ಮುಂಬಯಿ, ಠಾಕರೆ ಮತ್ತು ಕಿಡಿಗೇಡಿ ಮಾಧ್ಯಮಗಳು... ಬಾಗ ೧...

ಮುಂಬಯಿ, ಠಾಕರೆ ಮತ್ತು ಕಿಡಿಗೇಡಿ ಮಾಧ್ಯಮಗಳು... ಬಾಗ ೧...

ಸಂಜೆ ಮನೆಗೆ ಬಂದವನೆ ರಿಮೋಟ್ ಮೇಲೆ ಕೈ ಇಟ್ಟು ನ್ಯೂಸ್ ಚಾನೆಲ್ಲುಗಳನ್ನು ಹುಡುಕತೊಡಗಿದೆ. ಇತ್ತೀಚೆಗೆ ರಾಜ್ ಠಾಕರೆಯನ್ನು, ಓಸಾಮಾ ಬಿನ್ ಲಾದೆನ್ ನ ಅಪ್ಪನಂತೆ ಚಿತ್ರಿಸುವುದರ ಮೂಲಕ ಈ ’ಆಜ್ ತಕ್’ ನಂಥ ಚಾನೆಲ್ಲುಗಳು ತಮ್ಮ ಟಿ.ಆರ್.ಪಿ ಯನ್ನು ಹೆಚ್ಚಿಸಿಕೊಳ್ಳುವ ಕ್ಷುದ್ರ ಪ್ರಯತ್ನದಲ್ಲಿ ತೊಡಗಿವೆ. ಲೋಕಲ್ ಟ್ರೇನಿನಲ್ಲಿ ಬರುವಾಗ, ಮುಂಬಯಿಯ ಒಂದು ಜನನಿಬಿಡ ಭಾಗದಲ್ಲಿ ೨೩ ವರ್ಷದ ಯುವಕನೊಬ್ಬನನ್ನು ’ಎನ್ ಕೌಂಟರ್’ನಲ್ಲಿ ಪೋಲೀಸರು ಕೊಂದು ಹಾಕಿದರು ಎಂಬ ಚರ್ಚೆ ಕೇಳಿ ಬರುತ್ತಿತ್ತು. ನ್ಯೂಸು ನೋಡಿದರೆ, ಅಂತಹ ಒಂದು ಘಟನೆಗೂ ರಾಜಕೀಯ ಬಣ್ಣ ಹಚ್ಚಿ ಮಜ ನೋಡುತ್ತಿದೆ ಈ ಸಬ್ ಸೆ ತೇಜ್ ಚಾನೆಲ್ಲು. ಸಾವಿರಾರು ಜನ ಓಡಾಡಿಕೊಂಡಿರುವ ಒಂದು ಮಾರುಕಟ್ಟೆಯಲ್ಲಿ, ಹಲವಾರು ಜನ ಪಯಣಿಸುತ್ತಿರುವ ಒಂದು ಬಸ್ಸಿನಲ್ಲಿ, ಯುವಕನೊಬ್ಬ ರಿವಾಲ್ವರ್ ಹಿಡಿದು ’ನನಗೆ ರಾಜ್ ಠಾಕರೆ ಬೇಕು’ ಅಂತ ಕೂಗಾಡುತ್ತ ಬಸ್ಸಿನಲ್ಲಿದ್ದ ಜನರನ್ನು ಬೆದರಿಸುತ್ತಿದ್ದರೆ, ಅಂತಹ ಯುವಕನಿಗೆ ಸಾಕಷ್ಟು ಬಾರಿ ಎಚ್ಚರಿಕೆಯನ್ನು ಕೊಟ್ಟಾಗಲೂ ಆತ ಶರಣಾಗಲು ಒಪ್ಪದಿದ್ದರೆ, ಪೋಲೀಸರು ಆತನನ್ನು ಕ್ಷಮಿಸಿ, ’ಆಯ್ತಪ್ಪ, ಇಲ್ಲೇ ಕುಂತಿರು, ನಿನಗೋಸ್ಕರ ರಾಜ್ ಠಾಕರೆಯನ್ನ ಹುಡುಕಿ ತರ್ತೀವಿ, ನೀನು ಮನಸಾರೆ ಗುಂಡು ಹೊಡೆದು ಆರಾಮವಾಗಿ ಬಿಹಾರಿಗೆ ಹೋಗು, ಆದ್ರೆ ಅಲ್ಲಿವರೆಗೆ ನೀನು ಇಲ್ಲೇ ಕುಂತು, ಪಿಜ್ಜಾ ತಿನ್ನಪ್ಪ ನನ್ನಪ್ಪ’ ಅನ್ನೋಕೆ ಇದು ಬಿಹಾರ ಅಥವಾ ಅಫಘಾನಿಸ್ತಾನ ಅಲ್ವಲ್ಲ ಸ್ವಾಮಿ. ಸಹಜವಾಗಿಯೇ ಆತನನ್ನು ಪೋಲೀಸರು ಹೊಡೆದು ಹಾಕಿದ್ದಾರೆ. ಇಷ್ಟಾಯಿತೆ... ಲಾಲೂ, ನಿತೀಶ್ ಹಾಗೂ ಪಾಸ್ವಾನ್ ರಂಥ ಅನಕ್ಷರಸ್ತ ನೇತಾರರು ’ಇದು ಮುಂಬಯಿ ಪೋಲೀಸರು ಮಾಡಿದ ಹತ್ಯೆ’ ಎಂದು ದೊಡ್ಡದಾಗಿ ಮಾಧ್ಯಮದ ಎದುರು ಹೇಳಿಕೆಯನ್ನು ನೀಡುತ್ತಾರೆ. ಸಾಕಲ್ಲವೇ ಬಿಹಾರ ಹೊತ್ತಿ ಉರಿಯಲು? ಈ ನೇತಾರರಿಗೆ ಕಣ್ಣು ಕಾಣುವುದಿಲ್ಲವೆ? ಆ ಹುಡುಗ ಬಸ್ಸಿನಲ್ಲಿ ಕುಳಿತು ಸಾರಾಸಗಟಾಗಿ ತನ್ನ ಗನ್ನಿನ ಪ್ರದರ್ಶನ ಮಾಡಿ ಜನರನ್ನು ಬೆದರಿಸುತ್ತಿದ್ದರೆ, ಪೋಲೀಸರು ಆ ಹುಡುಗನಿಗೋಸ್ಕರ ಕೂಲ್ ಡ್ರಿಂಕ್ ತರಬೇಕಿತ್ತೆ?

ಇತ್ತೀಚಿನ ದಿನಗಳಲ್ಲಿ ರಾಜ್ ಠಾಕರೆಯನ್ನು ’ದೇಶವನ್ನು ಒಡೆಯಲು ಪ್ರಯತ್ನಿಸುತ್ತಿರುವ ಒಬ್ಬ ಧೂರ್ತ ಖಳನಾಯಕನಂತೆ’ ಚಿತ್ರಿಸುತ್ತಿವೆ ಈ ಮಾಧ್ಯಮಗಳು. ಇಲ್ಲ, ನನಗೂ ರಾಜ್ ಠಾಕರೆಯ ಬಗ್ಗೆ ವಿಶೇಷವಾದ ಪ್ರೀತಿ-ಅಭಿಮಾನಗಳು ಖಂಡಿತವಾಗಿಯೂ ಇಲ್ಲ. ಆತ ನಿಜವಾದ ಮರಾಠಿಗರ ಪ್ರತಿನಿಧಿ ಅಲ್ಲವೇ ಅಲ್ಲ. ಕಳೆದ ಇಪ್ಪತ್ತು ವರ್ಷಗಳಿಂದ ಮುಂಬಯಿಯಲ್ಲಿರುವ ನನಗೆ, ಹಲವಾರು ಮರಾಠಿಗರ ಪರಿಚಯ-ಒಡನಾಟವಿದೆ. ನನ್ನ ಅತ್ಯಂತ ನಿಕಟ ಗೆಳೆಯರೂ ಮರಾಠಿಗರು. ಒಟ್ಟಿಗೆ ಊಟ ಮಾಡಿದ್ದೇವೆ, ನಾನು