ಭಾಷಣ ಮಾಡೋಕೇನಂತೆ!

ಭಾಷಣ ಮಾಡೋಕೇನಂತೆ!

ಚಿತ್ರ

 

ನಾರಾಯಣರಾವ್ "ಹೆತ್ತಮ್ಮನ ಕುರಿತು ಬಲು ದೊಡ್ಡ ಭಾಷಣ ಬಿಗಿದಿದ್ರು" .ಜನರೆಲ್ಲಾ ಚಪ್ಪಾಳೆ ಹಾಕಿದ್ದೇ ಹಾಕಿದ್ದು. ಭಾಷಣ ಮುಗಿಸಿ ಹೊದಿಸಿದ್ದ ಶಾಲನ್ನು ಕೈಗೆತ್ತಿಕೊಂಡು ವೇದಿಕೆಯಿಂದ ರಾವ್ ಇಳೀತಾರೆ, ನಾಲ್ಕಾರು ಜನರು ಇವರನ್ನು ಮಾತನಾಡಿಸಲು ಕಾದು ನಿಂತಿದ್ದಾರೆ.
"ತುಂಬಾ ಚೆನ್ನಾಗಿತ್ತು ಸಾರ್ ಭಾಷಣ" ಎಲ್ಲರ ಬಾಯಲ್ಲೂ ಹೊಗಳಿಕೆ ಕೇಳಿ ರಾವ್ ಆಕಾಶದಲ್ಲಿ ತೇಲಾಡುತ್ತಿದ್ದರು. ಸೆಣಕಲು ಕಡ್ದಿಯಂತಿದ್ದ ಸುಮಿತ್ರ ಮಾತ್ರ ಸುಮ್ಮನೆ ನಿಂತಿದ್ದಳು. ಎಲ್ಲರೂ ಹೊರಟರು.ರಾವ್ ಕಾರ್ ಹತ್ತಬೇಕು ಅನ್ನುವಷ್ಟರಲ್ಲಿ ಸುಮಿತ್ರ ರಾಯರ ಹತ್ತಿರ ಬಂದಳು. ಸಾರ್ ತಮ್ಮ ಕಾರಲ್ಲಿ ನನಗೆ ಸ್ವಲ್ಪ ಡ್ರಾಪ್ ಕೊಡ್ತೀರಾ? 
"ಅದಕ್ಕೇನಂತೆ, ಎಲ್ಲಮ್ಮ ನಿಮ್ಮ ಮನೆ? "
"ವಿಜಯ ನಗರದಲ್ಲಿ"
" ಓ ನಾನು ಹೇಗೂ ಅದೇ ಮಾರ್ಗದಲ್ಲಿ ಹೋಗಬೇಕು, ಅದಕ್ಕೇನಂತೆ ಕುಳಿತುಕೋ"
ಕಾರ್ ಹೊರಟಿತು. " ನಿಮ್ಮ ಮನೆ ವಿಜಯನಗರದಲ್ಲಿ ಎಲ್ಲಿ ಬರುತ್ತಮ್ಮ?"
-ಮಾರುತಿ ಬಂಡೆಯ ಹತ್ತಿರ
-ಸರಿ ಅಲ್ಲೇ ಹೇಗೂ ಹೋಗಲೇ ಬೇಕಲ್ಲಾ, ಅಲ್ಲೇ ಇಳಿಸ್ತೀನಿ

ಮಾರುತಿ ಬಂಡೆ ಹತ್ತಿರ ಕಾರ್ ನಿಂತಿತು.
- " ಇಲ್ಲೇ ಕೆಳಗಿನ ಕ್ರಾಸ್ ನಲ್ಲಿ ನಮ್ಮ ಮನೆ , ಸ್ವಲ್ಪ ಕಾಫಿ ತಗೊಂದು ಹೋಗೀ ಸಾರ್"

- " ಬೇಡಮ್ಮಾ , ಮನೆಯಲ್ಲಿ ಕಾಯ್ತಾ ಇರ್ತಾರೆ"

- " ಬೇಡ ಅನ್ನಬೇಡಿ ಸಾರ್, ಬಡವರ ಮನೆಗೆ ಕರೀತಿದೀನಿ. ನಿಮ್ಮಂತವರನ್ನು ನೋಡಿದರೆ ನಮ್ಮ ಅಜ್ಬಿಗೆ ಸಂತೋಷವಾಗುತ್ತೆ"

