ಭಾಗ - ೧೦: ಕೊನೆಯುಸಿರೆಳೆಯುತ್ತಿರುವ ಕಮ್ಯೂನಿಸಂ!
ರಾಕ್ಷಸ ಪರಿಪಾಲನೆ:
ರುಮೇನಿಯಾದ ಹೊಸ ಸರ್ಕಾರವು ಕಮ್ಯೂನಿಷ್ಟ್ ಪಕ್ಷವನ್ನು ನಿಷೇಧಿಸುತ್ತಿರುವುದಾಗಿ ೧೯೯೦ರ ಜನವರಿ ೧೩ನೇ ತಾರೀಖಿನಂದು ಪ್ರಕಟಿಸಿತು. ರುಮೇನಿಯಾದ ಸರ್ವಾಧಿಕಾರಿ ಚೌಸೆಸ್ಕೊವಿನ ರಾಕ್ಷಸ ಪರಿಪಾಲನೆಯು ಮುಗಿದ ಕೇವಲ ೧೫ ದಿವಸಗಳಿಗೆ ಅವನ ಪಕ್ಷಕ್ಕೂ ಸಹ ಅಂತ್ಯಕಾಲವು ಬಂದೊದಗಿತು. ಕಮ್ಯೂನಿಷ್ಟ್ ಪಕ್ಷವನ್ನು ನಿಷೇಧಿಸುತ್ತಿರುವುದಾಗಿ ’ನ್ಯಾಷನಲ್ ಸಾಲ್ವೇಷನ್ ಫ್ರಂಟ್ ಕೌನ್ಸಿಲ್’ ಪಕ್ಷದ ಅಧ್ಯಕ್ಷನಾದ ಲನ್ ಲಿಯೊಸ್ಕೂ ಅಧಿಕೃತವಾಗಿ ಪ್ರಕಟಿಸಿದ್ದಾರೆ. ಚೌಸೆಸ್ಕೂವಿಗೆ ಪ್ರಜೆಗಳು ಮರಣ ದಂಡನೆಯನ್ನು ವಿಧಿಸಿದ ನಂತರ ’ಸಾಲ್ವೇಷನ್ ಫ್ರಂಟ್’ ಹಂಗಾಮಿ ಸರ್ಕಾರದ ರಚನೆಯ ಜವಾಬ್ದಾರಿಯನ್ನು ಸ್ವೀಕರಿಸಿದೆ. ೧೩ನೇ ತಾರೀಖು ರುಮೇನಿಯಾದ ರಾಜಧಾನಿ ಬುಕಾರೆಸ್ಟಿನಲ್ಲಿ ನಡೆದ ಬೃಹಥ್ ಜಾಥಾದಲ್ಲಿ ಅನೇಕ ಜನ ಕಮ್ಯೂನಿಷ್ಟ್ ಪಕ್ಷದ ಸದಸ್ಯರು ತಮ್ಮ ಗುರುತಿನ ಚೀಟಿಗಳನ್ನು ಸುಟ್ಟು ಹಾಕಿದರು. ಪ್ರಜೋದ್ಯಮದ ಹುಟ್ಟಡಗಿಸಲು ೧೯೮೯ರ ಡಿಸೆಂಬರಿನಲ್ಲಿ ಚೌಸೆಸ್ಕೂ ಸರ್ಕಾರದ ಭದ್ರತಾ ಪಡೆಯ ಪೋಲಿಸರು ನಡೆಸಿದ ಗೋಲಿಬಾರಿನಲ್ಲಿ ಮರಣ ಹೊಂದಿದ ಜನರಿಗಾಗಿ ರುಮೇನಿಯಾದ ಪ್ರಜೆಗಳು ಶ್ರದ್ಧಾಂಜಲಿಯನ್ನು ಅರ್ಪಿಸಿದರು. ಭದ್ರತಾ ಪಡೆಯ ಪೋಲಿಸರು ಕೈಗೊಂಡ ಗೋಲಿಬಾರಿನಲ್ಲಿ ಸುಮಾರು ಹತ್ತು ಸಾವಿರ ಜನ ಪ್ರಾಣ ಕಳೆದುಕೊಂಡರು.
ಮೂಡಣ ಯೂರೋಪಿನಲ್ಲಿ ಬೀಸುತ್ತಿರುವ ಪ್ರಜಾತಂತ್ರದ ಪ್ರಭಂಜನವನ್ನು ತಡೆಯಲು ಅಡ್ಡಗೋಡೆಯೊಂದನ್ನು ಕಟ್ಟಲು ರುಮೇನಿಯಾದ ಸರ್ವಾಧಿಕಾರಿ ಚೌಸೆಸ್ಕೂ ಭಾವಿಸಿದ. ಇದಕ್ಕೆ ಅವನಿಗೆ ಚೀನಾದಿಂದ ಸ್ಪೂರ್ತಿ ದೊರೆಯಿತು.
