ಪ್ರೀತಿಯಿಲ್ಲದ ಮೇಲೆ...

ಪ್ರೀತಿಯಿಲ್ಲದ ಮೇಲೆ...

ಕಾರಂತರು ಎಲ್ಲೋ ಹೇಳಿದ ಮಾತಿದು. ಅವರಿಗೆ ಕಿರಿಯ ಸಾಹಿತಿಗಳು, ಇನ್ನೂ `ಬರೆಯುವುದೋ ಬೇಡವೋ' ಅಂತ ಯೋಚಿಸುತ್ತಿರುವವರು ಪತ್ರ ಬರೆಯುವುದಿತ್ತಂತೆ. ಹೀಗೀಗೆ, ನಾನೊಂದು ಕತೆ ಬರೆಯಬೇಕಂತ ಇದ್ದೇನೆ, ತಮ್ಮ ಸಲಹೆ ಬೇಕು ಅಂತಲೋ, ನಾನೊಂದು ಕಾದಂಬರಿ ಬರೆಯಬೇಕಂತ ಇದ್ದೇನೆ ತಮ್ಮ ಆಶೀರ್ವಾದ ಬೇಕು ಅಂತಲೋ ಬರೆದ ಪತ್ರಗಳು. ಕಾರಂತರು ಅವರಿಗೆಲ್ಲ ಸಾಮಾನ್ಯವಾಗಿ ಬರೆಯುತ್ತಿದ್ದ ಮಾತೊಂದಿತ್ತಂತೆ. ಬೇರೆಯವರಿಗೆ ಹೇಳಬೇಕಾದಂಥ ವಿಚಾರ ನಿಮ್ಮಲ್ಲಿ ಇದೆಯೋ. ಅದನ್ನು ನೀವು ಯಾಕೆ ಬರೆಯಬೇಕು ಅಂತ ನಿಮಗೆ ಗೊತ್ತಿದೆಯೋ. ನೀವು ಬರೆದಿದ್ದನ್ನು ನಾನು ಯಾಕೆ ಓದಬೇಕು ಅಂತ ಯೋಚಿಸಿದ್ದೀರೋ.

ನಮ್ಮ ಅನೇಕ ಸಾಹಿತಿಗಳು ನಾನೇಕೆ ಬರೆಯುತ್ತೇನೆ ಎಂಬ ಬಗ್ಗೆ ಬರೆದಿದ್ದಾರೆ. ಬರೆಯುವ ಬಯಕೆ ಅದಮ್ಯವೂ, ಅದು ಅತ್ಯಂತ ಸೂಕ್ಷ್ಮವೂ, ಅದು ಆಯಾ ಭಾಷೆಯ ಅಮ್ಮನ ಸೇವೆಯೂ ಎಂದೆಲ್ಲ ಓದಿದ್ದೇವೆ. ಇರಬಹುದು ಅಂತ ಸುಮ್ಮನಿರುತ್ತೇವೆ. ಹಾಗೆಯೇ ನಾವೂ ನಾವೇಕೆ ಓದುತ್ತೇವೆ ಎಂಬ ಪ್ರಶ್ನೆಯನ್ನೂ ಹಾಕಿಕೊಂಡು ಇಂಥದ್ದೇ ಉತ್ತರಗಳನ್ನು ಕೊಟ್ಟುಕೊಂಡು ಬೇಕಿದ್ದರೆ ಇದೆಲ್ಲ ಕನ್ನಡಮ್ಮನ ಸೇವೆ ಎಂದುಕೊಂಡು ಖುಶಿಪಡಬಹುದು!

