ಭಾವ

ಭಾವ

ಮೋಡಗಳು ತೇಲುವುದನ್ನು ಮರೆತಂತೆ ಧಾರಾಕಾರವಾಗಿ ಸುರೀತಿತ್ತು .ರಸ್ತೆಯಲ್ಲಿ ಸಂಚರಿಸುವ ವಾಹನಗಳು ತಮಗರಿವಿಲ್ಲದಂತೆ ಕೆಸರ್ನೀರ ಕಡೆಗೆ ಗಮನವಿರದೆ ಮುಂದೆ ಬರುವ ತಗ್ಗುಗಳ ಚಿಂತೆಯಲ್ಲಿ ಚಲಿಸುತ್ತಿದ್ದವು. ಮರದ ಕೆಳಗೆ ಎಲೆಗಳ ಮರೆಯಿಂದ ಹನಿಗಳು ಉದುರುತ್ತಿದ್ದರೂ ಹೆಲ್ಮೆಟ್ ದಾರಿಗಳ ದಂಡು ಅಲ್ಲಿ ನೆರೆದಿತ್ತು.ಇದೇ ಅವಕಾಶವೆಂಬಂತೆ ಆಟೋದವರ ಹಮ್ಮು ಬಿಮ್ಮು ಹೆಚ್ಚಾಗಿತ್ತು. ರಸ್ತೆಯಲ್ಲಿರುವ ಕೆಸರನ್ನು ತಪ್ಪಿಸುವ ಪ್ರಯತ್ನದಲ್ಲಿ ಛತ್ರಿ ಹಿಡಿದು ಅತುರದಲ್ಲಿ ಬರುತ್ತಿದ್ದೆ.

"ಬರ್ತಿಯೇನಪ್ಪ ಭಾಷಂ ಸರ್ಕಲ್ಗೆ "

ಮುಖವನ್ನು ನೋಡದೆ " ೫೦೦ ರುಪಾಯಿ ಆಗುತ್ತೆ" , ಅಂದ ಆಟೋ ಡ್ರೈವರ್.

"ಐದ್ನೂರ !?, ಇಲ್ಲೆ ಮೂರು ಕ್ರಾಸಿದೆ ಐದ್ನೂರು ಕೇಳ್ತಿಯಲಪ್ಪ "

"ಬೇಕಾದ್ರೆ ಬನ್ರಿ, ನಮ್ಗು ಇದೆ ಟೈಮು ಬೇರೆ ಟೈಮಲ್ಲಿ ಕೊಡ್ರಿ ಅಂದ್ರೆ ಕೊಡ್ತೀರಾ?" ಅಂದ

ಸುಮ್ಮನೆ ಮುಂದೆ ಹೋಗಿ ಬೇರೆ ಆಟೋದವರನ್ನ ಕೇಳೋಣ ಅಂದ್ರೆ ಅಲ್ಲೂ ಅದೇ ಹಾಡು ಅಂದುಕೊಂಡು ನಡೆದೇ ಹೊರಟೆ.

