ಮಾಧ್ಯಮಗಳ ಮಾಯಾ ಬಜಾರ್
ಮಾಧ್ಯಮಗಳ ಮಾಯಾ ಬಜಾರ್ !
ಮಾಧ್ಯಮಗಳ ಎಲ್ಲ ಸಮೀಕ್ಷೆ ಮತ್ತು ನಿರೀಕ್ಷೆಗಳನ್ನು ಹುಸಿ ಮಾಡಿ ಮಾಯಾವತಿ ಸ್ವಂತ ಬಲದ ಮೇಲೆ ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಈ ಚುನಾವಣೆಯ ಮೂಲಕ ಮೂಡಿ ಬಂದ 'ಕಥಾನಕ'( ಇಂಗ್ಲಿಷ್ ಟಿ.ವಿ. ಮಾಧ್ಯಮಗಳ ಪರಿಭಾಷೆಯಲ್ಲಿ ''Big Story' ) ಎಂದರೆ, ಮಾಯಾವತಿ ರೂಪಿಸಿದ ಹೊಸ, ಯಶಸ್ವಿ ಜಾತಿ ಸಮೀಕರಣವೆಂದು ರಾಷ್ಡ್ರೀಯ ಟಿ.ವಿ.ವಾಹಿನಿಗಳು ಹೇಳುತ್ತಿವೆ. ಆದರೆ, ಇಲ್ಲಿನ ನಿಜವಾದ 'ಕಥಾನಕ' ಎಂದರೆ, ಈ ಚುನಾವಣಾಂತ್ಯ ಸಮೀಕ್ಷೆಗಳ ಮೂಲಕ ತನ್ನ ನೋಡುಗರ ಕಿವಿಗೆ ಹೂವಿರಿಸಿ ತನ್ನ ಮುಂದೆ ಕೂರಿಸಿಕೊಳ್ಳುವ ಈ ಟಿ.ವಿ. ವಾಹಿನಿಗಳ ಹುನ್ನಾರ ಬಯಲಾದದ್ದು. ಈ ಟಿ.ವಿ.ವಾಹಿನಿಗಳು, ತಾವು ಪ್ರಾಯೋಜಿಸಿದ್ದ ಚುನಾವಣಾಂತ್ಯದ ಸಮೀಕ್ಷೆಗಳಲ್ಲಿ ಮಾಯಾವತಿಯವರ ಪಕ್ಷಕ್ಕೆ 110ರಿಂದ ಹೆಚ್ಚೆಂದರೆ 150ರವೆರೆಗೆ ಮಾತ್ರ ವಿಧಾನ ಸಭಾ ಸ್ಥಾನಗಳನ್ನು ಮುನ್ನೋಡಿ ಅತಂತ್ರ ವಿಧಾನ ಸಭೆಯ ಭವಿಷ್ಯ ನುಡಿದಿದ್ದವು. ಇದರ ಆಧಾರದ ಮೇಲೇ ಭವ್ಯ ರಾಷ್ಟ್ರೀಯ ಚರ್ಚೆಗಳನ್ನೂ ನಡೆಸಿದ್ದವು. ಆದರೀಗ, ತಮ್ಮ ಈ 'ವೈಜ್ನಾನಿಕ ಸಮೀಕ್ಷೆಗಳು' ಹೀಗೆ ಸಾರಾ ಸಗಟಾಗಿ ತಲೆಕೆಳಗದ್ದಾದರೂ ಏಕೆ ಎಂಬ ಬಗ್ಗೆ ಕ್ಷಮಾಪಣೆ ಇರಲಿ, ಒಂದು ವಿವರಣೆಯನ್ನೂ ನೀಡದೆ ನಿರ್ಲಜ್ಜೆಯಿಂದ, ತಾವು ಮುನ್ನೋಡಿದ್ದಂತೆಯೇ ಮಾಯಾವತಿ ಸರ್ಕಾರ ರಚಿಸಿದ್ದಾರೆ ಎಂದು 'exclusive' ಹೆಮ್ಮೆಯಿಂದ ಘೋಷಿಸಿಕೊಂಡು ತಮ್ಮ ರಾಷ್ಟ್ರೀಯ ಚರ್ಚೆಗಳನ್ನು ಮುಂದುವರೆಸಿರುವುದು ನಮ್ಮ ಈ ಮಾಧ್ಯಮಗಳ ಭಂಡತನಕ್ಕೆ ಸಾಕ್ಷಿಯಾಗಿದೆ.