ಅವರ ಮದುವೆಗಳಲ್ಲಿ ಕುಣಿದಿದ್ದೇನೆ, ನಮ್ಮ ಮನೆಯಲ್ಲೊಂದು ಸಾವು ಸಂಭವಿಸಿದಾಗ, ಕೆಲಸಗಳನ್ನೆಲ್ಲ ಬದಿಗಿಟ್ಟು ಓಡಿ ಬಂದಿದ್ದಾರೆ ಅದೇ ಮರಾಠಿಗರು. ಅದೇ ಮರಾಠಿಗರ ಜೊತೆ ಬೆಳಗಾವಿಯ ವಿಷಯದಲ್ಲೂ, ರಾಜ್ ಠಾಕರೆಯ ಅಸಂಬದ್ಧ ವಿಧಾನಗಳ ವಿಷಯದಲ್ಲೂ ಜಗಳಾಡಿದ್ದೇನೆ, ಚರ್ಚಿಸಿದ್ದೇನೆ. ನಂತರ ಅವರ ಜೊತೆಗೆಯೇ ಬಾರಿನಲ್ಲಿ ಕುಳಿತು ಬಿಯರ್ ಸೇವಿಸಿ, ಸಚಿನ್ ತೆಂಡೂಲ್ಕರನ ಬ್ಯಾಟಿಂಗ್ ನ ತಂತ್ರವನ್ನು ವಿಶ್ಲೇಷಿಸಿದ್ದೇನೆ. ನನಗೆ ಕಂಡು ಬಂದಂತೆ ಮರಾಠಿಗರು ನಿಜಕ್ಕೂ Sportive ಜನರು. ಸಾಮಾನ್ಯ ಮರಾಠಿಗರು ಎಂದಿಗೂ ’ನೀವು ಬೇರೆ ದಿಕ್ಕಿನವರು’ ಎಂಬ ಅಸಹ್ಯದ ತಾರತಮ್ಯ ಮಾಡುವುದೇ ಇಲ್ಲ. ’ಮರಾಠಿ ಅಸ್ಮಿತೆ’ ಎಂಬ ಪ್ರತ್ಯೇಕತೆಯ ಕಲ್ಪನೆಯೇ ಅವರಿಗಿಲ್ಲ. ಅದಕ್ಕೆ ಒಂದು ದೊಡ್ದ ಉದಾಹರಣೆ ಎಂದರೆ. ಬಾಳಾಸಾಹೇಬ ಠಾಕರೆಯನ್ನು ತಲೆ ಮೇಲೆ ಕೂಡಿಸಿ ಮೆರೆದಾಡಿದ ಈ ಮರಾಠಿಗರು, ಕಳೆದ ಆರವತ್ತು ವರ್ಷಗಳಲ್ಲಿ, ಮಹಾರಾಷ್ಟ್ರದಲ್ಲಿ ಶಾಸನದ ಅಧಿಕಾರವನ್ನು ಶಿವಸೇನೆಗೆ ಕೊಟ್ಟಿದ್ದು ಕೇವಲ ಒಂದು ಸಾರಿ. ವಿಪರ್ಯಾಸವೆಂದರೆ, ಇಂದಿಗೂ ಶಿವಸೇನೆ ಜೀವಂತವಾಗಿರುವುದು, ಬಹುಜಾತೀಯ ಕೇಂದ್ರವಾದ ಮುಂಬಯಿಯಲ್ಲಿ. ಆದರೆ ಇಂದು ರಾಜ್ ಠಾಕರೆಯ ’ಹೊಡಿ-ಬಡಿ’ ಆಂದೋಲನೆಗೆ ಈ ಮರಾಠಿಗರು ಯಾಕೆ ಬೆಂಬಲ ನೀಡುತ್ತಿದ್ದಾರೆ ಎಂಬ ಪ್ರಶ್ನೆ ನಿಮ್ಮ ಮನದಲ್ಲಿ ಬಂದರೆ, ಅದಕ್ಕೆ ಉತ್ತರ ಅಷ್ಟು ಸುಲಭವಾಗಿ ಕೊಡಲು ಸಾಧ್ಯವಿಲ್ಲ.

