ಬಿಹಾರದಲ್ಲಿ ಪ್ರವಾಹ

ಬಿಹಾರದಲ್ಲಿ ಪ್ರವಾಹ

ನೇಪಾಳ ಗಡಿಭಾಗದ ಕುಶಾದಲ್ಲಿ ಕೋಸಿ ನದಿಗೆ ಕಟ್ಟಿದ ಒಡ್ಡು ಒಡೆದ ಪರಿಣಾಮ ಕೆಲವೇ ಗಂಟೆಗಳಲ್ಲಿ ಉತ್ತರ ಬಿಹಾರದ ಐದು ಜಿಲ್ಲೆಗಳಾದ ಸುಪೌಲ್, ಅರಾರಿಯ, ಸಹರ್ಸಾ, ಮಾಧೇಪುರ ಮತ್ತು ಪುರ್ನಿಯಾ ಅಸ್ತಿತ್ವವೇ ಇಲ್ಲದಂತೆ ಜಲಾವೃತಗೊಂಡವು. ಈ ಪ್ರಾಂತಗಳು ಪ್ರತಿ ವರ್ಷ ಎದುರಿಸುತ್ತಿದ್ದ ಪ್ರವಾಹಕ್ಕಿಂತ ದುಪ್ಪಟ್ಟು ನಷ್ಟವನ್ನು ಈ ಬಾರಿಯ ವಿಪತ್ತು ತಂದೊಡ್ಡಿದೆ. ಬಿಹಾರದ ಕಣ್ಣೀರ ನದಿಯೆಂದೆ ಜನಜನಿತವಾಗಿರುವ ಕೋಸಿ ನದಿಯ ಪ್ರವಾಹದಿಂದಾಗಿ ಬಿಹಾರದ ಜನತೆ ಅಕ್ಷರಶಃ ತಮ್ಮ ಜೀವನದೊಂದಿಗೆ ಹೋರಾಟಕ್ಕಿಳಿದಿದ್ದಾರೆ. ಲಕ್ಷಾಂತರ ಮಂದಿ ಪ್ರವಾಹದಿಂದಾಗಿ ತಮ್ಮ ಮನೆಮಠ, ಕುಟುಂಬಿಕರು, ಸಂಬಂಧಿಗಳು ಎಲ್ಲವನ್ನೂ ಕಳೆದುಕೊಂಡಿದ್ದಾರೆ. ಭೀಕರ ಪ್ರವಾಹದ ಪರಿಣಾಮ ಬಿಹಾರದ ಜನತೆ ತುಂಬಲಾರದ ನಷ್ಟಕ್ಕೀಡಾಗಿದ್ದಾರೆ; ಎಲ್ಲವನ್ನೂ ನೆರೆ ಕೊಚ್ಚಿಕೊಂಡು ಹೋಗಿದೆ. ಪ್ರವಾಹದ ಬಲಿಪಶುಗಳಲ್ಲಿ ಹೆಚ್ಚಿನವರು ಮಕ್ಕಳು. ಸಾವಿರಾರು ಮಕ್ಕಳು ನಿರ್ಗತಿಕರಾಗಿದ್ದಾರೆ. ನೇಪಾಳದಲ್ಲಿ ಪ್ರವಾಹ ತಡೆಗಾಗಿ ನಿರ್ಮಿಸಿದ್ದ ಮೊರಿಯು ಒಡೆದ ಕಾರಣ ಕೋಸಿ ನದಿ ಉಕ್ಕಿ ಹರಿಯುತ್ತಿದ್ದು, ಬಿಹಾರದ 16 ಜಿಲ್ಲೆಗಳು ಸಂಕಷ್ಟಕ್ಕೀಡಾಗಿವೆ.

