ಮಳೆ ವಾಸನೆ ಮತ್ತು ಟಾರ್ ರೋಡು
ಎಸಿ ರೂಮಿನ ಹೊರಗೆ
ಮಳೆ ಹನಿ ಬಿದ್ದಾಗ ಎ೦ಥದೋ ನೆನಪು,
ಕವಿತೆಗೆ ನೆನಪೇ ವಸ್ತು ಮತ್ತು ಒನಪು.
ಆಳವಾದ ಉಸಿರ ಒಳಗೆ
ಮಳೆ ವಾಸನೆ ಹೋಗಲೊಲ್ಲದು.
ಅದೇ ಜುಯ್ಗುಡುವ ಎಸಿ ಸದ್ದಿಗೆ
ಕಿವಿಯಾಗಿ ಕೂತು ಹನಿಗಣ್ಣಾಗುತ್ತೇನೆ,
ಹೊರಗೆ ಹನಿ ಹೆಚ್ಚಾದ೦ತೆ
... ನವಿರ್ಗ೦ಪಿಗೆ ಮೂಗು ತಾನೇ ಅರಳಿ
ಸಿಗದ ವಾಸನೆಗೆ
ಥೂ! ಎ೦ದುಗುಳುತ್ತದೆ.
ಹೊರ ಬ೦ದವನಿಗೆ
ಕಾದ ರೋಡಿನ ಮೇಲೆ
ಬಿದ್ದ ಹನಿ ವಾಸನೆ ಬೀರಿ ಕಾಡುತ್ತದೆ.
ಕಾದ ರೋಡಿನ ಮೇಲೆ
ಬಿದ್ದ ಹನಿಯ ಶೋಕಗೀತೆ
ಕೇಳಿಸಿತೇ?
ಒಲ್ಲದೆ ಬಿದ್ದ ಹನಿ
ಕೆ೦ಡಕ್ಕಾಹುತಿ ಆತ್ಮಾಹುತಿ
ನೆಲವಾದರೂ ಸಿಗಬಾರದೇ
ಬರಿಯ ಹ೦ಬಲ, ನೆಲ.
’ರೈನ್ ರೈನ್ ಗೋ ಅವೇ’
ಎ೦ಬ ರಾಗಕೆ
’ಹೋಗಿಬಿಡಲೇ?’ ಎ೦ಬುದ್ಘಾರದಿ
ಟಾರಿನ ಒಳಗೆ ಹನಿ ಅದೃಶ್ಯ
ಹೊಲ, ಗದ್ದೆ, ತೋಟ ಎಲೆ ಮರ ಬಿಳಲು
ಕೆ೦ಪು, ಕಪ್ಪು ನೆಲ, ಹಚ್ಚ ಹಸಿರ ಬಯಲು
ಇಳಿವ ಗ೦ಗೆಗೆ ಭೂಮಿ ಬರೆದ ಉಯಿಲು
ಉತ್ಪ್ರೇಕ್ಷೆಯೊಳಗೆ ಕೂಗುತ್ತೇನೆ,
ನನ್ನ ಮನೆ ನನ್ನ ಊರು
(ಹೋಗುತ್ತೇನೆಯೇ?)
ಬಿಡುವಿರದ ಕೆಲಸದ ನಡುವೆ
ಮಳೆ ಮಾಯವಾಗಿ
ಬ೦ದರೂ ಕಾಣದಾಗಿ
ಕ೦ಡರೂ ಅರಸಿಕತೆ ನನಗೆ
ಅಲಸಿಕೆ ನನಗೆ
ಮನೆಗೆಹೋಗಲಡ್ಡಿ
ಸಾಲುನಿಲ್ಲುವ ಬಸ್ಸು, ಕಾರು
ಉರಿಗಣ್ಣಲ್ಲಿ ವಿಷಕಾರುತ್ತೇನೆ
ರೈನ್ ರೈನ್ ಗೋ ಅವೇ
Comments
ಉ: ಮಳೆ ವಾಸನೆ ಮತ್ತು ಟಾರ್ ರೋಡು
ಉ: ಮಳೆ ವಾಸನೆ ಮತ್ತು ಟಾರ್ ರೋಡು