ಬಾಳ ಬೆಳದಿಂಗಳು (ಕಥೆ) - ಭಾಗ ೧
ಭಾಗ ೧
ಸಮಯ ಬೆಳಗ್ಗೆ ೮:೩೦ ಘಂಟೆ. ಎಂದಿನಂತೆ ಇಂದೂ ಜನರ ಆಗುಹೋಗು ಶುರುವಾಗಿದೆ. ರಸ್ತೆಯಲ್ಲಿ ಎಂದಿನಂತೆ ವಾಹನಗಳ ಕರ್ಕಶ ಸದ್ದು ಕೇಳಿಸುತ್ತಿದೆ. ಶಾಲೆ, ಆಫೀಸಿಗೆ ತೆರಳುವ ಜನರು, ಹಸಿದ ಹೊಟ್ಟೆ ತುಂಬಿಸುವ ಕಾತುರದಿಂದ ಹೊರಟು ನಿಂತ ಭಿಕ್ಷುಕರು, ಕಸದ ತೊಟ್ಟಿಯಲ್ಲಿ ಹುಡುಕಾಟ ತೊಡಗಿದ ಬೀದಿ ನಾಯಿಗಳು, ಚಿಲಿಪಿಲಿಗುಟ್ಟುವ ಪಕ್ಷಿಗಳು, ಹೀಗೆ ಪ್ರತಿಯೊಬ್ಬರೂ ಪುನಃ ಒಂದು ಶುಭ ದಿನದ ಆರಂಭದಲ್ಲಿ ತೊಡಗಿರುವರು.
ಆದರೆ ತನ್ನ ಮನೆಯ ಹಜಾರದ ಕುರ್ಚಿಯಲ್ಲಿ ಕುಳಿತು ಕೈಯಲ್ಲಿ ದಿನಪತ್ರಿಕೆ ಹಿಡಿದುಕೊಂಡಿರುವ ರಮೇಶನು ಇದು ಯಾವುದರ ಪರಿವೆಯಿಲ್ಲದೆ ಅವಳ ಬರುವಿಗಾಗಿ ಕಾಯುತ್ತಿರುವನು. 'ಏನಾಯಿತು? ದಿನಾ ಬೆಳಗ್ಗೆ ೮:೦೦ ಘಂಟೆಗೆ ಮುಖದರ್ಶನ ಮಾಡುತ್ತಿದ್ದ ಆ ಚೆಲುವೆ ಇಂದೇಕೆ ೮:೩೦ ಆದರೂ ಬರಲಿಲ್ಲ? ಜ್ವರ ಏನಾದರೂ ಬಂದಿರಬಹುದಾ? ಮನೆಯಲ್ಲಿ ಏನಾದರೂ ತೊಂದರೆಯಾಗಿರಬಹುದಾ? ಇಲ್ಲಾ ರಜೆ ತಗೊಂಡು ಸಂಭಂದಿಕರ ಮನೆಗೆ ಹೋಗಿರಬಹುದ?" ಪ್ರಶ್ನೆಗಳ ಸರಮಾಲೆ ಬೆಳೆಯುತ್ತನೆ ಹೋಯಿತು, ಆದರೆ ನಿರ್ದಿಷ್ಟವಾದ ಉತ್ತರ ಸಿಗಲಿಲ್ಲ. ಉತ್ತರ ಸಿಗುವುದಾದರೂ ಯಾರಿಂದ? ಅರ್ಧ ಘಂಟೆಯಿಂದ ಯೋಚನೆ ಮಾಡಿ ಮಾಡಿ ರಮೇಶನಿಗೆ ತಲೆ ಚಿಟ್ಟು ಹಿಡಿದಂತಾಯಿತು. ಅವನ ಮನಸ್ಸು ಒಂದು ತಿಂಗಳ ಹಿಂದಕ್ಕೆ ಓಡಿತು.
