ಬಸವರೂಪದ ವಾತ್ಸಲ್ಯ ಪ್ರಭು

ಬಸವರೂಪದ ವಾತ್ಸಲ್ಯ ಪ್ರಭು

ಪ್ರಿಯ ಸಂಪದಿಗರೇ,
ಈ ನಾಡಿನ ಒಬ್ಬ ಅಪರೂಪದ ಸಂತರು , ಅನುಭಾವಿಗಳೂ ಆದ ತುಮಕೂರಿನ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳ ೧೦೧ ನೇ ವರ್ಧಂತಿಯನ್ನು ಅತ್ಯಂತ ವಿಜೃಂಭಣೆಯಿಂದ ತುಮಕೂರಿನಲ್ಲಿ ಆಚರಿಸಲಾಗ್ತಾ ಇದೆ. ಕಳೆದ ವಾರ ತುಮಕೂರಿನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಡೆಸಿದ "ರಾಜ್ಯ ಮಟ್ಟದ ಕವಿಗೋಷ್ಟಿಯಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತ್ತು. ಆ ಸಂದರ್ಭದಲ್ಲಿ ಶ್ರೀಗಳ ಬಗ್ಗೆ ಬರೆದ ನಾಲ್ಕು ತೊದಲ್ನುಡಿಗಳನ್ನು ನಿಮ್ಮ ಜೊತೆ ಹಂಚಿಕೊಳ್ತಾ ಇದ್ದೇನೆ. ಜೊತೆಗೆ ಶ್ರಿಗಳನ್ನು ಹತ್ತಿರದಿಂದ ನೋಡಿ ಮಾತನಾಡುವ ಸೌಭಾಗ್ಯ ದೊರಕಿತ್ತು. ನಿಜಕ್ಕೂ "ನಡೆದಾಡುವ ದೇವರನ್ನು" ನೋಡಿ ಭಗವಂತನನ್ನು ನೋಡಿದಷ್ಟೇ ಆನಂದವಾಯ್ತು.

"ಬಸವರೂಪದ ವಾತ್ಸಲ್ಯ ಪ್ರಭು"

ಸಾಧನೆಯ ಶಿಖರದಲಿ ಬೆಳಗೋ ತೇಜಃ ಪುಂಜ
ಷಡ್ವರ್ಗಗಳ ಗೆದ್ದ ನಿರ್ಮೋಹಿ ಗುರುವೆ
ಬಸವ ರೂಪದಿ ನಿಂದ ವಾತ್ಸಲ್ಯ ಪ್ರಭುವೆ
ಕಲಿಯುಗದ ಕೀರ್ತಿಗಿದು ಪರಶಿವನ ಒಲವೆ |

ನಿರಹಂಕಾರ ನಿಷ್ಕಪಟ ಸರ್ವರಲು ಸಮಭಾವ
ಜ್ನಾನ ತೃಷೆ ಇಂಗಿಸುವ ಶಾರದೆಯ ರೂಹು
ಜಾತಿಭೇದವ ಮರೆತ ಈ ಜಗದ ಗುರುವೆ
ಶ್ರೀಮಠದ ಕ್ಷೇತ್ರವನು ಹೊಳೆಯಿಸಿದ ರವಿಯೆ|

ಸಮಾಜದೇಳಿಗೆಯಲ್ಲಿ ನಿತ್ಯ ಪ್ರೇರಕ ಶಕ್ತಿ
ಅನ್ನ, ಅಕ್ಷರ ಜ್ನಾನ ತ್ರಿವಿಧ ದಾಸೋಹಿ
ಗುರುಲಿಂಗ ಜಂಗಮದಿ ದಿವ್ಯತೆಯ ಭಕ್ತಿ
ಜಗದೆಲ್ಲ ರಾಗಕ್ಕೆ ಸರಳತೆಯ ಉಕ್ತಿ|

ಪ್ರೀತಿ ಅಮೃತ ಉಣಿಸಿ ತೋರಿದಿರಿ ಪ್ರೀತಿ
ನೂರು ಸಾವಿರ ಕಂದಮ್ಮಗಳ ಬೆಳೆಸಿ
ಎದೆಯ ದೇಗುಲದಲ್ಲಿ ತುಂಬಿರಲು ಕರುಣೆ
ಬತ್ತಲಾರದು ಪ್ರೀತಿ ಅಕ್ಷಯದ ಪಾತ್ರೆ |

ಶತಮಾನ ವರ್ಧಂತಿಗಿದೋ ನನ್ನ ಗುರುವೆ
ಶಿರಬಾಗಿ ಮಣಿಯುವೆನು ನಿಮ್ಮಡಿದಾವರೆಗೆ
ಮಾತು ಬಾರದೆ ಕಂಠ ಬಿಗಿದಿಹುದು ಸ್ವರವೆ
ಭಗವಂತನೆದುರಲ್ಲಿ ನಾನಿರುವೆ ಪ್ರಭುವೆ|

"ಕಾಯಕವೆ ಕೈಲಾಸ" ನಂಬಿರುವ ದೈವ
ನಿಮ್ಮಿರವ ಆನಂದ ಬದುಕಾಯ್ತು ಭವ್ಯ
ನಿಮ್ಮೆದೆಯ ನುಡಿಯೆಲ್ಲ ವಿಶ್ವದಲಿ ಮಾನ್ಯ
ಹೆತ್ತೊಡಲ ಒಲವಂತೆ ಕನ್ನಡದ ಕಾವ್ಯ|

Rating
No votes yet

Comments