ಬರಹದ ಹಣೆ ಬರಹ…

ಬರಹದ ಹಣೆ ಬರಹ…

ಬರಹದ ಹಣೆಬರಹ ಬರೆಯೋದಕ್ಕೆ ನಾನು ಬ್ರಹ್ಮ ಅಲ್ಲದೇ ಇದ್ರೂ ಈ ಬರಹವೆಂಬ ಬಾಳಿನ ಬಹುಮುಖ್ಯ ಕೊಂಡಿಯ ಬಗ್ಗೆ, ಅದರ ಹಿಂದಿನ ಕಥೆಗಳ ಬಗ್ಗೆ ಹಾಗೇ ಸುಮ್ಮನೇ ಕುಳಿತು ಯೋಚಿಸೋದನ್ನು ಮಾಡ್ತಾ ಮಾಡ್ತಾ ಹಾಗೇ ಸುಮಾರು ವರ್ಷಗಳೇ ಆಯಿತು ಅನ್ಸುತ್ತೆ… ಅದಕ್ಕೇ ಇರ್ಬೇಕು… ಈ ಬರಹದ ಹಣೆಬರಹ…. ಅದ್ರೆ ನನ್ನ ಬರಹಗಳ ಇತಿಹಾಸದಲ್ಲಿ ದೊಡ್ಡದೊಂದು ಬಿರುಕು…

ಆ ಬಿರುಕು… ಹಾಗೂ ದೊಡ್ಡದೊಂದು ರಂಧ್ರವನ್ನು ಸುಮ್ಮನೇ ಕುಳಿತು ನಿಟ್ಟಿಸುತ್ತಾ ಇದ್ದಾಗ ಸುಮ್ಮನೇ ಅನಿಸುತ್ತಿತ್ತು… ಭಾಷೆಗೆ ಬೇಕೊಂದು ದೊಡ್ಡ ಉಳಿ (=ಹರಿತ ಕಳೆದ ವಸ್ತುಗಳನ್ನು ಮಸೆಯಲು ಉಪಯೋಗಿಸುವ tool) ಅಂತ…

ಮನಸಿಗೆ ಮಾತಾಡೋದು ಗೊತ್ತಿಲ್ಲ…

ಮನಸಿಗೆ ಮಾತಿನ ಕಡಲನ್ನು ಹರಿಸೋದು ಗೊತ್ತು…

ಮನಸು ಮಾತಾಗಲಾರದು

ಮನಸು ಮಾತಿಗೆ ಕಾರಣವಾದೀತು

ಮನಸು ಮಾತಿನ ಕಾರಣವಾದಾಗ

ಮಾತಿಗೆ ಮನಸೇ ತಲೆಬಾಗಬೇಕು

ಮನಸಿನ ಮಾತಾಗೋದು ಆವಾಗಲೇ…

ಈ ಮನಸುಗಳ ಮಾತಿನ ಬಗ್ಗೆ… ಕನಸುಗಳ ಕಲರವಗಳ ಬಗ್ಗೆ… ಕನಸಿನಲೆಯಲ್ಲಿ ಆಗಾಗ ಸಿಗೋ ಸುಳಿಗಳ ಬಗ್ಗೆ ಯೋಚಿಸ್ತಾ ಇರುವಾಗ ಮನಸಿನ ವಿಚಿತ್ರಗಳ ಬಗ್ಗೆ… ಅದರ ಉತ್ತರವಿಲ್ಲದ ಕಿರುಚಾಟಗಳ ಬಗ್ಗೆ ನನಗೇ ಅಚ್ಚರಿ… ಇದೇ ಮನಸ್ಸು ಅಂದಿನ ಆ ದಿನಗಳಲ್ಲಿ  ಯೋಚಿಸಿದ್ದಕ್ಕೆ ಇಂದು ಹೌದು ಎಂದು ತಲೆಬಾಗದೇ ಇರುವಾಗ ಅದ್ಯಾಕೆ ಹಾಗೆ ಅಂದುಕೊಳ್ಳುವ ಸರದಿ ನನ್ನದು..

