ಫಾದರ್ ಸೆರ್ಗಿಯಸ್ ಅಧ್ಯಾಯ ಏಳು (ಭಾಗ ೨)

ಫಾದರ್ ಸೆರ್ಗಿಯಸ್ ಅಧ್ಯಾಯ ಏಳು (ಭಾಗ ೨)

[ಏಳನೆಯ ಅಧ್ಯಾಯ ಮುಂದುವರೆದಿದೆ.]
'ಸರಿ, ಸರಿ, ನಾನೇನೂ ಅವರನ್ನು ಓಡಿಸುತ್ತಾ ಇಲ್ಲ, ದೊಡ್ಡವರ ಹತ್ತಿರ ಹೇಗೆ ಇರಬೇಕು ಎಂದು ಹೇಳುತ್ತಿದ್ದೆ. ಈ ಜನಕ್ಕೆ ಕರುಣೆ ಅನ್ನುವುದೇ ಇಲ್ಲ, ಜೀವ ತಿಂದುಬಿಡುತ್ತಾರೆ. ತಮ್ಮ ಕೆಲಸವಾದರೆ ಸಾಕು, ಬೇರೆಯವರ ಗತಿ ಏನು ಅನ್ನುವ ಯೋಚನೆಯೇ ಇಲ್ಲ. ಏಯ್, ನೀನು, ಎಲ್ಲಿಗೆ ಹೋಗುತ್ತಿದ್ದೀ? ಇವತ್ತು ಮುಗೀತು, ನಾಳೆ ಬಾ ಹೋಗು.' ವ್ಯಾಪಾರಿಯಂತೂ ಎಲ್ಲರನ್ನೂ ಕಳಿಸಿಬಿಟ್ಟ.
ಎಲ್ಲವೂ ವ್ಯವಸ್ಥಿತವಾಗಿರಬೇಕು ಅನ್ನುವ ಆಸೆ, ಜನರಮೇಲೆ ದಬ್ಬಾಳಿಕೆ ಮಾಡುವುದರಿಂದ ಬರುವ ಖುಷಿ, ಜೊತೆಗೆ ಫಾದರ್ ಸೆರ್ಗಿಯಸ್‌ನಿಂದ ಅವನಿಗೆ ಆಗಬೇಕಾಗಿದ್ದ ಕೆಲಸ ಇವೆಲ್ಲ ಸೇರಿ ಆ ವ್ಯಾಪಾರಿ ಅಷ್ಟು ಮುತುವರ್ಜಿಯಿಂದ ಜನರನ್ನು ಚದುರಿಸಿದ್ದ. ಅವನಿಗೆ ಒಬ್ಬಳೇ ಮಗಳು. ಹೆಂಡತಿ ಸತ್ತು ಹೋಗಿದ್ದಳು. ಮಗಳಿಗೆ ಖಾಯಿಲೆ. ಮದುವೆಯಾಗಿರಲಿಲ್ಲ. ಅವಳ ಖಾಯಿಲೆ ವಾಸಿಯಾಗಲೆಂದು ಎಂಟು ನೂರು ಮೈಲು ಪ್ರಾಯಾಣಮಾಡಿಕೊಂಡು ಅವಳನ್ನೂ ಕರೆದುಕೊಂಡು ಬಂದಿದ್ದ. ಎರಡು ವರ್ಷಗಳಿಂದ ಏನೇನೋ ಪ್ರಯತ್ನಪಟ್ಟಿದ್ದರೂ ಕಾಯಿಲೆ ಮಾತ್ರ ಹಾಗೇ ಇತ್ತು. ತನ್ನ ಪ್ರಾಂತ್ಯದಲ್ಲಿದ್ದ ಯೂನಿವರ್ಸಿಟಿಯ ಆಸ್ಪತ್ರೆಗೆ ಹೋಗಿದ್ದ. ಉಪಯೋಗವಾಗಿರಲಿಲ್ಲ. ಆಮೇಲೆ ಸಮಾರಾ ಪ್ರಾಂತ್ಯದಲ್ಲಿದ್ದ ರೈತನೊಬ್ಬನ ಹತ್ತಿರ ನಾಟಿ ಔಷಧಿ ಕೊಡಿಸಿದ್ದ. ಕೊಂಚ ಗುಣವಾಯಿತೇನೋ ಅನ್ನಿಸಿತ್ತು. ಮತ್ತೆ ಮಾಸ್ಕೋದಲ್ಲಿದ್ದ ಡಾಕ್ಟರ ಹತ್ತಿರ ಹೋಗಿ ಹೇರಳವಾಗಿ ಹಣ ಖರ್ಚುಮಾಡಿದ್ದ. ಏನೇನೂ ಫಲ ದೊರೆಯಲಿಲ್ಲ. ಫಾದರ್ ಸೆರ್ಗಿಯಸ್ ರೋಗಿಗಳ ಮೇಲೆ ಕೈ ಇಟ್ಟು ಪ್ರಾರ್ಥನೆಮಾಡಿದರೆ ಸಾಕು ಕಾಯಿಲೆ ವಾಸಿಯಾಗುತ್ತದೆ ಎಂದು ಜನ ಹೇಳುವುದು ಕೇಳಿ ಈಗ ಇಲ್ಲಿಗೆ ಬಂದಿದ್ದ. ಜನರನ್ನೆಲ್ಲ ಕಳಿಸಿಬಿಟ್ಟು ಫಾದರ್ ಸೆರ್ಗಿಯಸ್‌ನ ಬಳಿಗೆ ಬಂದು ದೊಪ್ಪನೆ ಅವನ ಕಾಲ ಬಳಿ ಕುಸಿದು ಕುಳಿತು ಜೋರಾಗಿ ದನಿತೆಗೆದು ಮಾತಾಡಿದ:
