ಬರವಣಿಗೆಯ ಅಭ್ಯಾಸ

ಬರವಣಿಗೆಯ ಅಭ್ಯಾಸ

[ಸುಮ್ಮನೆ ಕಣ್ಣಿಗೆ ಕಂಡದ್ದನ್ನು ವಿವರವಾಗಿ ಬರೆಯುವ ಅಭ್ಯಾಸ ಮಾಡಬೇಕು ಅನ್ನಿಸಿತು. ಹೀಗೆ ಇವತ್ತು ಬರೆದೆ. ಯಾವ ಉದ್ದೇಶವೂ ಇಲ್ಲ.ಸುಮ್ಮನೆ ಇನ್ನೊಂದು ಥರ ಬರೆಯುವ ಅಭ್ಯಾಸಕ್ಕೆ ಬರೆದದ್ದು. ಏನನ್ನಿಸುತ್ತದೆ? ಅನ್ನಿಸುವುದಿಲ್ಲವೋ!]
ಧನುರ್ಮಾಸದ ಕೊನೆಯ ದಿನ. ಹಾಗಂತ ಗೊತ್ತಾಗಿದ್ದು ನಿನ್ನೆ ದಿನ ಚಂದ್ರ “ನಾಳೆ ಬೆಳಗ್ಗೆ ದೇವಸ್ಥಾನಕ್ಕೆ ಹೋಗಬೇಕು” ಅಂತ ಹೇಳಿ ವಿವರಿಸಿದಾಗ. ಕನ್ನೇಗೌಡನ ಕೊಪ್ಪಲಿನ ಚಂದ್ರಮೌಳಿ ದೇವಸ್ಥಾನದಲ್ಲಿ ಬೆಳಗಿನ ಆರು ಗಂಟೆಗೇ ಹೆಣ್ಣುಮಕ್ಕಳ ಸಂದಣಿ. ಸ್ನಾನ ಮಾಡಿ ಒದ್ದೆ ಕೂದಲಲ್ಲಿ ಬಂದವರು, ಪ್ಲಾಸ್ಟಿಕ್ಕು ಬುಟ್ಟಿಯಲ್ಲಿ ಹಣ್ಣು ಕಾಯಿ ತಂದವರು. ಮಕ್ಕಳು. ಮುದುಕಿಯರು. ಮಧ್ಯವಯಸ್ಸಿನವರು. ಆತಂಕದ ಮುಖ, ದೇವರ ಬಗ್ಗೆ ಭಯದ ಮುಖ, ದಿನಾ ದೇವಸ್ಥಾನಕ್ಕೆ ಬರುವುದು ಅಭ್ಯಾಸವಾಗಿದೆ ಅನ್ನುವುದನ್ನು ಸೂಚಿಸುವ ಮುಖ. ಕೆಲವು ಗಂಡಸರು. ಧನುರ್ಮಾಸ ಅನ್ನುವಂಥ ಕ್ಯಾಲೆಂಡರನ್ನು ಎಷ್ಟೊಂದು ಜನ ಫಾಲೋ ಮಾಡುತ್ತಾರಲ್ಲ ಅನ್ನಿಸಿತು. ಆಗಲೇ ಪೂಜೆ ಮುಗಿಸಿ, ಮಂಗಳಾರತಿ ಆಗಿ, ಮೆಟ್ಟಿಲ ಮೇಲೆ ಅಂಗಳದಲ್ಲಿ, ಕಲ್ಲುಬೆಂಚುಗಳ ಮೇಲೆ, ಗುಂಪು ಗುಂಪಾಗಿ ಕೂತು, ಹೋಗಿ ಬರುವವರಿಗೆ ಅಡ್ಡಿಯಾಗಿದ್ದೇವೆ ಅನ್ನುವುದನ್ನೂ ಗಮನಿಸದೆ ಪ್ರಸಾದ ತಿನ್ನುತ್ತಾ, ಮಕ್ಕಳಿಗೆ ತಿನ್ನಿಸುತ್ತಾ ಇದ್ದರು. ಬಿಸಿಯಾದ ಸಿಹಿ ಪೊಂಗಲು. ಬಾಗಿಲಲ್ಲಿ ಒಟ್ಟಿಗೆ ಒಳಗೆ ಹೋಗಲು ಬಯಸುವ, ಹೊರಗೆ ಬರಲು ಹಾತೊರೆಯುವ ಜನ.