ದಿನವೂ ೭:೦೦ ಘಂಟೆಗೆ ಎದ್ದು ಜಾಗಿಂಗ್ ಮಾಡಿ ಬಂದು, ೭:೩೦ ಕ್ಕೆ ಸ್ನಾನ ಮುಗಿಸಿ, ೭:೩೦ ರಿಂದ ೮:೦೦ ಘಂಟೆಯವರೆಗೆ ದಿನಪತ್ರಿಕೆ ಓದುತ್ತಿದ್ದ. ನಂತರ ತಿಂಡಿ ತಿಂದು ೮:೩೦ ಕ್ಕೆ ಆಫೀಸಿಗೆ ಹೊರಡುತ್ತಿದ್ದ. ಅಂದೂ ಎಂದಿನ ದಿನಚರಿಯಂತೆ ದಿನಪತ್ರಿಕೆ ಹಿಡಿದು ಹಜಾರದ ಕುರ್ಚಿಯಲ್ಲಿ ಕುಳಿತಿದ್ದ ರಮೇಶನು ಪತ್ರಿಕೆ ಓದುವುದರಲ್ಲಿ ಮಗ್ನನಾಗಿದ್ದ. ಇದ್ದಕ್ಕಿದ್ದಂತೆ "ಸರ್, ಬಸ್ ಸ್ಟ್ಯಾಂಡ್ ಎಲ್ಲಿ ಬರುತ್ತದೆ ಅಂತ ಹೇಳ್ತೀರಾ?" ಎಂಬ ಕರೆ ಕೇಳಿ, ಪತ್ರಿಕೆಯಿಂದ ಕಣ್ಣೆತ್ತಿ ಗೇಟ್ ಕಡೆ ನೋಡಿದ. ತಿಳಿ ಗುಲಾಬಿ ಬಣ್ಣದ ಸೀರೆ, ನೀಳವಾದ ಜಡೆ, ಅದರಲ್ಲಿ ಮಲ್ಲಿಗೆ ಹೂವು, ಹೆಗಲಲ್ಲಿ ಕಪ್ಪು ಬಣ್ಣದ ಆಧುನಿಕ ಶೈಲಿಯ ಬ್ಯಾಗ್, ಎಡಗೈಯಲ್ಲಿ ಒಂದು ಫೈಲ್, ಬಲಗೈಯಿಂದ ಗಾಳಿಗೆ ದುಂಡಗಿನ ಮುಖದ ಮೇಲೆ ಓಡಾಡುತ್ತಿರುವ ಮುಂಗುರಳನ್ನು ಕಿವಿಯ ಹಿಂದೆ ಮಾಡುತ್ತಾ ನಿಂತಿರುವ ಸುಂದರಿ. ಒಂದು ಕ್ಷಣದಲ್ಲಿ ಯಾವುದೋ ಚಲನ ಚಿತ್ರ ನಟಿ ಎದುರಿಗೆ ಬಂದಂತಾಯಿತು. ಪಿಳಿ ಪಿಳಿ ಮಾಡುತ್ತಿರುವ ಆ ಸುಂದರ ಕಣ್ಗಳನ್ನು ನೋಡುತ್ತಲೇ ಇರುವ ಎಂದೆನಿಸುತ್ತಿತ್ತು.
"ಸರ್, ಪ್ಲೀಸ್ ಸ್ವಲ್ಪ ಬೇಗ ಹೇಳಿ, ನಾವು ನಿನ್ನೆಯೇ ಈ ಊರಿಗೆ ಹೊಸತಾಗಿ ಬಂದಿದ್ದೇವೆ. ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದೇನೆ. ಈ ಹೊಸ ಬ್ರಾನ್ಚಲ್ಲಿ ಇವತ್ತು ನನ್ನ ಮೊದಲ ದಿನ. ಈಗಾಗಲೇ ತುಂಬಾ ಹೊತ್ತಾಗಿದೆ. ಮೊದಲನೇ ದಿನವೇ ಲೇಟ್ ಆದ್ರೆ ಮ್ಯಾನೇಜರ್ ಬಯ್ಯಬಹುದು. ದಯವಿಟ್ಟು ಬೇಗ ಹೇಳಿ ಸರ್" ಅವಳ ಅವಸರವಸರದ ಮಾತಿಗೆ ಬಾಹ್ಯಲೋಕಕ್ಕೆ ತೆರಳಿದ ರಮೇಶ್ ಕೈಯಲ್ಲಿರುವ ಪತ್ರಿಕೆಯನ್ನು ಅಲ್ಲೇ ಇದ್ದ ಟೇಬಲ್ ಮೇಲೆ ಇಟ್ಟು ಗೇಟ್ ಕಡೆ ನಡೆದ. ಹತ್ತಿರ ಬಂದವನೇ, "ಮುಂದೆ ಕಾಣುತ್ತಿದೆಯಲ್ಲ ಆ ಹಳದಿ ಬಣ್ಣದ ಬಿಲ್ಡಿಂಗ್, ಅಲ್ಲಿಂದ ಎಡಕ್ಕೆ ತಿರುಗಿ. ಮುಂದೆ ದೊಡ್ಡ ಆಲದ ಮರ ಕಾಣಿಸುತ್ತೆ, ಅದರ ಹಿಂದೆಯೇ ಬಸ್ ಸ್ಟ್ಯಾಂಡ್ ಇದೆ" ಎಂದು ಹೇಳಿದ. "ಥ್ಯಾಂಕ್ಸ್ ಸರ್, ನಿಮ್ಮಿಂದ ತುಂಬಾ ಸಹಾಯವಾಯಿತು" ಎಂದು ಹೇಳಿದ ಅವಳು ಹಿಂತಿರುಗಿ ನೋಡದೆ, ರಮೇಶ ಹೇಳಿದ ದಿಕ್ಕಿನ ಕಡೆಗೆ ಸರಸರನೆ ಹೊರಟಳು.