'ಓ ಪವಿತ್ರಾತ್ಮಾ, ಸಂತ ಮಹಾನುಭಾವಾ! ನನ್ನ ಕರುಳಿನ ಕುಡಿ ರೋಗಪೀಡಿತಳಾಗಿ ವೇದನೆಯಿಂದ ನರಳುತ್ತಿದ್ದಾಳೆ. ನಿಮ್ಮ ಕಾಲು ಹಿಡಿದು ಬೇಡಿಕೊಳ್ಳುವ ಧೈರ್ಯಮಾಡಿದ್ದೇನೆ. ಅವಳನ್ನು ನಿಮ್ಮ ಮಡಿಲಿಗೆ ಹಾಕುತ್ತಿದ್ದೇನೆ. ದಯವಿಟ್ಟು ನನ್ನ ಮಗಳು ಗುಣಮುಖಳಾಗುವಂತೆ ಆಶೀರ್ವದಿಸಿ' ಎಂದು ಬೊಗಸೆಗೈಯಾಗಿ ಬೇಡಿಕೊಂಡ. ಮಗಳ ಖಾಯಿಲೆ ವಾಸಿಯಾಗಬೇಕಾದರೆ ಹೀಗಲ್ಲದೆ ಬೇರೆಯ ರೀತಿಯಲ್ಲಿ ಬೇಡಬಾರದು ಎಂಬ ನಿಯಮವಿದೆಯೋ ಎಂಬಂತೆ ಮಾತನಾಡಿದ ಅವನು. ಅವನು ಎಂಥ ವಿಶ್ವಾಸದಿಂದ ಮಾತನಾಡಿದನೆಂದರೆ ಮಾತನಾಡಬೇಕಾದ್ದೇ ಹೀಗೆ, ಕೋರಿಕೊಳ್ಳಬೇಕಾದ್ದೇ ಹೀಗೆ ಎಂದು ಸ್ವತಃ ಫಾದರ್ ಸೆರ್ಗಿಯಸ್‌ನಿಗೂ ಅನ್ನಿಸಿಬಿಟ್ಟಿತು. 'ಏಳಪ್ಪಾ, ನಿನ್ನ ತಾಪತ್ರಯವೇನು ಹೇಳು' ಎಂದು ಕೇಳಿದ. ಆಗ ಆ ವ್ಯಾಪಾರಿ--ನನಗೆ ಒಬ್ಬಳೇ ಮಗಳು, ಎರಡು ವರ್ಷದ ಹಿಂದೆ ಅವಳ ತಾಯಿ ಇದ್ದಕ್ಕಿದ್ದಹಾಗೆ ತೀರಿ ಹೋದಳು, ಆವಾಗಿನಿಂದ ಸುಮ್ಮನೆ ವರಾತ (ಅದು ಅವನದೇ ಮಾತು) ಮಾಡುತ್ತಿದ್ದಾಳೆ, ಮೈಮೇಲೆ ಪರಿವೆಯೇ ಇರುವುದಿಲ್ಲ, ಬುದ್ಧಿಭ್ರಮಣೆಯಾಗಿರಬೇಕು, ಎಂಟು ನೂರು ಮೈಲು ಪ್ರಯಾಣಮಾಡಿಕೊಂಡು ಇಲ್ಲಿಗೆ ಕರೆದುಕೊಂಡು ಬಂದಿದ್ದೇನೆ, ಇಲ್ಲೇ ವಸತಿ ಗೃಹದಲ್ಲಿದ್ದಾಳೆ, ಫಾದರ್ ಸೆರ್ಗಿಯಸ್ ಹೇಳಿಕಳಿಸುವವರೆಗೂ ಅಲ್ಲೇ ಇರುತ್ತಾಳೆ, ಹಗಲು ಹೊತ್ತಿನಲ್ಲಿ ಹೊರಗೆ ಬರುವುದಿಲ್ಲ, ಅವಳಿಗೆ ಬೆಳಕನ್ನು ಕಂಡರೆ ಭಯ, ಸೂರ್ಯಮುಳುಗಿದಮೇಲೆ ಮಾತ್ರ ಬರುತ್ತಾಳೆ ಅಂದ.

'ತುಂಬಾ ವೀಕ್‌ ಆಗಿದ್ದಾಳಾ?' ಫಾದರ್ ಸೆರ್ಗಿಯಸ್ ಕೇಳಿದ.
'ವೀಕ್‌ ಏನೂ ಇಲ್ಲ, ಚೆನ್ನಾಗಿಯೇ ಬೆಳೆದಿದ್ದಾಳೆ. ಡಾಕ್ಟರುಗಳು ಎಂಥದೋ nerastenic ಖಾಯಿಲೆ ಅಂದರು. ನೀವು ಅವಳನ್ನು ಇವತ್ತು ಸಾಯಂಕಾಲ ಒಂದು ಸಾರಿ ನೋಡಿಬಿಡಿ ಫಾದರ್. ಅನುಮತಿ ಕೊಟ್ಟರೆ ಹೀಗೆ ಹೋಗಿ ಹಾಗೆ ಕರೆದುಕೊಂಡುಬಂದುಬಿಡುತ್ತೇನೆ. ಈ ಬಡ ತಂದೆಯ ಮನಸ್ಸಿಗೆ ಒಂದಿಷ್ಟು ನೆಮ್ಮದಿ ಕೊಡಿ, ನಮ್ಮ ವಂಶ ಉಳಿಸಿ, ಪ್ರಾರ್ಥನೆ ಮಾಡಿ ಹುಡುಗಿಯನ್ನು ಬದುಕಿಸಿ ಫಾದರ್!'
