಎದುರಿಸುವ ಅಸಹಾಯಕತೆಯಲ್ಲಿ ರಾಷ್ಟ್ರ ಸಿಕ್ಕಿ ಹಾಕಿಕೊಂಡಿದೆ.

ಕಳೆದೆರಡು ವರ್ಷಗಳ ಹಿಂದೆ ಮುಂಬೈನ ರೈಲುಗಳಲ್ಲ್ಲಿ ಸಂಭವಿಸಿದ ಭಯಂಕರ ಬಾಂಬ್ ಸ್ಫೋಟದ ಸುಳಿವು ಇನ್ನೂ ಸಿಕ್ಕಿಲ್ಲ. ಹೀಗೇ ಅದೆಷ್ಟೋ ಉಗ್ರರ ಹಿಂಸಾಚಾರ ಪ್ರಕರಣಗಳು ತನಿಖೆಗೆ ಸಿಗದೆ ಮರೆತೇ ಹೋಗಿವೆ. ಪ್ರತಿ ಬಾರಿಯೂ ಗುಪ್ರಚರ ವಿಭಾಗದ ವೈಫಲ್ಯವನ್ನೋ, ಗುಪ್ತಚರ ವಿಭಾಗದ ಮಾಹಿತಿಯನ್ನು ಸ್ಥಳೀಯ ಆಡಳಿತ ನಿರ್ಲಕ್ಷಿಸಿದ್ದನ್ನೋ ಸಂಬಂಧಿಸಿದ ಸರ್ಕಾರಗಳು ತಮ್ಮ ರಕ್ಷಣೆಗೆ ತಕ್ಷಣದ ನೆಪಗಳನ್ನಾಗಿ ಬಳಿಸಿಕೊಳ್ಳುತ್ತಿದೆ. ಉದಾಹರಣೆಗೆ ಇತ್ತೀಚಿನ ಸ್ಫೋಟಗಳ ಬಗ್ಗೆ ಉತ್ತರ ಪ್ರದೇಶದ ಮುಖ್ಯ ಮಂತ್ರಿ ಮಾಯಾವತಿ ಹೇಳಿದ್ದನ್ನು ನೋಡಿ. ಇದು ಕೇಂದ್ರ ಗುಪ್ತಚರ ದಳದ ವೈಫಲ್ಯವಂತೆ. ಆಯಿತು. ಆದರೆ ಇವರ ರಾಜ್ಯ ಗುಪ್ತಚರ ದಳ ಏನು ಮಾಡುತ್ತಿತ್ತು? ನಮ್ಮ ಎಲ್ಲ ಸಂಸ್ಥೆಗಳೂ ತಮ್ಮ ವೃತ್ತಿಪರತೆಯನ್ನು ಕಳೆದು ಕೊಂಡಿವೆ. ಬಡ್ತಿ, ಮೀಸಲಾತಿ, ಸಂಬಳ - ಸಾರಿಗೆ, ನಿರ್ದಿಷ್ಟ ಸ್ಥಳ ಅಥವಾ ಸ್ಥಾನಗಳಿಗೆ ವರ್ಗಾವಣೆ, ಮೇಲಧಿಕಾರಿಗಳ ಓಲೈಕೆ, ಸೋದರ ಇಲಾಖೆಗಳೊಡನೆ ಪ್ರಚಾರಕ್ಕಾಗಿ ಪೈಪೋಟಿ ಇತ್ಯಾದಿಗಳಲ್ಲೇ ಅವು ಮುಳುಗಿ ಹೋಗಿ, ತಮ್ಮ ಮೂಲ ಕರ್ತವ್ಯಗಳನ್ನೇ ಅವು ಮರೆತಿವೆ. ಇದು ನಮ್ಮ ಸೇನೆಯಿಂದ ಹಿಡಿದು ಗ್ರಾಮಾಂತರ ಪೋಲೀಸ್ ಠಾಣೆಯವರೆಗೆ ಹಬ್ಬಿರುವ ರೋಗ.

ಹಿಂದೆ ಒಮ್ಮೆ ನಾನು ಪೋಲೀಸ್ ವರಿಷ್ಠಾಧಿಕಾರಿಯೊಬ್ಬರನ್ನು ಆಕಾಶವಾಣಿಗಾಗಿ ಮಾತನಾಡಿಸಿದಾಗ, ಅವರು ನಮ್ಮ ಪೋಲೀಸ್ ವ್ಯವಸ್ಥೆಯ ಮುಖ್ಯ ದೌರ್ಬಲ್ಯವೆಂದರೆ, ಅದನ್ನು ವಸಾಹತುಶಾಹಿ ಮಾನಸಿಕತೆಯಲ್ಲೇ ಪೇದೆ ಕೇಂದ್ರಿತವಾಗಿ ಮುಂದುವರೆಸಿಕೊಂಡು ಬಂದಿರುವುದೇ ಆಗಿದೆ ಎಂದಿದ್ದರು. ಅಂದರೆ ನಮ್ಮ ಇಡೀ ಪೋಲೀಸ್ ವ್ಯವಸ್ಥೆ ಮುಖ್ಯವಾಗಿ ದೈಹಿಕ ಬಲದ ಮೇಲೇ ನಿಂತಿದೆ. ಬೇರೆ ದೇಶಗಳಲ್ಲಿ ಅದು ಅಧಿಕಾರಿ ಕೇಂದ್ರಿತ. ಅಂದರೆ ಅಲ್ಲಿ, ಕೌಶಲ್ಯ, ಬುದ್ಧಿಮತ್ತೆ, ಸಾರ್ವಜನಿಕ ಸಂಪರ್ಕ ಪ್ರತಿಭೆಗೆ ಪ್ರಾಧಾನ್ಯ. ನಮ್ಮ ಪೇದೆಗಳ ಆಯ್ಕೆಯೇ ಈಗ ಹೆಚ್ಚಾಗಿ ಹಣ ಹಾಗೂ ಪ್ರಭಾವದ ಮೇಲೇ ನಡೆಯುವುದು. ಅವರನ್ನು ಮಾನವ ಸಂಪನ್ಮೂಲಗಳನ್ನಾಗಿ ಬೆಳಸುವಂತಹ ತರಬೇತಿಗಳು ಇಲ್ಲವೇ ಇಲ್ಲ. ಅವರನ್ನು ಪಶು ಬಲವನ್ನಾಗಿ ಬೆಳೆಸುವುದಷ್ಟೇ ಮೇಲಿನ ಅಧಿಕಾರಿಗಳಿಗೆ ಹಾಗೂ ಆಡಳಿತಗಾರರಿಗೆ ಬೇಕಾಗಿದ್ದು, ತಮ್ಮ ಸಮಸ್ಯೆಗಳಿಗೆಲ್ಲ ಅವರನ್ನು ಆ ಸ್ಥಿತಿಯಲ್ಲಿ ಬಳಸಿ ಕ್ಷಿಪ್ರ ಪರಿಹಾರ ಕಂಡುಕೊಳ್ಳುವ ಸುಲಭ ದಾರಿಯನ್ನು ಅವರು ಕಂಡುಕೊಂಡಿದ್ದಾರೆ. ಹೀಗಾಗಿ ಜನ ಸಾಮಾನ್ಯರ ಕಣ್ಣಲ್ಲಿ ಪೋಲೀಸರೆಂದರೆ ಅನುಮಾನಾಸ್ಪದ ವ್ಯಕಿತ್ವಗಳಾಗಿ ತಮ್ಮ ಘನತೆ ಕಳೆದು ಕೊಂಡಿದ್ದಾರೆ. ಇದರ ಮಧ್ಯೆಯೇ, ಅವರೂ ಜನರನ್ನು ಕಾಯುತ್ತಾ, ಕಾಡುತ್ತಾ, ಅಷ್ಟೂ ಇಷ್ಟೂ ಹಣ ಮಾಡಿಕೊಂಡು ಮೇಲಿಂದ ಕೆಳಗಿನವರೆಗೆ ಹಂಚಿಕೊಳ್ಳುತ್ತಾ ಕಾಲ ದೂಡುತ್ತಿದ್ದಾರೆ.

ಹೀಗೆ ದದ್ದು ಬಿದ್ದು ಹೋದ ಪೇದೆಗಳನ್ನಾಧರಿಸಿದ ವ್ಯವಸ್ಥೆಯಿಂದ ಯಾವ ಸೂಕ್ಷ್ಮ, ನಿಸ್ಪೃಹ, ಕೌಶಲ್ಯಪೂರ್ಣ ಕೆಲಸ ಸಾಧ್ಯ? ನಮ್ಮ ಗುಪ್ತಚರ ವ್ಯವಸ್ಥೆಯ ಕಾಲಾಳುಗಳೂ ಇವರೇ. ಯಾವುದೇ ಸುಸಂಗತ ರಾಜಕೀಯ ಪರಿಜ್ಞಾನವೇ ಇಲ್ಲದ ಇವರು ಕೊಡುವ ಪ್ರಾಥಮಿಕ ಮಾಹಿತಿಯನ್ನು ಆಧರಿಸಿಯೇ ಗುಪ್ತಚರ ಇಲಾಖೆಯ ಮೇಲಿನ ಹಂತ ಕ್ರಿಯಾಶೀಲವಾಗುವುದು ಎಂದರೆ, ಈ ರಾಷ್ಟ್ರ ಇನ್ನೂ ಇಷ್ಟು ನೆಮ್ಮದಿಯಿಂದಿರುವುದನ್ನು ಪವಾಡವೆಂದೇ ಭಾವಿಸ ಬೇಕಾಗುತ್ತದೆ! ಈಚೆಗೆ ತೀರ್ಪು ಪ್ರಕಟವಾದ ಮುಂಬೈ ಸರಣಿ ಸ್ಫೋಟ ಪ್ರಕರಣದಲ್ಲಿ ಅಪರಾಧಿಗಳೆಂದು (ಆರ್ಡಿಎಕ್ಸ್ ಸಾಗಿಸಿಕೊಡುವುದರಲ್ಲಿ ನೆರವಾಗಿದ್ದಾಕ್ಕಾಗಿ) ಸಾಬೀತಾದವರಲ್ಲಿ ಪೋಲೀಸರೂ ಸೇರಿದ್ದರು ಎಂದರೆ ಏನು ಹೇಳುವುದು? ರಾಜಸ್ಥಾನದ ಉನ್ನತ ಪೋಲೀಸ್ ಅಧಿಕಾರಿ ಮೊಹಂತಿ, ವಿದೇಶಿ ಮಹಿಳೆಯೊಬ್ಬಳ ಮೇಲೆ ಅತ್ಯಾಚಾರವೆಸಗಿದ ಆಪಾದನೆ ಎದುರಿಸುತ್ತಿದ್ದ ತನ್ನ ಮಗನನ್ನು ವಿಚಾರಣೆಗೆ ಮುನ್ನವೇ ನಕಲಿ ಪಾಸ್ ಪೋರ್ಟ್ ಮೇಲೆ ವಿದೇಶಕ್ಕೆ ಸಾಗಿಸಿದ್ದಾನೆ ಎಂದರೆ? ಇದಾದ ಮೇಲೂ ಆತ ತನ್ನ ಸ್ಥಾನದಲ್ಲಿ ಮುಂದುವರೆಯಲು ಸಾಧ್ಯ ಎಂದರೆ? ಸಾರ್ವಜನಿಕ ಒತ್ತಡ ಹೆಚ್ಚಿ ಬಂಧನದ 'ಸಿದ್ಧತೆ' ಆರಂಭವಾಗುತ್ತಿದ್ದಂತೆ ಆತನೇ ನಾಪತ್ತೆಯಾಗಿದ್ದಾನೆ ಎಂದರೆ? ಅಪರಾಧಿ ಮಗನನ್ನು ಅಪ್ಪ ರಕ್ಷಿಸಿದರೆ, ಅಪ್ಪನನ್ನು ಸ‌ರ್ಕಾರ ರಕ್ಷಿಸುತ್ತದೆ. ಇದೊಂದು ಸಣ್ಣ ಉದಾಹರಣೆಯಷ್ಟೆ. ಕೊಲೆ ಆಪಾದಿತರಿಂದ ಅಪಾರ ಹಣವನ್ನೋ, ಆಸ್ತಿಯನ್ನೋ ಪಡೆದು ಕೊಲೆಗಳನ್ನೇ ಮುಚ್ಚಿಹಾಕಿರುವ ಪೋಲೀಸರೆಷ್ಟಿಲ್ಲ ನಮ್ಮಲ್ಲಿ? ಬುಡದಿಂದ ತುದಿವರೆಗೂ ರೋಗ ಹಬ್ಬಿಸಿಕೊಂಡಿರುವ ಇಲಾಖೆ ಹೇಗೆ ತನ್ನ ವೃತ್ತಿಶೀಲತೆಯನ್ನು ಕಾಪಾಡಿಕೊಳ್ಳಲು ಸಾಧ್ಯ? ಹೇಗೆ ದೇಶದ ಆಂತರಿಕ ಭದ್ರತೆಯನ್ನು ಕಾಪಾಡಲು ಸಾಧ್ಯ? ಈ ಪ್ರಶ್ನೆಯೇಕೆ ನಮ್ಮನ್ನು ಕಾಡುತ್ತಿಲ್ಲ?

