ಮುಂಬಯಿಯನ್ನು ಬೊಂ'ಬಾಯಿ'ಯಾಗಿಸಲು ಸಂಚು !

ಮುಂಬಯಿಯನ್ನು ಬೊಂ'ಬಾಯಿ'ಯಾಗಿಸಲು ಸಂಚು !

(ಬೊಗಳೂರು ಸಂಚಾರಿ ಬ್ಯುರೋದಿಂದ)
ಬೊಗಳೂರು, ಜೂ.22- ಇದೀಗ ಸದ್ದಾದ ಸುದ್ದಿ. ದೇಶದ ವಾಣಿಜ್ಯ ರಾಜಧಾನಿ ಹೆಗ್ಗಳಿಕೆಯ ಮುಂಬಯಿಯ ಹೆಸರನ್ನು ಬೊಂಬಾಯಿ ಎಂದು ಬದಲಿಸಲು ಭಾರಿ ಒಳ ಸಂಚು ನಡೆಸುತ್ತಿರುವ ವಿಷಯವೊಂದು ಇಲ್ಲಿ ಬೆಳಕಿಗೆ ಬಂದಿದೆ.

ಈ ಭಾರೀ ಕಾರ್ಯತಂತ್ರದ ಹಿಂದೆ ಬೊಗಳಿಯರ ಮತ್ತು ವಾಚಾಳಿಯರ ಜಿಹ್ವಾಡ... ಅಲ್ಲಲ್ಲ, ಕೈವಾಡ ಇರುವುದು ಕಂಡುಬಂದಿದೆ.

ಎಲ್ಲೆಡೆ ಮಾತಿನ ಮಲ್ಲಿಯರನ್ನು ಮಾತ್ರವೇ ಅಲ್ಲ ಅಲ್ಪ ಸ್ವಲ್ಪ ಮಟ್ಟಿಗೆ ಮಲ್ಲರನ್ನು ಕೂಡ "ಬೊಂಬಾಯಿ" ಅಂತ ಪ್ರೀತಿಯಿಂದ ಉದ್ದಹೆಸರಿಟ್ಟು ಹಿಂದೆಲ್ಲಾ ಕರೆಯುತ್ತಿದ್ದರು. ಅಷ್ಟೊಳ್ಳೆ ಹೆಸರು ಗಳಿಸಲು ನಾವು ಪುಣ್ಯ ಮಾಡಬೇಕಿತ್ತು. ಆದರೆ ಈಗ ಮುಂಬಯಿ ಅಂತ ಕರೆದರೆ ಏನೋ ಇರಿಸುಮುರಿಸಾಗುತ್ತೆ ಅನ್ನೋದು ಬೊಂಬಾಯಿ ವಾಚಾಳಿಯರ ಸಂಘದ ಅಧ್ಯಕ್ಷೆ ವಾಚಾಳೀಶ್ವರಿ ಬಾಯಿ ಅವರ ಅಳಲು.

ಈ ಒಳ ಸಂಚಿನ ಬಗ್ಗೆ ಬೊಂಬಾಯಿಯನ್ನು ಕಿರಿದಾಗಿಸಿ ಮುಂಬಯಿಯಾಗಿಸಿದ ಠಾಳ್ ಬಾಕ್ರೆ ಅವರು ಈ ಸುದ್ದಿ ತಿಳಿಸಿದ ಬೊಗಳೆ ಬ್ಯುರೋದ ರಗಳೆ ಮೇಲೇ ಬಾರ್ಕಿಂಗ್ ಮಾಡಿದ್ದಾರೆ.

ಮಾತ್ರವಲ್ಲ, ಮುಂಬಯಿಗಿಂತ ಬೊಂಬಾಯಿಯೇ 100 ಪಟ್ಟು ಹೆಚ್ಚು ಉತ್ತಮವಾಗಿತ್ತು ಅಂತ ತಿಳಿಸಿದ ಖ್ಯಾತ ನಾಮ-ಶಾಸ್ತ್ರಜ್ಞ ಬೇಜಾನ್ ದಾರೂ ಪೀನೇವಾಲ ವಿರುದ್ಧ ಕೂಡ ಬಾಕ್ರೆ ಘರ್ಜಿಸಿದ್ದಾರೆ. ಬೊಂಬಾಯಿಯನ್ನು ಇಂಗ್ಲಿಷ್‌ನಲ್ಲಿ Bomb-bay ಎಂದು ಕರೆದ ಕಾರಣಕ್ಕಾಗಿಯೇ ಅಷ್ಟೊಂದು ಬಾಂಬ್ ಸ್ಫೋಟಗಳಾದವು. ಆ ಪ್ರಮಾಣದ ಬಾಂಬ್ ಸ್ಫೋಟಗಳು ಮುಂಬಯಿ ಆದ ಮೇಲೆ ನಡೆಯಲಿಲ್ಲವಲ್ಲ ಎಂಬುದು ಅವರ ಸಮರ್ಥನೆ.

1996ರಲ್ಲಿ ಅಸತ್ಯಾನ್ವೇಷಿ ಮುಂಬಯಿಯಲ್ಲಿದ್ದ ಸಂದರ್ಭದಲ್ಲಿ, "ನಮ್ಮ ಮನೆಯಲ್ಲೂ ಗಣಪತಿ ವಿಗ್ರಹ ಹಾಲು ಕುಡಿದಿದೆ" ಅಂತ ಕಣ್ಣಾರೆ ಹೇಳಿದ್ದ ಅಂದಿನ ಮುಖ್ಯಮಂತ್ರಿ- ರಮಣಿಯರ ಮನೋಹರಿಸಿದ್ದ ಜೋಷಿ ಅವರು ಕೂಡ ಪ್ರತಿಕ್ರಿಯೆ ನೀಡಿ, ಮುಂಬಯಿಯಲ್ಲಿ ಇತ್ತೀಚೆಗೆ ನಡೆಯುತ್ತಿರುವ ಪ್ರವಾಹ, ಕಟ್ಟಡಕುಸಿತ ಇತ್ಯಾದಿ ದುರಂತಗಳ ಸರಮಾಲೆಗೆ ಏಳೂವರೆ ಶನಿ ದೋಷವಿದೆ, ಮುಂಬಯಿ ಮತ್ತೆ ಬೊಂಬಾಯಿಯಾಗಬೇಕು ಎಂದೆಲ್ಲಾ ಹೇಳುವುದು ಮೂಢ ನಂಬಿಕೆ ಎಂಬುದಾಗಿ ತಿಳಿಸಿದ್ದಾರೆ.

ಅಲ್ಲದೆ ಮುಂಬಯಿಯನ್ನು ಬೊಚ್ಚುಬಾಯಿ ಬೇಕಾದರೂ ಮಾಡುತ್ತೇವೆ, ಮತ್ತೆ ಬೊಂಬಾಯಿ ಮಾಡಲು ಖಂಡಿತಾ ಬಿಡುವುದಿಲ್ಲ ಎಂದವರು ಸ್ಪಷ್ಟಪಡಿಸಿದ್ದಾರೆ.

BogaleRagale.blogspot.com

Rating
No votes yet