ಹೊಗಳಿಕೆ ರಾಯರಿಗೆ ಇಷ್ಟವಾಯ್ತು ಅಂತಾ ಕಾಣುತ್ತೆ. "ಸರಿಯಮ್ಮಾ " ರಾಯರು ಹೇಳಿದರು. ಕಾರ್ ಸುಮಿತ್ರಳ ಮನೆಯತ್ತ ಸಾಗಿತು. "ಇಲ್ಲೇ ನಿಲ್ಸೀ ಸಾರ್, ನಮ್ಮ ಮನೆ ಮುಂದೆ ಕಾರ್ ಹೋಗಲು ದಾರಿ ಇಲ್ಲ"
ಕಾರ್ ನಿಂತಿತು. ಸುಮಿತ್ರಳ ಹಿಂದೆ ರಾಯರು ಹೆಜ್ಜೆ ಹಾಕಿದರು. ಪುಟ್ಟಮನೆ, ತಲೆ ಬಗ್ಗಿಸಿ ಒಳಗೆ ರಾಯರು ಕಾಲಿಟ್ಟರು. ಸುಮಿತ್ರ ಅಡಿಗೆ ಮನೆಗೆ ಹೋಗಿ ಕಾಫಿಯನ್ನು ತಾನೇ ಮಾಡಿಕೊಂಡು ಬಂದು ಕೊಟ್ಟಳು. ಕಾಫಿ ಹೀರುತ್ತಾ ರಾಯರು ಕೇಳಿದರು.
- " ಮನೆಯಲ್ಲಿ ಯಾರ್ಯಾರು ಇದ್ದೀರಿ? 
- " ನಾನು , ನಮ್ಮ ಅಪ್ಪ"
- " ನಿಮ್ಮ ತಂದೆ ಏನ್ ಮಾಡ್ತಾರೆ?"
- " ಹೋಟೆಲ್ ಒಂದರಲ್ಲಿ ಅಡಿಗೆ ಕೆಲಸ ಮಾಡ್ತಾರೆ. ಚಿಕ್ಕ ವಯಸ್ಸಲ್ಲೇ ಅಮ್ಮ ತೀರ್ಕೊಂಡ್ರು. ನನಗೆ ಅವರೇ ಅಪ್ಪ-ಅಮ್ಮ ಎಲ್ಲಾ" ಈಗ ಕೆಲಸಕ್ಕೆ ಹೋಗಿದ್ದಾರೆ.
- " ಅಲ್ಲಿ ಯಾರೋ ಮಲಗಿದ್ದಾರಲ್ಲಾ?
- " ಪಾಪ! ಅವರದೊಂದು ಕಥೆ ಸಾರ್, ನಿಮ್ಮಂತವರು ಇಂಥವರ ಸ್ಥಿತಿ ನೋಡ್ ಬೇಕೂ ಅಂತಾಲೇ ನಿಮ್ಮನ್ನು ನಾನು ನಮ್ಮ ಮನೆಗೆ ಕರೆದೆ ಸಾರ್
-" ಏನಮ್ಮಾ, ಈಕೆಯ ಕಥೆ?"
- ಮೊನ್ನೆ ನಮ್ಮ ಅಪ್ಪನಿಗೆ ಹುಷಾರಿರಲಿಲ್ಲ, ಆಸ್ಪತ್ರೆಗೆ ಅಡ್ಮಿಟ್ ಮಾಡಿದ್ದೆ. ಜನರಲ್ ವಾರ್ಡ್ ನಲ್ಲಿ ಒಬ್ಬ ಪೇಶೆಂಟ್ ಇದ್ದರು. ಯಾರೋ ಬಂದು ಅಡ್ಮಿಟ್ ಮಾಡಿ ಹೋದವರು, ನಾಲ್ಕು ದಿನವಾದರೂ ಆಸ್ಪತ್ರೆಗೆ ಬಂದಿರಲಿಲ್ಲ. ಪಾಪ, ಅಜ್ಜಿ ಸುಸ್ತಾಗಿದ್ದರು.ಅವರ ಮನೆ ಅಡ್ರೆಸ್ ಹೇಳಲೂ ಅವರಿಗೆ ಗೊತ್ತಾಗ್ತಾ ಇಲ್ಲ. ನಾನೇನಾಲ್ಕು ದಿನ ಊಟ ತಿಂಡಿ ಕೊಟ್ಟೆ. ಸ್ವಲ್ಪ ಗುಣ ಮುಖರಾದರು. ಯಾರೂ ಅವರನ್ನು ಕರೆದುಕೊಂದು ಹೋಗಲು ಬರಲಿಲ್ಲ. ಸುಳ್ಳು ಫೋನ್ ನಂಬರ್ ಕೊಟ್ಟಿದ್ದರು. ಆ ಫೋನ್ ನಂಬರ್ ಗೆ ಕರೆಮಾಡಿದರೆ ಅದು ರಾಂಗ್ ನಂಬರ್ ಆಗಿತ್ತು. ಆ ಅಜ್ಜಿಯ ಸ್ಥಿತಿ ನೋಡಲಾರದೆ ನಮ್ಮಪ್ಪ ಹೇಳಿದ್ರು " ನಮ್ಮ ಮನೆಗೆ ಕರೆದುಕೊಂಡು ಹೋಗೋಣಮ್ಮ , ಸುಧಾರಿಸಿಕೊಂಡ ಮೇಲೆ ಸರಿಯಾದ ವಿವರ ತಿಳಿದರೆ ಕಳಿಸಿಕೊಟ್ಟ ರಾಯ್ತು - ಆಸ್ಪತ್ರೆಯವರಿಗೆ ನಮ್ಮಪ್ಪನ ತುಂಬಾ ಪರಿಚಿತರು. ಕರೆದು ಕೊಂಡು ಬಂದೆವು.ಒಂದು ವಾರ ಆಯ್ತು. ಆ ಆಸ್ಪತ್ರೆಗೆ ವಿಚಾರಿಸಲು ಇನ್ನೂ ಯಾರೂ ಬಂದಿಲ್ಲ.