ನಮ್ಮ ದೇಶದ ಪುರಾತನ ಸಾಹಿತ್ಯಕೃತಿಗಳನ್ನು ಗಮನಿಸಿದರೆ ಅವುಗಳಲ್ಲಿ ಧರ್ಮ, ನ್ಯಾಯ, ನೀತಿ, ಆತ್ಮ, ಮೋಕ್ಷಗಳೆಲ್ಲ ತುಂಬಿಕೊಂಡಂತಿದೆ. ಎಲ್ಲ ದೇಶಗಳಿಗೂ ಇದು ನಿಜವಿರಬಹುದೇನೋ. ಹೌದೋ ಅಲ್ಲವೋ ಯೋಚಿಸಿ, ಸರಿ ಸುಮಾರು ಎಲ್ಲ ಪುರಾಣಗಳು, ವೇದ, ಉಪನಿಷತ್ತುಗಳು, ಬ್ರಹ್ಮಸೂತ್ರಗಳು, ಭಗವದ್ಗೀತೆ, ಭಾಗವತ, ರಾಮಾಯಣ, ಮಹಾಭಾರತ ಎಲ್ಲವೂ ತಾನು ಯಾರು, ಎಲ್ಲಿಂದ ಬಂದೆ, ಯಾತಕ್ಕೆ ಬಂದೆ, ತಾನು ಏನು ಮಾಡಬೇಕಿಲ್ಲಿ, ಸಾವು ಎಂದರೆ ಏನು, ಸತ್ತ ನಂತರ ಏನು, ಅದೇನೇ ಇದ್ದರೂ ಇಲ್ಲಿನ ಬದುಕಿಗೂ ಅದಕ್ಕೂ ಏನಾದರೂ ಸಂಬಂಧ ಇದೆಯೆ, ಸತ್ತ ಜೀವಿ ಮತ್ತೆ ಹುಟ್ಟಿಬರುತ್ತದೆಯೆ, ಬಂದರೆ ಏನಾಗಿ ಬರುತ್ತದೆ, ಮತ್ತೆ ಮನುಷ್ಯನಾಗಿಯೇ ಬರುತ್ತದಾ, ಇಲ್ಲವಾದರೆ ಅದಕ್ಕೆಲ್ಲ ಒಂದು ಕಾರ್ಯಕಾರಣ ಸಂಬಂಧ ಇದ್ದೀತೆ, ಹಾಗಾದರೆ ಇಲ್ಲಿ ಬದುಕಬೇಕಾದ ಬಗೆಯ ಕುರಿತಂತೆ ಒಂದು ಅಗಮ್ಯ, ಅಮೂರ್ತ, ಅಸ್ಪಷ್ಟ, ಅಲಿಖಿತ ಆದೇಶ ಇದೆಯೆ? ಇದ್ದರೆ ಅದೇನಿರಬಹುದು ಎಂಬ ಕುರಿತು ಮನುಷ್ಯ ನಡೆಸಿದ ನಿರಂತರ ಶೋಧ ಇರಬಹುದೇ ಅನಿಸಿದೆ.

ಇದೇ ಶೋಧ ತಿಳಿದೋ ತಿಳಿಯದೆಯೋ ನಮ್ಮ ಎಲ್ಲ ಸಾಹಿತ್ಯದ ಹಿಂದಿನ ಪ್ರೇರಣೆ, ನಮ್ಮ ಎಲ್ಲ ಓದಿನ ಹಿಂದಿರುವ ಪ್ರೇರಣೆ ಎಂದು ನಾನು ತಿಳಿದಿದ್ದೇನೆ. ಅದು ಬರೇ ಇನ್ನೊಂದು ಜೀವಿಯ ಕಷ್ಟ ಸುಖ ತಿಳಿಯುವ ಕುತೂಹಲವಷ್ಟೇ ಇದ್ದಿರಲಾರದು. ಇಲ್ಲ, ನಿಮಗೆ ಬೇರೆ ಏನೋ ಹೊಸತು ಹೊಳೆದಿದ್ದರೆ, ಅದನ್ನು ನನಗೂ ಹೇಳಿ. ತುಂಬ ಹಿಂದೆ ಯಾರೋ ಹೇಳಿದ್ದರು, ಮನಸ್ಸು - ಈಶ ಮನುಷ್ಯ ಅಂತೆಲ್ಲ. ಮೊನ್ನೆ ಮೊನ್ನೆ ನೋಡಿದ ಯಕ್ಷಗಾನದಲ್ಲಿ ರಾಮ ಎಂದರೆ ನಾರಾಯಣನು ನರನಾಗಿ ಹುಟ್ಟಿಬಂದು ನರನು ನಾರಾಯಣನಾಗುವ ದಾರಿ ಯಾವುದು ಅಂತ ಜಗತ್ತಿಗೆ ತೋರಿಸಿಕೊಟ್ಟವ ಅಂತಲೇ ಅರ್ಥ ಎಂದಿದ್ದು ನೆನಪಿದೆ. ಉತ್ತರಾಯಣ, ದಕ್ಷಿಣಾಯಣ ಎಲ್ಲ ಇರುವಂತೆಯೇ ರಾಮಾಯಣ; ಸೂರ್ಯ ನಡೆಯುವ ದಾರಿ ಇರುವ ಹಾಗೆಯೇ ಇದು ರಾಮ ನಡೆದ ದಾರಿ ಎಂದೆಲ್ಲ ಅಲ್ಲಿ ವಿವರಣೆ ಬಂತು. ಇದು ಬರೇ ರಾಮನಿಗೆ, ರಾಮಾಯಣಕ್ಕೆ ಸಲ್ಲಬೇಕಾಗಿಲ್ಲ. ಸಮಸ್ತ ಸಾಹಿತ್ಯ ಇಂಥದೇ ಒಂದು `ದಾರಿ'ಯ ಮರು ಅನ್ವೇಷಣೆ, ಶೋಧ ಅನಿಸುವುದಿಲ್ಲವೆ?

