ಮರುಕಥನ - ಒಂದು ತುಂಬ ಒಳ್ಳೆಯ ಉರ್ದು ಕಥೆ

ಮರುಕಥನ - ಒಂದು ತುಂಬ ಒಳ್ಳೆಯ ಉರ್ದು ಕಥೆ

ನಾನು ಚಿಕ್ಕವ'ಳಿ'ದ್ದಾಗ ನಮ್ಮ ಮನೆಗೆ ಒಬ್ಬ ದೊಡ್ಡ ಹುಡುಗನು ಬಂದನು. ಅವನ ಆತ್ಮವಿಶ್ವಾಸ, ಧೈರ್ಯ, ವಿಷಯ ಪ್ರತಿಪಾದಿಸಿದ ರೀತಿ ಇವನ್ನೆಲ್ಲ ಕಂಡು ನನ್ನ ತಂದೆ ಪ್ರಭಾವಿತರಾದರು. ಈ ರೀತಿಯಾಗಿ ಇಕ್ಬಾಲ ಮಿಯಾ ನಮ್ಮಲ್ಲಿ ಬರಹೋಗುವುದು ಆರಂಭವಾಯಿತು. ಆತ ಇಡೀ ಮನೆಯವರಿಗೆ ಬೇಕಾದವನಾಗಿದ್ದ.
ಒಂದು ದಿನ ನಾನು ಒಂದು ಗಿಡದ ಟೊಂಗೆಗೆ ಜೋತು ಬಿದ್ದುದನ್ನು ನೋಡಿ ನನ್ನ ತಾಯಿಗೆ ಅವರು ಹೇಳಿದರು - " ಮುನ್ನಿ ಓದು-ಬರಹ ಮಾಡುತ್ತಿಲ್ಲ , ಯಾವಾಗಲೂ ಆಟದಲ್ಲಿ ಇರುತ್ತಾಳೆ ". ಅದಕ್ಕೆ ತಾಯಿ - " ಇಲ್ಲಿ ಯಾವುದೂ ಶಾಲೆ ಇಲ್ಲವಲ್ಲ' ಎಲ್ಲಿ ಓದಬೇಕು ? " ಎಂದರು. ಆಗ ಇಕ್ಬಾಲಭಾಯಿ ವಾಲಂಟೀರ್ ಆಗಿ ಬಿಟ್ಟರು.: .. " ನಾನು ಅವಳಿಗೆ ಪಾಠ ಹೇಳುತ್ತೇನೆ". ಹೀಗೆ ನನಗೆ ಐದಾರು ತಿಂಗಳು ಪಾಠ ಹೇಳಿದರು. ಆಗ ನನ್ನ ತಂದೆಗೆ ಅಲ್ಲಿಂದ ವರ್ಗ ಆಯಿತು.
ಎಷ್ಟೋ ವರ್ಷಗಳ ನಂತರ ಅವರ ಭೆಟ್ಟಿ ಆಯಿತು. ಆಗ ನಾನು ಕಾಲೇಜು ಕಲಿಯುತ್ತಿದ್ದೆ. ಅವರ ಬಟ್ಟೆಯಿಂದ ಅವರ ಆಥಿ೯ಕ ಪರಿಸ್ಥಿತಿ ಚೆನ್ನಾಗಿಲ್ಲ ಎಂದು ತಿಳಿಯುತ್ತಿತ್ತು. ಅವರು "ಕಾನ್ಪುರದಲ್ಲಿ ಕೆಲಸ ಸಿಕ್ಕಿದೆ" ಎಂದು ಹೇಳಿದರು.
ಹತ್ತು ವರುಷಗಳ ನಂತರ ನಾನು ಲಂಡನ್ ನ ಬಿಬಿಸಿಯ
ಉರ್ದು ಸೆಕ್ಷನ್ ನಲ್ಲಿ ಕುಳಿತಿದ್ದೆ. ಅಲ್ಲಿ ಇಕಬಾಲ ಬಖ್ತ ಸಕ್ಸೇನಾ ಪ್ರತ್ಯಕ್ಷರಾದರು. ಅವರು ಬಹು ಹಿಂದೆಯೇ ಕಾನ್ಪುರದ ಕೆಲಸವನ್ನು ಕಳೆದುಕೊಂಡಿದ್ದರು. ಅನಂತರ ಇಡೀ ದೇಶವನ್ನು ನೌಕರಿಗಾಗಿ ಅಲೆದು ಬೇಸತ್ತಿದ್ದರು . ತಮ್ಮ ಅದೃಷ್ಟ ಪರೀಕ್ಷಿಸಲು ತಮ್ಮ ಪೂರ್ವಜರ ಮನೆ ಮಾರಿ ಲಂಡನ್ ತಲುಪಿದ್ದರು.
ಅವರು ಇಲ್ಲಿ ಏನು ಮಾಡುತ್ತಿದ್ದಾರೆ ಎಂದು ಯಾರಿಗೂ ಸರಿಯಾಗಿ ಗೊತ್ತಿರಲಿಲ್ಲ . ಒಂದು ಸುಪ್ರಸಿದ್ಧ ಸಂಸ್ಥೆಯ ಹೆಸರು ಹೇಳಿ ಅಲ್ಲಿ ಎಕನಾಮಿಕ್ಸ್ ಕಲಿಯುತ್ತಿರುವುದಾಗಿ ಹೇಳಿದರು.
ಆದರೆ ಅವರು ಹಿಂದುಸ್ಥಾನಿ ಮತ್ತು ಪಾಕಿಸ್ತಾನಿ ವಿದ್ಯಾರ್ಥಿಗಳ ಸಮುದಾಯದಲ್ಲಿ ಮಹತ್ವಪೂರ್ಣ ಸ್ಥಾನ ಪಡೆದಿದ್ದುದು ನನಗೆ ತಿಳಿದುಬಂತು. ಯಾವದೇ ಗಲಾಟೆ , ಉತ್ಸವ, ಮೆರವಣಿಗೆ , ಹಬ್ಬ-ಹರಿದಿನ ಅವರಿಲ್ಲದೆ ಪೂಣ೯ವಾಗುತ್ತಿರಲಿಲ್ಲ. ಹಾಲ್ ಸಿಂಗರಿಸುತ್ತಿದ್ದರು, ಮೈಕ್ ವ್ಯವಸ್ಥೆ ನೋಡಿಕೊಳ್ಳುತ್ತಿದ್ದರು, ನಾಟಕ ಇದ್ದರೆ ನಟ- ನಟಿಯರನ್ನು ಹುಡುಕುತ್ತಿದ್ದರು, ಔತಣಕೂಟ ಇದ್ದರೆ ಡೈನಿಂಗ್ ಹಾಲ್ ವ್ಯವಸ್ಥೆಗೆ ನಿಂತಿರುತ್ತಿದ್ದರು . ಕೆಲವೊಮ್ಮೆ ಯಾವುದೋ ಪೇಟೆಯಲ್ಲಿ ಜನರಿಗೆ ಭವಿಷ್ಯ ಹೇಳುತ್ತಲೋ , ಭಾರತದ ಗಿಡಮೂಲಿಕೆ ಮಾರುತ್ತಲೋ ಕೂತಿರುತ್ತಿದ್ದರು. ಒಮ್ಮೆ ಶ್ರೀಮಂತ ಬಡಾವಣೆಯ ಭವ್ಯ flat ನಲ್ಲಿ ವಾಸಿಸುವುದು ತಿಳಿದು ಬಂದರೆ ಇನ್ನೊಮ್ಮೆ ಕೂಲಿಗಳ ಚಹಾದಂಗಡಿಯಲ್ಲಿ ಕಾಣಿಸುತ್ತಿದ್ದರು , ಅವರು ಕವಿತೆಗಳನ್ನೂ ಬರೆಯುತ್ತಿದ್ದರು. ಅವರು ಎಲ್ಲ ವಿಷಯಗಳಲ್ಲೂ ಪರಿಣತರಾಗಿದ್ದರು. ಮಿತ್ರರ ಸಭೆ - ಸಮ್ಮಿಳನಗಳಲ್ಲಿ ಯಾವುದೇ ಆಮಂತ್ರಣ ಬಯಸದೇ ಭಾಗವಹಿಸುತ್ತಿದ್ದರು. ಯಾವ ಕೆಲಸಕ್ಕೂ ಹಿಂಜರಿಯುತ್ತಿರಲಿಲ್ಲ. ಅವರು ಎಂದೂ ಕುಡಿಯುತ್ತಿರಲಿಲ್ಲ. ವಾರಕ್ಕೊಂದು ದಿನ ಮಾಂಸ ತಿನ್ನುತ್ತಿರಲಿಲ್ಲ.
