ಫಾದರ್ ಸೆರ್ಗಿಯಸ್ ಅಧ್ಯಾಯ ಎಂಟು (೧)
ಎಂಟು
ಪಾಶೆನ್ಕಾ ಈಗ ಪುಟ್ಟ ಪಾಶೆನ್ಕಾ ಆಗಿರಲಿಲ್ಲ. ಈಗವಳು ಪ್ರಾಸ್ಕೋವ್ಯಾ ಕಿಖಾಯ್ಲೋವ್ನಾ, ಸುಕ್ಕುಗಟ್ಟಿದ ಚರ್ಮದ, ಬಡಕಲು ಮೈಯ ಮುದುಕಿ, ನಿಷ್ಪ್ರಯೋಜಕ ಕುಡುಕ ಅಳಿಯ, ಸರ್ಕಾರೀ ಗುಮಾಸ್ತ ಮಾವ್ರಿಕ್ಯೇವ್‌ನ ಅತ್ತೆ. ಅವನು ಕೆಲಸ ಕಳೆದುಕೊಳ್ಳುವ ಮುನ್ನ ಇದ್ದ ಹಳ್ಳಿಯಲ್ಲೇ ಮಗಳು, ರೋಗಿಷ್ಟ ಅಳಿಯ, ಮತ್ತು ಐದು ಮೊಮ್ಮಕ್ಕಳ ಸಂಸಾರ ನಿಭಾಯಿಸಿಕೊಂಡು ಇದ್ದಳು. ಹಳ್ಳಿಯ ವ್ಯಾಪಾರಸ್ಥರ ಹೆಣ್ಣುಮಕ್ಕಳಿಗೆ ಸಂಗೀತಪಾಠ ಹೇಳಿ ಕಾಸು ಸಂಪಾದಿಸುತ್ತಿದ್ದಳು. ಒಬ್ಬರಿಗೆ ಒಂದು ಗಂಟೆಯಹಾಗೆ ದಿನಕ್ಕೆ ನಾಲ್ಕು, ಕೆಲವೊಮ್ಮೆ ಐದು ಪಾಠ ಹೇಳುತ್ತಾ, ಒಂದು ಪಾಠಕ್ಕೆ ಐವತ್ತು ಕೊಪೆಕ್‌ನ ಹಾಗೆ ತಿಂಗಳಿಗೆ ಅರುವತ್ತು ರೂಬಲ್ ಸಂಪಾದಿಸುತ್ತಿದ್ದಳು. ಅಳಿಯನಿಗೆ ಯಾವುದಾದರೂ ಕೆಲಸ ಸಿಗುವವರೆಗೆ ಅವಳ ಈ ಸಂಪಾದನೆಯೇ ಸಂಸಾರಕ್ಕೆ ಆಧಾರ. ತನ್ನ ಅಳಿಯನಿಗೆ ಯಾವುದಾದರೂ ಕೆಲಸ ಕೊಡಿಸಿ ಎಂದು ನಂಟರಿಗೆ, ಪರಿಚಯಸ್ಥರಿಗೆ ಕಾಗದಗಳನ್ನು ಬರೆದಿದ್ದಳು. ಸೆರ್ಗಿಯಸ್‌ನಿಗೂ ಕಾಗದ ಹಾಕಿದ್ದಳು. ಆದರೆ ಅದು ತಲುಪುವಮೊದಲೇ ಅವನು ಮಠ ಬಿಟ್ಟು ಹೊರಟುಬಿಟ್ಟಿದ್ದ.
ಅವತ್ತು ಶನಿವಾರ. ರೇಸಿನ್ ಬ್ರೆಡ್ ಮಾಡಲು ಹಿಟ್ಟು ನಾದುತ್ತಿದ್ದಳು. ಅವರಪ್ಪನ ಎಸ್ಟೇಟಿನಲ್ಲಿದ್ದ ಕೆಲಸದವನೊಬ್ಬ ಬಹಳ ಚೆನ್ನಾಗಿ ರೇಸಿನ್ ಬ್ರೆಡ್ ಮಾಡುತ್ತಿದ್ದನ್ನು ನೋಡಿ ಕಲಿತಿದ್ದಳು. ಮೊಮ್ಮಕ್ಕಳಿಗೆ ಭಾನುವಾರದ ವಿಶೇಷವೆಂದು ಈಗ ಹಿಟ್ಟು ನಾದುತ್ತಿದ್ದಳು.
ಮಗಳು ಮಾಷಾ ಪುಟ್ಟ ಮಗುವನ್ನು ಆಡಿಸಿಕೊಂಡಿದ್ದಳು. ದೊಡ್ಡ ಹುಡುಗ, ಹುಡುಗಿ ಸ್ಕೂಲಿಗೆ ಹೋಗಿದ್ದರು. ರಾತ್ರಿಯೆಲ್ಲ ನಿದ್ರೆಮಾಡಿರದ ಅಳಿಯ ಈಗ ನಿದ್ದೆ ಹೋಗಿದ್ದ. ಪಾಶೆನ್ಕಾ ಕೂಡಾ ರಾತ್ರಿ ನಿದ್ರೆಮಾಡಿರಲಿಲ್ಲ. ಗಂಡನ ಮೇಲೆ ಸಿಟ್ಟು ಮಾಡಿಕೊಂಡಿದ್ದ ಮಗಳಿಗೆ ಸಮಾಧಾನ ಹೇಳುತ್ತಾ ಕೂತಿದ್ದಳು.
