ಯಶವಂತ ಚಿತ್ತಾಲರ 'ಪಯಣ' - ಒಂದು ನಿಗೂಢ ಕಥೆ , ಮತ್ತು ಅದರ ವಿವರಣೆ(!?)

ಯಶವಂತ ಚಿತ್ತಾಲರ 'ಪಯಣ' - ಒಂದು ನಿಗೂಢ ಕಥೆ , ಮತ್ತು ಅದರ ವಿವರಣೆ(!?)

ಪ್ರಸಿದ್ಧ ಕತೆಗಾರ ಯಶವಂತ ಚಿತ್ತಾಲರ ಅವರ 'ಪಯಣ' ಕಥೆಯನ್ನು ಓದಿ ೨೫ ವರ್ಷ ಆದರೂ ನೆನಪು ಚೆನ್ನಾಗಿದೆ. ಇದಕ್ಕೆ ಅದರ ರಹಸ್ಯಮಯತೆ ಕಾರಣ.

ಕಥಾನಾಯಕ ಒಂದು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಮದುವೆಯಾಗಿಲ್ಲ , ಒಬ್ಬಂಟಿ. ಹೀಗಾಗಿ ಕಂಪನಿಯ ಎಲ್ಲ ಪರಊರ್‍ಇನ ಕೆಲಸಕ್ಕೂ ಅವನನ್ನೇ ಕಳಿಸುತ್ತಾರೆ. ಅವನೂ ಯಾವಾಗಲೂ ಸಿದ್ಧನೇ. ಅವನ ಬ್ಯಾಗು ಸದಾಸನ್ನದ್ಧ. ಎಲ್ಲಿಗೆ ಎಂದರೆ ಅಲ್ಲಿಗೆ , ಯಾವಾಗ ಎಂದರೆ ಆವಾಗ.

ಹೀಗೇ ಒಂದು ಸಲ ಯಾವುದೋ ಊರು, ಯಾವುದೋ ಹೋಟೆಲ್ಲು , ರಾತ್ರಿ ಮಲಗಿದ್ದಾನೆ, ನಿದ್ದೆಯಲ್ಲಿದ್ದಾಗ ಬಾಗಿಲು ಬಡಿದ ಸದ್ದು , ಹಿಂದೆಯೇ ಒಂದು ವ್ಯಕ್ತಿ ಅರೆಗತ್ತಲಲ್ಲಿ ಒಳಗಿಣುಕಿ , ' ನಾಳೆ ಕೋಳಿ ಕೂಗುವ ಹೊತ್ತಿಗೆ ಹೊರಡಬೇಕು- ಸಿದ್ಧನಾಗಿರು' ಎಂದು ಹೇಳಿ ಮಾಯವಾಗುತ್ತದೆ. ಅಭ್ಯಾಸಬಲದಿಂದ ನಮ್ಮ ಕಥಾನಾಯಕ ಹೂಂ ಎಂದೊಪ್ಪಿ ನಂತರ ವಿಚಾರ ಮಾಡತೊಡಗುತ್ತಾನೆ - ಯಾರಾತ? ಎಲ್ಲಿಗೆ ಹೋಗಬೇಕು? ಕೋಳಿ ಕೂಗುವ ಹೊತ್ತು ಯಾವದು? ತಾನೇಕೆ ಹಿಂದು ಮುಂದು ಯೋಚಿಸದೆ ಒಪ್ಪಿದೆ?- ಎಂದೆಲ್ಲ. 'ಇಷ್ಟಕ್ಕೂ ಬಂದಾತ ಹೇಗಿದ್ದ ?- ಎಂದು ನೆನಪಿಸಿಕೊಂಡಾಗ - ಕಪ್ಪಗೆ ದಪ್ಪಗೆ ಇದ್ದದ್ದೂ , ಅವನ ಮೇಲ್ಭಾಗದಲ್ಲಿ ಏನೂ ಬಟ್ಟೆಯಿರದೆ ಇರುವದು ಗಮನಕ್ಕೆ ಬಂದು ಒಂಥರಾ ಅನಿಸುತ್ತದೆ. ಏನೇ ಇರಲಿ , ಮುಂಜಾನೆ ಬರುತ್ತಾನಲ್ಲ , ಕೇಳಿದರಾಯಿತು. ಎಂದು ಮಲಗಬಯಸುತ್ತಾನೆ , ಆದರೆ ನಿದ್ದೆ ಬರುವದಿಲ್ಲ . ಎದ್ದು ಹೋಟೆಲ್ ಬಿಲ್ಲು ಚುಕ್ತಾ ಮಾಡಿ , ರೂಂ‍ಬಾಯ್‍ಗೆ ಟಿಪ್ಸೂ ಕೊಟ್ಟು ಬೆಳಿಗ್ಗೆ ಬೇಗ ಚಹಾದೊಡನೆ ಎಬ್ಬಿಸಲು ಹೇಳುತ್ತಾನೆ. ರೂಮಿಗೆ ಬಂದು ಮಲಗಿದರೂ ನಿದ್ದೆ ಬರುವದಿಲ್ಲ . ಕೊನೆಗೆ ಎಲ್ಲ ಪ್ಯಾಕ್ ಮಾಡಿ ಮಲಗುತ್ತಾನೆ . ಮೂರು-ನಾಲ್ಕು ಘಂಟೆಯಾದರೂ ನಿದ್ದೆ ಬರುವದಿಲ್ಲ . ಕೊನೆಗೆ ಸ್ನಾನವನ್ನೂ ಮಾಡಿ , ಬಟ್ಟೆಯನ್ನೂ ತೊಟ್ಟುಕೊಂಡು ಷೂ ಅನ್ನೂ ಹಾಕಿಕೊಂಡು, ಬಾಗಿಲ ಬೋಲ್ಟ್ ಅನ್ನು ತೆಗೆದೂ ಇಟ್ಟು , ಹಾಸಿಗೆಯ ಮೇಲೆ ಅಡ್ಡಾಗುತ್ತಾನೆ. ಹಾಗೆಯೇ ಕಣ್ಣೂ ಎಳೆದು , ಮಂಪರು ಕವಿಯುತ್ತದೆ.