ಒಂದು ದಿನ ದಾರಿಯಲ್ಲಿ ಒಂದು ಹೂಗುಚ್ಚದೊಡನೆ ಸಿಕ್ಕರು. ಆಸ್ಪತ್ರೆಯಲ್ಲಿ ಇದ್ದ ಒಬ್ಬ ರಾಯಭಾರಿಯನ್ನು ನೋಡಲು ಹೊರಟಿದ್ದರು. ನನ್ನನ್ನೂ ಜತೆಗೆ ಕರೆದುಕೊಂಡು ಹೋದರು. " ಇವರೆಲ್ಲ ನಮ್ಮ ಮಿತ್ರರು, ಒಳ್ಳೆಯ ಜನ " ಎಂದು ಹೇಳಿದರು. ಅಲ್ಲಿ ರಾಯಭಾರಿಯ ಮಗಳು ಬಂದಳು. ಅವಳು ಅತ್ಯಂತ ತಲೆತಿರುಕಳಾಗಿದ್ದಳು, ಭಾರತೀಯ ವಿರೋಧಿ ಎಂದು ಪ್ರಸಿದ್ಧಳಾಗಿದ್ದಳು. ಅವಳು ಆಸ್ಪತ್ರೆಯಲ್ಲಿ ಕೂಡ ರಾಜಕೀಯ ಮಾತನಾಡಿದಳು.
"ಹಿಂದೂಸ್ಥಾನಕ್ಕೆ ಬಯ್ಯವುದರಿಂದ ಅವಳಿಗೆ ಸಮಾಧಾನ ಆಗುತ್ತಿದ್ದರೆ ಅದಕ್ಕೆ ನಾನೇನು ಮಾಡಲಿ ? ಇದರಲ್ಲಿ ನನ್ನ ತಪ್ಪೇನಿದೆ? " ಎಂದು ಇಕ್ಬಾಲಭಾಯಿ ಹೇಳಿದರು.
ನಂತರ ಇನ್ನೊಂದು ಸಲ ಅವಳು ಸಿಕ್ಕಾಗ - "ಇಕಬಾಲ ಸಾಹೇಬ ಶ್ರೇಷ್ಠ ವ್ಯಕ್ತಿಯಾಗಿದ್ದಾರೆ. ಇಂದಿನ ಶಿಯಾಗಳಲ್ಲಿ ತಮ್ಮ ಧರ್ಮದ ಬಗ್ಗೆ ಇಷ್ಟೊಂದು ಕಾಳಜಿ, ಅಭಿಮಾನ ಎಲ್ಲಿದೆ? "
ಮರುದಿನ ಇಕಬಾಲ ಭಾಯಿ ಸಿಕ್ಕಾಗ ನಾನು ಕೇಳಿದೆ - " ಇಕ್ಬಾಲ ಭಾಯಿ, ನೀವು ಮೋಸ ಮಾಡಲಾರಂಭಿಸಿದ್ದೀರಾ? ಅವಳಿಗೆ ನೀವು ಮುಸಲ್ದಾನರೆಂದು ಘೋಷಿಸಿಕೊಂಡಿರೇನು?"
