ಪ್ರವಾಸಿ ಕಂಡ ಇಂಡಿಯಾ ಮತ್ತು ಬೆಟ್ಟದಿಂದ ಬಟ್ಟಲಿಗೆ

ಪ್ರವಾಸಿ ಕಂಡ ಇಂಡಿಯಾ ಮತ್ತು ಬೆಟ್ಟದಿಂದ ಬಟ್ಟಲಿಗೆ

ನಿನ್ನೆ, ಅಂದರೆ ಡಿಸೆಂಬರ್ ೨೬, ೨೦೦೬, ಮೈಸೂರಿನ ಮಹಾರಾಜಾ ಕಾಲೇಜು ಶತಮಾನೋತ್ಸವ ಭವನದಲ್ಲಿ ಎಚ್.ಎಲ್. ನಾಗೇಗೌಡ ಅವರ ನೆನಪಿಗಾಗಿ ನಡೆದ ವಿಚಾರ ಸಂಕಿರಣ ಇತ್ತು.
ನಾಗೇಗೌಡ ರಾಮ ನಗರ ಮತ್ತು ಚನ್ನಪಟ್ಟಣ ನಡುವೆ ಜಾನಪದ ಲೋಕ ಕಟ್ಟಿದವರು. ಅಲ್ಲಿ ಸುಮಾರು ಹತ್ತು ಸಾವಿರ ಗಂಟೆಗಳಷ್ಟು ವಿಸ್ತಾರವೂ ವಿಶಾಲವೂ ಆದ ಜಾನಪದ ಆಡಿಯೋ ಮತ್ತು ವೀಡಿಯೋ ಸಂಗ್ರಹ ಮಾಡಿಸಿಟ್ಟಿರುವವರು. ಜಾನಪದ ಅಧ್ಯಯನಕ್ಕೆ ಸಂಸ್ಥೆಯನ್ನೇ ಕಟ್ಟಿ ಬೆಳೆಸಿದವರು. ಐಎಸ್ ಅಧಿಕಾರಿಯಾಗಿದ್ದಾಗಲೂ ಜಾನಪದ ಸಂಗ್ರಹದ ಆಸಕ್ತಿಯನ್ನು ಕಳೆದುಕೊಳ್ಳದಿದ್ದವರು. ರಿಟೈರ್ ಆದ ಮೇಲೆ ಮನೆ ಕಟ್ಟಿಸಿಕೊಂಡವರು. ತುಂಬ ಪ್ರಾಮಾಣಿಕ ಎಂದು ಹೆಸರಾದವರು.
ಇದೆಲ್ಲಕ್ಕಿಂತ ಮಿಗಿಲಾಗಿ ಸುಮಾರು ಮೂವತ್ತು ವರ್ಷಗಳಷ್ಟು ಕಾಲ ಪಟ್ಟುಬಿಡದೆ ಪ್ರವಾಸಿ ಕಂಡ ಇಂಡಿಯಾ ಸಂಪುಟಗಳನ್ನು ಅನುವಾದಮಾಡಿದವರು. ಹತ್ತೊಂಬತ್ತು ಜನ ವಿದೇಶಿ ಪ್ರವಾಸಿಗರು, ಗ್ರೀಕರಿಂದ ಹಿಡಿದು ಚೀನೀಯರವರೆಗೆ, ವಿವಿಧ ಶತಮಾನಗಳಲ್ಲಿ ಭಾರತಕ್ಕೆ ಭೇಟಿಕೊಟ್ಟು ಬರೆದಿರುವ ಕಥನಗಳನ್ನು ಸುಮಾರು ಎಂಟುಸಾವಿರ ಪುಟಗಳಲ್ಲಿ ನಾಗೇಗೌಡರು ಕನ್ನಡಕ್ಕೆ ತಂದಿದ್ದಾರೆ. ಬಹುಶಃ ಭಾರತದ ಇತರ ಯಾವ ಭಾಷೆಗಳಲ್ಲೂ ಇಷ್ಟು ದೊಡ್ಡ ಪ್ರಮಾಣದ ಪ್ರಾವಾಸ ಸಾಹಿತ್ಯ ಅನುವಾದಗೊಂಡಂತಿಲ್ಲ.
ನಾಗೇಗೌಡರು ಬೆಟ್ಟದಿಂದ ಬಟ್ಟಲಿಗೆ ಎಂಬ ಇನ್ನೊಂದು ಪುಸ್ತಕ ಬರೆದಿದ್ದಾರೆ. ಕಾಫಿಯ ಕಥೆಯನ್ನು ಹೀಗೂ ಹೇಳಬಹುದು ಎಂದು ಅಚ್ಚರಿಯಾಗುತ್ತದೆ. ಯಾವುದಾದರೂ ಒಂದು ವಿಷಯ ತೆಗೆದುಕೊಂಡು, ವಿಷಯ ಸಂಗ್ರಹಿಸಿ ಬರೆಯುವುದು ಹೇಗೆ ಎಂಬ ಪಾಠವನ್ನು ಕಲಿಯುವುದಕ್ಕೆ ಬರಹಗಾರರು ಈ ಪುಸ್ತಕ ಓದಬಹುದು.
ವೆರಿಯರ್ ಎಲ್ವಿನ್‌ನ ಗಿರಿಜನ ಪ್ರಪಂಚ ಅವರ ಇನ್ನೊಂದು ಒಳ್ಳೆಯ ಪುಸ್ತಕ. ಹಾಗೆಯೇ ದೊಡ್ಡಮನೆ ಎಂಬ ಕಾದಂಬರಿಯ್ನೂ ಬರೆದಿದ್ದಾರೆ.
ಅವರಿಗೆ ಸಾಕಷ್ಟು ಬಹುಮಾನಗಳೂ, ಪ್ರಶಸ್ತಿಗಳೂ ಬಂದಿವೆ. ವಿಧಾನ ಪರಿಷತ್ತಿನ ಸದಸ್ಯರೂ ಆಗಿದ್ದರು ಎಂದು ನೆನಪು. ಕನ್ನಡವನ್ನು ಕಟ್ಟಿದ ಇಂಥ ಹಿರಿಯರು ಸತ್ತು ಎರಡು ವರ್ಷಗಳೊಳಗೇ ಮರವೆಗೆ ಸಂದು ಹೋದರೋ ಅಂದುಕೊಳ್ಳುತ್ತಿದ್ದಾಗ ನಿನ್ನೆ ಈ ಸಮಾರಂಭ ನಡೆಯಿತು.
ಹೆಚ್ಚಿನ ಹಣದ ಆಸೆ, ಯಶಸ್ಸಿನ ಆಸೆ ಇಲ್ಲದೆ ಕೆಲಸ ಮಾಡಿದ ಹಳ್ಳಿಯ ಮೂಲದ, ಕನ್ನಡ ಮನಸ್ಸುಗಳು ಅಪ್ರಸ್ತುತವಾಗುವ ಕಾಲದಲ್ಲಿ ನಾವಿದ್ದೇವೆಯೋ ಎಂಬ ಭಾವವೂ ಮನಸ್ಸಿಗೆ ಬಂತು. ಯಾಕೆಂದರೆ ಆ ಸಮಾರಂಭದಲ್ಲಿ ನೆರೆದಿದ್ದವರಲ್ಲಿ ಶೇ ೮೦ ಜನ ೫೦ ದಾಟಿದವರು. ಇಂದಿನ ಕನ್ನಡ ಯುವ ಮನಸ್ಸುಗಳ ಪ್ರಯಾರಿಟಿಯೇ ಬೇರೆ. ಅಲ್ಲವೆ?

Rating
No votes yet

Comments