ಬನ್ನಿ ಒಂಚೂರು ಮುಂಬಯಿಯ ಸಂಕಷ್ಟಗಳ ಪರಿಚಯ ಮಾಡಿಕೊಡ್ತೀನಿ. ಏಳು ಪುಟ್ಟ ದ್ವೀಪಗಳ ಸಮೂಹವಾಗಿದೆ ಈ ಮುಂಬಯಿ ನಗರಿ. ಇಂದು ಆರು ನೂರು ಚದರ ಕಿಲೋಮೀಟರನಷ್ಟು ಹರಡಿಕೊಂಡಿದೆ. ಏಶಿಯಾ ಖಂಡದ ಅತಿ ದೊಡ್ದ ಕೊಳಗೇರಿ ಇಲ್ಲಿದೆ. ಎಲ್ಲ ಜಾತಿಯ ಜನರಿದ್ದಾರೆ. ಎಂದೂ ನಿದ್ರಿಸದ ನಗರಿ. ಬಂದ ಬಂದವರಿಗೆಲ್ಲ ಬೇಡವೆನ್ನದೆ ಊಟ ಹಾಕಿದ ಮಹಾನ್ನಗರಿಯಿದು. ಇಂದು ಮುಂಬಯಿ ನಗರ ಹಾಗೂ ಉಪ ನಗರಗಳಲ್ಲಿ ಒಟ್ಟು ಮೂವತ್ಮೂರು ಮಿಲಿಯಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. (೨೦೦೭ ರ ಅಂದಾಜು). ಅಂದರೆ ಭಾರತದ ಅತ್ಯಂತ ಜನನಿಬಿಡ ನಗರವಿದು. ಇದೆಲ್ಲ ಸಾಮಾನ್ಯವಾಗಿ ಗೊತ್ತಿದ್ದ ವಿಷಯವೇ.
ಭಾರತದ ಇತರ ಎಲ್ಲ ನಗರಗಳಂತೆ, ಈ ಶಹರವನ್ನು ನಡೆಸುವವರ ದೂರದರ್ಶಿತ್ವದ ಕೊರತೆಯ ಕಾರಣದಿಂದಾಗಿ, ಇಂದು ಮುಂಬಯಿ ಪಡುತ್ತಿರುವ ಕಷ್ಟ ಭಯಾನಕ. ರಾತ್ರಿ ಒಂದೂವರೆಗೆ ಗಂಟೆಗೆ ವಿರಾರಿಗೆ ಹೋಗಲು, ಬೋರಿವಲಿಯಲ್ಲಿ ನಿಲ್ಲುವ ಲೋಕಲ್ ಟ್ರೇನಿನಲ್ಲಿ ಹತ್ತಿ ನೋಡಿ. ಹತ್ತಿದರೆ ತಾನೆ ನೋಡ್ತೀರಿ.. ಸಾಧ್ಯವೇ ಇಲ್ಲ. ರಾತ್ರಿ ಒಂದೂ ವರೆಯ ವಿಷಯ ಹೇಳ್ತಿದೀನಿ. ದಿನದಿಂದ ದಿನಕ್ಕೆ ಹದಗೆಡುತ್ತಿರುವ ಟ್ರಾಫಿಕ್ ಸಮಸ್ಯೆ, ದಿನದಿಂದ ದಿನಕ್ಕೆ ಬೆಳೆಯುತ್ತಿರುವ ನಿರುದ್ಯೋಗ ಸಮಸ್ಯೆ, ದಿನೇ ದಿನೇ ಹೆಚ್ಚುತ್ತಿರುವ ರಿಯಲ್ ಎಸ್ಟೇಟ್ ಬೆಲೆ, ಭೀಕರ ಮಳೆ, ಅಧ್ವಾನ್ನದ infrastructure, ಕೇಂದ್ರ ಸರಕಾರದ ಮಲತಾಯಿ ಧೋರಣೆ, ಯಾವಾಗ ಬೇಕಾದರೂ ಸಿಡಿಯುವ ಬಾಂಬುಗಳು ಮುಂತಾದ ಸಮಸ್ಯೆಗಳಿಂದ ಮುಂಬಯಿ ತಲ್ಲಣಿಸಿದ್ದರೂ, ತಮ್ಮ ತಲೆಯ ಮೇಲೆ ಹೇರಲಾದ ’ಸ್ಪಿರಿಟ್ ಆಫ್ ಮುಂಬಯಿಯ’ ಪಟ್ಟವನ್ನು ಹೊತ್ತುಕೊಂಡು ಹೇಗೋ ಬದುಕುತ್ತಾರೆ ಜನ. ಇವರಿಗೆ ರಾಜ್ ಠಾಕರೆಯೂ ಬೇಡ, ಲಾಲೂನೂ ಬೇಡ. ಒಂದು ಒಳ್ಳೆಯ ಸಿನೆಮಾ, ಸಚಿನ್ನನ ಸೆಂಚುರಿ, ಒಂದು ವಡಾ ಪಾವ್ ಮತ್ತು ಒಂದು ಪೆಗ್ ಸಾಕು, ಸಂತೋಷವಾಗಿ ಬದುಕಿಕೊಂಡಿರಲು.

