ಮಾಯ.... ಮೋಡಿ..... ಮಂತ್ರ..ನಂಬಿಕೆ?..... ಅಲ್ಲಿ ನಡೆದಿದ್ದು ಏನು..?
ಮಂಜುನಾಥ್ ಅವರ ಮನೆಯಲ್ಲಿ ನಡೆದ ಘಟನೆಗಳ ಬಗ್ಗೆ ಅವರ ಅನುಭವ, ಮತ್ತು ಮನೆಯಲ್ಲಿ ನಡೆದ ಅಸಹಜ ಸನ್ನಿವೇಶಗಳನ್ನು ತೆರಿದಿಟ್ಟಿದ್ದು, ನಂತರ ಅನೇಕ ಮಂದಿ ಈ ವಿಚಾರವಾಗಿ ತಮ್ಮ ಅನಿಸಿಕೆಗಳನ್ನು ಹಂಚಿ ಕೊಂಡ ಮೇಲೆ, ೨೦೧೧ ಮಾರ್ಚ್ ತಿಂಗಳ
೩೧ ತಾರೀಕಿನ ದಿನ ನನಗಾದ ಅನುಭವವನ್ನು ತಮ್ಮ ಮುಂದೆ ಬಿಚ್ಚಿಡಬೇಕಿನಿಸುತ್ತಿದೆ.
ವಿಜ್ಞಾನ ಎಷ್ಟೊ ವಿಷಯಗಳನ್ನು ಅನಾವರಣ ಮಾಡಿದೆ. ಘಟನೆಗಳು ನಡೆದಾಗ, ಅದರ ಹಿಂದೆ ಈ ರೀತಿಯ ಕಾರಣವಿರಬಹುದು, ಆರೋಗ್ಯ ಏರುಪೇರಿರಬಹುದು, ಮಾನಸಿಕ ಭ್ರಮೆ ಇರಬಹುದು, ಮೂಡ ನಂಬಿಕೆ... ಹಾಗೆ... ಹೀಗೆ.... ಮತ್ತಿನ್ನೇನೊ ಚರ್ಚೆಗಳು ಉದ್ಭವಿಸುತವೆ. ಘಟನೆಯಲ್ಲಿ, ಘಟನೆಯ ಒಂದು ಭಾಗವಾಗಿ ಅನುಭವಿಸಿದಾಗ ಅದನ್ನು ಎದುರಿಸಿದವರಿಗೆ ಮಾತ್ರ ಅದೇನೆಂದು ಅರ್ಥಮಾಡಿಕೊಳ್ಳಲು ಸಾಧ್ಯ. ವಿಜ್ಞಾನ ಯಾವುದನ್ನಾದರೂ ವಿಶ್ಲೇಷಿಸಿ ಹೇಳಿದಾಗ, ಅಲ್ಲಿ ಹೊಸದನ್ನೇನೂ ತೋರಿಸುವುದಿಲ್ಲ. ಇಷ್ಟುದಿನ ನಮ್ಮ ಗಮನಕ್ಕೆ ಬಾರದಿರುವುದನ್ನು ಕಂಡು ಕೊಂಡಿರುತ್ತದೆ ಅಷ್ಟೆ, ಆದರೆ ನಮಗೆ ಕಾಣುವುದಕ್ಕೆ ಮೊದಲೂ ಕೂಡ ಆ ‘ಶಕ್ತಿ‘( ಧನಾತ್ಮಕ ಅಥವ ಋಣಾತ್ಮಕ) ಇದ್ದೆ ಇದೆ. ಅದನ್ನೇನೂ ವಿಜ್ಞಾನ ಹುಟ್ಟು ಹಾಕಿಲ್ಲ (ವಿಜ್ಞಾನದ ಪ್ರಕಾರ ಕೂಡ ಶಕ್ತಿಯನ್ನು - ಎನರ್ಜಿ- ಹುಟ್ಟುಹಾಕಲಾಗಲಿ, ನಾಶಮಾಡಲಾಗಲಿ ಸಾಧ್ಯವಿಲ್ಲ). ಜೊತೆಗೆ ವಿಜ್ಞಾನ ಕೂಡ ಜ್ಞಾನದ ಒಂದು ಅಂಗ, ಎಲ್ಲಕ್ಕೂ ಮೀರಿದ ಒಂದು ಶಕ್ತಿ ಈ ಪ್ರಪಂಚವನ್ನಾಳುತ್ತಿದೆ, ಇದು ನನ್ನ ನಂಬಿಕೆ.
ನೇರವಾಗಿ ನನಗಾದ ಅನುಭವದತ್ತ ಬರುತ್ತೇನೆ,
ಈಗ ನಾವು ವಾಸವಾಗಿರು ಮನೆಯ ಹತ್ತಿರ, ಒಂದೆರಡು ಮನೆ ದಾಟಿ ನಮ್ಮ ಮನೆ ಸಾಲಿನಲ್ಲೆ ಇರುವ ಮನೆಯಲ್ಲಿ, ಗಂಡ-ಹೆಂಡತಿ, ಇನ್ನೂ ವರ್ಷ ತುಂಬಿಲ್ಲದ ಮಗು, ಜೊತೆಯಲ್ಲಿ ಆ ಮಗುವಿನ ಅಜ್ಜಿ ವಾಸವಾಗಿದ್ದರೆ. ಇದು ಅವರ ಸುಖಿ ಸಂಸಾರ.
