ಮಾನವಧರ್ಮ

ಮಾನವಧರ್ಮ

20ನೇ ಶತಮಾನದ ಕಾಲದಲ್ಲಿ ಪ್ಲೇಗ್ ಪಿಡುಗು ಇಡೀ ಭಾರತದಲ್ಲಿ ಉಂಟು ಮಾಡಿದ ತಲ್ಲಣವನ್ನು ವರ್ಣಿಸಲು ಸಾಧ್ಯವಿಲ್ಲ. ಈ ಪ್ಲೇಗ್ ಮಾರಿಯಿಂದ ಆದ ಜನ ಕ್ಷಯ, ಒಂದು ಯುದ್ಧದಿಂದ ಕೂಡ ಸಂಭವಿಸುವುದಿಲ್ಲ. ಅಷ್ಟರ ಮಟ್ಟಿಗೆ ಅದರ ಅಟ್ಟಹಾಸ ಮೆರೆದಿತ್ತು. ಪ್ಲೇಗ್ ಮೊದಮೊದಲು ಬಂದು ಆವರಿಸಿ ಸಾಲು ಸಾಲಾಗಿ ಜನರನ್ನು ಬಲಿತೆಗೆದುಕೊಂಡಾಗ, ವೈದ್ಯರಿಗೂ ಸಹಾ ಅದರ ತಡೆ ಮತ್ತು ಚಿಕಿತ್ಸೆಯ ಬಗ್ಗೆ ಪೂರ್ಣ ಅರಿವಿರಲಿಲ್ಲ. ಊರಿಗೆ ಊರೇ ಪ್ಲೇಗ್ ಮಾರಿಗೆ ಬಲಿಯಾಗಿ ಇಡೀ ಊರೇ ಸ್ಮಶಾನವಾಗಿ ಬಿಡುತ್ತಿತ್ತು.

ಜನರು ಊರನ್ನು ಬಿಟ್ಟು ಊರಿನ ಹೊರಗೆ ಗುಡಿಸಲು ಕಟ್ಟಿಕೊಂಡು, ಪ್ಲೇಗ್ ಸಾಂಕ್ರಾಮಿಕ ರೋಗ ಮರೆಯಾಗುವವರೆಗೆ ಊರ ಹೊರಗೇ ವಾಸಿಸುತ್ತಿದ್ದರು. ಈ ಸಾಂಕ್ರಾಮಿಕ ರೋಗ ಮೊದಲು ಇಲಿಗಳಿಗೆ ಬಂದು ಅದರಿಂದ ಜನರಿಗೆ ಹರಡುತ್ತಿತ್ತು. ಆ ಕಾಲದಲ್ಲಿ ಪ್ಲೇಗ್ ರೋಗ ತನ್ನ ರುದ್ರನರ್ತನವನ್ನು ಮಾಡುತ್ತಿದ್ದ ಸಮಯದಲ್ಲಿ, ಊರಿನ ಯಾವುದಾದರೂ ಒಂದು ಮನೆಯಲ್ಲಿ ಇಲಿಯೊಂದು ಸತ್ತು ಬಿದ್ದರೆ ಮುಗಿಯಿತು. ಇಡೀ ಊರೇ ಖಾಲಿಯಾಗಿಬಿಡುತ್ತಿತ್ತು. ಎಲ್ಲರೂ ಊರ ಹೊರಗಿನ ಮೈದಾನ ಪ್ರದೇಶದಲ್ಲಿ ಗುಡಿಸಲು ಕಟ್ಟಿಕೊಂಡು ವಾಸಿಸಲು ಮೊದಲು ಮಾಡಿಬಿಡುತ್ತಿದ್ದರು. ಎಲ್ಲೋ ಕೆಲವರು ಮೊಂಡು ಧೈರ್ಯದಿಂದ ಊರಿನಲ್ಲಿ ಉಳಿಯುತ್ತಿದ್ದ ಕಾಲವದು.

ಸಾಲು ಸಾಲಾಗಿ ಊರಿನಲ್ಲಿ ಸತ್ತು ಬಿದ್ದ ಜನರ ಅಂತ್ಯಕ್ರಿಯೆ ಮಾಡಲೂ ಸಹ ಜನರು ಸಿಗುತ್ತಿರಲಿಲ್ಲ. ಆ ಪಿಡುಗಿಗೆ ಅಷ್ಟು ಹೆದರುತ್ತಿದ್ದರು. ಅದಲ್ಲದೆ ಅದು ಸಾಂಕ್ರಾಮಿಕ ರೋಗವಾದ್ದರಿಂದ ಸತ್ತವರನ್ನು ಸ್ಮಶಾನಕ್ಕೆ ಸಾಗಿಸಲೂ ಜನರು ಸಿಗದೆ ಹರಸಾಹಸ ಪಡುವ ಸ್ಥಿತಿ ಇತ್ತು ಆಗ.