ಅಳಿಯನನ್ನು ತಿದ್ದುವುದಕ್ಕೆ ಆಗುವುದಿಲ್ಲ, ಅವನ ಮೈಯಲ್ಲಿ ಶಕ್ತಿ ಇಲ್ಲ, ಅವನ ಮಾತು, ವರ್ತನೆ ಯಾವುದನ್ನೂ ಬದಲಾಯಿಸಲು ಆಗುವುದಿಲ್ಲ ಎಂದು ಅವಳಿಗೆ ತಿಳಿದುಹೋಗಿತ್ತು. ಮಗಳು ಬೈದರೆ ಕೋಪಮಾಡಿಕೊಂಡರೆ ಮನಸ್ತಾಪ ಹೆಚ್ಚಾಗುವುದು ಬಿಟ್ಟರೆ ಇನ್ನೇನೂ ಅಗುವುದಿಲ್ಲವೆಂದು 'ಮಗಳೇ ಮನಸ್ಸು ಕೆಡಿಸಿಕೊಳ್ಳಬೇಡ' ಎಂದು ಸಮಾಧಾನ ಹೇಳುತ್ತಿದ್ದಳು. ಜಗಳ, ಮನಸ್ತಾಪ, ಸಿಟ್ಟು, ಇರಿಸುಮುರಿಸು ತಪ್ಪಿಸುವುದಕ್ಕೆ ತನ್ನ ಕೈಲಾದ್ದನ್ನೆಲ್ಲ ಮಾಡುತ್ತಿದ್ದಳು. ಸಂಬಂಧ ಕೆಟ್ಟರೆ ಸುಖವಿಲ್ಲ, ಮನಸ್ಸು ಕಹಿಯಾದರೆ ಬದುಕು ಹಿತವಿಲ್ಲ ಅನ್ನುವವಳು ಅವಳು. ಯಾರಾದರೂ ಕೋಪಮಾಡಿಕೊಂಡರೆ ಅವಳಿಗೇ ಯಾರಾದರೂ ಹೊಡೆದರೇನೋ ಎಂಬಂತೆ ಹಿಂಸೆಪಟ್ಟುಕೊಳ್ಳುತ್ತಿದ್ದಳು. ದುರ್ವಾಸನೆಯನ್ನು, ಕರ್ಕಶ ಶಬ್ದವನ್ನು, ಪೆಟ್ಟನ್ನು ಸಹಿಸಿಕೊಳ್ಳುವಹಾಗೆಯೇ ಇತರರ ಕೋಪವನ್ನೂ ಸಹಿಸಿಕೊಳ್ಳುತ್ತಿದ್ದಳು.
ಅಡುಗೆಯ ತನ್ನ ಕೌಶಲವನ್ನು ತಾನೇ ಮೆಚ್ಚಿಕೊಳ್ಳುತ್ತಾ ಹಿಟ್ಟು ಸರಿಯಾಗಿ ಕಲೆಸುವುದು ಹೇಗೆ ಎಂದು ಲುಕೇರಿಯಾಗೆ ಹೇಳಿಕೊಡುತ್ತಿದ್ದಳು. ಆಗ ಆರು ವರ್ಷದ ಅವಳ ಪುಟ್ಟ ಮೊಮ್ಮಗ ಮಿಷಾ ಸೊಟ್ಟ ಕಾಲು ಹಾಕುತ್ತಾ ಅಡುಗೆಮನೆಗೆ ಓಡಿಬಂದ. ತೇಪೆ ಹಚ್ಚಿದ ಚೊಣ್ಣದೊಳಗೆ ಅವನ ಕಾಲು ಬಡಕಲಾಗಿ ಕಾಣುತ್ತಿದ್ದವು.
'ಅಜ್ಜೀ, ಯಾರೋ ಮುದುಕ ಬಂದಿದ್ದಾನೆ. ನಿನ್ನನ್ನು ನೋಡಬೇಕಂತೆ. ನೋಡಿದರೆ ಭಯವಾಗುತ್ತದೆ' ಅಂದ.
ಲುಕೇರಿಯಾ ಆಚೆಗೆ ಹೋಗಿ ನೋಡಿಕೊಂಡು ಬಂದು, 'ಯಾರೋ ಯಾತ್ರೆಗೆ ಹೊರಟ ಮುದುಕ ಇರಬೇಕು...' ಅಂದಳು.
ಮೊಳಕೈಗಳವರೆಗೆ ಮೆತ್ತಿಕೊಂಡಿದ್ದ ಹಿಟ್ಟನ್ನು ಒರೆಸಿಕೊಂಡು, ಕೈಗಳನ್ನು ಏಪ್ರನ್ನಿಗೆ ತಿಕ್ಕಿಕೊಳ್ಳುತ್ತಾ, ಯಾಚಕನಿಗೆ ಐದು ಕೊಪೆಕ್ ಕಾಸು ಕೊಟ್ಟರಾಯಿತೆಂದು ಪಾಶೆನ್ಕಾ ಪರ್ಸು ತರಲು ಮಹಡಿ ಹತ್ತಿ ಹೋದಳು. ಆದರೆ ಪರ್ಸಿನಲ್ಲಿ ಹತ್ತು ಕೊಪೆಕ್ ನಾಣ್ಯಗಳನ್ನು ಬಿಟ್ಟರೆ ಬೇರೆ ಚಿಲ್ಲರೆ ಇಲ್ಲವೆಂದು ನೆನಪಿಗೆ ಬಂದು, ಅಷ್ಟೊಂದು ಕೊಡುವುದು ಹೇಗೆ ಎಂದು ಚಿಂತಿಸುತ್ತಾ, ಬ್ರೆಡ್ಡುಕೊಟ್ಟರಾಯಿತು ಎಂದುಕೊಂಡಳು. ಬ್ರೆಡ್ಡು ತೆಗೆದುಕೊಳ್ಳಲು ಅಡುಗೆಮನೆಯ ಅಲಮಾರಿನ ಬಾಗಿಲು ತೆಗೆಯುತ್ತಿರುವಾಗ 'ಬೇಡಿಕೊಂಡು ಬಂದ ಬಡವನಿಗೆ ಭಿಕ್ಷೆ ಹಾಕುವುದಕ್ಕೆ ಹಿಂಜರಿಯುತ್ತಿದ್ದೇನಲ್ಲಾ' ಅನ್ನಿಸಿ ನಾಚಿಕೆಯಾಯಿತು. ಜಿಪುಣತನದ ಆಲೋಚನೆಗೆ ಪರಿಹಾರವೆಂಬಂತೆ ದೊಡ್ಡ ಪೀಸು ಬ್ರೆಡ್ಡು ಮತ್ತು ಹತ್ತು ಕೊಪೆಕ್ ನಾಣ್ಯ ಎರಡನ್ನೂ ಬಾಗಿಲಲ್ಲಿ ನಿಂತಿದ್ದ ಮುದುಕನಿಗೆ ಕೊಟ್ಟಳು.