ಇಲ್ಲಿಯವರೆಗೆ ಯಾವ ಹೆಣ್ಣಿಗೂ ಮರುಳಾಗದ ರಮೇಶ್ ಇಂದೇಕೋ ಅವಳ ಕಡೆಗೆ ಆಕರ್ಷಿತನಾದ. ಅವಳನ್ನು ಮತ್ತೊಮೆ ನೋಡ ಬೇಕೆನಿಸಿತು. ಮುಂದೆ ಪತ್ರಿಕೆ ಓದಲು ಮನಸ್ಸಾಗಲಿಲ್ಲ. ಸೀದಾ ಒಳಗೆ ಹೋದವನೇ ತಿಂಡಿ ತಿಂದು ಆಫೀಸಿಗೆ ಹೊರಟ. ಯಾವತ್ತೂ ಏಕಾಗ್ರತೆಯಿಂದ ತನ್ನ ಕೆಲಸ ಮಾಡಿ ಮುಗಿಸುತ್ತಿದ್ದ ರಮೇಶನಿಗೆ ಅಂದು ಆಫೀಸಿನಲ್ಲಿ ಕೂಡ ಯಾವ ಕೆಲಸವನ್ನು ಸರಿಯಾಗಿ ಮುಗಿಸಲು ಸಾಧ್ಯವಾಗಲಿಲ್ಲ. ಎಷ್ಟು ಪ್ರಯತ್ನ ಮಾಡಿದರೂ ಬೆಳಗ್ಗೆ ನೋಡಿದ ಚೆಲುವೆಯ ಮುಖ ಕಣ್ಣ ಮುಂದೆ ತೇಲಿ ಬರುತ್ತಿತ್ತು. ನಿಂತಲ್ಲಿ ಕೂತಲ್ಲಿ ಅವಳ ಆ ಕಂಗಳು ಮೂಡಿ ಬರುತ್ತಿದ್ದವು.
ಮರುದಿನವೂ ರಮೇಶ್ ಅದೇ ಹೊತ್ತಿಗೆ ಆ ಚೆಲುವೆಯ ಆಗಮನವನ್ನು ಕಂಡ. ಇವನ ಕಡೆಗೆ ನೋಡಿದ ಆಕೆ ಮುಗುಳ್ನಕ್ಕಳು, ಪ್ರತಿಯಾಗಿ ಇವನೂ ಮುಗುಳ್ನಕ್ಕ. ಹೀಗೆ ಮುಂದೆ ಪ್ರತಿದಿನವೂ ಇವರ ಈ ದಿನಚರಿ ಮುಂದುವರಿಯಿತು. ಅಂತೂ ಇಂತೂ ರಮೇಶ್ ಅವಳು ಬರುವ ಸಮಯ ಸರಿಯಾಗಿ ೮:೦೦ ಘಂಟೆ ಎಂದು ಅರಿತ. ಅದಕ್ಕಾಗಿ ಅವನು ತನ್ನ ದಿನಪತ್ರಿಕೆ ಓದುವ ಸಮಯವನ್ನು ೮:೧೦ ರವರೆಗೆ ವಿಸ್ತರಿಸಿದ. ಅವಳು ಹಳದಿ ಬಿಲ್ಡಿಂಗ್ನಿಂದ ಎಡಕ್ಕೆ ತಿರುಗುವವರೆಗೂ ಗೇಟಿನ ಬಳಿ ನಿಂತು ಅವಳನ್ನೇ ಕದ್ದು ನೋಡುತ್ತಿದ್ದ. ಒಬ್ಬನೇ ಮಗನಾಗಿದ್ದರಿಂದ ಅಣ್ಣ ತಮ್ಮಂದಿರು, ಅಕ್ಕ ತಂಗಿಯರು