ಈಗಿನಂತೆ ವಾಹನ ಸೌಕರ್ಯ, ವಿದ್ಯುತ್ ಚಿತಾಗಾರ ಮುಂತಾದ ಆಧುನಿಕ ಸೌಲಭ್ಯಗಳು ಇರಲಿಲ್ಲ. ಈ ಆಧುನಿಕ ಕಾಲದಲ್ಲಿಯೂ ಹಳ್ಳಿಗಳಲ್ಲಿ ವಿದ್ಯುತ್ ಚಿತಾಗಾರಗಳಿಲ್ಲ. ಕಟ್ಟಿಗೆಯಿಂದಲೇ ಅಗ್ನಿ ಸಂಸ್ಕಾರ ಮಾಡುತ್ತಾರೆ. ಯಾವಾಗಲೋ ಒಬ್ಬರು ಸತ್ತರೆ ಸರಿ, ದಿನಾ ಹತ್ತಾರು ಮಂದಿ ಸತ್ತರೆ, ಅವರ ಸಂಸ್ಕಾರ ಯಾರು ಮಾಡುವುದು. ದಹನ ಕ್ರಿಯೆಗೆ ಕಟ್ಟಿಗೆ ಬೇಕು. ಶವವನ್ನು ಹೂಳುವ ಸಂಪ್ರದಾಯದವರು ಹೂಳಲು ಗುಳಿತೋಡಿಸಬೇಕು. ಅದಕ್ಕೆ ಮತ್ತೆ ಸಹಾಯಕರು ಬೇಕು. ಹೀಗೆ ಹಲವು ತೊಡಕುಗಳನ್ನು ಎದುರಿಸಬೇಕಿತ್ತು. ಊರಿಗೆ ಊರೇ ಸ್ಮಶಾನವಾದಾಗ, ಯಾರನ್ನು ಹೋಗಿ ಏನನ್ನು ಕೇಳುವುದು. ಸತ್ತವರಿಗಿಂತಲೂ ಬದುಕಿದ್ದವರ ಪಾಡೇ ಬಹಳ ಹೀನಾಯವಾಗಿದ್ದ ಸ್ಥಿತಿ ಆಗ.

ವೈದ್ಯ ವಿಜ್ಞಾನ ಇದನ್ನು ಸವಾಲನ್ನಾಗಿ ಸ್ವೀಕರಿಸಿ, ಸಂಶೋಧನೆ ನಡೆಸಿ, ಪ್ಲೇಗು, ಸಿಡುಬು, ಇನ್‍ಫ್ಲೂಯೆಂಜಾ, ಮುಂತಾದ ಸಾಂಕ್ರಾಮಿಕ ರೋಗಗಳನ್ನು ಈ ಪ್ರಪಂಚದಿಂದ ಮೂಲೋತ್ಪಾಟನೆ ಮಾಡಿದೆ. ಆದರೆ ಈ ಸಾಧನೆ ಒಂದು ದಿನ ಅಥವಾ ಒಂದು ವರ್ಷದಲ್ಲಿ ಉಂಟಾದ ಸಾಧನೆ ಅಲ್ಲ. ಅನೇಕಾನೇಕ ವಿಜ್ಞಾನಿಗಳ ಹಲವು ವರ್ಷಗಳ ಪರಿಶ್ರಮದಿಂದ ಈ ವೈದ್ಯಕೀಯ ಕ್ರಾಂತಿಯನ್ನು ಉಂಟು ಮಾಡಲಾಯಿತು.

ಆದರೆ ಈ ಪಿಡುಗುಗಳು ಆವರಿಸಿದ ಪ್ರಾರಂಭದಲ್ಲಿ ಸರಿಯಾದ ಮಾಹಿತಿ ಇಲ್ಲದೇ, ಈ ರೋಗಗಳಿಗೆ ಸರಿಯಾದ ತಡೆಮದ್ದುಗಳು ಇಲ್ಲದೇ ಜನರು ಪಟ್ಟ ಪಾಡು, ಅನುಭವಿಸಿದ ದುಃಖ, ಪಟ್ಟ ಪರಿಪಾಟಲು ಅಷ್ಟಿಷ್ಟಲ್ಲ. ಬದುಕು ಏನೆಲ್ಲಾ ದುಃಖಗಳನ್ನು ತಂದೊಡ್ಡುತ್ತಿತ್ತೋ ಅದನ್ನೆಲ್ಲಾ ಮೌನವಾಗಿ ಸಹಿಸಿಕೊಳ್ಳುತ್ತಿದ್ದರು ಆಗಿನ ಜನ. ಯಾರಲ್ಲಿ ಮೊರೆ ಇಡುವುದು, ಏನಂತ ಪ್ರತಿಭಟಿಸುವುದು. ಆಗ ಇದ್ದ ಸರ್ಕಾರಗಳೂ ಸಹ ಪ್ಲೇಗಿಗೆ ತಡೆ ಮದ್ದನ್ನು ಕಂಡುಹಿಡಿದ ಮೇಲೆ, ಪ್ಲೇಗು ಕ್ಯಾಂಪ್ ಮಾಡಿ, ಜನರಿಗೆ ತಡೆಮದ್ದಿನ ಸೂಜಿ ಹಾಕುವ ಏರ್ಪಾಡು ಮಾಡಿದ್ದವು.

