ಯಾಕೋ ಹಳೆಯದೆಲ್ಲಾ ನೆನಪಾಗುತಿದೆ...

ಯಾಕೋ ಹಳೆಯದೆಲ್ಲಾ ನೆನಪಾಗುತಿದೆ...

ಇಂಜಿನಿಯರಿಂಗ್ ಓದುತ್ತಿದ್ದ ಕಾಲದಲ್ಲಿ ಬೆಂಗಳೂರು ನಮ್ಮ ಕನಸಿನ ಊರಾಗಿತ್ತು. ಕಲಿಕೆಯಲ್ಲಿ ಅಷ್ಟೇನೂ ಮುಂದೆ ಇಲ್ಲದಿದ್ದರೂ ಹೇಗಾದರೂ ಪರೀಕ್ಷೆಯಲ್ಲಿ 'ಬಚಾವ್್' ಆಗಿ ಎದ್ದು ನಿಲ್ಲುತ್ತಿದ್ದೆ. ಅಂತಿಮ ವರ್ಷ ಕ್ಯಾಂಪಸ್ ಇಂಟರ್್ವ್ಯೂನಲ್ಲಿ ನನ್ನ ಬುದ್ಧಿವಂತ ಗೆಳೆಯರೆಲ್ಲ ಪಾಸಾದಾಗ ನಾವು ಕಂಗ್ರಾಟ್ಸ್ ಹೇಳುವ ಗುಂಪಿನಲ್ಲಿ ನಿಲ್ಲಬೇಕಾಗಿ ಬಂತು. ನನ್ನ ಹಾಗೆಯೇ ಎಂಟು ಹುಡುಗಿಯರು ನಮ್ಮ ಗ್ಯಾಂಗ್್ನಲ್ಲಿದ್ದರು. ಕೆಲಸ ಗಿಟ್ಟಿಸಿಕೊಳ್ಳಬೇಕೆಂದು ನಾವು ಕಂಪನಿಗಳಿಗೆ ರೆಸ್ಯೂಮೆ ಫಾರ್ವ್್ರ್ಡ್ ಮಾಡುತ್ತಿರಬೇಕಾದರೆ ನಿಮಗೆ ಯಾಕೆ ಕೆಲಸ? ಹೇಗಾದರೂ ಸಾಫ್ಟ್್ವೇರ್ ಇಂಜಿನಿಯರ್ ಒಬ್ಬ ಮದುವೆ ಆಗುತ್ತಾನೆ. ಆಮೇಲೆ ಗಂಡ, ಮನೆ ಮಕ್ಕಳು ಅಂತಾ ಲೈಫ್ ಕಳೆದುಹೋಗಿ ಬಿಡುತ್ತೆ ಎಂದು 'ಬಿಟ್ಟಿ' ಉಪದೇಶ ನೀಡುವ ಹುಡುಗರಿಗೂ ಏನೂ ಕಮ್ಮಿಯಿರಲಿಲ್ಲ.


ಇಂಟರ್್ವ್ಯೂನಲ್ಲಿ ಪಾಸಾಗುವ ಅರ್ಹತೆ ನಮಗಿರಲಿಲ್ಲವೋ, ನಮ್ಮನ್ನು ಆಯ್ಕೆ ಮಾಡುವ ಅರ್ಹತೆ ಅವರಿಗಿರಲಿಲ್ಲವೋ ಅಂತೂ ನಮ್ಮ ಬೆಂಗಳೂರು ಕನಸು ಕನಸಾಗಿಯೇ ಉಳಿದಿತ್ತು. ಬೆಂಗಳೂರು ಹೋಗಿ ಅಲ್ಲಿ ಕೆಲಸ ಹುಡುಕೋಣ ಎಂದರೆ ಅಷ್ಟೊಂದು ದುಡ್ಡು ಇರಬೇಕಲ್ವಾ? ಕೆಲವೊಮ್ಮೆ ಕೆಲಸ ಸಿಕ್ಕದೇ ಇದ್ದರೆ? ಮನಸ್ಸಲ್ಲಿ ನೂರಾರು ಚಿಂತೆಗಳು. ಕಾಲೇಜಿನಲ್ಲಿರುವಾಗ ಉತ್ತರ ಭಾರತದಿಂದಲೋ ಇನ್ನಾವುದೋ ರಾಜ್ಯದಿಂದ ಬಂದ ಮಕ್ಕಳು ಇಂಗ್ಲಿಷ್್ನಲ್ಲಿ ಮಾತನಾಡಿದರೆ, ಇದು ಕೇರಳ. ನಮ್ಮ ರಾಜ್ಯ ಇಲ್ಲಿ ಮಲಯಾಳಂ ಕಲಿತುಕೊಳ್ಳಿ ಎಂದು ಹೇಳಿ ಅವರಿಗೆ ಮಲಯಾಳಂನ ಕಷ್ಟ ಪದಗಳನ್ನು ಹೇಳಿಕೊಟ್ಟು ನಾಲಗೆ ಸರಿಪಡಿಸುವ ಕೆಲಸವನ್ನೂ ನಾವು ಮಾಡಿದ್ದುಂಟು. ಅಂತೂ ಆ ಮಕ್ಕಳು ನಾಲ್ಕು ವರ್ಷದಲ್ಲಿ ಕನಿಷ್ಠ ಅಂದರೆ ಊಣ್ ಕಳಿಚ್ಚೋ, ವೆರುದೇ ಪರಞದಾ, ಪಿನ್ನೆ ಕಾಣಾಂ.. ಪಡಿಚ್ಚೋ ಎಂಬ ವಾಕ್ಯಗಳನ್ನು ಕಲಿತು ನಮ್ಮ ಅಪ್ಪಂ, ಪುಳಿಶ್ಶೇರಿ, ಪುಟ್ಟುಂ ಕಡಲೆಯ ರುಚಿಗೆ ಶರಣಾಗುತ್ತಿದ್ದರು.


