ಮರೆಯಲಾರದ ಸಣ್ಣ ಕಥೆಗಳು - ೩ : ರಂಗನಹಳ್ಳಿ ರಾಮ

ಮರೆಯಲಾರದ ಸಣ್ಣ ಕಥೆಗಳು - ೩ : ರಂಗನಹಳ್ಳಿ ರಾಮ

ಈ ಹಿಂದೆ ಒಂದೋ, ಎರಡೋ ನೆನಪಿನಲ್ಲುಳಿದ ಕಥೆಗಳ ಬಗ್ಗೆ ಬರೆದಿದ್ದೆ. ಇವತ್ತು ನೆನಪಿಗೆ ಬಂದ ಕಥೆ ಮಾಸ್ತಿ ವೆಂಕಟೇಶಯ್ಯಂಗಾರರ ’ರಂಗನಹಳ್ಳಿ ರಾಮ’.

ಈ ಕಥೆ ಬ್ರಿಟಿಷರ ಕಾಲದ್ದು. ಮೈಸೂರು ಪ್ರಾಂತ್ಯದಲ್ಲಿ ಒಂದೂರು ರಂಗನಹಳ್ಳಿ. ಅಲ್ಲಿನ ಹಬ್ಬಗಳಲ್ಲಿ ಕೋಲಾಟವಾಡುವ ರೂಢಿ ಇತ್ತು. ಇಂಥ ಸಮಯಗಳಲ್ಲಿ ಅವರು ಆಡುತ್ತಿದ್ದಿದ್ದು ’ಕಣ್ಣಾಮುಚ್ಚೇ ಕಾಡೇಗೂಡೇ ರಂಗನಹಳ್ಳಿ ರಾಮನಹಾಡೇ’ ಎನ್ನುವ ಹಾಡಿಗೆ. ಹಾಡಿನ ಪೂರ್ತಿ ಅರ್ಥ ಯಾರಿಗೂ ತಿಳಿದಿರಲಿಲ್ಲ. ಆದರೆ, ಅದು ತಮ್ಮೂರಿನ ಬಗ್ಗೆ ಬರೆದ ಹಾಡು ಎಂದು ಕಿವಿಮಾತಿನಿಂದರಿತಿದ್ದರು.

ಆದರೆ, ರಂಗನಹಳ್ಳಿಯಲ್ಲಿದ್ದಿದ್ದು ರಾಮನ ಗುಡಿಯಲ್ಲ. ಬದಲಿಗೆ ರಂಗನಾಥನ ಗುಡಿ. ಹಾಗಾಗಿ ಇದೊಂದು ಒಗಟಾಗಿಹೋಗಿತ್ತು.

ಆಗ ಆ ಸಮಯದಲ್ಲಿ, ಅಲ್ಲಿದ್ದ ಬ್ರಿಟಿಷ್ ಅಧಿಕಾರಿಯೊಬ್ಬ, ಈ ವಿಷಯದಲ್ಲಿ ಆಸಕ್ತಿ ವಹಿಸಿ, ಈ ಹಾಡಿನ ಒಗಟನ್ನು ಬಿಡಿಸಿದ್ದೇ ಈ ಕತೆಯ ತಿರುಳು. ಟಿಪ್ಪೂ ಸುಲ್ತಾನನ ಕಾಲದಲ್ಲಿ ದೇವಸ್ಥಾನಗಳ ಇರುವಿಕೆಗೇ ತೊಂದರೆ ಬಂದ ಸಂದರ್ಭಗಳಲ್ಲಿ, ದೇವರನ್ನು ರಂಗನಾಥ ಎಂದೋ, ನಂಜುಂಡೇಶ್ವರ ಎಂದೋ ಹೇಳಿ, ಅವುಗಳನ್ನು ಉಳಿಸಿಕೊಳ್ಳುತ್ತಿದ್ದ ಸಂದರ್ಭವಿತ್ತಂತೆ. ಅಂತಹ ಕಾಲದಲ್ಲಿ, ರಾಮನ ಮೂರ್ತಿಯನ್ನು ಮುಚ್ಚಿ, ರಾಮನ ಬೆನ್ನ ಹಿಂದೆ ರಂಗನನ್ನು ಸ್ಥಾಪಿಸಿ ದೇವಸ್ಥಾನವನ್ನು ಉಳಿಸಿದ್ದ ಗ್ರಾಮಸ್ಥರು, ಮುಂದಿನ ಪೀಳಿಗೆಯವರಿಗೆ ಅದನ್ನು ತಿಳಿಸಲು ಈ ಒಗಟಿನಂಥ ಕೋಲಾಟದ ಪದವನ್ನು ಕಟ್ಟಿದ್ದರು.

ಒಗಟನ್ನು ಬಿಡಿಸಿ, ರಾಮನ ಮೂರ್ತಿಯನ್ನುಹೊರತಂದಲ್ಲಿಗೆ ಕತೆ ಮುಗಿಯುತ್ತೆ.

ನನಗೆ ಆಸಕ್ತಿ ತಂದ ವಿಷಯವೆಂದರೆ, ಇದರ ತಿರುಳೂ, ಆರ್ಥರ್ ಕಾನನ್ ಡಾಯ್ಲ್ ರ The adventure of Musgrave Ritual ಅನ್ನುವ ಶೆರ್ಲಾಕ್ ಹೋಮ್ಸ್ ಕಥೆಯ ತಿರುಳೂ ಒಂದೇ ರೀತಿಯಾಗಿದೆ. ಮಾಸ್ತಿ ಅವರು ಈ ಕಥೆಯಿಂದ ಪ್ರಭಾವಿತರಾದರೇ? ನನಗೆ ತಿಳಿಯದು.

ಆದರೆ, Musgrave Ritual ಕಥೆಯೇ ಎಡ್ಗರ್ ಆಲ್ಲೆನ್ ಪೋ ನ The Gold Bug ಕತೆಯಿಂದ ಪ್ರಭಾವಿತವಾಗಿದೆ ಎಂದು ವಿಕಿಪಿಡಿಯಾ ಹೇಳುತ್ತದೆ!

ಅಂದಹಾಗೆ, Musgrave Ritual ಮತ್ತು The Gold Bug - ಈ ಎರಡೂ ಒಳ್ಳೆಯ ಕತೆಗಳು. ಮೂಲದಲ್ಲಿ ಸಿಕ್ಕರೆ ಓದಿ ಅನ್ನುವ ಶಿಫಾರಸು ನನ್ನದು :) ಅಲ್ಲದೆ, ಗೋಪಾಲಕೃಷ್ಣ ಅಡಿಗರು The Gold Bug ಕಥೆಯನ್ನು ’ಸುವರ್ಣಕೀಟ’ ಅನ್ನುವ ಹೆಸರಿನಲ್ಲಿ ಕನ್ನಡಕ್ಕೆ ತಂದಿದ್ದಾರೆ. ಅದೂ ಕೂಡ ಬಹಳ ಚೆನ್ನಾಗಿದೆ. ಈ ಅನುವಾದ ಹಿಂದೊಮ್ಮೆ ಕಸ್ತೂರಿಯ ಪುಸ್ತಕವಿಭಾಗದಲ್ಲಿ ಪ್ರಕಟವಾಗಿತ್ತು.

ಜೊತೆಗೆ, ರಂಗನಹಳ್ಳಿ ರಾಮನನ್ನು ಓದಿ ಅಂತ ವಿಶೇಷವಾಗಿ ಹೇಳಬೇಕಿಲ್ಲ ಅಂದ್ಕೋತೀನಿ!

-ಹಂಸಾನಂದಿ

Rating
No votes yet