ಬಿ.ಎಸ್.ಎನ್.ಎಲ್ ಮ೦ಡೆ ಬೋಳು ಮಾರಾಯ!!

ಬಿ.ಎಸ್.ಎನ್.ಎಲ್ ಮ೦ಡೆ ಬೋಳು ಮಾರಾಯ!!

ಕರ್ನಾಟಕದ ಹಳ್ಳಿ ಹಳ್ಳಿಯಲ್ಲಿ ನೆಟ್ ವರ್ಕ್ ಇರುವ ಬಿ.ಎಸ್.ಎನ್.ಎಲ್ ಸಹಜವಾಗಿ ಕನ್ನಡಿಗರಿಗೆ ಅರ್ಥ ಆಗೋ ಹಾಗೆ ಜಾಹೀರಾತು ಮಾಡಬೇಕಿತ್ತು.
ಆದ್ರೆ ಅದನ್ನು ಮಾಡದೆ ಬೆಂಗಳೂರಲ್ಲಿ ಎಲ್ಲೆಡೆ ಯಾವ ಯಾವ್ದೋ ಭಾಷೆಯಲ್ಲಿ ಹೋರ್ಡಿಂಗ್-ಗಳನ್ನು ಹಾಕುತ್ತಿದ್ದಾರೆ.
ಈ ಹೋರ್ಡಿಂಗ್-ಗಳು ರೋಮನ್ ಲಿಪಿಯಲ್ಲಿ ಹಿಂದಿಯಲ್ಲಿ ತಮ್ಮ ಪಂಚ್-ಲೈನ್ ಹೊಂದಿವೆ.
ಏರ್-ಟೆಲ್ ಕಂಪನಿ ಕೂಡ ಇದೇ ಮಾದರಿಯನ್ನು ಪಾಲಿಸುತ್ತಿದ್ದಾರೆ.
"ಹಿಂದುಸ್ತಾನ್ ಬೋಲ್ ರಹಾ ಹೆ" ಎಂಬುದು ಬಿಎಸ್ಏನ್ಎಲ್-ನ ಪಂಚ್ ಲೈನ್ ಆದರೆ, "ಗಾನಾ ಬೋಲೋ ಹಲೋ ಟ್ಯೂನ್ ಪಾಓ" ಅನ್ನುವುದು ಏರ್-ಟೆಲ್ ನ ಪಂಚ್-ಲೈನ್.
ಬಹುಷಃ ಇದೇ ಹೋರ್ಡಿಂಗ್-ಗಳನ್ನು ದೇಶದೆಲ್ಲೆಡೆ ಹಾಕಿರಬಹುದು.

ಇವರು ಗ್ರಾಹಕನದ್ದಲ್ಲದ ಎರಡು ಬೇರೆ ಭಾಷೆಗಳನ್ನು ಉಪಯೋಗಿಸಿ "ಕಲಸು ಮೇಲೋಗರ" ಮಾಡಿಕೊಂಡು ತಮ್ಮ ಜಾಹೀರಾತುಗಳನ್ನು ನೀಡುತ್ತಿದ್ದಾರೆ. ಹಿಂದಿಯಲ್ಲೇ ಜಾಹೀರಾತು ನೀಡಬೇಕಾಗಿದ್ದಲ್ಲಿ, ದೇವನಾಗರಿ ಲಿಪಿ ಬಳಸಬಹುದಾಗಿತ್ತು. ಒಂದು ಭಾಷೆಯನ್ನು ಇನ್ನೊಂದು ಲಿಪಿಯಲ್ಲಿ ಮುಚ್ಚಿಟ್ಟು ಜಾಹೀರಾತು ಮಾಡುವ ಆವಶ್ಯಕತೆ ಏನು?
ಇಂಗ್ಲಿಷ್ ಮೂಲಕವಾದರೂ ಹಿಂದಿಯನ್ನು ಹೇರುವ ಹುನ್ನಾರವೇ?
ಕನ್ನಡ ಮತ್ತು ಇಂಗ್ಲಿಷ್ ಬಳಸಿ ಇಡೀ ಕರ್ನಾಟಕದಲ್ಲಿ ಜಾಹೀರಾತು ನೀಡಲು ಸಾಧ್ಯವಿರುವಾಗ, ಈ ಕಂಪನಿಗಳು ರೋಮನ್ ಲಿಪಿಯಲ್ಲಿ ಹಿಂದಿ ಓದುವ ಇದ್ಯಾವ ಕೋದಂಡರಾಮನ ಗುಂಪನ್ನು ಆಕರ್ಷಿಸಲು ಪ್ರಯತ್ನ ಪಡುತ್ತಿದ್ದಾರೋ ಕಾಣೆ.
ಏನಿಲ್ಲದಿದ್ದರೂ ಮಾರುಕಟ್ಟೆಯಲ್ಲಿ ಒಂದು ಗೊಂದಲವನ್ನಂತೂ ಇವರು ಹುಟ್ಟು ಹಾಕಿದ್ದಾರೆ.

ಈ ರೀತಿ ಬೇರೆ ಭಾಷೆಗಳನ್ನು ಜನರ ಮನಸ್ಸಿನಲ್ಲಿ ತುರುಕುವ ಪ್ರಯತ್ನವನ್ನು ಕಂಪನಿಗಳು ನಿಲ್ಲಿಸಬೇಕು. ಕರ್ನಾಟಕದಲ್ಲಿ ಜನರನ್ನು ತಲುಪಲು ಯಾವ ಭಾಷೆ ಉತ್ತಮ ಎಂಬ ತಿಳುವಳಿಕೆ ಉದ್ದಿಮೆದಾರರಲ್ಲಿ ಮೂಡಬೇಕಾಗಿದೆ. ಕನ್ನಡದ ಗ್ರಾಹಕ ಗ್ಲೋಬಲೈಸೇಶನ್-ನ ಈ ಕುತೂಹಲಕಾರಿ ಸಮಯದಲ್ಲಿ ಸ್ವಲ್ಪ ಎಚ್ಚರ ವಹಿಸಬೇಕಾಗಿದೆ. ಇಲ್ಲದಿದ್ದರೆ, ಮುಂದೊಂದು ದಿನ ಜಾಹಿರಾತುಗಳಲ್ಲಿ ಕನ್ನಡ ಮಾಯವಾಗಲು ನಾವೇ ಎಡೆ ಮಾಡಿಕೊಟ್ಟ೦ತಾಗುತ್ತದೆ.

ಬನ್ನಿ, ಏರ್-ಟೆಲ್ ಮತ್ತು ಬಿಎಸ್ಏನ್ಎಲ್ ನವರಿಗೆ ತಿಳಿ ಹೇಳೋಣ. ಕನ್ನಡಿಗರ ಮೇಲೆ ಭಾಷಾಪ್ರಯೋಗ ಮಾಡಿದರೆ, ನಿಮ್ಮ ವ್ಯಾಪಾರಕ್ಕೆ ಕನ್ನಡಿಗರ ಸಹಕಾರ ಸಿಗುವುದಿಲ್ಲ ಎಂದು ಎಚ್ಚರಿಸೋಣ.
ಅವರು ಬದಲಾಗಲು ಕಾರಣಕರ್ತರಾಗೋಣ.

ಏರ್ ಟೆಲ್ - care.karnataka@airtel.in
ಬಿಎಸ್ಏನ್ಎಲ್ : gmmso_ktk@bsnl.co.in, gmmsd_ktk@bsnl.co.in, gmrural@sancharnet.in

Rating
No votes yet

Comments