ಮುಂಬೈ -೨
ಮುಂಬೈ ಡೈರಿ ಭಾಗ ೨
ಮೊದಲ ಭಾಗದಲ್ಲಿ ಮುಂಬಯಿ ಮತ್ತು ಕನ್ನಡಿಗರ ನಂಟಿನ ಬಗ್ಗೆ ಹೇಳಿದ್ದೆ.
ನಂತರದ ಭಾಗದಲ್ಲಿ ಮುಂಬಯಿಯ ಮಳೆಗಾಲದ ಬಗ್ಗೆ ತಿಳಿಸಿದ್ದೆ.
ಈಗ ಈ ಮುಂಬಯಿ ಮಹಾನಗರಿಯ ಪರಿಚಯ ಮಾಡಿಕೊಡಲು ಪ್ರಯತ್ನಿಸುವೆ.
ಮುಂಬಯಿಯ ಚರಿತ್ರೆ ೧೬ನೇ ಶತಮಾನಕ್ಕೂ ಹಿಂದಿನದು. ೧೫೦೮ರಲ್ಲಿ ಫ್ರಾನ್ಸಿಸ್ ಆಲ್ಮೈಡ ಅನ್ನುವ ನಾವಿಕ ಈ ದ್ವೀಪಕ್ಕೆ ಬಂದದ್ದು. ಆಗ ಈ ಜಾಗಕ್ಕೆ ಬಾಮ್ ಬಹಿಯಾ (ಒಳ್ಳೆಯ ಬೇ ಅಥವಾ ಕೊಲ್ಲಿ) ಅಂದನಂತೆ. ಇಲ್ಲಿಯ ಮೂಲವಾಸಿಗಳಾದ ಬೆಸ್ತರರನ್ನು (ಮೀನುಗಾರರು) ಕೋಳಿಗಳು ಎಂದು ಕರೆಯುವರು. ಅವರುಗಳ ದೈವ ಮುಂಬಾದೇವಿ. ಮುಂದೆ ಇದೇ ಇಂಗ್ಲೀಷರ ಬಾಂಬೇ ಮತ್ತೆ ಮಹಾರಾಷ್ಟ್ರೀಯರ ಮುಂಬಾ ಆಯಿ (ಮುಂಬಾ ತಾಯಿ) - ಮುಂಬಯಿ ಆಯಿತು.
ಸಾಮಾನ್ಯವಾಗಿ ಜನಗಳಿಗೆ ಮುಂಬಯಿ ಅಂದರೆ ಅದೊಂದು ಕನಸಿನ ಲೋಕ
ಚಿತ್ರನಗರಿ, ಐಷಾರಾಮಿ ಜೀವನದ ಆಗರ ಎಂಬುವ ಕಲ್ಪನೆ ಬರುವುದು ಸಹಜ. ಇಲ್ಲಿ ಜಿವನ ನಡೆಸುವುದು (ಹೊಟ್ಟೆ ಹೊರೆಯುವುದು) ಬಹು ಸುಲಭ. ಆದರೆ ವಸತಿ ಮಾತ್ರ ಸ್ವಲ್ಪ ಕಷ್ಟ ಮತ್ತು ದುಬಾರಿ.
ಎಲ್ಲ ಊರುಗಳಂತೆಯೇ ಇಲ್ಲೂ ಕೊಳೆಗೇರಿ, ಹೊಲಗೇರಿಗಳಿವೆ.
