ಬಂಟಿ,.. ಬಂಟಿ,... ಬಂಟಿಂಗ್ಸ್.... ಬೇಕೆ?
ಬಂಟಿ,.. ಬಂಟಿ,... ಬಂಟಿಂಗ್ಸ್.... ಬೇಕೆ?
ಇಲ್ಲೊಬ್ಬ ಹುಡುಗನ ಭಾವಚಿತ್ರದ ಫ್ಲೆಕ್ಸ್ಗಳನ್ನು ದೀಪದ ಕಂಬಗಳಿಗೆ, ರಸ್ತೆಯ ಮಧ್ಯೆಯಲ್ಲಿರುವ ವೃತ್ತದಲ್ಲಿ ಕಟ್ಟಲಾಗಿದೆ. ಏನೆಂದು ಓದಿದರೆ, ಆತನ ಹೆಸರು, ಜನ್ಮ ದಿನಾಂಕ, ಮರಣ ದಿನಾಂಕ ಎಲ್ಲ ನಮೂದಿಸಿದ್ದಾರೆ.
ಮತ್ತೊಂದು ಭಾವಚಿತ್ರ ಕಾಣಿಸಿತು. ಅದರಲ್ಲಿ ಒಬ್ಬ ಯುವಕ. ಹಸನ್ಮುಖಿಯ ಚಿತ್ರ. ಆದರೆ, ಅದರಲ್ಲಿಯೂ ಹೆಸರು, ದಿನಾಂಕ ಇತ್ಯಾದಿ.
ಇನ್ನೊಂದರಲ್ಲಿ ಒಬ್ಬ ಅಜ್ಜನದು, ಮತ್ತೊಂದರಲ್ಲಿ ಅಜ್ಜಿಯದು, ಹೀಗೆ ಅಲ್ಲಲ್ಲಿ ಮಡಿದವರ ಭಾವಚಿತ್ರಗಳನ್ನು ದೊಡ್ಡದಾಗಿ ಬ್ಯಾನರ್ ಅಥವಾ ಮುದ್ರಿಸಿ ನೇತು ಹಾಕಿರುತ್ತಾರೆ. ಇದರಿಂದ ಮಡಿದವರ ಆತ್ಮಕ್ಕೆ ಶಾಂತಿ ಸಿಗಲೆಂದೋ ಅಥವಾ ಅವರೆಲ್ಲ ಏನಾದರೂ ಸಾಧನೆ ಮಾಡಿದ್ದರೆಂದೋ, ಸಾಧನೆ ಮಾಡುವ ಯಾದಿಯಲ್ಲಿದ್ದರೆಂದೋ ಒಂದೂ ತಿಳಿಯದು.
ಹೀಗೆ ನಿನ್ನೆ ದಿನ ನೋಡಿದೆ ಟಿ. ಆರ್ ಮಿಲ್ಲಿನ ಬಸ್ ನಿಲ್ದಾಣದ ಬಳಿಯಲ್ಲಿ ಒಬ್ಬ ಅಜ್ಜಿಯದು. ತರಕಾರಿ ಮಾರುವ ಒಬ್ಬ ಅಜ್ಜಿಯದು. ಅದರಲ್ಲಿಯೂ ಸತ್ತವರ ಚಿತ್ರಗಳನ್ನು ತಮ್ಮ ಮನೆ ಬೀದಿಗೆ ಹಾಕಿಕೊಳ್ಳಲಿ ತಪ್ಪೇನಿಲ್ಲ. ಅದನ್ನೆಲ್ಲ ಇಡೀ ಒಂದು ಏರಿಯಾ ವ್ಯಾಪ್ತಿಗೇ ಹಾಕುವ ಪರಿಪಾಠವೂ ಇದೆಯಲ್ಲ, ಅದಂತೂ ಮತ್ತೂ ಬೇಸರ/ವಾಕರಿಕೆ ತರಿಸುತ್ತದೆ.
ಇತ್ತೀಚೆಗಂತೂ ಇಂತಹ ಸಂಸ್ಕೃತಿ ನಗರ, ಪಟ್ಟಣಗಳೆನ್ನದೆ ಸಣ್ಣ ಸಣ್ಣ ಹಳ್ಳಿಗಳಲ್ಲೂ ವ್ಯಾಪಿಸುತ್ತಿದೆ. ಅವರವರಿಗೆ ಅವರವರ ವ್ಯಕ್ತಿ, ವಸ್ತುಗಳು ಮುಖ್ಯವಿರುತ್ತದೆ. ಒಪ್ಪಿಕೊಳ್ಳೋಣ. ಅದನ್ನೇ ಒಂದು ವಿಧದ ಸಾಮೂಹಿಕ ಕಲ್ಪನೆಯಲ್ಲಿ ಬೀದಿ ಬೀದಿಗೆ ಹೀಗೆ ನೇತು ಹಾಕುತ್ತಾ ಹೋದರೆ ಹೇಗೆ?