ಹಾಗೆ ನೋಡಿದರೆ, ಈ ಮಾಧ್ಯಮಗಳಿಗೆ ಬೇಕಿರುವುದು ಸತ್ಯವಲ್ಲ. ಬದಲಿಗೆ, ಸತ್ಯದ ತಮ್ಮದೇ ಆವೃತ್ತಿಗಳನ್ನು ರಚಿಸಿಕೊಂಡು, ಅವುಗಳ ಆಧಾರದ ಮೇಲೆ ಮಸಾಲಾ ಚರ್ಚೆಗಳನ್ನು ಏರ್ಪಡಿಸುವ ಮೂಲಕ ತಂತಮ್ಮ ಜಾಹೀರಾತು ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವುದು. ಅವು ದಿನವಹಿ ನಡೆಸುತ್ತಿರುವ ಇ-ಮೇಲ್ ಮತ್ತು ಎಸ್.ಎಂ.ಎಸ್. ಆಧಾರಿತ ಸಮೀಕ್ಷೆಗಳನ್ನು ಅಥವಾ ತನ್ನ ಒಂದಿಷ್ಟು ಪ್ರೇಕ್ಷಕರನ್ನು ಕೂರಿಸಿಕೊಂಡು ನಡೆಸುವ ಚರ್ಚಾಕೂಟ( Talk show-ಅಂದರೆ, ಈ ಮಾತಿನ ಆಟ!) ವಿನ್ಯಾಸವನ್ನು ಗಮನಿಸಿ. ತಮ್ಮ ವಾಹಿನಿಗಳಿಗೆ ವಾಣಿಜ್ಯಕವಾಗಿ ಲಾಭದಾಯಕವಾಗುವ ರೀತಿಯ ಚರ್ಚೆಗಳಿಗೆ ಅನುವು ಮಾಡಿಕೊಡುವಂತಹ ಪ್ರಶ್ನೆಗಳನ್ನು (ಇತ್ತೀಚಿನ ಉದಾ: ಗುಜರಾತ್ ನಕಲಿ ಎನ್ಕೌಂಟರ್ಗಳ ಬಗೆಗಿನ ವಿಚಾರಣೆಯನ್ನು ಸಿ.ಬಿ.ಐ.ಗೆ ಒಪ್ಪಿಸಲು ಸುಪ್ರೀಂ ಕೋರ್ಟಿನ ನಿರಾಕರಣೆಯು ನರೇಂದ್ರ ಮೋದಿಯವರಿಗೆ ದೊರೆತಿರುವ ವಿಜಯವೇ?) ಕೇಳುವ ಮೂಲಕ ತನ್ನ ಪ್ರೇಕ್ಷಕ ವರ್ಗದಲ್ಲಿ ಒಂದು ನಿರ್ದಿಷ್ಟ ರಾಜಕೀಯ ಅಭಿಪ್ರಾಯ ರೂಪಿಸಲಾಗುತ್ತದೆ. ನಂತರ ಅದರ ಆಧಾರದ ಮೇಲೆ ಒಂದು ಸಾರ್ವತ್ರಿಕ ಸಾರ್ವಜನಿಕ ಅಭಿಪ್ರಾಯವನ್ನು ಕಟ್ಟುವ ಪ್ರಯತ್ನ ಮಾಡಲಾಗುತ್ತದೆ. ಇಂತಹ ಪ್ರಯತ್ನಗಳು ಮಾಧ್ಯಮಗಳು ತಮ್ಮ ಸೀಮಾ ರೇಖೆಯನ್ನು ಮೀರಲು ಹಾಗೂ ರಾಜಕಾರಣಿಗಳನ್ನು ಟೀಕಿಸುತ್ತಲೇ ಅವರ ರಾಜಕಾರಣವನ್ನು ಮೀರಿಸುವಂತಹ ರಾಜಕಾರಣ ಮಾಡಲು ಹವಣಿಸುತ್ತಿರುವುದರ ಸೂಚನೆಗಳೇ ಆಗಿವೆ! ಮಾಧ್ಯಮಗಳು ಹೀಗೆ ತಮ್ಮೆಲ್ಲ ಸಾಮಾಜಿಕ ಕರ್ತವ್ಯಗಳನ್ನು ಮರೆತು, ಒಂದು ಲಾಭಾಧಾರಿತ ಕೈಗಾರಿಕೆಯಾಗಿ ಮಾತ್ರ ಬೆಳೆಯುತ್ತಿರುವುದು ಆರೋಗ್ಯಕರ ಸಮಾಜದ ದೃಷ್ಟಿಯಿಂದಂತೂ ಒಳ್ಳೆಯದಲ್ಲ. ಇತ್ತೀಚಿನ ದಿನಗಳಲ್ಲಿ ಎಲ್ಲ ರಂಗಗಳಲ್ಲೂ ನಮಗೆ ಅಮೆರಿಕಾವೇ ಮಾದರಿಯಾಗುತ್ತಿರುವುದರ ಇನ್ನೊಂದು ಉದಾಹರಣೆಯಂತೆ ಗೋಚರಿಸುತ್ತಿರುವ ಈ ಬೆಳವಣಿಗೆ, ದೇಶದ ರಾಜಕಾರಣದ ಚುಕ್ಕಾಣಿ ಜನತೆಯ ಕೈತಪ್ಪಿ ಪೂರ್ತಿಯಾಗಿ ಉದ್ಯಮ ವಲಯದ ಕೈವಶವಾಗುವ ಅಪಾಯವನ್ನೊಳಗೊಂಡಿದೆ. ಏಕೆಂದರೆ, ಅಮೆರಿಕಾದ ರಾಜಕಾರಣ, ಅರ್ಧ ಶಶ್ತ್ರಾಸ್ತ್ರ ತಯಾರಿಕಾ ಉದ್ಯಮದ ಅಧಿಪತಿಗಳ ಹಾಗೂ ಇನ್ನರ್ಧ ಮಾಧ್ಯಮ ಉದ್ಯಮದ ಅಧೀಪತಿಗಳ ಪ್ರಭಾವದಲ್ಲಿದೆ ಎಂದು ಹೇಳಲಾಗುತ್ತಿದೆ.