ನಮ್ಮ ಬೆಂಗಳೂರನ್ನು ಇತರರಿಗೆ ಚಿತ್ರಗಳಲ್ಲಿ ತೋರಿಸುವಾಗ ಹೇಗೆ ಬರೀ ಲಾಲ್ ಬಾಗ್ ಕಬ್ಬನ್ ಪಾರ್ಕ್ ತೊರಿಸುತ್ತೇವೆಯೋ ಹಾಗೆಯೇ ಇಲ್ಲಿಯೂ ಚಿತ್ರಗಳಲ್ಲಿ ನಾರಿಮನ್ ಪಾಯಿಂಟ್, ಸುಂದರ ಜುಹು ಬೀಚ್ ಗಳನ್ನು ತೋರಿಸುತ್ತಾರೆ. ಇಲ್ಲಿಯ ಧಾರಾವಿ ಕೊಳೆಗೇರಿ ವಿಶ್ವದಲ್ಲೇ ಅತಿ ದೊಡ್ಡದಂತೆ. ಒಂದು ಮುಖ್ಯ ಅಂಶವೆಂದರೆ ಈ ಧಾರಾವಿಯಲ್ಲಿರುವವರಲ್ಲಿ ತಮಿಳರೇ ಹೆಚ್ಚು. ಈ ಹಿಂದೆ ಇವರುಗಳ ಧುರೀಣ ವರದರಾಜ ಮುದಲಿಯಾರ್ ಅಂತ ಒಬ್ಬ ಖಳನಾಯಕ ಇದ್ದ. ಇಲ್ಲಿಯ ಕೊಳೆಗೇರಿಗಳ ಜನಗಳು ತಮ್ಮ ನಿತ್ಯಕರ್ಮಗಳನ್ನು ರೈಲ್ವೇ ಹಳಿಗಳ ಪಕ್ಕದಲ್ಲಿ ಮುಗಿಸಿಕೊಳ್ಳುವುದು ಎಲ್ಲರೂ ನೋಡಬಹುದು. ಅದಕ್ಕೇ ಇರಬೇಕು ಇಲ್ಲಿ ಜೀವಕ್ಕೆ ಬೆಲೆಯೇ ಇಲ್ಲ. ತಕ್ಷಣದ ಸಾವು ಬೇಕೆನ್ನುವವರು ಕಷ್ಟಪಡಲೇ ಬೇಕಿಲ್ಲ. ಮೂರು ನಿಮಿಷಗಳಿಗೊಮ್ಮೆ ಯಮದೂತರಂತೆ ಸದ್ದಿಲ್ಲದೇ ಬರುವ ಲೋಕಲ್ ಟ್ರೈನ್ ಗಳಿಗೆ ತಲೆ ಮೈ ಒಡ್ಡುವುದು ತುಂಬಾ ಸುಲಭ. ಈಗಿದ್ದವನು ಇನ್ನೊಂದು ಕ್ಷಣದಲ್ಲಿ ಇಲ್ಲವಾಗುವನು. ರೇಲ್ವೇ ಹಳಿಗಳ ಪಕ್ಕದಲ್ಲೇ ವಾಸ ಇರುವ ಗುಡಿಸಲುವಾಸಿಗಳಲ್ಲಿ ಕುಡಿತ ಸರ್ವೇಸಾಮಾನ್ಯ. ಎಷ್ಟೋ ಬಾರಿ ಕುಡಿತ ಅಮಲಿನಲ್ಲಿ ಬಹಿರ್ದೆಶೆಗೆ ಹೋಗುವ ವೇಳೆಗಳಲ್ಲಿ ಟ್ರೈನಿಗೆ ಆಹುತಿಯಾಗುವುದುಂಟು. ಕೆಲವು ವೇಳೆ ಬೆಳಗ್ಗೆ ಬೇಗನೆ ಲೋಕಲ್ ನಲ್ಲಿ ಪ್ರಯಾಣಮಾಡುವಾಗ ತುಂಡರಿಸಿದ ಕೈ ಅಥವಾ ಕಾಲುಗಳನ್ನು ನೋಡುವುದೂ ಉಂಟು. ಇಲ್ಲಿ ಮನುಷ್ಯನಿಗೆ ಮನುಷ್ಯತ್ವಕ್ಕೆ ಬೆಲೆಯೇ ಇಲ್ಲ.
