"ಮುಸ್ಸಂಜೆಮಾತು" ಬಗ್ಗೆ ಒಂದಿಷ್ಟು ಮಾತು

"ಮುಸ್ಸಂಜೆಮಾತು" ಬಗ್ಗೆ ಒಂದಿಷ್ಟು ಮಾತು

"ಜೀವನದಲ್ಲಿ ಸಜೆಷನ್ಸ್ ಕೊಡೋದು ಸುಲಭ, ಆದ್ರೆ ನಮ್ ಜೀವನದಲ್ಲಿ ಅದನ್ನು ಫಾಲೋ ಮಾಡದು ಬಹಳ ಕಷ್ಟ."

’ಮುಸ್ಸಂಜೆ ಮಾತು’ ಚೆನ್ನಾಗಿದೆ ಅನ್ಸುತ್ತೆ, ಟೈಮ್ಸಾಫಿಂಡಿಯಾದಲ್ಲಿ ನಾಲ್ಕು ಸ್ಟಾರ್ ಕೊಟ್ಟಿದ್ದಾರೆ ಬಾ ಹೋಗೋಣ ಎಂದು ಗೆಳೆಯರು ಕರೆದರು. ಕೆಲದಿನಗಳಿಂದ ಆ ಚಿತ್ರದ ಪೋಸ್ಟರ್ ಗಳನ್ನು ನೋಡಿದ್ದೆ. ಚಿತ್ರ ಚೆನ್ನಾಗಿಯೇ ಇರಬಹುದು ಎನ್ನಿಸಿತ್ತು. ಮಾಮೂಲಿ ಪ್ರೇಮ ಕಥೆಗಳುಳ್ಳ ಚಿತ್ರಗಳನ್ನು ನೋಡದ ನನಗೆ ಇದ್ಯಾಕೋ ಸ್ವಲ್ಪ ಬೇರೆಯೇ ತರನಾದ ಮೆಚ್ಯೂರ್ಡ್ ಲವ್ ಸ್ಟೋರಿ ಇರಬಹುದು ಅನಿಸಿತ್ತು. ಸುದೀಪ ಇದಾನೆ ಅಂದ್ಮೇಲೆ ಸ್ವಲ್ಪ ಲೆವೆಲ್ಲಾಗೇ ಇರ್ಬೋದು ಅಂತ ನಂಬಿಕೆಯೂ ಇತ್ತು. ಎಲ್ಲಾ ಹಾಳಾಗಿ ಹೋಯಿತು. ಎಲ್ಲಿಂದ ಶುರುಮಾಡಿ ಎಲ್ಲಿಗೆ ಮುಗಿಸುವುದೋ ತಿಳಿಯುತ್ತಿಲ್ಲ. ಈಗಿನ ಟ್ರೆಂಡಿನಂತೆ ನಾಯಕ ರೇಡಿಯೋ ಜಾಕಿ ಎಂಬುದೊಂದನ್ನು ಬಿಟ್ಟರೆ ಮತ್ತದೇ ೮೦ರ ದಶಕದ ಕಥೆ. ಕನ್ನಡದ ನಾಲ್ಕು ಸಿನೆಮಾ ನೋಡಿ ಅಭ್ಯಾಸವಿದ್ದವರು ಪ್ರತಿ ಸನ್ನಿವೇಶವನ್ನು, ಕಥೆಯನ್ನೂ ಸಂಭಾಷಣೆಗಳ ಸಮೇತ ಊಹಿಸಿಕೊಂಡುಬಿಡಬಹುದು !! ಚಿತ್ರ ಶುರುವಾಗಿ ೨೦ನಿಮಿಷದಲ್ಲೇ ನಾಯಕ ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕು ಹಾಕಿಕೊಂಡಿದ್ದ ಗರ್ಭಿಣಿ ಹೆಂಗಸೊಬ್ಬಳನ್ನು ಎತ್ತಿಕೊಂಡು ಹೋಗಿ ಆಸ್ಪತ್ರೆಗೆ ಸೇರಿಸುತ್ತಾನೆ. ಅಲ್ಲಿ ಮಗು ಆದ ಮೇಲೆ ಆಕೆ "ಅಣ್ಣಾ, ನಿಮ್ಮುಪಕಾರನ್ನ ಯಾವತ್ತೂ ಮರೆಯೋಲ್ಲ, ಈ ಮಗುಗೇ ನಿಮ್ಮದೇ ಹೆಸರಿಡ್ತೀನಿ" ಅಂತಾಳೆ. ಆವಾಗಲೇ ಇಡೀ ಟಾಕೀಸಿಗೆ ಒಳಗೆ ಬಂದು ತಪ್ಪು ಮಾಡಿಬಿಟ್ಟೆವೇನೋ ಎಂಬ ಸುಳಿವು ಸಿಕ್ಕಿಹೋಗುತ್ತದೆ. ಇರಲಿ ನೋಡೋಣ ಎಂದುಕೊಂಡರೆ ಇಡೀ ಚಿತ್ರದಲ್ಲಿ ಎಲ್ಲಾ ಪಾತ್ರಗಳೂ ಕುಯ್ಯುವವರೇ! ಒಂದಿಷ್ಟು ಒಳ್ಳೆಯ ಸಂದೇಶಗಳು ಇವೆಯಾದರೂ ಕೂಡ ನಿರೂಪಣೆ ನೀರಸ ನೀರಸ. ಭಾವನೆಗಳನ್ನೆಲ್ಲಾ ತಮಾಷೆಮಾಡಿಕೊಳ್ಳಲು ಅವಕಾಶ ಮಾಡಿಕೊಡುವಂತಾಗಿ ಹೋಗಿದೆ ಎರಡನೇ ಅರ್ಧದಲ್ಲಿ. ಕೊನೆಕೊನೆಗಂತೂ ಗಂಭೀರ ದೃಶ್ಯಗಳು ಬಂದಾಗಲೂ ಕೂಡ ಇಡೀ ಟಾಕೀಸಿಗೆ ಟಾಕೀಸೆ ಯಾವುದೋ ಹಾಸ್ಯ ಚಿತ್ರವೊಂದನ್ನು ನೋಡುತ್ತಿದ್ದಂತೆ ಪೂರ್ತಿ ಕಾಮಿಡಿಯಿಂದ ತುಂಬಿಹೋಗುತ್ತದೆ. ಇಡೀ ಊರತುಂಬಾ ಪೋಸ್ಟರುಗಳಲ್ಲಿ ಕಾಣುತ್ತಿದ್ದ ದೃಶ್ಯಗಳು ಕೇವಲ ಒಂದು ಹಾಡಿನದು. ಅದು ನಾಯಕ ನಾಯಕಿಗೆ ಪ್ರೇಮವಾಗುವ ಹಾಡು ಮತ್ತು ಅದಷ್ಟರಲ್ಲಿ ಮಾತ್ರ ಪ್ರೇಮ ಇರುವುದು.