Welfare stateನ ಕಲ್ಪನೆ ಇರಲಿಲ್ಲ. ಅದರಿಂದ ಸರ್ಕಾರದ ಪಾತ್ರ ಬಹಳ ಕಮ್ಮಿಯಾಗಿತ್ತು. ಬರೀ ಕಾನೂನು ಸುವ್ಯವಸ್ಥೆಯನ್ನು ಹೆಚ್ಚು ನಿಭಾಯಿಸುತ್ತಿದ್ದ ಸರ್ಕಾರ ತನ್ನ ಸಾಮಾಜಿಕ ಕರ್ತವ್ಯವನ್ನು ಈಗಿರುವಂತೆ ನಿರ್ವಹಿಸುತ್ತಿರಲಿಲ್ಲ. ಆಗಿನ ಸರ್ಕಾರಕ್ಕೆ ಸಾಮಾಜಿಕ ಕರ್ತವ್ಯ ಪ್ರಜ್ಞೆಯೇ ಇರಲಿಲ್ಲ ಎಂಬ ಅಭಿಪ್ರಾಯವಲ್ಲ. ಆದರೆ ಈಗಿರುವಂತೆ ಆಗೆಲ್ಲ ಇಷ್ಟೊಂದು ಬಾಬ್ತುಗಳು ಇರುತ್ತಿರಲಿಲ್ಲ. ಅದಲ್ಲದೆ ಜನರಿಗೂ ಸಹಾ ಸಾಮೂಹಿಕವಾಗಿ ಪ್ರತಿಭಟಿಸುವ ಮನೋಭಾವ ಇನ್ನೂ ಬಂದಿರಲಿಲ್ಲ. ಈಗಿನ ಕಾಲದಲ್ಲಿ ಪ್ರತಿಯೊಂದು ವಿಷಯಕ್ಕೂ ಜನ ಪ್ರತಿಭಟಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ಯಾವುದೋ ರಸ್ತೆಯಲ್ಲಿ ವಾಹನ ಚಾಲಕನ ಅಜಾಗರೂಕತೆಯಿಂದಲೋ ಅಥವಾ ಬೇರೆನೋಕಾರಣದಿಂದಲೋ ಅಪಘಾತದಿಂದ ಯಾರಾದರೂ ಮೃತಪಟ್ಟರೆ ಓಡಿ ಹೋದ ಚಾಲಕನನ್ನು ಬಂಧಿಸಿ ಎಂದು ಶವವನ್ನು ನಡುರಸ್ತೆಯಲ್ಲಿಟ್ಟು ಪ್ರತಿಭಟಿಸುತ್ತಾರೆ. ಆಗ ಅಲ್ಲಿಗೆ ಜಿಲ್ಲಾಧಿಕಾರಿ ಬರಬೇಕು, ಸೂಪರಿಂಟೆಂಡೆಂಟ್ ಬರಬೇಕು, ಕೆಲವೊಮ್ಮೆ ಮಂತ್ರಿ ಮಹೋದಯ ಸಹ ಬರಬೇಕಾಗುತ್ತದೆ.

ಜನನಾಯಕ ಸರ್ಕಾರವಿದ್ದರೆ, ಜನರಿಗೆ ಬೇರೇನು ಸಿಗದಿದ್ದರೂ, ಬೆಲೆ ಏರಿಕೆ ಮತ್ತು ಭ್ರಷ್ಟಾಚಾರದಿಂದ ತತ್ತರಿಸುತ್ತಿದ್ದರೂ ಸಣ್ಣ ಸಣ್ಣ ಕಾರಣಗಳಿಗೂ ಸಹ ಸಾಮೂಹಿಕವಾಗಿ ಬೀದಿಗಿಳಿದು ಪ್ರತಿಭಟನೆ ನಡೆಸುವ ಸ್ವಾತಂತ್ರ್ಯವಿರುತ್ತದೆ.