ಅನಿಸುತ್ತದೆ ಮತ್ತು ಅನಿಸುವುದಿಲ್ಲ ಎಂದೇ ಭಾವಿಸುವ.

ಅನಿಸಿದರೆ ಅದು ಕ್ರಮೇಣ ಇನ್ನಷ್ಟು ಮತ್ತಷ್ಟು ಸಂಕೀರ್ಣವಾಗಿ ಮನುಷ್ಯ ಸ್ವಭಾವಗಳನ್ನು, ಮನುಷ್ಯ ಸಂಬಂಧಗಳನ್ನು, ಮನುಷ್ಯ ಅನಿವಾರ್ಯವಾಗಿ ಹೊರಬೇಕಾಗಿ ಬಂದ ಈ ಅನಿಶ್ಚಿತ ಮನಸ್ಸು ಮತ್ತು ಅಲ್ಲಿ ಹುಟ್ಟುವ ಅಸಂಖ್ಯ ಅತಿರೇಕಗಳನ್ನೆಲ್ಲ ಅರ್ಥೈಸುತ್ತ, ಅದರಲ್ಲೇ ಹಣ್ಣಾಗುತ್ತ, ಹಣ್ಣಾಗಿ ಸಿಕ್ಕ ಫಲಶ್ರುತಿಯನ್ನು ಅಂಥ ಶೋಧದ ಹಾದಿಯಲ್ಲಿರುವ ಉಳಿದ ಮಂದಿಗೆ ಒದಗಿಸುತ್ತ ಮುಂದೆ ಸಾಗಬೇಕಾಗುತ್ತದೆ. ನಮ್ಮ ಅನೇಕ ಚಿಂತಕರು, ಸಾಧಕರು, ತತ್ತ್ವಜ್ಞಾನಿಗಳು ಹೇಳಿದ್ದಾರೆ, ಪ್ರತಿಯೊಬ್ಬನೂ ತನ್ನ ಸಾಧನೆಯ ಹಾದಿಯನ್ನು ತಾನೇ ಕಂಡುಕೊಳ್ಳಬೇಕೇ ಹೊರತು ಇನ್ಯಾರೋ ಶೋಧಿಸಿದ ರೆಡಿಮೇಡ್ ಹಾದಿ ಅನ್ನುವಂಥದು ಒಂದು ಇಲ್ಲವೇ ಇಲ್ಲ ಅಂತ. ಆದರೆ ಇತರರು ನಡೆಸಿದ ಇದುವರೆಗಿನ ಶೋಧ ನಮಗೆ ಸಹಾಯಕವಾಗಬಹುದು, ಅಷ್ಟೇ. ಅದೇ ನಮ್ಮದೂ ಆಗಲಾರದು! ಕ್ರಿಸ್ತ ತನ್ನ ಶಿಲುಬೆಯನ್ನು ತಾನೇ ಹೊತ್ತಿದ್ದರ ಮರ್ಮ ಇದೇ ಅಂತೆ! ಸಾಹಿತ್ಯ ನಮಗೆ ಬದುಕನ್ನು, ಸಹಜೀವಿಗಳನ್ನು, ಅದೆಲ್ಲದರ ಮೂಲಕವೇ ಸ್ವತಃ ನಮ್ಮನ್ನೂ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಹಾಗೆ ಮಾಡಿ ಇಲ್ಲಿ ಅರ್ಥಪೂರ್ಣವಾಗಿ ಬದುಕುವುದನ್ನು ಕಲಿಸುತ್ತದೆ. ಕಲಿತಿದ್ದು ಸಾರ್ಥಕವಾಗುವಂತೆ ಕೆಲವರಾದರೂ ಬದುಕಿರುವುದನ್ನೂ ಕಾಣುತ್ತೇವೆ. ಎಲ್ಲರಿಗೂ ಅದು ಸಾಧ್ಯವಾಗಲೇ ಬೇಕೆಂದಿಲ್ಲವಲ್ಲ. ತಿಳಿದುಕೊಳ್ಳುವುದೇ ಬದುಕಾಗಿಬಿಟ್ಟರೆ ನಮ್ಮ ಜ್ಞಾನವೇ ಬದುಕಬೇಕಿತ್ತು, ನಾವೇಕೆ ಇರಬೇಕು, ಅದನ್ನು ಬದುಕಲು!

