ಫಾದರ್ ಸೆರ್ಗಿಯಸ್ ಅಧ್ಯಾಯ ನಾಲ್ಕು
ನಾಲ್ಕು
ಫಾದರ್ ಸೆರ್ಗಿಯಸ್ ಸನ್ಯಾಸಿಯಾಗಿ ಆರು ವರ್ಷ ಕಳೆದಿತ್ತು. ಕಾರ್ನಿವಾಲ್* ಸಮಯ ಬಂದಿತ್ತು. ಪಕ್ಕದ ಊರಿನ ಶ್ರೀಮಂತರ ಗುಂಪು ಭರ್ಜರಿ ಊಟ ಮುಗಿಸಿ, ವೈನ್ ಕುಡಿದು ಟ್ರಾಯ್ಕಾಗಳನ್ನು* ಏರಿ ವಿಹಾರ ಹೊರಟಿದ್ದರು. ಆ ಗುಂಪಿನಲ್ಲಿ ಇಬ್ಬರು ಲಾಯರು, ಒಬ್ಬ ಜಮೀನುದಾರ, ಒಬ್ಬ ಆಫೀಸರು ಮತ್ತು ನಾಲ್ಕು ಜನ ಹೆಂಗಸರಿದ್ದರು. ಒಬ್ಬಳು ಆಫೀಸರನ ಹೆಂಡತಿ, ಇನ್ನೊಬ್ಬಳು ಜಮೀನುದಾರನ ಹೆಂಡತಿ, ಮೂರನೆಯವಳು ಜಮೀನುದಾರನ ಇನ್ನೂ ಮದುವೆಯಾಗಿರದ ತಂಗಿ, ನಾಲ್ಕನೆಯವಳು ವಿವಾಹ ವಿಚ್ಛೇದನ ಪಡೆದಿದ್ದ, ತನ್ನ ವಿಚಿತ್ರ ವರ್ತನೆಯಿಂದಲೂ ಪ್ರಣಯ ಸಾಹಸಗಳಿಂದಲೂ ಊರವರು ಬೆಚ್ಚಿಬೀಳುವಂತೆ ಮಾಡಿದ್ದ ಶ್ರೀಮಂತ ಸುಂದರಿ.
ಹವೆ ಬಹಳ ಚೆನ್ನಾಗಿತ್ತು. ರಸ್ತೆಯ ಮೇಲೆ ಬಿದ್ದಿದ್ದ ಹಿಮ ನುಣ್ಣಗೆ, ಗಟ್ಟಿಯಾಗಿ, ಟ್ರಾಯ್ಕಾಗಳು ಸಲೀಸಾಗಿ ಸಾಗುತ್ತಿದ್ದವು. ಊರಿನಿಂದ ಸುಮಾರು ಏಳು ಮೈಲಿ ಬಂದಮೇಲೆ ಗಾಡಿಗಳನ್ನು ನಿಲ್ಲಿಸಿ ಮುಂದೆ ಹೋಗುವುದೋ ಅಥವಾ ಊರಿಗೆ ಮರಳುವುದೋ ಎಂದು ಚರ್ಚೆ ನಡೆಸಿದ್ದರು.
'ಈ ರೋಡು ಎಲ್ಲಿಗೆ ಹೋಗುತ್ತದೆ?’ ವಿಚ್ಛೇದನ ಪಡೆದಿದ್ದ ಸುಂದರಿ ಮಾಕೊವ್ಕಿನಾ ಕೇಳಿದಳು.
'ಹೀಗೇ ಇನ್ನೂ ಎಂಟು ಮೈಲಿ ಹೋದರೆ ತಾಂಬೋವ್ ಸಿಗುತ್ತದೆ’ ಅವಳೊಡನೆ ವ್ಯವಹಾರ ಇಟ್ಟುಕೊಂಡಿದ್ದ ಒಬ್ಬ ಲಾಯರು ಹೇಳಿದ.