ಈ ಇಂಗ್ಲಿಷ್ ಟಿ.ವಿ. ಮಾಧ್ಯಮಗಳು ನಡೆಸುತ್ತಿರುವ ಇಂತಹ ಕೃತಕ ರಾಜಕೀಯ ಚರ್ಚೆಗಳಲ್ಲಿ, ಚರ್ಚೆಯನ್ನು ಆದಷ್ಟೂ ವಿವಾದಾಸ್ಪದಗೊಳಿಸಿ ಅದರ ಕಾವೇರಿಸುವ ಮೂಲಕ ಹೆಚ್ಚೆಚ್ಚು ಪ್ರೇಕ್ಷಕರನ್ನು ಆಕರ್ಷಿಸುವ ಉದ್ದೇಶದಿಂದಲೇ ಅದರ ಸಂಚಾಲಕರು ಪದೇ ಪದೇ ಹಾಕುವ ಮುಜುಗರದ ಪ್ರಶ್ನೆಗಳು ಹಾಗೂ ಪರೋಕ್ಷ ಛೀಮಾರಿಗಳ ನಡುವೆಯೂ ಇಷ್ಟಗಲ ಬಾಯಿ ಬಿಟ್ಟುಕೊಂಡು ಭಾಗವಹಿಸುವ ನಮ್ಮ ರಾಜಕಾರಣಿಗಳನ್ನು ನೋಡಿದಾಗ; ಈ ಇಬ್ಬರೂ ಸೇರಿ ರಾಷ್ಟ್ರ ಜೀವನವನ್ನೇ ಒಂದು ವಾಣಿಜ್ಯೋದ್ಯಮದ ಆಟವನ್ನಾಗಿ ಪರಿವರ್ತಿಸುವ ಪೈಪೋಟಿಯಲ್ಲಿದ್ದಾರೇನೋ ಎಂಬ ಅನುಮಾನ ಬಂದರೆ ಆಶ್ಚರ್ಯವಿಲ್ಲ. ಈ ಮಾಧ್ಯಮಗಳು ಹಿಂದೆ ಇದ್ದಂತೆ ಈಗಲೂ ಬೃಹತ್ ಉದ್ಯಮಿಗಳ ಒಡೆತನದಲ್ಲೇ ಇರುವವಾದರೂ, ಅವುಗಳ ಸಂಚಾಲಕ ಸಿಬ್ಬಂದಿ ಸಂಪೂರ್ಣ ಬದಲಾಗಿದೆ. ಹಿರಿಯ, ಅನುಭವಿ, ವೃತ್ತಿಪರ ಮಾಧ್ಯಮ ತಜ್ಞರು ಕಾಣೆಯಾಗಿ, ಅವರ ಜಾಗದಲ್ಲಿ ಹೊಸ ಮಾಧ್ಯಮ ರಾಜಕಾರಣಕ್ಕೆ ತಕ್ಕುನಾದ, ಉದ್ಯಮ ಲೋಕದ ಬಾಡಿಗೆ ಬಂಟರೇ ತುಂಬಿ ಹೋಗಿದ್ದಾರೆ. ಈ ಯವ ಪಡ್ಡೆಗಳಲ್ಲಿ ಬಹುಪಾಲು ಜನಕ್ಕೆ ಪಟಪಟನೆ ಇಂಗ್ಲಿಷ್ ಮಾತಾಡುವ ಹಾಗೂ ಎಲ್ಲಂದರಲ್ಲಿ ನುಗ್ಗಿ 'ಕಥಾನಕ'ಗಳನ್ನು ಕಟ್ಟಿಕೊಂಡು ಬರುವ ಚಾಕಚಕ್ಯತೆಗಳ ಹೊರತಾಗಿ, ಮತ್ತಾವ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಸ್ಮೃತಿಯಾಗಲೀ, ಮುನ್ನೋಟವಾಗಲೀ ಇರುವಂತೆ ತೋರುತ್ತಿಲ್ಲ. ಮಾಧ್ಯಮ ಪೈಪೋಟಿ ಹೆಚ್ಚಿದಷ್ಟೂ ಇಂತಹವರ ಸಂಖ್ಯೆ ಹೆಚ್ಚುತ್ತಿದೆ. ಸದ್ಯ, ಭಾರತದಲ್ಲಿ ಇಂಗ್ಲಿಷ್ ಟಿ.