ಮೊದಲೇ ಹಬ್ಬಗಳಿಗೆಂದೋ, ಹೊಸ ಪಕ್ಷದ ಅಭ್ಯರ್ಥಿಗೆಂದೋ, ಶಾಸಕರ, ಸಚಿವರ ಹೀಗೆ ರಾಜಕಾರಣಿಗಳ ಹುಟ್ಟುಹಬ್ಬ, ಯಾವುದೋ ಯೋಜನೆಯ ಉದ್ಘಾಟನಾ ಸಮಾರಂಭ ಇತ್ಯಾದಿಗೆಳೆಂದು ಅದರಲ್ಲಿಯೂ ನಾಡ ಅಥವಾ ರಾಷ್ಟ್ರೀಯ ಹಬ್ಬಗಳಿಗೆ ಮುನ್ನಾ ದಿನ ಅಥವಾ ತಿಂಗಳ ಮುಂಚೆಯೇ ಈ ಫ್ಲೆಕ್ಸ್ ಬಂಟಿಂಗ್ಸ್, ಬ್ಯಾನರ್ಸ್ ರಸ್ತೆಯಲ್ಲಿನ ಪ್ರತಿಯೊಂದು ಕಂಬಗಳ ಮೇಲೆಯೋ, ರಸ್ತೆ ವಿಭಜಕಗಳ ನಡುವಿರುವ ಸ್ಥಳದಲ್ಲಿಯೋ, ರಸ್ತೆ ತಿರುವಿನಲ್ಲಿಯೋ ಹೀಗೆ ಜಾಗ ಕಂಡಲೆಲ್ಲ ರಾರಾಜಿಸುತ್ತಿರುತ್ತವೆ. ಇವೆಲ್ಲ ಇರಲಿ. ಅದರೊಡನೆ ಅ ಏರಿಯಾದ, ಸಂಘದ, ವರಿಷ್ಠ(?) ರ ಚಿತ್ರಗಳನ್ನೆಲ್ಲಾ ತುಂಬಿರುತ್ತಾರೆ. ಇದು ಯಾವ ಕರ್ಮ? ಯಾರಿಗೆ ಯಾರೋ ಶುಭಾಶಯ ಕೋರಲು ಹೀಗೆಲ್ಲ ವಿಪರೀತ ದೃಶ್ಯ ಮಾಲಿನ್ಯ ಮಾಡಬೇಕೆ?
ಮೊನ್ನೆ ಬಸ್ಸಿನಲ್ಲಿ ಬರುವಾಗ ಇದ್ದ ಒಂದು ಸ್ಟಿಕರಿನಲ್ಲಿ ಕನ್ನಡ ನಾಡಿನ ಜ್ಞಾನಪೀಠ ವಿಜೇತರ (ಇವು ಚಿಕ್ಕದಾಗಿವೆ) ಆ ಚಿತ್ರದೊಂದಿಗೆ ಕನ್ನಡ, ಹೆಮ್ಮೆ ಇತ್ಯಾದಿ ಬರಹದೊಂದಿಗೆ ಮಂತ್ರಿಮಹೋದಯರ ದೊಡ್ಡ ಚಿತ್ರವಿದೆ. ಇಲ್ಲಿ ಇವರು ಯಾರನ್ನು, ಯಾವುದನ್ನು ಬಿಂಬಿಸಲು ಹೀಗೆ ಮಾಡಿದ್ದಾರೆ ಅರ್ಥಮಾಡಿಕೊಳ್ಳಬೇಕು. ಕನ್ನಡ ನಾಡನ್ನೋ, ಜ್ಞಾನಪೀಠಿಗಳನ್ನೋ ಅಥವಾ ತಮ್ಮನ್ನೋ????
ಇವೆಲ್ಲ ಒಂದು ವಿಧದ ಜಾಹಿರಾತು ಪ್ರಕ್ರಿಯೆಗಳಾದರೆ, ಮತ್ತೊಂದು ಸಿನಿಮಾ ಪೋಸ್ಟರ್ಗಳು. ಬಿಸಿಲೆ ಚಿತ್ರದ ಪೋಸ್ಟರ ನೋಡಿದರೆ ಸಾಕು ನಮ್ಮ ಕಲಾವಿದರು (??) ಯಾವ ಮಟ್ಟ ತಲುಪಿದ್ದಾರೆ ಎನಿಸುತ್ತದೆ.
