ಮನೆಯೆ ಮೊದಲ ಪಾಠಶಾಲೆ

ಮನೆಯೆ ಮೊದಲ ಪಾಠಶಾಲೆ

ಶೈಕ್ಷಣಿಕವಾಗಿ ಉನ್ನತ ಶ್ರೇಣಿಯನ್ನು ಹೊಂದಿರುವ ಯುವಕನೊಬ್ಬ, ವ್ಯವಸ್ಥಾಪಕ (ಮ್ಯಾನೇಜರ್) ಹುದ್ದೆಗಾಗಿ, ಬಹುದೊಡ್ಡ ಖಾಸಗಿ ಕಂಪನಿಯೊಂದರಲ್ಲಿ ಅರ್ಜಿ ಸಲ್ಲಿಸಿದ.

ಮೊದಲ ಸುತ್ತಿನ ಸಂದರ್ಶನದಲ್ಲಿ ಬಹುಸುಲಭವಾಗಿ ಉತ್ತೀರ್ಣನಾದ. ಕೊನೆಯ ಸುತ್ತಿನ ಸಂದರ್ಶನ, ಕಂಪನಿಯ ನಿರ್ದೇಶಕರೊಂದಿಗೆ ನಿಗದಿಯಾಯ್ತು.

ಆ ಯುವಕನ ಅರ್ಹತಾ ವಿವರಣಾ ಪತ್ರದಿಂದ, ಅವನ ಶೈಕ್ಷಣಿಕ ಹಿನ್ನೆಲೆ ಅಭೂತಪೂರ್ವವಾಗಿಯು, ಪ್ರೌಢಶಾಲೆಯಿಂದ ಸ್ನಾತಕೋತ್ತರ ಪದವಿಯವರೆವಿಗೂ ಉನ್ನತ ಶ್ರೇಣಿಯನ್ನೆ ಪಡೆದಿದ್ದಾನೆಂದು, ನಿರ್ದೇಶಕರಿಗೆ ತಿಳಿದುಬಂತು.

ಸಂದರ್ಶನದ ಸಮಯ ಬಂತು.

ನಿರ್ದೇಶಕ: ನೀನು ಶಾಲೆಯಲ್ಲಿದ್ದಾಗ ವಿದ್ಯಾರ್ಥಿವೇತನವನ್ನು ಪಡೆದಿದ್ದೆಯ..?

ಯುವಕ: ಇಲ್ಲ ಸರ್.

ನಿರ್ದೇಶಕ: ನಿಮ್ಮ ತಂದೆ ನಿನ್ನ ಶಾಲಾ ಶುಲ್ಕವನ್ನು ಭರಿಸಿದರೆ..?

ಯುವಕ: ನಾನು ಒಂದು ವರ್ಷದವನಾಗಿದ್ದಾಗಲೆ ನನ್ನ ತಂದೆ ತೀರಿಕೊಂಡರು. ನನ್ನ ತಾಯಿಯೆ ಎಲ್ಲ ವೆಚ್ಚವನ್ನು ಭರಿಸಿದಳು.

ನಿರ್ದೇಶಕ: ನಿನ್ನ ತಾಯಿ ಎಲ್ಲಿ ಕೆಲಸ ಮಾಡುತ್ತಾರೆ..?

ಯುವಕ: ನನ್ನ ತಾಯಿ ಬಟ್ಟೆ ಒಗೆಯುವ ಕೆಲಸ ಮಾಡುತ್ತಾರೆ.

ನಿರ್ದೇಶಕರು ಆ ಯುವಕನಿಗೆ ಕೈಗಳನ್ನು ತೋರಿಸಲು ಹೇಳಿದರು. ಆತ ಮೃದುವಾದ ತನ್ನೆರಡು ಕೈಗಳನ್ನು ತೋರಿಸಿದ.

ನಿರ್ದೇಶಕ: ನೀನು ಈ ಹಿಂದೆಂದಾದರು ನಿನ್ನ ತಾಯಿಗೆ ಬಟ್ಟೆ ಒಗೆಯುವಲ್ಲಿ ಸಹಾಯ ಮಾಡಿದ್ದೀಯಾ.. ?