ವಿ. ವಾಹಿನಿಗಳನ್ನು ನೋಡುವವರ ಸಂಖ್ಯೆ ಗಣನೀಯವಾಗಿಲ್ಲವೆಂದು ಸಮಾಧಾನ ಪಟ್ಟುಕೊಳ್ಳಬಹುದೇನೋ ! ಈ ಇಂಗ್ಲಿಷ್ ಟಿ.ವಿ. ವಾಹಿನಿಗಳಿಗಿಂತ ಹೆಚ್ಚು ಪ್ರೇಕ್ಷಕರನ್ನು ಹೊಂದಿರುವ ಹಿಂದಿ ವಾರ್ತಾ ವಾಹಿನಿಗಳು ಸಾಕಷ್ಟು ಸಂಖ್ಯೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಇದೇ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆಯಾದರೂ, ಇವು ಭಾರತೀಯ ಭಾಷೆ ಮತ್ತು ನುಡಿಗಟ್ಟುಗಳಲ್ಲೇ ಚರ್ಚೆಗಳನ್ನು ನಡೆಸುತ್ತವೆ ಮತ್ತು ಇವುಗಳ ಪ್ರೇಕ್ಷಕ ವರ್ಗವೂ ವಿಭಿನ್ನ ಸಾಮಾಜಿಕ ನೆಲೆಗಳಿಗೆ ಸೇರಿದೆ. ಹಾಗಾಗಿ, ಸತ್ಯದ 'ಕೃತಕ ರಚನೆ'ಗಳು ಸೃಷ್ಟಿಯಾಗುತ್ತಿದ್ದಂತೆಯೇ, ಅವು ಪ್ರೇಕ್ಷಕ ವರ್ಗದ ನೆಲೆಯಲ್ಲಿ ನೆಲದ ವಾಸ್ತವಗಳಿಗೆ ಮುಖಾಮುಖಿಯಾಗಿ ತಮ್ಮ ನಿಜ ಮೌಲ್ಯದ ನೆಲೆಯಲ್ಲಿ ಮಾತ್ರ ಪರಿಣಾಮವನ್ನು ಉಂಟು ಮಾಡುವ ಸಾಧ್ಯತೆ ತೆರೆದಿರುತ್ತದೆ. ಆದರೆ ಈಗ ಎಲ್ಲರಿಗೆ ಇಂಗ್ಲಿಷ್ ಕಲಿಸಿ 'ಮೇಲೇರಿಸುವ' ಚಳುವಳಿಯೊಂದು ಆರಂಭವಾಗಿದಯಲ್ಲಾ? ಈ ಚಳುವಳಿಯ ಹಿಂದೆ ಇಂತಹ ಪಾರದರ್ಶಕ ಸಂವಹನದ ಸಾಧ್ಯತೆಯನ್ನೂ ನಾಶ ಮಾಡುವ ದುರುದ್ದೇಶ ಇದ್ದರೂ ಆಶ್ಚರ್ಯ ಪಡಬೇಕಿಲ್ಲ!.
ಈಗ ಕನ್ನಡದಲ್ಲೂ 'ಭ್ರಷ್ಟಾಚಾರ ನಿರ್ಮೂಲ ಮಾಡಲು' ಹಾಗೂ 'ಸ್ವಸ್ಥ ಸಮಾಜ ಕಟ್ಟಲು' ತನ್ನೊಂದಿಗೆ ಕೈ ಜೋಡಿಸುವಂತೆ ಕರೆ ನೀಡುತ್ತಿರುವ ಸ್ವಯಂಘೋಷಿತ 'ಸಾರ್ವಜನಿಕ ಹಿತಾಸಕ್ತಿ'ಯ ಟಿ.ವಿ.ವಾಹಿನಿಯೊಂದು ಆರಂಭವಾಗಿರುವುದನ್ನು ನೀವೂ ಗಮನಿಸಿರಬಹುದು. ಈವರೆಗೆ ಕನ್ನಡದಲ್ಲಿದ್ದ ಎರಡು ಪ್ರಮುಖ ಖಾಸಗಿ ಟಿ.