‘ಮತ್ತೆ ಅಲ್ಲಿಂದ?’
‘ಅಲ್ಲಿಂದ ಮಠ ದಾಟಿ ಹೋದರೆ ಎಲ್..., ಊರಿಗೆ ತಲುಪುತ್ತದೆ.’
‘ಮಠ ಅಂದರೆ ಫಾದರ್ ಸೆರ್ಗಿಯಸ್ ಇರುತ್ತಾನಲ್ಲ ಆ ಮಠವೇ?’
‘ಹೌದು.’
‘ಸುಂದರ ಸನ್ಯಾಸಿ ಸ್ಟೆಪಾನ್ ಕಸಾಟ್ಸ್ಕಿ?’
‘ಹೌದು.’
‘ಮಹಿಳೆಯರೇ, ಮಹನೀಯರೇ, ನಾವು ಹೀಗೇ ಹೋಗಿ ಸುಂದರ ಸನ್ಯಾಸಿ ಸ್ಟೆಪಾನ್ ಕಸಾಟ್ಸ್ಕಿಯನ್ನು ನೋಡಿಕೊಂಡು ಬರೋಣ. ತಾಂಬೋವ್ನಲ್ಲಿ ಊಟ ಮಾಡೋಣ.’
‘ರಾತ್ರಿ ಆಗುವುದರೊಳಗೆ ಅಲ್ಲಿಗೆ ಹೋಗಿ ಬರುವುದಕ್ಕೆ ಆಗುವುದಿಲ್ಲ.’
‘ಪರವಾಗಿಲ್ಲ. ರಾತ್ರಿಯಾದರೆ ಕಸಾಟ್ಸ್ಕಿಯ ಮಠದಲ್ಲಿ ಉಳಿಯಬಹುದು.’
‘ಮಠದಲ್ಲಿ ಉಳಿದುಕೊಳ್ಳುವುದಕ್ಕೆ ವ್ಯವಸ್ಥೆ ಇದೆ. ಮಾಖಿಮ್ ಕೇಸಿಗೆ ಹೋಗಿದ್ದಾಗ ಅಲ್ಲಿ ಒಮ್ಮೆ ತಂಗಿದ್ದೆ.’
‘ಇಲ್ಲ, ನಾನು ಕಸಾಟ್ಸ್ಕಿಯ ಸೆಲ್ಲಿನಲ್ಲಿ ರಾತ್ರಿ ಕಳೆಯುವೆ!’
‘ಇಂಪಾಸಿಬಲ್. ನೀವು ಎಲ್ಲಿ ಬೇಕಾದರೂ ರಾತ್ರಿ ಕಳೆಯಬಹುದು, ಆದರೆ ಆ ಸನ್ಯಾಸಿಯ ಸೆಲ್ಲಿನಲ್ಲಿ ಉಳಿಯುವುದು ಅಸಾಧ್ಯ.’
‘ಇಂಪಾಸಿಬಲ್? ಬೆಟ್ ಕಟ್ಟುತ್ತೀರಾ?’
‘ಓಕೆ. ಬೆಟ್ಸ್. ನೀವು ಅವನ ಜೊತೆ ರಾತ್ರಿ ಕಳೆದದ್ದೇ ಆದರೆ ನೀವು ಕೇಳಿದ್ದು ಕೊಡುತ್ತೇನೆ.’
‘ಕೇಳಿದ್ದು ಕೊಡುತ್ತೀರಾ!’
‘ನೀವು ಸೋತರೆ ನಾನು ಕೇಳಿದ್ದು ಕೊಡುವ ಹಾಗಿದ್ದರೆ!’
‘ಸರಿ ಹಾಗಾದರೆ. ನಡೆಯಿರಿ ಹೋಗೋಣ.’