ಆ ದಿನ ಬೆಳಗಿನ ಜಾವ ೫ ಗಂಟೆ ನಾನಿನ್ನೂ ಎದ್ದಿರಲಿಲ್ಲ, ನನ್ನಾಕೆ ಆಗಲೆ ಎದ್ದು
ಪ್ರತಿನಿತ್ಯದ ಅಡಿಗೆ ಮನೆ ಫ಼್ಯಾಕ್ಟರಿ ಪ್ರಾರಂಬಿಸಿದ್ದಳು. ಮಗಳು ಎಸ್ ಎಸ್ ಎಲ್ ಸಿ ಪರೀಕ್ಷೆಯ ಪೂರ್ವ ಸಿದ್ದತೆ ನಡೆಸುತ್ತಿದ್ದಳು. ಮಗಳು ರೂಮ್ ನಲ್ಲಿ ಓದುತ್ತಿದ್ದಾಳೆ, ಅವರಮ್ಮ ಅಡುಗೆ ಮನೆಯಲ್ಲಿದ್ದಾಳೆ. ನಾನು ಹಾಲ್ನಲ್ಲಿ ಮಲಗಿದ್ದೇನೆ, ಇನ್ನೇನು ಏಳಬೇಕು ಬೆಳಗಿನ ಮುಂಪುರು ಅರ್ಧ ಎಚ್ಚರ, ನಮ್ಮ ಮನೆಯ ಬಾಗಿಲು ಬಡಿದಂತಾಯ್ತು. ನನ್ನ ಮಗಳು ನನ್ನನ್ನು ಎಬ್ಬಿಸಿದಳು, ಅಪ್ಪ ಯಾರೋ ಬಂದಿದ್ದಾರೆ ಬಾಗಿಲು ತಟ್ತಾ ಇದ್ದಾರೆ, ಹಾಸಿಗೆಯಿಂದ ಎದ್ದು ಲುಂಗಿ ಸುತ್ತಿಕೊಂಡೆ, ಅಷ್ಟರಲ್ಲಿ ಮತ್ತೆ ಬಾಗಿಲು ಬಡಿಯಿತು ಆಚೆಯಿಂದ ‘ಮೋಹನ್ ಸ್ವಲ್ಪ ಬೇಗ ಬಾಗ್ಲು ತೆಗೀರಿ ನಾನು .......‘ (ಅವರ ಹೆಸರನ್ನು ಇಲ್ಲಿ ನಾನು ಬಳಸುತ್ತಿಲ್ಲ - ನನಗಾದ ಅನುಭವ ಮಾತ್ರ ನಿಮಗೆ ತಿಳಿಸಲು ಇಚ್ಚಿಸುತ್ತೇನೆ) ಅಷ್ಟರಲ್ಲಿ ನಮ್ಮ ಮನೆಯವರೂ ಹಾಲ್ಗೆ ಬಂದ್ರು, ‘ನೋಡಿ ತೆಗಿರಿ‘ ಅಂದ್ರು, ‘ಏ ವಾಯ್ಸ್ ಕೇಳಿದ್ರೆ ಪಕ್ಕದ ಮನೆ ..... ಕಣೆ,‘
ಬಾಗಿಲು ತೆಗೆದೆ.
ದೊಡ್ಡದಾಗಿ ಕಣ್ಣುಗಳನ್ನು ಬಿಟ್ಟು ಕೊಂಡು ನಿಂತಿದ್ದಾರೆ, ಬಾಗಿಲು ತೆಗೆದಿದ್ದೆ ತಡ
‘ಸಾರ್ ಸ್ವಲ್ಪ ಬೇಗ ಬನ್ನಿ ನಮ್ಮನೆಗೆ‘
ಆ ಕ್ಷಣದಲ್ಲಿ ನನ್ನ ಮನಸ್ಸಿಗೆ ಬಂದಿದ್ದು, ಭಹುಷಃ ಅವರ ವಯಸ್ಸಾದ ತಾಯಿಗೆ
ಏನೊ ಅನಾರೋಗ್ಯವಾಗಿರ ಬೇಕು, ಸಹಾಯ ಕೇಳುತ್ತಿದ್ದಾರೆ ಎಂದು ಕೊಂಡು ನಡೀರಿ ಅಂತ ಹಾಗೆ ಹೊರಟು ಬಿಟ್ಟೆ.
ನಮ್ಮ ಮನೆ ಗೇಟಿನಿಂದ ಹೊರಗೆ ಬಂದು ಗಾಬರಿಯಾಗಿ ನಡೆಯುತ್ತಲೆ ಅ ಮನುಷ್ಯ ‘ನೋಡಿ ಸಾರ್ ಯಾರೊ ನಮ್ಮ ಮನೆ ಬಾಗಿಲಲ್ಲಿ ಅರಿಶಿನ ಕುಂಕುಮ ಚೆಲ್ಲಿ, ಮೊಟ್ಟೆ ಒಡೆದು ಹಾಕಿ ದೊಡ್ಡ ಹಾಳೆಯಲ್ಲಿ, ಅದೆ ಅರಿಶಿನ ಕುಂಕುಮದಿಂದ ಏನೇನೊ ಬರೆದಿಟ್ಟಿದ್ದಾರೆ, ನನಗೆ ಭಯ ಆಗ್ತಿದೆ‘ - ಅಂತ ವರದಿ ಒಪ್ಪಿಸಿದ್ರು.
