ಮದುವೆಯಾಗದವರ ತೊಳಲಾಟ, ಸಮಜಾಯಿಷಿ, ಜವಾಬ್ದಾರಿ, ಮತ್ತು ಸ್ವಾತಂತ್ರ್ಯಗಳ ಸ್ವಗತ...
ಮೇಲಿನ ಶೀರ್ಷಿಕೆ ಸುಮ್ಮನೆ, ಒಂದು ರೀತಿಯಲ್ಲಿ ಗಮನ ಸೆಳೆಯಲಿ ಎಂದು ಬರೆದದ್ದು. ಅದರ ಬಗ್ಗೆ ನಂತರ ಬರುತ್ತೇನೆ.
ಈ ನಡುವೆ ಮೂರ್ನಾಲ್ಕು ತಿಂಗಳಿನಿಂದ ಯಾವುದೆ ಕಥೆ-ಕಾದಂಬರಿ ಓದಲು ಆಗಿರಲಿಲ್ಲ. ಈ ಮಧ್ಯೆ ಗೆಳೆಯ ನರೇಂದ್ರ ಪೈರವರ ಮೊದಲ ಕಥಾಸಂಕಲನ "ಟಕ್ ಟಿಕ್ ಪೆನ್ನು" ಬಿಡುಗಡೆ ಆಯಿತು. ಆದರೆ ದಯವಿಟ್ಟು ಕಳುಹಿಸಿ, ಎಂದಿದ್ದೆ. ನೆನ್ನೆ ಬಂತು. ಬಂದ ಮೂರ್ನಾಲ್ಕು ಗಂಟೆಗಳಲ್ಲಿ ಓದಿ ಮುಗಿಸಿದೆ. ಒಂದು ರೀತಿಯಲ್ಲಿ ಮೂರ್ನಾಲ್ಕು ಕಾದಂಬರಿಗಳನ್ನು ಓದಿದ ತೃಪ್ತಿ ಸಿಕ್ಕಿತು.
ಸುಮ್ಮನೆ ಕುತೂಹಲಕ್ಕೆ ಕತೆಯೊಂದರ ಭಾಗವನ್ನು ಉಲ್ಲೇಖಿಸುತ್ತೇನೆ:
"ಜಾನೆಟ್ಟಳ ಸವಾಲೆಸೆಯುವ ದೇಹಸಂಪತ್ತು, ಸೋಲೇ ಕಾಣದ ರತಿ ಉತ್ಸಾಹದ ನೆನಪಾದರೆ. ಛೇ, ಅದನ್ನು ಬಿಟ್ಟುಬಿಡಲು ಸಾಧ್ಯವೆ ಎನಿಸಿ ಆತಂಕಗೊಳ್ಳುತ್ತೇನೆ. ಕೈಗಳಲ್ಲಿ ಜಾನೆಟ್ಟಳ ಬಿಗಿಯಾದ ತುಂಬಿದ ಮೊಲೆಗಳಿರುವಾಗ, ಬೆತ್ತಲೆ ತೊಡೆಗಳು ಬೆಸೆದುಕೊಂಡು ಸುಖಿಸಲು ತಹತಹಿಸಿ ಉಕ್ಕುತ್ತಿರುವ ದೇಹ ಜ್ವರವೇರಿದಂತೆ ಬಿಸಿಯಾಗಿ ನಡುಗುತ್ತಿರುವಾಗ ಕಠೋಪನಿಷತ್ತಿನ ನಚಿಕೇತ ನೆನಪಾಗುವುದಿಲ್ಲ. ಮೃತ್ಯುದೇವತೆ ನಚಿಕೇತನ ಸಂಯಮ, ಶ್ರದ್ಧೆ, ನಿರ್ವಿಕಾರ, ನಿರ್ಲಿಪ್ತಿ, ನಿರ್ಮೋಹಗಳನ್ನೆಲ್ಲ ಹೊಗಳಿದ್ದೆಲ್ಲ ರಿಲವಂಟ್ ಎನಿಸುವುದಿಲ್ಲ, ಬದುಕಿಗೆ."
