ಫೆಬ್ರವರಿ ಹದಿನಾಕರ ದಿನಕ್ಕೆ ನೆನೆಯಲು ಐದು ನಲ್ನುಡಿಗಳು

ಫೆಬ್ರವರಿ ಹದಿನಾಕರ ದಿನಕ್ಕೆ ನೆನೆಯಲು ಐದು ನಲ್ನುಡಿಗಳು

ಊರಲ್ಲೆಲ್ಲ ಒಂದೇ ಗಲಾಟೆ ಅಂತೆ. ಅದ್ಯಾವ್ದೋ ದಿನ ಆಚರಿಸಬೇಕೋ ಬೇಡವೋ, ಅದು ನಮ್ಮ ಸಂಸ್ಕೃತಿಗೆ ತಕ್ಕದ್ದೋ ಅಲ್ವೋ ಅಂತ. ಅದೆಲ್ಲ ಬಿಡಿ, ಅದಕ್ಕೆ ಉತ್ತರ ಕೊಡೋಷ್ಟು ಬುದ್ಧಿಯಾಗಲಿ, ವ್ಯವಧಾನವಾಗಲೀ, ಅಗತ್ಯವಾಗಲೀ ಒಂದೂ ನನಗಿಲ್ಲ. 

ಆದರೆ ಈ ಮೊದಲೇ ಬರೆದಿದ್ದ - ಬೇರೆ ಬರಹಗಳಲ್ಲಿ ಹಾಕಿದ್ದ ನಾಕು ಸುಭಾಷಿತಗಳ ಅನುವಾದವನ್ನ ಒಟ್ಟಿಗೆ ಒಮ್ಮೆ ಹಾಕೋಣ ಅನ್ನಿಸ್ತು. ಹಾಕ್ತಿದೀನಷ್ಟೇ.

ಈ ಪದ್ಯಗಳೆಲ್ಲದರ ಮೂಲ: ಭರ್ತೃಹರಿಯ ಶೃಂಗಾರ ಶತಕ

೧:

ಹರಿ ಹರ ಬೊಮ್ಮರನೂ ಚಿಗರೆಗಣ್ಣಿಯರಿಂದ
ಮೂರ್ಕಾಲ ಮನೆಕೆಲಸದಾಳುಗಳಂತಾಗಿಸಿದ
ತೋರದಿಹ ನೋಟದಲಿ ಮಾತಿನಲಿ ನಿಲುಕದಾ ದೇ
-ವರಿಗೆ ನಮಿಸುವೆನು ಹೂ ಬಾಣಗಳ ಹಿಡಿದಿಹಗೆ

 

ಶಂಭುಃ ಸ್ವಯಂಭು ಹರಯೋ ಹರಿಣೇಕ್ಷಣಾನಾಂ
ಯೇನಾಕ್ರಿಯಂತ ಸತತಂ ಗೃಹಕರ್ಮ ದಾಸಾಃ
ವಾಚಾಮಗೋಚರ ಚರಿತ್ರ ವಿಚಿತ್ರತಾಯ
ತಸ್ಮೈ ನಮೋ ಭಗವತೇ ಕುಸುಮಾಯುಧಾಯ

೨:

ಹೆಣ್ಣಲ್ಲದೇ ಮತ್ತೆ ಏನಿಹುದು
ಈ ಜಗದಿ ಅಮೃತ ವಿಷವೆಂದು?
ಒಲಿದವಗೆ ಅವಳೇ ಅಮೃತಬಳ್ಳಿ
ಒಲಿಯದಿರೆ ಆದಾಳು ವಿಷದ ಕಳ್ಳಿ


ನಾಮೃತಮ್ ನ ವಿಷಮ್ ಕಿಂಚಿದೇಕಾಂ ಮುಕ್ತ್ವಾ ನಿತಂಬಿನೀಮ್ |
ಸೇವಾಮೃತಲತಾ ರಕ್ತಾ ವಿರಕ್ತಾ ವಿಷವಲ್ಲರೀ ||

೩:

ಆಗಸದಿ ಹೊಳೆಯುವ ಚುಕ್ಕಿಗಳು ಚಂದಿರನು
ಮತ್ತೆ ದೀಪವು ಕತ್ತಲ ಕಳೆವುದೆಂಬರು.
ಎಳೆಜಿಂಕೆಕಣ್ಣಿನ ಸೊಬಗಿ ಬಳಿಯಿಲ್ಲದಿರಲು
ಜಗವಿದಾಗಿಹುದೆನಗೆ ಕಡುಕತ್ತಲು!


ಸತಿ ಪ್ರದೀಪೇ ಸತ್ಯಗ್ನೌ ಸತ್ಸು ತಾರಾಮಣೀಂದುಷು|
ವಿನಾ ಮೇ ಮೃಗಶಾವಾಕ್ಷ್ಯಾ ತಮೋಭೂತಮಿದಂ ಜಗತ್||

೪:

ಕವಿಗಳ ಮಾತೆಲ್ಲ ಬರಿ ತಿರುಗುಮುರುಗು
ಕರೆಯುವರು ಹೆಣ್ಣನ್ನು ಅಬಲೆಯೆಂದು
ಕಡೆಕಣ್ನೋಟದಲೆ ಇಂದ್ರನನೂ ಗೆಲ್ಲುವ
ಬಲವಿರುವ ಅವರೆಂತು ಅಬಲರಾದಾರು?


ನೂನಂ ಹಿ ತೇ ಕವಿವರಾ ವಿಪರೀತವಾಚೋ
ಯೇ ನಿತ್ಯಮಾಹುರಬಲಾ ಇತಿ ಕಾಮಿನೀಸ್ತಾಃ|
ಯಾಭಿರ್ವಿಲೋಲತರತಾರಕದೃಷ್ಟಿಪಾತೈಃ
ಶಕ್ರಾದಯೋSಪಿ ವಿಜಿತಾಸ್ತ್ವಬಲಾಃ ಕಥಂ ತಾಃ||

೫:

ಸರಸರನೆ ಹರಿಯುವ ಹೊಳೆವ ಚರ್ಮದ ಹಾವು
ಕಚ್ಚುವುದೇ ಮೇಲವಳ ಕಣ್ನೋಟಕಿಂತ
ವೈದ್ಯರಿಹರೆಲ್ಲೆಲ್ಲೂ ಹಾವು ಕಚ್ಚಿದರವಳ
ಕ್ಷಣನೋಟದ ಗಾಯಕೆ ಇಲ್ಲ ಔಷಧಿಯು


ವ್ಯಾದೀರ್ಘೇಣ ಚಲೇನ ವಕ್ರಗತಿನಾ ತೇಜಸ್ವಿನಾ ಭೋಗಿನಾ
ನೀಲಾಬ್ಜದ್ಯುತಿನಾಹಿನಾ ಪರಮಹಮ್ ದಷ್ಟೋ ನ ತಚ್ಚಕ್ಷುಷಾ|
ದಷ್ಟೇ ಸಂತಿ ಚಿಕಿತ್ಸಕಾ ದಿಶಿ ದಿಶಿ ಪ್ರಾಯೇಣ ಧರ್ಮಾರ್ಥಿನೋ
ಮುಗ್ಧಾಕ್ಷೀಕ್ಷಣವೀಕ್ಷಿತಸ್ಯ ನ ಹಿ ಮೇ ಮಂತ್ರೋ ನ ಚಾಪ್ಯೌಷಧಮ್||

-ಹಂಸಾನಂದಿ

Rating
No votes yet

Comments