ಈ ಬಿಕ್ಕಟ್ಟನ್ನು ಬಹುಮುನ್ನವೇ ಮನಗಂಡಿದ್ದ ದೂರದೃಷ್ಟಿಯ ಆಡಳಿತಗಾರ ಧರ್ಮವೀರ ಪೋಲೀಸ್ ವ್ಯವಸ್ಥೆಯ ಸುಧಾರಣೆಗಾಗಿ ಒಂದು ಸಮಗ್ರ ವರದಿಯನ್ನೇ ಸಿದ್ಧಪಡಿಸಿಕೊಟ್ಟಿದ್ದರು. ಮೂರು ದಶಕಗಳ ನಂತರವೂ ಅದು ಇನ್ನೂ ವಿವಿಧ ಹಂತಗಳ ಅಧ್ಯಯನ, ಪರಿಶೀಲನೆಗಳಲ್ಲೇ ಧೂಳು ತಿನ್ನುತ್ತಾ ಕೂತಿದೆ. ಇದು ನಮ್ಮ ಗೃಹಾಡಳಿತ. ಇಂತಹ ಅಸೂಕ್ಷ್ಮ ಆಂತರಿಕ ಆಡಳಿತ ವ್ಯವಸ್ಥೆ ವರ್ಷಾನುಗಟ್ಟಲೆ ಮುಂದುವರೆದಿರುವಾಗ, ಅಳಿದುಳಿದಿರುವ ಕೆಲವೇ ನಿಸ್ಪೃಹ ಹಾಗೂ ದಕ್ಷ ಪೋಲೀಸರಾದರೂ ಏನು ಮಾಡಿಯಾರು? ಯಾರಿಗೆ, ಯಾವುದಕ್ಕೆ, ಎಲ್ಲಿ ಎಷ್ಟು, ಎಂತಹ ಭದ್ರತೆ ಒದಗಿಸಿಯಾರು? ಸ್ಥಳ ಹಾಗೂ ಕಾಲಗಳ ಯಾವುದೇ ನಿರೀಕ್ಷೆಗೂ ಸಿಗದೆ ಸಂಭವಿಸುತ್ತಿರುವ ವಿವಿಧ ರೀತಿಯ ಹಿಂಸಾಚಾರಗಳನ್ನು, ಸ್ಫೋಟಗಳನ್ನು ಭದ್ರತೆಯ ಕ್ರಮಗಳ ಮೂಲಕ ಎದುರಿಸಲು ಸಾಧ್ಯವೇ? ಇಡೀ ದೇಶವನ್ನೇ ಭದ್ರತಾ ಕೋಟೆಯನ್ನಾಗಿ ಪರಿವರ್ತಿಸಲು ಸಾಧ್ಯವೇ? ಹಿಂಸೆಯ ತಂತ್ರಜ್ಞಾನ ಭದ್ರತೆಯ ತಂತ್ರಜ್ಞಾನಕ್ಕಿಂತ ಯಾವಾಗಲೂ ಒಂದು ಹೆಜ್ಜೆ ಮುಂದಿರುತ್ತದೆ ಎಂಬುದು ಪದೇ ಪದೇ ಸಾಬೀತಾಗುತ್ತಿದ್ದರೂ ಭಯೋತ್ಪದಾನೆಯನ್ನು ಎದುರಿಸಲು ನಾವೇಕೆ ಇದೇ ದಾರಿಯಲ್ಲಿ ಮುಂದುವರೆಯುತ್ತಿದ್ದೇವೆ?