ಆಗಿನ ಕಾಲದಲ್ಲಿ ಜನರು ತಮ್ಮ ಪಾಲಿಗೆ ಬಂದದ್ದನ್ನು ಮೌನವಾಗಿ ಅನುಭವಿಸುತ್ತಿದ್ದರು, ಅದು ಸುಖವಿರಲಿ, ದುಃಖವಿರಲಿ. ನಮ್ಮ ಜನರ ಈ ರೀತಿಯಾದ ಮನೋಭಾವದಿಂದಲೇ ಏನೋ ಬ್ರಿಟಿಷರು ನಮ್ಮ ದೇಶವನ್ನು ಎರಡು ಶತಮಾನಗಳ ಕಾಲ ಸುಖದಿಂದ ಆಳಿದರೆಂದು ತೋರುತ್ತದೆ. ಜನರು ಇಹಲೋಕದ ಜೀವನ ವಿಚಾರಗಳಿಗೆ ಹೆಚ್ಚು ತಲೆಕಡಿಸಿಕೊಳ್ಳದೇ, ಪರಲೋಕದ ಚಿಂತೆ ಮಾಡುತ್ತಿದ್ದರಿಂದ, ದಿನನಿತ್ಯದ ಜೀವನ, ಅದು ಬಂದಹಾಗೆ ನಡೆಯುತ್ತಿತ್ತು.

ಇಷ್ಟೆಲ್ಲಾ ಪೀಠಿಕೆ ಏಕೆ ನೀಡಬೇಕಾಗಿದೆ ಎಂದರೆ ಮುಂದೆ ನಡೆದ ಘಟನೆ ಈ ಪ್ಲೇಗು ಮಾರಿಗೇ ಸಂಬಂಧ ಪಟ್ಟಿದ್ದು, ಈ ಘಟನೆಯನ್ನು ನನ್ನ ಅಪ್ಪ ನಮಗೆ ಹೇಳಿದ್ದರು. ಇದು ಅವರ ಬಾಲ್ಯದಲ್ಲಿ ನಡೆದ ಘಟನೆ. ಅವರಿಂದ ಕೇಳಿ ತಿಳಿದ ಈ ವಿವರವನ್ನು ಓದುಗರೊಂದಿಗೆ ಹಂಚಿಕೊಂಡಿದ್ದೇನೆ. ನನ್ನ ಅಪ್ಪ ವ್ಯಾಸಂಗವನ್ನು ಮುಂದುವರೆಸಲು ತನ್ನ ಸ್ವಗ್ರಾಮವನ್ನುಬಿಟ್ಟು ಮೇಲುಕೋಟೆಗೆ ಹೋಗಬೇಕಾಯಿತು. ಆಗೆಲ್ಲ ಎಲ್ಲೆಂದರೆ ಅಲ್ಲಿ ಶಾಲಾ ಕಾಲೇಜುಗಳು ಇರಲಿಲ್ಲ. ಹೆಚ್ಚಿನ ಓದಿಗಾಗಿ ಪ್ರಮುಖ ಪಟ್ಟಣ ನಗರಗಳಲ್ಲಿ ಮಾತ್ರ ಇದ್ದ ಶಾಲೆಗಳಿಗೆ ಹೋಗಬೇಕಾಗಿತ್ತು.

ಹೀಗೆ ಮೇಲುಕೋಟೆಗೆ ಹೋದ ನನ್ನಪ್ಪ ಅಲ್ಲಿನ ಸಂಸ್ಕೃತ ಪಾಠಶಾಲೆಯಲ್ಲಿ ತಮ್ಮ ಓದನ್ನು ಮುಂದುವರೆಸುತ್ತಿದ್ದ ಸಮಯ. ಸಂಪ್ರದಾಯಸ್ಥ ಮನೆತನದಲ್ಲಿ ಹುಟ್ಟಿ ಬೆಳೆದಿದ್ದರಿಂದ ಚಿಕ್ಕ ವಯಸ್ಸಿನಿಂದಲೇ ತನ್ನ ತಂದೆಯಿಂದ ವೇದ ಪಾಠಗಳನ್ನು ಅಭ್ಯಾಸ ಮಾಡಿದ್ದರು. ಆಗೆಲ್ಲ ಸಂಪ್ರದಾಯಸ್ಥ ಬ್ರಾಹ್ಮಣ ಸಂಸಾರದಲ್ಲಿ, ಮನೆಯಲ್ಲಿರುವ ಗಂಡುಮಕ್ಕಳಿಗೆಲ್ಲ ಅವರು 8-10 ವರ್ಷ ವಯಸ್ಸಿನವರಾಗುವ ಒಳಗೇ ವೇದಪಾಠವನ್ನು ಬಾಯಿಪಾಠ ಮಾಡಿಸಿಬಿಡುತ್ತಿದ್ದರು.