ರಾಯರ ಮುಖ ಬಿಳಿಚಿಕೊಂಡಿತ್ತು. ಸುಮಿತ್ರ ಅಜ್ಜಿಯ ಹತ್ತಿರ ಎಲ್ಲಾ ನಿಧಾನವಾಗಿ ವಿಚಾರಿಸಿಕೊಂಡು ರಾಯರ ವಿವರ ಪಡೆದಿದ್ದಳು. ಈ ಅಜ್ಜಿಯು ರಾಯರ ತಾಯಿ ಅನ್ನೋ ಸತ್ಯ ಗೊತ್ತಾಗಿಯೇ ಮನೆಗೆ ಕರೆದುಕೊಂಡು ಬಂದಿದ್ದಳು

- " ಸಾರ್ ನಿಮಗೆ ಭಾಷಣ ಮಾಡೋದಕ್ಕೆ ಮನಸ್ಸು ಹೇಗೆ ಬಂತು? ನಿಮ್ಮ ಪತ್ನಿ ಕಟುಕಳೇ? ನಿಮ್ಮ ಹೆತ್ತ ತಾಯಿಯನ್ನು ಅನಾಥ ರೋಗಿಯಂತೆ ಆಸ್ಪತ್ರೆಗೆ ಸೇರಿಸಿ ಕದ್ದು ಹೋಗಿದ್ದಾರಲ್ಲಾ? ನಿಮ್ಮಂತವರಿಗೆ ಸಮಾಜದಲ್ಲಿ ಗೌರವ ಬೇರೆ ಕೇಡು?...........ಸುಮಿತ್ರ ಗದ್ಗದಿತಳಾಗಿದ್ದಳು.

Rating
No votes yet

Comments

Submitted by venkatb83 Fri, 04/12/2013 - 17:56

ಹಿರಿಯರೇ ನಿಮ್ಮ ಈ ಬರಹ ಓದಿದ ಮೇಲೆ ನನಗೆ >>ಹೇಳುವುದು ಒಂದು ಮಾಡುವುದು ಇನ್ನೊಂದು - ಡಾ ರಾಜ್ ಅವರ ಹಾಡು ನೆನಪಿಗೆ ಬಂತು
ಹಾಗೆಯೇ >>>>ಶಾಸ್ತ್ರ ಹೇಳೋಕೆ ..... ಬ ... ತಿ ಗಾದೆ ಸಹಾ ...!!
ಇದೇನು ಕಲ್ಪಿತ ಕಥೆಯೋ ನಿಜವೋ ಗೊತ್ತಿಲ್ಲ ಆದ್ರೆ ಆ ತರಹ ಸನ್ನಿವೇಶಗಳು ಇಂದಿಗೆ ಇರೋದು ನಿಜ ಮತ್ತು ದೌರ್ಬಾಗ್ಯದ ಸಂಗತಿ
ವಿಷ್ಯ .

ವಿಜಯನಾಮ ಸಂವತ್ಸರ ಸಕಲರಿಗೂ ಮಂಗಳವನ್ನುಂಟು ಮಾಡಲಿ -ನವೋಲ್ಲಾಸ ತರಲಿ

ಶುಭವಾಗಲಿ

\।