ಬ್ಯಾನರ್ ಸಂಸ್ಕೃತಿಯು ಇರಲಿ ಬೇಡವೆನ್ನುವುದಿಲ್ಲ. ಆದರೆ, ಅದು ಅತಿಯಾಗಿ ನಗರ, ಪಟ್ಟಣ, ಹಳ್ಳಿ, ಕುಗ್ರಾಮವೆನ್ನದೇ ಬೃಹದಾಕಾರವಾಗಿ ಬೆಳೆಯುತ್ತಿದೆ. ಇದರಿಂದ ದೃಶ್ಯಮಾಲಿನ್ಯವಲ್ಲದೇ ಅಪಾಯಗಳೂ ಇವೆ. ಹೇಗೆಂದರೆ, ದೊಡ್ಡ ದೊಡ್ಡ ಬ್ಯಾನರಗಳನ್ನು ರಸ್ತೆಯ ಬದಿಯಲ್ಲಿ ಕಟ್ಟುವಾಗ ಬೊಂಬಿನ ಸಹಾಯದಿಂದ ಕಟೌಟಿನಂತೆ ಕಟ್ಟಿರುತ್ತಾರೆ. ಅದೂ ೩-೪ ಆಳೆತ್ತರದವುಗಳು. ಮಳೆಯೋ, ಗಾಳಿಯೋ ಬೀಸಿ ಜನರು / ವಾಹನಗಳ ಮೇಲೆ ಬೀಳಬಹುದು. ಇಲ್ಲವೇ, ರಸ್ತೆಯಬದಿಯಲ್ಲಿನ ತಿರುವುಗಳಲ್ಲಿ ವಾಹನಗಳ ಅಪಘಾತವಾಗಬಹುದು. ಕೆಲವರಿಗೆ ಅದೇ ಪ್ರತಿಷ್ಠೆಯ ವಿಷಯವಾಗಿ ಇನ್ನೂ ದೊಡ್ಡದಾಗಿ ಪ್ರಿಂಟಿಸಿ ಕಟ್ಟಿಸಬಹುದು ಅಥವಾ ಕೆಲವೊಮ್ಮೆ ಹೊಡೆದಾಟಗಳೂ ಆಗಬಹುದು. ಇಂತಹವುಗಳನ್ನು ಕೆಲವೊಮ್ಮೆ ವಿದ್ಯುತ್ಕಂಬಗಳಿಗೆ ತಾಗುವಂತೆ ಕಟ್ಟಿರುತ್ತಾರೆ. ಬಸ್ ನಿಲ್ದಾಣಗಳಲ್ಲಿ ಕಟ್ಟಿರುತ್ತಾರೆ. ಆಗೆಲ್ಲ ಅಪಾಯ ಕಟ್ಟಿಟ್ಟ ಬುತ್ತಿ. ಕೆಲವೊಮ್ಮೆ ಕಟ್ಟುವಾಗಲೇ ಅಪಘಾತ ಸಂಭವಿಸಬಹುದು.
ಇಂತಹ ವಿಪರೀತ ಸಂಸ್ಕೃತಿ ಬೇಕೆ? ಸಾಮಾಜಿಕ ಜವಾಬ್ದಾರಿಯುಳ್ಳ ಅಂಗ ಸಂಸ್ಥೆಗಳು ಇಂತಹವುಗಳನ್ನು ತೆರವುಗೊಳಿಸಲಿ ಅಥವಾ ಅದಕ್ಕೆ ಶುಲ್ಕ/ದಂಡ ವಿಧಿಸಿ ಇಂತಹ ಪರಿಪಾಟವನ್ನು ಹದ್ದುಬಸ್ತಿಗೆ ತಂದರೆ, ಆಗ ನಗರದ ಅಂದ (ಇದು ನಿಮ್ಮ ನಗರ, ಶುಚಿಯಾಗಿಡಿ - ಘೋಷಣೆ) ಸಾರ್ಥಕವೆನಿಸುತ್ತದೆ.
ಲೇಖನ: ಚಂದ್ರಶೇಖರ ಬಿ.ಎಚ್.
http://kshanachintane.blogspot.com
Comments
ಉ: ಬಂಟಿ,.. ಬಂಟಿ,... ಬಂಟಿಂಗ್ಸ್.... ಬೇಕೆ?
ಉ: ಬಂಟಿ,.. ಬಂಟಿ,... ಬಂಟಿಂಗ್ಸ್.... ಬೇಕೆ?