ವಿ. ವಾಹಿನಿಗಳಲ್ಲಿ ಒಂದು, ವಿಶ್ಲೇಷಣೆಯೇ ಇಲ್ಲದೆ ಬರೀ ಸ್ಥೂಲ ವಿವರಗಳ ವಾರ್ತೆಗಳೊಂದಿಗೆ;ಮತ್ತೊಂದು ಅದಕ್ಕೆ ಸ್ವಲ್ಪ ಮಸಾಲಾ ಸೇರಿಸಿ ರುಚಿಗೊಳಿಸಿ ಬಡಿಸುತ್ತ(ಸರ್ಕಾರಿ ಟಿ.ವಿ.ಯ ವಾರ್ತೆ, ರೇಡಿಯೋ ವಾರ್ತೆಯ ದೃಶ್ಯ ರೂಪ ಮಾತ್ರವಾಗಿ ಬಿತ್ತರಗೊಳ್ಳುತ್ತ, ಎಂದೋ ಮಹತ್ವ ಕಳೆದುಕೊಂಡಾಗಿದೆ), ಇಂಗ್ಲಿಷ್ ಟಿ.ವಿ. ವಾರ್ತೆಗಳ ಮುಂದೆ ಕನ್ನಡ ವಾರ್ತೆಗಳು ಬಡಕಲಾಗಿ ಕಾಣತೊಡಗಿದ್ದಾಗ, ಈ 24 ತಾಸುಗಳ ವಾರ್ತಾ ವಾಹಿನಿ ಆರಂಭವಾಯಿತು. ಅದು ತನ್ನ ವರದಿಗಾರರ ದೊಡ್ಡ ಜಾಲದೊಂದಿಗೆ ಸುದ್ದಿಯನ್ನು ಸರ್ವತೋಮುಖ ವಿಶ್ಲೇಷಣೆಯೊಂದಿಗೆ ವಿವರವಾಗಿ ಜಾಲಾಡತೊಡಗಿದಾಗ, ಕನ್ನಡಿಗರಲ್ಲಿ ತಮಗೊಂದು ಪೂರ್ಣ ಪ್ರಮಾಣದ ವಾರ್ತಾ ವಾಹಿನಿಯೊಂದು ದೊರೆತ ಸಂತೋಷ ಉಂಟಾಗಿತ್ತು. ಆದರೀಗ ಅದು ವಾರ್ತೆಯ ಹೆಸರಿನಲ್ಲಿ ಸಮಾಜ ಸುಧಾರಣೆಯ ದೀಕ್ಷೆ ತೊಟ್ಟ ವೀರ ಯೋಧನಂತೆ ಸಮಾಜದ 'ಹುಳುಕು'ಗಳನ್ನು ಆಯ್ದಾಯ್ದು ತನ್ನ ತೆರೆಯ ಮೇಲೆ ಪ್ರದರ್ಶಿಸುತ್ತಾ, ರಾಜಕಾರಣಿಗಳು, ಅಧಿಕಾರಿಗಳು ಹಾಗೂ ಪೋಲೀಸರ ಮೇಲೆ ವೀರ ಎಚ್ಚಮನಾಯಕನ ಶೈಲಿಯಲ್ಲಿ ಅರಚಾಡತೊಡಗಿದೆ. ಅಂದರೆ, ಬಹುಬೇಗ ಅಗ್ಗದ ಜನಪ್ರಿಯತೆಗೆ ಬಲಿಯಾಗಿ ತನ್ನ ವೃತ್ತಿಪರತೆಯನ್ನೇ ಮರೆಯತೊಡಗಿದೆ.. ಅಲ್ಪಾವಧಿಯಲ್ಲೇ ಅನೇಕ 'ಭ್ರಷ್ಟಾಚಾರ'ಗಳನ್ನು ತೆರೆಯ ಮೇಲೆ ಬಹಿರಂಗಗೊಳಿಸಿದ 'ಹೆಗ್ಗಳಿಕೆ'ಯನ್ನು ಸಂಪಾದಿಸಿರುವುದಾಗಿ ತಾನೇ ಡಂಗುರ ಹೊಡೆದುಕೊಳ್ಳ್ಳುತ್ತಿರುವ ಈ ವಾಹಿನಿ, ಇತ್ತೀಚೆಗೆ ಸ್ಥಳೀಯ ಸಂಘ-ಸಂಸ್ಥೆಗಳು ಹಾಗೂ ಪೋಲೀಸರ 'ಸಹಕಾರ'ದೊಂದಿಗೆ 'ದುಷ್ಟ ಶಕ್ತಿ'ಗಳ ಅಡ್ಡೆಗಳ ಮೇಲೆ ದಾಳಿ ಕೂಡ ಆರಂಭಿಸಿ, ಆ 'ದಿಟ್ಟ' ದೃಶ್ಯಗಳನ್ನು ಹೆಮ್ಮೆಯಿಂದ ಬಿತ್ತರಿಸತೊಡಗಿವೆ.
