'ಪ್ರೀತಿ'ಗೂ ಮೀಟರ್ ಬೇಕಾ?

'ಪ್ರೀತಿ'ಗೂ ಮೀಟರ್ ಬೇಕಾ?

ನೀನು ನನ್ನನ್ನು ಎಷ್ಟು ಪ್ರೀತಿಸುತ್ತಿದ್ದೀಯಾ ಅಂತಾ ಒಂದು ಬಾರಿಯಾದರೂ ತನ್ನ ಬಾಯ್್ಫ್ರೆಂಡ್್ನಲ್ಲಿ ಕೇಳದ ಪ್ರೇಯಸಿ ಇರಲಾರಳು. ನಿನ್ನನ್ನು ಸಾಗರದಷ್ಟೇ ಆಳವಾಗಿ, ಆಕಾಶದಲ್ಲಿ ಸೂರ್ಯ ಚಂದ್ರರು ಇರುವ ತನಕ ಪ್ರೀತಿಸುತ್ತೇನೆ ಎಂದು ಅವನು ಅವಳ ಮುಂದೆ ಹೇಳಿದರೆ ಮಾತ್ರ ಅವಳಿಗೂ ಸಮಾಧಾನ. ಪ್ರೀತಿ ಯಾವಾಗ ಯಾರಲ್ಲಿ ಹುಟ್ಟುತ್ತದೆ ಎಂಬುದು ಹೇಳಲಿಕ್ಕಾಗಲ್ಲ. ಆದ್ರೆ ಅದೊಂದು ತರಾ ಫೀಲಿಂಗ್ ಅಂತಾನೇ ಹೇಳ್ಬಹುದು. ಅದಕ್ಕೆ ಪ್ರಾಯದ ಮಿತಿ ಇಲ್ಲ, ಜಾತಿ ಧರ್ಮದ ಗೋಡೆಯಿಲ್ಲ. ಸಾಮಾನ್ಯವಾಗಿ ಹದಿಹರೆಯದಲ್ಲಿ ಪ್ರೀತಿ ಹುಟ್ಟುತ್ತದೆ ಅಂತಾ ಹೇಳ್ತಾರೆ. ಕೆನ್ನೆಯಲ್ಲಿ ಮೊಡವೆ ಮೂಡಿದಾಕ್ಷಣ ಯಾರೋ 'ನಿನ್ಗೆ ಲೈನ್ ಹೊಡಿತಿದ್ದಾರೆ' ಎಂಬ ಕಾಮೆಂಟು ಬೇರೆ. ಅದೇನೋ ಮೊಡವೆಗೂ ಪ್ರೀತಿಗೂ ಏನು ಸಂಬಂಧ ಅಂತಾ ನಂಗಂತೂ ಗೊತ್ತಾಗಿಲ್ಲ :) 


ಅದರಿಲಿ ಬಿಡಿ. ನಾನು ಹೈಸ್ಕೂಲ್ ಓದುವ ಸಂದರ್ಭದಲ್ಲಿ (ಅದೂ ಗರ್ಲ್ಸ್ ಹೈಸ್ಕೂಲ್) ಲವ್ ಬಗ್ಗೆ ಒಂದಿಷ್ಟಾದರೂ ಗೊತ್ತಾದದ್ದು. ಅವಳಿಗೆ ಅವನಲ್ಲಿ ಲವ್ ಇದೆಯಂತೆ, ನರ ಕತ್ತರಿಸಿದ್ದಾಳಂತೆ, ಓಡಿ ಹೋದ್ಳು, ಮದುವೆ ಮಾಡಿಕೊಂಡ್ರು ಅಂತಾ ಎಲ್ಲಾ ಸುದ್ದಿ ಅಲ್ಲಿಂದ ಕೇಳೋಕ್ಕೆ ಶುರುವಾದದ್ದು. ಪ್ರತಿಯೊಂದು ಲವ್ ಘಟನೆಗಳು ನಡೆದಾಗಲೂ ನಮ್ಮ ಕ್ಲಾಸಿನಲ್ಲಿ ಈ ಬಗ್ಗೆ ಟೀಚರುಗಳು ಉಪದೇಶ ಕೊಡ್ತಾ ಇದ್ರು. "ನೋಡಿ ನೀವು ಹತ್ತನೇ ಕ್ಲಾಸ್ ಮುಗಿದ ನಂತರ ಲವ್ ಮಾಡಿ. ಮಾಡಿದ್ರೂ ಒಳ್ಳೆ ಹುಡುಗನನ್ನೇ ಮಾಡಿ...ಓಡಿ ಹೋದ್ರೆ ಆಮೇಲೆ ತುಂಬಾ ಕಷ್ಟ ಪಡ್ಬೇಕಾಗುತ್ತೆ. ಒಂದು ಮಗು ನಿಮ್ಮ ಕೈಯಲ್ಲಿ ಕೊಟ್ಟು ಅವ ಓಡಿ ಹೋದ್ರೆ?"  ಎಂಬುದೆಲ್ಲಾ ಉಪದೇಶದ ಸ್ಯಾಂಪಲ್ಲು. ಕೆಲವು ಗೆಳತಿಯರೆಲ್ಲಾ ಕದ್ದು ಮುಚ್ಚಿ ಪ್ರೀತಿಸುತ್ತಿದ್ದರು. ಅವರ ಲವರ್ಸ್ ಎಲ್ಲಾ ಒಂದೋ ಬಸ್ ಕಂಡೆಕ್ಟರ್ ಇಲ್ಲವೇ ಆಟೋ ಡ್ರೈವರ್್ಗಳಾಗಿರುತ್ತಿದ್ದರು. ಹೀಗಾದರೆ ಬಸ್್ನಲ್ಲಿ ಟಿಕೆಟಿಲ್ಲದೆ ಫ್ರೀಯಾಗಿ ಬರಬಹುದು, ಆಟೋದಲ್ಲಿ ಶಾಲೆ ತನಕ ಡ್ರಾಪ್ ಸಿಗಬಹುದು ಇಷ್ಟಲ್ಲದೆ ಬೇರೇನಿಲ್ಲ. ಮತ್ತೆ ಅಧ್ಯಾಪಕರಿಗೇ ಲೈನ್ ಹೊಡೆಯುವ ಹುಡುಗಿಯರು ಬೇರೆ. ಸಿನಿಮಾ ಸ್ಟಾರ್, ಕ್ರಿಕೆಟ್ ಸ್ಟಾರ್್ಗಳನ್ನೂ ಲವ್ ಮಾಡುವ ಹುಡುಗಿಯರಿಗೆ (ನಾನು ಸೇರಿ) ಕಮ್ಮಿಯೇನೂ ಇರಲಿಲ್ಲ. ಇದನ್ನೆಲ್ಲಾ ಲವ್ ಅಂತಾ ಹೇಳೋಕೆ ಬರಲ್ಲ. ಒಂದು ರೀತಿಯ ಆಕರ್ಷಣೆ..ಕ್ರಷ್...ಅಂತಾ ಹೇಳ್ತಾರಲ್ವಾ ಅದೇ.