ಸರಿ, ಇಂಜಿನಿಯರ್ ಅಂತೂ ಆಗಲ್ಲ, ಸದ್ಯ, ಯಾವುದಾದರೂ ಕಾಲ್ ಸೆಂಟರ್ ಸೇರೋಣ, ಅಲ್ಲಿ ಚೆನ್ನಾಗಿ ಇಂಗ್ಲಿಷ್ ಕಲಿತ ಮೇಲೆ ಯಾವುದಾದರೂ ಕಂಪೆನಿಯಲ್ಲಿ ಟ್ರೈಮಾಡಿದರಾಯ್ತು ಎಂದು ನಮ್ಮ ಗುಂಪಿನಲ್ಲಿದ್ದ ಮಂಗಳೂರಿನ ಹುಡುಗಿಯೊಬ್ಬಳು ಸಲಹೆ ನೀಡಿದ್ದೂ ಆಯ್ತು. ಇದಕ್ಕೆಲ್ಲಾ ಮನೆಯವರು ಒಪ್ಪ ಬೇಕಲ್ವಾ? ಮೊದಲು ಇಂಗ್ಲಿಷ್ ಕಲಿಯಬೇಕು... ಅದಕ್ಕೆ ರ್ಯಾಪಿಡೆಕ್ಸ್ ಇಂಗ್ಲಿಷ್ ಸ್ಪೀಕಿಂಗ್ ಕೋರ್ಸ್ ಪುಸ್ತಕ ಹಿಡಿದು ನಾಲ್ಕೈದು ಪುಟ ಓದಿದ್ದೂ ಆಯ್ತು. ಒಂದಷ್ಟು ದಿನ ಅಕ್ಕನ ಜತೆ ಆಕೆಗೆ ಇಂಗ್ಲಿಷ್ ಮರೆತೇ ಹೋಗುವಂತೆ ಇಂಗ್ಲಿಷ್ ಮಾತನಾಡಿದ್ದೂ ಆಯ್ತು. ಏನೂ ಪ್ರಯೋಜನವಾಗಲಿಲ್ಲ. ಇಂಗ್ಲಿಷ್ ಅರ್ಥವಾಗುತ್ತಿತ್ತೇ ಹೊರತು ಅದಕ್ಕೆ ಇಂಗ್ಲಿಷ್ ನಲ್ಲೇ ಉತ್ತರ ನೀಡಲು ಎಲ್ಲಾ ಭಾಷೆಗಳ ಕಿಚಡಿ ಮಾಡಬೇಕಾಗಿತ್ತು. ಕೆಲವೊಮ್ಮೆ ನಮ್ಮನ್ಯಾಕೆ ಇಂಗ್ಲಿಷ್ ಮೀಡಿಯಂ ಶಾಲೆಗೆ ಸೇರಿಸಿಲ್ಲ? ಎಂದು ಅಪ್ಪನನ್ನು ಕೇಳಿದಾಗ ನಿಮ್ಮಮ್ಮ ನಮ್ ಮಕ್ಳು ಮಲಯಾಳಂ, ಇಂಗ್ಲಿಷ್ ಶಾಲೆಗೆ ಹೋಗುವುದು ಬೇಡ, ನನ್ನ ಭಾಷೆ ಕನ್ನಡವೇ ಕಲಿಯಲಿ ಅಂತಾ ಒತ್ತಾಯಿಸಿದ್ಳು ಎಂದು ಅಪ್ಪ ಅಮ್ಮನಿಗೆ 'ಖೋ' ಹೇಳುತ್ತಿದ್ದರು. ಅಮ್ಮನೋ, ಕನ್ನಡದ ಬಗ್ಗೆ ತಮ್ಮ ಅಭಿಮಾನವನ್ನು ವ್ಯಕ್ತ ಪಡಿಸಿ ನಮ್ಮ ಬಾಯಿಂದ 'ಜೈ ಹೋ' ಹೇಳಿಸಿದ ಮೇಲೆ ಸುಮ್ಮನಾಗುತ್ತಿದ್ದರು.