ಮತ್ತೊಮ್ಮೆ ಆ ವ್ಯಾಪಾರಿ ಮೊಳಕಾಲೂರಿ ಕುಳಿತು ಫಾದರ್ ಸೆರ್ಗಿಯಸ್‌ನ ಅಂಗೈಗಳನ್ನು ಕೆನ್ನೆಗೆ ಒತ್ತಿಕೊಂಡ. ಎದ್ದೇಳು ಎಂದು ಫಾದರ್ ಸೆರ್ಗಿಯಸ್ ಮತ್ತೊಮ್ಮೆ ಹೇಳುತ್ತಾ ಇದೆಲ್ಲ ಎಷ್ಟು ಕಷ್ಟ, ಆದರೂ ಈ ಮನುಷ್ಯ ಕಾಲಿಗೆ ಬಿದ್ದು ಹೇಗೆ ನನ್ನನ್ನು ಒಪ್ಪಿಸಿಬಿಟ್ಟನಲ್ಲಾ ಎಂದು ಯೋಚಿಸುತ್ತಾ ಕೆಲವು ಕ್ಷಣ ಮೌನವಾಗಿದ್ದು ಹೇಳಿದ: 'ಸರಿ, ಇವತ್ತು ಸಂಜೆ ಅವಳನ್ನು ಕರೆದುಕೊಂಡು ಬನ್ನಿ. ಅವಳಿಗಾಗಿ ಪ್ರಾರ್ಥನೆಮಾಡುತ್ತೇನೆ. ಈಗ ನನಗೆ ಸುಸ್ತಾಗಿದೆ.' ದೀರ್ಘವಾಗಿ ನಿಟ್ಟುಸಿರುಬಿಟ್ಟ. ರೆಪ್ಪೆಗಳು ತಮ್ಮಷ್ಟಕ್ಕೇ ಮುಚ್ಚಿಕೊಂಡವು. 'ನಿಮಗೆ ಹೇಳಿ ಕಳಿಸುತ್ತೇನೆ, ಆಗ ಬನ್ನಿ.'
ವ್ಯಾಪಾರಿ ಲಗುಬಗೆಯಿಂದ ಹೊರಟುಹೋದ. ಸದ್ದುಮಾಡಬಾರದೆಂದು ಮರಳು ನೆಲದ ಮೇಲೆ ತುದಿಗಾಲೂರಿ ಬೇಗ ಬೇಗ ಹೆಜ್ಜೆಹಾಕಿದಷ್ಟೂ ಅವನ ಬೂಟುಗಳು ಹೆಚ್ಚು ಸದ್ದು ಮಾಡಿದವು. ಚರ್ಚಿನ ಪೂಜಾ ಕೈಂಕರ್ಯಗಳಲ್ಲಿ, ಭೇಟಿಗೆ ಬಂದ ಜರನೊಡನೆ ಮಾತನಾಡುವುದರಲ್ಲಿ ದಿನಗಳು ಕಳೆದುಹೋಗುತ್ತಿದ್ದವು. ಆದರೆ ಅಂದು ಎಂದಿಗಿಂತ ಹೆಚ್ಚು ಆಯಾಸವಾಗಿತ್ತು. ಬೆಳಗ್ಗೆ ಅವನನ್ನು ಕಾಣಲು ಬಂದಿದ್ದ ಮುಖ್ಯ ಅಧಿಕಾರಿಯೊಬ್ಬ ಬಹಳ ಹೊತ್ತು ಮಾತುಕಥೆಯಾಡುತ್ತ ಕುಳಿತಿದ್ದ. ಆನಂತರ ಶ್ರೀಮಂತ ಮಹಿಳೆಯೊಬ್ಬಳು ಮಗನನ್ನು ಕರೆದುಕೊಂಡುಬಂದಿದ್ದಳು. ಅವನು ವಿಚಾರವಾದಿ ನಾಸ್ತಿಕ ಪ್ರೊಫೆಸರ್; ಆಕೆಗೆ ಫಾದರ್ ಸೆರ್ಗಿಯಸ್‌ನ ಮೇಲೆ ಅಪಾರವಾದ ಭಕ್ತಿ; ಮಗನೊಡನೆ ಒಮ್ಮೆ ಮಾತನಾಡಿ ಎಂದು ಕೋರಿಕೊಂಡಿದ್ದಳು. ಆ ಸಂಭಾಷಣೆಯಿಂದ ಬಹಳ ಆಯಾಸವಾಗಿತ್ತು. ಯುವಕ ಅಧ್ಯಾಪಕ ವೃದ್ಧ ಸಂನ್ಯಾಸಿಯೊಡನೆ ವಾದವಿವಾದವೇಕೆ ಬೇಕು ಎಂದುಕೊಂಡು ಫಾದರ್ ಹೇಳಿದ್ದ ಮಾತಿಗೆಲ್ಲ ಒಪ್ಪಿಗೆ ಸೂಚಿಸಿದ್ದ, ಮಾನಸಿಕವಾಗಿ ದುರ್ಬಲರಾದವರ ಮಾತನ್ನು ಜಾಣರು ಸುಮ್ಮನೆ ಒಪ್ಪಿಕೊಳ್ಳುತ್ತಾರಲ್ಲ, ಹಾಗೆ. ಯುವಕ ತನ್ನ ಮಾತನ್ನು ನಂಬಲಿಲ್ಲ, ಒಪ್ಪಲಿಲ್ಲ ಎಂದು ಗೊತ್ತಾದರೂ ಫಾದರ್ ಸೆರ್ಗಿಯಸ್ ಸಂತೋಷವಾಗಿ, ಸುಖವಾಗಿ, ಆರಾಮವಾಗಿ ಮಾತನಾಡಿದ್ದ. ಆ ಸಂಭಾಷಣೆಯ ನೆನಪು ಈಗ ಅವನ ನೆಮ್ಮದಿಯನ್ನು ಹಾಳುಮಾಡಿತು.