ನಾವು ಉತ್ತರಿಸಕೊಳ್ಳಬೇಕಾದ ಮೊದಲ ಪ್ರಶ್ನೆ: ಭಾರತವೇಕೆ ಹೀಗೆ ಈ ಉಗ್ರರ ಹಿಂಸೆಗೆ ಸಿಕ್ಕಿದೆ? ಇದರ ಬೀಜ ಭಾರತದ ವಿಭಜನೆಗೆ ಕಾರಣವಾದ ದುಷ್ಟ ರಾಜಕೀಯದಲ್ಲೇ ಇದ್ದು, ಈಚೆಗೆ ಸರಿಯಾದ ಸಂದರ್ಭ ಒದಗಿ ಬಂದು ಒಂದು ದೊಡ್ಡ ವಿಷವೃಕ್ಷವಾಗಿ ಬೆಳೆದಿದೆಯಷ್ಟೆ ಎಂಬುದನ್ನು ನಾವು ಮೊದಲು ಅರಿಯಬೇಕು. ಷೇಕ್ ಅಬ್ದುಲ್ಲಾರ ನೆರವಿನಿಂದ ಕಾಶ್ಮೀರದ ಸಮಸ್ಯೆಯನ್ನೂ ಒಂದು ತಹಬಂದಿಗೆ ತರಲಾಗಿತ್ತಾದರೂ, 70ರ ದಶಕದಲ್ಲಿ ಇಂದಿರಾ ಗಾಂಧಿಯವರ ಮಹಾತ್ವಾಕಾಂಕ್ಷೆಯ ರಾಜಕಾರಣದಿಂದಾಗಿ ಅಲ್ಲಿನ ಸ್ಥಳೀಯ ರಾಜಕಾರಣದಲ್ಲಿ ಕಾಂಗ್ರೆಸ್ ಮೂಗು ತೂರಿಸಲು ಹೋಗಿ ಜನರನ್ನು ಸಿಟ್ಟಿಗೆಬ್ಬಿಸಿದ್ದೇ ಕಾಶ್ಮೀರ ಸಮಸ್ಯೆ ಭುಗಿಲೇಳಲು ಕಾರಣವಾಯಿತು. ನಂತರ ನಡೆದ ಬಹುತೇಕ ಚುನಾವಣೆಗಳು ಮೋಸದಿಂದ ಕೂಡಿ, ಕಾಶ್ಮೀರದ ಜನತೆಗೆ ಭಾರತದ ಪ್ರಜಾಪ್ರಭುತ್ವದ ಬಗೆಗಿನ ನಂಬಿಕೆಯೇ ಕಳೆದುಹೋಗಿ ಅಶಾಂತಿ ಆರಂಭವಾಯಿತು. ಅದನ್ನು ಗಡಿಯಾಚೆಯ ತಂಟೆಕೋರರೂ, ಜಾಗತಿಕ ಮುಸ್ಲಿಂ ಮೂಲಭೂತವಾದಿ ಉಗ್ರರೂ ಬಳಸಿಕೊಳ್ಳುತ್ತಾ ಬಂದು, ಇಂದು ಈ ಆಸ್ಫೋಟನಾಕಾರಿ ಸ್ಥಿತಿ ಮುಟ್ಟಿದೆ.

ಈಶಾನ್ಯ ರಾಜ್ಯಗಳಲ್ಲಿ ನಿರಂತರವಾಗಿ ನಡೆಯುತ್ತಿರುವ ಹಿಂಸಾಚಾರಕ್ಕೂ ಭಾರತದ ಈ ಕೇಂದ್ರೀಕೃತ ರಾಜಕಾರಣದ ಕೆಟ್ಟ ವರಸೆಯೇ ಕಾರಣವಾಗಿದೆ. ಉತ್ತರ ಪ್ರದೇಶದಲ್ಲಿ ಸ್ಫೋಟ ಸಂಭವಿಸಿದ ದಿನವೇ ಗೌಹಾತಿಯಲ್ಲಿ ಆದಿವಾಸಿ ಹಾಗೂ ನಗರವಾಸಿಗಳ ನಡುವೆ ನಡೆದ ನಡೆದ ಹಿಂಸಾಚಾರವನ್ನೇ ಗಮನಿಸಿ. ಅತ್ಯಂತ ಬರ್ಬರ ರೀತಿಯ ಹಿಂಸಾಚಾರವದು. ಆದಿವಾಸಿಗಳು ತಮ್ಮ ಮೂಲ ಆಯುಧಗಳೊಡನೆ ನಗರವಾಸಿಗಳ ಮನೆಗಳಿಗೆ ನುಗ್ಗಿ ಲೂಟಿ, ಕೊಲೆ, ಅತ್ಯಾಚಾರಗಳನ್ನು ನಡೆಸಿದ್ದರೆ, ನಗರವಾಸಿಗಳು ಬೀದಿಗಳಲ್ಲೇ ಆದಿವಾಸಿಗಳನ್ನು ಸಿಕ್ಕ ಸಿಕ್ಕ ಆಯುಧಗಳಿಂದ ಹೊಡೆದು ಸಾಯಿಸಿದರು. ಹತ್ತಾರು ಹೆಣಗರುಳಿದವು. ಯಾರು ಹೇಳಿದರು, ನಮ್ಮ ಆದಿವಾಸಿಗಳು ಇನ್ನೂ ಮುಗ್ಧರೆಂದು? ಯಾರು ಹೇಳಿದರು ನಮ್ಮ ನಗರವಾಸಿಗಳು ಸುಸಂಸ್ಕೃತರೆಂದು? ನಾವು ಈವರೆಗೆ ನಮ್ಮ ರಾಜಕಾರಣವನ್ನು ಹೇಗೆ ಕಟ್ಟಿಕೊಂಡು ಬಂದಿದ್ದೇವೆಂದರೆ, ಅದು ಹುಟ್ಟಿಸುವ 'ಅಭಿವೃದ್ಧಿ'ಯ ಹಪಾಹಪಿ ಎಲ್ಲರ ಎಲ್ಲ ರೀತಿಯ ಮುಗ್ಧತೆಗಳನ್ನೂ, ಸಂಸ್ಕೃತಿಗಳನ್ನೂ ನಾಶ ಮಾಡಿಬಿಟ್ಟಿದೆ ಹಾಗೂ ಎಲ್ಲರ ಮೂಲ ಅಸ್ಮಿತೆಗಳೂ, ಬೇರುಗಳೂ ಕಳಚಿಕೊಳ್ಳತೊಡಗಿ, ಇಡೀ ಜನಸ್ತೋಮವೇ ಅಸ್ತಿತ್ವದ ಅಭದ್ರತೆಯ ರೋಗಕ್ಕೆ ತುತ್ತಾಗತೊಡಗಿದೆ. ಪ್ರಗತಿಗೆ ಇನ್ನೊಂದು ಹೆಸರು ಹಿಂಸೆ ಎಂಬಂತಾಗಿದೆ!

