ಭಗ್ನ ಪ್ರೇಮಿ
ಸಂಜೆ ಬೋರ್ ಹೊಡೆಯುತ್ತಿತ್ತು. ಅದೂ ಅಲ್ಲದೆ ಏನಾದರೂ ಶಾಪಿಂಗ್ ಮಾಡೋಣ, ಏನಿಲ್ಲವೆಂದರೂ ಒಂದೆರಡು ಶರ್ಟ್ಗಳನ್ನಾದರೂ ಕೊಳ್ಳೋಣ ಎಂದು ಪಕ್ಕದಲ್ಲೇ ಆಡುತ್ತಿದ್ದ ನನ್ನ ಆರು ವರ್ಷದ ಮಗನನ್ನು ಹೊರಡಿಸಿಕೊಂಡು ಮಾಲ್ ಕಡೆ ಹೊರಟೆ ಮಡದಿ, ಪುಟ್ಟ ಸುಪುತ್ರಿಯನ್ನು ಹಿಂದಕ್ಕೆ ಬಿಟ್ಟು. ಎಲ್ಲಾದರೂ ಹೊರಕ್ಕೆ ಹೋಗಲು ಹೆಂಗಸರನ್ನು ಹೊರಡಿಸೋ ತಾಪತ್ರಯ ನಿಮಗೆ ಗೊತ್ತೇ ಇದೆಯಲ್ಲ. ದಸರಾದ ಆನೆಯನ್ನಾದರೂ ಶೃಂಗರಿಸಿ ಹೊರಡಿಸಬಹುದು ಕೆಲವೇ ನಿಮಿಷಗಳಲ್ಲಿ.
ಮಗನೊಂದಿಗೆ ಹರಟುತ್ತಾ ಮಾಲ್ ತಲುಪಿದೆ. ಮನೆಯಿಂದ ಕಾರಿನಲ್ಲಿ ೧೦ ನಿಮಿಷ ದೂರದಲ್ಲಿರುವ city plaza ಮಾಲ್ ವಿಶಾಲವಾದ, ಸುಂದರ ಮಳಿಗೆ. ಅಮೆರಿಕೆಯ ಸಂಸತ್ ಭವನದ ರೀತಿಯಲ್ಲಿ ಕತಿರುವ ಕಟ್ಟಡದ ಗೋಪುರ ತುಂಬಾ ದೂರದ ತನಕ ಗೋಚರಿಸುತ್ತದೆ. ನಿರಂತರ ಮತ್ತು ಅಗ್ಗದ ವಿದ್ಯುತ್ ಸರಬರಾಜು ಇಡೀ ಮಾಲ್ ಮಾತ್ರವಲ್ಲ ನಗರವನ್ನೇ ಹಗಲಾಗಿಸಿರುತ್ತದೆ ಇರುಳನ್ನು. ಮಾಲ್ ತಲುಪಿ ಪಾರ್ಕಿಂಗ್ ಲಾಟ್ ನೋಡಿಯೇ ಅಂದು ಕೊಂಡೆ ಇಂದು sale ಹಾಕಿದ್ದಾರೆ ಎಂದು. ಇಲ್ಲಿನ ಜನ sale ಅಂದು ಬಿಟ್ಟರೆ ಪುಕ್ಕಟೆ ಹಂಚುತ್ತಾರೇನೋ ಅನ್ನಬೇಕು ಹಾಗೆ ಮುಗಿ ಬೀಳುತ್ತಾರೆ. ಹೇಳಿ ಕೇಳಿ ಶುಕ್ರವಾರ ಬೇರೆ. ಒಂದು ರೀತಿಯ ಔಟಿಂಗ್ ಸಹ. ಮೇಲೆ ಹೇಳಿದ ಮಾಲ್ ಭಾರತೀಯರದು. ನಮ್ಮ ದೇಶದಲ್ಲೂ ಇವೆ ಇವರ ಸರಣಿ ಅಂಗಡಿಗಳು. city plaza, home plaza ಅಂತ. ಪ್ರತಿಯೊಂದು ವಸ್ತುವೂ ಇಲ್ಲಿ ಲಭ್ಯ. ಈ ಮಾಲ್ ಒಳಗೆ ಹೊಕ್ಕರೆ ದಿನಸಿ ಬಿಟ್ಟು ಬಾಕಿಯೆಲ್ಲಾ ಸಿಗುತ್ತದೆ. ಜೆಡ್ಡಾ ಒಂದರಲ್ಲೇ ಇಂಥ ಸುಮಾರು ೧೦ ಮಾಲುಗಳು ಈ city