ನನ್ನ ತಾತ ಆಗಿನ ಕಾಲಕ್ಕೆ ಸಾಮವೇದದ ಘನ ಪಂಡಿತರಾಗಿದ್ದರು. ಆದರೂ ಯಾವ ಬಿರುದು ಬಾವಲಿಗಳನ್ನೂ ಪಡೆದವರಲ್ಲ. ಹಾಗೆ ಮನ್ನಣೆ ಸಿಗಬೇಕಾದರೆ ದೂರದ ರಾಜನ ಆಸ್ಥಾನಕ್ಕೆ ನಡೆದುಕೊಂಡು ಹೋಗಿ, ಅವಕಾಶಕ್ಕಾಗಿ ಕಾದು, ಅದೃಷ್ಟ ಇದ್ದರೆ ರಾಜನ ದರುಶನ ಪಡೆದು, ಬಿರುದು ಶಾಲು ಒಂದಷ್ಟು ದಕ್ಷಿಣೆ ಪಡೆಯಲು ಪಾಡುಪಡಬೇಕಿತ್ತು. ಇಷ್ಟಲ್ಲಾ ಸಾಹಸ ಮಾಡಲು ನನ್ನ ತಾತನಿಗೆ ವ್ಯವಧಾನ ಇರಲಿಲ್ಲವೇನೋ. ಆದರೂ ಸುತ್ತಮುತ್ತಲಿನ ಪ್ರಾಂತ್ಯದಲ್ಲಿ ಸಾಮವೇದದ ವಿಚಾರದಲ್ಲಿ ನನ್ನ ತಾತನ ತೀರ್ಪೇ ಅಂತಿಮ. ಹೀಗೆ ವೇದಪಂಡಿತರ ವೃಂದದಲ್ಲಿ ಅವರಿಗೆ ಅಷ್ಟು ಹೆಚ್ಚಿನ ಮನ್ನಣೆ ಇತ್ತು.

ನನ್ನ ಅಪ್ಪ ಮೇಲುಕೋಟೆಯಲ್ಲಿ ಅಲ್ಲಿನ ಹೈಸ್ಕೂಲಿನ ಮುಖ್ಯೋಪಾಧ್ಯಾಯರ ಮನೆಯಲ್ಲಿಯೇ ತಂಗಿದ್ದು ವ್ಯಾಸಂಗ ಮುಂದುವರಸುತ್ತಿದ್ದರು. ಆ ಮುಖ್ಯೋಪಾಧ್ಯಾಯರು ನನ್ನ ತಾತನಿಗೆ ಬಹಳ ತಿಳಿದವರು ಮತ್ತು ದೂರದ ಸಂಬಂಧ ಕೂಡ. ಇದರಿಂದಾಗಿ ನನ್ನ ಅಪ್ಪ ಅವರ ಮನೆಯಲ್ಲಿರಲು ಏರ್ಪಾಡಾಗಿತ್ತು. ಆ ಮುಖ್ಯೋಪಾಧ್ಯಾಯರಿಗೆ ಮೇಲುಕೋಟೆಯ ಚಲುವನಾರಾಯಣಸ್ವಾಮಿ ದೇವಸ್ಥಾನದಲ್ಲಿ ದೇವರ ತೀರ್ಥದ ಬಟ್ಟಲನ್ನು ಜೋಪಾನವಾಗಿ ಹಿಡಿದು ದೇವರ ಉತ್ಸವದ ಹಿಂದೆ ನಡೆದು ಬರುವ ಒಂದು ಅಧಿಕಾರ ಇತ್ತು. ಈ ರೀತಿ ದೇವರ ಕೊಡೆ, ಚಾಮರ, ದೀವಟಿಗೆ ಮತ್ತು ಇತರ ಕೆಲಸಗಳನ್ನು ಒಂದೊಂದು ಕುಟುಂಬಕ್ಕೆ ವಂಶಪಾರಂಪರ್ಯವಾಗಿ ನೀಡಲಾಗಿತ್ತು.

ಆ ಮುಖ್ಯೋಪಾಧ್ಯಾಯರಿಗೆ ಸಾಮವೇದವನ್ನು ಕಲಿಯುವ ಆಸೆಯಿಂದ ನನ್ನಪ್ಪನನ್ನು ತನಗೆ ಸಾಮವೇದ ಪಾಠ ಹೇಳಿಕೊಡುವಂತೆ ಕೇಳಿದರು. ಬೆಳಿಗ್ಗೆ ಶಾಲೆಯಲ್ಲಿ ನನ್ನ ಅಪ್ಪ ಆ ಮುಖ್ಯೋಪಾಧ್ಯಾಯರಿಗೆ ಶಿಷ್ಯ. ಸಂಜೆ ಹೊತ್ತು ಇಳಿದ ಮೇಲೆ ನರಸಿಂಹಸ್ವಾಮಿ ಬೆಟ್ಟದ ಅಡಿಯಲ್ಲಿರುವ ಕಲ್ಯಾಣಿಯ ಮೆಟ್ಟಿಲುಗಳ ಮೇಲೆ ಕುಳಿತು ನನ್ನ ಅಪ್ಪ ಅವರಿಗೆ ಸಾಮವೇದ ಪಾಠ ಮಾಡಬೇಕು. ಆಗ ನನ್ನ ಅಪ್ಪ ಅವರಿಗೆ ಗುರು. ಇದಕ್ಕೆ ಗುರುದಕ್ಷಿಣೆಯ ರೂಪದಲ್ಲಿ ದೇವಸ್ಥಾನದ ತನ್ನ ಅಧಿಕಾರವನ್ನು ನನ್ನಪ್ಪನಿಗೆ ವಹಿಸಿ ಅದರಿಂದ ತಿಂಗಳಿಗೆ ಒಮ್ಮೆ ದೇವಸ್ಥಾನದಿಂದ ಅವರಿಗೆ ಸಂದಾಯವಾಗುತ್ತಿದ್ದ ಮೂರು ಕಾಸುಗಳನ್ನು ನನ್ನ ಅಪ್ಪನಿಗೆ ಕೊಡಬೇಕು. ಹೀಗೆ ಇವರಿಬ್ಬರೂ ಈಗ ಹೇಳುವಂತೆ Two-in-one ರೀತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರಂತೆ.