ಅನಿಸುವುದಿಲ್ಲ ಎನ್ನುವವರು ಸಾಹಿತ್ಯದಿಂದ ಮನರಂಜನೆಯ ಆಚೆ ಏನನ್ನೂ ನಿರೀಕ್ಷಿಸುವುದಿಲ್ಲ ಅನ್ನಬಹುದೆ? ಮನರಂಜಿಸದ ಸಾಹಿತ್ಯ ಸಾಹಿತ್ಯ ಅನಿಸಿಕೊಳ್ಳುವುದಿಲ್ಲ ಎನ್ನುವುದು ಸತ್ಯವೇ. ದರ್ಶನ ಶಾಸ್ತ್ರಗಳನ್ನು ಉಪನಿಷತ್ತುಗಳಾಗಿ ಸಂಸ್ಕರಿಸಿದ ನಂತರವೂ ಅದು ಎಲ್ಲರನ್ನೂ ತಲುಪಲಿಲ್ಲ ಅಂತ ಭಾಗವತ, ಪುರಾಣಗಳು, ಮಹಾಕಾವ್ಯಗಳು ಹುಟ್ಟಿಕೊಂಡಿದ್ದಲ್ಲವೆ? ಗೀತೆ ಮಹಾಭಾರತದಲ್ಲಿದ್ದರೂ ಮಹಾಭಾರತದಿಂದ ಅಷ್ಟೋ ಇಷ್ಟೋ ಬೇರೆಯೇ ಆಗಿ ಉಳಿಯುವುದು ಸತ್ಯವಲ್ಲವೆ? ಈ ಕುರಿತ ಚರ್ಚೆ ಹಾಗಿರಲಿ. ಅದು ಸಾಹಿತ್ಯದ ಉದ್ದೇಶವೇನು, ಜನಪ್ರಿಯ ಸಾಹಿತ್ಯ ಎಂದು ಕೆಲವರು ಮೂಗು ಮುರಿಯುವುದೇಕೆ, ಶ್ರೇಷ್ಠ ಸಾಹಿತ್ಯ ಜನಪರವಾಗಿಲ್ಲ ಎಂಬುದು ಸುಳ್ಳೆ, ಜನಪ್ರಿಯ ಸಾಹಿತ್ಯವೂ ಶ್ರೇಷ್ಠವಾಗಿರಬಾರದೆಂದಿದೆಯೆ ಎಂಬೆಲ್ಲ ಪ್ರಶ್ನೆಗಳನ್ನು ಹುಟ್ಟಿಸಿ ನಾವೆಲ್ಲ ನಮಗಿಂತ, ನಮ್ಮ ಸಾಹಿತ್ಯಕ್ಕಿಂತ ದೊಡ್ಡದಾದ ಬದುಕನ್ನು ಮರೆತು, ಇವೆಲ್ಲಕ್ಕಿಂತ ಸಣ್ಣದಿದ್ದು ಇನ್ನೆರಡೇ ಕ್ಷಣದಲ್ಲೋ ನಾಳೆಯೋ ಮುಗಿದೇ ಬಿಡಬಹುದಾದಷ್ಟು ಸಣ್ಣದೂ ಅನಿಶ್ಚಿತವೂ ಆದ ಈ ಬದುಕಿನಲ್ಲಿ ಸುಮ್ಮನೇ ಒಣ ಜಗಳಕ್ಕಿಳಿಯುವಂತೆ ಮಾಡುತ್ತದೆ. ಅಷ್ಟು ಸಣ್ಣವರಾಗುವುದೇಕೆ?