ನಾನು ಏನೂ ಮಾತನಾಡಲಿಲ್ಲ. ಅವರು ಅಷ್ಟು ಹೇಳಿದ್ದೆ ತಡ ನನ್ನ ಮನಸ್ಸಿನಲ್ಲಿ ತಕ್ಷಣ ನನ್ನ ಆರಾಧ್ಯ ದೈವ ಹನುಮಂತ ನಾಮಾಂಕಿತನಾಗಿ ನಿಂತ, ಮಾರುತಿ, ಹನುಮ, ಬಡಬಾನಲ ಎಂದು ನೆನೆಯುತ್ತಾ, ಅವರ ಮನೆ ಗೇಟಿನ ಒಳಗೆ ಸೇರಿದ್ದಾಗಿತ್ತು.
ಅವರ ಮನೆಯಬಳಿ ಹೋದಾಗ, ಅವರ ಹೆಂಡತಿ ಬಾಗಿಲು ಸಾರಿಸಲು ತಯಾರಿ ನಡೆಸಿದ್ದಾರೆ, ಆದರೂ ತುಂಬಾ ಗಾಬರಿಯಾಗಿದ್ದಾರೆ, ಅವರ ವಯಸ್ಸಾದ ತಾಯಿ
‘ನೋಡಿ ಮೋಹನ್ ಯಾರೋ ಇಂಥ ಕೆಲ್ಸ ಮಾಡಿದ್ದಾರೆ, ನಾವು ಯಾರಿಗೇನು ಅನ್ಯಾಯ ಮಾಡಿದ್ದೇವೆ‘
ಅಲ್ಲಿನ ಪರಿಸ್ಥಿತಿ ಗಮನಿಸಿದೆ, ಗೇಟಿನ ಹತ್ತಿರ ಸಣ್ಣ ಮಂಡಲ ಮಾಡಿ ಕೋಳಿ ಮೊಟ್ಟೆಯೊಂದನ್ನು ಅದರ ಮೇಲೆ ಒಡೆದಿದ್ದಾರೆ, ಪಕ್ಕದಲ್ಲೆ ಎ೪ ಸೈಜ಼ಿನ ಹಾಳೆ ಒಂದು ಮಡಿಚಿ ಇಡಲ್ಪಟ್ಟಿತ್ತು.
‘ನೋಡಿ ಮೋಹನ್ ಈಗ ಸ್ವಲ್ಪ ಹೊತ್ತಿಗೆ ಮುಂಚೆ ಇದೆಲ್ಲ ನಡೆದಿರುವ ಹಾಗಿದೆ, ಎಲ್ಲ ಇನ್ನೂ ಹಸಿ ಹಸಿಯಗೆ ಇದೆ, ಏನ್ಮಾಡೋಣ ಈಗ, ಪೋಲೀಸ್ ಕಂಪ್ಲೇಂಟ್ ಕೊಡೋಣ್ವ? ಹೇಗೆ?‘
‘ತಲೆ ಕೆಡಿಸ್ಕೊಬೇಡಿ ಬಿಡಿ ....., ಇದಕ್ಕೆಲ್ಲ ಪೋಲೀಸ್ ಅಂತ ಹೋದ್ರೆ ಏನೂ ಆಗೋಲ್ಲ, ಸುಮ್ನೆ ದುಡ್ಡು ತಿಂತಾರೆ ಅಷ್ಟೆ, ಮನೆ ದೇವರನ್ನು ನೆನೆದು, ಸ್ನಾನ ಮಾಡಿ ದೀಪ ಹಚ್ಚಿ, ಇದೆಲ್ಲ ಏನೂ ಮಾಡೋಲ್ಲ, ಯಾರೊ ಕೆಟ್ಟ ಮನಸ್ಸಿನವರು ಹೀಗೆಲ್ಲ ಮಾಡಿದ್ದಾರೆ ದೇವ್ರಿದ್ದಾನೆ ಹೆದ್ರುಕೊಬೇಡಿ‘ - ಅಂದೆ.
‘ಈಗ ಇದನ್ನು ಏನು ಮಾಡೋದು ಮೋಹನ್‘
‘ನೀರು ಹಾಕಿ ತೊಳೆದು ಬಿಡಿ ಅಷ್ಟೆ‘
‘ಆ ಚೀಟಿಯಲ್ಲಿ ಏನೇನೊ ಬರ್ದಿದ್ದಾರೆ ನೋಡಿ, ....... ನೀನು ಬೇಗ ಸಾಯಿ ಅಂತ ನನ್ನ ಹೇಂಡ್ತಿ ಹೆಸರು ಬರ್ದಿದೆ‘
ಆ ಹಾಳೆಯನ್ನು ನನ್ನ ಎಡಗೈಯಿಂದ ತೆಗೆದು, ಬಿಡಿಸಿ ಓದಿದೆ - .... ನೀನು ಬೇಗ ಸಾಯಿ- ಅಂತ ಅವರ ಹೆಸರು ಬರೆದಿದೆ. ಅರಿಶಿನ ಕುಂಕುಮ ಮಿಶ್ರಣವನ್ನು ಬಳಸಿ ಕೈ ಬೆರಳನಿಂದ ಬರೆದಿರುವ ಬರಹ. ಮಡಿಚಿ ಅದೆ ಸ್ಥಳದಲ್ಲಿಟ್ಟೆ. ಮತ್ತದೆ ಹೇಳಿದೆ
‘ ಯೋಚನೆ ಮಾಡಬೇಡಿ ಇದೆಲ್ಲ ಏನೂ ಆಗೋಲ್ಲ ದೇವರನ್ನು ನಂಬಿ‘
ಇಷ್ಟಾಗುವುದರಲ್ಲಿ ನನ್ನಾಕೆಯೂ ಅಲ್ಲಿಗೆ ಬಂದು ಅವರಿಗೆ ಸಮಾಧಾನ ಹೇಳ ತೊಡಗಿದರು. ಇಲ್ಲಿಯವರೆಗೂ ಎಲ್ಲವೂ ಸರಿಯಾಗಿತ್ತು. ಇಲ್ಲಿಂದ ಮುಂದೆ ನಡೆದಿದ್ದು ನನಗೆ ಅಸ್ಪಷ್ಟ. ಅದೇನೆಂದು ಸರಿಯಾಗಿ ನನಗೆ ಈವರೆಗೂ ಅರ್ಥವಾಗಿಲ್ಲ.