ಅಪರಾಧ ಲೋಕವನ್ನು ರೋಚಕ ರೀತಿಯಲ್ಲಿ ಪ್ರಸ್ತುತಗೊಳಿಸುವ ಈ ಪ್ರವೃತ್ತಿ ಕನ್ನಡ ಟಿ.ವಿ.ಲೋಕದಲ್ಲಿ ಬಹು ಹಿಂದೆಯೇ ಆರಂಭವಾಗಿ, ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿ, ಮಾಧ್ಯಮ ಸ್ವಾತಂತ್ರ್ಯದ ಹೆಸರಿನಲ್ಲಿ ಮುಕ್ತಾಯವಾಗಿತ್ತು. ಆದರೆ, ಅದೀಗ ವ್ಯಾಪಾರ ಅಥವಾ ಸುದ್ದಿ ಮೌಲ್ಯದ ಪರಿಧಿಯನ್ನು ದಾಟಿ, ಸರ್ಕಾರಿ ಇಲಾಖೆಯೊಂದರ ಸಹಕಾರದೊಂದಿಗೆ ತನ್ನದೇ ಸ್ವಾಯತ್ತತೆಯ ಮೌಲ್ಯವನ್ನು ಸ್ಥಾಪಿಸಕೊಳ್ಳಹೊರಟಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೇ ಕಂಟಕಪ್ರಾಯವಾಗಬಹುದಾಗಿದೆ. ರಾಷ್ಟ್ರ ಮಟ್ಟದ ಟಿ.ವಿ.ವಾಹಿನಿಗಳಲ್ಲಿ ಈ ಹಿಂದೆ ದೊಡ್ಡ ಸುದ್ದಿಯಾಗಿದ್ದ ಗುಪ್ತ ಚಿತ್ರೀಕರಣದ ಪ್ರಸಂಗಗಳ ಹಿಂದಿನ ರಾಜಕಾರಣ ಬಯಲಾಗಿ, ಅವುಗಳ ವಿಶ್ವಾಸಾರ್ಹತೆ ಘಾಸಿಗೊಂಡಿತ್ತು. ಇದೀಗ ಈ ಗುಪ್ತ ಚಿತ್ರೀಕರಣದ ಜೊತೆ ಅಪರಾಧಗಳ ಬಹಿರಂಗ ಚಿತ್ರೀಕರಣವೂ ಸೇರಿ, ಮಾಧ್ಯಮ ಕರ್ತವ್ಯದ ಹೆಸರಿನಲ್ಲಿ, ಅಪರಾಧ ವಿಚಾರಣೆಯ ಹಂತ ಮುಟ್ಟುವ ಮುನ್ನವೇ 'ಅಪರಾಧ'ದ ಸಾರ್ವಜನಿಕ ಘೋಷಣೆಯಾಗುತ್ತಿದೆ. ಇದರ ಮುಂದಿನ ಸಹಜ ಘಟ್ಟವಾಗಿ ಈ 'ಅಪರಾಧಿ'ಗಳನ್ನು ಜನರ ಒಂದು ಗುಂಪೋ, ಮಾಧ್ಯಮಗಳ ಏಜೆಂಟರೋ ಅಥವಾ ಪೋಲೀಸರೋ ನೈತಿಕ ಹಕ್ಕನ್ನು ಆವಾಹಿಸಿಕೊಂಡು ಥಳಿಸುವ, ಅವಮಾನಿಸುವ ದೃಶ್ಯಗಳನ್ನು ರಾಜಾರೋಷವಾಗಿ ತೋರಿಸಲಾಗುತ್ತಿದೆ. ಈ ಮೂಲಕ ಅಪರಾಧ ವಿಚಾರಣಾ ಸಂಹಿತೆಯನ್ನೇ ಉಲ್ಲಂಘಿಸಲಾಗುತ್ತಿದ್ದು, ಸಂವಿಧಾನದತ್ತ ನಾಗರಿಕ ಅಧಿಕಾರಗಳ ಅತಿಕ್ರಮಣಕ್ಕೆ ದಾರಿ ಮಾಡಿಕೊಡಲಾಗುತ್ತಿದೆ. ಇದು ಸಾಮಾಜಿಕ ಅರಾಜಕತೆಯ ಆಹ್ವಾನವೂ ಹೌದು. ಹೋಗಲಿ, ಈ ಕಾರ್ಯಾಚರಣೆಯನ್ನು ನಡೆಸುತ್ತಿರುವವರಾದರೂ ಯಾರು? ಸಂಬಂಧಿತ ಕ್ಷೇತ್ರಗಳಲ್ಲಿ ವೃತ್ತಿ ಪರಿಣಿತಿ ಹೊಂದಿದ ಅನುಭವಿಗಳೇ? ಅಲ್ಲ, ಈ ಚಿತ್ರೀಕರಣದ ರೋಚಕ ಸಂಕಲನ ಹಾಗೂ ಅದರ ನಿರೂಪಣೆಯಲ್ಲಿನ ವೀರಾವೇಶದ ಭಾಷೆಯೇ ಸೂಚಿಸುವಂತೆ, ಸುದ್ದಿ ಮಾಡಿ ಮಜ ತೆಗೆದುಕೊಳ್ಳುವ ಎಳೆ ಪಡ್ಡೆಗಳು!