ಭಾಷೆಗಳ ಆಧಾರದ ಮೇಲೆ ಭಾಷಾವಾರು ಪ್ರಾಂತ್ಯಗಳನ್ನು ನಿರ್ಮಿಸಿದಾಗಲೂ, ಮಹಾರಾಷ್ಟ್ರಕ್ಕೆ ಸೇರಿದ ಮುಂಬಯಿಗೆ ದಿನಾಲೂ ದೇಶದ ಬೇರೆ ಬೇರೆ ಕಡೆಯಿಂದ ಸಾವಿರಾರು ಜನ ವಲಸೆ ಬರುತ್ತಿದ್ದಾಗಲೂ ಇಲ್ಲಿನ ಮೂಲನಿವಾಸಿಗಳಾದ ಮರಾಠಿಗರು, ಕೋಳಿಗಳು (ಬೇಸ್ತರು) ಬೇಡವೆನ್ನಲಿಲ್ಲ. ಜನ ಬಂದೇ ಬಂದರು. ನೋಡನೋಡುತ್ತಿದ್ದಂತೆ ಮುಂಬಯಿ ಅಪಾರವಾಗಿ ಬೆಳೆಯಿತು. ಎಲ್ಲ ಸರಿ. ಆದರೆ ಎಲ್ಲದಕ್ಕೂ ಒಂದು ಮಿತಿ ಇದೆಯಲ್ಲ. ಎಷ್ಟು ದಿನ ಅಂತ, ಎಷ್ಟು ಅಂತ ಸಹಿಸೀತು ಮುಂಬಯಿ? ಇಂದು ಒಂದು ಅಂದಾಜಿನ ಪ್ರಕಾರ ಕೇವಲ ಉತ್ತರ ಭಾರತದಿಂದ ಸುಮಾರು ನಲವತ್ತು ಕುಟುಂಬಗಳು ಪ್ರತಿ ದಿನ ಇಲ್ಲಿಗೆ ವಲಸೆ ಬರುತ್ತಿವೆ. ಇತರ ಭಾಗದಿಂದ ಸುಮಾರು ಇಪ್ಪತ್ತು. ಅಂದರೆ ದಿನಕ್ಕೆ ಸುಮಾರು ಮುನ್ನೂರು ಹೊಸಬರು ಮುಂಬಯಿಯಲ್ಲಿ ಇರಲೆಂದು ಬರುತ್ತಿದ್ದಾರೆ. ಒಂದು ನಗರ ಈ ಪರಿಯ ಜನಸಂಖ್ಯೆಯನ್ನು ಹೇಗೆ ನಿಭಾಯಿಸಬಲ್ಲದು ಹೇಳಿ. ಒಂದು ನಗರವು ಎಷ್ಟೆಂದು ಅಡ್ಡಡ್ದ ಬೆಳೆಯಬಲ್ಲದು?
