ಮೂರು ಕೋತಿಗಳ ಬಾಲ ಹಿಡಿದು

ಮೂರು ಕೋತಿಗಳ ಬಾಲ ಹಿಡಿದು

ನಾನು ಕಳೆದವಾರದಲ್ಲಿ ಮೂರು ದಿನಗಳವರೆಗೆ ಒಂದು ತರಹ ಗಾಂಧಿ ತತ್ವ ಪಾಲಿಸಿದೆ.
ಕೆಟ್ಟದ್ದನ್ನು ಕೇಳಬೇಡ, ಕೆಟ್ಟದ್ದನ್ನು ನೋಡಬೇಡ ಹಾಗೂ ಕೆಟ್ಟದ್ದನ್ನು ಹೇಳಬೇಡ - ಎಂಬುದನ್ನು ತೋರಿಸಿಕೊಡುವ ಮೂರು ಕೋತಿಗಳ ಚಿತ್ರ ನಿಮಗೆಲ್ಲ ಚಿರಪರಿಚಿತ.

ಈಗ ನನ್ನ ಕಥೆ ಕೇಳಿ. ನಾನು ವಿದೇಶಕ್ಕೆ ಹೊರಟಿರುವುದರಿಂದ ಸಂಪೂರ್ಣವಾಗಿ ದೈಹಿಕ ಪರೀಕ್ಷೆ ಮಾಡಿಸ ಬೇಕೆಂದು ನಿರ್ಧರಿಸಿದೆ. ಇತರ ಪರೀಕ್ಷೆಗಳೆಲ್ಲ ಆದಮೇಲೆ ನನ್ನ ಗಮನ ಕಣ್ಣು ಕಿವಿ ಬಾಯಿಗಳ ಮೇಲೆ ಹರಿಯಿತು.

ಸರಿ, ನನ್ನ ಜೀವನದಲ್ಲಿ ಪ್ರಥಮಬಾರಿಗೆ ದಂತವೈದ್ಯರೊಬ್ಬರ ಬಳಿ ಹೋಗಿ ಹಲ್ಲುಗಿಂಜಿದೆ. ಅವರು ತಮ್ಮ ಬಾಯಿಗೊಂದು ಅಡ್ದಬಟ್ಟೆ ಕಟ್ಟಿಕೊಂಡು ನನ್ನ ದಂತಪಂಕ್ತಿಯನ್ನು ಪರೀಕ್ಷಿಸಿದರು. ಮೊದಲು ನಿಮ್ಮ ಹಲ್ಲಿನ ಕಲೆಗಳೆಲ್ಲವನ್ನು ತೆಗೆಯೋಣವೆಂದರು. ವೈದ್ಯರ ಅಣತಿಯಂತೆ ಲಲನಾಮಣಿಯೊಬ್ಬಳು ಆಯುಧಪಾಣಿಯಾಗಿ ನನ್ನ ಹಲ್ಲುಗಳನ್ನು ಸಾಣೆಹಿಡಿಯತೊಡಗಿದಳು. ಪ್ರಥಮ ಚುಂಬನೆ ದಂತಭಗ್ನಂ ಎಂದರೆ ಇದೇ ಇರಬೇಕು ಎಂದುಕೊಂಡೆ. ನಂತರ ವೈದ್ಯರು ಬಂದು ನನ್ನು ಹಲ್ಲಿನ ಹುಳುಕುಗಳನ್ನೆಲ್ಲ ಸಿಮೆಂಟಿನಿಂದ (ಸೀಮೆ ಅಂಟು?) ಮುಚ್ಚಿಹಾಕಿದರು. ನನಗೋ ಒಳಗೊಳಗೆ ನಗು. ಕಾರಣ ಮಿ.ಬೀನ್ ಸೀರಿಯಲ್ ನಲ್ಲಿ ದಂತವೈದ್ಯರ ಕಾಲಿಗೆ ಬೀನ್ ಅನಸ್ತೇಶಿಯಾ ಚುಚ್ಚಿಬಿಡುವ ನೆನಪು ಬಂದುಬಿಟ್ಟಿತ್ತು. ಸರಿ ಹಾಗೂ ಹೀಗೂ ಹೊರಗೆ ಬಂದಾಗ ಗೊತ್ತಾಯಿತು, ದಂತವೈದ್ಯರು ಕೀಳುವುದು ಹಲ್ಲಲ್ಲಾ, ಹಣ ಎಂದು ! ಧನ್-ತಾ ವೈದ್ಯರು !

ನನ್ನ ಮುಂದಿನ ಬೇಟಿ ಕಿವಿಯ ವೈದ್ಯರ ಬಳಿ. ನನ್ನ ಎರಡೂ ಕಿವಿಗಳಲ್ಲೂ ಮೇಣ ತುಂಬಿಕೊಂಡ ಕಾರಣ ಬಹಳ ನವೆಯಾಗಿ ರಣವಾಗಿತ್ತು. ಅವರು ಅದಕ್ಕೊಂದು ಕರ್ಣಾಮೃತ ಕೊಟ್ಟು ಮೂರುದಿನಗಳು ಹಾಕಿಕೊಂಡು ನಂತರ ಬರಲು ಹೇಳಿದರು. ತಿರುಗಿ ಹೋದಾಗ ಪಿಚಕಾರಿಯಿಂದ ನೀರುಬಿಟ್ಟು ಮೇಣತೆಗೆದು ನನ್ನನ್ನು ಸುಕರ್ಣನನ್ನಾಗಿಸಿದರು.

ನಂತರ ನಾನು ಹೋಗಿದ್ದು ಕಣ್ಣಿನ ವೈದ್ಯರಬಳಿ. ಸಧ್ಯಕ್ಕೆ ನನ್ನ ಕಣ್ಣಿನ ಶಕ್ತಿಯಲ್ಲಿ, ಅಲ್ಲಾ, ನನ್ನ ಕಣ್ಣಿನ ನಿಶ್ಯಕ್ತಿಯಲ್ಲಿ ಹೆಚ್ಚಿನ ಬದಲಾವಣೆ ಏನೂ ಇರಲಿಲ್ಲ. ಆದರೆ ನನ್ನ ಕನ್ನಡಕದ ಮೇಲಾಗಿದ್ದ ಗೀಚುಗಳು (ಶುದ್ಧ ಕನ್ನಡದ ಸ್ಕ್ರ್ಯಾಚುಗಳು) ನನ್ನ ದೃಷ್ಟಿಯನ್ನೇ ಮಂದಮಾಡಿದ್ದವು. ಹೊಸ ಸುಲೋಚನ ಧರಿಸಿದೊಡನೆಯೇ ಮತ್ತೆ ತಿಳಿಯಾದ ಪ್ರಪಂಚ ಕಾಣಿಸತೊಡಗಿತು.

ಹೀಗಿತ್ತು ನನ್ನ ಒಳ್ಳೆಯದನ್ನು ಕೇಳುವ, ಒಳ್ಳೆಯದನ್ನು ಕಾಣುವ, ಒಳ್ಳೆಯದನ್ನು ಆಡುವ-ಅಗೆಯುವ ಹಾಗೆಯೇ ಕೆಟ್ಟದ್ದನ್ನು ಬಿಸಾಡುವ (use & throw ?) ಅನುಭವ.

- ಸುಚರ
----------------------
ಬ್ಲಾಗುವ ನಾಯಿ ಕಚ್ಚುವುದಿಲ್ಲ

Rating
No votes yet

Comments