'ತಿನ್ನುವುದಕ್ಕೆ ಏನಾದರೂ ತರಲೇ, ಫಾದರ್?' ಸೇವಕ ಕೇಳಿದ.
'ಸರಿ. ಏನಾದರೂ ತೆಗೆದುಕೊಂಡು ಬಾ.'
ಗುಹೆಯಿಂದ ಹತ್ತು ಹೆಜ್ಜೆ ದೂರದಲ್ಲೇ ಕಟ್ಟಿಸಿದ್ದ ಅಡುಗೆಮನೆಗೆ ಕಾಲು ಹಾಕಿದ ಸೇವಕ. ಫಾದರ್ ಸೆರ್ಗಿಯಸ್ ಒಬ್ಬನೇ ಕುಳಿತಿದ್ದ.
ಎಲ್ಲ ಕೆಲಸಗಳನ್ನೂ ತಾನೇ ಮಾಡಿಕೊಂಡು ಚರ್ಚಿನ ಪೂಜೆಯ ಪ್ರಸಾದರೂಪವಾಗಿ ಬರುತ್ತಿದ್ದ ಬ್ರೆಡ್ಡನ್ನೋ ಸಾಮಾನ್ಯವಾದ ಬ್ಲಾಕ್ ಬ್ರೆಡ್ಡನ್ನೋ ತಿನ್ನುತ್ತಿದ್ದ ಕಾಲ ಹೊರಟುಹೋಗಿ ಬಹಳ ದಿನಗಳಾಗಿದ್ದವು. ನಿಮ್ಮ ಆರೋಗ್ಯ ನಿರ್ಲಕ್ಷಿಸುವುದಕ್ಕೆ ನಿಮಗೆ ಅಧಿಕಾರವಿಲ್ಲ ಎಂದು ಹೇಳಿ ಚರ್ಚಿನವರು ಅವನಿಗಾಗಿ ಸರಳವಾದ ಪುಷ್ಟಿಕರವಾದ ಊಟ ಒದಗಿಸುತ್ತಿದ್ದರು. ತಿನ್ನುತ್ತಿದ್ದದ್ದು ಸ್ವಲ್ಪವೇ ಆದರೂ ಮೊದಲು ಉಣ್ಣುತ್ತಿದ್ದಕ್ಕಿಂತ ಹೆಚ್ಚು ಉಣ್ಣುತ್ತಿದ್ದ. ಮೊದಲಾದರೆ ಊಟದ ಬಗ್ಗೆ ನಿರ್ಲಕ್ಷ್ಯವಿತ್ತು, ಪಾಪ ಮಾಡುತ್ತಿದ್ದೇನೋ ಅನ್ನುವ ಭಯವಿತ್ತು. ಈಗ ಊಟದ ರುಚಿಯನ್ನು ಸುಖಿಸುತ್ತಿದ್ದ. ಕೊಂಚ ಪಾರಿಜ್ ತಿಂದು, ಟೀಯೊಡನೆ ತಂದಿದ್ದ ಬ್ರೆಡ್ಡಿನಲ್ಲಿ ಅರ್ಧದಷ್ಟು ತಿಂದ. ಸೇವಕ ಹೊರಟುಹೋದ. ಎಲ್ಮ್ ಮರಗಳ ಕೆಳಗೆ, ಬೆಂಚಿನ ಮೇಲೆ ಫಾದರ್ ಸೆರ್ಗಿಯಸ್ ಒಬ್ಬನೇ ಕೂತಿದ್ದ.