ಗಾಡಿಯವರಿಗೆ ವೋಡ್ಕಾ ಕೊಟ್ಟರು, ತಾವೆಲ್ಲ ಕೇಕು, ವೈನು, ಸಿಹಿ ತಿಂಡಿಗಳನ್ನು ತಿಂದರು. ಹೆಂಗಸರು ಬಿಳಿಯ ಫರ್ ಕೋಟುಗಳನ್ನು ಹಾಕಿಕೊಂಡರು. ಯಾರ ಗಾಡಿ ಮುಂದೆ ಹೋಗಬೇಕೆಂದು ಗಾಡಿಯವರು ಚರ್ಚೆಮಾಡಿಕೊಂಡರು. ಅವರಲ್ಲೆಲ್ಲ ಕಿರಿಯನಾದವನು, ಯಾವಾಗಲೂ ತನ್ನ ಸೀಟಿನ ಮೇಲೆ ಜಂಬದಿಂದ ಓರೆಯಾಗಿ ಕೂರುತ್ತಿದ್ದವನು, ಚಾಟಿ ಬೀಸಿ ಕೂಗು ಹಾಕಿದ. ಕುದುರೆಗಳು ಓಡಿದವು. ಟ್ರಾಯ್ಕಾ ಗಂಟೆಗಳು ಕಿಣಿಕಿಣಿ ಸದ್ದು ಮಾಡಿದವು. ಹಿಮದ ಮೇಲೆ ಕಿರುಗುಟ್ಟುತ್ತಾ ಗಾಡಿಗಳು ಸಾಗಿದವು.
ಸ್ಲೆಜ್ಜುಗಳು ಕೊಂಚವೇ ಕೊಂಚ ಓಲಾಡುತ್ತಾ, ಅಲಂಕೃತ ಬ್ರೀಚ್ಬ್ಯಾಂಡಿನ ಮೇಲೆ ಕುದುರೆಯ ಬಾಲಗಳು ಪುಟಪುಟನೆ ಪುಟಿಯುತ್ತಾ, ಕುದುರೆಗಳು ಸರಾಗವಾಗಿ, ವೇಗವಾಗಿ ಓಡಿದವು. ಅವುಗಳ ಕಾಲಿನ ಕೆಳಗೆ ನುಣುಪಾದ ರಸ್ತೆ ವೇಗವಾಗಿ ಹಿಂದೆ ಹಿಂದೆ ಸಾಗುತ್ತಿರುವಂತಿತ್ತು. ಗಾಡಿ ಓಡಿಸುತ್ತಿದ್ದ ಯುವಕ ಠೀವಿಯಿಂದ ಲಗಾಮು ಹಿಡಿದು ಆಗಾಗ ಎಳೆಯುತ್ತಾ, ಆಗಾಗ ಸಡಿಲ ಬಿಡುತ್ತಾ ಖುಷಿಯಾಗಿದ್ದ. ಮುಂದಿನ ಸೀಟಿನಲ್ಲಿ ಕೂತಿದ್ದ ಲಾಯರು ಮತ್ತು ಆಫೀಸರು ಮಾಕೋವ್ಕಿನಾಳ ತಲೆ ಚಿಟ್ಟು ಹಿಡಿಯುವ ಹಾಗೆ ಒಂದೇ ಸಮ ಮಾತನಾಡುತ್ತಿದ್ದರು. ಆಕೆ ಮಾತ್ರ ಫರ್ ಕೋಟನ್ನು ಮತ್ತಷ್ಟು ಬಿಗಿಯಾಗಿ ಮೈಗೆ ಸುತ್ತಿ ಹಿಡಿದುಕೊಂಡು ನಿಶ್ಚಲವಾಗಿ ಕೂತು ಆಲೋಚನೆಯಲ್ಲಿ ಮುಳುಗಿದ್ದಳು. ‘ಯಾವಾಗಲೂ ಅದೇ, ಅದೇ ಹೊಳೆಯುವ ಮುಖಗಳು, ವೈನು, ಸಿಗಾರಿನ ವಾಸನೆ, ಅದೇ ತಲೆಹರಟೆ. ಯಾವಾಗಲೂ ಅದೇ ವಿಷಯದ ಬಗ್ಗೆ ಅದೇ ಆಲೋಚನೆ, ಅದೇ ಮಾತು! ಸಂತೃಪ್ತರು! ಬದುಕಬೇಕಾದದ್ದೇ ಹೀಗೆ ಅಂತ ಬಲವಾಗಿ ನಂಬಿದ್ದಾರೆ, ಸಾಯುವವರೆಗೂ ಹೀಗೇ ಇದ್ದುಬಿಡುತ್ತಾರೆ. ಥೂ, ಹೀಗೆ ಇರುವುದಕ್ಕೆ ಇಷ್ಟವಿಲ್ಲ. ಬೋರಾಗುತ್ತದೆ. ಹಿಡಿದು ಅಲ್ಲಾಡಿಸುವಂಥ, ಬದುಕೇ ತಲೆಕೆಳಗಾಯಿತು ಅನಿಸುವಂಥ ಅನುಭವ ಆಗಬೇಕು. ಸಾರಾಟೋವ್ನ್ಲೋ, ಅಥವಾ ಎಲ್ಲೋ ಏನೋ, ಎಲ್ಲಿಗೋ ಹೊರಟಿದ್ದವರು ಹಿಮದಲ್ಲಿ ಮರಗಟ್ಟಿ ಹೋದರಂತಲ್ಲ ಅಂಥ ಅನುಭವ ಆಗಬೇಕು. ಹಾಗಾದರೆ ಇವರೆಲ್ಲ ಏನು ಮಾಡುತ್ತಾರೋ? ಹೇಗೆ ಆಡುತ್ತಾರೋ? ಅಸಹ್ಯ ಹುಟ್ಟುವ ಹಾಗೆ ಆಡುತ್ತಾರೆ. ನಿಜವಾಗಲೂ ಸ್ವಾರ್ಥಿಗಳು. ನಾನಿನ್ನೇನು, ಮಹಾ ಸಾಚಾನಾ? ಆದರೂ ನಾನು ನೋಡುವುದಕ್ಕೆ ಚೆನ್ನಾಗಿದ್ದೇನೆ. ಅದು ಇವರಿಗೂ ಗೊತ್ತು. ನನ್ನನ್ನ ನೋಡಿ ಆ ಸನ್ಯಾಸಿ ಏನು ಹೇಳುತ್ತಾನೋ! ಅವನಿಗೆ ‘ಅದರ’ ಬಗ್ಗೆ ರುಚಿ ಕಳೆದುಹೋಗಿದೆಯೋ? ‘ಅದರ’ ಬಗ್ಗೆ ಉದಾಸೀನ ಆಗಿದ್ದಾನೋ? ಇಲ್ಲ. ಸಾಧ್ಯವಿಲ್ಲ. ಎಲ್ಲಾರಿಗೂ ಬೇಕಾಗಿರುವುದು ‘ಅದು’ ಮಾತ್ರವೇ. ಹೋದ ವರ್ಷ ಒಬ್ಬ ಸೈನಿಕ ಬಂದಿದ್ದನಲ್ಲ, ಪೆದ್ದ, ಪೆದ್ದ!’
‘ಇವಾನ್ ನಿಕೊಲೆಯೆವಿಚ್!’ ಜೋರಾಗಿ ಕೂಗಿದಳು.
‘ಏನು ಹೇಳಿ?’
‘ಅವನಿಗೆ ಈಗ ಎಷ್ಟು ವಯಸ್ಸು?’
‘ಯಾರಿಗೆ?’
‘ಸ್ಟೆಪಾನ್ ಕಸಾಟ್ಸ್ಕಿಗೆ.’
‘ನಲವತ್ತು ದಾಟಿರಬೇಕು ಅಂತ ಕಾಣುತ್ತದೆ.’