ಈ ಹಳಿಯ ಪಕ್ಕದಲ್ಲಿ ವಾಸಿಸುವ ಜನಗಳ ಮೌಢ್ಯತನದ ಬಗ್ಗೆ ಒಂದು ಕಿರುಪರಿಚಯ. ಇವರು ಕಡು ಬಡವರು. ಓದಿಲ್ಲ, ಬರಹವಿಲ್ಲ. ಕಷ್ಟಪಟ್ಟು ಅಂದು ದುಡಿದದ್ದು ಅಂದಿಗೇ ಖಾಲಿ ಮಾಡುವವರು. ತಿಂದು ಕುಡಿದು ಮೋಜು ಮಾಡುವವರು. ಇಂತಹವರಲ್ಲಿ ಒಬ್ಬನಿಗೆ ಮಧುವೇಹ ರೋಗ ಉಲ್ಬಣಿಸಿ, ಕಾಲಿನಲ್ಲಿ ಗ್ಯಾಂಗ್ರೀನ್ ಆಗಿ ಕೊಳೆಯಲಾರಂಭಿಸಿತು. ವೈದ್ಯರು ಶಸ್ತ್ರಚಿಕಿತ್ಸೆ ಮಾಡಬೇಕೆಂದರು. ಇವನಿಗೆ ಶಸ್ತ್ರಚಿಕಿತ್ಸೆ ಅಂದರೆ ಕಾಲು ಕತ್ತರಿಸುವರು ಅನ್ನೋದು ಗೊತ್ತಿತ್ತು. ಅದಕ್ಕೆ ಹಣ ಬಹಳವಾಗಿ ಖರ್ಚಾಗುವುದೆಂದು ಎಣಿಸಿ, ಒಂದು ಲೋಕಲ್ ಟ್ರೈನ್ ಬರುತ್ತಿರುವಾಗ ಕಾಲು ಕೊಟ್ಟು ಯಾಕೆ ತಾನೇ ಖರ್ಚಿಲ್ಲದೇ ಕಾಲು ಕತ್ತರಿಸಿಕೊಳ್ಳಬಾರದು ಅಂದುಕೊಂಡು ಹಾಗೇ ಮಾಡಲು ಹೋದನು. ಅಷ್ಟು ಸುಲಭದಲ್ಲಿ ರೋಗಮುಕ್ತನಾಗುವಂತಿದ್ದರೆ ಇನ್ಯಾಕೆ ಹೇಳಿ. ಹೇಗೋ ಗಟ್ಟಿ ಮನಸ್ಸು ಮಾಡಿ ರಭಸದಿಂದ ಬರುವ ಟ್ರೈನಿಗೆ ಕಾಲು ಕೊಟ್ಟ. ಟ್ರೈನ್ ಹತ್ತಿರ ಬರುವಾಗಲೇ ಇವನಿಗೆ ಬವಳಿ ಬರುವ ಹಾಗಿತ್ತು. ಇನ್ನು ಕಾಲು ತುಂಡರಿಸಿದ ಶಾಕ್ ಗೆ ಪ್ರಜ್ಞೆ ತಪ್ಪಿ ಬಿದ್ದ. ಬಳಿಕ ವಿಪರೀತ ರಕ್ತಸ್ರಾವದಿಂದಾಗಿ ಅಲ್ಲೇ ಇಹಲೋಕ ತ್ಯಜಿಸಿದ. ಹೀಗೆ ಆಕಸ್ಮಿಕಕ್ಕೆ ತುತ್ತಾದವರು ಬದುಕುವುದು ಕಷ್ಟ. ಅದೂ ಅಲ್ಲದೇ ಹಳಿಯ ತುಕ್ಕಿನ ಅಂಶ ಕೂಡಾ ಮೈ ಸೇರಿರುವುದು ಬದುಕಲು ಬಿಡುವುದೇ?
ಇಲ್ಲಿಯ ಸಂಚಾರ ವ್ಯವಸ್ಥೆಯ ಬಗ್ಗೆ ಹೇಳಬೇಕೆಂದ್ರೆ - ಊರು ಉದ್ದುದ್ದ ಇರುವುದರಿಂದ ರೈಲ್ವೇ ಸಂಚಾರ ವ್ಯವಸ್ಥೆ ಈ ಊರಿಗೆ ನರಗಳಂತಿವೆ. ಬಸ್ಸು ಕಾರು ಟ್ಯಾಕ್ಸಿಗಳಲ್ಲಿ ಪ್ರಯಾಣ ಮಾಡುವಾಗ ಟ್ರಾಫಿಕ್ ಜಾಮ್ ಆಗುವ ಸಾಧ್ಯತೆ ಬಹಳ ಹೆಚ್ಚು. ಹಾಗಾಗಿ ಜನಗಳು ದುಬಾರಿಯಲ್ಲದ ಲೋಕಲ್ ಟ್ರೈನನ್ನೇ ನಂಬುವುದು ಜಾಸ್ತಿ.