ಮೇ ತಿಂಗಳ ಸುಂದರವಾದ ಸಂಜೆ. ಬರ್ಚ್, ಆಸ್ಪೆನ್, ಎಲ್ಮ್, ಕಾಡು ಚೆರ್ರಿ ಮತ್ತು ಓಕ್ ಮರಗಳ ಎಲೆಗಳು ಆಗಷ್ಟೇ ಚಿಗುರುತ್ತಿದ್ದವು. ಎಲ್ಮ್ ಮರಗಳ ಹಿಂದಿದ್ದ ಕಾಡು ಚೆರ್ರಿಗಳ ಪೊದೆ ಪೂರ್ಣವಾಗಿ ಚಿಗುರಿತ್ತು, ಮೊಗ್ಗುಗಳು ಇನ್ನೂ ಅರಳಿರಲಿಲ್ಲ, ಮತ್ತೆ ಕೋಗಿಲೆಗಳು, ಹತ್ತಿರದಲ್ಲೇ ಇದ್ದ ಒಂದು, ದೂರದಲ್ಲಿ ನದಿಯ ಪಕ್ಕದ ಪೊದೆಗಳಲ್ಲಿ ಇನ್ನೆರಡು, ಮೊದಲು ಕುಹು ಕುಹು ಅಂದು ಆಮೇಲೆ ದನಿಯೆತ್ತಿ ಹಾಡತೊಡಗಿದವು. ಕೆಲಸ ಮುಗಿಸಿ ಮನೆಗೆ ಹೊರಟಿದ್ದ ರೈತರು ನದಿಯ ಪಕ್ಕದಲ್ಲಿ ಹಾಡು ಗುನುಗುತ್ತಾ ನಡೆದಿದ್ದರು. ಕಾಡಿನ ಅಂಚಿನಲ್ಲಿ ಸೂರ್ಯ ಮುಳುಗುತ್ತಿದ್ದ. ಇಳಿಜಾರಾಗಿ ಬೀಳುತ್ತಿದ್ದ ಸೂರ್ಯ ಕಿರಣಗಳು ಬಿದ್ದ ಎಡೆಯಲ್ಲೆಲ್ಲ ಲೋಕ ತೆಳು ಹಸಿರಾಗಿ, ಉಳಿದ ಭಾಗ ಕಪ್ಪಾಗಿ ಕಾಣುತ್ತಿತ್ತು. ಮೇ ತಿಂಗಳಲ್ಲಿ ಕಾಣಿಸಿಕೊಳ್ಳುವ ಪುಟ್ಟ ಕೀಟಗಳು ಮನಬಂದಂತೆ ಹಾರುತ್ತಾ ಅಡೆತಡೆ ಬಂದಾಗ ಡಿಕ್ಕಿ ಹೊಡೆದು ದೊಪ್ಪನೆ ನೆಲಕ್ಕೆ ಬೀಳುತ್ತಿದ್ದವು.
ಊಟದ ನಂತರ ಫಾದರ್ ಸೆರ್ಗಿಯಸ್ 'ಪ್ರಭೂ ಏಸು! ದೇವ ಪುತ್ರ, ನಮ್ಮ ಮೇಲೆ ಕರುಣೆ ತೋರು!' ಎಂದು ಮೌನವಾಗಿ ಪ್ರಾರ್ಥಿಸಿದ. ಆಮೇಲೆ ಬೈಬಲ್ಲಿನ ಗೀತೆಯೊಂದನ್ನು ಹೇಳತೊಡಗಿದ. ಗೀತೆ ಅರ್ಧ ಮುಗಿದಿದ್ದಾಗ ಪುಟ್ಟ ಗುಬ್ಬಿಯೊಂದು ಹತ್ತಿರದ ಪೊದೆಯಿಂದ ಹಾರಿ ಬಂದು, ಖುಷಿಯಾಗಿ ಚಿಲಿಪಿಲಿ ಸದ್ದುಮಾಡುತ್ತಾ ಅವನತ್ತ ಹೆಜ್ಜೆ ಹಾಕತೊಡಗಿತು. ಏನನ್ನೋ ಕಂಡು ಭಯಗೊಂಡು ತಟ್ಟನೆ ಹಾರಿ ಹೋಯಿತು. ವೈರಾಗ್ಯವನ್ನು ಕುರಿತು ಹಾಡಿಕೊಳ್ಳುತ್ತಿದ್ದ ಫಾದರ್ ಸೆರ್ಗಿಯಸ್ ವ್ಯಾಪಾರಿಯನ್ನೂ ಅವಳ ಮಗಳನ್ನೂ ಕರೆಸಬೇಕೆಂದುಕೊಂಡು ಹಾಡನ್ನು ಬೇಗ ಬೇಗ ಹೇಳಿ ಮುಗಿಸಿದ. ಅವಳ ಬಗ್ಗೆ ಆಸಕ್ತಿ ಹುಟ್ಟಿತ್ತು. ಯಾರೋ ಹೊಸ ವ್ಯಕ್ತಿ, ಬೇಸತ್ತ ಮನಸ್ಸಿ ಒಂದಷ್ಟು ಹೊಸತನ ತಂದಾಳು ಅನ್ನುವುದು ಒಂದು ಕಾರಣ, ಆಕೆ ಮತ್ತು ಆಕೆಯ ಅಪ್ಪ ಇಬ್ಬರೂ ಫಾದರ್ ಸೆರ್ಗಿಯಸ್ ಒಬ್ಬ ಸಂತ, ದೇವರು