ದೇವಸ್ಥಾನದ ಅಂಗಳಕ್ಕೆ ನೀರು ಚೆಲ್ಲಿತ್ತು. ಒಬ್ಬ ಮುದುಕಿ ಬಗ್ಗಿ ರಂಗೋಲೆ ಹಾಕುತ್ತಿದ್ದಳು. ಜನ ಬಂದಾಗ ಎದ್ದು ನಿಂತು ಹೋಗಲು ಜಾಗ ಬಿಟ್ಟು ಮತ್ತೆ ರಂಗೋಲೆ ಇಡಲು ಬಗ್ಗುತ್ತಿದ್ದಳು. ಕಲ್ಲು ಬೆಂಚುಗಳ ಬಳಿ ಒಂದು ಬಿದಿರಿನ ಬುಟ್ಟಿ ಇಟ್ಟು ಅಲ್ಲಲ್ಲಿಂದ ಕಸ ಗುಡಿಸಿ ತಂದು ಅದಕ್ಕೆ ಹಾಕುತ್ತಿದ್ದವಳು ಇನ್ನೊಬ್ಬಳು ಮುದುಕಿ. ಬಾಗಿಲಲ್ಲಿ ಇದ್ದಾತ ಒಂದು ಒಣಗಿದ ಮುತ್ತುಗದ ಎಲೆಯ ಮೇಲೆ ಒಂದಿಷ್ಟು ಪೊಂಗಲು ಹಾಕಿ ನನ್ನ ಎದುರಿಗೂ ಹಿಡಿದ. ಅಲ್ಲೇ ಮೆಟ್ಟಿಲ ಮೇಲೆ ಕೂತು ತಿಂದೆ.
ವಾಕಿಂಗ್ ಹೊರಟೆ. ಕತ್ತಲು ಕತ್ತಲು. ಸಮೀಪದಲ್ಲಿಯೇ ತಲೆ ಮೇಲೆ ಇರುವ ಬೀದಿ ದೀಪಗಳ ಹಿನ್ನೆಲೆಗೆ ಮಸುಕು ಮಸುಕಾಗಿ ಬೆಳಗಾಗುತ್ತಿರುವ ಆಕಾಶ. ಎದುರಿನಿಂದ ಬರುವ ಒಂದೋ ಎರಡೋ ಮೋಟರುಬೈಕುಗಳು, ಅಪರೂಪಕ್ಕೆ ಕಾರು. ಒಂದೊಂದಾಗಿ ಆರುತ್ತಿರುವ ದೀಪಗಳು. ಹೆಚ್ಚುತ್ತಿರುವ ಬೆಳಕು. ಸಾಸುವೆ ಕಾಳಿನಷ್ಟು ಹಿತವಾದ ಚಳಿ.
ಕುಕ್ಕರ ಹಳ್ಳಿಯ ಬಳಿ ಆರೆಂಟು ಜನರ ಮತ್ತು ಕೆಲವು ಮಕ್ಕಳ ಭಜನೆ ಕೇಳುತ್ತಿತ್ತು. ಅವರು ಯಾರೂ ಕಾಣುತ್ತಿರಲಿಲ್ಲ. ಹಾಡುವಾತ ಯಾರೋ ಬಹಳ ಚೆನ್ನಾಗಿ, ಪಳಗಿದ ದನಿಯಲ್ಲಿ ಹೇಳುತ್ತಿದ್ದ. ಕೊನೆಯ ಸಾಲಿನ ಕೂಡಲ ಸಂಗಮ ಅನ್ನುವಷ್ಟು ಮಾತ್ರ ಕೇಳಿಸಿತು. ಹಾಡು ಮುಗಿಸಿ ಗೋವಿಂದಾ ಗೋವಿಂದಾ ಅಂತ ಒಮ್ಮೆ ಅಂದು ಆಮೇಲೆ ಇನ್ನು ಯಾವುದೋ ಭಜನೆ ಶುರು ಮಾಡಿಕೊಂಡರು. ಬೇರೆ ರಾಗ, ಮಕ್ಕಳ ದನಿಯೇ ಜೋರು.
