ಮಳೆ ನಿಂತರು ಮರದ ಹನಿ ಬಿಡದು - 1
ಮುಂಜಾನೆ ಎಂಟಾಗಿರಬಹುದು. ರಾಮ ಹೋದನೆಂದು ಊರಿನಿಂದ ಫೋನ್ ಬಂತು.ಇದು ಒಂದು ಅನೀರೀಕ್ಷಿತ ಘಟನೆಯೆನು ಆಗಿರಲಿಲ್ಲ.9೦ರ ಆಸುಪಾಸಿನಲ್ಲಿ ಜೀವನದ ಕೊನೆಯ ಘಳಿಘೆಗಳನ್ನು ಕಳೆಯುತ್ತಿದ್ದ ರಾಮ, ಶಬರಿ ರಾಮನನ್ನು ಕಾಯ್ದ ಹಾಗೆ ತನ್ನ ಸಾವನ್ನು ಕಾಯುತ್ತಿದ್ದ.ಪ್ರತಿ ಬಾರಿಯು ಊರಿಗೆ ಹೊದಾಗ ನನ್ನೊಡನೆ ಮಾತಾಡುವಾಗ
" ಆಯ್ತು ಗಿರೆಪ್ಪ ಡಣಿ ,ನನ್ನ ಸಂತಿ ಮುಗಿತು , ನಾ ಇನ್ನ ಹೊತಿನಿ " ಎನ್ನುತ್ತಿದ್ದ ರಾಮನನ್ನು ಕೊನೆಯಬಾರಿಗೆ ನೊಡಲು ಊರಿಗೆ ಹೊರಟೆ.
6 ಅಡಿ ಉದ್ದನೆಯ ಆಸಾಮಿಯನ್ನು ಆತನ ಮನೆಯ ಕಟ್ಟೆಯಮೇಲೆ ಕುಡಿಸಿದ್ದರು.ದೇಹವನ್ನು ಬೀಳದಂತೆ ಹಗ್ಗದಿಂದ ಮೆದುವಾಗಿ ಕಿಟಕಿಯ ಸಾಲಾಕೆಗಳಿಂದ ಕಟ್ಟಲಾಗಿತ್ತು. ಢಾಳಗಲ ಹಚ್ಚಿದ ವಿಭೂತಿ ಹಾಗು ನಾ ಯೆಂದೆಂದು ಕಾಣದ ಮೀಸೆ ಬೊಳಿಸಿದ ರಾಮನ ಶವವನ್ನು ಆತನ ಹೆಂಡತಿ ಮಕ್ಕಳು ಸುತ್ತುವರಿದಿದ್ದರು.ರೋಧನ ಮುಗಿಲು ಮುಟ್ಟಿತ್ತು.ನಾವು ಬಂದ ಕೂಡಲೆ ,ರಾಮನ ಹೆಂಡತಿ "ರಾಮ ಏದ್ದೆಳು,ಡಣಿ ಬಂದಾನ ನೋಡು ಏದ್ದೆಳು"ಏಂದು ಅದೆಸ್ಟು ಸಾರಿ ಗೋಗರೆದರು ಈ ಸರ್ತಿ ರಾಮ ಎದ್ದೆಳಲೆ ಇಲ್ಲ.ನನ್ನ ಪಾಲಿಗೆ ಇದು ಕರುಳು ಕಿತ್ತಿಬರುವ ,ಇವತ್ತಿಗೂ ಕಣ್ಣಿಗೆ ಕಟ್ಟಿರುವ ದ್ರಶ್ಯ.
ರಾಮನ ಮೀಸೆ ಇರದೆ ಭಣಗುಟ್ಟುತ್ತಿದ್ದ ಮುಖ,ನನಗೆ ಆತನನ್ನು ಕಳೆದು ಕೊಂಡಸ್ಟೆ ದುಖಃಕ್ಕೀಡುಮಾಡಿತ್ತು.ಸತ್ತ ಮೇಲೆ ಮೀಸೆ ತಗೆಯುವುದು ಒಂದು ಪದ್ಧತಿಯಂತೆ.ಮೀಸೆ ಇರದ ಆತನ ಮುಖವನ್ನು ನೋಡುವುದೆಂದರೆ ನೀರಿನಿಂದ ಈಗಸ್ಟೆ ಹೊರತೆಗೆದ ಮೀನಿನ ಪರಿಸ್ಥಿತಿ ನನ್ನದಾಗಿತ್ತು.ಈ ಇಳಿವಯಸ್ಸಿನಲ್ಲಿ ಆತನ ವ್ಯಕ್ತಿತ್ವಕ್ಕೆ,ವರ್ಛಸ್ಸಿಗೆ ಮೀಸೆ ಬಹಳ ಪರಿಣಾಮಕಾರಿಯಾಗಿದ್ದವು.ಚೂಪಾದ ಮೂಗಿನ ತಳಬದಿಯ ಇಕ್ಕೆಲಗಳಲ್ಲಿ,ಬಲಿತ ಪೊಡವಲಕಾಯಿಯ ಹಾಗೆ ಬೆಳೆದ ಮೀಸೆಯನ್ನು ನೋಡುವುದೆಂದರೆ ನಮಗೆ ಸಂಭ್ರಮವೋ ಸಂಭ್ರಮ.