ಇನ್ನು ಇಲ್ಲಿಯ ಆಕರ್ಷಣೆ ಏನು? ಇಲ್ಲಿಗೆ ದೇಶದ ಎಲ್ಲೆಡೆಯಿಂದಲೂ ಜನಗಳು ಬರಲು ಕಾರಣವೇನು ಎಂಬುದನ್ನು ತಿಳಿಯೋಣ. ಜೀವನ ಮಾಡುವುದು ಇಲ್ಲಿ ಬಲು ಸುಳಭ. ಇಲ್ಲಿ ವಸತಿ ಹಿಡಿಯುವುದೊಂದೇ ಬಹಳ ಕಷ್ಟ. ಊಟ ತಿಂಡಿಗಳಿಗೇನೂ ತೊಂದರೆ ಇಲ್ಲ. ಕೆಲಸ ಸಿಗಲು ತೊಂದರೆಯೇ ಇಲ್ಲ. ಏನೇ ಮಾಡಿದರು ಹಣ ಗಳಿಸಬಹುದು.
ಅದೇಕೆ ಹೀಗೆ? ಮುಂಬೈ ಒಂದು ದ್ವೀಪ. ಮೊದಲಿಗೆ ಇಲ್ಲಿ ಒಟ್ಟು ಏಳು ನೆಲಗಡ್ಡೆಗಳಿದ್ದವು. ಚರಿತ್ರೆಯ ಪ್ರಕಾರ ೧೬೬೧ರಲ್ಲಿ ಅವುಗಳನ್ನು ಆಂಗ್ಲ ದೊರೆ ಚಾರ್ಲ್ಸ್ ೨ ಗೆ ಮದುವೆಯಲ್ಲಿ ವರದಕ್ಷಿಣೆಯಾಗಿ ಲಭಿಸಿತ್ತಂತೆ. ನಂತರ ನಡುಗಡ್ಡೆಯ ಮಧ್ಯದಲ್ಲಿದ್ದ ಸಮುದ್ರದ ಹಿನ್ನೀರನ್ನು ಮುಚ್ಚಿ ಅಲ್ಲಿ ಊರಿನ ನಿರ್ಮಾಣಾ ಆಯಿತು. ದಕ್ಷಿಣದಲ್ಲಿರುವ ಕೊಲಾಬಾದಿಂದ ಮಾಹಿಮ್ ವರೆಗೆ ಏಕ ಪ್ರಕಾರವಾಗಿ ನೆಲ. ಅಲ್ಲಿಂದ ಮುಂದೆ ಮಾಹಿಮ್ ಮತ್ತು ಬಾಂದ್ರಾ ನಡುವೆ ಸಮುದ್ರದ ಹಿನ್ನೀರನ್ನು ದಾಟಿ ಮುಂದೆ ಹೋಗಲು ಸೇತುವೆ ಕಟ್ಟಿಹರು. ಅದಕ್ಕಾಗಿ ಮುಂಬಯಿಯನ್ನು ಎರಡು ಭಾಗಗಳಾಗಿ ವಿಂಗಡಿಸಿಹರು. ಮುಂಬಯಿ ಮತ್ತು ಹಿರಿದಾದ ಮುಂಬಯಿ ಅಂತ. ಹೀಗೆ ಹಳೆಯ ಮುಂಬಯಿಯಲ್ಲಿ ಜಾಗದ ಕೊರತೆ ಇರುವುದರಿಂದ ಮನೆಗಳು ಇಲ್ಲಿಯ ಜನಗಳಿಗೆ ಸಾಕಾಗುವುದಿಲ್ಲ. ಇಲ್ಲಿರುವೆಲ್ಲಾ ಬಹು ಮಹಡಿ ಕಟ್ಟಾಡಗಳು. ಕಡಿಮೆ ಎಂದರೆ ಆರು ಮಹಡಿಗಳಿರುವ ಕಟ್ಟಡಗಳು. ಒಂದು ಕಟ್ಟದವಂತೂ ೪೫ ಮಹಡಿಗಳನ್ನು ಹೊಂದಿದೆ. ಅದರ ಹೆಸರು ಶ್ರೀಪತಿ ಆರ್ಕೇಡ್ ಅಂತ. ಅದರ ಎತ್ತರ ೧೫೩ ಮೀಟರ್ ಗಳು. ಅದರ ವಿಶೇಷತೆ ಏನೆಂದರೆ ಅದರಲ್ಲಿ ವಾಸಿಸುವರೆಲ್ಲರೂ ಸಸ್ಯಾಹಾರಿಗಳು ಮತ್ತು ಗುಜರಾತಿಗಳು. ಯಾರಾದರೂ ಫ್ಲಾಟ್ ಮಾರ್ಆಟ ಮಾಡಿದರೆ ಸೊಸೈಟಿಯವರ ಒಪ್ಪಿಗೆ ತೆಗೆದುಕೋಬೇಕು. ಆಗ ಮಾಂಸಾಹಾರಿಗಳಿಗೆ ಮಾರಲು ನಿರ್ಬಂಧನ ಹೇರುತ್ತಾರೆ.