ಹಾಗೆ ಕೊಡುವಾಗ ತನ್ನ ಔದಾರ್ಯದ ಬಗ್ಗೆ ಹೆಮ್ಮೆ ಅನ್ನಿಸುವ ಬದಲು ಇಂಥವನಿಗೆ ಇಷ್ಟು ಸ್ವಲ್ಪ ಕೊಡುತ್ತಿದ್ದೇನಲ್ಲ ಅನ್ನಿಸಿ ಸಿಗ್ಗಾಯಿತು. ಬಂದಿದ್ದ ಮುದುಕ ಅಂಥ ಭಾವನೆ ಹುಟ್ಟಿಸಿದ್ದ.
ಭಿಕ್ಷೆ ಬೇಡಿಕೊಂಡೇ ಇನ್ನೂರು ಮೈಲು ನಡೆದು ಬಂದಿದ್ದರೂ, ಉಟ್ಟ ಬಟ್ಟೆ ಚಿಂದಿಯಾಗಿದ್ದರೂ, ಮೈ ಬಡಕಲಾಗಿ, ಮುಖವೆಲ್ಲ ಧೂಳಾಗಿ, ಚಿಕ್ಕದಾಗಿ ಕತ್ತರಿಸಿಕೊಂಡಿದ್ದ ತಲೆಗೂದಲು ಕೆದರಿದ್ದರೂ, ರೈತರ ಕ್ಯಾಪು, ಹರಕಲು ಬೂಟು ತೊಟ್ಟಿದ್ದರೂ ವಿನಯದಿಂದ ತಲೆ ಬಗ್ಗಿಸಿ ನಿಂತಿದ್ದರೂ, ಜನರನ್ನೆಲ್ಲ ಸೆಳೆಯುತ್ತಿದ್ದ ಅವನ ವ್ಯಕ್ತಿತ್ವದ ಆಕರ್ಷಣೆ ಕುಗ್ಗಿರಲಿಲ್ಲ. ಆದರೆ ಪಾಶೆನ್ಕಾಗೆ ಅವನ ಗುರುತು ಸಿಗಲಿಲ್ಲ. ನೋಡಿ ಮೂವತ್ತು ವರ್ಷಗಳೇ ಕಳೆದಿದ್ದರಿಂದ ಗುರುತು ಸಿಗುವುದು ಸಾಧ್ಯವೂ ಇರಲಿಲ್ಲ.
'ಕ್ಷಮಿಸಿ ಫಾದರ್, ನಿಮಗೆ ಹಸಿವಾಗಿದೆಯೋ ಏನೋ...'ಪಾಶೆನ್ಕಾ ಹೇಳಿದಳು.
ಅವನು ಬ್ರೆಡ್ಡು, ದುಡ್ಡು ಎರಡನ್ನೂ ತೆಗೆದುಕೊಂಡ. ಆದರೂ ಕದಲದೆ ಅವಳನ್ನೇ ನೋಡುತ್ತಾ ನಿಂತದ್ದು ಕಂಡು ಪಾಶೆನ್ಕಾಗೆ ಆಶ್ಚರ್ಯವಾಯತು.
'ಪಾಶೆನ್ಕಾ, ನಿನ್ನನ್ನು ನೋಡಲೆಂದೇ ಬಂದಿದ್ದೇನೆ. ದಯವಿಟ್ಟು ಹೊರಟು ಹೋಗು ಅನ್ನಬೇಡ.'
ಸುಂದರವಾದ ಕಪ್ಪು ಕಣ್ಣುಗಳಲ್ಲಿ ನೀರು ತುಂಬಿಕೊಂಡು ಅವಳನ್ನೇ ದಿಟ್ಟಿಸುತ್ತಿದ್ದ. ಆ ನೋಟದಲ್ಲಿ ಯಾಚನೆ ಇತ್ತು, ಒತ್ತಾಯವಿತ್ತು. ದಟ್ಟವಾಗಿ ಬೆಳೆದ ನೆರೆತ ಮೀಸೆಯ ಹಿಂದೆ ತುಟಿಗಳು ಕರುಣೆ ಹುಟ್ಟಿಸವುಂತೆ ಒಂದಿಷ್ಟೆ ಅಲುಗಿದವು. ಪಾಶೆನ್ಕಾ ಬತ್ತಿದೆಯಮೇಲೆ ಕೈ ಇಟ್ಟುಕೊಂಡು, ಬಾಯಿ ತೆರೆದು, ಕಣ್ಣರಳಿಸಿ, ಯಾತ್ರಿಕನನ್ನೇ ದಿಟ್ಟಿಸುತ್ತಾ ಕಲ್ಲಾಗಿ ನಿಂತುಬಿಟ್ಟಳು.
'ಹೌದಾ! ಸ್ಟೆಪಾ! ಸೆರ್ಗೆಯಿ! ಫಾದರ್ ಸೆರ್ಗಿಯಸ್! ಹೌದಾ!'
'ಹೌದು, ನಾನೇ,'
ಸೆರ್ಗಿಯಸ್ ಕುಗ್ಗಿದ ದನಿಯಲ್ಲಿ ಹೇಳಿದ, 'ಸೆರ್ಗಿಯಸ್ ಅಲ್ಲ, ಫಾದರ್ ಸೆರ್ಗಿಯಸ್ ಅಲ್ಲ, ಮಹಾ ಪಾಪಿ, ಸ್ತೆಪಾನ್ ಕಸಾಟ್ಸ್‌ಕಿ, ಮಹಾ ಪಾಪಿ, ದಿಕ್ಕು ತಪ್ಪಿದ ಪರದೇಶಿ. ದಯವಿಟ್ಟು ಹೋಗು ಅನ್ನಬೇಡ. ಸಹಾಯಮಾಡು!'
'ನಂಬುವುದಕ್ಕೇ ಆಗುತ್ತಿಲ್ಲ! ಎಂಥ ಗತಿ ಬಂದಿದೆಯಲ್ಲ ನಿನಗೆ! ಬಾ, ಒಳಗೆ ಬಾ!' ಕೈ ಚಾಚಿದಳು. ಆದರೆ ಅವನು ಅವಳ ಕೈ ಹಿಡಿಯದೆ ಸುಮ್ಮನೆ ಅವಳ ಹಿಂದೆಯೇ ಮನೆಯೊಳಕ್ಕೆ ಕಾಲಿಟ್ಟ.
ಎಲ್ಲಿರಬೇಕು ಅವನು? ಮನೆ ಚಿಕ್ಕದು. ಮೊದಲು ಅವಳದೊಂದು ಪುಟ್ಟ ರೂಮಿತ್ತು. ಈಗ ಮಗಳು ಮಾಷಾ, ಬಾಣಂತಿ; ಮಗು ನೋಡಿಕೊಂಡು ಅಲ್ಲಿದ್ದಾಳೆ.
'ಸದ್ಯ ಇಲ್ಲಿ ಕೂತಿರು' ಅನ್ನುತ್ತಾ ಅಡುಗೆಮನೆಯಲ್ಲಿದ್ದ ಬೆಂಚನ್ನು ತೋರಿಸಿದಳು.
ತಟ್ಟನೆ ಕುಳಿತುಕೊಂಡು, ಅಭ್ಯಾವಾಗಿಬಿಟ್ಟಿದ್ದ ರೀತಿಯಲ್ಲಿ ಮೊದಲು ಒಂದು ಭುಜದ ಪಟ್ಟಿ ಬಿಚ್ಚಿ, ಮತ್ತೆ ಇನ್ನೊಂದು ಭುಜದ್ದು ಕಳಚಿ ಬೆನ್ನಮೇಲಿನ ಚೀಲ ಇಳಿಸಿದ.
'ದೇವರೇ, ದೇವರೇ, ಹೇಗಿದ್ದವನು ಹೇಗಾಗಿದ್ದೀಯಲ್ಲ! ಫಾದರ್! ಎಷ್ಟೊಂದು ಹೆಸರಿತ್ತು, ಈಗ ನೋಡಿದರೆ...'
ಸೆರ್ಗಿಯಸ್ ಏನೂ ಮಾತನಾಡಲಿಲ್ಲ. ಸುಮ್ಮನೆ ಮುಗುಳುನಗುತ್ತಾ ಇಳಿಸಿದ ಚೀಲವನ್ನು ಬೆಂಚಿನ ಕೆಳಗೆ ಇಟ್ಟ.
'ಬಂದಿರುವುದು ಯಾರು ಗೊತ್ತಾ ಮಾಷಾ?' ಮಗಳ ಕೋಣೆಗೆ ಹೋಗಿ ಮೆಲ್ಲಗೆ ಅವಳ ಕಿವಿಯಲ್ಲಿ ಹೇಳಿದಳು. ತಾಯಿ ಮಗಳಿಬ್ಬರೂ ಸೇರಿ ಹಾಸುಗೆಯನ್ನೂ ಮಗುವಿನ ತೊಟ್ಟಿಲನ್ನೂ ಹೊರಕ್ಕೆ ಸಾಗಿಸಿ ಸೆರ್ಗಿಯಸ್‌ಗಾಗಿ ರೂಮನ್ನು ಸಿದ್ಧಮಾಡಿದರು.
ಪಾಶೆನ್ಕಾ ಅವನನ್ನು ರೂಮಿಗೆ ಕರೆದುಕೊಂಡು ಬಂದು 'ಇಲ್ಲಿ ರೆಸ್ಟು ತೆಗೆದುಕೋ. ರೂಮು ಚಿಕ್ಕದು. ಏನೂ ಅಂದುಕೊಳ್ಳಬೇಡ. ನಾನು ಈಗ ಹೋಗಬೇಕು' ಅಂದಳು.
'ಎಲ್ಲಿಗೆ?'
'ಮನೆ ಪಾಠ ಹೇಳುವುದಕ್ಕೆ. ಸಂಗೀತ ಹೇಳಿಕೊಟ್ಟು ಹೊಟ್ಟೆಪಾಡು ನೋಡಿಕೊಳ್ಳುತ್ತಿದ್ದೇನೆ. ಹೇಳಿಕೊಳ್ಳುವುದಕ್ಕೇ ನಾಚಿಕೆಯಾಗುತ್ತದೆ.'
'ಸಂಗೀತ? ಒಳ್ಳೆಯದೇ ಆಯಿತು. ನಿನ್ನ ಹತ್ತಿರ ಮಾತನಾಡಬೇಕು ಅಂತಲೇ ಬಂದಿದ್ದೇನೆ. ಯಾವಾಗ ಬಿಡುವಾಗಿರುತ್ತೀ?'
'ನಿನ್ನ ಜೊತೆ ಮಾತಾಡುವುದು ನನ್ನ ಪುಣ್ಯ. ಸಾಯಂಕಾಲ ಸಿಗುತ್ತೇನೆ, ಆಗದೇ?'
'ಸರಿ. ಒಂದು ಮಾತು. ನನ್ನ ಬಗ್ಗೆ ಯಾರ ಹತ್ತಿರವೂ ಏನೂ ಹೇಳಬೇಡ. ನಿನ್ನ ಮೇಲೆ ನಂಬಿಕೆ ಇಟ್ಟು ಬಂದಿದ್ದೇನೆ. ನಾನು ಎಲ್ಲಿದ್ದೇನೆ ಎಂದು ಯಾರಿಗೂ ಗೊತ್ತಿಲ್ಲ. ಗೊತ್ತಾಗುವುದು ನನಗೆ ಇಷ್ಟವಿಲ್ಲ.'
'ಅಯ್ಯೋ, ಮಗಳಿಗೆ ಹೇಳಿಬಿಟ್ಟೆನಲ್ಲ!'
'ಯಾರಿಗೂ ಹೇಳಬೇಡ ಅನ್ನು.'
ಸೆರ್ಗಿಯಸ್ ಬೂಟು ಕಳಚಿ ಮಲಗಿಕೊಂಡ. ಕೂಡಲೆ ನಿದ್ರೆ ಬಂದುಬಿಟ್ಟಿತು. ರಾತ್ರಿಯೆಲ್ಲ ನಿದ್ದೆ ಇರಲಿಲ್ಲ. ಮೂವತ್ತು ಮೈಲು ನಡೆದು ಬಂದಿದ್ದ.
ಪಾಶೆನ್ಕಾ ವಾಪಸ್ಸು ಬಂದಾಗ ಸೆರ್ಗಿಯಸ್ ಎದ್ದು ಕೂತು ಕಾಯುತ್ತಿದ್ದ. ಊಟಕ್ಕೂ ಹೊರಗೆ ಬಂದಿರಲಿಲ್ಲ. ಲುಕೇರಿಯಾ ತಂದುಕೊಟ್ಟ ಸೂಪು ಮತ್ತು ಪಾರಿಜ್ ತಿಂದಿದ್ದ.