ಕಮ್ಯೂನಿಷ್ಟ್ ಆರ್ಥಿಕ ವಿಧಾನಗಳು ಅನ್ನವಿಕ್ಕುವುದಿಲ್ಲವೆನ್ನುವುದನ್ನು ೧೯೭೦ರಲ್ಲಿ ಚೀನಾದ ಆಡಳಿತಗಾರರು ಗಮನಿಸಿದರು. ವೈಯಕ್ತಿಕ ವ್ಯವಸಾಯ ಕ್ಷೇತ್ರ (ಸ್ವಂತ ಹೊಲ) ಹಾಗು ಸ್ವಂತ ಉದ್ದಿಮೆಗಳಿಗೂ ಅಲ್ಲಿ ಪ್ರೋತ್ಸಾಹವು ದೊರೆಯುತ್ತಿದೆ. ಪ್ರಜಾತಂತ್ರವಿರುವ ದೇಶಗಳಿಂದ ದೊಡ್ಡ ಪ್ರಮಾಣದಲ್ಲಿ ಆರ್ಥಿಕ ಸಹಾಯವನ್ನೂ ಸಹ ಚೀನಾ ಪಡೆಯುತ್ತಿದೆ. ೧೯೭೮ರಲ್ಲಿ ಇತರ ದೇಶಗಳಿಂದ ಚೀನಾ ದೇಶವು ಬಂಡವಾಳದ ಹೂಡಿಕೆಯ ರೂಪದಲ್ಲಿ ಬರೋಬ್ಬರಿ ೨೧೭೦ ಕೋಟಿ ಡಾಲರುಗಳು (ಒಂದು ಡಾಲರಿನ ಬೆಲೆ ರೂ. ೧೬=೫೦) ಸಹಾಯವನ್ನು ತೆಗೆದುಕೊಂಡಿತು. ಅಂದಿನಿಂದ ಚೀನಾ ಸರ್ಕಾರವು ವಿದೇಶಿ ಬಂಡವಾಳ ಹಾಗು ಸಹಕಾರದೊಂದಿಗೆ ನೂರಾರು ವಾಣಿಜ್ಯ ಯೋಜನೆಗಳನ್ನು ಆರಂಭಿಸಿದೆ. ೧೯೮೭ಕ್ಕಿಂತ ೧೯೮೮ರಲ್ಲಿ ನಿತ್ಯಾವಸರ ವಸ್ತುಗಳ ಬೆಲೆಯು ಶೇಖಡಾ ೧೬% ಏರಿದವು. ೧೯೮೯ರಲ್ಲಿಯೂ ಸಹ ಇದೇ ಪರಿಸ್ಥಿತಿ ಪುನರಾವೃತವಾಯಿತು. "ದ್ರವ್ಯೋಲ್ಬಣ, ಬೆಲೆ ಏರಿಕೆ ಮುಂತಾದುವುಗಳನ್ನು ತಡೆಯಲು ಕ್ರಮಗಳನ್ನು ಕೈಗೊಳ್ಳುತ್ತಿದ್ದಾಗ್ಯೂ ಆರ್ಥಿಕ ಅಸ್ಥಿರತೆಯು ಮುಂದುವರೆಯುತ್ತಿದೆ ಎಂದು ಬೀಜಿಂಗ್ ರಿವ್ಯೂ ಪತ್ರಿಕೆ ೧೯೮೮ರಲ್ಲಿ ವ್ಯಾಖ್ಯಾನಿಸಿದೆ. ಅಂತರರಾಷ್ಟ್ರೀಯ ಹಣಕಾಸು ನಿಧಿ (International Monetary Fund) ಮೂಲದಿಂದಲೂ ಸಹ ೧೯೮೧ರಿಂದಲೇ ಚೀನಾ ಭಾರೀ ಪ್ರಮಾಣದ ಸಾಲವನ್ನು ಪಡೆಯುತ್ತಿದೆ. ಇವೆಲ್ಲಾ ಮಾರ್ಕ್ಸಿಷ್ಟ್ ಆರ್ಥಿಕ ವಿಧಾನಗಳ ವೈಫಲ್ಯಕ್ಕೆ ನಿದರ್ಶನಗಳಲ್ಲದೆ ಮತ್ತೇನೂ ಅಲ್ಲ.
ಮಾರ್ಕ್ಸಿಷ್ಟ್ ಆರ್ಥಿಕ ವಿಧಿ ವಿಧಾನಗಳಿಗೆ ತಿಲಾಂಜಲಿಯನ್ನಿತ್ತ ಚೀನಾ ಪ್ರಭುತ್ವವು ರಾಜಕೀಯ ನಿರಂಕುಶತ್ವವನ್ನು ಮಾತ್ರ ಕೈಬಿಡಲಿಲ್ಲ. ಆದ್ದರಿಂದ ಅಲ್ಲಿ ಪ್ರಜಾಪ್ರಭುತ್ವಕ್ಕಾಗಿ ಚಳವಳಿ ಆರಂಭವಾಗಿದೆ. ೧೯೮೯ರ ಜೂನ್ ತಿಂಗಳಿನಲ್ಲಿ ಚೀನಾ ದೇಶದಾದ್ಯಂತ ಲಕ್ಷಾಂತರ ಜನ ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳು ಪ್ರಜಾಪ್ರಭುತ್ವಕ್ಕಾಗಿ ಉದ್ಯಮವನ್ನು ಆರಂಭಿಸಿದರು. ಚಳವಳಿಗಾರರನ್ನು ಸರ್ಕಾರದ ಪೋಲಿಸ್ ಪಡೆಗಳು ದೌರ್ಜನ್ಯದಿಂದ ಹತ್ತಿಕ್ಕಿದವು. ಬೀಜಿಂಗ್ ನಗರದ ’ತಿಯಾನನ್ ಮನ್’ ಚೌಕದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಶಾಂತವಾಗಿ ಪ್ರತಿಭಟನೆ ಮಾಡುತ್ತಿದ್ದ ಚಳವಳಿಗಾರರ ಮೇಲೆ ಸೈನಿಕ ಶಕಟಗಳು (ಟ್ಯಾಂಕರುಗಳು) ದಾಳಿ ಮಾಡಿದವು. ಆ ಶಕಟಗಳ ಕೆಳಗೆ ಸಿಲುಕಿ ಪ್ರಜಾತಂತ್ರಕ್ಕಾಗಿ ಹೋರಾಡುತ್ತಿದ್ದ ಸುಮಾರು ೪,೦೦೦ ಅಕ್ಷರಶಃ ನಾಲ್ಕು ಸಾವಿರ ಜನ ಮರಣಿಸಿದರು. ಪಿಶಾಚಿಗಳ ಹಾಗೆ ಜನರ ಮೇಲೆರಗಿದ ಸೈನಿಕ ದಳಗಳು ಚಿಕ್ಕ ಮಕ್ಕಳನ್ನೂ ಸಹ ಬಂದೂಕಿನಿಂದ ಸುಟ್ಟು ಕೊಂದವು. ಈ ಬೀಭತ್ಸಕಾಂಡವನ್ನು ಪ್ರಪಂಚದಾದ್ಯಂತ ಎಲ್ಲಾ ದೇಶಗಳೂ ಖಂಡಿಸಿದವು.
ಯಾವ ಚಕ್ರದ ಕೆಳಗೆ ಸಿಲುಕಿ
ಯಾರಾರು ನಲುಗಿದರೆಂದು
ನರಕದಲ್ಲಿ ಕುಳಿತ ಶ್ರೀ ಶ್ರೀ
ಲೆಕ್ಕ ಹಾಕುತ್ತಿದ್ದಾನೆಯೇ?
ಮಾವೋನ ಸನಿಹದಲಿ ಕುಳಿತು
ಮಾದಕ ಪೇಯವನ್ನು ಹೀರುತ್ತಾ
ಭೂಕಂಪವುಂಟಾಗಿದೆಯೆಂದು
ಭುಜಗಳನ್ನು ಕುಣಿಸುತ್ತಿದ್ದಾನೆಯೇ?