ನೋಡುತ್ತಾರೆ ಎಂಬ ಭಯವಿರಲಿಲ್ಲ. ತಂದೆ, ತಾಯಿ ಆ ಸಮಯದಲ್ಲಿ ಪೂಜೆಯಲ್ಲಿ ತೊಡಗಿರುವುದರಿಂದ ಅವರಿಂದ ತೊಂದರೆಯಿರಲಿಲ್ಲ. ಆದರೂ ಅಕ್ಕ ಪಕ್ಕದ ಮನೆಯವರ ಬಗ್ಗೆ ಜಾಗ್ರತೆವಹಿಸುತ್ತಿದ್ದ. ಎಷ್ಟೋ ಸಲ ಅವಳ ಹೆಸರು ಹಾಗೂ ಅವಳ ಬಗ್ಗೆ ಇನ್ನಷ್ಟು ತಿಳಿಯುವ ಆಸೆ ಆಗುತ್ತಿತ್ತು. ಆದರೆ ಆಕೆ ಒಂದು ಮುಗುಳ್ನಗೆ ಕೊಟ್ಟ ನಂತರ ಒಂದು ಕ್ಷಣವೂ ಅಲ್ಲಿ ನಿಲ್ಲುತ್ತಿರಲಿಲ್ಲ. ಆದ್ದರಿಂದ ಅವನಿಗೂ ತಾನೇ ಮಾತನಾಡಿಸುವುದು ಸರಿ ಎನಿಸಲಿಲ್ಲ.
ಅವಳ ಮೊದಲನೇ ದಿನದ ಭೇಟಿಯ ನಂತರ ರಮೇಶ ಪ್ರತಿ ಕ್ಷಣವೂ ಅವಳ ನೆನಪಿನಲ್ಲೇ ಕಳೆಯುತ್ತಿದ್ದ. ಒಂದು ಕ್ಷಣವೂ ಅವಳನ್ನು ಮರೆಯಲು ಅವನಿಂದ ಸಾಧ್ಯವಾಗುತ್ತಿರಲಿಲ್ಲ. ಬೇಸರದ ವಿಷಯವೆಂದರೆ ದಿನದಲ್ಲಿ ಅವಳ ಮುಖದರ್ಶನ ಒಂದೇ ಸಲ ಅವನಿಗೆ ದೊರಕುತ್ತಿತ್ತು. ೮:೩೦ ಕ್ಕೆ ಆಫೀಸಿಗೆ ಹೊರಟರೆ ಅವನು ಮರಳಿ ಮನೆ ತಲುಪುತ್ತಿದ್ದದ್ದು ರಾತ್ರಿ ೮ ಘಂಟೆಗೆ. ಹಾಗೆ ಸಂಜೆ ಅವಳು ಎಷ್ಟು ಹೊತ್ತಿಗೆ ಮನೆಗೆ ಹಿಂತಿರುಗುತ್ತಿದ್ದಳೆಂದು ಅವನಿಗೆ ತಿಳಿದಿರಲಿಲ್ಲ. ಎಷ್ಟೋ ಸಲ ಅವನಿಗೆ ಅನಿಸುತ್ತಿತ್ತು ಅವಳು ಬರುವ ವೇಳೆ ಮನೆಯಲ್ಲಿ ಇರುತ್ತಿದ್ದರೆ ಮೆಲ್ಲನೆ ಹಿಂಬಾಲಿಸಿ ಅವಳ ಮನೆಯನ್ನಾದರೂ ಪತ್ತೆ ಹಚ್ಹಬಹುದಿತ್ತು ಎಂದು. ಭಾನುವಾರವಂತೂ ೧ ದಿನ ೧ ವಾರ ಕಳೆದ ಹಾಗೆ ಅನಿಸುತ್ತಿತ್ತು.