ಅವರ ಉತ್ತರ ಹೀಗಿತ್ತು - "ನೋಡು ಮುನ್ನಿ, ಅವಳ ಭೇಟಿ ಯಾದಾಗ ನನ್ನ ಹೆಸರು ಕೇಳಿದಳು, ಇಕ್ಬಾಲ ಅಂತ ಹೇಳಿದೆ, ಅವಳು ನಾನು ಮುಸಲ್ಮಾನ ಎಂದು ತಿಳಿದಳು. ನನ್ನೆದುರಿಗೆ ಹಿಂದುಗಳ , ಹಿಂದುಸ್ತಾನದ ಬಗ್ಗೆ ಅವಹೇಳನದ ಮಾತಾಡಿದಳು. ಹೀಗಿರಲು ನಾನು ಒಂದು ವೇಳೆ ಹಿಂದೂ ಅಂತ ಹೇಳಿದ್ದರೆ ಅವಳಿಗೆ ನಾಚಿಕೆ , ಅವಮಾನ ಆಗುತ್ತಿತ್ತು. ಇಷ್ಟಕ್ಕೂ ಇದರಲ್ಲಿ ನನ್ನ ತಪ್ಡೇನಿದೆ? ನನ್ನ ಮನೆತನದಲ್ಲಿ ನೂರಾರು ವರ್ಷದಿಂದ ಪಾರಸೀ ಹೆಸರು ಇಡುತ್ತ ಬಂದಿದ್ದಾರೆ. ಒಂದು ವೇಳೆ ನಾನು ಮುಸಲ್ಮಾನ ಎಂದು ಹೇಳಿಕೊಂಡರೆ ಜಗತ್ತಿಗೇನು ಹಾನಿ? ಪ್ರಳಯ ಉಂಟಾಗುವುದೇ? "
ಇನ್ನೊಂದು ಸಲ ನನ್ನನ್ನು ಆಸ್ಟ್ರೇಲಿಯನ್ ವಿದ್ಯಾರ್ಥಿಗಳ ಉತ್ಸವಕ್ಕೆ ನನ್ನನ್ನು ಆಮಂತ್ರಿಸಿದರು. " ಅವಶ್ಯ ಬರಬೇಕು , ಅವರು ತಮ್ಮನ್ನು ನಿರಾಸಕ್ತ ಬಣ್ಣವಿಲ್ಲದ ಜನರೆಂದು ಬೇರೆಯವರು ತಿಳಿದಿದ್ದಾರೆಂದು ನೊಂದುಕೊಂಡಿದ್ದಾರೆ. ಪಾಪ, ಅವರ ಮನಸ್ಸಿಗೆ ನೋವಾಗದಂತೆ ನಾವು. ಉಳಿದವರು ನಡೆದುಕೊಳ್ಳಬೇಕಾದುದು ಅವಶ್ಯ " ಎಂದರು.
ಮಿಸೆಸ್ ವಿಂಗ್ ಫೀಲ್ಡ್ ನಾನು ಇದ್ದ ಮನೆಯ ಒಡತಿ. ವಿಧವೆ. ಅವಳು ಒಂದು ಸಲ ನನ್ನಲ್ಲಿ ಕೇಳಿಕೊಂಡಳು - ನಿನಗೆ ಒಳ್ಳೆಯ ಜಂಟಲ್ ಮನ್ ಗೆಳೆಯರಿದ್ದಾರೆ , ಅವರಲ್ಲಿ ಯಾರೊಬ್ಬರೊಂದಿಗೆ ನನ್ನ ಮದುವೆ ಮಾಡಿಸು.
ಅವಳು ಒಳ್ಳೆಯ ಮನೆತನದ , ಶ್ರೇಷ್ಠ ವಗ೯ದ ಜನರಿಗೆ ಮಾತ್ರ ಕೋಣೆಗಳನ್ನು ಬಾಡಿಗೆ ಕೊಡುತ್ತಿದ್ದಳು. ಇಕಬಾಲರು ನನ್ನ ಮೂಲಕ ಅಚ್ಚಮ್ಮ ಕೊಸೊಕುಟ್ಟಿ ಎಂಬ ಹುಡುಗಿಗೆ ಕೋಣೆಯನ್ನು ಕೊಡಿಸಿದರು.
ಒಂದು ರಾತ್ರಿ ಏನೋ ಕೂಗಾಟ ಕೇಳಿಸಿ ಹೊರಗೆ ಬಂದೆ.