ಅವರ ಮನೆಯ ಗೇಟಿನ ಬಳಿ ನಿಂತಿದ್ದೇನೆ. ನಾನು ನಿಂತಿರುವ ಎಡಭಾಗದಲ್ಲಿ ಸ್ವಲ್ಪ ದೂರದಲ್ಲಿ ಆ ಕೈಂಕಾರ್ಯ ನಡೆದ ಜಾಗವಿದೆ. ಗೇಟಿನ ಹೊರಗೆ ನನ್ನಾಕೆ ಮತ್ತು ಆ ಮನೆಯಾಕೆ ನಿಂತು ಮಾತನಾಡುತ್ತಿದ್ದಾರೆ.
ಒಮ್ಮೆ ನನ್ನ ಕಣ್ಣಗಳು ಮಂಜು ಮಂಜಾಯಿತು, ಏಕೆ ಹೀಗಾಗುತ್ತಿದೆ, ಕಣ್ಣನ್ನು ಒಮ್ಮೆ ಉಜ್ಜಿ ಕೊಂಡೆ, ಸ್ವಲ್ಪ ಸರಿಹೋದಂತೆನಿಸಿದರೂ, ಪೂರ್ತಿ ಸರಿಯಿಲ್ಲ, ಈಗ ನಿಧಾನವಾಗಿ ನನ್ನ ಅಂಗಾಲುಗಳೆರಡೂ ಚುಮ ಚುಮ ಎನ್ನಿಸ ತೊಡಗಿತು, ಒಂದೆ ಜಾಗದಲ್ಲಿ ನಿಂತಿರುವುದರಿಂದ ಜೊವ್ವು ಹಿಡಿದಿರಬೇಕೆಂದೆಣಿಸಿ, ಅತ್ತ ಇತ್ತ ಸ್ವಲ್ಪ ಬದಲಾವಣೆ ಮಾಡಿದೆ. ಇಲ್ಲ ಮತ್ತದೆ ಅನುಭವ, ಹಾಗೆಯೆ ಅದು ಕಾಲಿನ ಮೇಲಕ್ಕೇರುತ್ತಿದೆ, ಈಗ ಅದು ಮಂಡಿಯನ್ನು ದಾಟಿ ತೊಡೆಗಳನ್ನು ತಲುಪಿದೆ, ತಕ್ಷಣ ನನ್ನ ಅರಿವು ನನ್ನನ್ನು ಎಚ್ಚರಿಸಿತು, ನನಗೇನೊ ಆಗುತ್ತಿದೆ ಇಲ್ಲಿರುವುದು ಸರಿಯಲ್ಲ,
ಅನ್ನಿಸಿತು. ಜೊತೆಗೆ ನನ್ನ ಸುತ್ತಮುತ್ತ ನಡೆಯುತ್ತಿರುವ ಮಾತುಗಳು ನನ್ನ ಶ್ರವಣಕ್ಕೆ ದೂರವಾಗುತ್ತಿರುವ ಅನುಭವ, ಕಣ್ಣಗಳು ಸ್ಪಷ್ಟವಾಗಿ ಕಾಣುತ್ತಿಲ್ಲ, ಭಹುಷಃ ಬೆಳಿಗ್ಗೆ ಎದ್ದೊಡನೆ ಅಭ್ಯಾಸದಂತೆ ಮಲ ವಿಸರ್ಜನೆ ಮಾಡಿಲ್ಲ ಹಾಸಿಗೆಯಿಂದ ಎದ್ದು ಹಾಗೆ ಬಂದೆನಲ್ಲ ಹಾಗಾಗಿ ಈ ರೀತಿ ಆಗುತ್ತಿದೆಯೋ ಏನೋ ಎಂಬ ಯೋಚನೆ, ಆದರೆ ಆ ಅಂಗದ ಒತ್ತಡವಿಲ್ಲವಲ್ಲ ಮತ್ತೇಕೆ ಹೀಗೆ ಎಂಬ ಮತ್ತೊಂದು ಯೋಚನೆ.
ಇಷ್ಟಾಗುವುದರಲ್ಲಿ ಆ ಚುಮು ಚುಮು ನನ್ನ ಶರೀರವನ್ನೆಲ್ಲಾ ವ್ಯಾಪಿಸಿತ್ತು, ಕಣ್ಣುಗಳು ಹೆಚ್ಚೂ ಕಡಿಮೆ ಪೂರ್ತಿ ಇಲ್ಲವೇನೋ ಅನಿಸಿತ್ತು. ಯಾರಮಾತುಗಳು ಸರಿಯಾಗಿ ಕೇಳುತ್ತಿಲ್ಲ. ದೀರ್ಘವಾದ ಒಂದು ಉಸಿರನ್ನು ತೆಗೆದುಕೊಂಡು ಮನೆ ಸೇರಿಬಿಡಬೇಕೆಂಬ ನಿರ್ಧಾರದಿಂದ ಅಲ್ಲಿಂದ ಕಾಲ್ತೆಗೆದೆ. ಮಾರುತಿಯ ನಾಮಾಮೃತ ಸ್ಮರಣೆ ನಿರಂತರ ಮನದಲ್ಲಿ ನಡೆದಿತ್ತು, ಮಂಜು ಮಂಜಾದ ಕಣ್ಣುಗಳನ್ನೆ ಬಳಸಿಕೊಂಡು ರಸ್ತೆಯಲ್ಲಿ ನಡೆಯುತ್ತಾ ನಮ್ಮ ಮನೆ ಗೇಟಿಗೆ ಬಂದೆ, ಗೇಟನ್ನು ತಲುಪುವ ಮುಂಚೆ ನಮ್ಮ ಮನೆ ಓನರ್ ಅವರ ಪತ್ನಿ ನನ್ನ ಎದುರಿಗೆ ಹಾಯ್ದು, ನಾನು ಬಂದ ಮನೆಯ ಕಡೆ ಹೋಗಿದ್ದುದು ಗೊತ್ತಾಗುತ್ತಿದ್ದರೂ ನನಗೆ ಗೊತ್ತಾಗಲಿಲ್ಲ,
ಗೇಟಿನ ಬಳಿ ನಮ್ಮ ಮನೆ ಓನರ್ ಸಿಕ್ಕಿದ್ರು, ಅವರ ಬಳಿ ನಾನು ಹೇಗೆ ಪ್ರತಿಕ್ರಿಯಿಸಿದೆನೊ ನನಗೆ ಸ್ಪಷ್ಟವಿಲ್ಲ, ‘ನೋಡಿ ಯಾರೊ ಏನೋ ಮಾಡಿದ್ದಾರೆ, ಸ್ವಲ್ಪ ನಾನು ಒಳಗೆ ಹೋಗಿ ಬರುತ್ತೇನೆ‘ ಅಷ್ಟು ಹೇಳಿದ್ದು ನೆನಪಿದೆ, ಅವರೆ ಅಂತ ಮನದಾಳದ ಪರಿಚಯದಿಂದ ತಿಳಿಯಿತೆ ಹೊರತು ಕಣ್ಣುಗಳಿಗೆ ಸ್ಪಷ್ಟವಿಲ್ಲ.
ನಮ್ಮ ಮನೆಯ ಒಳ ಹೊಕ್ಕೆ, ಭಹುಷಃ ಮಗಳು ಮನೆಯಹಾಲ್ನಲ್ಲಿದ್ದಳು ಅನ್ನಿಸುತ್ತದೆ
ನಾನು ಬಹಿರ್ದಸೆಗೆ ಹೋಗಿ ಬಿಡೋಣ ಎಲ್ಲವೂ ಸರಿಹೋಗುತ್ತದೆಂದೆಣಿಸಿ, ಹಾಗೆಯೆ ತಡಬಡಾಯಿಸಿಕೊಂದು ಹಿತ್ತಿಲಕಡೆ ಹೊರೆಟೆ, ಹಿಂಬಾಗಿಲ ಚಿಲಕ ತೆಗೆದೆ ಬಾಗಿಲನ್ನು ಹಿಂದಕ್ಕೆಳೆದೆ......... ಹಿಂದಕ್ಕೆಳೆದೆ....... ಅಷ್ಟೆ ನನಗೆ ಗೊತ್ತಿರುವುದು.
ಮನದಲ್ಲಿ ಮಾರುತಿ ಸ್ಮರಣೆ ನಡೆದಿದೆ, ದೂರದಲ್ಲೆಲ್ಲೊ ನನ್ನ ಮಗಳ ಸ್ವರ ಕೇಳುತ್ತಿದೆ ‘ಅಪ್ಪ.. ಅಪ್ಪ.... ಏಳಪ್ಪ ಏನಾಯ್ತು.. ಏಳು ಎದ್ದೇಳು....‘ ತಲೆ ಎತ್ತಲು ಪ್ರಯತ್ನಿಸಿದೆ ಇಲ್ಲ... ಇಲ್ಲ... ನನ್ನಿಂದಾಗತ್ತಿಲ್ಲ.. ಶರೀರದ ಯಾವುದೆ ಅಂಗ ನನ್ನ ಮಾತು ಕೇಳುತ್ತಿಲ್ಲ ಅನ್ನಿಸಿತು,.... ‘ಮಾರುತಿ ಹನುಮ‘ ಮನಸ್ಸು ಉಚ್ಚರಿಸುತ್ತಿದೆ... ದೂರದಲ್ಲಿ ನನ್ನ ಮಗಳ ದ್ವನಿ ‘ಅಮ್ಮ ಬೇಗ ಬಾ ಅಪ್ಪ ಬಿದ್ಬಿಟ್ಟಿದೆ‘
ಸ್ವಲ್ಪ ಸಮಯದಲ್ಲೆ ನನ್ನ ಸುತ್ತ ಜನರಿದ್ದಾರೆ ಎಂಬ ಅನುಭವ, ನನ್ನ ಹೆಂಡತಿ ‘ಅಯ್ಯೊ ಏನಾಯ್ತು ನಿಮ್ಗೆ ಏಳಿ‘ ಕತ್ತೆತ್ತಲು ಪ್ರಯತ್ನಿಸಿದೆ, ಸ್ವಲ್ಪ ಮಟ್ಟಿಗೆ ಸಾಧ್ಯವಾದರೂ ಯಶಸ್ವಿಯಾಗಲಿಲ್ಲ. ಮತ್ತೆ ಕುಸಿಯಿತು....ಮಾರುತಿ ಹನುಮ...