ಯುವಕ: ಇಲ್ಲಾ ಸರ್. ನನ್ನ ತಾಯಿ, ನಾನು ಯಾವಾಗಲೂ ಹೆಚ್ಚು ಓದುವುದನ್ನು ಇಷ್ಟಪಡುತ್ತಿದ್ದಳು. ಇನ್ನೂ, ಹೇಳಬೇಕೆಂದರೆ ನನ್ನ ತಾಯಿ ನನಗಿಂತ ವೇಗವಾಗಿ ಬಟ್ಟೆ ಒಗೆಯಬಲ್ಲಳು.

ನಿರ್ದೇಶಕ: ನಿನ್ನಲ್ಲೊಂದು ಮನವಿ. ನೀನು ಈ ಸಂಜೆ ಮನೆಗೆ ಹೋದ ಮೇಲೆ, ನಿನ್ನ ತಾಯಿಯ ಕೈಗಳನ್ನು ತೊಳೆದು ನೋಡು. ನಂತರ ನಾಳೆ ನನ್ನನ್ನು ಕಾಣು.

ಈ ಪ್ರತಿಕ್ರಿಯೆಯಿಂದ, ತನಗೆ ಕೆಲಸ ಸಿಕ್ಕಿದಂತೆಯೆ ಎಂದು ಯುವಕ ಖುಷಿಯಿಂದ ಹೊರನಡೆದ.

 

ಮನೆಗೆ ಹಿಂದಿರುಗಿದ ನಂತರ, ಸಂತಸದಿಂದ ತನ್ನ ತಾಯಿಯನ್ನು, ನಿನ್ನ ಕೈಗಳನ್ನು ನಾನು ತೊಳೆಯುವೆನೆಂದು ಅರುಹಿದ. ತಾಯಿಗೆ ಮಗನ ವರ್ತನೆ ವಿಚಿತ್ರವೆನಿಸಿತು, ಆದರೂ ತನ್ನ ಕೈಗಳನ್ನು ಅವನಿಗೆ ತೋರಿಸಿದಳು.

ಯುವಕ, ತಾಯಿಯ ಕೈಗಳನ್ನು ನಿಧಾನವಾಗಿ ತೊಳೆಯತೊಡಗಿದ, ಜೊತೆಜೊತೆಗೆ ಅವನ ಕಣ್ಣಲ್ಲಿ ನೀರು ತುಂಬಿ ಬಂತು. ಮೊದಲ ಬಾರಿಗೆ ಆತ ತನ್ನ ತಾಯಿಯ ಕೈಗಳಲ್ಲಿ ಸುಕ್ಕುಗಳನ್ನು ಕಂಡ. ಆ ಕೈಗಳಲ್ಲಿ ಬಹಳಷ್ಟು ಗಾಯಗಳಾಗಿದ್ದವು. ಕೆಲವೊಂದು ಗಾಯಗಳು ಎಷ್ಟು ಯಾತನಾಮಯವಾಗಿದ್ದವೆಂದರೆ, ಆ ಜಾಗವನ್ನು ನೀರಿನಿಂದ ತೊಳೆದಾಗ, ಆಕೆ ನೋವಿನಿಂದಾಗಿ ಸಣ್ಣದಾಗಿ ನಡುಗುತ್ತಿದ್ದಳು.

ಮೊದಲಬಾರಿಗೆ ಆ ಯುವಕನಿಗೆ, ತನ್ನೆಲ್ಲಾ ದೈನಂದಿನ‌ ವೆಚ್ಚವನ್ನು, ಬೇಕುಬೇಡಗಳನ್ನು ಈಡೇರಿಸುತ್ತಿದ್ದುದು ಇದೇ ಬಟ್ಟೆ ಒಗೆಯುವ ಕೈಗಳು. ಜೀವನದ ತನ್ನೆಲ್ಲಾ ಉನ್ನತಿಗೆ, ಇದೇ ಗಾಯಗೊಂಡ ಕೈಗಳು ಕಾರಣವೆಂಬ ಸತ್ಯ ಮನದಟ್ಟಾಯಿತು. ನೆನೆದು ಕಣ್ಣೀರಿಟ್ಟನು.