plaza ಗೆ ಸೇರಿದವು. ಒಳ ಹೋದ ಕೂಡಲೇ ಆಟಿಕೆಗಳ ವಿಭಾಗದ ಕಡೆ ಮಗ ಜಿಗಿದು "ಯೋ ಯೋ" ಹಿಡಿದು ಕೊಂಡು ಬಂದ. ನಾನೂ ನನಗೆ ಬೇಕಾದ ಒಂದೆರಡು ಶರ್ಟ್ ಗಳನ್ನು ಕೊಂಡು ರಾತ್ರಿಯ ಕೊನೆಯ ಪ್ರಾರ್ಥನೆಗೆ ಇನ್ನೂ ಸಮಯವಿದೆಯಲ್ಲ (ಇಲ್ಲಿ ಅಂಗಡಿ ಮುಂಗಟ್ಟು ಗಳು ಅರ್ಧ ಘಂಟೆ ಬಂದ್, ಪ್ರಾರ್ಥನೆಯ ಕರೆ ಕೇಳಿದ ಕೂಡಲೇ) ಎಂದು ಎಲಿವೇಟರ್ ಮೂಲಕ ಮೊದಲ ಮಹಡಿಗೆ ಹೋದೆ ಫರ್ನಿಚರ್ ನೋಡೋಣ ಎಂದು. ಅಲ್ಲಿಗೆ ಹೋದ ಕೂಡಲೇ ಥಟ್ಟನೆ ನೆನಪಾಯಿತು, ನಾನು ತುಂಬಾ ಸಲ ಕೊಳ್ಳಬೇಕೆಂದು ಬಯಸಿದ್ದ ಟೇಬಲ್ ಇದೆಯಾ ಎಂದು. ನಮೂನೆಯ ನಮೂನೆಯ ಫರ್ನಿಚರ್ ಗಳು ಸೇಲ್ ಗೆ ಇದ್ದವು. spring sale ಅಂತೆ (ವಸಂತ ಋತು). ಹೊರಗೆ ಭಣ ಭಣ ಅನುತ್ತಿದ್ದರೂ ಕಡೆ ಪಕ್ಷ ಇಲ್ಲಾದರೂ ಮಳಿಗೆ ಒಳಗೆ ವಸಂತ ಕಾಲ ಇದೆಯಲ್ಲಾ ಎಂದು ಕೊಳ್ಳುತ್ತಾ ಸುತ್ತಾ ಮುತ್ತಾ ಕಣ್ಣು ಹಾಯಿಸುತ್ತಾ. ಆದರೆ ನನ್ನ ಮೆಚ್ಚಿನ ಮೇಜು ಮಾತ್ರ ಕಾಣಲಿಲ್ಲ. ಅಲ್ಲೇ ಅಡ್ಡಾಡುತ್ತಿದ್ದ ವ್ಯಕ್ತಿಯನ್ನು ಮೇಜಿನ ವಿವರಣೆ ನೀಡಿ ಕೇಳಿದೆ. ಹಾಂ, ಅದು ಕೆಳಗಿನ ಫ್ಲೋರ್ ನಲ್ಲಿದೆ ಎಂದ. ಸರಿ ಅಲ್ಲಿಗೆ ಬಂದು ನೋಡಿದಾಗ ನನ್ನ ಮೆಚ್ಚಿನ ಮೇಜು ನಾಚುವ ಲಲನೆಯಂತೆ ಗೋಚರಿಸಿದಳು ನನಗೆ. ತನ್ನ ಸೊಂಟಕ್ಕೆ ಹಳೆ ಬೆಲೆ ಮತ್ತು ಹೊಸ ಇಳಿ ತಾಯದ ಬೆಲೆಯ ಟ್ಯಾಗ್ ಗಳನ್ನು ಸಿಕ್ಕಿಸಿಕೊಂಡು ಬಿಂಕದಿಂದ ನಿಂತ ಮೇಜನ್ನು ಆಸೆಗಣ್ಣುಗಳಿಂದ ನೋಡುತ್ತಾ ಹತ್ತಿರ ಬಂದೆ. ೮೯೫ ರಿಯಾಲ್ ಬೆಲೆ ಬಾಳುವ (೧೦,೫೦೦ ರೂಪಾಯಿ) ಈ ಮೇಜಿಗೆ ಶೇಕಡಾ ೭೦ ಇಳಿತಾಯ. ಅಬ್ಬಾ, ಇಂಥಾ ಇಳಿತಾಯಕ್ಕೆ "ಕುಸಿತಾ"ಯ ಎಂದೇ ಕರೆಯಬೇಕು. ೨೬೫ ರಿಯಾಲ್ ಅಂದ್ರೆ ೩೦೦೦ ರೂಪಾಯಿ ಹತ್ತತ್ರ. ವಾವ್, ಎಂದು ಕುಣಿದೆ, ಮನಸ್ಸಿನಲ್ಲೇ. ನಮ್ಮ ದೇಶದಲ್ಲಿ ಒಂದೆರಡು ತುಂಡು ಹಲಗೆಯೂ ಸಿಗಲಿಕ್ಕಿಲ್ಲ ಈ ಬೆಲೆಗೆ. ಒಳ್ಳೆ ಡಿಸ್ಕೌಂಟ್ ಅನ್ನೇ ಕೊಟ್ಟಿದ್ದಾರೆ ಎಂದು ಮನದಲ್ಲೇ ವಂದಿಸುತ್ತಾ ಇದ್ದಾಗ ಒಮ್ಮೆಲೇ ಮಾನವ ಸಹಜ ಕುಬುದ್ಧಿ ಇಣುಕ ತೊಡಗಿತು. ಮೇಲಿನ ಒಂದು ಡ್ರಾವರ್ ಗೆ ಒಂದು ನಾಬ್ ಇರಲಿಲ್ಲ. "dont look gift horse in the mouth" ಅಂತಾರೆ ಆಂಗ್ಲ ಭಾಷೆಯಲ್ಲಿ, ಹಾಗಂದ್ರೆ ಉಡುಗೊರೆಯಾಗಿ ಸಿಕ್ಕ ಕುದುರೆಯ ಬಾಯಗಲಿಸಿ ಹಲ್ಲುಗಳು ಸರಿ ಇವೆಯೋ ಎಂದು ನೋಡಬಾರದು. ಅಲ್ಲೇ ಪಕ್ಕದಲ್ಲಿದ್ದ ಸೇಲ್ಸ್ ಮ್ಯಾನ್ ಗೆ ಕೇಳಿದೆ ಇದರ ಒಂದು ನಾಬ್ ಹೋಗಿದೆಯಲ್ಲ ಅಂತ. ಮುಗುಳ್ನಗುತ್ತಾ ನನ್ನನ್ನು ಸಿಗಿಯುವಂತೆ ನೋಡಿ ಸರ್, ಅದಕ್ಕೇ ಆಲ್ವಾ ಇದು ೭೦ ಶೇಕಡಾ ಡಿಸ್ಕೌಂಟ್ ನಲ್ಲಿ ಇರೋದು ಅಂದ. ಆದರೆ ಅವನ ಮುಖ ಹೇಳುತ್ತಿತ್ತು, ಅಲ್ಲಾ ಬೆಪ್ಪೆ, ನಿನ್ನ ಮುಸುಡಿ ನೋಡಿ ಅಲ್ಲ ಅದಕ್ಕೆ ಶೇಕಡಾ ೭೦ ರ ರಿಯಾಯಿತಿ, ಆ ಹಿಡಿಕೆ ಇಲ್ಲದ್ದಕ್ಕೇ ಎಂದು. ಈಗ ನಾಬ್ ಮರೆತು ನನ್ನ ವಶವಾಗಲಿರುವ ಆ ಮೇಜನ್ನೇ ಮತ್ತೊಮ್ಮೆ ನೋಡುತ್ತಾ ಇದ್ದಾಗ ನನ್ನ ಹುಟ್ಟು ಗುಣದ ಒಂದು ಭಾಗ ಜಾಗೃತವಾಯಿತು. ಈಗ ಬೇಡ ನಾಳೆ ತಗೋ ಎಂದು. ಈ ನಾಳೆ ಅನ್ನೋನ ಮನೆ ಹಾಳು ಅಂತಾರೆ. ನನಗೆಷ್ಟೇ ಸಲ ಈ ಅನುಭವ ಆಗಿದ್ರೂ ತ್ರಿವಿಕ್ರಮನ ಬೆನ್ನು ಬಿಡದ ಭೇತಾಳದಂತೆ, ಸಾರಾಯಿ ಬಿಟ್ಟಿರಲಾರದ ಮದ್ಯ ವ್ಯಸನಿಯಂತೆ ನನಗೆ ಈ ನಂಟು ನಾಳೆಯದು. ಬೆಳಿಗ್ಗೆ ಶಾಲೆಯಿದೆ, ಮಗನಿಗೆ ಡಿನ್ನರ್ಗೆ ತಡವಾಗಬಹುದು ಎಂದು ನನಗೆ ನಾನೇ ನೆಪ ಹೇರಿಕೊಂಡು ನಾಳೆ ಬರುವ ತೀರ್ಮಾನದೊಂದಿಗೆ ಹೊರನಡೆದೆ.