ಮಿಸೆಸ್ ವಿಂಗ್ ಫೀಲ್ಡ್ ಕೂಗಾಡುತ್ತಿದ್ದಳು , ಇಕ್ಬಾಲರು ತಲೆ ತಗ್ಗಿಸಿ ನಿಂತಿದ್ದರು. 'ಈತ ನಡುರಾತ್ರಿಯಲ್ಲಿ ಕೊಸೊಕುಟ್ಟಿಯ ಕೋಣೆಯಲ್ಲಿ ಏನು ಮಾಡುತ್ತಿದ್ದ ? ಇದು ಸಭ್ಯ ಜನರು ಇರುವ ಸ್ಥಳ' ಎಂದೆಲ್ಲ ಕೂಗಾಡುತ್ತಿದ್ದಳು. ಇಕಬಾಲಭಾಯಿ ಯಂಥ ಸಭ್ಯ ಸುಸಂಸ್ಕೃತ ವ್ಯಕ್ತಿ ಇಂಥಾ ಹಲ್ಕ ಮಾತನ್ನು ಕೇಳಬೇಕಾಗಿ ಬಂದಿತ್ತು. ಆದರೂ ಎಲ್ಲವನ್ನು ಸಹಿಸಿ ಶಾಂತರಾಗಿದ್ದರು.
ನಿಜ ಸಂಗತಿ ಏನಿತ್ತಂದರೆ ಅವಳಿಗೆ ಜ್ವರ ಬಂದಿತ್ತು , ಇಕಬಾಲರಿಗೆ Phone ಮಾಡಿದ್ದಳು. ಅವರು ಅವಳಿಗಾಗಿ ಔಷಧಿ ತಂದಿದ್ದರು. ಆಕೆಗೆ ಹಣದ ಅವಶ್ಯಕತೆ ಇರಬಹುದು ಎಂದು ಒಂದು ಕವರ್ ಅನ್ನು ಅವಳಿಗಾಗಿ ಬಿಟ್ಟು ಹೋದರು. ಅದನ್ನು ತೆರೆದು ನೋಡಿದೆ. ಅದರಲ್ಲಿ ಹತ್ತು ಪೌಂಡ್ ಗಳ ನೋಟುಗಳಿದ್ದವು . ಈ ಹಣವನ್ನು ಅವರು ಏನೇನು ಕೆಲಸ ಮಾಡಿ ಸಂಪಾದಿಸಿದ್ದರೋ ಏನೋ. ಹಳೆಯ ರೇನ್ ಕೋಟು ತೊಟ್ಟು ಅವರು ಆ ನಿರ್ಜನ ರಾತ್ರಿಯಲ್ಲಿ ಬಡಬಡ ಹೋಗುವುದನ್ನು ನೋಡಿದೆ.
ನಂತರ ಅಚ್ಚಮ್ಮನ ಆರೋಗ್ಯ ಸುಧಾರಿಸಿತು. ಆದರೆ ಅವಳು ತನಗಾಗಿ ಓಡಾಡಿದ, ಕಷ್ಟಪಟ್ಟ , ಅಪಮಾನ ಸಹಿಸಿದ ಇಕಬಾಲ ಭಾಯಿಯನ್ನು ಮರೆತು ಬಿಟ್ಟಿದ್ದಳು. ಆದರೂ ಅವರು ತಮ್ಮ ಒಳ್ಳೆಯ ಗುಣಗಳಿಂದಾಗಿ ಎಲ್ಲ ರೀತಿಯ ಸಂಬಂಧಗಳನ್ನೂ ನಿಭಾಯಿಸುತ್ತಿದ್ದರು.