ಜೀವನ ಹೀಗೆ ಸಾಗುತ್ತಿದ್ದಾಗ ಒಮ್ಮೆ ನನ್ನ ತಾತ ಸಹ ಯಾವುದೋ ಕಾರಣಕ್ಕಾಗಿ ಮೇಲುಕೋಟೆಗೆ ಬಂದಿದ್ದರಂತೆ. ಆ ಸಮಯದಲ್ಲಿ ಪ್ಲೇಗು ಮಾರಿ ಆ ಊರಿನಲ್ಲಿ ತನ್ನ ಪಿಶಾಚ ನರ್ತನವನ್ನು ಶುರು ಮಾಡಿತು. ಸುಮಾರು ಜನರಿಗೆ ಪ್ಲೇಗು ತಗುಲಿ ಸತ್ತವರ ಸಂಖ್ಯೆಯೇ ತಿಳಿಯದಷ್ಟು ಜನ ಮೃತಪಟ್ಟರು. ಅಗ್ರಹಾರದಲ್ಲಿಯೂ ಜನರು ಸಾಯುವುದು ಪ್ರಾರಂಭವಾಯಿತು.

ಅಲ್ಲಿ ಒಂದು ಮನೆಯಲ್ಲಿ, ತಾತ, ಮಗ ಮತ್ತು ಮೊಮ್ಮಗ ಈ ಮೂವರೂ ಒಂದೇ ದಿನ ಪ್ಲೇಗು ರೋಗಕ್ಕೆ ತುತ್ತಾಗಿ ಒಬ್ಬರ ಹಿಂದೆ ಮತ್ತೊಬ್ಬರಂತೆ ಮೂರೂ ಜನರೂ ಮರಣ ಹೊಂದಿದರು. ಈ ಭೀಕರ ಪರಿಸ್ಥಿತಿಯಲ್ಲಿ ಮೃತಪಟ್ಟವರ ಅಂತ್ಯ ಸಂಸ್ಕಾರ ಯಾರು ಮಾಡುವುದು. ಮನೆಯಲ್ಲಿದ್ದ ಮೂರು ಗಂಡಸರೂ ಸತ್ತು ಬಿದ್ದಿದ್ದಾರೆ. ಇನ್ನಿರುವ ಹೆಂಗಸರು ಏನೂ ತಾನೆ ಮಾಡಿಯಾರು. ಸತ್ತವರನ್ನು ನೆನೆದು ದುಃಖಿಸುವುದೇ, ಶವಸಂಸ್ಕಾರ ಮಾಡಲು ಸಾಧ್ಯವಾಗದೇ ಮರುಗುವುದೇ, ಯಾರಿಗಾಗಿ ದುಃಖಿಸುವುದು, ಇದ್ದ ಮೂರೂ ಗಂಡು ದಿಕ್ಕು ಮರಣಿಸಿವೆ. ಇಂಥ ಹೃದಯ ವಿದ್ರಾವಕ ಸ್ಥಿತಿಯಲ್ಲಿತ್ತು ಆ ಮನೆ ಮತ್ತು ಅಲ್ಲಿನ ಬದುಕುಳಿದವರ ಸ್ಥಿತಿ.