ಭಾರತದಲ್ಲಿಯೇ ಅತ್ಯಂತ ಹೆಚ್ಚು ಆದಾಯ ತೆರಿಗೆಯನ್ನು, ಇತರ ತೆರಿಗೆಯನ್ನು ನೀಡುತ್ತಿರುವ ಈ ನಗರಕ್ಕೆ ಲಾಲೂ ಪ್ರಸಾದ ನೀಡಿದ ಕೊಡುಗೆ ಏನು? ಯಾವ ಸರಕಾರ, ಯಾವ ರೀತಿಯಲ್ಲಿ ಈ ನಗರಕ್ಕೆ ನೆರವಾಗಿದೆ? ಉತ್ತರ ಯಾರ ಬಳಿಯೂ ಇಲ್ಲ. ಸರಿ ಬಿಡಿ. ಇಂದು ಮುಂಬಯಿಯ ಯಾವುದೇ ರೇಲ್ವೇ ಕಚೇರಿಗೆ ಹೋಗಿ, ಟೆಲೆ ಫೋನ್ ಕಚೇರಿಗೆ ಹೋಗಿ, ಅಲ್ಲಿ ನಿಮಗೆ ಕಾಣಸಿಗುವವರು ಉತ್ತರ ಭಾರತೀಯರು. ಹೆಚ್ಚಿನ ಕೇಂದ್ರ ಸರಕಾರೀ ನೌಕರಿಗಳಲ್ಲಿ ಉತ್ತರ ಭಾರತೀಯರೇ. ಪಾನ್ ಅಂಗಡಿಯವ ಉತ್ತರ ಭಾರತೀಯ, ಫಿಲ್ಮ್ ಉದ್ಯಮದಲ್ಲಿ ಉತ್ತರ ಭಾರತೀಯ, ತರಕಾರಿ ಮಾರುವುದೂ ಅವರೇ, ಟಿಕೇಟು ಬ್ಲಾಕ್ ಮಾಡುವವರೂ ಅವರೇ, ರಿಕ್ಷಾ-ಟ್ಯಾಕ್ಸಿ ನಡೆಸುವವರೂ ಅವರೇ, ಐ ಎ ಎಸ್-ಐ ಪಿ ಎಸ್ ಅಧಿಕಾರಿಗಳೂ ಅವರೇ, ಅಷ್ಟೇ ಅಲ್ಲ, ಇತ್ತೀಚಿಗಂತೂ ಮೀನು ಮಾರುವವರೂ ಅವರೇ. ಅರೆ ಎಲ್ಲ ಕಡೆ ಉತ್ತರ ಭಾರತೀಯರೇ ಆಗಿಹೋದರೆ, ಇಲ್ಲಿನ ನೆಲದ ಮರಾಠಿಗರು ಏನ್ರೀ ಮಾಡಬೇಕು?
ಸರಿ, ಅದಕ್ಕೂ ತುಟಿ ಪಿಟಕ್ಕೆನ್ನಲಿಲ್ಲ ಮರಾಠಿಗರು. ಅವರೂ ಜನ್ಮತಃ ಅಲ್ಪ ತೃಪ್ತರು. ನೌಕರಿ ಮಾಡುತ್ತಾ, ಬೋನಸ್ ಬಗ್ಗೆ ಸಣ್ಣ ಕನಸುಗಳನ್ನು ಕಾಣುತ್ತ ನಿದ್ರಿಸುವವರು. ಆದರೆ ಪರಿಸ್ಥಿತಿ ಮಿತಿ ಮೀರಿದ್ದು, ಹೊಸ ಶತಮಾನ ಬಂದ ನಂತರ. ಒಮ್ಮಿಂದೊಮ್ಮೆಲೆ, ಇಲ್ಲಿ ಛಟ್ ಪೂಜೆ ಪ್ರಾರಂಭವಾಯಿತು. ಬೇಕಾದಾವಾಗ ಉತ್ತರ ಭಾರತೀಯ ಮುಖಂಡರು ಬಂದು ಶಕ್ತಿ ಪ್ರದರ್ಶನಗಳನ್ನು ಮಾಡತೊಡಗಿದರು. ಅಲ್ಲಿಯವರೆಗೆ ಸುಮ್ಮನೆ ತಮ್ಮ ಕೆಲಸ ಮಾಡಿಕೊಂಡಿದ್ದ ಉತ್ತರ ಭಾರತೀಯರು, ಮರಾಠಿಗರ ಮೇಲೆಯೇ ರೋಪು ಹಾಕತೊಡಗಿದರು. ರಸ್ತೆಯಲ್ಲಿಯೇ ಕದನಗಳಾದವು. ಯಾವುದೋ ಒಂದು ಕಾಲೇಜಿನ ಕ್ಯಾಂಪಸ್ಸಿನಲ್ಲಂತೂ (ಅಥವಾ ಅದು ಹಾಸ್ಟೆಲ್ ಇರಬಹುದು, ನನ್ನ ನೆನಪಿನಶಕ್ತಿಯ ಕೊರತೆಗೆ ಕ್ಷಮೆ ಇರಲಿ) ಎಂಟು ಜನ ಉತ್ತರ ಭಾರತೀಯರು ಸೇರಿ, ಒಂದು ಲೋಟ ನೀರಿಗೋಸ್ಕರ ಒಬ್ಬ ಮರಾಠಿ ಹುಡುಗನನ್ನು ಹೊಡೆದದ್ದು, ಮುಂಬಯಿಯ ಮರಾಠಿ ಪತ್ರಿಕೆಗಳಲ್ಲಿ ಓದಿದ ಮರಾಠಿಗರು ಈಗ ತಿರುಗಿಬಿದ್ದರು. ನನಗೆ ಅನ್ನಿಸುವಂತೆ ಆ ಘಟನೆಯೇ ಮುಂಬಯಿಯಲ್ಲಿ ಒಂದು ನಿಶ್ಶಬ್ದ ಸಂಚಲನೆಯನ್ನು ಉಂಟು ಮಾಡಿತ್ತು. ಯಾವುದೇ ಭೇದಭಾವ ಮಾಡದ ಮರಾಠಿಗರಿಗೆ ಈಗ ತಮ್ಮದೇ ನೆಲದಲ್ಲಿ ತಮ್ಮ ಮೇಲಾಗುತ್ತಿರುವ ಅನ್ಯಾಯದ ಅರಿವಾಗುತ್ತಿತ್ತು. ಅರೆ ಮುಂಬಯಿಯಲ್ಲಿ ಗುಜರಾತಿಗಳಿದ್ದಾರೆ, ಯಾವುದೇ ಗುಜರಾತಿ ಲೀಡರ್ ಇಲ್ಲಿ ಬಂದು ಸಾರ್ವಜನಿಕ ಭಾಷಣ ನೀಡಿಲ್ಲ. ದಕ್ಷಿಣ ಭಾರತೀಯರಿದ್ದಾರೆ. ಜಯಲಲಿತಾನೋ, ದೇವೇಗೌಡರೋ ಇಲ್ಲಿಗೆ ಬರಲಿಲ್ಲ. ಬೇರೆ ಯಾವ ಪ್ರಾಂತ್ಯದವರೂ ಮರಾಠಿಗರನ್ನೇ ಸದೆಬಡೆಯುವ ಆಲೋಚನೆ ಮಾಡಿಲ್ಲ. ಈ ಉತ್ತರ ಭಾರತೀಯರಿಗ್ಯಾಕಿಷ್ಟು ಸೊಕ್ಕು ಅನ್ನುವ ಭಾವನೆ ನಿರಂತರವಾಗಿ ಬೆಳೆಯುತ್ತ, ಮರಾಠಿಗರ ಮನದಲ್ಲಿ ’ಉತ್ತರ ಭಾರತೀಯರ’ ಬಗ್ಗೆ ಒಂದು ಅಸಹನೆಯನ್ನು
ಮೂಡಿಸುತ್ತ, ಕ್ರಮೇಣ ಅದು ದ್ವೇಷದಲ್ಲಿ ಪರ್ಯಾವಸಾನಗೊಂಡಿತ್ತು. ಇದು ಒಮ್ಮಿಂದೊಮ್ಮೆಲೇ ಆದ ಬದಲಾವಣೆ ಖಂಡಿತ ಅಲ್ಲ.

ಇಂಥ ಸಮಯದಲ್ಲಿಯೇ ಹುಟ್ಟಿ ಬಂದಿದ್ದು ರಾಜ್ ಠಾಕರೆ. ..

Rating
No votes yet

Comments