'ನೀನು ಹೇಳಿದ್ದಕ್ಕಿಂತ ಬೇಗ ಬಂದುಬಿಟ್ಟೆಯಲ್ಲ? ಸೆರ್ಗಿಯಸ್ ಕೇಳಿದ, 'ಈಗ ಮಾತಾಡಬಹುದೇ?'
'ನಿನ್ನಂಥವರು ನಮ್ಮ ಮನೆಗೆ ಬರುವುದಕ್ಕೆ ನಾನು ಎಷ್ಟು ಪುಣ್ಯಮಾಡಿರಬೇಕೋ ಏನೋ! ಇವತ್ತು ಒಂದು ಮನೆಯ ಪಾಠ ತಪ್ಪಿಸಿದೆ. ಇನ್ನೊಂದು ದಿನ ಯಾವತ್ತಾದರೂ ಒಂದು ಗಂಟೆ ಹೆಚ್ಚಾಗಿ ಹೇಳಿಕೊಡುತ್ತೇನೆ. ನಿನ್ನನ್ನು ಬಂದು ಕಾಣಬೇಕು ಅನ್ನಿಸುತ್ತಿತ್ತು. ನಿನಗೆ ಕಾಗದವನ್ನೂ ಬರೆದಿದ್ದೆ. ನನ್ನ ಅದೃಷ್ಟ. ನೀನೇ ಬಂದುಬಿಟ್ಟಿದ್ದೀಯ!'
'ಪಾಶೆನ್ಕಾ, ನಾನು ಹೇಳುವುದು ಕೇಳಿಸಿಕೋ. ಸಾಯುತ್ತಿರುವವನು ದೇವರ ಎದುರಿಗೆ ತಪ್ಪೊಪ್ಪಿಗೆ ಮಾಡಿಕೊಳ್ಳುತ್ತಾನಲ್ಲ, ಹಾಗೆ ನಿನ್ನ ಎದುರಿಗೆ ಎಲ್ಲವನ್ನೂ ಹೇಳಿಬಿಡುತ್ತೇನೆ. ನಾನು ಸಂತನಲ್ಲ. ಸರಳ ಸಾಮಾನ್ಯ ಮನುಷ್ಯನೂ ಅಲ್ಲ. ದಾರಿ ತಪ್ಪಿದ ದುಷ್ಟ. ಪರಮ ಪಾಪಿ. ದುರಹಂಕಾರಿ. ಎಲ್ಲಾರಿಗಿಂತಲೂ ಕೆಟ್ಟವನೋ ಅಲ್ಲವೋ ಹೇಳಲಾರೆ. ಅತೀ ಕೆಟ್ಟವನಿಗಿಂತ ಕೆಟ್ಟವನು ನಾನು.'
ಪಾಶೆನ್ಕಾ ಕೊಂಚ ಹೊತ್ತು ಅವನನ್ನೇ ದಿಟ್ಟಿಸಿ ನೋಡಿದಳು. ಅವನು ನಿಜ ಹೇಳುತ್ತಿದ್ದಾನೆ ಅನ್ನಿಸಿತು. ಅವನ ಮಾತಿನ ಅರ್ಥ ಪೂರ್ತಿಯಾಗಿ ಆದಾಗ ಮರುಕದಿಂದ ಮುಗುಳ್ನಗುತ್ತಾ ಅವನ ಕೈಯನ್ನು ಒಮ್ಮೆ ನೇವರಿಸಿದಳು.
'ಇಲ್ಲದೆ ಇರುವುದನ್ನೆಲ್ಲ ಕಲ್ಪಿಸಿಕೊಂಡಿರಬೇಕು ಸ್ಟಿವಾ ನೀನು...'
'ಇಲ್ಲ ಪಾಶೆಂಕಾ, ನಾನು ವ್ಯಭಿಚಾರಿ, ಕೊಲೆಗಾರ, ದೈವದ್ರೋಹಿ, ಮೋಸಗಾರ.'
'ದೇವರೇ! ಏನು ಮಾತು ಅಂತ ಆಡುತ್ತಿದ್ದೀಯೆ!' ಪಾಶೆನ್ಕಾ ಉದ್ಗರಿಸಿದಳು.
'ನಾನು ಬದುಕಬೇಕು. ನನಗೆ ಎಲ್ಲವೂ ಗೊತ್ತು ಅಂದುಕೊಂಡಿದ್ದೆ. ಬದುಕುವುದು ಹೇಗೆಂದು ಬೇರೆಯವರಿಗೆ ಪಾಠ ಹೇಳುತ್ತಿದ್ದೆ. ನನಗೆ ಏನೂ ಗೊತ್ತಿಲ್ಲ. ಹೇಳಿಕೊಡು, ಪಾಶೆನ್ಕಾ.'
'ಏನು ಹೇಳುತ್ತಿದ್ದೀ ಸ್ಟಿವಾ? ತಮಾಷೆ ಮಾಡುತ್ತಿದ್ದೀಯಾ? ನನ್ನ ಎಲ್ಲರೂ ತಮಾಷೆ ಮಾಡುತ್ತಲೇ ಇರುತ್ತಾರೆ. ನೀನೂ ಹಾಗೆ ಮಾಡಬೇಕಾ?'
'ನಾನು ತಮಾಷೆ ಮಾಡುತ್ತಿದ್ದೇನೆ ಅನ್ನಿಸಿದರೆ ನಿನ್ನಿಷ್ಟಬಂದಹಾಗೆ ಮಾಡು. ಆದರೆ ಇದುವರೆಗೂ ಹೇಗೆ ಬದುಕಿದೆ, ಸಂಸಾರ ಸಾಗಿಸಿದೆ, ಅದನ್ನು ಹೇಳು.'
'ನಾನೇ? ನನ್ನದೇನು, ಕಂಗಾಲು ಬದುಕು. ನನ್ನ ಯೋಗ್ಯತೆಗೆ ತಕ್ಕ ಹಾಗೆ ದೇವರು ಶಿಕ್ಷೆ ಕೊಡುತ್ತಿದ್ದಾನೆ. ನನ್ನದೆಂಥಾ ಬಾಳು...?'