"ಹುಡ್ಗೀರನ್ನ ರೇಗಿಸಿ ಪರ್ವಾಗಿಲ್ಲ, ಆದ್ರೆ ಅದಕ್ಕೊಂದು ಲಿಮಿಟ್ಟಿರ್ಲಿ", ಆಮೇಲೆ "ಯಾವನಾರೂ ಗಂಡಸು ಸುಮ್ನೆ ಅವನ ಪಾಡಿಗೆ ಅವನು ಇದಾನೆ ಅಂದ ಮಾತ್ರಕ್ಕೆ ಅವನು ಗಂಡಸೇ ಅಲ್ಲ ಅಂತ ಮಾತ್ರ ತಿಳ್ಕಬೇಡಿ" ಅಂತ ಸುದೀಪ ಸುಮ್ಸುಮ್ನೇ ಇರುವ ಫೈಟಿಂಗ್ ಒಂದು ಮುಗಿದ ಮೇಲೆ ಹೊಡೆಸಿಕೊಂಡ ರೌಡಿಗಳಿಗೆ ಉಪದೇಶ ಕೊಡುತ್ತಾನೆ. "ಈ ರೇಡಿಯೋ ಜಾಕಿ ಕೆಲ್ಸ ಬಿಟ್ಟು ಯಾವುದಾದ್ರೂ ಐ.ಟಿ ಕಂಪನಿ ಸೇರ್ಕೋ , ಒಳ್ಳೇ ಸಂಬಳ , ನೆಮ್ಮದಿಯಾಗಿ ಇರ್ಬೋದು" ಅಂತ ನಾಯಕನ ಅಮ್ಮ ಟಿಪಿಕಲ್ ಅಮ್ಮನಂತೆ ಹೇಳುತ್ತಾಳೆ !! ಟಾಕೀಸನಲ್ಲಿದ್ದ ಐ.ಟಿ. ಹುಡುಗರು ಹೋ...... ಎಂದು ಕೂಗುತ್ತಾರೆ :)