ಅವನ ಪ್ರಾರ್ಥನೆಯನ್ನು ನೆರವೇರಿಸುತ್ತಾನೆ ಎಂದು ನಂಬಿಕೊಂಡದ್ದು ಇನ್ನೊಂದು ಕಾರಣ. ತನ್ನನ್ನು ಸಂತನೆಂದು ಕರೆದವರನ್ನು ಬೈದು ಬಾಯಿ ಮುಚ್ಚಿಸುತ್ತಿದ್ದ ಫಾದರ್ ಸೆರ್ಗಿಯಸ್. ಆದರೆ ಮನಸ್ಸಿನ ಆಳದಲ್ಲಿ ನಾನೊಬ್ಬ ನಿಜವಾದ ಸಂತ ಎಂದು ನಂಬಿಕೊಂಡಿದ್ದ. ನಾನು, ಸ್ಟೆಪಾನ್ ಕಸಾಟ್ಸ್‌ಕಿ, ಪವಾಡಗಳನ್ನು ಮಾಡಬಲ್ಲ ಅಸಾಮಾನ್ಯ ಸಂತನಾದೆನಲ್ಲ ಎಂದು ಆಶ್ಚರ್ಯಪಟ್ಟುಕೊಳ್ಳುತ್ತಿದ್ದ. ತನ್ನ ಪವಾಡಶಕ್ತಿಯ ಬಗ್ಗೆ ಅಪನಂಬಿಕೆ ಇರಲಿಲ್ಲ ಅವನಲ್ಲಿ. ಹದಿನಾಲ್ಕು ವರ್ಷದ ಕಾಯಿಲೆ ಹುಡುಗನಿಂದ ಹಿಡಿದು, ತನ್ನ ಪ್ರಾರ್ಥನೆಯಿಂದಾಗಿ ದೃಷ್ಟಿಯನ್ನು ಮರಳಿ ಪಡೆದ ಕುರುಡಿ ಅಜ್ಜಿಯವರೆಗೆ ತಾನೇ ಮಾಡಿರುವ ಅನೇಕ ಪವಾಡಗಳನ್ನು ನಂಬದಿರುವುದು ಹೇಗೆ. ವಿಚಿತ್ರವೆನಿಸಿದರೂ ನಿಜ. ವ್ಯಾಪಾರಿಯ ಮಗಳು ಹೊಸಬಳು, ಅವಳಿಗೆ ತನ್ನಮೇಲೆ ನಂಬಿಕೆ ಇದೆ, ಮತ್ತೆ ಅವಳ ಕಾಯಿಲೆ ವಾಸಿಯಾಗಿ ತನ್ನ ಕೀರ್ತಿ ಹೆಚ್ಚುತ್ತದೆ ಅನ್ನಿಸಿತು ಅವನಿಗೆ.
'ಸಾವಿರಾರು ಮೈಲು ದೂರದಿಂದೆಲ್ಲ ರೋಗಿಗಳನ್ನು ಕರೆದುಕೊಂಡುಬರುತ್ತಾರೆ, ಪೇಪರುಗಳಲ್ಲಿ ಬರೆಯುತ್ತಾರೆ, ಚಕ್ರವರ್ತಿಗೂ ತಿಳಿಯುತ್ತದೆ, ನಾಸ್ತಿಕರೇ ತುಂಬಿರುವ ಯೂರೋಪಿನ ಜನಕ್ಕೂ ಗೊತ್ತಾಗುತ್ತದೆ' ಎಂದುಕೊಂಡ. ತಕ್ಷಣವೇ ತನ್ನ ಅಹಂಕಾರದ ಬಗ್ಗೆ ನಾಚಿಕೆಯೆನಿಸಿತು. 'ಪ್ರಭುವೇ, ಸ್ವರ್ಗದ ಒಡೆಯನೇ, ಪರಮಶಾಂತನೇ, ಸತ್ಯಾತ್ಮನೇ, ನನ್ನೊಳಹೊಕ್ಕು ಶುದ್ಧಮಾಡು, ನನ್ನ ಪಾಪಗಳನ್ನೆಲ್ಲ ತೊಳೆದು ನನ್ನಾತ್ಮವನ್ನು ಹರಸು. ನನ್ನನ್ನು ಕಾಡುವ ಈ ಅಹಂಕಾರವನ್ನು ನಿವಾರಿಸು' ಎಂದು ಪ್ರಾರ್ಥಿಸಿದ. ಹಿಂದೆಲ್ಲ ಎಷ್ಟುಬಾರಿ ಪ್ರಾರ್ಥಿಸಿದ್ದರೂ ಎಲ್ಲವೂ ವ್ಯರ್ಥವಾದದ್ದು ನೆನಪಿಗೆ ಬಂದಿತು. ಅವನ ಪ್ರಾರ್ಥನೆಯಿಂದಾಗಿ ಮಿಕ್ಕವರಪಾಲಿಗೆ ಪವಾಡಗಳು ಸಂಭವಿಸಿ ಕಾಯಿಲೆಗಳು ಗುಣವಾಗಿದ್ದರೂ ದೇವರು ಅದೇಕೋ ಅವನ ಈ ಕ್ಷುಲ್ಲಕ ಅಹಂಕಾರವನ್ನಿನ್ನೂ ನಿವಾರಿಸುವ ಪವಾಡ ಮೆರೆದಿರಲಿಲ್ಲ.