ಹೀಗಾಗಿಯೇ ಇಂದು ಬಂಗಾಳದ ಮಾರ್ಕ್ಸ್ ವಾದಿ ಸರ್ಕಾರವೂ ತಸ್ಲೀಮಾಳನ್ನು ರಕ್ಷಿಸಿಟ್ಟುಕೊಳ್ಳಲು ಸಾಧ್ಯವಾಗದಾಗಿದೆ. ಆ ಹೆಂಗಸು ಕೊಲ್ಕೊತ್ತಾದಿಂದ ಹೊರಟು, ದೇಶವೆಲ್ಲಾ ಅಲೆದು ಈಗ ತಾತ್ಕಾಲಿಕವಾಗಿ ದೆಹಲಿಯಲ್ಲಿ ನೆಲಸುವಂತಾಗಿದೆ. ಬಂಗಾಳದಲ್ಲಿ ಎಂದೂ ಕಾಣದ ಮುಸ್ಲಿಂ ಮೂಲಭೂತವಾದಿಗಳ ಅಬ್ಬರ ಇಂದು ಕಾಣತೊಡಗಿದೆ. ಅದಕ್ಕೆ ಬುದ್ಧದೇವ ಭಟ್ಟಾಚಾರ್ಜಿ ಹೆದರಿಹೋಗಿದ್ದಾರೆ! ಅವರಿಗೀಗ ಅಲ್ಪಸಂಖ್ಯಾತರ ಮತ ಕಳೆದುಕೊಳ್ಳು ಭಯ. ಇಲ್ಲದಿದ್ದರೆ ನಂದಿಗ್ರಾಮದಲ್ಲಿ ರೈತರ ಹೋರಾಟವನ್ನು ಅಡಗಿಸಲು ಯತ್ನಿಸಿದ ಇವರಿಗೆ ಈ ಮುಸ್ಲಿಂ ರಾಕ್ಷಸರ ಅಟ್ಟಹಾಸವನ್ನು ಅಡಗಿಸಲು ಕಷ್ಟವಾಗುತ್ತಿತ್ತೇ? ಇಡೀ ಭಾರತವೀಗ, ಕಳೆದ ಐವ್ವತ್ತು ವರ್ಷಗಳಿಂದ ತಾನು ಆಚರಿಸಿಕೊಂಡು ಬಂದ 'ವೈಜ್ಞಾನಿಕ' ಸೆಕ್ಯುಲರಿಸಂನ ಪಾಪದ ಫಲವನ್ನು ಉಣ್ಣತೊಡಗಿದೆ. ಇಂತಹ ಜನದೂರವಾದ ಸೆಕ್ಯುಲರ್ ಪರಂಪರೆಯನ್ನು ಪ್ರತಿಪಾದಿಸಿಕೊಂಡು ಬಂದ ರಾಷ್ಟ್ರ ಇಂದು ಹಿಂದೂ ಕೋಮುವಾದಿಗಳ ಕೆಲವು ಸರಳ ಪ್ರಶ್ನೆಗಳಿಗೆ ಉತ್ತರ ಕೊಡಲು ಸಾಧ್ಯವಾಗದ ಸ್ಥಿತಿ ಮುಟ್ಟಿರುವುದು ಸಹಜವೇ ಆಗಿದೆ. ಅದಕ್ಕಿಂತ ಮುಖ್ಯವಾಗಿ, ವಿದೇಶಿ ಉಗ್ರಗಾಮಿಗಳ ಬೆಂಬಲದೊಂದಿಗೆ ರಾಕ್ಷಸ ರೂಪ ತಾಳುತ್ತಿರುವ ದೇಶೀ ಮುಸ್ಲಿಂ ಇಸ್ಲಾಂ ಪುರೋಹಿತಶಾಹಿಯ ಅಟ್ಟಹಾಸವನ್ನು ಅಡಗಿಸುವ ದಾರಿಯೇ ತೋಚದಾಗಿದೆ. ಭಾರತ ಎಂದೂ ಇಷ್ಟು, ಹೀಗೆ ಅತಂತ್ರವಾಗಿರಲಿಲ್ಲ.