ಈ ಚಿತ್ರ ಮಾಡಿದ ನಿರ್ಮಾಪಕ, ನಿರ್ದೇಶಕನಿಗೆ ಬೈಯಬೇಕೋ, ನೋಡಿದ ನಮಗೆ ನಾವೇ ಬೈಕೊಬೇಕೋ ತಿಳೀತಿಲ್ಲ. ಸುದೀಪನ ನಟನೆ, ಮಾತು ಬಗ್ಗೆ ಎರಡು ಮಾತಿಲ್ಲವಾದರೂ ಇಂತದೇ ಚಿತ್ರಗಳನ್ನ ಮಾಡ್ತಾ ಇದ್ರೆ ಆಮೇಲೆ 'ಯಾರೋ ಯಾರೋ ಗೀಚಿ ಹೋದ .. ಹಾಳೂ ಹಣೆಯಾ ಬರಹ...." ಅನ್ಬೇಕಾಗತ್ತೆ. ಹಾಸ್ಯ,ಹರಟೆ ಖ್ಯಾತಿಯ ಗಂಗಾವತಿ ಬೀಚಿ ಪ್ರಾಣೇಶ್ ಮತ್ತು ಪ್ರೊ.ಕೃಷ್ಣೆಗೌಡರು ಬಹುಶ: ಮೊದಲ ಬಾರಿಗೆ ಚಿತ್ರವೊಂದರಲ್ಲಿ ನಟಿಸಿದ್ದಾರೆ ಮತ್ತು ನಾಯಕನಿಗಿಂತ ಅವರ ಎಂಟ್ರಿಗೇ ಜಾಸ್ತಿ ಸಿಳ್ಳೆಗಳು ಬೀಳುತ್ತವೆ. ಹಾಗಂತ ಚಿತ್ರದಲ್ಲಿ ತೀರ ನಗು ಬರುವಂತಹ ಹಾಸ್ಯ ಏನೂ ಇಲ್ಲ! ಇಷ್ಟೆಲ್ಲಾ ಹೇಳಿದ ಮೇಲೂ ಚಿತ್ರದ ಕಥೆ ಏನು ಅಂತ ಹೇಳೋ ಅಗತ್ಯ ಕಾಣ್ತಾ ಇಲ್ಲ, ಹೇಳಲು ತಾಳ್ಮೆನೂ ಇಲ್ಲ. ಒಂದು ಕಾಲದಲ್ಲಿ ಇಂತಹುದ್ದನ್ನೆಲ್ಲಾ ನೋಡುಗರು ಗಂಭೀರವಾಗಿ ನೋಡುತ್ತಿದ್ದರು. ಆದರೆ ಈಗಿನ ನೋಡುಗರ ಮನಸ್ಥಿತಿ, ಅಭಿರುಚಿ ಹಾಗಿಲ್ಲ ಎಂಬುದು ನಿರ್ದೇಶಕನಿಗೆ ಅರ್ಥವಾಗಿಲ್ಲ. ಪದೇ ಪದೇ ಪ್ರೇಕ್ಷಕನನ್ನು ಅಳಿಸಲು ಪ್ರಯತ್ನವನ್ನು ಮಾಡಿದಂತಿದೆ. "ಹೇಳಲೊಂಥರಾ ಥರಾ.." ಎಂಬ ಹಾಡನ್ನು ಬಿಟ್ಟರೆ ಬೇರ್ಯಾವುದೂ ಬೇಕೆಂದರೂ ನೆನಪಾಗುವುದಿಲ್ಲ.!!

ಸೆಂಟಿಮೆಂಟ್ ಗಳನ್ನು ಇಷ್ಟ ಪಡೋವ್ರಾದ್ರೆ, ಗಂಭೀರವಾಗಿ ನೋಡೋವ್ರಾದ್ರೆ, ಡೀಸೆಂಟಾದ ಚಿತ್ರವೊಂದನ್ನು ನೋಡಬೇಕಾಗಿದ್ರೆ, ಮಾಡಲು ಬೇರೆ ಏನೂ ಕೆಲಸ ಇಲ್ಲಾಂದ್ರೆ ಇನ್ನು ನಾಲ್ಕು ದಿನದೊಳಗೆ ಚಿತ್ರ ನೋಡಿಕೊಂಡು ಬನ್ನಿ. ಆಮೇಲೆ ಯಾವ ಟಾಕೀಸಿನಲ್ಲೂ ಇರೋಲ್ಲ ಅಂತ ಖಾತ್ರಿ ಇದೆ. ಇಲ್ಲಾಂದ್ರೆ ಸುಮ್ನೆ ನಮ್ಮ ಹಾಗೆ ಒಂದು ಮುಸ್ಸಂಜೆ ಹಾಳು ಮಾಡ್ಕೋಬೇಡಿ. ನನ್ನನ್ನು ಕರೆದುಕೊಂಡು ಹೋಗಿದ್ದ ಗೆಳೆಯರು ಅರ್ಧಗಂಟೆ ಮೊದಲೇ ಎದ್ದುಹೋಗಿ ಬಚಾವಾಗಿ ಬಿಟ್ಟರು ! :)

ಅಂದ ಹಾಗೆ ಮರೆತುಬಿಟ್ಟಿದ್ದೆ , ಈ ಬರಹದ ಮೊದಲಲ್ಲಿ ಹೇಳಿದ ಮಾತಿದೆಯಲ್ಲ ಅದು ನಂದಲ್ಲ, ಅದೂ ಕೂಡ ಸಿನೆಮಾದಲ್ಲಿ ಸುದೀಪ ಹೇಳಿದ್ದು. ಚೆನ್ನಾಗಿದೆ ಅಲ್ವಾ? :)

ಬೆಂಕಿಬೀಳಲಿ ಆ ಟೈಮ್ಸಾಫಿಂಡಿಯಾಗೆ ಮತ್ತು ಅದರ ರೇಟಿಂಗಿಗೆ.

Rating
No votes yet

Comments