'ಮದುವೆ ಹೇಗಾಯಿತು? ಗಂಡನ ಮನೆಯಲ್ಲಿ ಹೇಗಿದ್ದೆ?'
'ಹೇಳುವುದೇನಿದೆ? ಕೆಟ್ಟ ಬಾಳು. ಯಾರೂ ಪ್ರೀತಿಸಬಾರದ ರೀತಿಯಲ್ಲಿ ಪ್ರೀತಿಗೆ ಸಿಕ್ಕಿಬಿದ್ದೆ. ಅಪ್ಪನಿಗೆ ಒಪ್ಪಿಗೆ ಇರಲಿಲ್ಲ. ಆದರೆ ಯಾರ ಮಾತೂ ಕೇಳುವ ಸ್ಥಿತಿಯಲ್ಲಿರಲಿಲ್ಲ ನಾನು. ಮದುವೆಯಾದೆ. ಆಮೇಲೆ, ಗಂಡನಿಗೆ ಸಹಾಯಮಾಡುವುದಕ್ಕೆ ಬದಲಾಗಿ ಅವನ ಮೇಲೆ ಅಸೂಯೆಪಡುತ್ತಾ ಹಿಂಸೆಕೊಟ್ಟೆ. ಅಸೂಯೆಯನ್ನು ಗೆಲ್ಲಲು ಆಗಲೇ ಇಲ್ಲ ನನಗೆ.'
'ನಿನ್ನ ಗಂಡ ಕುಡಿಯುತ್ತಿದ್ದನಂತೆ...'
ಹೌದು. ಅವನಿಗೆ ಸಮಾಧಾನ ಹೇಳುವ ಬದಲು, ಅವನ ಮನಸ್ಸಿಗೆ ಶಾಂತಿ ತರುವ ಬದಲು, ಅವನನ್ನು ಸದಾ ಬೈಯುತ್ತಿದ್ದೆ. ನಿನಗೆ ಗೊತ್ತಲ್ಲ, ಕುಡಿತ ಒಂದು ಕಾಯಿಲೆ. ಕುಡಿಯುವುದನ್ನು ಬಿಡಲು ಆಗಲಿಲ್ಲ ಅವನಿಗೆ. ಕುಡಿಯಲು ಏನೂ ಸಿಗದ ಹಾಗೆ ಎತ್ತಿಟ್ಟು ಬೀಗ ಹಾಕಿಬಿಡುತ್ತಿದ್ದೆ. ಆಮೇಲೆ ಭಯಂಕರ ಜಗಳ ಆಗುತ್ತಿತ್ತು!' ಸ್ಟೀಫನ್ ಕಸಾಟ್ಸ್‌ಕಿಯನ್ನು ದಿಟ್ಟಿಸಿ ನೋಡಿದಳು. ನೆನಪಿನಿಂದ ಹುಟ್ಟಿದ ನೋವು ಅವಳ ಕಣ್ಣುಗಳಲ್ಲಿ ತುಂಬಿತ್ತು.
ಪಾಶೆನ್ಕಾಳ ಗಂಡ ಅವಳನ್ನು ಹೊಡೆಯುತ್ತಿದ್ದ ಎಂದು ಯಾರೋ ಹೇಳಿದ್ದು ಅವನಿಗೆ ನೆನಪು ಬಂದಿತು. ಈಗ ಅವಳ ಬಡಕಲು ಕತ್ತು, ಕಿವಿಗಳ ಹಿಂದೆ ಉಬ್ಬಿಕೊಂಡಿರುವ ನರಗಳು, ಅರ್ಧ ಬೆಳ್ಳಗಾಗಿರುವ, ಅರ್ಧ ಕಂದು ಕೆಂಚಾಗಿ ಉಳಿದಿರುವ ವಿರಳವಾದ ತಲೆಗೂದಲು, ಇವನ್ನೆಲ್ಲ ಕಾಣುತ್ತ ಅವಳು ಹೇಗೆ ಬದುಕಿರಬಹುದು ಎಂದು ಊಹಿಸಿಕೊಂಡ.
'ಎರಡು ಮಕ್ಕಳಾದವು. ಹೊಟ್ಟೆಯಪಾಡಿಗೆ ದಾರಿ ಇರಲಿಲ್ಲ.'
'ನಿನ್ನದೊಂದು ಎಸ್ಟೇಟು ಇತ್ತಲ್ಲವೆ!'
'ಇತ್ತು. ಗಂಡ ಬದುಕಿದ್ದಾಗಲೇ ಅದನ್ನು ಮಾರಿಬಿಟ್ಟೆವು. ದುಡ್ಡೆಲ್ಲ ಖರ್ಚಾಗಿಬಿಟ್ಟಿತು. ನಮ್ಮ ಶ್ರೀಮಂತ ಮನೆತನದ ಹೆಣ್ಣುಮಕ್ಕಳ ಹಾಗೆಯೇ ನನಗೂ ಯಾವ ಕೆಲಸವೂ ಬರುತ್ತಿರಲಿಲ್ಲ. ಕೆಲಸಕ್ಕೂ ಬಾರದವಳು. ಏನು ಮಾಡಬೇಕೆಂದು ದಿಕ್ಕು ತೋಚಲಿಲ್ಲ. ಇದ್ದದ್ದನ್ನೆಲ್ಲ ಖರ್ಚುಮಾಡಿದೆವು. ಮಕ್ಕಳನ್ನು ಸ್ಕೂಲಿಗೆ ಕಳಿಸಿದೆ. ಅವರ ಜೊತೆ ನಾನೂ ಒಂದಿಷ್ಟು ವಿದ್ಯೆ ಕಲಿತೆ. ನಾಲ್ಕನೆಯ ಕ್ಲಾಸಿನಲ್ಲಿದ್ದಾಗ ಮಿತ್ಯಾ ಕಾಯಿಲೆ ಬಿದ್ದ. ದೇವರು ಅವನನ್ನು ಕರೆದುಕೊಂಡುಬಿಟ್ಟ. ಮಗಳು ಮಾಷಾ ವಾನ್ಯಾನ್ನು, ಅದೇ ನನ್ನ ಅಳಿಯ, ಪ್ರೀತಿಸಿದಳು. ಅವನೇನೋ ಒಳ್ಳೆಯವನೇ, ಆದರೆ ಅದೃಷ್ಟ ಸರಿ ಇಲ್ಲ. ಕಾಯಿಲೆ.'