ನನ್ನದೇನನ್ನೋ ನಿಮ್ಮ ಜೊತೆ ಹಂಚಿಕೊಳ್ಳಬೇಕು, ನಿಮ್ಮ ಜೊತೆ ಹಂಚಿಕೊಳ್ಳಬಹುದು ಎಂದು ಮೊತ್ತ ಮೊದಲಾಗಿ ನನಗೆ ಅನಿಸಬೇಕಾದರೆ ನನಗೆ ನಿಮ್ಮೆಲ್ಲರನ್ನೂ ತೆರೆದ ಮನಸ್ಸಿನಿಂದ ಪ್ರೀತಿಸುವುದು ಸಾಧ್ಯವಾಗಬೇಕು! ನಿಮ್ಮಲ್ಲಿ ಒಬ್ಬನೇ ಒಬ್ಬನ ಮೇಲೆ ನನ್ನ ಮನಸ್ಸಿನ ಯಾವುದಾದರೊಂದು ಮೂಲೆಯಲ್ಲಿ ಕೂತು ಕೊರೆಯುವ ಕೆಟ್ಟ ಭಾವನೆ ಇದ್ದದ್ದೇ ಆದರೆ ನನಗೆ ಬರೆಯುವುದು ಕಷ್ಟವಾಗುತ್ತದೆ, ನನ್ನ ಬರವಣಿಗೆ ಕೃತಕವಾಗುತ್ತದೆ. ಇಡೀ ಜಗತ್ತಿಗೆ ಪ್ರೀತಿಯಿಂದ ತೆರೆದುಕೊಳ್ಳುವ ಕ್ರಿಯೆ ಅದು, ಬರೆಯುವುದು.

ಆದರೆ ಏನಾಗುತ್ತಿದೆ ನೋಡಿ. ಸಾಹಿತಿಯೊಬ್ಬ ಸ್ವಲ್ಪ ಹೆಸರು, ಖ್ಯಾತಿಗಳಿಸಿದ್ದೇ ಸಂಪಾದಕರ, ಬೇರೆ ಸಾಹಿತಿಗಳ ನಂಟು ಸಾಧಿಸುತ್ತಾನೆ. ಅಥವಾ ಮೊದಲು ಹಾಗೆ ನಂಟು ಸಾಧಿಸಿಯೇ ಹೆಸರು ಕೀರ್ತಿಗಳಿಸುತ್ತಾನೆ! ಕ್ರಮೇಣ ಬೇರೆ ಸಾಹಿತಿಗಳ ಬಗ್ಗೆ ವಿಷ ಕಕ್ಕುವುದಕ್ಕೆ ತೊಡಗುತ್ತಾನೆ. ಅವರಿವರ ಬಗ್ಗೆ ಬೇಕಾಗಿಯೋ ಬೇಡವಾಗಿಯೋ ಅಭಿಪ್ರಾಯಗಳನ್ನು ಹಂಚತೊಡಗುತ್ತಾನೆ. ಅಷ್ಟರಲ್ಲಿ ಅವನ ಅಭಿಪ್ರಾಯವನ್ನು ಮುಖಬೆಲೆಗೇ ಸ್ವೀಕರಿಸುವವರು, ಹಾಗೆ ಮಾಡದೆ ಉಪಾಯವಿಲ್ಲದವರು, ಸಮಯವಿಲ್ಲದವರು, ನೇರ ಸಂಪರ್ಕವಿಲ್ಲದವರು ಎಲ್ಲ ಹುಟ್ಟಿಕೊಂಡಿರುತ್ತಾರೆ. ಹೀಗೆ ಸಾಹಿತಿ ವ್ಯವಸ್ಥಿತವಾಗಿ ಕೆಲವಾದರೂ ಗೋಡೆಗಳನ್ನೆಬ್ಬಿಸುತ್ತ ಹೋಗುತ್ತಾನೆ. ತನ್ನ ಹೆಸರು ಮತ್ತೆ ಮತ್ತೆ ಅಚ್ಚಾಗಬೇಕೆಂಬ ಹಪಹಪಿಕೆಯಲ್ಲೇ ಬೇರೆಯವರ ಹೆಸರು ಬರದಂತೆ ಏನು ಮಾಡಬಹುದು ಎಂದೆಲ್ಲ ಯೋಚಿಸುವುದು, ಪ್ರಯತ್ನಿಸುವುದು ತೊಡಗುತ್ತದೆ. ನೀವೂ ಇಂಥವರನ್ನು ನೋಡಿರುತ್ತೀರಿ. ನಡುವೆ ಇವರು ಬೇರೆಯವರು ಬರೆದಿದ್ದನ್ನು ಓದುವ ಅಭ್ಯಾಸ ಬಿಟ್ಟಿರುತ್ತಾರೆ, ಅಂಥದ್ದು ಇದ್ದಿದ್ದರೆ. ಇನ್ನೂ ಕೆಲವರು, ಇವರ ಬಳಿ ಯಾರೋ ಸಂಪಾದಕರು ಅದೂ ಇದೂ ಕೇಳದೇ ಇದ್ದರೆ ಸ್ವತಃ ತಾವಾಗಿಯೇ ಏನಾದರೂ ಬರೆಯುವುದನ್ನೂ ಬಿಟ್ಟಿರುತ್ತಾರೆ! ಯಾಕೆಂದರೆ ತಾನು ಬದುಕುತ್ತಿರುವ ಜಗತ್ತನ್ನು ಅದರಲ್ಲಿರುವ `ತನ್ನಂಥ' ಕೆಲವೇ ಒಳ್ಳೆಯ ಅಂಶಗಳಿಗಾಗಿಯಾದರೂ ಮುಗ್ಧವಾಗಿ ಪ್ರೀತಿಸಬಲ್ಲ ಸಾಧ್ಯತೆಯಿಂದಲೇ ಇವರು ದೂರವಾಗಿರುತ್ತಾರೆ. ಇಂಥವರ ಸಾಹಿತ್ಯ ನಮಗಾದರೂ ಏನನ್ನು ಕೊಡುತ್ತದೆ ಎಂಬ ಮಾತು ಬಿಡಿ. ಸ್ವತಃ ಇವರು ಒಂದು ದಿನ ಏನಾಗಿರುತ್ತಾರೆ ಸ್ವಲ್ಪ ಯೋಚಿಸಿ!