ಇಸ್ಲಾಂ - ಬಹುಶಃ ಅದರ ಸೂಫಿ ಆವೃತ್ತಿಯ ಹೊರತಾಗಿ - ಎಂದೂ ಅಹಿಂಸೆಯನ್ನು, ಪ್ರಜಾಪ್ರಭುತ್ವ ಪದ್ಧತಿಯನ್ನು ಮನುಷ್ಯ ನಾಗರೀಕತೆಯ ಪರಮ ಮೌಲ್ಯಗಳಾಗಿ ಒಪ್ಪಿಕೊಂಡಂತಿಲ್ಲ. ಹಾಗಾಗಿಯೇ ಇಂದು ಜಗತ್ತಿನ ಬಹುತೇಕ ಮುಸ್ಲಿಂ ರಾಷ್ಟ್ರಗಳು ರಾಜ ಪ್ರಭುತ್ವ ಅಥವಾ ಸರ್ವಧಿಕಾರಿಗಳ ಕೈಕೆಳಗೇ ಇವೆ. ಪ್ರಜಾಪ್ರಭುತ್ವದ ಹೆಸರು ಹೇಳಿಕೊಳ್ಳಬಲ್ಲ ತುರ್ಕಿ, ಮಲೇಷಿಯಾ ಹಾಗೂ ಇಂಡೋನೇಷ್ಯಾದಂತಹ ಎರಡು ಮೂರು ರಾಷ್ಟ್ರಗಳೂ ಇಂದು ಮುಸ್ಲಿಂ ಉಗ್ರರ ಹಿಂಸಾಚಾರವನ್ನು ಎದುರಿಸುತ್ತಲೇ ಇವೆ. ಗಾಂಧಿ ನೇತೃತ್ವದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಪರಂಪರೆಯುಳ್ಳ ಪಾಕಿಸ್ಥಾನ (ಹಾಗೂ ಬಂಗ್ಲಾ ದೇಶ) ಕಳೆದ ಐವ್ವತ್ತು ವರ್ಷಗಳಲ್ಲಿ ಪ್ರಜಾಪ್ರಭುತ್ವದ ಅನೇಕ ಪ್ರಯೋಗಗಳನ್ನು ನಡೆಸಿ ಮತ್ತೆ ಮತ್ತೆ ಸೋತಿವೆ. ಇಂದೂ ಅಂತಹ ಮತ್ತೊಂದು ಪ್ರಯೋಗಕ್ಕೆ ಸಿದ್ಧವಾಗುತ್ತಿದ್ದಂತೆ ದೊಡ್ಡ ಬಿಕ್ಕಟ್ಟಿಗೆ ಸಿಕ್ಕಿವೆ. ಈ ಎರಡು ದೇಶಗಳ ಮೂಲಭೂತವಾದಿ ಸಂಘಟನೆಗಳೇ ಇಂದು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೂ ನಮ್ಮ ಸೆಕ್ಯುಲರ್ ನಂಬಿಕೆಯನ್ನೂ ಹಾಳುಗೆಡಹಲು ಪ್ರಯತ್ನಿಸುತ್ತಿರುವುದು. ಇದಕ್ಕೆ ಬಹುಶಃ ಮೂಲ ಕಾರಣ, ಇಸ್ಲಾಂ 'ರಾಷ್ಟ್ರ ಪ್ರಭುತ್ವ' (Nation State) ಎಂಬ ಆಧುನಿಕ ರಾಜಕೀಯ ಪರಿಕಲ್ಪನೆಯನ್ನು ಒಪ್ಪದಿರುವುದು. ಅದು ತನ್ನನ್ನೇ 'ಜಮಾತ್' ಎಂಬ ಪರಿಕಲ್ಪನೆಯಡಿ ಒಂದು ರಾಷ್ಟ್ರ ಎಂದು ಕರೆದುಕೊಳ್ಳಬಯಸುತ್ತದೆ. ಅಂದರೆ, ಜಾಗತಿಕವಾಗಿ ಮುಸ್ಲಿಮರದ್ದೇ ಒಂದು 'ರಾಷ್ಟ್ರ'ವಿದೆ. ಅವರ ಮೂಲ ಬದ್ಧತೆ ಅದರ ಸಂವಿಧಾನಕ್ಕೆ - ಷರಿಯತ್‌ಗೆ. ಹಾಗಾಗಿಯೇ SIMI(ಭಾರತದ ಮುಸ್ಲಿಂ ವಿದ್ಯಾರ್ಥಿ ಆಂದೋಲನ) 'ನಮ್ಮ ರಾಷ್ಟ್ರ ಭಾರತವಲ್ಲ; ಇಸ್ಲಾಂ' ಎಂದು ಬಹಿರಂಗ ಘೋಷಣೆ ಮಾಡಿಕೊಂಡೇ ತನ್ನ ಕಾರ್ಯಕ್ರಮಗಳನ್ನು ಸಂಘಟಿಸುತ್ತಿದ್ದುದು. ಈ ಮಧ್ಯಕಾಲೀನ ಕಲ್ಪನೆ ಹಾಗೂ ನಂಬಿಕೆಗಳನ್ನು ಪರಿಷ್ಕರಿಸುವ ಎಲ್ಲ ಪ್ರಯತ್ನಗಳೂ ಬಹುಜನರ ಮಟ್ಟಿಗೆ ವಿಫಲಗೊಂಡಿವೆ.