‘ಹೋದವರನ್ನೆಲ್ಲ ಚೆನ್ನಾಗಿ ಮಾತಾಡಿಸುತ್ತಾನಂತೆ?’
‘ಹೌದು, ಎಲ್ಲಾರನ್ನೂ ಮಾತಾಡಿಸುತ್ತಾನೆ, ಆದರೆ ಯಾವಾಗಲೂ ಅಲ್ಲ.’
‘ಕಾಲಿಗೆ ಶಾಲು ಹೊದಿಸುತ್ತೀರಾ--ಹಾಗಲ್ಲ, ಥೂ--ಇನ್ನೂ ಸ್ವಲ್ಪ ಬಿಗಿಯಾಗಿ--ಹಾಂ, ಸರೀ ಆಯಿತು--ಕಾಲು ಚಿವುಟುವುದು ಯಾಕೋ!’
ಹೀಗೆ ಅವರು ಫಾದರ್ ಸೆರ್ಗಿಯಸ್ ಏಕಾಂತವಾಸದಲ್ಲಿದ್ದ ಗುಹೆ ಇದ್ದ ಕಾಡಿಗೆ ಬಂದರು. ಆಕೆ ಗಾಡಿಯಿಂದ ಇಳಿದು ಉಳಿದವರನ್ನೆಲ್ಲ ಮುಂದೆ ಸಾಗಿ ಎಂದಳು. ಉಳಿದವರೆಲ್ಲ ಹಟ ಒಳ್ಳೆಯದಲ್ಲ ಎಂದು ಅವಳ ಮನಸ್ಸು ತಿರುಗಿಸಲು ನೋಡಿದರು. ಆದರೆ ಅವರು ಮಾತಾಡಿದಷ್ಟೂ ಅವಳ ಹಟ ಹೆಚ್ಚಾಗಿ ಕೋಪಮಾಡಿಕೊಂಡಳು. ಸುಮ್ಮನೆ ಹೋಗುತ್ತೀರೋ ಇಲ್ಲವೋ ಎಂದು ಗದರಿಕೊಂಡಳು. ಬಿಳಿಯಾದ ಫರ್ ಕೋಟು ತೊಟ್ಟು ಆಕೆ ಒಬ್ಬಳೇ ಕಾಲುಹಾದಿಯಲ್ಲಿ ಹೆಜ್ಜೆ ಹಾಕಿದಳು. ಗಾಡಿಗಳು ಹೊರಟು ಹೋದವು. ಏನಾಗುತ್ತದೋ ನೋಡಬೇಕೆಂದು ಕೆಳಗಿಳಿದ ಲಾಯರು ಅವಳನ್ನೇ ದಿಟ್ಟಿಸುತ್ತಾ ನಿಂತುಕೊಂಡ.
ಕಾರ್ನಿವಲ್*-ಕ್ಯಾಥೊಲಿಕ್ ಕ್ರಿಶ್ಚಿಯನ್ನರು ಉಪವಾಸ ಮತ್ತಿತರ ವ್ರತಗಳನ್ನು ಆಚರಿಸಬೇಕಾದ ಲೆಂಟ್ ವಾರದ ಮುನ್ನ, ಫೆಬ್ರವರಿಯ ಮಧ್ಯಭಾಗದಲ್ಲಿ ನಡೆಯುವ ಖುಷಿ ಸಂಭ್ರಮಗಳ ಆಚರಣೆ, ಶ್ರೋವ್ಟೈಡ್
ಟ್ರಾಯ್ಕಾ*- ಗಾಲಿಗಳಿಲ್ಲದ, ಕುದುರೆ ಅಥವ ನಾಯಿಗಳು ಎಳೆಯುವ, ಹಿಮದ ಮೇಲೆ ಸಾಗುವ ಬಂಡಿ, ಸ್ಲೇ.