ಮಧ್ಯರಾತ್ರಿಯ ಹರಟೆಗಳು

ಮಧ್ಯರಾತ್ರಿಯ ಹರಟೆಗಳು

ರಾತ್ರಿ ಊಟವಾದ ಮೇಲೆ, ಕೂಡಲೆ ಮಲಗದೇ, ಏನಾದರೂ ಕೆಲಸಕ್ಕೆ ಬೇಕಾದ್ದು- ಬೇಡದ್ದು ಹರಟುತ್ತ ಬಿದ್ದುಕೊಳ್ಳುವುದು, ಗಂಟೆ ಹನ್ನೆರಡು ಹೊಡೆದ ನಂತರವೇ, "ಏ ಸಾಕು ಮಲ್ಗನ್ರೋ" ಎಂದು ನಿದ್ರಿಸುವುದು, ನಮ್ಮ ಜನ್ಮಕ್ಕಂಟಿದ ವ್ಯಾಧಿ. ನಾವು ಹಿಂದಿನ ದಿನ ತಡರಾತ್ರಿಯವರೆಗೆ, ಏನು ಹರಟುತ್ತಿದ್ದೆವು ಎಂಬುದು, ದೇವರಾಣೆಯಾಗಿಯೂ ನಮಗೆ ಮರುದಿನ ಬೆಳಗ್ಗೆ ನೆನೆಪಿರುವುದಿಲ್ಲ. ಬಹುತೇಕ, ನಮ್ಮಂತಹ ಹೆಚ್ಚಿನ ಬ್ರಹ್ಮಚಾರಿ ಹುಡುಗರ ಹಣೆಬರಹ ಇದೇ ಇರಬೇಕು!
ಜಗತ್ತಿನಲ್ಲಿರುವ ಎಲ್ಲ ವಿಷಯಗಳೂ ನಮ್ಮ ಈ ತಡ ರಾತ್ರಿಯ ಹರಟೆ- ಚರ್ಚೆಯ ಬಲಿಪಶು ಆಗಿಯೇ ಆಗಿರುತ್ತವೆ,ಇಂದಾಗಿರದಿದ್ದರೆ, ನಾಳೆ. ಪಕ್ಕದ ಬೇಕರಿ ಬಾದಾಮಿ ಹಾಲಿನ ಕ್ವಾಲಿಟಿಯಿಂದ ಹಿಡಿದು, ಗೋಡ್ಕಿಂಡಿಯ ಕೊಳಲಿನ ವರೆಗೆ, ಬುಶ್ ನ ಜಾಗತಿಕ ನೀತಿಯಿಂದ ಎದುರು ಮನೆ ಬೆಕ್ಕಿನಮರಿಯವರೆಗೆ, ಏನಾದರೂ ಒಂದು, ನಮ್ಮ ನಾಲಿಗೆಗೆ ಆಹಾರವಾಗಲೇ ಬೇಕು. ಅದನ್ನ ಕಚ್ಚಿ- ಎಳೆದು ಬೇಜಾರು ಬಂದು, ಕಣ್ಣು- ದೇಹ ಎರಡೂ ಅಸಹಕಾರ ಚಳುವಳಿ ಶುರುಮಾಡಿದ ಮೇಲೇ ಚಾದರ ಹೊದ್ದುಕೊಳ್ಳುವುದು!
ನಮ್ಮ ದೇಹದ "ಬಯಾಲಾಜಿಕಲ್ ಗಡಿಯಾರ" ಪ್ರಾಯಶ: ಈ ನಮ್ಮ ಸರಿ ರಾತ್ರಿಯ ನಿದ್ದೆಗೆ ಹೊಂದಿಕೊಂಡಿರಬೇಕು. ಇಲ್ಲವಾದರೆ , ಏಷ್ಟೊ ದಿನ, ಬರಿ ೩-೪ ತಾಸಿನ ನಿದ್ರೆ ಮಾಡಿಯೂ ಇಲ್ಲಿಯವರೆಗೂ, ಏನೆಂದರೆ ಏನೂ ಆಗಿಲ್ಲ!! ದಿನವಿಡೀ ಎಷ್ಟೇ ಕೆಲಸ ಮಾಡಿ ದಣಿದರೂ, ಈ ಹರಟೆ ಗೆ ಮಾತ್ರ ರಜೆ ಇಲ್ಲ. ಈ ತರಹದ ಹರಟೆಗಳು, "mind refresh" ಆಗೋಕೆ ಸಹಾಯ ಮಾಡುತ್ತವೆ, ಅನ್ನಿಸುತ್ತದೆ.
ಹೊಸದಾಗಿ ನಮ್ಮ ರೂಮಿಗೊಬ್ಬ ಗೆಳೆಯ ಬಂದು ಸೇರಿಕೊಂಡಿದ್ದಾನೆ. ಪಾಪ, ಅವನ ಜೈವಿಕ ಗಡಿಯಾರ, ಇನ್ನೂ ಈ ಪದ್ದತಿಗೆ ಹೊಂದಿಕೊಂಡಿಲ್ಲ. ನಮ್ಮ ಚರ್ಚೆಯ ಪೀಠಿಕಾ ಪ್ರಕರಣ ಮುಗಿಯುವುದರೊಳಗಾಗಿ, ಗೊರಕೆ ಹೊಡೆಯುತ್ತಿರುತ್ತಾನೆ! ಅವನ ನಿದ್ದೆಗೆ ತೊಂದರೆ ಕೊಡುವುದು ಬೇಡಾ ಅಂತ, ನಾವೆಲ್ಲ ಬೇಗನೆ ಮಲಗಲು ಆರಂಭಿಸಿದ್ದೇವೆ. ಆತ ನಮ್ಮ ಮಢ್ಯರಾತ್ರಿ ಹರಟೆ ಕುಟುಂಬದ ಸದಸ್ಯನಾಗುತ್ತನೋ, ಇಲ್ಲಾ ನಾವು ಕುಂಭಕರ್ಣನ ವಂಶ ಸೇರುತ್ತೇವೋ, ಕಾದು ನೋಡಬೇಕು!

Rating
No votes yet

Comments