ಎಬ್ಬಿಸಿ ಕೂಡಿಸಿ ಯಾರೋ ಹೇಳಿದರು. ನನ್ನನ್ನು ಎಬ್ಬಿಸಿ ಕೂಡಿಸಿದರು, ನೀರಿನಿಂದ ಮುಖ ತೋಳಸಿದರು. ಈಗ ನನಗೆ ಸ್ವಲ್ಪ ಆರಾಮವಾಯ್ತು, ಗೋಡೆಗೆ ಒರಗಿ ಕುಳಿತು ನೀರು ಬೇಕೆಂದು ಸನ್ನೆ ಮಾಡಿದೆ, ನೀರು ಕೊಟ್ಟರು. ಒಂದು ದೀರ್ಘವಾದ ಉಸಿರನ್ನು ತೆಗೆದುಕೊಂಡು, ಮಾರುತಿ ಹೆಸರನ್ನು ಹೇಳುತ್ತಾ ಕಣ್ಣು ಬಿಟ್ಟೆ.
ನನ್ನ ಸುತ್ತಲೂ ಎಲ್ಲರೂ ಇದ್ದಾರೆ, ನಮ್ಮ ಮನೆ ಓನರ್, ಅವರ ಹೆಂಡತಿ, ನನ್ನಾಕೆ, ಆ ಅವಗಡ ಸಂಭವಿಸಿರುವ ಆ ಮನೆಯಾತ, ಅವರ ತಾಯಿ, ಎದುರು ಮನೆಯಲ್ಲಿರುವ ನಮ್ಮಣ್ಣ, ಎಲ್ಲವೂ ನನಗೆ ಕಾಣಿಸುತ್ತಿದೆ, ಎಲ್ಲವೂ ಸರಿಯಾಗಿ ಕೇಳಿಸುತ್ತಿದೆ.
ನಮ್ಮ ಮನೆ ಓನರ್ ಅವರನ್ನು ನೋಡಿ
‘ಏನೋ ಒಂಥರ ಕಣ್ಣು ಕಪ್ಪು ಹತ್ಕೊಂಬಿಡ್ತು ಸಾರ್ ಎಲ್ಲೊ ಬಿ ಪಿ ಹೆಚ್ಚು ಕಡ್ಮೆ ಆಗಿದೆ ಅನ್ಸುತ್ತೆ‘ ಅಂದೆ
‘ಹೋಗ್ಲಿ ಬಿಡಿ ಸಾರ್ ಏನೂ ಆಗ್ಲಿಲ್ವಲ್ಲ, ಬನ್ನಿ ಸ್ವಲ್ಪ ರೆಸ್ಟ್ ತಗೋಳಿ ಎಲ್ಲ ಸರಿಹೋಗುತ್ತೆ‘ ಅಂತ ಅಲ್ಲಿಂದ ಎಬ್ಬಿಸಿ ಕೊಂಡು ಬಂದು ಹಾಲ್ನಲ್ಲಿ ದೀವಾನ ಮೇಲೆ ಮಲಗಿಸ್ದ್ರು. ಅವ್ರೆ ಹೋಗಿ ಅವರ ಮನೆಯಲ್ಲಿ ಇದ್ದ ಬಿ ಪಿ ಯಂತ್ರ ತಂದು ಪರೀಕ್ಷೆ ಮಾಡಿದ್ರು. ಬಿ ಪಿ ನಾರ್ಮಲ್. ಶುಗರ್ ಟೆಸ್ಟ್ ಮಾಡಿದ್ರು. ಅದೂ ನಾರ್ಮಲ್. ಕೆಲವು ಕ್ಷಣದ ಹಿಂದೆ ಸಂಪೂರ್ಣ ಅಬ್ನಾರ್ಮಲ್ ಎನಿಸಿದ್ದ ನನ್ನ ಶರೀರ ನನಗೀಗ ಪೂರ್ಣ ನಾರ್ಮಲ್ ಎನಿಸುತ್ತಿದೆ.