ಮಹೋಗನಿ ಮರದಿಂದ ಮಾಡಿದ ಆ ಮೇಜು ಒಂದು ರೀತಿಯ antique ಪೀಸ್ ಎಂತಲೇ ಹೇಳಬಹುದು. ಮೇಜಿನ ಮೇಲಿನ ಭಾಗದಲ್ಲಿ ಮೂರು ಡ್ರಾವರ್ ಗಳು. ಚಿಕ್ಕ ಪುಟ್ಟ ವಸ್ತುಗಳನ್ನು ಇಡಲು. ಅದರ ಕೆಳಗೆ ಅರ್ಧ ವೃತ್ತಾಕಾರದ ಮುಚ್ಚಳ. ಮುಚ್ಚಳ ತೆರೆದ ಕೂಡಲೇ ಕಾಣದಂತೆ ಫ್ರೇಂ ಒಳಕ್ಕೆ ಸೇರಿಕೊಳ್ಳುತ್ತದೆ. ಕೆಳಗೆ ಮತ್ತೆರಡು ಡ್ರಾವರ್ಗಳು. ಮೇಜಿನ ಬರೆಯುವ ಪಟ್ಟಿ ಹೊರಕ್ಕೆಳೆದರೆ ದೊಡ್ಡದಾಗುವಂಥದ್ದು. ಅಂದರೆ ಅದನ್ನು ಎಳೆದರೆ (expandable) ಬರೆಯಲು ಮತ್ತಷ್ಟು ಜಾಗ ಸಿಗುತ್ತದೆ. ಮೇಜಿನ ಕಾಲುಗಳೂ ಸಹ ಸುಂದರವಾಗಿ ಕೆತ್ತಲ್ಪಟ್ಟವು. ಒಟ್ಟಾರೆ ಒಳ್ಳೆ ಫಿನಿಶಿಂಗ್ ಇರುವ ಸುಂದರ, ಮನೆಯ ಯಾವುದೇ ಭಾಗದಲ್ಲೂ ಇಟ್ಟರೂ ಒಂದು ರೀತಿಯ ಬರವಣಿಗೆಯ ಭಾವವನ್ನು ಹುಟ್ಟಿಸುವಂಥದ್ದು. ಬರೆಯಲು ಪ್ರೇರಣೆ ಸಿಗದಾಗ ಈ ಮೇಜು ದೊಡ್ಡ ಸಹಾಯವಾಗಿ ಬರುತ್ತದೆ, inspiring table. ಭಾರತದಲ್ಲಾದರೆ ನಮ್ಮ ಬಡಗಿಗಳು ಇಂಥ ಟೇಬಲ್ಲನ್ನು ಸೃಷ್ಟಿಸಲಾರರು. ಹಾಗೇನಾದರೂ ನೀವು ಪ್ರಯತ್ನಿಸಿದ್ದೇ ಆದರೆ ಅದೇನೂ ದೊಡ್ಡ ವಿಷಯವಲ್ಲ ಮರ ಕೊಡಿಸಿ ಬಿಡಿ ಮಾಡಿ ಕೊಡುತ್ತೇನೆ ಎಂದು ಹೇಳಿ ನಮ್ಮಿಂದ ಮರ ಖರೀದಿ ಮಾಡಿಸಿ ನಮ್ಮ ಕಾಲಕ್ಕಲ್ಲದಿದ್ದರೂ ನಮ್ಮ ಮಕ್ಕಳ ಅವಶ್ಯಕತೆಗಾದರೂ ಮೇಜನ್ನು ತಯಾರು ಮಾಡಿ ಕೊಡುತ್ತಾನೆ. ಯಾಕೆಂದರೆ ನಮ್ಮಿಂದ ಅಡ್ವಾನ್ಸ್ ತೆಗೆದು ಕೊಂಡು ಮಾಯವಾಗುವ ಬಡಗಿ ಇದೇ ರೀತಿ ನಾಲ್ಕೈದು ಜನರ ಹತ್ತಿರ ಅಡ್ವಾನ್ಸ್ ತೆಗೆದುಕೊಂಡು ಬೆಳಗ್ಗಿನ ರೌಂಡ್ಸ್ ಗೆ ಬರುವ ವೈದ್ಯರಂತೆ ಅಡ್ವಾನ್ಸ್ ತೆಗೆದುಕೊಂಡ ನಾಲ್ಕೈದು ಮನೆಗಳಿಗೆ ತೆರಳಿ, ಅಲ್ಲೊಂದಿಷ್ಟು, ಇಲ್ಲೊಂದಿಷ್ಟು ಕೆಲಸ ಮಾಡಿ ಬರುತ್ತಾನೆ. ಇಷ್ಟೆಲ್ಲಾ ಆದ ಮೇಲೆ ನಮ್ಮ ಕೈಗೆ ಸಿಗುವ ಎಂಡ್ ಪ್ರಾಡಕ್ಟೋ ? ನಮಗೇ ಗೊತ್ತಿರುವುದಿಲ್ಲ ನಾವೇನನ್ನು ಮಾಡಲು ಆರ್ಡರ್ ಬಡಗಿಗೆ ಕೊಟ್ಟಿದ್ದು ಎಂದು. ನನ್ನ ತಂಗಿ ಒಂದು ಮಂಚ ಮಾಡಿಕೊಡಲು order ಕೊಟ್ಟಿದ್ದಳು. ಅವನು ಮಂಚ ರೆಡಿ ಮಾಡಿ ಕೊಡು ವಷ್ಟರಲ್ಲಿ ನಾನು ಮೂರು ಸಲ ರಜೆಗೆ ಎಂದು ಭಾರತಕ್ಕೆ ಬಂದು ಹೋದೆ. ಕೊನೆಗೆ ಕೋಣೆಗೆ ಬಂದ ಮಂಚವಾದರೂ ಎಂಥದ್ದು? ಹೆಣ ಹೊತ್ತು ಕೊಂಡು ಹೋಗುವ ಚಟ್ಟದ ರೀತಿ ಇತ್ತು ಮಂಚ. ಚಟ್ಟವಾದರೋ ಇನ್ನೂ ಚೆನ್ನಿರುತ್ತದೆ. ಕೊನೆ ಸವಾರಿ ಅಲ್ಲವಾ ಅಂತ ನಾಜೂಕಿನಿಂದ, ಸೊಗಸಾಗಿ, ಪ್ರೀತಿಯಿಂದ ತಯಾರು ಮಾಡಿ ಕೊಡುತ್ತಾರೆ. ಈ ಮಂಚ ಚಟ್ಟಕ್ಕಿಂತ ಕಡೆ. ಇದನ್ನು ನೋಡಿ ನನ್ನ ತಂಗಿಯ ಮುಖ ಬಣ್ಣ ಕಳೆದುಕೊಂಡ ಹೆಣದ ಥರ ಆಗಿದ್ದು ನೋಡಿ ಕನಿಕರ ತೋರಿತು.