ಮನಸು ಹುಚ್ಚು ಕುದುರೆ ಅನ್ನುವುದನ್ನು ಸಾಧಿಸಲು ಇಲ್ಲಿ ಪ್ರಯತ್ನಪಡ್ತಾ ಇಲ್ಲ… ಆದ್ರೆ, ಈ ಮನಸ್ಸಿಗೆ ಅದೆಷ್ಟು ದಾರಿಗಳು, ರಾಜಮಾರ್ಗಗಳು… ಹಾಗೇನೇ ಒಳಮಾರ್ಗಗಳು… ಅಲ್ಲದೇ ಅವೆಲ್ಲವನ್ನೂ ತನ್ನದೇ ಅಂದುಕೊಳ್ಳುತ್ತಾ ಸಾಗುವ ಛಾತಿ… ಯಾಕೋ ಅತಿರೇಕಕ್ಕೆ ತಿರುಗುತ್ತದೆ ಈ ಮನಸ್ಸು ಅನ್ನೋ ವೇಳೆಗಾಗಲೇ ಶಾಂತ ಸಾಗರದ ಪ್ರತಿರೂಪವಾಗೋ ವಿಚಿತ್ರ ಬುದ್ಧಿ…

ಮನಸ್ಸು.. ಅದರ ಈ ವಿಚಿತ್ರ ರೂಪಗಳ ಬಗ್ಗೆ ಹಾಗೇ ಸುಮ್ಮನೇ ಯೋಚಿಸುತ್ತಾ ಕೂಡೋಣ…

ಹಾಗೇ ಮೊನ್ನೆ ಸಂಗೀತ ಕೇಳ್ತಾ ಕೂತಿದ್ದೆ… ನನಗೆ ಯಾವುದೇ ಸಂಗೀತ ಹಿತ ಅನಿಸಿದರೆ ಅದು ಯಾವ ಭಾಷೆ, ಯಾವ ಶೈಲಿಯದು ಅನ್ನೋ ಚಿಂತೆ ಇಲ್ಲ… ಕೇಳೋದಕ್ಕೆ ಹಿತವಾಗಿರ್ಬೇಕು.. ಕನ್ನಡ, ಹಿಂದಿ ಇಲ್ಲಾ ಇಂಗ್ಲಿಷ್ ಆದ್ರೂ ಸೈ… ಒಟ್ಟಾರೆ ತಂಪೆರೆಯುವ ಸಂಗೀತ ಧಾರೆಗೆ ಮೈಯೊಡ್ಡೋದು ಅಂದ್ರೆ ಅದೇ ನೀರಿನಲ್ಲಿ ಮೈ ತೋಯಿಸೋದಕ್ಕಿಂತ ಇನ್ನಷ್ಟು ಇಷ್ಟ…

ಈ ಮೈ ತೋಯಿಸೋದರ ಬಗ್ಗೆ ಮಾತಾಡೋವಾಗ ನೆನಪಾಯ್ತು… ಆ ತಂಪೆರೆಯುವ ಮುಂಗಾರ ಮಳೆಗೆ, ಇಲ್ಲಾ ಜಲಧಾರೆಗೆ ಹಾಗೇ ಮೈಯೊಡ್ಡಿ ನಿಲ್ಲೋದನ್ನು ಮಾಡಿ ಆಯ್ತು ಬಹಳ ಕಾಲ… ಕಾಲಿಗೆ ಇನ್ನಾಗದು ಅನ್ನೋವಾಗಲೂ ಇನ್ನಷ್ಟು ನಡೆದು ಬೆಟ್ಟದ ಹಾದಿ ಕ್ರಮಿಸಿ ಮತ್ತಿನ್ನಷ್ಟು ದೂರ ಸಾಗಿದಾಗ ಸಿಗೋ ಜಲಪಾತವನ್ನೋ, ಪರ್ವತಾಗ್ರವನ್ನೋ ನೋಡ್ತಾ, ಇಲ್ಲಾ ಅಲ್ಲೇ ವಿಹರಿಸ್ತಾ ಇದ್ರೆ ಇದ್ಯಲ್ಲ… ಆಹಾ… ಅದೊಂಥರಾ…

ಈ ಹರಟೆ ಎಲ್ಲೋ ಶುರುವಾಯ್ತು… ಇನ್ನೆಲ್ಲಿ ಮುಗಿಯುತ್ತೋ ಅನಿಸುವ ವೇಳೆ ಇಲ್ಲಿಗೇ ಮುಗಿಸಬೇಕಾಗಿದೆ… ಯಾರೋ urgent ಕಾಲ್ ಮಾಡಿ ಬೇಗನೆ ಬರೋದಕ್ಕೆ ಹೇಳಿ ಆಗ್ಲೇ ಐದು ನಿಮಿಷ ಆಗ್ಹೋಗಿದೆ… ಹಾ… ಕಾಡ ನಡುವೆ ಈ ಮೊಬೈಲ್ ನೆಟ್ ವರ್ಕ್ ಇಲ್ದೇ ಇದ್ದರೆ, ಆ ಕ್ಷಣಗಳು ಹೇಗಿರುತ್ತೆ… ಮಾತಾಡೋಣ…

ಇನ್ನೊಮ್ಮೆ…

Rating
No votes yet