 ಮೊದಮೊದಲಿಗೆ ಯಾವುದಾದರೂ ಹುಡುಗ ಇಷ್ಟವಾದ ಕೂಡಲೇ ಅವನ ಹೆಸರನ್ನು ನಮ್ಮ ಹೆಸರಿನ ಜೊತೆ ಬರೆದು ನೋಡುವುದು ಹುಡುಗಿಯರ ಅಭ್ಯಾಸ. ಹುಡುಗರು ಇಂತದನ್ನೆಲ್ಲಾ ಹೆಚ್ಚು ಸೀಕ್ರೆಟ್ ಆಗಿಡುತ್ತಾರೆ ಅಂತಾ ನನ್ನ ಅನಿಸಿಕೆ. ಮತ್ತೆ ಫ್ಲೇಮ್ ಚೆಕಿಂಗ್. ಈ ಆಟ ಎಲ್ಲರಿಗೂ ಗೊತ್ತಿದೆಯೋ ಎಂದು ನಂಗೆ ತಿಳಿದಿಲ್ಲ. ಅದು ಹೀಗಿದೆ: ನಮ್ಮ ಮತ್ತು ಅವನ ಹೆಸರನ್ನು ಇಂಗ್ಲಿಷ್್ನಲ್ಲಿ ಬರೆದು ಅದರಲ್ಲಿ ಕಾಮನ್ ಆಗಿರುವ ಅಕ್ಷರ ಹೊಡೆದು ಹಾಕಿ ಬಾಕಿ ಎಷ್ಟು ಅಕ್ಷರ ಉಳಿಯುತ್ತೋ ಅದನ್ನು ಲೆಕ್ಕ ಹಾಕಿ ಫ್ಲೇಮ್ ಎಂದು ಬರೆದು ಅದರಲ್ಲಿಯೂ ಲೆಕ್ಕ ಹಾಕಿ ಬಾಕಿ ಯಾವ ಅಕ್ಷರ ಉಳಿಯುತ್ತೋ ಅದು ನಿರ್ದಿಷ್ಟ ಸಂಬಂಧವೊಂದನ್ನು ಸೂಚಿಸುತ್ತದೆ ಎಂಬ ಲೆಕ್ಕಾಚಾರವಿದು. F ಬಂದ್ರೆ Friend,L- Love, A-Angry, M-Marriage,  E- Enemy ಅಂತಾ ಲೆಕ್ಕ ಹಾಕುತ್ತಿದ್ದೆವು. ಇದು ಮಾತ್ರವಲ್ಲದೆ ಇಬ್ಬರ ಹೆಸರನ್ನು ಇಂಗ್ಲಿಷಲ್ಲಿ ಬರೆದು ಉದಾಹರಣೆಗೆ rashmi loves sachin ಅಂತಾ ಬರೆದರೆ ಅಲ್ಲಿರುವ ಎಲ್ಲಾ ಸ್ಪೆಲಿಂಗ್್ಗಳು ಎಷ್ಟು ಬಾರಿ ರಿಪೀಟ್ ಆಗುತ್ತದೆ ಎಂಬಿತ್ಯಾದಿಗಳನ್ನು ಲೆಕ್ಕ ಹಾಕಿ ಕೊನೆಗೆ ಎರಡಂಕಿ ಸಂಖ್ಯೆ ಬರುವಂತೆ ಮಾಡಿ ಅದಕ್ಕೆ % ಚಿಹ್ನೆ ಸೇರಿಸಿ ನೋಡು ನಿಂಗೆ ಇಷ್ಟು ಪರ್ಸೆಂಟ್ ಲವ್ ಇದೆ ಅಂತಾ ತೋರಿಸುವ ಆಟವೂ ಚಾಲ್ತಿಯಲ್ಲಿತ್ತು. ಕೆಲವೊಮ್ಮೆ ಅತಿಯಾಗಿ ಪ್ರೀತಿಸುತ್ತೇನೆ ಎಂದು ಹೇಳಿಕೊಳ್ಳುತ್ತಿದ್ದವರಿಗೆ ಈ ಆಟದಲ್ಲಿ ಕಡಿಮೆ ಪರ್ಸೆಂಟ್ ಬಂದಾಗ ಬೇಜಾರು!. ಆಮೇಲೆ ತಮ್ಮ ಸಮಾಧಾನಕ್ಕೋಸ್ಕರ ಮತ್ತೆ ಮತ್ತೆ ಸ್ಪೆಲಿಂಗ್ ಕೂಡಿಸಿದ್ದು ಸರಿಯಿದೆಯಾ ಅಂತಾ ನೋಡುವವರೂ ಇದ್ದಾರೆ. 


