ಮುರಿಯುವ ಮಳೆ ಹಾಗು ಮೀರುವ ಮನಸ್ಸು

ಮುರಿಯುವ ಮಳೆ ಹಾಗು ಮೀರುವ ಮನಸ್ಸು

ಎರಡು ವಾರದಿಂದ ಎಡೆಬಿಡದ ಮಳೆ. ಆಸ್ಟ್ರೇಲಿಯಾದ ಮೂಡಲ ಕಡಲತಡಿಯುದ್ದಕ್ಕೂ ಹೊಡೆದಿದ್ದೇ ಹೊಡೆದಿದ್ದು. ಬರಗಾಲ ಕೊನೆಗೊಳಿಸಲು ಹಟತೊಟ್ಟಂತೆ. ಇದು ಯಾವ ನಕ್ಷತ್ರದ ಮಳೆಯೋ ಎಂದುಕೊಳ್ಳುತ್ತೇನೆ. ಹೊಳೆ, ನದಿ, ಕೆರೆ, ಕೊಳ್ಳ ಎಲ್ಲ ತುಂಬಿ ಉಕ್ಕಿ ಹರಿದ ಸಂತಸ.  ಸಿಡ್ನಿಯಲ್ಲಿ ಪುರಂದರ ಆರಾಧನೆ - ಮೊನ್ನೆ ಭಾನುವಾರ. ನನ್ನ ತಲೆಯಲ್ಲಿ ಮರುಕಳಿಸಿದ ಒಂದೆರಡು ಪ್ರಶ್ನೆಗಳು. ಹಿಂದಿನ ದಿನವಷ್ಟೇ ಮಳೆ ನಿಂತು ಎಲ್ಲ ತಿಳಿಯಾಗಿ ಸೂರ್ಯ ಹಚ್ಚಗೆ ನಗುತ್ತಿದ್ದ.

ಎಂಟು ಹತ್ತು ವರ್ಷಗಳಿಂದ ಈ ಆರಾಧನೆ ಸಿಡ್ನಿಯಲ್ಲಿ ನಡೆಯುತ್ತಿದೆ. ನನಗೆ ತುಂಬಾ ಮುದ ಕೊಡುವುದು ಇಲ್ಲಿ ಬರೀ ಪುರಂದರ ದಾಸರ ಕನ್ನಡ ಹಾಡುಗಳು ಅನ್ನುವುದು. ಸಣ್ಣ ಮಕ್ಕಳಿಂದ ಹಿಡಿದು ವಯಸ್ಸಾದವರೆಲ್ಲರೂ ಪಾಲ್ಗೊಳ್ಳುತ್ತಾರೆ, ಹಾಡುತ್ತಾರೆ. ಅದಕ್ಕಿಂತ ಸಂತಸ- ತಮಿಳರು, ತೆಲುಗರು ಮರಾಟಿಗರು ಎಲ್ಲರೂ ಇಲ್ಲಿ ಬಂದು ಕನ್ನಡ ಹಾಡುಗಳನ್ನು ಹಾಡುತ್ತಾರೆ. ಅದಕ್ಕಿಂತ ಹೆಚ್ಚಿನ ಸಂತಸ ಏನಿರುಲು ಸಾಧ್ಯ? ಈ ಒಂದು ವಿಷಯಕ್ಕಾಗಿ ನನ್ನನ್ನು ಈ ಆರಾಧನೆ ಮತ್ತೆ ಮತ್ತೆ ಸೆಳೆಯುತ್ತದೆ. ಒಮ್ಮೊಮ್ಮೆ ಹೋಗಲು ಮನಸಿಲ್ಲದಿದ್ದರೂ ಈ ಒಂದು ವಿಷಯ ನೆನಪಾಗಿ ಹೋಗಲು ಮನಸ್ಸು ಕಾತರಿಸುತ್ತದೆ.