ಕೈಗಳನ್ನು ತೊಳೆದ ನಂತರ, ಉಳಿದ ಬಟ್ಟೆಗಳನ್ನು, ತಾಯಿ ಬೇಡವೆಂದರೂ ಬಿಡದೆ, ತಾನೆ ಒಗೆದು ಮುಗಿಸಿದನು.

ಆ ರಾತ್ರಿ ತಾಯಿ ಮತ್ತು ಮಗ ಬಹಳ ಹೊತ್ತಿನವರೆವಿಗೂ ಕಷ್ಟ ಸುಖಗಳನ್ನು ಹಂಚಿಕೊಳ್ಳುತ್ತಾ, ಸಂತಸದಿಂದ ಕಳೆದರು.

 

ಮರುದಿನ, ಯುವಕ ಕಂಪನಿಯ ನಿರ್ದೇಶಕರ ಕಛೇರಿಗೆ ಬಂದ.

ನಿರ್ದೇಶಕರು ಯುವಕನ ಕಣ್ಣಿನಲ್ಲಿ ನೀರು ಒಸರುತ್ತಿರುವುದನ್ನು ಕಂಡು ಕೇಳಿದರು: ನೆನ್ನೆ ಮನೆಗೆ ಹೋದ ನ‍ಂತರ ಏನಾಯಿತೆಂದು ಹೇಳುವೆಯಾ..?

ಯುವಕ: ನಾನು ನನ್ನ ತಾಯಿಯ ಕೈಗಳನ್ನು ಸ್ವಚ್ಛ ಮಾಡಿದೆ ಹಾಗು ಉಳಿದಿದ್ದ ಬಟ್ಟೆಗಳನ್ನು ಒಗೆದೆ.

ನಿರ್ದೇಶಕ: ದಯವಿಟ್ಟು ಅದರಿಂದ ನಿನ್ನಲ್ಲುಂಟಾದ ಭಾವನೆಗಳನ್ನು ತಿಳಿಸು.

ಯುವಕ: ಮೊದಲನೆಯದಾಗಿ, ಪ್ರಶಂಸೆ ಮಾಡುವುದರ ಮಹತ್ವವೇನೆಂದು ತಿಳಿಯಿತು. ನನ್ನ ತಾಯಿ ಇಲ್ಲದ್ದಿದ್ದರೆ, ಇಂದಿನ ನಾನು, ಇರುತ್ತಿರಲಿಲ್ಲ.

ಎರಡನೆಯದಾಗಿ, ಜೊತೆಯಾಗಿ ಕೆಲಸ ಮಾಡುವುದರಿಂದ ಹಾಗು ತಾಯಿಗೆ ಸಹಾಯ ಮಾಡುವುದರಿಂದ ಎಷ್ಟೇ ಕಷ್ಟದ ಕೆಲಸವನ್ನೂ ಸುಲಭಗೊಳಿಸಿಕೊಳ್ಳಬಹುದೆಂದು ತಿಳಿಯಿತು.

ಕೊನೆಯದಾಗಿ, ಕುಟುಂಬದೊಂದಿಗಿನ ಸಂಬಂಧ ಎಷ್ಟು ಮಹತ್ವಪೂರ್ಣವಾದದ್ದೆಂದು ಈಗ ತಿಳಿಯಿತು.