ಸಂನ್ಯಾಸೀ ಜೀವನವನ್ನು ಪ್ರಾರಂಭಿಸಿದ ವರ್ಷಗಳಲ್ಲಿ ಮನಸ್ಸಿನ ಶುದ್ಧಿಗಾಗಿ, ವಿನಯಕ್ಕಾಗಿ, ಪ್ರೀತಿಗಾಗಿ ಪ್ರಾರ್ಥಿಸುತ್ತಿದ್ದ. ದೇವರು ಅವನ ಪ್ರಾರ್ಥನೆ ಕೇಳಿಸಿಕೊಳ್ಳುತ್ತಿದ್ದಾನೆ ಅನ್ನಿಸುತ್ತಿತ್ತು. ಮನಸ್ಸಿನ ಶುದ್ಧಿಯನ್ನು ಉಳಿಸಿಕೊಂಡು ಕೈ ಬೆರಳನ್ನು ಕತ್ತರಿಸಿಕೊಂಡಿದ್ದ. ಮುರುಟಿದ ತನ್ನ ಬೆರಳ ತುದಿಯನ್ನು ಒಮ್ಮೆ ಮೆಲ್ಲನೆ ಚುಂಬಿಸಿದ. ಮನಸ್ಸಿನೊಳಗಿನ ಪಾಪತುಂಬಿದ ಆಸೆಗಳ ಬಗ್ಗೆ ಅಸಹ್ಯಪಟ್ಟುಕೊಳ್ಳುತ್ತಿದ್ದಾಗ, ಆಗ, ನನ್ನಲ್ಲಿ ನಿಜವಾದ ವಿನಯವಿತ್ತು, ಹೃದಯದಲ್ಲಿ ಪ್ರೀತಿಯೂ ಇತ್ತು ಅನಿಸಿತು ಅವನಿಗೆ. ಸದಾ ಕುಡಿದು ಬಂದು ದುಡ್ಡು ಕೇಳುತ್ತಿದ್ದ ಮುದುಕ ಸೈನಿಕನನ್ನು ಕಂಡಾಗ ಮನಸ್ಸಿನಲ್ಲಿ ಯಾವ ಭಾವ ಬರುತ್ತಿತ್ತು, ಮತ್ತೆ 'ಅವಳನ್ನು' ಕಂಡಾಗ ಮನಸ್ಸಿಗೆ ಯಾವ ಭಾವ ಬಂದಿತ್ತು ಎಂದು ನೆನೆದುಕೊಂಡ. ಈಗ ಏನಾಗಿದೆ ಎಂದು ಪ್ರಶ್ನೆ ಕೇಳಿಕೊಂಡ. ಯಾರ ಬಗ್ಗೆಯಾದರೂ ಪ್ರೀತಿ ಇದೆಯೇ? ಫಾದರ್ ಸೆರಾಫಿಮ್ ಬಗ್ಗೆ? ಅಥವಾ ದಿನನಿತ್ಯದ ಕೆಲಸಗಳನ್ನು ಮಾಡಿಕೊಡುವ ಸೋಫಿಯಾ ಇವಾನೊವ್ನಾ ಬಗ್ಗೆ? ಇಂದು ಅಷ್ಟೊಂದು ಜನ ದರ್ಶನಕ್ಕೆಂದು ಬಂದಿದ್ದರಲ್ಲ ಅವರಲ್ಲಿ ಯಾರಾದರೂ ಒಬ್ಬರ ಬಗ್ಗೆ? ಬೆಳಗ್ಗೆ ಬಂದಿದ್ದನಲ್ಲ ನಾಸ್ತಿಕ ಯುವಕ, ಅವನೊಡನೆ ಅಷ್ಟೊಂದು ಮಾತನಾಡಿದ್ದು, ತನ್ನ ಜಾಣತನ ತೋರಿಸಿಕೊಂಡದ್ದು, ಕಲಿತ ವಿದ್ಯೆ ಮರೆತಿಲ್ಲ, ಸಮಕಾಲೀನ ಜ್ಞಾನಕ್ಕೆ ಕುರುಡಾಗಿಲ್ಲ ಎಂದು ತೋರಿಸಿಕೊಂಡದ್ದು, ಅವನ ಬಗ್ಗೆ ಪ್ರೀತಿ ಇದೆಯೇ? ಫಾದರ್ ಸೆರ್ಗಿಯಸ್‌ಗೆ ಎಲ್ಲರ ಪ್ರೀತಿ ಬೇಕಾಗಿತ್ತು, ಆದರೆ ಯಾರ ಬಗ್ಗೆಯೂ ಅವನ ಮನಸ್ಸಿನಲ್ಲಿ ಪ್ರೀತಿ ಇರಲಿಲ್ಲ. ಹೃದಯದಲ್ಲಿ ಪ್ರೀತಿ ಇಲ್ಲ, ವಿನಯವಿಲ್ಲ, ಪಾವಿತ್ರ್ಯವಿಲ್ಲ.
ವ್ಯಾಪಾರಿಯ ಮಗಳಿಗೆ ಇಪ್ಪತ್ತೆರಡು ವರ್ಷವೆಂದು ತಿಳಿದು ಸಂತೋಷವಾಗಿತ್ತು. ನೋಡುವುದಕ್ಕೆ ಚೆನ್ನಾಗಿದ್ದಾಳೆಯೋ ಅನ್ನುವ ಪ್ರಶ್ನೆ ಹುಟ್ಟಿಕೊಂಡಿತ್ತು. ಅವಳು ವೀಕ್ ಆಗಿದ್ದಾಳಾ ಎಂದು ಕೇಳಿದಾಗ ಅವಳು ಚೆಲುವೆಯೋ ಅನ್ನುವ ಪ್ರಶ್ನೆ ಅವನ ಮನಸ್ಸಿನಲ್ಲಿತ್ತು.