ಪ್ರಜಾಪ್ರಭುತ್ವದ ಪರವಾಗಿ ಚಳವಳಿ ಮಾಡಿದವರ ಬಗ್ಗೆ ಸಹಾನುಭೂತಿಯನ್ನು ತೋರಿದರೆಂದು ಕಮ್ಯೂನಿಷ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದ ಜಿಯಾಂಗ್ ಅವರನ್ನು ಪದಚ್ಯುತಗೊಳಿಸಲಾಯಿತು. ಅವರ ಸ್ಥಾನದಲ್ಲಿ ಜಿಯಾಂಗ್ ಜೆಮಿನ್ ಪಕ್ಷದ ನೇತಾರನಾಗಿ ಆಯ್ಕೆಯಾದರು. ಮತ್ತೊಂದೆಡೆ ಟಿಬೆಟ್ ದೇಶಸ್ಥರ ಮೇಲೆ ಚೀನಾ ಪ್ರಭುತ್ವವು ದಮನಕಾಂಡವನ್ನು ಮುಂದುವರೆಸುತ್ತಿದೆ. ದಲೈಲಾಮ ಅವರಿಗೆ ನೋಬಲ್ ಬಹುಮಾನ ಕೊಡುವುದನ್ನು ನಮ್ಮ ದೇಶದ ಆಂತರಿಕ ವ್ಯವಹಾರಗಳಲ್ಲಿ ತಲೆದೂರಿಸುವಂತಹ ಅಪರಾಧವೆಂದು ಚೀನಾ ಚೀರಾಡಿತು. ಪೂರ್ವ ಯೂರೋಪಿನಂತೆ ಚೀನಾದಲ್ಲಿಯೂ ಸಹ ಕಮ್ಯೂನಿಸಂ ಕುಸಿದು ಮಣ್ಣು ಸೇರುವುದು ಖಚಿತ. ಟಿಬೆಟ್ಟಿಗೆ ಸ್ವಾತಂತ್ರ್ಯ ಸಿಗುವುದೂ ಸಹ ಅಷ್ಟೇ ಖಚಿತ.
೨೪ ವರ್ಷಗಳಷ್ಟು ದೀರ್ಘಕಾಲ ರುಮೇನಿಯಾ ಪ್ರಜೆಗಳನ್ನು ನಿರಂಕುಶವಾಗಿ ಪರಿಪಾಲಿಸಿದ ಕಮ್ಯೂನಿಷ್ಟ್ ಸರ್ವಾಧಿಕಾರಿ ನಿಕೋಲಾಯ್ ಚೌಸೆಸ್ಕೂ ಚೀನಾ ದಮನಕಾಂಡದಿಂದ ಮತ್ತಷ್ಟು ಉತ್ತೇಜಿತನಾದ. ಚೀನಾದಂತೆ ತಾನೂ ಸಹ ಪ್ರಜಾತಂತ್ರಕ್ಕಾಗಿ ಹೋರಾಡುತ್ತಿರುವ ಚಳವಳಿಗಾರರನ್ನು ಹತ್ತಿಕ್ಕಬಹುದೆಂದು ಭಾವಿಸಿದ, ಆದರೆ ಅದಕ್ಕೂ ಮುಂಚೆ ಪ್ರಜೆಗಳ ಆಕ್ರೋಶಕ್ಕೆ ಅವನೇ ಬಲಿಯಾದ.
೧೯೮೯ರ ಡಿಸೆಂಬರಿನಲ್ಲಿ ಪ್ರಜಾ ಉದ್ಯಮವು ಸಮುದ್ರದ ಅಲೆಯಂತೆ ಒಮ್ಮಿಂದೊಮ್ಮೆಲೆ ಉಕ್ಕೇರಿತು. ರುಮೇನಿಯಾದ ಪೋಲಿಸ್ ಪಡೆಗಳು ಅಮಾನುಷವಾಗಿ ಚಳವಳಿಗಾರರನ್ನು ಹತ್ತಿಕ್ಕಿದವು. ಚಿಕ್ಕ ಮಕ್ಕಳನ್ನೊಳಗೊಂಡು ಸುಮಾರು ೮೦೦೦ ಜನ ಪೋಲಿಸರ ದೌರ್ಜನ್ಯಕ್ಕೆ ಬಲಿಯಾದರು. ಇಂಥ ಘೋರವಾದ ಭೀಬತ್ಸ್ಯಕಾಂಡವು ಜರುಗಿದರೂ ಸಹ ಪ್ರಜಾತಂತ್ರದ ಜ್ವಾಲೆಗಳು ಆರಲಿಲ್ಲ. ಸೈನಿಕರು ಹಾಗು ಜನರು ಒಂದಾದರು, ಚೌಸೆಸ್ಕೂ ಪೋಲಿಸ್ ಪಡೆಗಳ ನೆರವಿನೊಂದಿಗೆ ಹೋರಾಡಿದ. ಡಿಸೆಂಬರ್ ೨೨ನೇ ತಾರೀಖಿನಂದು ಚೌಸೆಸ್ಕೂ ಪಲಾಯನ ಮಾಡಿದ. ಆದರೆ ಅವನು ದೇಶದ ಸರಿಹದ್ದನ್ನು ದಾಟುವುದರ ಒಳಗೆ ಪ್ರಜಾಪ್ರಭುತ್ವವಾದಿ ಚಳವಳಿಗಾರರ ಕೈಗೆ ಸಿಕ್ಕಿಬಿದ್ದ. ಡಿಸೆಂಬರ್ ೨೫ನೇ ತಾರೀಖು ಸೈನಿಕ ನ್ಯಾಯಾಲದ ತೀರ್ಪಿನಂತೆ ಅವನಿಗೆ ಹಾಗು ಅವನ ಹೆಂಡತಿಗೆ ಮರಣ ದಂಡನೆಯನ್ನು ವಿಧಿಸಲಾಯಿತು. ಚೌಸೆಸ್ಕೂನ ಇಬ್ಬರು ಸಹೋದರರು ಆತ್ಮಹತ್ಯೆಗೆ ಶರಣಾದರು.
ಚೌಸೆಸ್ಕೂ ಕುಟುಂಬವು ಸುಮಾರು ೪೦ ಕೋಟಿ ಡಾಲರ್ ಬೆಲೆಬಾಳುವ ಬಂಗಾರವನ್ನು ಸ್ವಿಸ್ ಬ್ಯಾಂಕಿನಲ್ಲಿ ಬಚ್ಚಿಟ್ಟಿರುವ ಸುದ್ದಿಯನ್ನು ಸ್ವಿಟ್ಜರ್ಲೆಂಡಿನ ಪತ್ರಿಕೆಯೊಂದು ಪ್ರಕಟಿಸಿತು. ಡಿಸೆಂಬರ್ ತಿಂಗಳಿನಲ್ಲಿ ಚೌಸೆಸ್ಕೂ ವಿರುದ್ಧ ನಡೆದ ಹೋರಾಟದಲ್ಲಿ ೬೦,೦೦೦ ಮಂದಿ ಜೀವ ಕಳೆದುಕೊಂಡರೆಂದು ರುಮೇನಿಯಾದ ಹೊಸ ಪ್ರಭುತ್ವವು ಪ್ರಕಟಿಸಿದೆ.