ಇನ್ನೂ ಕೆಲವರು ತಮಗೆ ಇಷ್ಟವಾದವರ ಹೆಸರನ್ನು ಕೈಯಲ್ಲಿ ಬರೆದುಕೊಳ್ಳುತ್ತಾರೆ. ಕ್ಲಾಸು ಬೋರ್ ಹೊಡೆದಾಗ ಪೆನ್್ನಲ್ಲಿ ಎಡಗೈ ಅಂಗೈಯಲ್ಲಿ ಲವ್ ಚಿಹ್ನೆ ಬಿಡಿಸಿ ಅದರೊಳಗೆ ಅವನ ಹೆಸರಿನ ಮೊದಲ ಅಕ್ಷರ ಬರೆಯುವುದು. ಇಲ್ಲವಾದರೆ ಕೈಗೆ ಮದರಂಗಿ ಇಟ್ಟಾಗ ಯಾರಿಗೂ ಗೊತ್ತಾಗದಂತೆ ಎಲ್ಲೋ ಅವನ ಹೆಸರಿನ ಒಂದಕ್ಷರ, ಕೋಡ್ ವರ್ಡ್ ಏನಾದರೂ ಬರೆಯುವುದು, ಪುಸ್ತಕದ ಮೂಲೆಯಲ್ಲಿ ಹೆಸರು ಬರೆಯುವುದು, ಪುಸ್ತಕದೆಡೆಯಲ್ಲಿ ಫೋಟೋ ಇಟ್ಟು ಓದುವ ನೆಪ ಮಾಡುವುದು ಹೀಗೆಲ್ಲಾ ಮಾಡುತ್ತಿದ್ದು, ನೋಡಿದ್ದೂ ಇದೆ. ಅನುಭವವೂ ಕೂಡಾ.


 ಇಂದೇನಿದ್ದರೂ ಇಂಟರ್ನೆಟ್ ಯುಗ. ಮೊದ ಮೊದಲು ಹುಡುಗಿಯನ್ನು ಹೇಗೆ ಪ್ರೊಪೋಸ್ ಮಾಡ್ಬೇಕು ಅಂತಾ ಹುಡುಗ ಒದ್ದಾಡ್ತಿದ್ದ, ಪ್ರೇಮಪತ್ರ ಬರೆಯ ಬೇಕಾದರೆ ತಲೆ ಕೆರೆದು, ಪೇಪರ್ ವೇಸ್ಟ್ ಮಾಡುವ ಹುಡುಗರು ಇಂದಿಲ್ಲ. ಎಲ್ಲವೂ ಎಸ್ಸೆಮ್ಮೆಸ್ಸ್ , ಇಮೇಲ್ ಮೂಲಕ ಅಂದ ಮೇಲೆ ಎಲ್ಲವೂ Eazy...ಎನಾದರೂ ಐಡಿಯಾ ಹೇಳಿಕೊಡು ಅಂತಾ ಗೆಳೆಯ ಗೆಳತಿಯರನ್ನು ಕೇಳಬೇಕಾದ ಪರಿಸ್ಥಿತಿ ಇಂದಿಲ್ಲ. ಸರ್ಚ್ ಇಂಜಿನ್್ನಲ್ಲಿ how to propose ಅಂತಾ ಟೈಪ್ ಮಾಡಿ ಸರ್ಚ್ ಮಾಡಿದರೆ ವಿಧ ವಿಧ ಸಲಹೆಗಳು