ಭ್ರಮ ನಿರಸನ

ಭ್ರಮ ನಿರಸನ

ಜೀವ ಕೊಟ್ಟೆ ಸಮಯ ಕೊಟ್ಟೆ
ನನ್ನ್ದದಾದ ಆ ಎಲ್ಲ ಕನಸನೂ ಬಿಟ್ಟೆ
ಅ೦ಬರದ ಮೇಲೆ ಕೂರುವ ಆಸೆ ಅಷ್ಟು ಬೇಗ ತೀರದು
ಮುಳ್ಳಿನ ಏಣಿ ಹತ್ತಿ ಕುಳಿತೆ
ಅತ್ತಿತ್ತ ಕಣ್ಣಾಡಿಸಿದೆ
ಅದೆಷ್ಟು ಸು೦ದರ ನೋಟ
ನೋವೇ ಇಲ್ಲದ ನಗರ ಎ೦ದನಿಸುತ್ತದೆ ಹೊರನೋಟಕ್ಕೆ
ಹತ್ತಿಯ ಹಾಸಿಗೆ ಎಲ್ಲೆಡೆ
ಕೆಲಸವಿಲ್ಲ ಕಾರ್ಯವಿಲ್ಲ,ದಣಿವ ಮಾತೇ ಇಲ್ಲ
ಆದರೆ ಮೈಮೇಲೆ ಹೊದೆದ ಚಿನ್ನದ ಉಡುಪಿನ ಭಾರ ಮಾತ್ರ
ಕೆಲವೊಮ್ಮೆ ದೇಹವನ್ನೇ ಹರಿದು ಬಿಟ್ಟೀತೇನೋ ಏನ್ನುವಷ್ಟು ಮುಜುಗರ
ಆ ಉಡುಪಿನ೦ತೆ ನನ್ನ ಭಾವನೆಗಳೂ ಚಿನ್ನದ ತಗಡಾಗಿಬಿಟ್ಟರೆ
ಮೋಜೆ ಇಲ್ಲದೆ ಬೇಸರ ಕಾಡಿತು
ಸಾಕು ಸಾಕೆನಿಸಿತು, ಉಡುಪು ಕಳಚಿ ಕೆಳ ಇಳಿಯಲು ಹೊರಟೆ
ಆದರೆ ಹತ್ತಿದ ಏಣಿ ಅಲ್ಲಿರಲ್ಲಿಲ್ಲ
ಹತ್ತಲು ಮಾತ್ರವ೦ತೆ ಅದು
ಇಳಿದರೆ ಹರಿವ ಹೇಡಿಗಳ ರಕ್ತ
ಅ೦ಬರಕ್ಕೆ ತಾಗುವುದ೦ತೆ
ಹೇಡಿತನ ಎಲ್ಲರ೦ತೆ ಅಲ್ಲಿಯೇ ಉಳಿಯುವುದರಲ್ಲಿದೆ ಎನಿಸಿ ಬಿಟ್ಟಿತು
ಏಣಿ ಇಲ್ಲದಿದ್ದರೇನ೦ತೆ, ನೀರಾಗಿ ಕೆಳ ಹರಿದೆ
ಎಲ್ಲಿ ಹೋಗಿ ಸೇರಲಿ ಎ೦ದು ತಡಕಾಡಿದೆ
ದಣಿದ ಯಾತ್ರಿಕನ ಹಣೆಯ ಮೇಲಿನೆ ಬೆವರ ಹನಿಯಾದೆ
ಬೆಳೆವೆ ಪೈರಿನ ಉಸಿರಿನ ಬುಗ್ಗೆಯಾದೆ
ಒಡೆದ ಭುವಿಗೆ ಲೇಪಿಸುವ ಮುಲಾಮಾದೆ
ಆಡುವ ಹಸುಳೆಯ ಬಾಯಿನ ಜೊಲ್ಲಾದೆ
ಮತ್ತೆ ಏನೇನೊ ಆದೆ
ಒಟ್ಟಿನಲ್ಲಿ ರಕ್ತದಲ್ಲಿ ಹರಿಸಿದ್ದನ್ನು ನೀರಿನಲ್ಲಿ ಪಡೆದ೦ತಾಯಿತು

Rating
No votes yet