ಸ್ವಲ್ಪ ಸಮಯದ ನಂತರ ಒಬ್ಬ ಸಿಂಹಳೀಯನ ಜತೆ ಅದೇ ಲ್ಯಾಂಡ್ ಲೇಡಿಯ ಮದುವೆಯನ್ನು ಇಕಬಾಲರೇ ಮಾಡಿಸಿದ ಸಂಗತಿ ತಿಳಿದು ಬಂದಿತು! ಅವರನ್ನು ವಿಚಾರಿಸಿದಾಗ ಅವರು ಹೇಳಿದರು - "ನೋಡು ಮುನ್ನೀ , ಅವತ್ತು ಆಕೆಯ ವತ೯ನೆಯನ್ನು ನೋಡಿದಾಗ ಅವಳು frustration ಮತ್ತು ಒಂಟಿತನದಿಂದ ಬಳಲುತ್ತಿದ್ದಾಳೆಂದು ನನಗನ್ನಿಸಿತು. ಆಗಲೇ ಅಂದುಕೊಂಡೆ, ಆಕೆಗೆ ಸಹಾಯ ಮಾಡಲೇಬೇಕೆಂದು. ಆಕೆ ಕಪ್ಪು ಮನುಷ್ಯನನ್ನು ಕೂಡ ಮದುವೆ ಆಗಲು ಸಿದ್ಧಳೆಂದು ನೀನು ಹೇಳಿದ್ದಿ: ನಾನು ಕೊಲಂಬೋದ ಆ ಮನುಷ್ಯನನ್ನು ಬಲ್ಲವನಾಗಿದ್ದೆ, ಅವನು ಶ್ರೀಮಂತ ವಿಧವೆಯನ್ನು ಹುಡುಕುತ್ತ ಇದ್ದ. ತುಂಬ ಸಾತ್ವಿಕ ಮತ್ತು ಬಡವ. ಸರಿ , ಇಬ್ಬರಿಗೂ ಒಳ್ಳೆಯದಾಯಿತು. ಇಬ್ಬರ ಜೀವನವೂ ಸಂತೋಷದಾಯಕವಾಯಿತು. ಇನ್ನೇನು ಬೇಕು? " ಎಂದು ಕೇಳಿದಾಗ ಅವರ ಹೃದಯ ಶ್ರೀಮಂತಿಕೆಯ ಮುಂದೆ ಮೂಕವಿಸ್ಮಿತಳಾರೆ.
ಪ್ರಾಗ್ ನಲ್ಲಿ ಒಂದು ಯುವ ಸಮ್ಮೇಳನ ನಡೆಯಲಿತ್ತು, ಆದರೆ ಪಾಕಿಸ್ತಾನಿ ವಿದ್ಯಾರ್ಥಿಗಳಿಗೆ ಅಲ್ಲಿಗೆ ಹೋಗಲು ಅನುಮತಿ ಸಿಕ್ಕಿರಲಿಲ್ಲ. " ಅಲ್ಲಿ ಜಗತ್ತಿನ ಎಲ್ಲ ದೇಶಗಳ ಪ್ರಾತಿನಿಧ್ಯ ಇರುತ್ತದೆ, ಕೇವಲ ಪಾಕಿಸ್ತಾನದ್ದು ಮಾತ್ರ ಇರುವುದಿಲ್ಲ " ಎಂದು ಅವರು ಬಲುದುಃಖಿತರಾದರು. ಕೂಡಲೇ ಇಕಬಾಲ ಭಾಯಿ ಹೇಳಿದರು - "ಖಾನ್ ಭಾಯಿ, ಮನಸ್ಸು ಚಿಕ್ಕದು ಮಾಡಿಕೊಳ್ಳಬೇಡಿ. ಪಾಕಿಸ್ತಾನವನ್ನ ನಾನು ಪ್ರತಿನಿಧಿಸುತ್ತೇನೆ...", ಅದನ್ನು ಅವರು ತುಂಬ ಯಶಸ್ವಿಯಾಗಿ ಆತ್ಮವಿಶ್ವಾಸದಿಂದ ಮಾಡಿದರು.
ಅಲ್ಲಿಂದ ಅವರು ಪ್ರಯೋಗಶಾಲೆಗಳಿಗೆ ಹಾವು , ಮಂಗಗಳ ಪೂರೈಕೆಯ ವ್ಯವಹಾರ ಆರಂಭಿಸಿ ಅದಕ್ಕಾಗಿ ಅಮೇರಿಕಕ್ಕೆ ಹೊರಡು ಹೋದರು.
ಒಂದು ದಿನ ನನಗೆ ಅಂಚೆಯ ಮೂಲಕ ನನಗೆ ಎಡ್ವಿನಾಳ ಕಾಗದ ಬಂದಿತು. ಅವಳು ಬರೆದಿದ್ದಳು - " ನನ್ನನ್ನು ಇಡೀ ಜಗತ್ತು ಕೈಬಿಟ್ಟಿದೆ, ನಾನು ಆತ್ಮಹತ್ಯೆಗೂ ಪ್ರಯತ್ನಿಸಿದೆ. ಅದರಲ್ಲಿ ವಿಫಲಳಾದೆ. ವರುಷಗಟ್ಟಲೇ ಆಸ್ಪತ್ರಯಲ್ಲಿ ಕೊಳೆಯಬೇಕಾಯಿತು. ಆಗ ಮಿಸ್ಟರ್ ಸಕ್ಸೇನಾ ಪ್ರತಿವಾರ ಬಂದು ಗಂಟೆಗಟ್ಟಲೆ ಜತೆಗೆ ಇದ್ದು 'ಜೀವ೦ತವಿರಬೇಕಾದರೆ ಧೈರ್ಯ ಬಿಡಬಾರದು, ಇದು ತುಂಬ ಅವಶ್ಯ' ಎಂದು ಹೇಳುತ್ತ ನನ್ನಲ್ಲಿ ಜೀವಂತವಿರುವ ಆಶೆ ತುಂಬಿದರು. ಈಗ ಅವರು ಎಲ್ಲಿದ್ದಾರೆ ಎಂಬುದೇ ನನಗೆ ಗೊತ್ತಿಲ್ಲ, ಅವರಿಗೆ ನನ್ನ ಕೃತಜ್ಞತೆ , ವಂದನೆಗಳನ್ನು ತಿಳಿಸಲೆಂದೇ ಈ ಪತ್ರ ನಿಮಗೆ ಬರೆಯುತ್ತಿದ್ದೇನೆ"
ಆದರೆ ಅವರು ಎಲ್ಲಿದ್ದಾರೆ ಎಂಬುದು ನನಗೂ ಗೊತ್ತಿರಲಿಲ್ಲ. ನಂತರ ತಿಳಿದು ಬಂದ ಪ್ರಕಾರ ಅವರ ಹಾವುಗಳ ವ್ಯವಹಾರ ಕೂಡ ಅವರ ಕೈಬಿಟ್ಟಿತ್ತು. ಅವರು ಬೇರೆ ಬೇರೆ ಪ್ರಕಾರದ ನೌಕರಿ, ಕೂಲಿ ಕೆಲಸಗಳನ್ನು ಮಾಡುತ್ತ ಕ್ಯಾಲಿಫೋರ್ನಿಯಾ ತಲುಪಿದರು. ಅಲ್ಲಿ ಹೊಲಗಳಲ್ಲಿ ಕೆಲಸ ಮಾಡಿದರು. ಹಾಲಿವುಡ್ ಗೆ ಹೋದರು. ಅಲ್ಲಿ ಚಿಕ್ಕ ಪುಟ್ಟ ಪಾತ್ರಗಳನ್ನು ಮಾಡಿದರು - ಅಲ್ಲಿ ಒಬ್ಬ ಬಲು ಶ್ರೀಮಂತ ಆದರೆ ಮುಪ್ಪಿನ ವಿಧವೆಯ ಪರಿಚಯ ಆಯಿತು. ಆಕೆ ಬೆವರ್ಲಿ ಹಿಲ್ಸ್ ನ ಭವ್ಯ ಬಂಗಲೆಯಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದಳು. ಇಕ್ಬಾಲಭಾಯಿ ಅವಳನ್ನು ತುಂಬ ಅನುಕಂಪದಿಂದ, ಪ್ರೀತಿಯಿಂದ ಮಾತನಾಡಿಸಿ ಆಕೆಯ ಆರೋಗ್ಯ ವಿಚಾರಿಸುತ್ತಿದ್ದರು. ಕೊನೆಗೊಂದು ದಿನ ಆಕೆ ಅವರನ್ನು ತನ್ನಲ್ಲಿಯೇ ಇರಬೇಕೆಂದು ಒತ್ತಾಯಿಸಿದಳು . ಈಗ ಅವರು ಆ ಶ್ರೀಮಂತ ಏರಿಯಾದ ಭವ್ಯ ಬಂಗಲೆಯಲ್ಲೇ ಇದ್ದಾರೆ. ಬಹುಶಃ ಅವಳ ಆಸ್ತಿಗೆಲ್ಲ ಇವರೇ ಉತ್ತರಾಧಿಕಾರಿಯಾಗಲಿದ್ದಾರೆ!
ಆದರೆ ಆ ರೀತಿ ಆಗಲಿಲ್ಲ. ಆ ಮುದುಕಿ ತನ್ನ ಆಸ್ತಿಯನ್ನು ಬೇರಾರಿಗೋ ಬರೆದು ಸತ್ತುಹೋದಳು . ಇಕ್ಬಾಲರು ಹೊಟೆಲ್ಲಿನ ಸಪ್ಲೈಯರ್ ಕೆಲಸಕ್ಕೆ ಸೇರಿಕೊಂಡರು.