ನಿಮ್ಮ ಮುಂದಿರುತ್ತವೆ. ಇನ್ನು ಸ್ಪೆಲಿಂಗ್ ಸೇರಿಸಿ ಲೆಕ್ಕ ಹಾಕಬೇಕಾಗಿಲ್ಲ. ಕ್ರಷ್ ಮೀಟರ್, ಲವ್ ಮೀಟರ್ ಅಂತಾ ಬೇಕಾದಷ್ಟು ಕ್ಯಾಲ್ಕುಲೇಟರ್್ಗಳಿವೆ. ಅವುಗಳಲ್ಲಿ ನೀವು ಮತ್ತು ನಿಮ್ಮ ಸಂಗಾತಿಯ ಹೆಸರನ್ನು ಟೈಪ್ ಮಾಡಿದರೆ ಎಷ್ಟು ಪರ್ಸೆಂಟ್ ಪ್ರೀತಿ, ಇಬ್ಬರ ನಡುವೆ ಹೊಂದಾಣಿಕೆ ಇದೆಯೋ, ಮುಂದಿನ ಜೀವನ ಹೇಗೆ ಎಂಬೆಲ್ಲಾ ಪ್ರಶ್ನೆಗಳಿಗೆ ಚಕಾ ಚಕ್ ಉತ್ತರ.  ಕೆಲವೊಂದು ಸೋಷ್ಯಲ್ ಸೈಟ್್ಗಳಲ್ಲಿ  ನಿಮ್ಮ ಭಾವೀ ಸಂಗಾತಿಯ ಹೆಸರಿನ ಇನಿಷಿಯಲ್ ಯಾವುದು? ಅವರ ಹೆಸರು ಯಾವ ಅಕ್ಷರದಿಂದ ಆರಂಭವಾಗುತ್ತದೆ ಅಂತಾ ತಿಳಿದುಕೊಳ್ಳಲು ಕ್ವಿಜ್ ಕೂಡಾ ಇರುತ್ತದೆ. ಇನ್ನು ಆಸ್ಟ್ರೋಲಜಿ ಸೈಟ್್ಗಳಲ್ಲಿ ಕ್ಲಿಕ್ಕಿಸಿದರೆ ನಿಮ್ಮ ನಕ್ಷತ್ರ, ಹುಟ್ಟಿದ ಘಳಿಗೆ, ಹೆಸರಿನ ಅಕ್ಷರ, ನಿಮ್ಮ ಲಕ್ಕಿ ನಂಬರ್್ಗೆ ಮ್ಯಾಚ್ ಆಗಿರುವ ಸಂಗಾತಿ ಯಾವ ರಾಶಿಯಲ್ಲಿದ್ದಾರೆ, ಯಾವ ರಾಶಿಯವರೊಂದಿಗೆ ನಿಮಗೆ ಡೇಟಿಂಗ್ ಮಾಡ್ಬಹುದು ಇಲ್ಲವಾದರೆ ಫೈಟಿಂಗ್ ಆಗ್ಬಹುದು ಎಂಬ ಮಾಹಿತಿಗಳು ಕೂಡಾ ಲಭ್ಯ. ಹಾಗೆಯೇ ಡೇಟಿಂಗ್ ಸರ್ವೀಸ್ ಸೈಟ್್ಗಳು, ಚಾಟಿಂಗ್ ಎಲ್ಲವೂ ಗುಪ್ ಚುಪ್ ಪ್ರೀತಿಯನ್ನು ಮತ್ತಷ್ಟು ಮುಕ್ತ ಮುಕ್ತವಾಗಿಸುತ್ತವೆ.