ಭೀಕರ ಪ್ರಕೃತಿ ವಿಕೋಪದಿಂದಾಗಿ ಮರಣ ಹೊಂದಿದವರ ಸಂಖ್ಯೆ 70ಕ್ಕೆ ಹೆಚ್ಚಳಗೊಂಡಿದೆ. 16 ಜಿಲ್ಲೆಗಳ 36.4 ಮಿಲಿಯನ್ ಮಂದಿ ಮನೆಮಠ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಸೇನೆ ಹಾಗೂ ನೆರವು ಕಾರ್ಯಕರ್ತರು ಯುದ್ಧೋಪಾದಿಯಲ್ಲಿ ಪರಿಹಾರ ಕಾರ್ಯ ಕೈಗೊಂಡಿದ್ದಾರೆ. 396 ದೋಣಿಗಳು ಪರಿಹಾರ ಕಾರ್ಯದಲ್ಲಿ ನಿರತವಾಗಿವೆ. ಭಾರೀ ಪ್ರವಾಹದಿಂದಾಗಿ 242 ಪಂಚಾಯತ್‌ಗಳು ಮತ್ತು 671 ಹಳ್ಳಿಗಳು ನೀರಿನಲ್ಲಿ ಮುಳುಗಿವೆ.
ಇದೇ ರೀತಿ ಬಿಹಾರದಲ್ಲಿ ಪ್ರವಾಹ ಹಲವಾರು ಬಾರಿ ಆಗಿದೆ 2004 ರಲ್ಲಿ ಅದ ಪ್ರವಾಹದಿಂದ 20 ಜಿಲ್ಲೆಗಳು ಜಲಾವೃತವಾಗಿದ್ದರ ಪರಿಣಾಮವಾಗಿ 21 ಮಿಲಿಯನ್ ಜನರು ನಿರಾಶ್ರಿತರಾದರು. ನಂತರ 2007 ರಲ್ಲಿ ಅದ ಪ್ರವಾಹದಿಂದ 22 ಜಿಲ್ಲೆಗಳು ಜಲಾವೃತವಾಗಿದ್ದು 25 ಮಿಲಿಯನ್ ಜನರು ನಿರಾಶ್ರಿತರಾದರು. 2008 ರ ಪ್ರವಾಹದಿಂದ ನಷ್ಟ ಸಂಭವಿಸಿದ್ದು ಸುಮಾರು 36.4ಮಿಲಿಯನ್ ನಷ್ಟು . ಸಂತ್ರಸ್ತರ ತೆರವಿಗೆ ಸೇನೆಯ ಮೂರೂ ವಿಭಾಗಗಳು ನೆರವಾಗುತ್ತಿವೆ. ಭೂಸೇನೆಯ 19 ಹಾಗೂ ನೌಕಾ ಪಡೆಯ ಮೂರು ತುಕಡಿಗಳ ಸಹಿತ ರಕ್ಷಣಾ ಬಲದ 22 ತುಕಡಿಗಳು ರಕ್ಷಣೆ ಹಾಗೂ ಪರಿಹಾರ ಕಾರ್ಯದಲ್ಲಿ ತೊಡಗಿವೆ. ಆಹಾರ ಪೂರೈಕೆಗಾಗಿ ವಾಯು ಸೇನೆಯ 6 ಹೆಲಿಕಾಪ್ಟರ್‌ಗಳನ್ನು ಬಳಸಲಾಗುತ್ತಿದೆ. ತಂಗಲು ನೆಲೆ ಇಲ್ಲ, ಕುಡಿಯಲು ಶುದ್ಧ ನೀರಿಲ್ಲ, ತಿನ್ನಲು ತುತ್ತು ಅನ್ನವೂ ಇಲ್ಲದ ಲಕ್ಷಾಂತರ ಮಂದಿ ಸಂತ್ರಸ್ತರನ್ನು ಮುಕ್ಕಿ ತಿನ್ನಲು ತುದಿಗಾಲಲ್ಲಿ ನಿಂತ ಸಾಂಕ್ರಾಮಿಕ ರೋಗ... ಹೀಗೆ ಭೀಕರ ಪ್ರವಾಹದ ಜೊತೆಯಲ್ಲಿ ಏನೆಲ್ಲ ಸಂಕಷ್ಟಗಳ ಉಡುಗೊರೆಯಾಗಿ ಸಿಗಬಹುದೋ ಅವೆಲ್ಲವೂ ಅಲ್ಲಿ ಠಿಕಾಣಿ ಹೂಡಿದೆ. ಪ್ರವಾಹದಿಂದ ಸಾವಿರಾರು ಮಕ್ಕಳು ನಿರ್ಗತಿಕರಾಗಿದ್ದಾರೆ. ಪರಿಸ್ಥಿತಿಯನ್ನು ಮೆಟ್ಟಿ ನಿಲ್ಲಲು ಇಂತಹವರಿಗೆ ಸಹಾಯದ ಅಗತ್ಯವಿದೆ. ನಾವ್ಯಾಕೆ ಇವರ ಶೋಕವನ್ನು ಹಂಚಿಕೊಳ್ಳಬಾರದು? ಬನ್ನಿ, ಇಂತಹ ಜೀವಗಳಿಗೆ ನಮ್ಮ ನೆರವಿನ ಹಸ್ತ ಚಾಚೋಣ.

Rating
No votes yet

Comments