ಹದಿ ಹರೆಯರ ಕುಡಿ ಮೀಸೆ, ನಡು ವಯಸ್ಸಿನವರ ಸೈಕಲ್ ಹ್ಯಾಂಡಲ್ನಂತಿರುವ ಮೀಸೆಯನ್ನು ಕಂಡು ಬೆಜಾರ್ ಆಗಿದ್ದ ನಮಗೆ,ರಾಮನ ರಾವಣನಂತಿರುವ ಮೀಸೆಗಳು ತುಂಬಾ ಮುದ ನೀಡುತ್ತಿದ್ದವು.ಪ್ರಾಯಃ ರಾವಣನ ಹತ್ತು ತಲೆಗಳ ಹತ್ತು ಮೀಸೆಗಳನ್ನು ಒಂದು ಗೂಡಿಸಿದಾಗ ಮೂಡಿದ ಮೀಸೆಯಂತೆ,ನಮ್ಮ ರಾಮನ ಮೀಸೆ ಆತನ ಮುಖದಲ್ಲಿ ರಾರಾಜಿಸುತ್ತಿತು.ವೊಮ್ಮೆ ಅವುಗಳನ್ನು ತಿರುವಿ ತಿಡಿದನೆಂದರೆ ಸುರಲೊಕಕ್ಕೆ ಮುಖ ಮಾಡಿದ ಮೀಸೆ,ರಾಮನಿಗೆ ವೊಬ್ಬ ಪಾಳೆಯಗಾರನ ಛಾಪನ್ನು ತಂದುಕೊಡುತ್ತಿದ್ದವು.
ಮೀಸೆ ಇಲ್ಲದ ರಾಮನ ಮುಖ ಈಗಸ್ಟೆ ಎಸ್.ಎಸ್.ಎಲ್.ಸಿ ಮುಗಿಸಿದ ಹುಡುಗನ ಮುಖದಂತೆ ಕಾಣುತ್ತಿತ್ತು.ಆತನ ಹಸನ್ಮುಖ,ಅಜಾನುಬಾಹು ಶರೀರ,ಮಾತಿನ ಧಾಟಿ,ಒಮ್ಮೆ ಬೀಡಿ ಸೇದಿ ಎಳೆದನೆಂದರೆ,ಮೂಗು,ಕಿವಿ,ಕಣ್ಣುಗಳಿಂದ ಆತ ಬಿಡುತ್ತಿದ್ದ ಹೊಗಿಯಿಂದ ನಾವೆಲ್ಲರು ದಿಗ್ಮೂಢರಾಗಿ ನೊಡುತ್ತಿದ್ದ ಆ ಪ್ರಕ್ರಿಯೆಯ ದ್ಯೊತಕವಾಗಿದ್ದ ಕಪ್ಪು ತುಟಿಗಳು.ಇವುಗಳೆಲ್ಲವನ್ನು ನೊಡಿದಾಗ ರಾಮ ಒಬ್ಬ ಮದ್ಲಿಂಗನಂತೆ,ಈಗಸ್ಟೆ ಮದುವೆ ದಿಬ್ಬಣಕ್ಕೆ ಸಜ್ಜಾಗಿ ಹೊರಟಿರುವ ಛಾಪನ್ನು ಮುಡಿಸುತ್ತಿತ್ತು.
ಸೂಮಾರು ಮೂರು ತಲೆಮಾರುಗಳ ಅಂತಃಕರಣ,ವಿಶ್ವಾಸ ಹಾಗು ಯಾರಿಗು ಸರಿಸಾಟಿ ಇಲ್ಲದ ಸ್ವಾಮಿನಿಸ್ಠೆಯ ಆ ಅವಿರತ ಕೊಂಡಿ ಆ ದಿನ ಕಳಚಿತ್ತು.
ಮುಂದುವರೆಯುವುದು....