  


ವ್ಯಾಲೆಂಟೈನ್ಸ್ ಡೇ ಬಂತು ಅಂದರೆ ನಿಮ್ಮ ವ್ಯಾಲೆಂಟೈನ್್ಗೆ ಪ್ರೀತಿಯ ಸಂದೇಶ ಕಳಿಸಿ, ಕಾಲರ್ ಟ್ಯೂನ್ ಡೆಡಿಕೇಟ್ ಮಾಡಿ ಅಂತಾ ಮೊಬೈಲ್್ನಲ್ಲಿ ಎಸ್ಸೆಮ್ಮೆಸ್ಸ್ ಜಾಹೀರಾತು ಬೇರೆ. ನಿಮ್ಮ ಸಂಗಾತಿಗೆ ನಿಮ್ಮ ಪ್ರಣಯವನ್ನು ತಿಳಿಸಿ..ಈ ನಂಬರ್್ಗೆ ನಿಮ್ಮ ಹೆಸರು ಸ್ಪೇಸ್ ನಿಮ್ಮ ಸಂಗಾತಿಯ ಹೆಸರು ಸ್ಪೇಸ್ ನಿಮ್ಮ ಸಂದೇಶವನ್ನು ಟೈಪ್ ಮಾಡಿ ಸಂದೇಶ ಕಳುಹಿಸಿ ಅಂತಾ ಟಿವಿ ಚಾನೆಲ್್ಗಳ, ಜಾಹೀರಾತುದಾರರ ಚಾಲಾಕಿತನ ಬೇರೆ. ಇನ್ನು ಕೆಲವೊಂದು ಟಿವಿ ಕಾರ್ಯಕ್ರಮಗಳು ಪ್ರಸಾರವಾಗುತ್ತಿರಬೇಕಾದರೆ ಅದರ ಕೆಳಗೆ ಲವ್ ಪರ್ಸೆಂಟೇಜ್, ಕಂಪ್ಯಾಟಿಬಿಲಿಟಿ, ಪ್ರೇಮ ಸಂದೇಶಗಳು ಓಡಾಡುತ್ತಿರುತ್ತವೆ.


 ಆದಾಗ್ಯೂ, ಈ ಪ್ರೇಮಿಗಳ ದಿನ ಅಂದ್ರೆ ಅದೇನೋ ರಾಷ್ಟ್ರೀಯ ಹಬ್ಬದಂತೆ ಆಚರಿಸುವ ಜನರಿಗೇನೂ ಇಲ್ಲಿ ಕಮ್ಮಿಯಿಲ್ಲ. ದೊಡ್ಡ ದೊಡ್ಡ ಗಿಫ್ಟ್, ಕಾರ್ಡುಗಳನ್ನು ತನ್ನ ಲವರ್್ಗೆ ಕೊಟ್ಟರೆ ಅವರೇನೋ ಮಹಾನ್ ಸಾಧನೆ ಮಾಡಿದವರಂತೆ ಎದೆಯುಬ್ಬಿಸಿ ನಡೆಯುವುದನ್ನು ನಾವು ನೋಡುತ್ತೇವೆ. ಅದಲ್ಲ ಮಾರಾಯರೆ, ಈ 'ಪ್ರೀತಿ'ಯನ್ನು ಕಾರ್ಡಿನ ಸೈಜ್ ನೋಡಿಯೋ, ಗಿಫ್ಟ್್ನ ಬೆಲೆ ನೋಡಿಯೋ ಅಳೆಯೋಕ್ಕೆ ಆಗುತ್ತಾ? 