ಆಗ ಆ ಮನೆಗೆ ನನ್ನ ತಾತ ಮತ್ತು ನನ್ನ ಅಪ್ಪ ಹೋಗಿ ಅಲ್ಲಿನ ದಾರುಣ ಸ್ಥಿತಿಯನ್ನು ಕಂಡರು. ಇಲ್ಲಿ ಗಮನಿಸುವ ವಿಚಾರವೆಂದರೆ ಪ್ಲೇಗು ಎಂಬ ಹೆಸರು ಕೇಳಿದರೇನೆ ಮೈಲುದೂರ ಓಡುವ ಪರಿಸ್ಥಿತಿಯಲ್ಲಿ ಪ್ಲೇಗಿನಿಂದ ಒಬ್ಬರಲ್ಲ ಮೂರು ಜನ ಸತ್ತು ಬಿದ್ದಿರುವ ಮನೆಗೆ ಇವರಿಬ್ಬರೂ ಹೋಗಿದ್ದಾರೆ. ಅಲ್ಲಿನ ಸ್ಥಿತಿಯನ್ನು ಗಮನಿಸಿದ ನನ್ನ ತಾತ, ತಕ್ಷಣ ನನ್ನ ಅಪ್ಪನಿಗೆ ಅಲ್ಲಿ ಸತ್ತಿರುವ ಒಬ್ಬೊಬ್ಬರನ್ನೂ ಊರ ಹೊರಗಿನ ಸ್ಮಶಾನಕ್ಕೆ ಸಾಗಿಸಲು ಹೇಳಿದರು. ಮೊದಲೇ ಪ್ಲೇಗಿನಿಂದ ಸತ್ತಿದ್ದಾರೆ. ಇನ್ನೂ ಶವ ಹೊರಲೂ ಸಹ ಜನರಿಲ್ಲ. ಸತ್ತಮೇಲೆ ಗಾದೆಯ ಮಾತಿನಂತೆ ದೇಹಗಳು ಹೆಣಭಾರ.

ಅಲ್ಪಸ್ವಲ್ಪ ಧೈರ್ಯದಿಂದ ಆ ಮನೆಯ ಮುಂದೆ ಸೇರಿದ್ದ ಕೆಲವರು, ನನ್ನ ತಾತ ಹೀಗೆ ತನ್ನ ಮಗನನ್ನು ಹೆಣಹೊರಲು ಹೇಳಿದ್ದನ್ನು ಕೇಳಿ, ಶಾಸ್ತ್ರದ ಪ್ರಕಾರ, ತಾಯಿ ತಂದೆ ಜೀವಂತವಾಗಿರುವ ನನ್ನ ಅಪ್ಪ ಶವಸಂಸ್ಕಾರ ಮಾಡುವುದು ಸರಿಯಲ್ಲ ಎಂದು ಕೊಂಕು ತೆಗೆದರು. ನೋಡಿ ಅಂಥ ದಾರುಣ ಸಮಯದಲ್ಲೂ ಶಾಸ್ತ್ರಕ್ಕೆ ಜೋತು ಬಿದ್ದು, ಮನುಷ್ಯತ್ವವನ್ನು ಮರೆತವರು ಇದ್ದರು. ಈ ರೀತಿಯ ಜನ ಎಲ್ಲ ಕಾಲದಲ್ಲೂ ಇದ್ದೇ ಇರುತ್ತಾರೆ.

ಇದನ್ನು ಕೇಳಿ ನನ್ನ ತಾತನಿಗೆ ತಡೆಯಲಾರದಷ್ಟು ಕೋಪಬಂದು, “ಯಾವ ಶಾಸ್ತ್ರದಲ್ಲಿ ಹೀಗೆ ಹೇಳಿದೆ? ಅಂತ್ಯ ಸಂಸ್ಕಾರ ಇಲ್ಲದೇ ಅನಾಥಪ್ರೇತವಾಗಿ ಹದ್ದು ನಾಯಿಗಳಿಗೆ ಆಹಾರವಾಗಬೇಕೆ? ಅಂಥ ಶಾಸ್ತ್ರ ಇದ್ದರೆ ಅದನ್ನು ಸುಡಿ. ಜೀವಂತವಾಗಿ ಇರುವ ಅವನ ತಂದೆ ನಾನೇ ಅವನಿಗೆ ಹೇಳುತ್ತಿದ್ದೇನೆ, ಮತ್ತೆ ಯಾವ ಶಾಸ್ತ್ರ ಅವನನ್ನು ಬೇಡ ಎಂದು ಹೇಳಲು. ಒಬ್ಬ ಮನುಷ್ಯ ಸತ್ತಮೇಲೆ ಅವನಿಗೆ ಗೌರವಯುತವಾದ ಅಂತಿಮ ಸಂಸ್ಕಾರ ಮಾಡುವುದು ಮಾನವಧರ್ಮ. ಅದನ್ನು ಮೀರಿದ ಬೇರಾವ ಶಾಸ್ತ್ರ-ಪುರಣಾಗಳಿದ್ದರೆ ಅವುಗಳೆಲ್ಲ ಮುಟ್ಠಾಳರ ಶಾಸ್ತ್ರಗಳು. ಅವಕ್ಕೆ ಕವಡೆಕಾಸಿನ ಕಿಮ್ಮತ್ತಿಲ್ಲ. ಬಿಸಾಕಿ ಅವನ್ನೆಲ್ಲ” ಎಂದರು.