ಆದರೆ ಬೆಳಗ್ಗೆ ರೂಂಬಾಯ್‍ಗೆ ಅವನನ್ನು ಎಬ್ಬಿಸಹೇಳಿದ್ದು ಮರೆತು, ನೆನಪಾದಾಗ ಅದಾಗಲೇ ಎಂಟು ಘಂಟೆಯಾಗಿರುತ್ತದೆ. ಚಹಾ ತೆಗೆದುಕೊಂಡು , ಬೈಸಿಕೊಳ್ಳುವ ಹೆದರಿಕೆಯಿಂದ ಅವನ ರೂಂ ಬಾಗಿಲು ತಟ್ಟಿದಾಗ, ತೆಗೆದೇ ಇದ್ದ ಬಾಗಿಲು ತೆರೆದುಕೊಂಡು , ಒಳಗೆ ನಮ್ಮ ಕಥಾನಾಯಕ ಹಾಸಿಗೆಯ ಮೇಲೆ ಶಿಲುಬೆಗೇರಿದ ಏಸುಕ್ರಿಸ್ತನ ಭಂಗಿಯಲ್ಲಿ ಸತ್ತು ಬಿದ್ದಿರುವದು ಗೊತ್ತಾಗುತ್ತದೆ.

ಇದಿಷ್ಟು ಕಥೆ. ಇದರ ಅರ್ಥವೇನು ತಿಳಿಯದಿದ್ದರೂ ಅದರ ನಿಗೂಢತೆಯಿಂದ ಕಥೆ ಮನಸ್ಸಿಗೆ ಹಿಡಿಸಿ ನೆನಪಿನಲ್ಲುಳಿಯಿತು .

ಮುಂದಾನೊಂದು ದಿನ 'ಮಲ್ಲಿಗೆ'ಯಲ್ಲಿ ಚಿತ್ತಾಲರ ಒಂದು ಲೇಖನ ಕಂಡಿತು. ( 'ನಾನೇಕೆ ಬರೆಯುತ್ತೇನೆ ?' ಅಂತಲೋ , 'ನನ್ನ ಬರಹದ ಪ್ರೇರಣೆಗಳು' ಅಂತಲೋ ಇಇತು ) ಅಲ್ಲಿ ಈ ಕಥೆಯ ಪ್ರಸ್ತಾಪ ಇತ್ತು. -' ಐನ್‍ಸ್ಟೀನ್‍ನ ಪ್ರಸಿದ್ಧ ವೈಜ್ಞಾನಿಕ ಸೂತ್ರ E=MC2 (ಸರಿಯಾಗಿ ಹೇಗೆ ಬರೆಯಬೇಕು ಗೊತ್ತಿಲ್ಲ - ಸ್ವಲ್ಪ ಸಹಕರಿಸಿಕೊಂಡು ಓದಿ) ದ ಕುರಿತು ಓದಿ ಈ ಕಥೆ ಬರೆದರಂತೆ. ಬಂದಾತನ ವಿವರಣೆ ಯಮನ ಸೂಚಕ ಎಂದೂ , ಆತನ ಸಾವಿನ ಭಂಗಿಯನ್ನು ಏಸು ಕ್ರಿಸ್ತನ ತೆರದಲ್ಲಿರುವಂತೆ ತಿದ್ದಿರುವದಾಗಿ ಹೇಳಿದ್ದರು . ಇಷ್ಟನ್ನು ಬಿಟ್ಟರೆ ಹೆಚ್ಚಿನ ವಿವರಣೆ ಇರಲಿಲ್ಲ.

ಆ ವೈಜ್ಞಾನಿಕ ಸೂತ್ರಕ್ಕೂ ಈ ಕಥೆಗೂ ಏನು ಸಂಬಂಧ ಅಂತ ನನಗೆ ಗೊತ್ತಾಗಲಿಲ್ಲ ; ನಿಮಗೆ ಏನಾದರೂ ಗೊತ್ತಾದರೆ ತಿಳಿಸಿ. - ಆ ನಂತರ ಅವರ ಮತ್ತು ಇತರರ ಇಂಥ ಅರ್ಥವಾಗದ ಕಥೆಗಳನ್ನೂ ಸಂಶಯದಿಂದಲೇ ನೋಡುತ್ತಿದ್ದೇನೆ!

Rating
Average: 3.5 (2 votes)

Comments