ಕಮ್ಯೂನಿಷ್ಟ್ ನರಕದಲ್ಲಿ ಒದ್ದಾಡುತ್ತಿದ್ದ ತಮ್ಮ ಪ್ರಜೆಗಳ ಮೇಲಿನ ನಿರ್ಬಂಧಗಳನ್ನು ಕಡಿಮೆಗೊಳಿಸಲು ಝಕಸ್ಲೋವಕಿಯಾದ ಆಡಳಿತಾರೂಢ ಕಮ್ಯೂನಿಷ್ಟ್ ಸರ್ಕಾರವು ಪ್ರಯತ್ನಿಸಿತು. ಇದರ ಫಲವಾಗಿ, ೧೯೬೮ರ ಆಗಷ್ಟ್ ತಿಂಗಳಿನಲ್ಲಿ ಝಕಸ್ಲೋವಕಿಯಾದ ಮೇಲೆ ಕಮ್ಯೂನಿಷ್ಟ್ ಕೂಟದ ಮಿತ್ರ ದೇಶಗಳು ದಾಳಿ ಮಾಡಿದವು. ಆ ಮಿತ್ರ ದೇಶಗಳು ವಾರ್ಸಾ ನಿಬಂಧನೆಗಳಿಗೆ ಒಳಪಟ್ಟ ಕಮ್ಯೂನಿಷ್ಟ್ ದೇಶಗಳಾದ ಸೋವಿಯತ್ ರಷ್ಯಾ, ಪೋಲೆಂಡ್, ಹಂಗೇರಿ, ಬಲ್ಗೇರಿಯಾ ಮತ್ತು ಪೂರ್ವ ಜರ್ಮನಿಯ ಸೈನಿಕ ದಳಗಳು. ಈ ಸೈನಿಕರ ಮಿಲಿಟರಿ ಟ್ಯಾಂಕುಗಳು ಝಕಸ್ಲೋವಕಿಯಾದೊಳಕ್ಕೆ ನುಗ್ಗಿ ಬಂದವು. ಈ ಮಿತ್ರ ದೇಶಗಳ ಕ್ರೂರತನದಿಂದಾಗಿ ಸುಮಾರು ೪೦,೦೦೦ ಮಂದಿ ಝೆಕ್ ಪ್ರಜೆಗಳು ತಮ್ಮ ದೇಶಬಿಟ್ಟು ಹೊರಟು ಹೋದರು. ಸ್ಥಳೀಯ ಕಮ್ಯೂನಿಷ್ಟ್ ಸರ್ಕಾರವನ್ನು ತೊಲಗಿಸಿ ರಷ್ಯಾಕ್ಕೆ ನಿಷ್ಠರಾಗಿದ್ದ ಕಮ್ಯೂನಿಷ್ಟರನ್ನು ಗದ್ದುಗೆಯ ಮೇಲೆ ಕೂರಿಸಲಾಯಿತು. ನಿಜವಾದ ಕಮ್ಯೂನಿಸಂ ಎಂದರೆ ಇದೇ! ಇದನ್ನು ದುರಾಕ್ರಮಣವೆನ್ನಬಾರದೆಂದು ಭಾರತೀಯ ಕಮ್ಯೂನಿಷ್ಟರನೇಕರು ಸಿದ್ಧಾಂತೀಕರಿಸಿದ್ದಾರೆ. ಏತಕ್ಕಾಗಿ ಎಂದು ಕೇಳಿದರೆ ಹಾಗೆ ಪ್ರಶ್ನಿಸುವವರು ಬಂಡವಾಳಶಾಹಿಗಳ ಗುಲಾಮರು ಎಂದು ಅಪಪ್ರಚಾರ ಮಾಡುತ್ತಾರೆ.
೧೯೬೮ರಿಂದ ಮೊದಲಾದ ಹೋರಾಟವು ೧೯೮೯ರಲ್ಲಿ ವಿಜಯವಂತವಾಯಿತು. ೧೯೭೦ರಿಂದ ಸೋವಿಯತ್ ರಷ್ಯಾವನ್ನು ಅತ್ಯಂತ ನಿಷ್ಠೆಯಿಂದ ಸೇವಿಸುತ್ತಾ ಬಂದಿದ್ದ ನಸ್ತಾವ್ ಹೂಸೆಕ್ ಡಿಸೆಂಬರ್ ೧೦ನೇ ತಾರೀಖು ಝೆಕಸ್ಲೋವಕಿಯಾದ ಅಧ್ಯಕ್ಷ ಪದವಿಗೆ ರಾಜೀನಾಮೆ ಕೊಟ್ಟ. ೨೯ನೇ ತಾರೀಖಿನಂದು ಕಮ್ಯೂನಿಷ್ಟೇತರ ನಾಯಕರಾದ ವಾಕ್ಲೋವ್ ಹೋವೆಲ್ ಅಧ್ಯಕ್ಷರಾಗಿ ಚುನಾಯಿತರಾದರು. ೧೯೬೮ರಲ್ಲಿ ಸಂಸ್ಕರಣ ಚಳವಳಿಯ ನಾಯಕತ್ವವನ್ನು ವಹಿಸಿದ್ದ ಹೋವೆಲ್ ೨೧ ವರ್ಷಗಳ ದೀರ್ಘಕಾಲ ರಾಜಕೀಯ ಅಜ್ಞಾತವಾಸವನ್ನು ನಡೆಸಿದರು. ಡಿಸೆಂಬರಿನಲ್ಲಿಯೇ ಝೆಕ್ ಪ್ರಜೆಗಳು ಮುಕ್ತವಾಗಿ ವಿದೇಶಗಳಿಗೆ ಹೋಗುವ ಹಕ್ಕನ್ನು ಪಡೆದುಕೊಂಡರು. ಪೂರ್ವ ಐರೋಪ್ಯ ರಾಷ್ಟ್ರಗಳಲ್ಲಿ ವಿಧಿಸಲಾಗಿದ್ದ ಪ್ರಯಾಣ ನಿಬಂಧನೆಗಳು ಸಡಿಲಗೊಂಡವು. ಉಕ್ಕಿನ ಪಂಜರದ ಬಾಗಿಲುಗಳು ತೆರೆದುಕೊಂಡಿವೆ. ಕಮ್ಯೂನಿಷ್ಟ್ ಶಾಸನ ಸಭೆಯ ಸದಸ್ಯರಲ್ಲಿ ಒಂದು ನೂರು ಜನರು ರಾಜೀನಾಮೆ ಮಾಡುವರೆಂದೂ ಮತ್ತು ಆ ಸ್ಥಾನಗಳನ್ನು ಕಮ್ಯೂನಿಷ್ಟೇತರ ಪಕ್ಷದ ಅಭ್ಯರ್ಥಿಗಳಿಗೆ ಹಸ್ತಾಂತರಿಸಲಾಗುವುದೆಂದು ೧೯೯೦ ಜನವರಿ ೧೩ರಂದು ಝೆಕ್ ಕಮ್ಯೂನಿಷ್ಟ್ ಪಕ್ಷವು ಪ್ರಕಟಿಸಿತು. ಈ ಕ್ರಿಯೆಯಿಂದಾಗಿ ಕಮ್ಯೂನಿಷ್ಟ್ ಪಕ್ಷವು ತಾನೆ ಸ್ವಯಂ ಆಗಿ ಝೆಕಸ್ಲೋವಕಿಯಾದ ಸದನದಲ್ಲಿ ತನ್ನ ಬಹುಮತವನ್ನು ಕಡಿತಗೊಳಿಸಿಕೊಳ್ಳುತ್ತಿದೆ. ಪ್ರಜಾಪ್ರಭುತ್ವದೆಡೆಗೆ ಇದೊಂದು ಮಹತ್ವದ ಹೆಜ್ಜೆಯಾಗಲಿದೆ. ಪೂರ್ವ ಯೂರೋಪನ್ನು ಆಪೋಶನ ತೆಗೆದುಕೊಳ್ಳಲಿರುವ ಕಮ್ಯೂನಿಷ್ಟ್ ವ್ಯತಿರೇಕದ ಋತು ಪವನಗಳಿಗೆ ತಲೆಬಾಗಿ ಝೆಕ್ ಕಮ್ಯೂನಿಷ್ಟ್ ಪಕ್ಷವು ಈ ನಿರ್ಣಯವನ್ನು ಕೈಗೊಂಡಿದೆ.