ಕತೆಗಳಲ್ಲಿ ಕತೆ ಮತ್ತು ಘಟನೆಗಳಿಗಿಂತ ವಿವರವೆ ಹೆಚ್ಚಾದರೆ ನನಗೆ ಅದು ಅಷ್ಟೇನೂ ತಟ್ಟುವುದಿಲ್ಲ. ಮತ್ತೆ ಕತೆ ಎಲ್ಲಿ ಪ್ರಾರಂಭವಾಗುತ್ತೆ ಎಂದು ಹುಡುಕುವ ಸ್ವಭಾವ. ಆದರೆ, ಈ ಪುಸ್ತಕದಲ್ಲಿ ಹಲವಾರು ಕಡೆ ಇರುವ ಇಂತಹ ವಾಕ್ಯಗಳು ಬಹಳ ಗಮನ ಸೆಳೆದವು: "ಅಲ್ಲಿ ವಿರಹದ ನೆನಪುಗಳಲ್ಲಿ ಅದ್ದಿತೆಗೆದಂತಿದ್ದ ಭಾವವೇ ಒಂದು ಹಾಡಾಗಿ, ಮನದ ನೋವೇ ಒಂದು ನಾದವಾಗಿ, ಬೆಂದ ಎದೆಯಿಂದಲೇ ಹೊರಟ ರಾಗದ ಬಳ್ಳಿಗೆ ಸುರುಳಿ ಸುತ್ತಿಕೊಂಡ ಭಾಷೆಯ ಆಯ್ದ ಶಬ್ದಗಳಲ್ಲಿ ಸಂಕಟಗಳೆಲ್ಲ ಭಗ್ನಪ್ರೇಮದ ಆಲಾಪನೆಯಾಗುತ್ತಿರಲು ಇವನ ಎದೆ ಕರಗತೊಡಗಿತ್ತು."
ನನಗೆ ವಿಮರ್ಶೆಯ ಪರಿಭಾಷೆ ಗೊತ್ತಿಲ್ಲದೆ ಇರುವುದರಿಂದ ಅದನ್ನು ಮಾಡಲಾರೆ. ಆದರೆ, ಓದುಗನ ಕಲ್ಪನೆಯನ್ನು ಕೆರಳಿಸುವಂತಹ ಕತೆಗಳಿವು. ಎಷ್ಟಕ್ಕೊ ಮುಕ್ತಾಯದ ವಾಕ್ಯ ವಿವರಣೆಗಳಿಲ್ಲ; ಆದರೆ ತಮ್ಮ ಸಾಮಾನ್ಯ ಜ್ಞಾನವನ್ನು ಉಪಯೋಗಿಸಿ ಕಲ್ಪಿಸಿಕೊಂಡರೆ ಮುಕ್ತಾಯ ಸಿಗುತ್ತದೆ. ಲೇಖಕರು ಎಲ್ಲಿಯೂ ವಾಚಾಳಿಯಾಗಿಲ್ಲ. ಇನ್ನು ಕೆಲವು ಕತೆಗಳ ಹಂದರ, ಎಂಟತ್ತು ಪುಟಗಳಲ್ಲಿ ನಡೆಯುವ ಘಟನೆಗಳು ಒಂದಿಡೀ ಕಾದಂಬರಿಯಲ್ಲಿ ಬರಬಹುದಾದಷ್ಟು. ಹಾಗಾಗಿಯೆ ನಾನು ಈ ಮೇಲೆ ’ಮೂರ್ನಾಲ್ಕು ಕಾದಂಬರಿಗಳನ್ನು ಓದಿದ ತೃಪ್ತಿ ಸಿಕ್ಕಿತು,’ ಎಂದಿದ್ದು. ನರೇಂದ್ರರು ಬಳಸಿರುವ ಕಥಾಶೈಲಿ ಮುಂದೇನಾಗುತ್ತದೆ ಎನ್ನುವುದಕ್ಕಿಂತ ಹಿಂದೇನಾಯಿತು ಎನ್ನುವ ಕುತೂಹಲ ಕೆರಳಿಸುತ್ತಿರುತ್ತದೆ.