ಈ ವಾಹಿನಿ ಒಡ್ಡುತ್ತಿರುವ ಸ್ಪರ್ಧೆಗೆ ಬೆದರಿ, ಇದ್ದುದರಲ್ಲಿ ಸ್ವಲ್ಪ ಪ್ರಬುದ್ಧವಾಗಿ ಕಾರ್ಯ ನಿರ್ವಹಿಸುತ್ತಿದ್ದ ವಾಹಿನಿಯೊಂದರ ಅಗ್ರ ರಾಷ್ಟ್ರೀಯ ವಾರ್ತೆ ಈಗ ಉಗ್ರ ರಾಷ್ಟ್ರೀಯ ವಾರ್ತೆಯಾಗಿ ಪರಿವರ್ತಿತಗೊಳ್ಳತೊಡಗಿದೆ! ಇತ್ತೀಚಿನ ದಿನಗಳಲ್ಲಿ ಚಿತ್ರ ವಿಚಿತ್ರ ಸುದ್ದಿ ಶೀರ್ಷಿಕೆಗಳೊಂದಿಗೆ, ರಣರಂಗ, ರಣ ಕಹಳೆ ಹಾಗೂ ರಣವೀಳ್ಯದ ಪರಿಭಾಷೆಯನ್ನೂ ರೂಢಿಸಿಕೊಂಡಿರುವ ಈ ವಾಹಿನಿ, ಈಗ 'ಉಳ್ಳಾಲ ವಾರ್'ನ್ನು ಘೋಷಿಸಿದೆ! ವಾಸ್ತವವಾಗಿ ಇದು, ಜಾಹೀರಾತು ಮಾರುಕಟ್ಟೆಗಾಗಿ ನಡೆದಿರುವ ವಾಹಿನಿಗಳ 'ವಾರ್ ಅಷ್ಟೆ! ಉಳ್ಳಾಲದಲ್ಲಿ 'ವಾರ್' ನಡೆದರೂ ನಡೆಯಬಹುದು;ನಡೆಯದೆಯೂ ಇರಬಹುದು.ಆದರೆ ಮುಂದಿನ ದಿನಗಳಲ್ಲಿ ಜನ ಈ ಟಿ.ವಿ.ವಾಹಿನಿಗಳಲ್ಲಿ 'ವಾರ್'ನಂತೆಯೇ ಚಿತ್ರಿತವಾಗುವ ಚುನಾವಣೆಯನ್ನು ನೋಡಿ ಮಜಾ ತೆಗೆದುಕೊಳ್ಳಬಹುದು! ಹೀಗೆ ಟಿ.ವಿ. ವಾಹಿನಿಗಳೆಂಬುವು ಇಂದು ನಿಜಕ್ಕೆ ನಿಜವೂ ಅಲ್ಲದ, ಸುಳ್ಳಿಗೆ ಸುಳ್ಳೂ ಅಲ್ಲದ ಸತ್ಯದ 'ಕೃತಕ ರಚನೆ'ಗಳನ್ನು ತಯಾರಿಸುವ ಕಾರ್ಖಾನೆಗಳಾಗತೊಡಗಿವೆ. ಇದನ್ನು 'ರಾಕ್ಷಸ ಮಾಯೆ'ಗೆ ಸದೃಶವಾದ 'ಮಾಧ್ಯಮ ಮಾಯೆ' ಎನ್ನಬಹುದೇ?
ಈ 'ಮಾಧ್ಯಮ ಮಾಯೆ' ಟಿ.ವಿ.ವಾಹಿನಿಗಳಿಗಷ್ಟೇ ಸೀಮಿತವಾಗದೆ, ಈ ಮಾಧ್ಯಮಗಳ ಪ್ರಭಾವಕ್ಕೆ ಸಿಕ್ಕ ಸಮಾಜವನ್ನು ಸ್ವಲ್ಪ ತಮ್ಮೆಡೆಗೂ ಸೆಳೆದುಕೊಳ್ಳಲು ಯತ್ನಿಸುತ್ತಿರುವ ಇತರ ಮಾಧ್ಯಮಗಳು-ವಿಶೇಷವಾಗಿ ಮುದ್ರಣ ಮಾಧ್ಯಮ- ತಮ್ಮ ಮಾಧ್ಯಮ ವಿಶಿಷ್ಟ ಉದ್ದೇಶಗಳನ್ನೇ ಮರೆತಂತೆ, ವಿಚಿತ್ರ ಕಸರತ್ತುಗಳನ್ನು ಆರಂಭಿಸಿವೆ. ಉದಾಹರಣೆಗೆ ನಮ್ಮ ದಿನಪತ್ರಿಕೆಗಳು ದೈನಿಕ ಧರ್ಮ ಪ್ರವಚನದ ಕಾಲಂ, ವಿವಿಧ ಪರೀಕ್ಷೆಗಳ ತಯಾರಿ ಪಾಠಗಳು, ಇಂಗ್ಲಿಷ್ ಕಲಿಕೆ ಮಾರ್ಗದರ್ಶನ ಇತ್ಯಾದಿಗಳ ಜೊತೆಗೆ ಇತ್ತೀಚೆಗೆ 'ಫುಟ್ ಪಾತ್ ಮೇಲೆ ಬೆಳೆದ ಹುಲ್ಲು ಚರಂಡಿಗಳು ಕಟ್ಟಿಕೊಳ್ಳಲು ಕಾರಣವಾಗುತ್ತದೆಯೇ?' ಎಂಬಂತಹ ಪ್ರಶ್ನೆಗಳನ್ನು ಸಾರ್ವಜನಿಕರಿಗೆ ಕೇಳುವ ದಿನವಹಿ ಎಸ್.