೧೯೯೦ರ ಜನವರಿ ೧೬ನೇ ತಾರೀಖಿನಂದು ಬಲ್ಗೇರಿಯಾದಲ್ಲಿ ಏಕಪಕ್ಷದ ಆಡಳಿತವನ್ನು ರದ್ದುಗೊಳಿಸುತ್ತಿರುವಾಗಿ ಬಲ್ಗೇರಿಯಾದ ಶಾಸನ ಸಭೆಯು ತೀರ್ಮಾನಿಸಿದೆ. ೩೫ ವರ್ಷಗಳಷ್ಟು ದೀರ್ಘಕಾಲ ಬಲ್ಗೇರಿಯಾ ಕಮ್ಯೂನಿಷ್ಟ್ ಪಕ್ಷದ ನಾಯಕತ್ವವನ್ನು ವಹಿಸಿದ್ದ ತೋಡರ್ ಝವ್ಕೋವ್ ೧೯೮೯ ನವಂಬರ್, ೧೦ನೇ ತಾರೀಖು ತನ್ನ ಪದವಿಯಿಂದ ನಿರ್ಗಮಿಸಿದ್ದಾನೆ. ಪ್ರಜಾಪ್ರಭುತ್ವ ಪರ ಉದ್ಯಮವು ತೀವ್ರಗೊಂಡು ಸೋಫಿಯಾ ನಗರದಲ್ಲಿ ಸಾವಿರಾರು ಮಂದಿ ಚಳವಳಿಗಾರರು ಪ್ರತಿಭಟನೆಗಳನ್ನು ಕೈಗೊಂಡದ್ದರಿಂದ ಝವ್ಕೋವ್ ತಮ್ಮ ಪದವಿಗೆ ರಾಜೀನಾಮೆ ನೀಡುವುದು ಅನಿವಾರ್ಯವಾಯಿತು.
ಪೂರ್ವ ಯೂರೋಪಿನ ಅರು ದೇಶಗಳಾದ ಬಲ್ಗೇರಿಯಾ, ಝಕಸ್ಲೋವಕಿಯಾ, ಪೂರ್ವ ಜರ್ಮನಿ, ಹಂಗೇರಿ, ಪೋಲೆಂಡ್ ಮತ್ತು ರುಮೇನಿಯಾ, ಕಮ್ಯೂನಿಸಮ್ಮನ್ನು ವಿಸರ್ಜಿಸಿದರು. ಆ ದೇಶಗಳಿಂದು ಪ್ರಜಾತಂತ್ರದ ಧಾರೆಗಳಲ್ಲಿ ಜಳಕವಾಡುತ್ತಿವೆ. ಯುಗಸ್ಲೋವಿಯಾದಲ್ಲಿಯೂ ಸಹ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಊರ್ಜಿತಗೊಳಿಸಲು ರಂಗವು ಸಿದ್ಧವಾಗುತ್ತಿದೆ. ಇದರಿಂದ ಎರಡನೇ ಪ್ರಪಂಚ ಯುದ್ಧದ ನಂತರ ಕಮ್ಯೂನಿಷ್ಟ್ ನಿರಂಕುಶತ್ವವು ಅಂತ್ಯವಾಗಿದೆ. ಆಲ್ಬೇನಿಯಾದಲ್ಲಾದರೂ ಅದು ಇನ್ನೆಷ್ಟು ದಿನ ಬಾಳಬಲ್ಲದು? ಸೋವಿಯತ್ ರಷ್ಯಾವೂ ಸಹ ಪ್ರಜಾತಂತ್ರವನ್ನು ಅಪ್ಪಿಕೊಳ್ಳದೆ ಅನ್ಯ ಮಾರ್ಗವಿಲ್ಲ. ಕ್ಯೂಬಾ, ದಕ್ಷಿಣ ಕೊರಿಯಾ, ವಿಯತ್ನಾಂಗಳಲ್ಲಿ ಕಮ್ಯೂನಿಷ್ಟ್ ಪ್ರಭುತ್ವಗಳು ಇನ್ನೂ ಉಳಿದುಕೊಂಡಿವೆ, ಭಸ್ಮಾಸುರನ ಅವಶೇಷಗಳಂತೆ! ಕಾಂಬೋಡಿಯಾ, ಲಾವೋಸ್ ಸಂಗತಿ ಹೇಳುವುದೇ ಬೇಕಾಗಿಲ್ಲ. ಚೀನಾ ದೇಶವು ನಿರಂಕುಶ ಪರಿಪಾಲನೆಯನ್ನು ಉಳಿಸಿಕೊಂಡು ಮಾರ್ಕ್ಸಿಷ್ಟ್ ಆರ್ಥಿಕ ವಿಧಾನಗಳನ್ನು ಮಾತ್ರ ಕೈಬಿಟ್ಟಿದೆ.