'ಅಮ್ಮಾ!' ಮಗಳ ಧ್ವನಿ ಅವಳ ಮಾತನ್ನು ನಿಲ್ಲಿಸಿತು. 'ಮಿತ್ಯಾನ ಕರೆದುಕೋ ಸ್ವಲ್ಪ! ಇವನನ್ನ ಎತ್ತಿಕೊಂಡು ಕೆಲಸ ಮಾಡುವುದಕ್ಕೆ ಆಗುವುದಿಲ್ಲ' ಅಂದಳು. ಪಾಶೆನ್ಕಾ, ತಲೆಕೊಡವಿಕೊಂಡು ದಡಬಡನೆ ಎದ್ದು ಹೋದಳು. ಹೊಲಿಗೆ ಹಾಕಿದ್ದ ಅವಳ ಚಪ್ಪಲಿ ಸವೆದು ಹೋಗಿತ್ತು. ಎರಡು ವರ್ಷದ ಪುಟ್ಟ ಹುಡುಗನ್ನು ಎತ್ತಿಕೊಂಡು ಬಂದಳು. ಅಜ್ಜಿಯ ಶಾಲು ಹಿಡಿದು ತೋಳಿನಲ್ಲೇ ಹಿಂದಕ್ಕೆ ಜಗ್ಗಿ ಬಾಗುತ್ತಿದ್ದ ಅವನು.
'ಎಲ್ಲಿದ್ದೆ ನಾನು? ಹ್ಜಾ! ಅಳಿಯನಿಗೆ ಈ ಊರಲ್ಲಿ ಒಳ್ಳೆಯ ಕೆಲಸ ಇತ್ತು. ಅವನ ಆಫೀಸರು ಕೂಡ ಒಳ್ಳೆಯವನೇ. ಆದರೆ ಕೆಲಸಕ್ಕೆ ಹೋಗುವುದಕ್ಕೆ ಆಗದೆ ರಾಜೀನಾಮೆ ಕೊಡಬೇಕಾಯಿತು.'
'ಯಾಕೆ, ಏನಾಗಿತ್ತು ಅವನಿಗೆ?'
'Neurasthenia ಅಂತೆ. ಡಾಕ್ಟರಿಗೆ ತೋರಿಸಿದೆವು. ಹವಾ ಬದಲಾವಣೆ ಆಗಬೇಕು, ಬೇರೆ ಎಲ್ಲಿಗಾದರೂ ಕರೆದುಕೊಂಡು ಹೋಗಿ ಅಂದರು. ಹಾಗೆ ಹೋಗುವುದಕ್ಕೆ ಕೈಯಲ್ಲಿ ಕಾಸಿಲ್ಲ. ಅದರಷ್ಟಕ್ಕೆ ಅದೇ ವಾಸಿಯಾಗುತ್ತದೆ ಎಂದು ಕಾಯುತ್ತಿದ್ದೇನೆ. ಅವನಿಗೆ ನೋವೇನೂ ಇಲ್ಲ, ಆದರೆ...'
'ಲ್ಯುಕೆರಿಯಾ!' ಕ್ಷೀಣವಾದ ಕೋಪದ ದನಿಯೊಂದು ಕೇಳಿಸಿತು. 'ಏನಾದರೂ ಬೇಕು ಅಂತ ಕರೆದಾಗಲೇ ಎಲ್ಲಾದರೂ ಹೋಗಿರುತ್ತಾಳೆ. ಅತ್ತೇ...'
ಮಾತು ನಿಲ್ಲಿಸಿ, 'ಬಂದೇ!' ಅಂದು, 'ಅವನದಿನ್ನೂ ಊಟ ಆಗಿಲ್ಲ. ನಮ್ಮ ಜೊತೆ ಕೂತು ಊಟಮಾಡುವುದಕ್ಕೆ ಆಗುವುದಿಲ್ಲ ಅವನಿಗೆ' ಎಂದಳು.
ಎದ್ದು ಹೋಗಿ, ಏನೋ ವ್ಯವಸ್ಥೆಮಾಡಿ, ತೆಳ್ಳನೆಯ ಕೈಗಳನ್ನು ಒರೆಸಿಕೊಳ್ಳುತ್ತಾ ಬಂದಳು. ಬೆಂಚಿನ ಮೇಲೆ ಕೂತಳು.
'ಹೀಗೇ ದಿನ ಕಳೆಯುತ್ತಿದೆ. ತೃಪ್ತಿ ಇಲ್ಲ, ಗೊಣಗುತ್ತಾ, ದೂರುತ್ತಾ ಇರುತ್ತೇನೆ. ಆದರೂ ದೇವರು ದೊಡ್ಡವನು. ಇಬ್ಬರು ಮೊಮ್ಮಕ್ಕಳೂ ಒಳ್ಳೆಯವರು, ಆರೋಗ್ಯವಾಗಿ ಚೆನ್ನಾಗಿದ್ದಾರೆ. ಹೀಗೇ ಜೀವನ ಸಾಗುತ್ತದೆ. ಇರಲಿ, ನನ್ನ ಕಥೆ ತೆಗೆದುಕೊಂಡು ಏನು ಮಾಡುತ್ತೀ?'
'ಸಂಪಾದನೆ ಹೇಗೆ?'
'ಏನೋ ಸ್ವಲ್ಪ ಇದೆ. ಮೊದಲೆಲ್ಲ ನನಗೆ ಸಂಗೀತವೆಂದರೆ ಆಗುತ್ತಿರಲಿಲ್ಲ. ಈಗ ಅದೇ ನನ್ನ ಕೈ ಹಿಡಿದಿದೆ!' ಪಕ್ಕದಲ್ಲೇ ಇದ್ದ ಮೇಜಿನ ಮೇಲೆ ಅವಳ ಕೈ ಬೆರಳು ತಾಳ ಹಾಕುತ್ತಿದ್ದವು.
'ಸಂಗೀತ ಪಾಠ ಹೇಳಿದರೆ ಎಷ್ಟು ಕೊಡುತ್ತಾರೆ?'