ನವರತ್ನ ಮಾಲಿಕೆಯಿಂದ ಶುರುವಾಗಿ ಈ ಆರಾಧನೆ ಸುಮಾರು ಮೂರು, ನಾಕು ಗಂಟೆ ನಡೆಯುತ್ತದೆ. ತುಂಬಾ ಚೆನ್ನಾದ ಹಾಡುಗಳನ್ನು ಕೇಳಲು ಸಿಗುತ್ತದೆ. ಅನುಭವೀ ಗಾಯಕರಿಂದ ಹಿಡಿದು, ಸಂಗೀತ ಕಲಿಯುತ್ತಿರುವ ಮಂದಿ, ಮಕ್ಕಳು ಮತ್ತು ಹವ್ಯಾಸಿಗಳೆಲ್ಲಾ ಇಲ್ಲಿ ಹಾಡುತ್ತಾರೆ. ಮರಾಟಿಗರು ತಯಾರು ಮಾಡಿದ ಗುಂಪಿನ ಉತ್ತರಾದಿ ಶೈಲಿಯ ಹಾಡು ಒಂದು ತುದಿಯಲ್ಲಿ. ಉಗಾಭೋಗ ಹಾಡಿ ನಂತರ ಕೀರ್ತನೆ ಹಾಡಿದ ಮೂರು ಜನ ತಮಿಳು ಹೆಂಗಸರ ಹಾಡಿನ ಸೊಗಸು ಮತ್ತೊಂದು ತುದಿಯಲ್ಲಿ ಧ್ಯಾನಸ್ತವಾಗಿಸುತ್ತದೆ. ನಡು ನಡುವೆ 'ಶೃತಿಗೆ ಸಿಲುಕದವರು' ಹಾಡಿ ಧ್ಯಾನದಿಂದ ಬಿಡುಗಡೆ ಮಾಡುತ್ತಾರೆ! ನನ್ನ ನೆಚ್ಚಿನ ಹಾಡುಗಳನ್ನು ಕೆಡಸಿ, ನಿರ್ಬಲಗೊಳಿಸಿ ಸಿಟ್ಟಾಗಿಸುತ್ತಾರೆ. ಇರಲಿ, ಅದೂ ಒಂದು ಉತ್ಸಾಹ ಅಂದುಕೊಳ್ಳುತ್ತೇನೆ.

ಪವರ್‍ ಪಾಯಿಂಟ್ ಪ್ರಸೆಂಟೇಶನ್ನಿನಲ್ಲಿ ಪುರಂದರದಾಸರ ಬಗ್ಗೆ ವಿಷಯಗಳು ಇದ್ದವು. ಅಲ್ಲಿ ಅವರು ೪೭೫೦೦೦ ಹಾಡುಗಳನ್ನು ರಚಿಸಿದ್ದು ಈಗ ೧೦೦೦ವಷ್ಟೇ ಸಿಕ್ಕಿದೆ ಎಂಬ ವಿಷಯ ಬಂತು. ಅದು ಹೇಗಪ್ಪ, ೮೦ವರ್ಷ ಅವಿರತವಾಗಿ ಪ್ರತಿದಿನ ಬರೆದರೆ ದಿನಕ್ಕೆ ೧೫ಕ್ಕೂ ಮಿಕ್ಕಿ ಹಾಡುಗಳು ರಚಿಸಬೇಕಲ್ಲ ಅಂದುಕೊಂಡೆ. ನನ್ನ ಈ ತಕರಾರನ್ನು ಯಾರೂ ತಲೆಗೆ ಹಚ್ಚಿಕೊಳ್ಳಲಿಲ್ಲ. ಹೌದು. ಪುರಾಣಕ್ಕೆ ಈ ರೀತಿಯ ಲೆಕ್ಕಾಚಾರ ಸಲ್ಲುವುದಿಲ್ಲ. ಈ ರೀತಿಯ ಲೆಕ್ಕಾಚಾರ ಮಾಡಲೂ ಬಾರದು. ಆದರೂ ನೋಡಿ, ಪುರಂದರ ದಾಸರ ಹಾಡಿನ ಚಂದವನ್ನು ಅನುಭವಿಸಲು ಪುರಾಣದ ಅಗತ್ಯವಿದೆಯೆ? ಪುರಂದರ ಎಂಬ ವ್ಯಕ್ತಿಯ ಸಾಧನೆಯನ್ನು ಪುರಾಣಕ್ಕೆ ತಿರುಗಿಸಿದರೆ (ಕೆಲವರು ಅದನ್ನು ಏರಿಸುವುದು ಅನ್ನುತ್ತಾರೆ) ಏನು ಲಾಭ? ಪುರಂದರರ "ದೈವಿಕತೆ"ಯನ್ನು ಕಣ್ಣು ಮುಚ್ಚಿದ ವಯ್ಯಕ್ತಿಕ ಧ್ಯಾನದಲ್ಲಿ "ಗಳಿಸಿ", ಚಾರಿತ್ರಿಕವಾಗಿ, ಸಾಮುದಾಯಿಕವಾಗಿ ಎಷ್ಟೆಲ್ಲಾ ಕಳಕೊಳ್ಳುತ್ತೇವಲ್ಲ?