ಇದು ಕಾರ್ಮಿಕರ ವಿಜಯ:
ಯೂರೋಪಿನಲ್ಲಿ ಕಮ್ಯೂನಿಷ್ಟ್ ಸಿದ್ಧಾಂತಕ್ಕೆ ತಗುಲಿದ ಮೊದಲ ಬಾಣ ಹೂಡಲ್ಪಟ್ಟದ್ದು ಕಾರ್ಮಿಕರಿಂದಲೇ. ಸುಮಾರು ಹತ್ತು ವರ್ಷಗಳ ಹಿಂದೆ (೧೯೮೦ರಲ್ಲಿ) ಪೋಲೆಂಡ್ ದೇಶದಲ್ಲಿ ಕಾರ್ಮಿಕರು ಪ್ರತಿಭಟನೆಯನ್ನು ಆರಂಭಿಸಿದರು.
ಕಮ್ಯೂನಿಷ್ಟ್ ದೇಶದ ಆಡಳಿತಗಾರರೆಲ್ಲರೂ ಮತ, ಧರ್ಮ, ದೇವರುಗಳನ್ನು ಗುಡಿಸಿ ಗುಂಡಾರ ಮಾಡಲು ಹಿರಣ್ಯಕಶಪುವಿನ ಪ್ರಯತ್ನಗಳನ್ನು ಮಾಡಿದರು. ಪತ್ರಿಕೆಗಳು, ರೇಡಿಯೋಗಳು, ದೂರವಾಹಿನಿ ಮೊದಲಾದ ಸಮೂಹ ಮಾಧ್ಯಮಗಳು ಅಲ್ಲಿನ ಸರ್ಕಾರಗಳನ್ನು ಹೊಗಳುವುದರ ಹೊರತು ಮತ್ತೇನನ್ನೂ ಮಾಡಲಿಲ್ಲ. ಧಾರ್ಮಿಕ ಗ್ರಂಥಗಳನ್ನು ನಿಷೇಧಿಸಲಾಯಿತು. ದಶಕಗಳ ಕಾಲ ಈ ದಮನಕಾಂಡ ಮುಂದುವರೆಯಿತು. ಆದರೇನು ಮತ, ಧರ್ಮಗಳು ಸಾಯಲಿಲ್ಲ. ದೈವ ಭಕ್ತಿ ಮೊದಲಾದ ಧಾರ್ಮಿಕ ಭಾವನೆಗಳ ಹುಟ್ಟಡಗಲಿಲ್ಲ, ಆದರೆ ಹೇಳ ಹೆಸರಿಲ್ಲದಂತಾದದ್ದು ಕಮ್ಯೂನಿಸಂ ಮಾತ್ರ.
ಪೋಲೆಂಡಿನಲ್ಲಿ ಕೆಲವು ವಸ್ತುಗಳ ಬೆಲೆ ೮೦೦% (ಶೇಖಡಾ ಎಂಟುನೂರರಷ್ಟು) ಏರಿಕೆ ಕಂಡವು. ಇಂತಹ ದಾಖಲೆ ಬೇರೆ ಯಾವ ವ್ಯವಸ್ಥೆಯಲ್ಲೂ ಇಲ್ಲ. ನಿರುದ್ಯೋಗ, ಹರತಾಳಗಳು, ಚಳವಳಿಗಳು, ಜಾಥಾಗಳು, ಬೆಲೆ ಏರಿಕೆ, ರಾಜಕೀಯ ಹತ್ಯೆಗಳು, ದರೋಡೆಗಳು, ವ್ಯಭಿಚಾರ ಮೊದಲಾದವುಗಳು ಪ್ರಜಾತಂತ್ರ ವ್ಯವಸ್ಥೆಯ ಲಕ್ಷಣಗಳು ಎಂದು ಕಮ್ಯೂನಿಷ್ಟರು ಬೊಬ್ಬೆ ಹೊಡೆಯುತ್ತಾರೆ. ಯಾವುದೇ ಸಣ್ಣ ಪುಟ್ಟ ವಿಷಯವೊಂದನ್ನು ಪ್ರಸ್ತಾಪಿಸಿದರೂ ಸಹ ವ್ಯವಸ್ಥೆ ಬದಲಾಗಬೇಕು ಎಂದು ಬಾಯಿ ಬಾಯಿ ಬಡಿದುಕೊಳ್ಳುತ್ತಾರೆ. ಹಾಗಾದರೆ ವ್ಯವಸ್ಥೆಗಳನ್ನು ಮಾರ್ಪಡಿಸಿಕೊಂಡ ದೇಶಗಳಲ್ಲಿ ನಲ್ವತ್ತು-ಐವತ್ತು ವರ್ಷಗಳ ಕಾಲದಿಂದಲೂ ಕಮ್ಯೂನಿಷ್ಟ್ ಆಡಳಿತವಿರುವಲ್ಲಿಯೂ ಸಹ ಇವೆಲ್ಲಾ ಇವೆ; ಕೇವಲ ಇರುವುದಷ್ಟೇ ಅಲ್ಲ ಬಹಳ ಹೆಚ್ಚಾಗಿಯೇ ಇವೆ. ಆದ್ದರಿಂದ ಆ ಪಕ್ಷದ ನಾಯಕರು ಹಾಗು ಪ್ರಜೆಗಳು ಕಮ್ಯೂನಿಷ್ಟ್ ವ್ಯವಸ್ಥೆ ಬೇಡವೆಂದು ಅದನ್ನು ತಿರಸ್ಕರಿಸಿದ್ದಾರೆ. ಯೂರೋಪಿನ ಏಳು ದೇಶಗಳು ಹೀಗೆ ಕಮ್ಯೂನಿಷ್ಟ್ ಸಿದ್ಧಾಂತವನ್ನು ತಿರಸ್ಕರಿಸಿವೆ. ಅನತಿ ಕಾಲದಲ್ಲೇ ರಷ್ಯಾವೂ ಈ ಹಾದಿಯಲ್ಲಿ ಸಾಗಲಿದೆ ಆಮೇಲೆ ಚೀನಾವೂ ಸಹ! ಹಾಗಾದರೆ ಜನರಿಗೆ ಅನ್ನ, ವಸ್ತ್ರ, ವಸತಿಗಳನ್ನು ಕಲ್ಪಿಸುವಲ್ಲಿ ಕಮ್ಯೂನಿಷ್ಟ್ ಸಿದ್ಧಾಂತ ವಿಫಲವಾದಂತಲ್ಲವೇ? ಪ್ರಜಾಪ್ರಭುತ್ವ ದೇಶಗಳೊಳಗಿರುವ ಕಮ್ಯೂನಿಷ್ಟರು ಅದರಲ್ಲೂ ವಿಶೇಷವಾಗಿ ಭಾರತದ ಕಾಮ್ರೇಡುಗಳು ಇನ್ನೂ ಏತಕ್ಕಾಗಿ ಈ ಸಿದ್ಧಾಂತಗಳಿಗೆ ಜೋತುಬಿದ್ದಿದ್ದಾರೋ ಅರ್ಥವಾಗದು! ನಕ್ಸಲರು ಇನ್ನೂ ಹತ್ಯೆಗಳನ್ನು ಏಕೆ ಮಾಡುತ್ತಿದ್ದಾರೋ ಅರ್ಥವಾಗುತ್ತಿಲ್ಲ! ಜೀವ ಕಳೆದುಕೊಂಡಿರುವ ಕಮ್ಯೂನಿಷ್ಟ್ ಕಳೇಬರವನ್ನು ಮಣ್ಣು ಮಾಡದೆ ಅಥವಾ ಸುಟ್ಟು ಹಾಕದೆ ಇನ್ನೂ ಏತಕ್ಕಾಗಿ ಮುಚ್ಚಿಡುತ್ತಿದ್ದಾರೋ? ನಾಲ್ಕು ದಶಕಗಳ ಕಾಲ ನಿರಂಕುಶ, ಕ್ರೂರ ಸರ್ಕಾರಗಳನ್ನು ನಡೆಸಿದ ಪೂರ್ವ ಯೂರೋಪಿನ ಕಮ್ಯೂನಿಷ್ಟ್ ಪಾರ್ಟಿಗಳು ತಮ್ಮ ಹೆಸರುಗಳನ್ನು ಬದಲಾಯಿಸಿಕೊಂಡಿವೆ ತಮ್ಮ ಸಿದ್ಧಾಂತಗಳನ್ನು ಬದಲಾಯಿಸಿಕೊಂಡಿವೆ. ಜನ ಹಿಟ್ಲರ್ನನ್ನು ಅಸಹ್ಯಿಸಿಕೊಂಡಂತೆ ಕಮ್ಯೂನಿಷ್ಟ್ ಪ್ರಭುತ್ವಗಳನ್ನೂ ಸಹ ಅಸಹ್ಯಿಸಿಕೊಳ್ಳುತ್ತಿದ್ದಾರೆ. ರುಮೇನಿಯಾದಲ್ಲಿ ಸಾವಿರಾರು ಕಮ್ಯೂನಿಷ್ಟ್ ಪಕ್ಷದ ಸದಸ್ಯರು ತಮ್ಮ ಗುರುತಿನ ಚೀಟಿಗಳನ್ನು ಸುಟ್ಟು ಹಾಕಿದ್ದಾರೆ. ಮಾಜಿ ಕಮ್ಯೂನಿಷ್ಟರೆಂದು ಹೇಳಿಕೊಳ್ಳುವುದೂ ಸಹ ಅವರಿಗೆ ಜಿಗುಪ್ಸೆಯುಂಟು ಮಾಡುತ್ತಿದೆ. ಹೀಗಿರುವಾಗ ಕಮ್ಯೂನಿಷ್ಟ್ ಸಿದ್ಧಾಂತವು ಪ್ರಜಾಪ್ರಭುತ್ವ ವಿರೋಧಿ ಎಂದೂ ಅದು ಪ್ರಜಾಕಂಟಕವೆಂದೂ ನಂಬೂದ್ರಿಪಾಡ್ ಏಕೆ ಒಪ್ಪಿಕೊಳ್ಳುತ್ತಿಲ್ಲ? ಕಮ್ಯೂನಿಸಂ ಎಂದರೇನೆ ದಾರುಣವಾದ ಮಾರಣಕಾಂಡ ಎಂದು ಚಂಡ್ರ ಅವರು ಏಕೆ ಒಪ್ಪಿಕೊಳ್ಳುತ್ತಿಲ್ಲ? ಕಮ್ಯೂನಿಸಂ ಕ್ರಾಂತಿಗೆ ಪ್ರತಿಗಾಮಿ ಎಂದು ವಿರಸಂ* (ವಿಪ್ಲವ ರಚಿಯಿತುಲ ಸಂಘಂ), ಅರಸಂ (ಅಭ್ಯುದಯ ರಚಿಯಿತುಲ ಸಂಘ)ನವರು ಏಕೆ ಒಪ್ಪಿಕೊಳ್ಳುತ್ತಿಲ್ಲ? [*ಈ ವಿರಸಂನ ಸ್ಥಾಪಕ ಸದಸ್ಯರಲ್ಲೊಬ್ಬರು ಇತ್ತೀಚೆಗೆ ಬಂಧನಕ್ಕೊಳಗಾಗಿ ಗೃಹಬಂಧನದಲ್ಲಿರುವ ಅರ್ಬನ್ ನಕ್ಸಲೈಟ್ ಎಂದು ಕುಖ್ಯಾತರಾಗಿರುವ ಶ್ರೀಯುತ ವರವರ ರಾವ್]. ಕಮ್ಯೂನಿಸಂ ಅಭ್ಯುದಯವನ್ನು ಹತ್ತಿಕ್ಕಿದೆಯೆಂದೂ, ಕಮ್ಯೂನಿಸಂ ಪೂರ್ಣ ಪ್ರಮಾಣದಲ್ಲಿ ರಾಕ್ಷಸತ್ವವನ್ನೇ ಮೈಗೂಡಿಸಿಕೊಂಡಿದೆ ಎಂದೂ ಭಾರತೀಯ ಕಮ್ಯೂನಿಷ್ಟರು ಹಾಗೂ ಕಮ್ಯೂನಿಷ್ಟ್ ಸಿದ್ಧಾಂತದಿಂದ ಪ್ರೇರಣೆಗೊಂಡಿರುವ ಪಂಗಡಗಳು, ಗುಂಪುಗಳು, ಸಂಸ್ಥೆಗಳೂ ಏತಕ್ಕಾಗಿ ಒಪ್ಪಿಕೊಳ್ಳುತ್ತಿಲ್ಲ? ನಾವು ಅವನ್ನು ಕಿತ್ತೊಗೆಯುತ್ತಿದ್ದೇವೆಂದು ಹೇಳುವುದಕ್ಕೆ ಅವರಿಗೆ ಆತ್ಮಸ್ಥೈರ್ಯ ಏತಕ್ಕಾಗಿ ಉಂಟಾಗುತ್ತಿಲ್ಲ? ಮೇಕೆ ಎಂದು ಭಾವಿಸಿದ್ದ ಪ್ರಾಣಿ ತೋಳವೆಂದು ಸಾಬೀತಾಗಿದೆ. ಇನ್ನೂ ಎಷ್ಟು ದಿನ ಈ ಕಮ್ಯೂನಿಷ್ಟರು ಆಟವಾಡಲಿದ್ದಾರೆ?
ಅನ್ನಾರ್ಥಿಗಳ ಮನೆಮುಂದೆ
ಬೆಳದಿಂಗಳ ವೃಕ್ಷಗಳು ಬೆಳೆದು
ಅಭ್ಯುದಯದಮೃತ ಫಲಗಳನು
ನೀಡುವುದು ಎಂದಿಗೋ?
ಜನಮಾನಸ ಕ್ಷೇತ್ರದ ಮೇಲೆ
ಮಾನವತಾ ಸುಧೆ ಮಳೆಗರೆವುದು
ಭ್ರಾತೃಭಾವ ವಾಹಿನಿಗಳು
ಪಲಾಯನಗೈದಾದ ಮೇಲೆಯೇ!
-ಮುಗಿಯಿತು-
ವಿ.ಸೂ.: ಇದು ೧೯೯೦ರಲ್ಲಿ ಮೂಲತಃ ತೆಲುಗಿನಲ್ಲಿ ಪ್ರಕಟಗೊಂಡ ಸುಡುಗಾಡು ಸೇರುತ್ತಿರುವ ಸಮತಾವಾದ - ಕಾಟಿಕಿ ಪೋತುನ್ನ ಕಮ್ಯೂನಿಜಂ, ಲೇಖಕರು - ಶ್ರೀಯುತ ತಂಗೇಡುಕುಂಟ ಹೆಬ್ಬಾರ್ ನಾಗೇಶ್ವರ್ ರಾವ್ ಅವರ ಕೃತಿಯ ಕನ್ನಡ ಅನುವಾದ. ಇಪ್ಪತ್ತೇಳು - ಇಪ್ಪತ್ತೆಂಟು ವರ್ಷಗಳ ಹಿಂದೆಯೇ ಪಾಶ್ಚಿಮಾತ್ಯ ದೇಶಗಳಲ್ಲಿನ ಕಮ್ಯೂನಿಸಂನ ನಿಜವಾದ ಮುಖವೇನು, ಕಮ್ಯೂನಿಸಂನ ಸಿದ್ಧಾಂತ ಎಲ್ಲಿ ಎಡವಿತು ಮತ್ತು ಕಮ್ಯೂನಿಷ್ಟ್ ಪ್ರಭುತ್ವಗಳು ಮಾಡಿದ ಮಾರಣ ಹೋಮ, ಅಲ್ಪಸಂಖ್ಯಾತರ ಮೇಲಿನ ದಬ್ಬಾಳಿಕೆ, ವಿಫಲವಾದ ಕಮ್ಯೂನಿಷ್ಟರ ಆರ್ಥಿಕ ನೀತಿ, ನಿರಂಕುಶ ಆಡಳಿತ, ಮೊದಲಾದ ವಿಷಯಗಳ ಸಮಗ್ರ ಚಿತ್ರಣವನ್ನು ಆ ಕಿರುಹೊತ್ತಗೆ ಸಫಲವಾಗಿ ಹಿಡಿದುಕೊಟ್ಟಿದೆ.
ಹಿಂದಿನ ಲೇಖನ ಭಾಗ - ೯: ಕೊನೆಯುಸಿರೆಳೆಯುತ್ತಿರುವ ಕಮ್ಯೂನಿಸಂ ಓದಲು ಈ ಕೊಂಡಿಯನ್ನು ನೋಡಿ https://sampada.net/blog/%E0%B2%AD%E0%B2%BE%E0%B2%97-%E0%B3%AF-%E0%B2%95...
Comments
ಉ: ಭಾಗ - ೧೦: ಕೊನೆಯುಸಿರೆಳೆಯುತ್ತಿರುವ ಕಮ್ಯೂನಿಸಂ!
ಈ ಸರಣಿಯನ್ನು ಓದಿ ಪ್ರೋತ್ಸಾಹಿಸಿದ ಸಂಪದ ಬಳಗದ ವಾಚಕರಿಗೆ ಹಾಗೂ ಮೊಗಹೊತ್ತಗೆಯ (ಫೇಸ್ ಬುಕ್) ಬಳಗದ ಗೆಳೆಯರೆಲ್ಲರಿಗೂ ನನ್ನ ಅನಂತಾನಂತ ಧನ್ಯವಾದಗಳು. ಕಮ್ಯೂನಿಷ್ಟರ ಬೋಧನೆಗಳಿಗೂ ಅನುಷ್ಠಾನಕ್ಕೂ ಇರುವ ವ್ಯತ್ಯಾಸಗಳನ್ನು ಅರಿತುಕೊಳ್ಳಲು ಈ ಸರಣಿ ಸಹಾಯಕವಾಗಿದ್ದಲ್ಲಿ ನಾನು ಪಟ್ಟ ಶ್ರಮ ಸಾರ್ಥಕವೆಂದು ಭಾವಿಸುತ್ತೇನೆ. ಮೂಲ ಲೇಖನದ ಪುಸ್ತಕವನ್ನು ಕೊಟ್ಟು ಈ ಲೇಖನ ಮಾಲಿಕೆಯನ್ನು ಅನುವಾದಿಸಲು ಪ್ರೋತ್ಸಾಹಿಸಿ, ಸೂಕ್ತ ಸಲಹೆ ಸೂಚನೆಗಳನ್ನಿತ್ತ ಈ ಲೇಖನದ ಮೂಲ ಲೇಖಕರಾದ ಶ್ರೀಯುತ ತಂಗೇಡುಕುಂಟ ಹೆಬ್ಬಾರ್ ನಾಗೇಶ್ವರ್ ರಾವ್ ಅವರಿಗೆ ನನ್ನ ಪ್ರಣಾಮಗಳು. ಈ ಸರಣಿಯ ಹಲವಾರು ಲೇಖನಗಳನ್ನು ವಾರದ ವಿಶೇಷ ಬರಹಗಳಲ್ಲೊಂದಾಗಿ ಆಯ್ಕೆ ಮಾಡಿದ ಶ್ರೀಯುತ ನಾಡಿಗರಿಗೂ ಹಾಗೂ ಸಂಪದ ನಿರ್ವಹಣಾ ಮಂಡಳಿಯ ಸದಸ್ಯರಿಗೂ ನಾನು ಚಿರಋಣಿ. ವಂದನೆಗಳೊಂದಿಗೆ, ಗೌರಿ-ಗಣೇಶ ಹಬ್ಬದ ಮುಂಗಡ ಶುಭಾಶಯಗಳು. -^- ಶ್ರೀಧರ್ ಬಂಡ್ರಿ.