ನಿವೃತ್ತಿಯಾಗಿ ಐದು ವರ್ಷಗಳಾಗಿತ್ತು. ಬದುಕು ಬಹಳಷ್ಟು ಬವಣೆ ಕೊಟ್ಟು ಈಗ ಸುಖದ ಮೋರೆ ತೋರಿಸಿತ್ತು. ಅಷ್ಟು ದೂರ ನಡೆಯುವುದು ಕಷ್ಟ ಆದ್ರೆ ನಡಿಯದೆ ಬೇರೆ ದಾರಿಯಿಲ್ಲ. ಅಷ್ಟು ದುಡ್ಡು ಕೊಟ್ಟು ಹೋಗೋಕೆ ಆಗಲ್ಲ. ಬೆಟ್ಟ ಗುಡ್ಡ ಕಾಡು ಮೇಡೆನ್ನದೆ ಪ್ರಾಥಮಿಕ ಚಿಕಿತ್ಸಾ ಕೇಂದ್ರದಲ್ಲಿ ಸೇವೆಸಲ್ಲಿಸಿದ್ದು ಬರೋಬ್ಬರಿ ೩೫ ವರ್ಷಗಳು. ನಿವೃತ್ತಿ ಸಮಯದಲ್ಲಾದರು ಸಿಟಿ ಮೋರೆ ತೋರಿಸುತ್ತಾರೆಂದರೆ, ಅದೂ ಮಾಡ್ಲಿಲ್ಲ ನಿಮ್ಮ ಸರ್ಕಾರ. ದರಿದ್ರ ! ಅಂತ ಬೈಯ್ತಿದ್ಳು ನನ್ನ ಹೆಂಡತಿ. ಎನ್ರಿ ಕೊಟ್ಟಿದೆ ನಿಮಗೆ ಈ ಸರ್ಕಾರ? ಜನರ ಸೇವೆ ಮಾಡೋಕ ನೀವು ಡಾಕ್ಟ್ರು ಆಗಿದ್ದು. ನಿಮ್ಮ ಜೊತೆಗೆ ಓದಿದವರನ್ನ ನೋಡಿ ಬಂಗಲೆ, ಕಾರು ಮಾಡ್ಕೋಂಡು ಆರಾಮಾಗಿದಾರೆ. ಡಾಕ್ಟ್ರು ಅಂತ ನಮ್ಮ ಅಪ್ಪ ಕಣ್ಮುಚ್ಚಿ ಕಟ್ಟಿಬಿಟ್ಟ. ನಾನಲ್ವ ಅನುಭವಿಸ್ತಿರೋದು. ಯಾವುದೇ ಕಾರಣಕ್ಕೂ ನನ್ನ ಮಗಳನ್ನ ಡಾಕ್ಟ್ರಿಗೆ ಕೊಡಲ್ಲ. ಅಂತ ಹಣೆ ಚೆಚ್ಚಕೊಂಡಿದ್ಳು ನನ್ನ ಹೆಂಡ್ತಿ. ನಿಸ್ವಾರ್ಥವಾಗಿ ಸೇವೆಸಲ್ಲಿಸಿದ್ದಕ್ಕೆ ಸರ್ಕಾರ ನನಗೇನು ಕೊಟ್ಟಿರಲಿಲ್ಲ ಅಂತ ಅವಳ ಅನಿಸಿಕೆ. ಸುದೀರ್ಘ ಸೇವೆಯಲ್ಲಿ ಮತ್ತು ಈಗಿನ ಜೀವನಕ್ಕೆ ತಿಂಗಳ ಕೊನೆ ದಿನ ಎಣಿಸುತ್ತಿದ್ದ ಸಂಬಳದ ಅರಿವಿಲ್ಲದೆ ಮಾತನಾಡುತ್ತಿದ್ದಳು ಆಕೆ. ಹಣದ ವ್ಯಾಮೋಹ ಇದ್ದಿದ್ದರೆ ನಾನು ಇವತ್ತು ಡಾ.ಶ್ಯಾಮಸುಂದರ್ ತರ ಆಗ್ತಿದ್ದೆ. ಆತ ನನಗಿಂತ ಸೀನಿಯರ್ ಆದ್ರೂ ನಾನು ಡಾಕ್ಟ್ರು ಆದಮೇಲೆ ಆತನಾಗಿದ್ದು. ಆತನದು ವಿರಾಟ ಕಲಿಕೆ. ಹೀಗೆ ಹಳೆಯ ನೆನಪೆಲ್ಲ ತಂದಿತ್ತು ಈ ಮಳೆ. 

ಅದಾಗಲೇ ಕ್ಲಿನಿಕ್ ತೆರೆಯಲು ೧ ಗಂಟೆ ಲೇಟಾಗಿತ್ತು. ನಡೆದು ಬರಲು ಸ್ವಲ್ಪ ಕಷ್ಟ. ಆಗಲೇ ಕ್ಲಿನಿಕ್ ಹತ್ತಿರ ಆತುರದಿಂದ ಒಬ್ಬ ಹೆಣ್ಣುಮಗಳು ಕಾಯ್ತಿದ್ಳು. "ಯಾಕೆ ಡಾಕ್ಟ್ರೇ ಇವತ್ತು ಇಷ್ಟು ಲೇಟು. ಮಗಿ ಮಾಡಿ ಮ್ಯಾಗಿಂದ ಬಿದ್ದೈತಿ. ಶಾನೆ ಗಾಯ ಆಗೈತೆ, ನೋಡಾಕೆ ಆಗ್ತಿಲ್ಲ ಸಾರ್". ಒಂದೇ ಉಸ್ರಿಗೆ ಅಳ್ತಾ ಹೇಳಿದ್ಳು. ಏನೂ ಮಾತಾಡದೆ, ಕ್ಲಿನಿಕ್ ತೆಗೆದು ಆ ಮಗುವಿನ ಗಾಯ ಕ್ಲೀನ್ ಮಾಡಿ ಅದಕ್ಕೆ ಬ್ಯಾಂಡೇಜ್ ಹಾಕಿದೆ. ಒಂದು ಇಂಜೆಕ್ಷನ್ ಕೊಟ್ಟೆ. ಸ್ವಲ್ಪ ಸುಧಾರಿಸಿತು ಮಗು, ನಿರಾಳವಾಗಿ ಉಸಿರಾಡಿದ್ಳು ತಾಯಿ. 