ನಿರ್ದೇಶಕ: ಈ ಗುಣಗಳನ್ನೆ ನಾನು ಒಬ್ಬ ವ್ಯವಸ್ಥಾಪಕನಲ್ಲಿ ಕಾಣಬಯಸುವುದು. ಯಾವ ವ್ಯಕ್ತಿ ಬೇರೊಬ್ಬರ ಶ್ರಮವನ್ನು ಪ್ರಶಂಸಿಸುತ್ತಾನೊ, ಮತ್ತೊಬ್ಬರ ಕಷ್ಟಗಳಿಗೆ ಸರಿಯಾದ ರೀತಿಯಲ್ಲಿ ಸ್ಪಂದಿಸುತ್ತ ಅವರಿಂದ ಕೆಲಸ ತೆಗೆಯುತ್ತಾನೊ ಹಾಗು ಹಣವನ್ನೆ ಕೇಂದ್ರಬಿಂದುವಾಗಿರಿಸಿಕೊಂಡಿರುವುದಿಲ್ಲವೊ ಅಂತಹವನನ್ನು ಕೆಲಸಕ್ಕೆ ನೇಮಿಸಿಕೊಳ್ಳಲು ಬಯಸುತ್ತೇನೆ. ನಿನ್ನಲ್ಲಿ ಆ ಎಲ್ಲ ಗುಣಗಳು ಇವೆ, ಆದ್ದರಿಂದ ನಿನ್ನನ್ನು ಕೆಲಸಕ್ಕೆ ಸೇರಿಸಿಕೊಳ್ಳುತ್ತಿದ್ದೇನೆ.

ಯುವಕ ಬಹಳ ಸಂತೋಷಗೊಂಡ.

 

ತದನಂತರ ಆ ಯುವಕ ಬಹಳ ಶ್ರದ್ದೆಯಿಂದ ಕೆಲಸ ಮಾಡಿ, ತನ್ನ ಸಹೋದ್ಯೋಗಿಗಳ ಪ್ರೀತಿ ಗೌರವಗಳನ್ನು ಸಂಪಾದಿಸಿದನು. ಪ್ರತಿಯೊಬ್ಬ ಕಾರ್ಮಿಕನು ಶ್ರದ್ಧೆಯಿಂದ ದುಡಿದುದ್ದರ ಪರಿಣಾಮವಾಗಿ ಕಂಪನಿ ಇನ್ನೂ ಉನ್ನತ ಮಟ್ಟಕ್ಕೆ ಏರಿತು.

 

ಒಂದು ಮಗು, ರಕ್ಷಿತ ಹಾಗು ಕೇಳಿದ್ದನ್ನು ಇಲ್ಲ ಎನ್ನದೆ ಕೊಡಿಸುವ ವಾತಾವರಣದಲ್ಲಿ ಬೆಳೆದದ್ದೇ ಆದರೆ, ಅದು " ಅಧಿಕಾರಯುತ ಮನಸ್ಥಿತಿ "ಯನ್ನು ಬೆಳೆಸಿಕೊಳ್ಳುತ್ತದೆ ಹಾಗು ಪ್ರತಿಯೊಂದು ವಿಷ್ಯದಲ್ಲೂ ತನ್ನನ್ನು ಮೊದಲನೆಯ ಸ್ಥಾನಕ್ಕೇರಿಸಿಕೊಳ್ಳಲು ಯಾವಾಗಲೂ ಪ್ರಯತ್ನಪಡುತ್ತದೆ. ತನ್ನ ತಂದೆ ತಾಯಿಯ ಶ್ರಮವನ್ನು ಪರಿಗಣಿಸುವುದಿಲ್ಲ. ಅದೇ ಮಗು ಬೆಳೆದು, ದುಡಿಯಲು ಶುರುಮಾಡಿದನೆಂದರೆ, ಎಲ್ಲರೂ ತನ್ನ ಮಾತನ್ನೆ ಕೇಳಬೇಕೆಂದು ಬಯಸುತ್ತಾನೆ. ಇನ್ನು ಎತ್ತರದ ಹುದ್ದೆಯನ್ನಲಂಕರಿಸಿದನೆಂದರೆ, ತನ್ನ ಕೈಕೆಳಗಿರುವ ಕಾರ್ಮಿಕರ ನೋವುಗಳನ್ನು ಗಾಳಿಗೆ ತೂರಲು ಶುರುವಿಡುತ್ತಾನೆ. ತನ್ನ ತಪ್ಪುಗಳಿಗೂ ಇತರರನ್ನು ದೂಷಿಸಲು ಪ್ರಾರಂಭಿಸುತ್ತಾನೆ.