ಇದಕ್ಕೆಲ್ಲ ಮುಖ್ಯ ಕಾರಣ ನಮ್ಮ ರಾಷ್ಟ್ರೀಯ ನಾಯಕರು ಪ್ರಜಾಪ್ರಭುತ್ವ ಹಾಗೂ ಧರ್ಮನಿರಪೇಕ್ಷೆಯ ಆಧಾರಗಳ ಮೇಲೆ ಕಟ್ಟ ಹೊರಟ ಹೊಸ ಭಾರತದಲ್ಲಿ ಇಸ್ಲಾಮನ್ನು ಪ್ರಜಾಪ್ರಭುತ್ವೀಕರಣಕ್ಕೊಳಪಡಿಸುವ ಗಂಭೀರ ಹಾಗೂ ವ್ಯವಸ್ಥಿತ ಪ್ರಯತ್ನಗಳನ್ನು ಮಾಡದಿದ್ದುದು. ಸ್ವಾತಂತ್ರೋತ್ತರ ಭಾರತದಲ್ಲಿ ಮುಸ್ಲಿಮರ ಚೇಲಾ ನಾಯಕತ್ವವನ್ನಷ್ಟೇ ಬೆಳೆಸಿದ ಕಾಂಗ್ರೆಸ್, ಮುಸ್ಲಿಮರು ರಾಷ್ಟ್ರ ಜೀವನದ ಮುಖ್ಯವಾಹಿನಿಯೊಂದಿಗೆ ಬೆರೆಯಬಲ್ಲ ಅವಕಾಶಗಳನ್ನೇ ಒದಗಿಸಿಕೊಡಲಿಲ್ಲ. ಸರ್ಕಾರಿ ಕಛೇರಿಗಳಲ್ಲಿ, ವಿವಿಧ ಅಧಿಕಾರ ಸ್ಥಾನಗಳಲ್ಲಿ, ರಾಜಕೀಯ ಪಕ್ಷಗಳಲ್ಲಿ ಅವರಿಗೆ ಸಹಜ ಸೂಕ್ತ ಪ್ರಾತಿನಿಧ್ಯ ನೀಡುವುದು ಒಂದು ನೆಲೆಯ ಕ್ರಮವಾದರೆ, ಸಾಮಾನ್ಯ ನಾಗರಿಕ ಸಂಹಿತೆಯನ್ನು ಜಾರಿಗೆ ತರುವುದು ಇನ್ನೊಂದು ನೆಲೆಯ ಕ್ರಮವಾಗಿರಬೇಕಿತ್ತು. ನಮ್ಮ ಸಂವೀಧಾನದ ಮುಖ್ಯ ನಿರ್ದೇಶಕ ತತ್ವಗಳಲ್ಲಿ ಒಂದಾದ ಇದರ ಜಾರಿಯ ಪ್ರಯತ್ನವಿರಲಿ, ಆ ಬಗ್ಗೆ ಒಂದು ಗಂಭೀರ ಚರ್ಚೆಯನ್ನು ಆರಂಭಿಸುವ ಪ್ರಯತ್ನವನ್ನೂ ನಮಗೆ ಮಾಡಲಾಗಲಿಲ್ಲವೆಂದರೆ, ನಾವೆಂತಹ ತಲೆಕೆಳಗಾದ ಸೆಕ್ಯುಲರಿಸಂನ ಪಂಜರದಲ್ಲಿ ಸಿಕ್ಕಿಹಾಕಿಕೊಂಡಿರಬಹುದು! ಮಹಾರಾಷ್ಟ್ರದ ದಳವಾಯಿ ಹಾಗೂ ಅಸ್ಘರಾಲಿ ಕುಟುಂಬ ಮುಂತಾದ ಕೆಲವು ಬೆರಳೆಣಿಕೆಯ ಪ್ರಗತಿಪರರ ಹೊರತಾಗಿ, ಭಾರತದ ಯಾವ ಬುದ್ಧಿಜೀವಿ ಮುಸ್ಲಿಮನಾಗಲೀ ಸಂಘಟನೆಯಾಗಲೀ ತನ್ನ ಮತವನ್ನು ಮೀರಿ ನಿಂತು ಇಸ್ಲಾಂನ ಪ್ರಜಾಪ್ರಭುತ್ವೀಕರಣಕ್ಕಾಗ್ಧಿ ಸಂಘಟಿತ ದನಿ ಎತ್ತಿಲ್ಲ.

ಇದರಿಂದಾಗಿ ಇಂದು ಭಾರತದಾದ್ಯಂತ ಮುಸ್ಲಿಂ ಉಗ್ರಗಾಮಿತ್ವದ ಕೇಂದ್ರಗಳು ಚಿಗುರೊಡೆಯುತ್ತಿವೆ. ಆಸರೆಯಿಲ್ಲದ, ಮಾರ್ಗದರ್ಶನವಿಲ್ಲದ ಮುಸ್ಲಿಂ ಯುವಕರು ಮತೀಯ ಮತ್ತಿಗೆ ಸಿಕ್ಕಿ ತಮ್ಮ ಧರ್ಮ ಅಪಾಯದಲ್ಲಿದೆಯೆಂದೋ ಅಥವಾ ಸಂಪರ್ಕಕ್ಕೆ ಬಂದ ವಿದೇಶಿ ಉಗ್ರಗಾಮಿ ಸಂಸ್ಥೆಗಳ ಏಜೆಂಟರ ಆಮಿಷಗಳಿಗೆ ಬಲಿಯಾಗಿಯೋ ರಾಷ್ಟ್ರಾದ್ಯಂತ ಸಂಭವಿಸುತ್ತಿರುವ ರಕ್ತಪಾತಕ್ಕೆ ಪರೋಕ್ಷವಾಗಿ ಕಾರಣರಾಗುತ್ತಿದ್ದಾರೆ. ಜನ ಸಾಮಾನ್ಯರ ಕಣ್ಣಲ್ಲಿ ಭಾರತೀಯ ಮುಸ್ಲಿಂ ಸಮಾಜವೇ ಇಂದು ಅನುಮಾನಾಸ್ಪದತೆಗೆ ಈಡಾಗಿದ್ದರೆ, ಅದಕ್ಕೆ ಈ ಪ್ರವೃತ್ತಿಯನ್ನು ತಡೆಯಲು ಆ ಸಮಾಜದ ಒಳಗಿಂದಾಗಲೀ, ಹೊರಗಿಂದಾಗಲೀ ಯಾವುದೇ ಸಂಘಟಿತ ಪ್ರಯತ್ನಗಳು ಆಗದಿರುವುದೇ ಕಾರಣವಾಗಿದೆ. ಒಳಗಿನ ಪ್ರಯತ್ನ ಲೇಖಕರು, ಬುದ್ಧಿಜೀವಿಗಳು ಹಾಗೂ ಸಮಾಜಸೇವಕರ ಕಡೆಯಿಂದ ಆಗಬೇಕಿದ್ದರೆ, ಹೊರಗಿನ ಪ್ರಯತ್ನ ಸರ್ಕಾರದ ಕಡೆಯಿಂದ ಆಗಬೇಕಿದೆ. ಈ ಹಿಂದೆ - ಸ್ವಾತಂತ್ರ್ಯ ಸಾಧನೆಯ ಆಸುಪಾಸಿನ ಕಾಲದಲ್ಲಿ - ನಡೆದ ಹರಿಜನೋದ್ಧಾರ ಆಂದೋಲನದಂತೆ ಈಗ ಮುಸ್ಲಿಮೋದ್ಧಾರ ಆಂದೋಲನವೊಂದನ್ನು ಆರಂಭವಾಗಬೇಕಿದೆ. ಸಚಾರ್ ಸಮಿತಿಯ ವರದಿಯ ಅನುಷ್ಠಾನವು ಇದಕ್ಕೊಂದು ಒಳ್ಳೆಯ ಆರಂಭವನ್ನೊದಗಿಸಬಹುದು.