ಎಂ.ಎಸ್. ಸಮೀಕ್ಷೆಗಳನ್ನೂ ಆರಂಭಿಸಿವೆ! ಅಲ್ಲದೆ, ಈಗ ಕನ್ನಡದಲ್ಲಿ ಟ್ಯಾಬ್ಲಾಯಿಡ್ ಪತ್ರಿಕೋದ್ಯಮದ ಮಜಾ ಪಡೆಯಲು ವಾರದವರೆಗೆ ಕಾಯಬೇಕಿಲ್ಲ. ಕನ್ನಡದ ಒಂದೆರಡು ದಿನ ಪತ್ರಿಕೆಗಳು ಈ ಟ್ಯಾಬ್ಲಾಯಿಡ್ಗಳನ್ನೂ ನಾಚಿಕೆಗೀಡು ಮಾಡುವಷ್ಟು ರೋಚಕವಾಗಿ ಗಾಳಿ ಹಾಗೂ ಕಲ್ಪಿತ ಸುದ್ದಿಗಳನ್ನು ಮಸಾಲಾ ಶೀರ್ಷಿಕೆಗಳೊಂದಿಗೆ ಮುಖಪುಟದಲ್ಲಿ ದೊಡ್ಡಕ್ಷರಗಳಲ್ಲಿ ಪ್ರಕಟಿಸುತ್ತಾ, ಇದೇ ಹೊಸ ಕಾಲದ ಹೊಸ ಪತ್ರಿಕೋದ್ಯಮ ಎಂದು ಹೆಮ್ಮೆಯಿಂದ ಸಾರಿಕೊಳ್ಳುತ್ತಿವೆ. ಮಾಹಿತಿ, ಮನರಂಜನೆ ಹಾಗೂ ಶಿಕ್ಷಣಗಳನ್ನೇ ಮೂಲೋದ್ದೇಶಗಳನ್ನಾಗಿಟ್ಟುಕೊಂಡಿದ್ದ ನಮ್ಮ ಮಾಧ್ಯಮಗಳಿಂದು, ಮಾಹಿತಿ-ಶಿಕ್ಷಣಗಳೆರಡನ್ನೂ ಮನರಂಜನೆಯ ಸರಕನ್ನಾಗಿ ಪರಿವರ್ತಿಸುತ್ತಿರುವುದರ ಹಿಂದಿರುವುದು ಹೊಸ ಮಾರುಕಟ್ಟೆ ಅರ್ಥಶಾಸ್ತ್ರವೆಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.
ಅಂದಹಾಗೆ: ಪ್ರಜ್ಞೆ ತಪ್ಪಿದಂತೆ ತೋರುತ್ತಿರುವ ಈ ಮಾಧ್ಯಮ ಲೋಕವನ್ನು ಮತ್ತೆ ಪ್ರಜ್ಞೆಗೆ ಮರಳುವಂತೆ ಎಚ್ಚರಿಸಲು ಉಳಿದಿರುವ ಒಂದೇ ಮಾರ್ಗ ಎಂದರೆ, ನಮ್ಮ ದೇವೇಗೌಡರು ಈಗ ಗಳಿಸಿಕೊಂಡಿರುವ, ಯಾರಿಗೂ ಸೊಪ್ಪು ಹಾಕದ ಹಿರಿತನದ ಗತ್ತು ಮಾತ್ರ ಎಂದು ಕಾಣುತ್ತದೆ... ಮೊನ್ನೆ ತಮ್ಮ 75ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಯಾವನೋ ಮಾರುಕಟ್ಟೆ ಪತ್ರಿಕೋದ್ಯಮದ ಪತ್ರಕರ್ತ, ಯಾವುದೋ ತಲೆಹರಟೆಯೆನ್ನಿವ ಪ್ರಶ್ನೆಯನ್ನು ಕೇಳಿದಾಗ ಗೌಡರು ಗುಡುಗಿದ್ದು ಹೀಗೆ:' ಸುಮ್ನೆ ಹೇಳಿದ್ದು ಬರಕೊಂಡು ಎದ್ದು ಹೋಗ್ರಿ..."
ಭಲೇ ಗೌಡರೇ!