ನಾನೇಕೆ ಬರೆಯುತ್ತೇನೆ, ನೀವೇಕೆ ಅದನ್ನು ಓದಬೇಕು ಎಂದು ಬರೆಯುವ ಪ್ರತಿಯೊಬ್ಬರೂ ಆಗಾಗ ಗುಟ್ಟಿನಲ್ಲಾದರೂ ಕೇಳಿಕೊಳ್ಳುವುದು ಒಳ್ಳೆಯದೇ. ಒಂದು ಹಂತದ ನಂತರ ಅದೂ ಸಾಧ್ಯವಾಗುವುದಿಲ್ಲ. ಅದು ಸಾಧ್ಯವಾಗದಿದ್ದರೂ ಬೇರೆಯವರು ಯಾಕೆ ಬರೆಯಬೇಕು, ಅದನ್ನು ಹೇಗೆ ನಿಲ್ಲಿಸಬಹುದು ಎಂದು ಯೋಚಿಸುವುದನ್ನಾದರೂ ನಿಲ್ಲಿಸಿದರೆ ಸ್ವತಃ ಸಾಹಿತಿಗೂ, ಅವನ ಸಾಹಿತ್ಯಕ್ಕೂ ಒಳ್ಳೆಯದಾಗುತ್ತದೆ ಅನಿಸುವುದಿಲ್ಲವೆ? ಒಂದು ಹಂತದ ನಂತರ ಅದೂ ಸಾಧ್ಯವಾಗುವುದಿಲ್ಲವೇನೋ! ಕಣ್ಣೆದುರೇ ಒಬ್ಬ `ಸಾಹಿತಿ' ತನ್ನ ಒಂದಾನೊಂದು ಕಾಲದ ಗೆಳೆಯನಾಗಿದ್ದ ಇನ್ನೊಬ್ಬನ ಮೇಲೆ ಹೀಗೇ ಗೋರಿ ಎಳೆದಿದ್ದನ್ನು ನೋಡಿ ಇಷ್ಟೆಲ್ಲ ಬರೆದೆ, ಸಂಕಟದಿಂದ; ನನ್ನ ಗೆಳೆಯ ಈ ಮಟ್ಟಕ್ಕಿಳಿದನಲ್ಲಾ ಅಂತ, ಆ ಇನ್ನೊಬ್ಬ ಪ್ರೀತಿಯಿಂದ ಈ ಜಗತ್ತಿನೊಂದಿಗೆ ಬೆರೆಯುವುದು, ಬರೆಯುವುದು ತೊಡಕಿನ ಹಾದಿಯಾಗುವುದಲ್ಲ ಅಂತ. ಇನ್ನೇನಿಲ್ಲ ಬಿಡಿ.

Rating
No votes yet