ಕತೆಗಳ ಬಗ್ಗೆ ಹೇಳಲು ನನ್ನಲ್ಲಿ ಇನ್ನೂ ಅನೇಕವಿವೆ. ಆದರೆ, ನರೇಂದ್ರರನ್ನು ವೈಯಕ್ತಿಕವಾಗಿ ತಿಳಿದಿರುವುದರಿಂದ ಅವರ ಬಗ್ಗೆಯೆ ಒಂದಷ್ಟು ಬರೆಯುತ್ತೇನೆ. ಈ ಪುಸ್ತಕಕ್ಕೆ ಮುನ್ನುಡಿ ಬರೆದಿರುವ ಕೆ. ಸತ್ಯನಾರಾಯಣರ ಮಾತೊಂದನ್ನು ಉಲ್ಲೇಖಿಸಿ ಮುಂದುವರೆಯುತ್ತೇನೆ: "ತಾನು ಎಷ್ಟೇ ಬರೆದರೂ ಅದಕ್ಕಿಂತ ವಿಶಾಲವಾದ ಬದುಕು ತನ್ನೆದುರಿಗಿದೆ ಎಂಬ ವಿನಯ ಮತ್ತು ಅಸಹಾಯಕತೆ ಕೂಡ ಅವರ ಕತೆಗಳಲ್ಲಿ ಕಾಣುತ್ತದೆ." ಅಪಾರವಾಗಿ ಓದುವ, ತಮ್ಮ ವಾರಿಗೆಯ ಕೆಲವು ಸಾಹಿತಿಗಳನ್ನು ಅಷ್ಟೇ ಅಪಾರವಾಗಿ ಗೌರವಿಸುವ ಮತ್ತು ಪ್ರೀತಿಸುವ ನರೇಂದ್ರರು ತಮಗಿಷ್ಟವಾದವರನ್ನು ಬೆರಗಾಗಿ ನೋಡುವುದನ್ನು ಸ್ವಲ್ಪ ಕಮ್ಮಿ ಮಾಡಿಕೊಂಡು ಬರೆಯಲು ಕುಳಿತರೆ ಅನೇಕ ಕತೆ-ಕಾದಂಬರಿಗಳನ್ನು ಸುಲಭವಾಗಿ ಬರೆಯಬಲ್ಲರು ಎನ್ನಿಸುತ್ತದೆ. ಇಲ್ಲಿ ನಾನು ಇನ್ನೂ ಚೆನ್ನಾಗಿ ಬರೆಯಬಹುದು ಎನ್ನುತ್ತಿಲ್ಲ. ಯಾಕೆಂದರೆ ಅವರು ಸಮರ್ಥವಾಗಿ, ಚೆನ್ನಾಗಿಯೇ ಬರೆಯುತ್ತಾರೆ. ಆದರೆ ಈ ಮೇಲೆ ಹೇಳಿದ [ವಿನಯ ಮತ್ತು ಅಸಹಾಯಕತೆಯ(?)] ಬೆರಗಿನಿಂದಾಗಿ ಮತ್ತು ಬಹುಶಃ ತನ್ನ ಮೆಚ್ಚಿನ ಕತೆಗಾರರಿಗೆ ಹೋಲಿಸಿದರೆ ನಾನಿನ್ನೂ ವಿದ್ಯಾರ್ಥಿ ಎಂಬ ಅನಗತ್ಯ ಕಲ್ಪನೆಯಲ್ಲಿ ಹೆಚ್ಚು ಬರೆಯುತ್ತಿಲ್ಲ ಎನ್ನಿಸುತ್ತದೆ.
ಇನ್ನು, ಅವರು ಹೆಚ್ಚಿಗೆ ಬರೆಯಲೇಬೇಕು ಎನ್ನುವುದಕ್ಕೆ ನನ್ನಲ್ಲಿ ಬಲವಾದ ಕಾರಣಗಳಿವೆ. ಬೆಂಗಳೂರಿನ ಮತ್ತು ಕರ್ನಾಟಕದ ಮಧ್ಯಮವರ್ಗದ ಜನರಲ್ಲಿ ಹೆಸರು ಪಡೆಯುತ್ತಿರುವ ಒಂದಷ್ಟು ಕನ್ನಡದ ಕತೆಗಾರರು ನನಗೆ ಗೊತ್ತು. ಆದರೆ ಅವರ್ಯಾರಿಗೂ ಇಲ್ಲದ ಕಡು ನಿಷ್ಠುರತೆ ಮತ್ತು ಆಕ್ಟಿವಿಸಮ್ ನರೇಂದ್ರರಿಗಿದೆ. ಯಾವುದು ಸರಿ ಮತ್ತು ಯಾವುದು ತಪ್ಪು, ಹಾಗೂ ಸರಿಯಾದುದನ್ನು ’ಪೊಲಿಟಿಕಲಿ ಕರೆಕ್ಟ್’ ಆಗಿಲ್ಲದಿದ್ದರೂ ಹೇಳುತ್ತೇನೆ ಎನ್ನುವ ಛಲ ಮತ್ತು ಧೈರ್ಯ ಅವರಲ್ಲಿದೆ. ಸಮಾಜ ಏನನ್ನು ತಿಳಿದುಕೊಳ್ಳಬೇಕು ಎನ್ನುವ ಸ್ಪಷ್ಟ ತಿಳುವಳಿಕೆಯಿದೆ. ಮತ್ತು, ರಾಜಿಯಾಗದ ಸೈದ್ಧಾಂತಿಕ ಬದ್ದತೆಯಿದೆ. ಹಾಗೆಯೆ, ಅವರು ನಿಸ್ವಾರ್ಥವಾಗಿ, ಎಲೆಮರೆಯಾಗಿ ದುಡಿಯುವುದನ್ನೂ, ಮತ್ತು ಸರಿ ಕಂಡದ್ದನ್ನು ಸ್ವಯಂಪ್ರೇರಣೆಯಿಂದ ಬೆಂಬಲಿಸುವುದನ್ನು ವೈಯಕ್ತಿಕವಾಗಿ ಕಂಡಿದ್ದೇನೆ. ಹಾಗಾಗಿಯೆ, ಸದ್ಯದ ಜಾತಿ-ಮತ-ಭಾಷಾ-ಪ್ರಾಂತಾವಾರು ಮೂಲಭೂತವಾದ ಮತ್ತು ಸಂಕುಚಿತತೆಯೆ ಒಂದು virtue ಆಗಿ ಬದಲಾಗಿರುವ ಈ ಸಂದರ್ಭದಲ್ಲಿ ಇವರಂತಹವರು ನನಗೆ ಈಗಾಗಲೆ ಸ್ಥಾಪಿತರಾಗಿರುವ ಅನೇಕ ಬರಹಗಾರರಿಗಿಂತ ಮುಖ್ಯರಾಗುತ್ತಾರೆ.
ಸಾಮಾಜಿಕ ವಿಷಯಗಳ ಮೇಲೆ, ತಾವು ಓದಿದ ಪುಸ್ತಕಗಳ ಬಗ್ಗೆ ನರೇಂದ್ರರು ಬರೆದಿರುವ ಅನೇಕ ಲೇಖನಗಳು ಈಗಾಗಲೆ ಅಂತರ್ಜಾಲದಲ್ಲಿವೆ.
ಸಂಪದದಲ್ಲಿರುವ ಅವರ ಬ್ಲಾಗ್:
http://www.sampada.net/user/narendra
ಮತ್ತೊಂದು: "ಓದುವ ಹವ್ಯಾಸ"
ಅವರು ಇತ್ತೀಚೆಗೆ ವಿವೇಕ್ ಶಾನಭಾಗರೊಂದಿಗೆ ಸಂಪದಕ್ಕಾಗಿ ನಡೆಸಿದ ಆಡಿಯೊ ಸಂದರ್ಶನ:
http://sampada.net/podcasts/9/Vivek-Shanbag
ಕಥಾ ಸಂಕಲನಕ್ಕೆ ರಘು ಅಪಾರ ಬಿಡಿಸಿರುವ ಮುಖಪುಟ ಚಿತ್ರ:
ಶೀರ್ಷಿಕೆಯ ಬಗ್ಗೆ ನಂತರ ಬರೆಯುತ್ತೇನೆ ಎಂದಿದ್ದೆ. 'ನೀವು "ಟಕ್ ಟಿಕ್ ಪೆನ್ನು" ಓದಿದರೆ....' ಎಂದಷ್ಟೇ ಹೇಳಿ, ಈಗ ಅಲ್ಲಿಗೇ ನಿಲ್ಲಿಸುತ್ತೇನೆ!!
ಮುಗಿಸುವ ಮುನ್ನ, ತಮ್ಮ ಕಥಾಸಂಕಲವನ್ನು ಹೊರತಂದಿರುವ ನರೇಂದ್ರರಿಗೆ ಖುಷಿಯಿಂದ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ರವಿ...
Comments
ಉ: ಮದುವೆಯಾಗದವರ ತೊಳಲಾಟ, ಸಮಜಾಯಿಷಿ, ಜವಾಬ್ದಾರಿ, ಮತ್ತು ಸ್ವಾತಂತ್ರ್ಯಗಳ ಸ್ವಗತ...