ಹೀಗೆ ಮುಂಬಯಿಯಲ್ಲಿ ವಸತಿಗೆ ಜಾಗ ಕಡಿಮೆ ಆಗಿ, ಹಣ ಗಳಿಸಲು ಸುಲಭ ಸಾಧನಗಳಿರುವುದರಿಂದ ಜನಗಳ ಒಳ ಹರಿವು ಹೆಚ್ಚಾಗಿದ್ದು, ವಸತಿಯ ಸಮಸ್ಯೆ ಬಹಳವಾಗಿದೆ. ಇದನ್ನು ಜಾಸ್ತಿಯಾಗಿ ಕಾಡುವುದು ಮಧ್ಯಮ ವರ್ಗದವರನ್ನೇ. ಹನವಂತರು ಎಷ್ಟೇ ದುಬಾರಿಯಾದರೂ ಫ್ಲಾಟ್ ಕೊಂಡು ಕೊಳ್ಳುವರು. ಮತ್ತು ನಿರ್ಗತಿಕರು ರಸ್ತೆಯ ಬದಿಯಲ್ಲಿ ಗುಡಿಸಲು ಕಟ್ಟಿಕೊಂಡು ಜೀವಿಸುವರು. ಮಧ್ಯಮ ವರ್ಗದವರು ಆರಕ್ಕೆ ಏರೊಕ್ಕೆ ಆಗೋದಿಲ್ಲ ಮೂರಕ್ಕೆ ಇಳಿಯೋಕ್ಕಾಗೋದಿಲ್ಲ. ಬಲವಂತವಾಗಿ ಮುಂಬಯಿ ನಗರಿಯಿಂದ ದೂರವಿರುವ ಡೊಂಭಿವಿಲಿ, ಕಲ್ಯಾಣ, ವಿರಾರ್ ಮತ್ತಿತರೇ ಜಾಗದಲ್ಲಿ ವಾಸಿಸಬೇಕಾಗುವುದು. ಇನ್ನು ಸರಕಾರಿ ಅಥವಾ ಬ್ಯಾಂಕಿನಲ್ಲಿ ಕೆಲಸ ಮಾಡುವವರ ವಸತಿ ಗೃಹಗಳು ನಗರದ ತುದಿಯ ಗೋರೆಗಾಂವ್, ಮಲಾಡ್, ಬೊರಿವಿಲಿ, ಮುಲುಂದ, ಇತ್ತೀಚೆಗೆ ಆಗಿರುವ ಹೊಸ ಮುಂಬಯಿಯ ಬೇಲಾಪುರ, ವಾಶಿ ಕಡೆಗಳಲ್ಲಿ ವಾಸಿಸುತ್ತಿದ್ದಾರೆ.
ಇಲ್ಲಿಯ ಇನ್ನೊಂದು ವೈಶಿಷ್ಟ್ಯ ವೇನೆಂದರೆ ಜೀವನ ಯಾಂತ್ರಿಕ. ೧೦೦೦ ಜನಗಳನ್ನು ಹೊತ್ತೊಯ್ಯುವ ಲೋಕಲ್ ಟ್ರೈನ್ ನಲ್ಲಿ ೪೦೦೦ ರಿಂದ ೫೦೦೦ ಜನಗಳು ಪ್ರಯಾಣಿಸುತ್ತಾರೆ. ಇಲ್ಲಿಯ ಜನಸಂಖ್ಯೆಗೆ ೩ ನಿಮಿಷಗಳಿಗೆ ಒಂದು ಗಾಡಿಯಂತೆ ಇದ್ದರೂ ಇಷ್ಟು ಜನಸಂದಣಿ ಇದ್ದೇ ಇರುತ್ತದೆ. ಜನಸಂದಣಿ ಹೇಗೆ ಕಾಣುವುದು ಅಂದ್ರೆ ಚರ್ಚ್ ಗೇಟ್ ಅಥವಾ ವಿ.ಟಿ. (ವಿಕ್ಟೋರಿಯಾ ಟರ್ಮಿನಸ್ - ಈಗ ಛತ್ರಪತಿ ಶಿವಾಜಿ ಟರ್ಮಿನಸ್) ಸ್ಟೇಷನ್ ಗಳನ್ನು ಮೇಲುಗಡೆಯಿಂದ ನೋಡಿದರೆ ನೆಲವೇ ಕಾಣುವುದಿಲ್ಲ. ಯಾವಾಗಲೂ ತಲೆಗಳೇ ಕಾಣುವುದು. ಕಪ್ಪು ತಲೆ, ಬಿಳಿ ತಲೆ, ಬೋಳು ತಲೆ, ಕೆಂಪು ತಲೆ ಇತ್ಯಾದಿ.