ಇವತ್ತು ಶಾರದಾ ಮೆಹತಾ ಸಿಕ್ಕಳು. ಈಕೆ ಧಾರ್ಮಿಕ ಮನೋಭಾವದವಳು. ಯಾವುದೋ ಸತ್ಸಂಗಕ್ಕೆ ಹೊರಟಿದ್ದಳು. ನನ್ನನ್ನು ಜತೆಗೆ ಕರೆದುಕೊಂಡು ಹೋದಳು. ಒಂದು ಭವ್ಯ ಬಂಗಲೆಗೆ ಹೋದೆವು. ಗುರುಗಳ ದರ್ಶನಕ್ಕೆ ಕಾಯಬೇಕಾಯಿತು. ಗುರುಗಳನ್ನು ನಾನು ಗುರುತಿಸಿದೆ. ಅವರು ಬೇರೆ ಯಾರೂ ಆಗಿರಲಿಲ್ಲ, ನಮ್ಮ ಇಕಬಾಲ ಬಖ್ತ ಸಕ್ಸೇನಾರೇ.
ಅವರು ನನ್ನನ್ನು ಗುರುತಿಸಲಿಲ್ಲ, ಗುರುತು ಸಿಕ್ಕರೂ ಪ್ರಕಟಿಸಲಿಲ್ಲ. ಶಾರದಾಳ ಹಾಗೆ ನಾನೂ ಅಪಾರ ಶ್ರದ್ದೆಯಿಂದ ಅವರ ಪಾದವನ್ನು ಸ್ಪರ್ಶಿಸಿದೆ, ಶಾರದಾಳಿಗೆ ಇದನ್ನು ನೋಡಿ ಆಶ್ವರ್ಯವಾಯಿತು.
ಗುರುಗಳು ನನಗೆ ಮೌನವಾಗಿಯೇ ಆಶೀವಾ೯ದ ಮಾಡಿದರು, ಮತ್ತು ತಮ್ಮ ಧ್ಯಾನವನ್ನು ಮುಂದುವರೆಸಿದರು. ನಾವು ಹೊರಗೆ ಬಂದೆವು.
ನಾನು ಅಂದುಕೊಂಡೆ- ನಾನು ಒಂದು ವೇಳೆ ಅವರನ್ನು ಕೇಳಿದ್ದರೆ - "ಇಕಬಾಲಭಾಯಿ , ಈ ಸಲ ಇಷ್ಟೊಂದು ದೊಡ್ಡದಾದ ಮೋಸ ಏಕೆ ಮಾಡಿದಿರಿ? " . ಆಗ ಅವರು ಹೇಳುತ್ತಿದ್ದರು -
"ನೋಡು ಮುನ್ನಿ ...... ಜಗತ್ತು ಶಾಂತಿಯನ್ನು ಅರಸಿ ಹುಚ್ಚಾಗುತ್ತಿದೆ. ... ನಾನು ಈ ವೇಷದಲ್ಲಿ ಕೆಲ ದುಃಖಜೀವಿಗಳಿಗೆ ಕೊಂಚ ಶಾಂತಿ, ಸಮಾಧಾನ ಕೊಡಲು ಸಾಧ್ಯವಾಗುವುದಾದರೆ ... ಅದರಲ್ಲಿ ತಪ್ಪೇನಿದೆ ? ... ಇದರಲ್ಲಿ ನಾನು ಕಳೆದುಕೊಳ್ಳುವುದು ಏನಿದೆ? "
(ಇದು ಕುರ್ರತುಲ ಐನ ಹೈದರ ಅವರು ಬರೆದ ಉರ್ದು ಕತೆ - ನಿರ್ಲಿಪ್ತ - ದ ಅನುವಾದದ ಸಂಗ್ರಹ - ಇವರ ಕಥಾ ಸಂಗ್ರಹದ ಕನ್ನಡ ಅನುವಾದ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದ ಜಾಲ ತಾಣದಲ್ಲಿದೆ)

Rating
No votes yet