ಹಾಡುಮಂಚದ ಮೇಲೆ ಪುರಂದರರ ಒಂದು ಆಕೃತಿಯೂ ಇತ್ತು. ಸಿನೆಮಾ ನಟನಂತೆ. ತಂಬೂರಿ, ಪೇಟ, ಕಚ್ಚೆ ಪಂಚೆ, ಜನಿವಾರ, ಮಾಲೆ, ಕೈಯಲ್ಲಿ ಚಿಟಕಿ. ನಗುತ್ತಾ ಕುಣಿಯುತ್ತಿರುವ ಅವರ ಲೌಕಿಕ ರೂಪ. ಒಂದು ಕಡೆ ಅವರನ್ನು ಪುರಾಣ ಮಾಡುವ ಮನಸ್ಸು ಇನ್ನೊಂದೆಡೆ ಅವರಿಗೊಂದು ಲೌಕಿಕ ರೂಪಕೊಡಲೂ ಪ್ರಯತ್ನಿಸುತ್ತದೆ. ಜೀಸಸ್‌, ಶಂಕರಾಚಾರ್ಯ ಎಲ್ಲರ ವಿಷಯದಲ್ಲೂ ಆಗುವಂತೆ. ಆ ಆಕೃತಿಯ ಕಾಲಡಿಯಲ್ಲಿ ಹಚ್ಚಿಟ್ಟ ಕಾಲುದೀಪ ನಮ್ಮ ಭಕ್ತಿ, ಆರಾಧನೆಯನ್ನು ಮೂರ್ತಗೊಳಿಸುವ ಪ್ರಯತ್ನದ ಕತೆಯನ್ನು ಹೇಳುತ್ತದೆ. ಇದೊಂದು ಆಚರಣೆ ಎಂಬುದನ್ನು ನೆನಪಿಸುತ್ತದೆ. ಸ್ವಾತಂತ್ಯ್ರ ದಿನಾಚರಣೆ, ಹಬ್ಬಗಳಂತೆ. ಯಾವುದನ್ನೋ ಮೀರಲು, ಹೊಸದನ್ನು ಹುಟ್ಟುಹಾಕಲು ಹಾತೊರೆದ ಪುರಂದರರಂಥ ಮನಸ್ಸನ್ನು ನೆನಪಿಸುವುದು ಆಗಬೇಕು. ಆದರೆ ಅದಕ್ಕೆ ಮನಸ್ಸು ಗುರುತಿಸಬಲ್ಲ ಪುನರಾವರ್ತನೆ ಬೇಕು. ದೈವಿಕತೆ ಬೇಕು. ಪುರಾಣ ಬೇಕು. ಹಾಗಾಗಿ ಆ ಪ್ರಯತ್ನದಲ್ಲಿ ಪುರಂದರರಂಥವರು ಸಿಲುಕಿಕೊಳ್ಳುತ್ತಾರೆ. ನಕ್ಷತ್ರಗಳಲ್ಲಿ ಬರಗಾಲ ಮುರಿಯುವ ಮಳೆ ಸಿಲುಕಿಕೊಳ್ಳುತ್ತದೆ.

Rating
No votes yet

Comments