ಇಂತಹ ವ್ಯಕ್ತಿಗಳು, ಶೈಕ್ಷಣಿಕವಾಗಿ ಉನ್ನತವಾಗಿದ್ದರೂ, ಯಶಸ್ಸನ್ನು ಗಳಿಸಿದ್ದರೂ ಕೊನೆಯದಾಗಿ ಕಾರ್ಯಸಾಧನೆಯ ಫಲವನ್ನು ಅನುಭವಿಸುವುದಿಲ್ಲ. ಮತ್ತಷ್ಟು ಅತೃಪ್ತ ಹಾಗು ದ್ವೇಷದಿಂದ ಕೂಡಿದ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುತ್ತಾರೆ.

ನಾವು ಈ ತರಹದ ರಕ್ಷಣೆ ನೀಡುವ ತಂದೆ ತಾಯಿಯರಾದಲ್ಲಿ, ನಿಜವಾಗಲೂ ನಾವು ಅವರಿಗೆ ಸರಿಯಾದ ಪ್ರೀತಿಯನ್ನು ತೋರಿಸುತ್ತಿದ್ದೇವೆಯೆ? ಅಥವಾ ಅವರನ್ನು ನಮ್ಮ ಕೈಯ್ಯಾರೆ ಹಾಳುಮಾಡುತ್ತಿದ್ದೇವೆಯೆ...? ಯೋಚಿಸಿ ನೋಡಿ.

ನೀವು ನಿಮ್ಮ ಮಗುವನ್ನು ದೊಡ್ಡ ಬಂಗಲೆಯಲ್ಲೆ ಬೆಳೆಸಬಹುದು, ಒಳ್ಳೆಯ ಊಟವನ್ನು ಕೊಡುತ್ತಿರಬಹುದು, ಎಲ್ಲ ರೀತಿಯ ಮನರಂಜಕ ವಸ್ತುಗಳನ್ನು ಕೊಡಿಸಬಹುದು, ಆದರೆ, ಅವರಿಗೆ ನೀವು ಪಡುತ್ತಿರುವ ಕಷ್ಟ ಸುಖಗಳ ಪರಿಚಯ ಮಾಡಿಕೊಡಿ, ಅವರನ್ನು ಸ್ವಲ್ಪ ಮಟ್ಟಿಗೆ ಅನುಭವಿಸಲು ಬಿಡಿ.

ಊಟದ ನಂತರ ತನ್ನ ತಟ್ಟೆ ಹಾಗು ಲೋಟಗಳ ಜೊತೆಗೆ ಅಣ್ಣ/ತಮ್ಮ ಮತ್ತು ಅಕ್ಕ/ತಂಗಿಯ ತಟ್ಟೆ ಲೋಟಗಳನ್ನು ತೊಳೆಯಲು ಬಿಡಿ. ಇದರ ಅರ್ಥ, ನೀವು ಒಬ್ಬ ಕೆಲಸದಾಕೆಯನ್ನು ಗೊತ್ತುಮಾಡಿಕೊಳ್ಳಲಾಗದವರು ಎಂದಲ್ಲ, ಬದಲಾಗಿ ನಿಮ್ಮ ಮಕ್ಕಳನ್ನು ಸರಿಯಾದ ರೀತಿ ನೀತಿಗಳನ್ನು ಕಲಿಸುತ್ತಾ ಬೆಳೆಸುವುದೆಂದು.

 

ಮುಖ್ಯವಾಗಿ ನಿಮ್ಮ ಮಗುವಿಗೆ, ಪ್ರಶಂಸೆಯ ಮಹತ್ವ, ಕಷ್ಟ ಸುಖಗಳ ಅರಿವು ಹಾಗು ಇತರರೊಡನೆ ಬೆರೆತು ಕೆಲಸ ಮಾಡುವುದನ್ನು ಹೇಳಿಕೊಡಿ. ಎಲ್ಲರನ್ನೂ ಪ್ರೀತಿಯಿಂದ ಕಾಣುವುದನ್ನು ಕಲಿಸಿ. ಒಬ್ಬ ಉತ್ತಮ ವ್ಯಕ್ತಿಯನ್ನಾಗಿ ರೂಪುಗೊಳಿಸಿ.

Rating
No votes yet

Comments