ಈಗ ನನ್ನ ಆ ಮಾಯಾ ಮೇಜನ್ನು ಕೊಳ್ಳಲು ಮಾರನೆ ದಿನ ಬೆಳಿಗ್ಗೆ ಅದೇ ದಾರಿಯಲ್ಲಿ ನಾನು ಕೆಲಸದ ನಿಮಿತ್ತ ಹೋದರೂ ಬಿಡುವಿಲ್ಲದ ಕಾರಣ ಹೋಗಲಾರದೆ ಸಂಜೆಗೆ ಅಂಗಡಿ ಕಡೆ ಒಬ್ಬನೇ ಹೋದೆ. ಮತ್ತದೇ ಗಿಜಿ ಗಿಜಿ, ಏನು ಸಾಯುತ್ತಾರೋ ಡಿಸ್ಕೌಂಟ್ ಅಂದ್ರೆ (ನೀನು? ಎಂದು ಕೇಳಿ ನನ್ನ ಪಾರ್ಟಿ ದಯಮಾಡಿ ಹಾಳು ಮಾಡ ಬೇಡಿ) ಎಂದು ನನ್ನಲ್ಲೇ ಗೊಣಗುತ್ತಾ ಬುರ್ಖಾಧಾರಿ ಅರಬ್ ಸುಂದರಿಯರ ಜೊತೆ elevator ಹತ್ತಿದೆ. ಇದ್ದಕ್ಕಿದ್ದಂತೆ ಮನದಲ್ಲಿ ಪುಕು ಪುಕು, ನಾನು ಬಯಸಿದ, ಪ್ರೇಮಪಾಶಕ್ಕೆ ಬಿದ್ದ ಆ ಮೇಜು ಅಲ್ಲಿಲ್ಲದಿದ್ದರೆ? ಛೆ ಶುಭ್, ಶುಭ್, ಬೋಲೋ ಎಂದು ಧೈರ್ಯ ಹೇಳಿಕೊಳ್ಳುತ್ತಾ ದಾಪುಗಾಲು ಹಾಕಿದೆ. ಒಹ್, ಅಲ್ಲೇ ಇದೇ ನನ್ನ ಬರವಿಕೆಗಾಗಿ ಕಾಯುತ್ತಾ ನನ್ನ ಮೇಜು. ಇದನ್ನ ನಾನಲ್ಲದೆ ಯಾರು ಕೊಳ್ಳಲು ಸಾಧ್ಯ ಎಂದು ಗೆಲುವಿನ ನಗೆ ನಗುತ್ತಾ ಹತ್ತಿರ ಬಂದು ನಿಂತೆ ಹಾಡೊಂದನ್ನು ಗುನುಗಿಸುತ್ತಾ, "ನಾನು ನೀನು ಒಂದಾದ ಮೇಲೆ ಹೀಗೇಕೆ ನನ್ನನ್ನೇ ನೋಡುವೆ, ಪುಸ್ತಕಗಳಿಂದ ನಿನ್ನಾ, ಸಿಂಗಾರ ಮಾಡಿ ಕಣ್ತುಂಬಾ ನಾ ನೋಡುವೇ..." ಈಗ ಮತ್ತೊಂದು ಯೋಚನೆ ತಲೆ ಹಾಕಿತು. ಅಲ್ಲಾ, ಮೇಜನ್ನು ಇನ್ನೇನು ಕೆಲವೇ ಕ್ಷಣಗಳಲ್ಲಿ ಕೊಳ್ಳುತ್ತೇನೆ ಆದರೆ ಅದಕ್ಕೆ ಹೊಂದುವ ಕುರ್ಚಿ? ಅಲ್ಲೇ ಪಕ್ಕದಲ್ಲೇ ಕೆಲವು ಕುರ್ಚಿಗಳು ನನ್ನನ್ನು ಆರಿಸಿಕೋ ಎಂದು ಸ್ವಯಂವರದ ರೀತಿಯಲ್ಲಿ ನಿಂತಿದ್ದವು. ಯಾವುವೂ ಇಷ್ಟವಾಗಲಿಲ್ಲ. ಕೆಲವೊಂದು plastic ನದ್ದಾದರೆ, ಇನ್ನೂ ಕೆಲವು artistic ಅಲ್ಲದವು. ಈ ಮೋಹಕ ಮೇಜಿಗೆ ಹೊಂದುವ ಕುರ್ಚಿ ಇಟ್ಟಿಲ್ಲವಲ್ಲ ಈ ಜನ ಎಂದು ಹಳಿಯುತ್ತಾ ಸರಿ ಈ ಮೇಜನ್ನು ತೆಗೆದುಕೊಂಡು ಗಾಡಿ ಬಿಡೋಣ ಎಂದು ಹತ್ತಿರ ಬಂದು ಅದರ ಟ್ಯಾಗ್ ಅನ್ನು ಹಾಗೇ ಹಿಂದಕ್ಕೆ ತಿರುವಿದೆ. ಇದ್ದಕ್ಕಿದ್ದಂತೆ ಒಂದು ರೀತಿಯ ತಲೆ ಸುತ್ತು, ನೆಲದಡಿಯ ನೆಲ ಜಾರುತ್ತಿರುವ ಅನುಭವ, ದಿಕ್ಕು ತಪ್ಪಿ ತೇಲುತ್ತಿರುವ ಹಾಗೆ. ಸಾವರಿಸಿಕೊಂಡು ಮತ್ತೊಮ್ಮೆ ನೋಡಿದೆ. ಟ್ಯಾಗ್ ಮೇಲೆ product code ಬರೆದು pick up ಎಂದು ಬರೆದಿದ್ದರು. ನಾನು "ಸೀಸನ್ಡ್" ಶಾಪ್ಪರ್, ನನಗೆ ವ್ಯಾಪಾರದ ಕೋಡು, ಕೋರೆ, ಬಾಲ ಎಲ್ಲಾ ಗೊತ್ತು. ಆದರೂ ಒಂದು ಆಸೆ, ಮತ್ತದೇ ಸೇಲ್ಸ್ ಮ್ಯಾನ್ನ ಹತ್ತಿರ ಹೋದೆ ನಡುಗುತ್ತಾ. ಕೆಲಸ ಬೇಕೆಂದು ಕೇಳಿ ಸುರುಳಿ ಮಾಡಿ bio data ಎಂಬ ಸೊರಗಿದ ಕಾಗದ ಹಿಡಿದ ಉದ್ಯೋಗಾರ್ಥಿಯ ಹಾಗೆ. ಸೇಲ್ಸ್ ಮ್ಯಾನ್ ಫಿಲಿಪ್ಪಿನ್ಸ್ ದೇಶದವನು. ಬೆಳ್ಳಗಿನ ಚರ್ಮ, ಹೊಳೆಯುವ ಹಲ್ಲುಗಳು, ನಿಷ್ಕಳಂಕ ವ್ಯಾಪಾರೀ ನಗೆ. ಹತ್ತಿರ ಕರೆದು ಈ ಮೇಜು ಮಾರಾಟವಾಯಿತಾ ಎಂದು ತೊದಲಿದೆ. ಅವನೂ ಸಹ ಟ್ಯಾಗ್ ಅನ್ನು ತಿರುವಿ ನನ್ನೆಡೆ ಕನಿಕರದಿಂದ ನೋಡಿ ನೇಣಿನ ತೀರ್ಪು ನೀಡುವ ನ್ಯಾಯಾಧೀಶನಂತೆ ತೀರ್ಪನ್ನು ಹೊರಬಿಟ್ಟ. ನನ್ನ ಪಾಲಿನ death sentence. ಎಸ್ ಸರ್, it is sold. ಧಸಕ್ ಎಂದಿತು ಎದೆ. ನಾನು ಇಷ್ಟಪಟ್ಟ ಹೆಣ್ಣಿಗೆ ಯಾರೋ ಬಂದು ತಾಳಿ ಕಟ್ಟಿ ಹೋದ ಹಾಗೆ. ಸಾವರಿಸಿಕೊಳ್ಳುತ್ತಾ, aah, its ok, there will always be another chance ಎನ್ನುತ್ತಾ ದ್ರಾಕ್ಷಿ ಹುಳಿ ಎಂದು ಗಂಭೀರವಾಗಿ ಹೊರ ನಡೆದೆ ನರಿಮಾಮನ ಅದೇ ಶೈಲಿಯಲ್ಲಿ.
ಬರೀ ಗೇಣಿನ ದೂರದಲ್ಲಿದ್ದ ಮೇಜನ್ನು procrastination ಎನ್ನುವ ವಿಷ ಕನ್ಯೆಯ ಆಟಕ್ಕೆ ಕಳೆದುಕೊಂಡು ಹವಾನಿಯಂತ್ರಿತ ವಸಂತ ಋತುವಿಗೆ ವಿದಾಯ ಹೇಳಿ ಅದೇ ಮರುಭೂಮಿಯ ಸುಡುವ ಒಣ ಹವೆಗೆ ಮುಖವೊಡ್ಡುತ್ತಾ ಪಾರ್ಕಿಂಗ್ ಲಾಟ್ ಕಡೆ ನಡೆದೆ ಹೊರಲಾರದ ಹೆಜ್ಜೆಗಳನ್ನು ಹಾಕುತ್ತಾ.
NB:
ಚಿತ್ರವನ್ನು ಸಂಪದಕ್ಕೆ ಅಪ್ ಲೋಡ್ ಮಾಡಲು ಹೇಳಿ ಕೊಟ್ಟವರು ಸಂಪದಿಗ ಗಣೇಶ್ ಅವರು.
Comments
ಉ: ಭಗ್ನ ಪ್ರೇಮಿ
In reply to ಉ: ಭಗ್ನ ಪ್ರೇಮಿ by ksraghavendranavada
ಉ: ಭಗ್ನ ಪ್ರೇಮಿ