'ಮುಂಗಾರು ಮಳೆ' ಚಿತ್ರದಲ್ಲಿ ಹೀರೋ ಗಣೇಶ್ ತರಾ ನನ್ನನ್ನು ಪ್ರೀತಿಸಬೇಕು, ದೇವ್್ದಾಸ್ ಮೂವಿಯಲ್ಲಿ ಶಾರುಖ್ ಖಾನ್ 'ಪಾರೂ' ಐಶ್್ನಲ್ಲಿ ಹೇಳುವಂತೆ ನನ್ನ ಪ್ರತಿ ಉಚ್ವಾಸ ನಿಶ್ವಾಸದಲ್ಲಿಯೂ ನಿನ್ನ ನೆನಪು ಬರುತ್ತದೆ ಅಂತಾ ಹೇಳಿದ ಹಾಗೆ ಎಲ್ಲಾ ಪ್ರಿಯಕರನು ತನ್ನ ಪ್ರೇಯಸಿಯಲ್ಲಿ ಹೇಳಿದರೆ ಮಾತ್ರ ಅವ ಪ್ರೀತಿಸುತ್ತಿದ್ದಾನೆ ಅಂತಾ ಅರ್ಥವೆ? ಅಥವಾ ಮನೆಯವರನ್ನೆಲ್ಲಾ ಬಿಟ್ಟು, ತನ್ನ ಪ್ರೀತಿಯೇ ಮೇಲು ಎಂದು ಸಾಧಿಸುವ ಸಲುವಾಗಿ ಕುಟುಂಬದ ಮರ್ಯಾದೆಯನ್ನೇ ನುಚ್ಚು ನೂರು ಮಾಡಿ ಓಡಿ ಬರುವ ಪ್ರೇಯಸಿ...ಕೆಲವೊಮ್ಮೆ ಪ್ರಣಯಿಗಳು ಒಂದಾಗೋಕೆ ಸಾಧ್ಯವಿಲ್ಲ ಎಂದಾದಾಗ ತಮ್ಮ ಜೀವನಕ್ಕೇ ಅಂತ್ಯ ಹಾಡುವ ಜೋಡಿಗಳು, ಪ್ರೇಮ ನಿರಾಶರಾಗಿ ದೇವದಾಸ್ ಅಥವಾ ಇನ್ನೊಬ್ಬನೊಂದಿಗೆ ಸಂಸಾರ ಹೂಡಿ ಬಿಂದಾಸ್ ಆಗುವ ಹುಡುಗ ಹುಡುಗಿಯರು. ಇದೇನಾ? ಪ್ರೀತಿ ಅಂದರೆ ಎಂಬ ಸಂದೇಶ ಕಾಡುವುದು ಸಹಜ. ಹೀಗಿರುವಾಗ ನಿಜವಾದ ಪ್ರೀತಿ ಯಾವುದು? ಪ್ರೀತಿ ಅಂದರೆ ಏನು? ಎಂದು ಕೇಳಿದರೆ ಉತ್ತರಗಳು ಹಲವು. ಎಲ್ಲವೂ ಅವರವರ ಭಾವಕ್ಕೆ ಭಕುತಿಗೆ ಎನ್ನೋಣವೇ? ಅದೋ ಪ್ರೀತಿ ಮಾಯೆ ಅನ್ನಲೇ? ಪ್ರತಿಯೊಬ್ಬರಲ್ಲೂ ಪ್ರೀತಿ ಇದ್ದೇ ಇರುತ್ತದೆ ಆದರೆ ಅದನ್ನು ವ್ಯಕ್ತ ಪಡಿಸುವ ರೀತಿ ಬೇರೆ ಅಷ್ಟೇ. ಪ್ರಣಯವನ್ನು ವೈಭವೀಕರಿಸಿ ವ್ಯಕ್ತ ಪಡಿಸುವ ಬದಲು ಅದನ್ನು ಫೀಲ್ ಮಾಡುವಂತೆ ಮಾಡುವ ಈ ಘಳಿಗೆ ಇದೆಯಲ್ಲಾ...ಅದೇ ಪ್ರೀತಿಯ ಮಹತ್ತರವಾದ ಕಾಣಿಕೆ ಎಂದರೆ ಅತಿಶಯೋಕ್ತಿ ಆಗಲಾರದು. ಒಟ್ಟಿನಲ್ಲಿ, ಈ ಪ್ರೀತಿ, ಸ್ನೇಹ, ಬಾಂಧವ್ಯ ಇವೆಲ್ಲವೂ ಜೀವನದ ಭಾಗಗಳೇ ಆಗಿದ್ದರೂ ಎಲ್ಲವೂ ಮಿತಿಯಲ್ಲಿದ್ದರೆ ಚೆನ್ನ ಅಲ್ಲವೇ?

Rating
No votes yet

Comments