"ರಾಮೂ ರಾಮೂ, ಅದೇನು ಮಾಡ್ತಾ ಇದ್ದೀಯೋ ಇಲ್ಲಿ? ಘಂಟೆ ೮:೪೫ ಆಗಿದೆ, ಇನ್ನೂ ತಿಂಡಿ ತಿಂದಿಲ್ಲ, ಬಟ್ಟೆಗೆ ಇಸ್ತ್ರಿ ಮಾಡಿಲ್ಲ. ಏನು ಆಫೀಸಿಗೆ ಚಕ್ಕರ್ ಹಾಕುವ ಪ್ಲಾನಾ?" ಸರೋಜಮ್ಮನ ದನಿಗೆ ರಮೇಶ ತನ್ನ ನೆನಪಿನ ಲೋಕದಿಂದ ಹೊರಬಂದ. ಒಳಗಿಂದ ೪ - ೫ ಬಾರಿ ಕರೆದರೂ ಮಗನ ಸುದ್ದಿ ಇಲ್ಲದ್ದನ್ನು ಕಂಡು ಅವರೇ ಹಜಾರಕ್ಕೆ ಬಂದಿದ್ದರು. "ಅದೆನಾಗಿದೆ ನಿನಗೆ? ಯಾಕೆ ಆಕಾಶವೇ ಕಳಚಿ ತಲೆ ಮೇಲೆ ಬಿದ್ದ ಹಾಗೆ ಕುಳಿತಿದ್ದಿಯ? ಏನಾಯಿತು ಕಣೋ? ಯಾಕೆ ಹೀಗೆ ಸಪ್ಪೆಯಾಗಿದ್ದೀಯಾ?" ಎಂದು ಕೇಳಿದರು. ಮಗ ಯಾವತ್ತೂ ಹೀಗಿರಲಿಲ್ಲ, ಯಾಕೋ ಅವರಿಗೆ ಹೆದರಿಕೆಯಾಯಿತು. ಮೈ ಮುಟ್ಟಿ ಜ್ವರ ಏನಾದರೂ ಬಂದಿದೆಯಾ ಅಂತ ನೋಡಿದರು. ಮೊದಲೇ ಚುರುಕು ಬುದ್ದಿಯವರು ಸರೋಜಮ್ಮ. ಸ್ವಲ್ಪ ಹೆಚ್ಚು ಕಮ್ಮಿಯಾದರೂ ಪತ್ತೆ ಹಚ್ಚುತ್ತಿದ್ದರು. ಇದನ್ನೆಲ್ಲಾ ಬಲ್ಲ ರಮೇಶ ತಕ್ಷಣ ಮುಖದಲ್ಲಿ ನಗು ತಂದು, "ಅಯ್ಯೋ ! ಹಾಗೆನಿಲ್ಲಮ್ಮ, ನಾನು ಹುಷಾರಿದ್ದೇನೆ. ಏನೋ ಪತ್ರಿಕೆಯಲ್ಲಿ ಯಾವುದೋ ಅಪಘಾತದ ಬಗ್ಗೆ ಓದಿದೆ. ಅದನ್ನೇ ಯೋಚಿಸುತ್ತ ಕುಳಿತಿದ್ದ ನನಗೆ ಸಮಯ ಹೋದದ್ದೇ ತಿಳಿಯಲಿಲ್ಲ. ಬೇಗ ಬಾ, ತಿಂಡಿ ಬಡಿಸು " ಎಂದು ಹೇಳಿ ಲಗುಬಗೆಯಿಂದ ಒಳಗೆ ನಡೆದ.