ಸ್ವಲ್ಪ ಹೊತ್ತು ಎಲ್ಲರೂ ನನ್ನ ಜೊತೆಯಲಿದ್ದರು, ಸರಿ ಅಷ್ಟರಲ್ಲಿ ಆ ಮನೆಯಾತ ‘ಮನೆಯಲ್ಲಿ ಮಗು ಜೊತೆ ...... ಒಬ್ಬಳೆ ಇದ್ದಾಳೆ ಹೋಗೋಣ ನಡಿ‘ ಅಂತ ಅವರಮ್ಮನ ಜೊತೆ ಹೋಗಿ ತಿರುಗಿ ವಾಪಸ್ ಬಂದು,
‘ಅದನ್ನು ಏನು ಮಾಡೋದು ಸಾರ್ ಅಂತ ಕೇಳಿದ್ರು‘
‘ನೀರು ಹಾಕಿ ತೊಳೆದು ಬಿಡಿ, ಏನೂ ಗಾಬ್ರಿ ಆಗ್ಬೇಡಿ, ಅದಕ್ಕೂ ನನಗಾಗಿದ್ದಕ್ಕೂ ಸಂಬಂಧವಿಲ್ಲ, ಆರಾಮಾಗಿರಿ ಹೋಗಿ ದೇವ್ರಿದ್ದಾನೆ‘ ಅಂದೆ
ನಮ್ಮ ಮನೆ ಓನರ್ ಕೂಡ ನನಗೆ ಧ್ವನಿ ಸೇರಿಸಿ ಅವರಿಗೆ ಸಮಾಧಾನ ಹೇಳಿ ಕಳುಹಿಸಿದ್ರು.
ನನಗೆ ಆ ಸಮಯದಲ್ಲಿ ಎಷ್ಟು ಆರೈಕೆ ಮಾಡಬೇಕೊ ಅಷ್ಟನ್ನೂ ಅವರವರ ಸ್ಥಾನದಲ್ಲಿ ಎಲ್ಲರೂ ನಿಸ್ವಾರ್ಥದಿಂದ ಮಾಡಿದರು. ಆ ಕ್ಷಣ ಬಿಟ್ಟರೆ ನನಗೆ ನಾನು ಸಂಪೂರ್ಣ ಮಾಮೂಲು ದೇಹ ಪರಿಸ್ಥಿಯನ್ನು ಹೊಂದಲ್ಪಟ್ಟಿದ್ದೇನೆ. ಇದರಲ್ಲಿ ಯಾವುದೆ ಸಂಶಯವಿಲ್ಲ.
ನನ್ನ ಎಡ ಕಣ್ಣು ಗುಡ್ಡೆಯ ಮೇಲೆ ಸ್ವಲ್ಪ ಊತವಿತ್ತು ಹಾಗಾಗಿ ನೋವೂ ಇತ್ತು. ಬಿದ್ದ ರಭಸಕ್ಕೆ ಮೂಗೇಟು ಬಿದ್ದಿತೆನಿಸಿತು. ಸರಿ ಆ ದಿನ ನಾನು ಮಾಮೂಲಿನಂತೆ ಕೆಲಸಕ್ಕೆ ಹೊರಡುತ್ತೇನೆಂದರೂ, ನನ್ನ ಮಗಳ ಮತ್ತು ಮನೆಯವರ ಒತ್ತಾಯದ ಮೇರೆಗೆ ರಜಾ ಹಾಕಿ ಮನೆಯಲ್ಲೆ ಉಳಿಯಬೇಕಾಯ್ತು. ಕಣ್ಣಿನ ಊತ ಎರಡು ದಿನ ಇದ್ದು ಆಮೇಲೆ ಸರಿಹೋಯ್ತು.
ನನಗೆ ಆಗ ಏನಾಯಿತೆಂದು ಮನೆಯಲಿದ್ದ ನನ್ನ ಮಗಳನ್ನು ಕೇಳಿದೆ.
‘ನೀನು ಹಿತ್ತಲ ಕಡೆ ಹೋಗಿ ಬಾಗಿಲು ತೆಗೆದು ಒಂದೆ ಸಾರ್ತಿ ಹಾಗೆ ನಿಂತಿದ್ದವನು ಮುಂದಕ್ಕೆ ದಡ್ ಅಂತ ಬಿದ್ದೆ, ನಾನು ಎಲ್ಲೊ ಇಲಿ ಬಂದಿರ್ಬೇಕು ಹಿಡ್ಯೊಕ್ಕೆ ಬಿದ್ಯೇನೊ ಅನ್ಕೊಂಡು ನೋಡ್ತಿದ್ದೆ, ಆದ್ರೆ ನೀನು ಏಳ್ಲೆ ಇಲ್ಲ, ಹತ್ತಿರ ಬಂದು ಅಲ್ಲಾಡ್ಸಿ ಕೂಗ್ದೆ ಆಗ್ಲೂ ಏಳ್ಲಿಲ್ಲ ಹೆದ್ರುಕೆ ಆಯ್ತು ಆಚೆ ಓಡೋಗಿ ಆಮ್ಮನ್ನ ಕೂಗ್ದೆ, ಎಲ್ಲ ಬಂದು ಕೂಗಿದ್ರೂ ನೀನು ಏಳ್ಲಿಲ್ಲ, ನಂಗೆ ಅಳು ಬಂತು ಗೌರಿ ಮನೆಗೆ ಹೋದೆ‘
......
......
..........