'ಇಂಥ ಅಧಃಪತನವೇ? ದೇವರೇ, ಕರುಣೆ ತೋರು! ನನ್ನ ಕೈ ಹಿಡಿದೆತ್ತು ದೇವರೇ!' ಎಂದು ಕೈ ಜೋಡಿಸಿ ಪ್ರಾರ್ಥನೆ ಮಾಡಿಕೊಂಡ. ಕೋಗಿಲೆಗಳು ಸ್ವರವೆತ್ತಿ ಹಾಡುತ್ತಿದ್ದವು. ಹಾರುತ್ತಿದ್ದ ಪುಟ್ಟ ಕೀಟವೊಂದು ಅವನಿಗೆ ಬಡಿದು ಕತ್ತಿನ ಹಿಂಭಾಗದಮೇಲೆ ತೆವಳತೊಡಗಿತು. ಕೊಡವಿಕೊಂಡ. 'ಆದರೆ, ದೇವರಿದ್ದಾನೆಯೋ? ಹೊರಗಿನಿಂದ ಬೀಗ ಹಾಕಿರುವ ಬಾಗಿಲನ್ನೇಕೆ ವ್ಯರ್ಥವಾಗಿ ಬಡಿಯುತ್ತಿದ್ದೇನೆ? ಕೋಗಿಲೆ, ಕೀಟ, ನಿಸರ್ಗ--ಇದೇ ಇರಬಹುದು ಆ ಬೀಗ. ಬೆಳಗ್ಗೆ ಆ ಯುವಕ ಹೇಳಿದ ಮಾತೇ ಸತ್ಯವಾಗಿದ್ದರೆ?' ಮತ್ತೆ ಪ್ರಾರ್ಥನೆಗೆ ತೊಡಗಿದ. ಪ್ರಾರ್ಥನೆಯ ಮಾತುಗಳನ್ನು ಗಟ್ಟಿಯಾಗಿ, ಆಲೋಚನೆಗಳೆಲ್ಲ ಅಡಗಿ, ಮನಸ್ಸು ಶಾಂತವಾಗಿ, ಸ್ಥಿರವಾಗುವವರೆಗೆ ಮತ್ತೆ ಹೇಳಿಕೊಂಡ. ಪಕ್ಕದಲ್ಲಿದ್ದ ಕಿರುಗಂಟೆಯನ್ನೊಮ್ಮೆ ಬಾರಿಸಿದ. ಸೇವಕ ಬಂದ. ವ್ಯಾಪಾರಿಯನ್ನೂ ಅವಳ ಮಗಳನ್ನೂ ಕರೆತರುವಂತೆ ಅವನಿಗೆ ಹೇಳಿದ ಫಾದರ್ ಸೆರ್ಗಿಯಸ್.
ವ್ಯಾಪಾರಿ ಮಗಳ ಕೈ ಹಿಡಿದು ನಡೆಸಿಕೊಂಡು ಬಂದ. ಫಾದರ್ ಸೆರ್ಗಿಯಸ್‌ನ ಕೋಣೆಯಲ್ಲಿ ಬಿಟ್ಟು ತಕ್ಷಣವೇ ಹೊರಟು ಹೋದ. ನೋಡುವುದಕ್ಕೆ ಚೆನ್ನಾಗಿದ್ದಳು. ತಲೆಗೂದಲಲ್ಲಿ ಹೊಳಪಿತ್ತು. ಮುಖ ಬಿಳಿಚಿಕೊಂಡಿದ್ದರೂ ಚರ್ಮದಲ್ಲಿ ಕಾಂತಿಯಿತ್ತು. ಎತ್ತರ ಕಡಮೆ, ಭಯಗೊಂಡ ಮಗುವಿನಂಥ ಮುಖ, ತುಂಬಿಕೊಂಡ ಹೆಣ್ಣಿನ ದೇಹ, ಅತ್ಯಂತ ಸಾಧು ಅನ್ನಿಸುವಂಥ ಭಾವ ಇತ್ತು. ಫಾದರ್ ಸೆರ್ಗಿಯಸ್ ಬಾಗಿಲ ಬಳಿಯೇ ಬೆಂಚಿನ ಮೇಲೆ ಕುಳಿತಿದ್ದ. ಅವನ್ನು ದಾಟಿ ಒಳಗೆ ಹೆಜ್ಜೆ ಇಡುವ ಮೊದಲು ಆಶೀರ್ವಾದಕ್ಕೆಂದು ಅವನ ಪಕ್ಕದಲ್ಲಿ ಅವಳು ತಲೆಬಾಗಿ ನಿಂತಳು. 'ನನ್ನ ಕಣ್ಣು ಅವಳ ಮೈಯನ್ನೆಲ್ಲ ಅಳತೆಮಾಡುವಂತೆ ನೋಡುತ್ತಿದೆಯಲ್ಲ!' ಅನ್ನಿಸಿ ಭಯಗೊಂಡ. ಮನಸ್ಸು ಕುಟುಕಿದಂತಾಯಿತು. ಅವನ ಪಕ್ಕದಲ್ಲಿ ಹಾಯ್ದು ಹೋಗುವಾಗ ಅವಳ ಹೆಣ್ತನದ ಪ್ರಭಾವದಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ಅವಳ ಮುಖ ನೋಡಿದರೆ ಆಸೆ ತುಂಬಿರುವ ದುರ್ಬಲ ಮನಸ್ಸಿನ ಹೆಣ್ಣು ಅನ್ನಿಸಿತು. ಎದ್ದು ಕೋಣೆಯೊಳಕ್ಕೆ ಹೋದ. ಅವಳು ಅವನಿಗಾಗಿ ಕಾಯುತ್ತಾ ಸ್ಟೂಲಿನ ಮೇಲೆ ಕೂತಿದ್ದಳು. ಅವನು ಬಂದ ಕೂಡಲೇ ಎದ್ದು ನಿಂತಳು.
(ಮುಂದುವರೆಯುವುದು)

Rating
No votes yet