ಬೆಳಗಿನ ಏಳು ಗಂಟೆಯಾಗಿತ್ತು. ಮೊದಲು ಅವನ ಹಾಡು ಕೇಳಿಸಿತು. ಆಮೇಲೆ ಅವನನ್ನು ನೋಡಿದೆ. ಕೆಂಪು ರೇಶಿಮೆಯ ಮಕುಟವನ್ನು ಕಚ್ಚೆಹಾಕಿ ಉಟ್ಟಿದ್ದ. ಕಾವಿಯ ಜುಬ್ಬ ತೊಟ್ಟಿದ್ದ. ಉದ್ದವಾದ ತಲೆಗೂದಲು ಹಿಂದಕ್ಕೆ ಬಾಚಿದ್ದ. ಹೆಗಲಲ್ಲಿ ಜೋಳಿಗೆ ಇತ್ತು. ಭಾರ ಇದ್ದಿರಬಹುದು. ಮುಖ ಕಪ್ಪು. ಹಣೆಗೆ, ಎರಡು ಹುಬ್ಬುಗಳ ನಡುವೆ ಮೂಗಿನ ಸೇತುವೆ ಮೇಲೆ, ಕಿವಿಗೆ ವಿಭೂತಿ ಹಚ್ಚಿದ್ದ. ಕತ್ತಿಗೆ ಹಾರ್ಮೋನಿಯಂ ನೇತುಹಾಕಿಕೊಂಡಿದ್ದ. “ಕೊರಳಲಿ ಮಾಂಗಾಯ..” ಅನ್ನುವ ನುಡಿ ಕೇಳಿಸಿತು. ಮಾಂಗಾಯಿ ಇರಬೇಕಲ್ಲವೆ ಅಂತ ಯೋಚನೆ ಬಂತು. ಅವನ ಧ್ವನಿ ಚೆನ್ನಾಗಿತ್ತು. ಪುರಂದರ ದಾಸರ ಹಾಡಲ್ಲವೆ ಅನ್ನಿಸಿತು.
ಅವನು ನಿಂತಿದ್ದ ಮನೆಯ ಗೇಟಿನ ಮುಂದೆ ಮಧ್ಯವಯಸ್ಸು ಮೀರಿದ ದಪ್ಪನೆಯ ಹೆಂಗಸೊಬ್ಬಳು ಕಸ ಗುಡಿಸಿ ಮುಗಿಸಿ ನೆಲಕ್ಕೆ ನೀರು ಚಿಮುಕಿಸುತ್ತಿದ್ದಳು. ಅವಳಿಗೂ ಅವನಿಗೂ ಹತ್ತಡಿ ದೂರ ಇದ್ದಿರಬಹುದು. ಆದರೆ ಅವನು ಅಲ್ಲಿರುವುದು ಗೊತ್ತೇ ಇಲ್ಲ ಎಂಬಂತೆ ಆಕೆ ನೀರು ಚಿಮುಕಿಸಿ ರಂಗೋಲೆ ಹಾಕತೊಡಗಿದಳು.
ಆತ ನಿಂತಿದ್ದ ಪಕ್ಕದ ಮನೆಯ ಮಹಡಿಯ ಮೇಲೆ ಚೂಡಿದಾರ್ ಹಾಕಿಕೊಂಡ ಹೆಂಗಸು, ತಲೆತುಂಬ ದುಪ್ಪಟ್ಟಾ ಹೊದ್ದು ಕಿವಿಗೆ ಮೊಬೈಲು ಫೋನು ಇಟ್ಟುಕೊಂಡು ಯಾರದೋ ಮಾತು ಕೇಳುತ್ತಿದ್ದಳು. ಅವಳ ಕಣ್ಣಿಗೂ ಅವನು ಬಿದ್ದಂತೆ ಇರಲಿಲ್ಲ, ಅವನ ಹಾಡು ಕೇಳಿಸಿದಂತೆ ಇರಲಿಲ್ಲ.
ಹಾಡುತ್ತಿದ್ದ ಆ ಕಪ್ಪನೆಯ ಮನುಷ್ಯ ಇಡಲೋ ಬೇಡವೋ ಎಂಬಂತೆ ಒಂದೊಂದೇ ಹೆಜ್ಜೆ ಮನೆಯ ಗೇಟಿನ ಕಡೆ ಇಡುತ್ತಿದ್ದ.
ಅವನ ಎಡ ಬದಿಗೆ ಇದ್ದ ಮನೆಯವನು, ಬಿಳಿ ಪಂಚೆ ಉಟ್ಟಿದ್ದನ್ನು ಮೇಲೆ ಎತ್ತಿ ಕಟ್ಟಿ, ಗೇಟನ್ನು ತೆರೆದು, ಸ್ಕೂಟರನ್ನು ಹೊರಗೆ ನಿಲ್ಲಿಸಿ, ಮತ್ತೆ ಒಳಗೆ ಹೋಗಿ ಕಾರನ್ನು ತೊಳೆಯಲು ಶುರು ಮಾಡಿದ.
ರಂಗೋಲೆ ಇಟ್ಟ ಹೆಂಗಸು ಒಳಕ್ಕೆ ಹೊರಟಳು. ಗೇಟು ಎಳೆದುಕೊಂಡಳು.
ತಳ್ಳು ಗಾಡಿಯಲ್ಲಿ ಒಬ್ಬಾತ ತರಕಾರಿ ಹಾಕಿಕೊಂಡು ತಳ್ಳಿಕೊಂಡು ಬರುತ್ತಿದ್ದ.
ಹೆಂಗಸು ಮನೆಯೊಳಕ್ಕೆ ಹೋಗಿ ಬಾಗಿಲು ಮುಂದೆಳೆದುಕೊಂಡಳು.
ನಾನು ಹಾಡು ಕೇಳುತ್ತಾ ಪಕ್ಕದ ರಸ್ತೆಗೆ ತಿರುಗಿದೆ.
ಒಂದು ನಾಯಿ ಮಲಗಿತ್ತು. ಎಡಗಾಲು ನೇರ ಚಾಚಿ, ಬಲಗಾಲು ಕೊಂಚ ಮಡಿಸಿಕೊಂಡು, ಬಾಯಿ ಕೊಂಚವೇ ತೆರೆದು, ಲಬಕ್ಕನೆ ಎಡಕ್ಕೆ ತಿರುಗಿ ನೊಣವನ್ನೋ ಸೊಳ್ಳೆಯನ್ನೋ ಕಚ್ಚಲು, ಓಡಿಸಲು ನೋಡುತ್ತಿತ್ತು. ಇನ್ನೊಂದು ನಾಯಿ ಅದೇ ಆಗ ಎದ್ದು ಎರಡೂ ಕಾಲು ಮುಂದೆ ಚಾಚಿ, ಮೈ ಮುರಿದು, ಮತ್ತೆ ನೆಟ್ಟಗೆ ನಿಂತು, ಒಮ್ಮೆ ಆಕಳಿಸಿ, ಆಮೇಲೆ ಏನು ನೋಡಲಿ ಎಂಬಂತೆ ಸುತ್ತಲೂ ನೋಡುತ್ತಿತ್ತು. ನೋಡುವುದಕ್ಕೆ ಅರ್ಹವಾದದ್ದು ಅದಕ್ಕೆ ಏನೂ ಕಂಡಂತೆ ಇರಲಿಲ್ಲ.
ಅವನ ಹಾಡು ದೂರವಾಗುತ್ತಿತ್ತು.
ಒಬ್ಬ ಹೆಂಗಸು ಮಾಸಲು ಸೀರೆ ಉಟ್ಟು, ನಿರಿಗೆಗೆ ಬಾಳೆಕಾಯಿ ಗಂಟು ಹಾಕಿಕೊಂಡು, ಕೊರಳಲ್ಲಿ ಕರಿಮಣಿ ಸರ, ಇನ್ನೊಂದು ದಾರಕ್ಕೆ ಯಾವುದೋ ತಾಯತ ಕಟ್ಟಿಕೊಂಡು, ತಲೆಯ ಮೇಲೆ ಅವಳ ಭುಜಗಳೆರಡನ್ನೂ ಮೀರುವಷ್ಟು ಅಗಲವಾಗಿದ್ದ ಬುಟ್ಟಿ ಹೊತ್ತು, ಆ ಬುಟ್ಟಿಯೊಳಗೆ ಕ್ಯಾಲೆಂಡರಿನಲ್ಲಿ ರಾವಣನ ಆಸ್ಥಾನದಲ್ಲಿ ಕೂತ ಹನುಮಂತನ ಬಾಲದ ಸಿಂಹಾಸನ ನೆನಪಿಸುವ ಆಕಾರದಲ್ಲಿ ಕಾಕಡಾ ಹೂವನ್ನು ಸುರುಳಿ ಸುರುಳಿ ಸುತ್ತಿ, ಹೂವಿನ ಗೋಪುರ ಹೊತ್ತ ಬುಟ್ಟಿಯನ್ನು ತಲೆಯ ಮೇಲೆ ಬ್ಯಾಲೆನ್ಸು ಮಾಡುತ್ತಾ, ಸಲೀಸಾಗಿ ಎರಡೂ ಕೈ ಬೀಸುತ್ತಾ ಲಯಬದ್ಧವಾಗಿ ಹೂ....ವಾ...ಆ....ಯ್ ಅಂತ ಕೂಗುತ್ತಾ ಹೋಗುತ್ತಿದ್ದಳು. ಅವಳ ರಾಗವನ್ನೂ ಲಯವನ್ನೂ ಬರೆದು ತೋರಿಸುವುದು ಹೇಗೆ!

Rating
No votes yet

Comments