ಆಫೀಸಿಗೆ ಬಂದರೂ ಯಾಕೋ ಮನಸ್ಸು ಅವಳ ಬಗ್ಗೆಯೇ ಯೋಚಿಸುತ್ತಿತ್ತು. ಪ್ರತಿ ದಿನದ ಹಾಗೆ ಇಂದು ರಾತ್ರಿಯವರೆಗೆ ಕುಳಿತುಕೊಲ್ಲಲಾಗಲಿಲ್ಲ ಅವನಿಂದ. ಸಂಜೆ ೫:೩೦ ಆಗುತ್ತಲೇ ಮನೆಗೆ ಹೊರಟ. ೬ ಘಂಟೆಗೆ ಮನೆಗೆ ಬಂದ ಮಗನನ್ನು ನೋಡಿದ ಸರೋಜಮ್ಮನಿಗೆ ಯಾಕೋ ಸಂದೇಹವಾಯಿತು. ಕೆಲಸದ ವಿಷಯದಲ್ಲಿ ಮಗನು ಯಾವಾಗಲೂ ಕಟ್ಟುನಿಟ್ಟಾದ ಶಿಸ್ತು ಪಾಲಿಸುತ್ತಿದ್ದ. ಭಾನುವಾರವಲ್ಲದಿದ್ದರೆ ವಾರದಲ್ಲಿ ಬೇರೆ ದಿನ ಸಂಭಂದಿಕರ ಮನೆಯ ಶುಭ ಕಾರ್ಯಗಳಿಗೂ ಬರುತ್ತಿರಲಿಲ್ಲ. ಅಂಥವನು ಇಂದು ೬ ಘಂಟೆಗೆ ಮನೆಗೆ ಬಂದದ್ದನ್ನು ನೋಡಿ, "ಬೆಳಗ್ಗೆಯೇನೋ ನೆಪ ಮಾಡಿ ತಪ್ಪಿಸಿಕೊಂಡು ಹೋದೆ. ಇನ್ನು ನನ್ನ ಹತ್ತಿರ ನಿನ್ನ ಆಟ ನಡೆಯಲ್ಲ. ಕೈ ಕಾಲು ಮುಖ ತೊಳೆದುಕೊಂಡು ಬಾ, ಉಪ್ಪಿಟ್ಟು ಮಾಡಿದ್ದೇನೆ, ತಿಂದು ಡಾಕ್ಟರ ಹತ್ತಿರ ಹೋಗಿ ಬರುವ" ಅಂದರು. "ಅಮ್ಮ ಹಾಗೇನಿಲ್ಲ, ಆಫೀಸಿನಲ್ಲಿ ಇವತ್ತು ಅಷ್ಟೇನೂ ಕೆಲಸವಿರಲಿಲ್ಲ. ಅದಕ್ಕೆ ಬೇಗ ಬಂದು ಬಿಟ್ಟೆ. ಸ್ವಲ್ಪ ತಲೆ ಸಿಡಿತ ಇದೆ, ಮಲಗಿ ವಿಶ್ರಾಂತಿ ತಗೊಂಡರೆ ಎಲ್ಲಾ ಸರಿ ಹೋಗ್ತದೆ" ಎಂದು ಹೇಳಿ ಅವರ ಉತ್ತರಕ್ಕೂ ಕಾಯದೆ ತನ್ನ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡ.
ಮಲಗಿದರೂ ನಿದ್ದೆ ಕಣ್ಣ ಹತ್ತಿರ ಸುಳಿಯಲಿಲ್ಲ. ಯಾರ ಹತ್ತಿರ ವಿಚಾರಿಸಲಿ, ಊರಿಗೆ ಬೇರೆ ಹೊಸ ಜನ ಅವರು. ಯಾರಿಗೂ ಸರಿಯಾಗಿ ತಿಳಿದಿರಲಿಕ್ಕಿಲ್ಲ. ತಿಳಿದರೂ ಏನು ಅಂತ ಕೇಳೋದು? ಮಗ್ಗುಲು ಬದಲಾಯಿಸಿದರೂ ನಿದ್ದೆ ಬರಲಿಲ್ಲ. ೮ ಘಂಟೆಯ ಹೊತ್ತಿಗೆ ಹೊರ ಬಂದು, ರಾತ್ರಿ ಊಟ ಮಾಡಿ ಮತ್ತೆ ಕೋಣೆಗೆ ನಿದ್ದೆ ಮಾಡಲು ಹೋದ. ಪುನಃ ಅವಳ ಯೋಚನೆ ಶುರುವಾಯಿತು. ಅದೆಷ್ಟೋ ಹೊತ್ತು ಕಳೆದ ನಂತರ ನಿದ್ರಾದೇವಿಗೆ ಶರಣಾದ.
Comments
ಉ: ಬಾಳಿನ ಬೆಳದಿಂಗಳು (ಕಥೆ)
In reply to ಉ: ಬಾಳಿನ ಬೆಳದಿಂಗಳು (ಕಥೆ) by Tejaswi_ac
ಉ: ಬಾಳಿನ ಬೆಳದಿಂಗಳು (ಕಥೆ)
ಉ: ಬಾಳ ಬೆಳದಿಂಗಳು (ಕಥೆ) - ಭಾಗ ೧
In reply to ಉ: ಬಾಳ ಬೆಳದಿಂಗಳು (ಕಥೆ) - ಭಾಗ ೧ by IsmailMKShivamogga
ಉ: ಬಾಳ ಬೆಳದಿಂಗಳು (ಕಥೆ) - ಭಾಗ ೧