ಆ ಸಮಯವನ್ನು ನೆನೆದರೆ ಈಗಲೂ ನನಗೆ ಏನಾಗಿತ್ತೆಂದು ಹೊಳೆಯುತ್ತಿಲ್ಲ. ಒಂದು ಪಕ್ಷ ಬಿ ಪಿ ಹೆಚ್ಚು ಕಡಿಮೆಯಾಗಿದ್ದರೆ, ಅಷ್ಟು ಬೇಗ ಮತ್ತೆ ಎಲ್ಲವೂ ಹೇಗಿತ್ತೊ ಹಾಗೆ ಹೇಗಾಯ್ತು? ಅಷ್ಟೆ ಅಲ್ಲದೆ ಅದಕ್ಕೆ ಪೂರಕ ಮತ್ತು ಘಟನಾ ಪೂರ್ವ ಕೆಲವು ವಿಷಯಗಳು ಕೂಡ ನನ್ನ ಗಮನದಲ್ಲಿವೆ. ಆದರೂ ಒಮ್ಮೊಮ್ಮೆ ನಾವೆಣಿಸದ ಕೆಲವು ಘಟನೆ ನಡೆದೆ ಹೋಗುತ್ತವೆ.
‘ಕೆಲವೊಂದು ಅಂಶಗಳು ನಮಗೆ ಸೂಚನೆಗಳಾಗಿ ಕಂಡು ಬಂದರೂ ನಾವು ನಿಲಕ್ಷಿಸುತ್ತೇವೆ. ಆಗ ನಾವು ನಂಬಿದ ದೈವ ನಮ್ಮ ಕೈ ಹಿಡಿದು ಕಾಯುತ್ತದೆ.‘
ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತ.
-ತಮ್ಮವ ರಾಮಮೋಹನ.
ಸರ್ವೆ ಜನಾಃ ಸುಖಿನೋ ಭವಂತು.
ಸಮಸ್ತ ಸನ್ಮಂಗಳಾನಿ ಭವಂತು.
Comments
ಉ: ಮಾಯ.... ಮೋಡಿ..... ಮಂತ್ರ..ನಂಬಿಕೆ?..... ಅಲ್ಲಿ ನಡೆದಿದ್ದು ಏನು..?
In reply to ಉ: ಮಾಯ.... ಮೋಡಿ..... ಮಂತ್ರ..ನಂಬಿಕೆ?..... ಅಲ್ಲಿ ನಡೆದಿದ್ದು ಏನು..? by manju787
ಉ: ಮಾಯ.... ಮೋಡಿ..... ಮಂತ್ರ..ನಂಬಿಕೆ?..... ಅಲ್ಲಿ ನಡೆದಿದ್ದು ಏನು..?
In reply to ಉ: ಮಾಯ.... ಮೋಡಿ..... ಮಂತ್ರ..ನಂಬಿಕೆ?..... ಅಲ್ಲಿ ನಡೆದಿದ್ದು ಏನು..? by manju787
ಉ: ಮಾಯ.... ಮೋಡಿ..... ಮಂತ್ರ..ನಂಬಿಕೆ?..... ಅಲ್ಲಿ ನಡೆದಿದ್ದು ಏನು..?
In reply to ಉ: ಮಾಯ.... ಮೋಡಿ..... ಮಂತ್ರ..ನಂಬಿಕೆ?..... ಅಲ್ಲಿ ನಡೆದಿದ್ದು ಏನು..? by makara
ಉ: ಮಾಯ.... ಮೋಡಿ..... ಮಂತ್ರ..ನಂಬಿಕೆ?..... ಅಲ್ಲಿ ನಡೆದಿದ್ದು ಏನು..?
In reply to ಉ: ಮಾಯ.... ಮೋಡಿ..... ಮಂತ್ರ..ನಂಬಿಕೆ?..... ಅಲ್ಲಿ ನಡೆದಿದ್ದು ಏನು..? by makara
ಉ: ಮಾಯ.... ಮೋಡಿ..... ಮಂತ್ರ..ನಂಬಿಕೆ?..... ಅಲ್ಲಿ ನಡೆದಿದ್ದು ಏನು..?
In reply to ಉ: ಮಾಯ.... ಮೋಡಿ..... ಮಂತ್ರ..ನಂಬಿಕೆ?..... ಅಲ್ಲಿ ನಡೆದಿದ್ದು ಏನು..? by sumangala badami
ಉ: ಮಾಯ.... ಮೋಡಿ..... ಮಂತ್ರ..ನಂಬಿಕೆ?..... ಅಲ್ಲಿ ನಡೆದಿದ್ದು ಏನು..?
In reply to ಉ: ಮಾಯ.... ಮೋಡಿ..... ಮಂತ್ರ..ನಂಬಿಕೆ?..... ಅಲ್ಲಿ ನಡೆದಿದ್ದು ಏನು..? by makara
ಉ: ಮಾಯ.... ಮೋಡಿ..... ಮಂತ್ರ..ನಂಬಿಕೆ?..... ಅಲ್ಲಿ ನಡೆದಿದ್ದು ಏನು..?
In reply to ಉ: ಮಾಯ.... ಮೋಡಿ..... ಮಂತ್ರ..ನಂಬಿಕೆ?..... ಅಲ್ಲಿ ನಡೆದಿದ್ದು ಏನು..? by gopaljsr
ಉ: ಮಾಯ.... ಮೋಡಿ..... ಮಂತ್ರ..ನಂಬಿಕೆ?..... ಅಲ್ಲಿ ನಡೆದಿದ್ದು ಏನು..?