ಇದು ಆಗದ ಹೊರತು ಪ್ರತಿ ಸ್ಫೋಟವಾದಾಗಲೂ ಪರಿಹಾರ ಘೋಷಿಸುವುದು, ತನಿಖೇ ಕೈಗೊಳ್ಳುವುದು, ವರ್ಷಗಟ್ಟಲೆ ವಿಚಾರಣೆ ನಡೆಸಿ ಯಾರಿಗೋ ಒಂದಷ್ಟು ಜನಕ್ಕೆ ಶಿಕ್ಷೆ ವಿಧಿಸುವುದು ಇತ್ಯಾದಿ ಔಪಚಾರಿಕ ಆಡಳಿತ ಕ್ರಮಗಳಿಂದ ಯಾವುದೇ ಪ್ರಯೋಜನವಾಗದು. ಮೂಲಭೂತ ಚಿಂತನೆಯನ್ನಾಧರಿಸಿದ ಒಳ್ಳೆಯ ರಾಜಕಾರಣ ಮಾತ್ರ ಕೋಮುವಾದ ಮೂಲಭೂತವಾದಗಳೆರಡಕ್ಕೂ ಉತ್ತರವಾಗಬಲ್ಲುದು.

ಅಂದಹಾಗೆ: ದಿಲೀಪ್ ವೆಂಗ್ಸರ್ಕಾರ್ ಪಾಪ, ನಮ್ಮ ಜಿ.ಆರ್.ವಿಶ್ವನಾಥ್ ಹಾಗೂ ಗವಾಸ್‌ಕರ್‌ಗಳ ಪ್ರತಿಭೆಗಳ ಮಧ್ಯೆ ಮಸುಕಾಗಿ ಹೋಗಿದ್ದ ಭಾರತದ ಇನ್ನೊಂದು ಅಪೂರ್ವ ಬ್ಯಾಟಿಂಗ್ ಪ್ರತಿಭೆ. ಅವರು ಈಗಲಾದರೂ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಭಾರತೀಯ ಕ್ರಿಕೆಟ್ ಆಡಳಿತದ ಮುಖ್ಯ ಸ್ಥಾನವೊಂದಕ್ಕೆ ಬಂದಿರುವುದು ಅವರ ಅಭಿಮಾನಿಗಳಿಗೆಲ್ಲ ಸಂತೋಷವನ್ನೇ ತಂದಿದೆ. ಆದರೆ ಅವರು ಆಡಳಿತದ ಶಿಸ್ತಿನ ಅರಿವೇ ಇಲ್ಲದವರಂತೆ, ತಾವು ಅಂಕಣ ಬರೆಯುವುದನ್ನು ನಿಲ್ಲಿಸಬೇಕಾದರೆ ಅದರಿಂದಾಗುವ ಹಣಕಾಸಿನ ನಷ್ಟವನ್ನು ತುಂಬಿಕೊಡಬೇಕೆಂದು ಮಂಡಳಿಯನ್ನು ಕೇಳಿರುವುದು ಅವರ ಘನತೆಗೆ ತಕ್ಕುದಲ್ಲ. ಅವರು ಇನ್ನೂ ಮುಂದುವರೆದು, ಪ್ರತಿ ಪಂದ್ಯಕ್ಕೂ ಆಟಗಾರರಿಗೆ ಕೊಡುವಷ್ಟು ಸಂಭಾವನೆಯನ್ನು ಆಯ್ಕೆದಾರರಿಗೂ ಕೊಡಬೇಕೆಂದು ಕೇಳಿದ್ದಾರಂತೆ! ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯಲ್ಲಿರುವ ಕೊಪ್ಪರಿಗೆಗಟ್ಟಲೆ ಹಣ ಎಲ್ಲರ ಮತಿಭ್ರಮಣೆಗೆ ಕಾರಣವಾದಂತಿದೆ!!

ಆಟಗಾರರಿಗಾದರೂ ಸರಿ, ರಾಷ್ಟ್ರಕ್ಕೆ ಯಾರೂ ಸಲ್ಲಿಸದಂತಹ ಯಾವ ಕೊಡುಗೆ ಸಲ್ಲಿಸಿದ್ದಾರೆಂದು ಅವರಿಗೆ ಪ್ರಶಸ್ತಿ ಗೆದ್ದರೆ ಕೋಟಿಗಟ್ಟಲೆ ಹಣ, ಪ್ರತಿ ಪಂದ್ಯಕ್ಕೆ ಲಕ್ಷಗಟ್ಟಲೆ ಸಂಭಾವನೆ ಹಣ ನೀಡಬೇಕು? ಅದು ಜನತೆಯ ಹಣ. ಅದರಲ್ಲಿ ಆಟಗಾರರಿಗೆ, ಕ್ರೀಡಾಭಿವೃದ್ಧಿಗೆ, ಆಡಳಿತಕ್ಕೆ ಎಂದು ನ್ಯಾಯೋಚಿತ ಪಾಲನ್ನು ತೆಗೆದಿಟ್ಟು,ಮಿಕ್ಕ ಹಣವನ್ನು ಸಾರ್ವತ್ರಿಕ ಅಭಿವೃದ್ಧಿ ಕಾರ್ಯಗಳಿಗೆ ಹೂಡುವ ವ್ಯವಸ್ಥೆಯಾದರೆ ಒಳ್ಳೆಯದು. ಆಗ ಮಾತ್ರ ರಾಜಕಾರಣಿಗಳನ್ನು, ರಾಜ ಪರಿವಾರದವರನ್ನು, ದಂಧೆಕೋರರನ್ನು ಕ್ರಿಕೆಟ್ ಆಡಳಿತದಿಂದ ದೂರವಿಡಲು ಸಾಧ್ಯ ಹಾಗೇ ವೆಂಗ್ಸರ್ಕಾರ್ ಎಂಬ ಸಭ್ಯ ಕೂಡ ಧನಪಿಶಾಚಿಯಾಗದಂತೆ ತಡೆಯಲು ಸಾಧ್ಯ.

Rating
No votes yet