ನಂತರ ನನ್ನ ಅಪ್ಪ ಮತ್ತು ನನ್ನ ತಾತ ಇಬ್ಬರೇ ಸೇರಿ ಅಲ್ಲಿ ಸತ್ತಿದ್ದ ಮೂವರ ಶವಗಳನ್ನು ಒಂದೊಂದಾಗಿ ಸ್ಮಶಾನಕ್ಕೆ ಸಾಗಿಸಿ, ಅಲ್ಲಿ ಇಲ್ಲಿ ಹೋಗಿ ಕಟ್ಟಿಗೆ ಸಂಗ್ರಹಿಸಿ ಮೂರೂ ಜನರ ಅಗ್ನಿ ಸಂಸ್ಕಾರವನ್ನು ಶಾಸ್ತ್ರೋಕ್ತವಾಗಿ ಮಾಡಿ ಮುಗಿಸಿ ಸಂಜೆಯ ವೇಳೆಗೆ ಊರಹೊರಗಿನ ಕಲ್ಯಾಣಿಯಲ್ಲಿ ಸ್ನಾನಮಾಡಿ ಮನೆಗೆ ಬಂದು ಸೇರಿದರು.

ಇದನ್ನು ನನ್ನ ಅಪ್ಪ ನನಗೆ ಹೇಳಿದಾಗ ಆ ವಯಸ್ಸಿನಲ್ಲಿ ನನಗೆ ಅದು ಒಂದು ಸಾಹಸ ಘಟನೆಯೆಂದು ಮಾತ್ರ ತಿಳಿಯಿತು. ಆದರೆ ಈಗ ಬುದ್ಧಿ ಬಲಿತ ಮೇಲೆ ಆಲೋಚಿಸಿದಾಗ ನನ್ನ ತಾತನ ಆ ನಿಲುವು, ಅವರು ಮಾನವ ಧರ್ಮದ ಮೇಲೆ ಇಟ್ಟಿದ್ದ ಅಚಲ ನಂಬಿಕೆ, ಬರೀ ಗೊಡ್ಡು ವೇದಾಂತಕ್ಕೆ ಜೋತು ಬೀಳದೆ ಮನುಷ್ಯತ್ವವನ್ನು ಮೆರೆದ ಅವರ ಕೆಚ್ಚು ಇವೆಲ್ಲ ನನ್ನ ಅರಿವಿಗೆ ವೇದ್ಯವಾಗುತ್ತಿದೆ.

ಇದು ಆದಿ ಶಂಕರರು, ಸನ್ಯಾಸ ಸ್ವೀಕರಿಸಿ, ದೇಶಾಟನೆ ಮಾಡುತ್ತಿದ್ದ ಸಮಯದಲ್ಲಿ, ತಮ್ಮ ತಾಯಿಯು ಮೃತಪಟ್ಟ ಸುದ್ದಿ ತಿಳಿದು, ಅವಳಿಗೆ ಕೊಟ್ಟ ಮಾತಿನಂತೆ ಅವಳ ಅಂತ್ಯ ಸಂಸ್ಕಾರ ಮಾಡಲು ಬಂದಾಗ ಅಲ್ಲಿದ್ದ ಗೊಡ್ಡು ವೈದಿಕರು, ಸನ್ಯಾಸಿಯಾದವನು ಅಂತ್ಯಸಂಸ್ಕಾರ ಮಾಡಬಾರದು ಎಂದು ತಡಯೊಡ್ಡಿದ ಘಟನೆಯನ್ನು ನೆನಪಿಗೆ ತರುತ್ತದೆ.

ಕಾಲ ಯಾವುದೇ ಇರಲಿ, ಕ್ರಾಂತಿಕಾರಿ ಚಿಂತಕರೂ, ಪಥ ನಿರ್ಮಾಪಕರೂ ಇದ್ದೇ ಇರುತ್ತಾರೆ. ಜತೆಯಲ್ಲಿಯೇ ಗೊಡ್ಡು ವೇದಾಂತಿಳೂ, ಅಲ್ಪಮತಿಗಳೂ, ಸಂಕುಚಿತ ಮನೋಭಾವದ ಸಂಪ್ರದಾಯಸ್ಥರೂ ಒಟ್ಟೊಟ್ಟಿಗೆ ಇರುತ್ತಾರೆ ಎಂದು ತಿಳಿದೆ

Rating
No votes yet

Comments

Submitted by kavinagaraj Mon, 03/24/2014 - 09:11

ಇಂದು ಆಚರಣೆಯಲ್ಲಿರುವ ಅನೇಕ ಸಂಪ್ರದಾಯಗಳು ಅವೈದಿಕವಾಗಿವೆ. ಶಾಸ್ತ್ರಗಳಿಗಿಂತ ರೂಢಿಗತ ಸಂಪ್ರದಾಯಗಳೇ ಮೇಲುಗೈ ಪಡೆದಿವೆ. ವಿಚಾರವಂತರು ಈ ಬಗ್ಗೆ ಗಮನ ಹರಿಸಿ ಬದಲಾವಣೆ ತರುವತ್ತ ಮುನ್ನಡೆಯಬೇಕಾದ ಸಮಯವಿದು. ಧನ್ಯವಾದಗಳು, ಅರವಿಂದತನಯರೇ.