ಬೆಳಗ್ಗೆ ಎದ್ದು ಕೆಲಸಕ್ಕೆಂದು ಹೊರಟರೆ, ಎಲ್ಲಿಗೇ ಹೋದರೂ, ಅತಿ ಕಡಿಮೆ ಎಂದರೂ ಒಂದು ಘಂಟೇಯ ಪ್ರಯಾಣ ಮಾಡಬೇಕಾಗುತ್ತದೆ. ಹಾಗೇ ಸಂಜೆ ಒಂದು ಘಂಟೆಯ ಪ್ರಯಾಣ. ಮಧ್ಯೆ ತಮ್ಮ ತಮ್ಮ ಉದ್ಯಮದಲ್ಲಿ ವೃತ್ತಿ. ಸಂಜೆ ಮನೆಗೆ ಬಂದು ಸೇರುವುದರೊಳಗೆ ಏನೂ ಯೋಚಿಸಲಾಗದಷ್ಟು ಸೋತಿರುತ್ತಾರೆ. ಮತ್ತೆ ಮರುದಿನ ಇದೇ ತರಹದ ದಿನಚರಿ. ಹಾಗಾಗಿ ಇಲ್ಲಿ ವರ್ಷಗಳು ದಿನಗಳಾಗಿಯೂ ದಿನಗಳು ಕ್ಷಣಗಳಾಗಿಯೂ ಸರಿದು ಹೋಗುವುದು. ಒಬ್ಬ ವ್ಯಕ್ತಿಯನ್ನು ಕಾಣಬೇಕೆಂದರೆ ಅವನ ದಿನಚರಿಯ ನಿಯಮಿತ ವೇಳೆಯಲ್ಲಿ ಅದೇ ಸ್ಥಾನದಲ್ಲಿ ಕಾಣಬಹುದು. ದುಬಾರಿ ಜೀವನ ಪ್ರವೃತ್ತಿಯಿಂದಾಗೆ ಪತಿ ಪತ್ನಿ ಇಬ್ಬರೂ ದುಡಿಯ ಬೇಕಾದ ಪರಿಸ್ತಿಥಿ ಆವಶ್ಯಕ. ಇಲ್ಲಿ ಇವರ ಮುಖ್ಯ ಧ್ಯೇಯ ಒಂದು ಫ್ಲಾಟ್ ಮಾಡಿಕೊಳ್ಳುವುದು. ನಂತರ ಸಂಸಾರ ಮಾಡಿಕೊಳ್ಳುವುದು. ಇವರ ದುಡ್ಡು ಮಾಡುವ ಪರಿಯಿಂದಾಗಿ ಸಮಾಜಕ್ಕೆ ಒಳ್ಳೆಯದಾಗುವ ಬದಲು ಕೆಟ್ಟದ್ದಾಗುವುದೇ ಹೆಚ್ಚು. ಅದು ಹೇಗೆ ಎಂಬುದನ್ನು ಇಲ್ಲಿ ನೋಡಿ. ಇಬ್ಬರೂ ದುಡಿಯುವ ಕಡೆ ಗಮನ ಕೊಟ್ಟು ಬೆಳಗ್ಗೆ ಬೇಗ ಮನೆ ಬಿಡುವುದು ಮತ್ತು ಸಂಜೆ ಬರುವುದು ನಿಧಾನವಾಗಿ ಮಕ್ಕಳ ಕಡೆ ಹೆಚ್ಚಿನ ಗಮನ ಕೊಡುವುದು ಕಡಿಮೆ. ಮಕ್ಕಳಿಗೆ ತಂದೆ ತಾಯಿಗಳ ಅತ್ಯಾವಶ್ಯಕ ಪ್ರೀತೆ ಪ್ರೇಮ ಮಮತೆ ಸಿಗುವುದು ದುಸ್ಸರ. ಕೈಗೆ ದುಡ್ಡು ಸಿಗುವುದು ಸುಲಭ. ತಂದೆ ತಾಯಿಗಳು ಹೇಳುವುದೂ ಏನೆಂದರೆ ನಿನಗೆ ಎಷ್ಟು ದುಡ್ಡು ಬೇಕು ಕೇಳು ಆದರೆ ನಮ್ಮನ್ನು ಮನೆಯಲ್ಲೇ ಇರು ಎಮ್ದು ಹೇಳಬಾಡ. ಹೀಗಾಗಿ ಮಕ್ಕಳು ಜಾಸ್ತಿ ಸಮಯ ಮನೆಯಿಂದಾಚೆಗೇ ಉಳಿಯುವರು. ಊರಿನಲ್ಲಿ ವಸತಿಯ ಸಮಸ್ಯೆಯಿಂದಾಗಿ ಒಳಗೆ ನಡೆಯಬೇಕಾದ ಲಲ್ಲೆ ಮುದ್ದುಗಳೆಲ್ಲಾ ಬೀದಿಯಲ್ಲೇ ಆಗಿ ಈ ಮಕ್ಕಳೆಲ್ಲರಿಗೂ ಅವುಗಳ ರುಚಿ ಹತ್ತುವುದು. ಹಾಗಾಗಿ ಇಲ್ಲಿ ಬಹು ಮಕ್ಕಳು ಹಾಳಗುವುದು ಸಹಜ. ಪಾರ್ಕ್, ಬೀಚು, ಸಾರ್ವಜನಿಕ ವಾಹನಗಳು, ಸಾರ್ವಜನಿಕ ಕ್ಷೇತ್ರಗಳಲ್ಲೆಲ್ಲಾ ಇದೇ ದೃಶ್ಯ ಕಂಡುಬರುವುದು ಸಾಮಾನ್ಯ. ಕೇಳಿದರೆ ಇದು ಪಾಶ್ಚಿಮಾತ್ಯ ಸಂಸ್ಕೃತಿ ಎನ್ನುವರು. ಅದೂ ಅಲ್ಲದೇ ಕಾಲೇಜು ಮೆಟ್ಟಿಲು ಹತ್ತಿದೊಡನೆ ಖಾಸಗಿ ಸಂಸ್ಥೆಗಳು ಹೊಸ ಹೊಸ ಪದಾರ್ಥಗಳ ಮಾರಾಟಕ್ಕೆ ದಿನಕ್ಕೆ ಒಂದು ಅಥವಾ ಎರಡು ಗಂಟೆಗಳಿಗೆ ಹುಡುಗ ಹುಡುಗಿಯರನ್ನು ಸೇಲ್ಸ್ ಪ್ರಮೋಷನ್ ಗೆಂದು ತೆಗೆದುಕೊಳ್ಳುವರು. ರಜೆ ದಿನಗಳಲ್ಲಿ ಮಾರಾಟ ಮಳಿಗೆಗಳಲ್ಲಿಯೂ ಇವರುಗಳಿಗೆ ಸುಲಭವಾಗಿ ಹಣ ಮಾಡುವ ಸಂದರ್ಭ ಸಿಗುವುದು. ಹಣ ಮಾಡುವುದೊಂದೇ ಉದ್ದೇಶ್ಯವಾಗಿ ನಮ್ಮ ಸಂಸ್ಕೃತಿಯನ್ನು ಬಿಡುವುದೇ? ಇದು ಭಾರತೀಯರಿಗೆ ತಕ್ಕುದಾದುದೇ? ಇಂತಹ ಪರಿಸ್ಥಿತಿಯನ್ನು ನಮ್ಮೂರುಗಳಲ್ಲಿ ಕಲ್ಪಿಸಿಕೊಳ್ಳಬಹುದೇ?
Rating