ಈಗ್ಗೆ ಸರಿಸುಮಾರು ೫೦ ವರ್ಷಗಳ ಹಿಂದಿನ ನೆನಪು ಕಾಡಿತು. ಅಂದು ಹೀಗೆ ಮುಂಗಾರಿನ ಮಲೆನಾಡ ಮಳೆ, ಮನೆಯ ಚಪ್ಪರ ಜಾರಿ ನನ್ನ ತಂಗಿಯ ತಲೆಗೆ ಬಡಿದು ವಿಪರೀತ ಗಾಯವಾಗಿ ರಕ್ತಸ್ರಾವ ಆಗ್ತಾಯಿತ್ತು. ಮನೆ ಮದ್ದೆಲ್ಲ ಸೋತು ಹೋಗಿದ್ದವು. ಹತ್ತಿರದಲ್ಲಿ ಇದ್ದ ಪ್ರಾಥಮಿಕ ಚಿಕಿತ್ಸಾ ಕೇಂದ್ರಕ್ಕೆ ದೌಡಾಯಿಸಿದರೂ, ಅಲ್ಲಿ ಡಾಕ್ಟ್ರು ಇರಲಿಲ್ಲ. ಧಾರಕಾವಾದ ಮಳೆಯಲ್ಲಿ, ರಕ್ತದೊಡನೆ ನನ್ನ ತಂಗಿಯ ಪ್ರಾಣ ತೇಲಿಹೋಯಿತು. ಅಂದೆ ನಿರ್ಧರಿಸಿದ್ದೆ.  ಉದ್ಯೋಗದ ಅಷ್ಟೂಕಾಲ ಪ್ರಾಥಮಿಕ ಚಿಕಿತ್ಸಾ ಕೇಂದ್ರದಲ್ಲಿರುತ್ತೇನೆ ಎಂದು ಸರ್ಕಾರಕ್ಕೆ ಒಕ್ಕಣೆ ಬರೆದುಕೊಟ್ಟಿದ್ದಲ್ಲದೇ ಸರ್ಕಾರದ ಬಡ್ತಿ ಆದೇಶಗಳನ್ನೂ ತಿರಸ್ಕರಿಸುತ್ತಿದ್ದೆ. ಇದು ಗೊತ್ತಿರದ ಬಡಪಾಯಿ ಶಾರದೆ ಗೊಣಗುತ್ತಿದ್ದಳು. 

"ಸರ್ ಎಷ್ಟು ಸರ್", ಗಂಡು ಧ್ವನಿ ಕೇಳಿತು. ಆ ಮಗುವಿನ ತಂದೆ ಬಂದಿದ್ದ. 

"ನನಗೇನು ಬೇಡಪ್ಪ, ಮೆಡಿಕಲ್ ಶಾಪಿಗೆ ೧೦ ರೂ ಕೊಡು. ಅದು ಆ ಇಂಜೆಕ್ಷನ್ದು. ಪಾಪ ಎಷ್ಟೊತ್ತು ಕಾಯ್ತು ಕಂದ.ಕ್ಲಿನಿಕ್ಗೆ ಬರೋದು ಲೇಟಾಯ್ತು ನೋಡು". ಸರಿ ಅಂತ ಹೊರಟ ಡೈವರ್.

"ನೋಡ್ರಿ ಪಾಪ ಡಾಕ್ಟ್ರೂ, ಬೇಗಬರ್ಬೇಕಂತಾನೇ ಬಂದ್ರಂತೆ. ಆದ್ರೆ ಮಳೆಯಿತ್ತಲ್ಲ, ಅದ್ಕೆ ಯಾವನೋ ಆಟೋದವ್ನು ೫೦೦ ಕೇಳಿದ್ನಂತೆ. ಬೇಗ ಬಂದಿದ್ದ್ರೆ, ಬೇಗ ನೋಡ್ತಿದ್ರು". ಅಂದ್ಳು ಹೆಂಡ್ತಿ ಮಗೂನ ಮಲಗಿಸುತ್ತ.

ಸರ್ಕಲ್ನಲ್ಲಿ ತಾನು ಹೇಳಿದ್ದು , ಇವರಿಗೇನಾ ? ಅಪರಾಧ ಮನೋಭಾವದಲ್ಲಿತ್ತು ಆ ಡ್ರೈವರ್ ಮನಸ್ಸು

 

Rating
No votes yet

Comments

Submitted by kavinagaraj Thu, 04/09/2015 - 12:26

ಈ ಘಟನೆಯಿಂದ ಆಟೋ ಚಾಲಕ ಬುದ್ಧಿ ಕಲಿಯುತ್ತಾನೆ ಎಂದು ನಿರೀಕ್ಷಿಸುವ ಸ್ಥಿತಿ ಸಹ ಈಗಿನದಲ್ಲ! ಸಾಮಾನ್ಯವಾಗಿ ಆದರ್ಶವಾದಿಗಳ ಕಟುಂಬದವರೆಲ್ಲಾ ಆದರ್ಶ ಹೊಂದಿರುತ್ತಾರೆಂದು ನಿರೀಕ್ಷಿಸುವುದೂ ಕಷ್ಟ. ಇದೇ ಎಡವಟ್ಟು!! ಇದೇ ಪ್ರಪಂಚ!!