'ಕೆಲವರು ಒಂದು ರೂಬಲ್ಲು, ಕೆಲವರು ಐವತ್ತು ಕೊಪೆಕ್ಕು, ಇನ್ನು ಕೆಲವರು ಮೂವತ್ತು. ಆದರೂ ಎಲ್ಲ ಮನೆಯವರೂ ನನ್ನ ಚೆನ್ನಾಗಿ ನೋಡಿಕೊಳ್ಳುತ್ತಾರೆ.'
'ಮತ್ತೆ, ನಿನ್ನ ಶಿಷ್ಯರು ಪಾಠ ಚೆನ್ನಾಗಿ ಕಲಿಯುತ್ತಿದ್ದಾರೋ?' ಸಣ್ಣದಾಗಿ ಮುಗುಳ್ನಗುತ್ತಾ ಕೇಳಿದ. ಗಂಭೀರವಾಗಿ ಕೇಳುತ್ತಿದ್ದಾನೆಯೋ ಹೇಗೆ ಎಂದು ಅವನ ಕಣ್ಣಿನಲ್ಲಿ ಕಣ್ಣಿಟ್ಟು ನೋಡಿದಳು.
'ಕೆಲವರು ಕಲಿಯುತ್ತಾರೆ. ಒಬ್ಬಳಿದ್ದಾಳೆ. ತುಂಬ ಒಳ್ಳೆಯ ಹುಡುಗಿ. ಮಾಂಸದಂಗಡಿಯವನ ಮಗಳು. ನನಗೆ ಒಂದಿಷ್ಟು ಜಾಣತನ ಇದ್ದಿದ್ದರೆ ಅಪ್ಪನಿಗೆ ಅಷ್ಟೊಂದು ಗೆಳೆಯರಿದ್ದರಲ್ಲ ಅವರು ಯಾರನ್ನಾದರೂ ಕೇಳಿ ಅಳಿಯನಿಗೆ ಒಂದು ಒಳ್ಳೆಯ ಕೆಲಸ ಕೊಡಿಸಬಹುದಿತ್ತು. ಆದರೆ ನನ್ನ ಕೈಯಲ್ಲಿ ಏನೂ ಆಗುವುದಿಲ್ಲ, ಕೆಲಸಕ್ಕೆ ಬಾರದವಳು ನಾನು. ನಮ್ಮ ಮನೆಯನ್ನು ಈ ಸ್ಥಿತಿಗೆ ತಂದಿಟ್ಟಿದ್ದೇನೆ ನೋಡು.'
'ಸರಿ, ಸರಿ' ಅನ್ನುತ್ತಾ ತಲೆ ತಗ್ಗಿಸಿಕೊಂಡ. 'ಚರ್ಚಿಗೆ ಹೋಗುತ್ತೀಯಾ?'
'ಲೆಂಟ್ ಹಬ್ಬ ಬಂದಾಗ ಉಪವಾಸ ಮಾಡುತ್ತೇವೆ, ಮಕ್ಕಳೊಡನೆ ಯಾವಾಗಲಾದರೂ ಚರ್ಚಿಗೆ ಹೋಗುತ್ತೇನೆ, ಕೆಲವು ಸಾರಿ ತಿಂಗಳುಗಟ್ಟಲೆ ಹೋಗುವುದೇ ಇಲ್ಲ. ಮಕ್ಕಳನ್ನು ಕಳಿಸುತ್ತೇನೆ, ಅಷ್ಟೆ.'
'ನೀನು ಯಾಕೆ ಹೋಗುವುದಿಲ್ಲ?'
'ನಿಜ ಹೇಳಬೇಕೆಂದರೆ,' ಅವಳ ಮುಖ ಕೆಂಪಾಯಿತು, 'ನಿಜ ಹೇಳಬೇಕೆಂದರೆ ನಾನು ಇಂಥ ಬಟ್ಟೆ ಹಾಕಿಕೊಂಡು ಮಗಳ ಜೊತೆ, ಮಕ್ಕಳ ಜೊತೆ ಹೋದರೆ ಅವರಿಗೆ ಅವಮಾನ ಅನ್ನಿಸಬಹುದು. ನನ್ನ ಹತ್ತಿರ ಬೇರೆ ಒಳ್ಳೆಯ ಬಟ್ಟೆ ಇಲ್ಲ. ಜೊತೆಗೆ ಸೋಮಾರಿತನ.'
'ಮನೆಯಲ್ಲೇ ಪ್ರಾರ್ಥನೆ ಮಾಡುತ್ತೀಯಾ?'
'ಮಾಡುತ್ತೇನೆ. ಆದರೆ ಅದೆಂಥ ಪ್ರಾರ್ಥನೆ! ಯಂತ್ರದ ಹಾಗೆ ಸುಮ್ಮನೆ ಪ್ರಾರ್ಥನೆ ಹೇಳಿಕೊಳ್ಳುತ್ತೇನೆ. ಮನಸ್ಸಿನಲ್ಲಿ ಯಾವ ಭಾವವೂ ಹುಟ್ಟುವುದಿಲ್ಲ, ನನ್ನ ಕೆಟ್ಟತನ, ದುಷ್ಟತನಗಳೇ ಮನಸ್ಸಿಗೆ ಬರುತ್ತಿರುತ್ತವೆ.'
ಅವಳ ಮಾತನ್ನು ಒಪ್ಪಿಕೊಳ್ಳುವವನಂತೆ 'ಹೌದು, ಹೌದು' ಅಂದ.
'ಬಂದೆ! ಬಂದೆ!' ಅಂದಳು, ಅಳಿಯ ಮತ್ತೊಮ್ಮೆ ಅವಳನ್ನು ಕರೆಯುತ್ತಿದ್ದ. ತೆಳ್ಳನೆಯ ಜಡೆಯ ಕೆದರಿದ ಕೂದಲನ್ನು ಸರಿಮಾಡಿಕೊಳ್ಳುತ್ತಾ ಎದ್ದು ಹೋದಳು.
(ಮುಂದಿನ ಭಾಗದಲ್ಲಿ ಮುಕ್ತಾಯ)
Comments
ಉ: ಫಾದರ್ ಸೆರ್ಗಿಯಸ್ ಅಧ್ಯಾಯ ಎಂಟು (೧)