ಅಂತೂ ಕಾಲೇಜು ಮುಗಿಯುತ್ತಾ ಬರುತ್ತಿದ್ದಂತೆ ನಮ್ಮ ರೆಸ್ಯೂಮೆಗಳು ದೇಶದ ಉದ್ದಗಲಕ್ಕೆ ಪ್ರಯಾಣಿಸಿ ಸುಸ್ತಾಗುತ್ತಿತ್ತು. ಏನೇ ಆದರೂ ಫಲಿತಾಂಶ ಬರಲಿ ಅಲ್ಲಿಯವರೆಗೆ ಊರಲ್ಲೇ ಏನಾದರೂ ಕೆಲಸ ಹುಡುಕಬೇಕೆಂದು ನಿರ್ಧರಿಸಿದೆ. ಊರಲ್ಲೇ ಇರುವ ಸರ್ಕಾರಿ ಐಟಿಐಯಲ್ಲಿ ಅತಿಥಿ ಉಪನ್ಯಾಸಕರ ಹುದ್ದೆ ಖಾಲಿ ಇತ್ತು. ಅರ್ಜಿ ಹಾಕಿದೆ ಉತ್ತರವೂ ಬಂತು. ಕ್ಲಾಸಿನಲ್ಲಿ ನನ್ನಕ್ಕಿಂತ ದೊಡ್ಡವರಾದ ಹುಡುಗರು. ನನ್ನಕ್ಕಿಂತ ಎತ್ತರದ ಬೋರ್ಡ್, ಸಾರಿ ಉಟ್ಟು ಪಾಠ ಮಾಡಬೇಕು. ಮೊದಮೊದಲು ಸ್ವಲ್ಪ ಸಂಕೋಚವಾದರೂ ಕ್ರಮೇಣ ಎಲ್ಲಾ ಸರಿಹೋಯ್ತು. ಅದಾದ ಮೇಲೆ ಎನ್್ಐಐಟಿ ಸೆಂಟರ್್ನಲ್ಲಿ ಪ್ರೋಗ್ರಾಮರ್ ಕೆಲಸ ಖಾಲಿ ಇದೆ ಎಂಬ ಜಾಹೀರಾತು ನೋಡಿ ಅಲ್ಲಿಗೂ ಅರ್ಜಿ ಹಾಕಿದೆ. ಕೆಲಸ ಸಿಕ್ತು, ಅದೂ 1 ತಿಂಗಳು. ಆವಾಗ ಇಂಜಿನಿಯರಿಂಗ್್ನ ಫಲಿತಾಂಶವೂ ಬಂದಿತ್ತು. ಫಲಿತಾಂಶ ಬಂದ ಮೇಲೆ ಎಲ್ಲರೂ ನಿನಗೆ ಬೆಂಗಳೂರಲ್ಲಿ ಯಾಕೆ ಕೆಲಸ ಸಿಕ್ಕಿಲ್ಲ? ಎಂದು ಕೇಳುವವರೇ ಜಾಸ್ತಿ. ಇಂಜಿನಿಯರಿಂಗ್ ಓದಿದ್ದರೂ ಮನಸ್ಸಲ್ಲಿ ಪತ್ರಕರ್ತೆಯಾಗಬೇಕೆಂಬ ತುಡಿತ. ಸ್ಥಳೀಯ ಪತ್ರಿಕೆಗಳಲ್ಲಿ ಆಗೊಮ್ಮೆ ಈಗೊಮ್ಮೆ ಬರೆದು ದಾಹ ತೀರಿಸಿದ್ದೂ ಆಯ್ತು.


ಅಂದೊಂದು ದಿನ ಚೆನ್ನೈಯಿಂದ ಕರೆ ಬಂತು. ಸುದ್ದಿ ಪೋರ್ಟಲ್್ವೊಂದರಲ್ಲಿ ಕೆಲಸ ಅದಾಗಿತ್ತು. ಸುದ್ದಿಪೋರ್ಟಲ್ ಅಂದಾಕ್ಷಣ ಮನಸ್ಸು ಪುಳಕಗೊಂಡಿತು. ಇದೇ ಸರಿಯಾದ ಟೈಮ್ ಅಂದ್ಕೊಂಡು ಅಪ್ಪನ ಜತೆ ಚೆನ್ನೈಗೆ ಹೋಗಿ ಇಂಟರ್್ವ್ಯೂಗೆ ಹಾಜರಾದೆ. ಎಲ್ಲವೂ ಸುಗಮವಾಗೇ ನೆರವೇರಿತು. ಕೆಲಸವೂ ಸಿಕ್ಕಿ ಬಿಡ್ತು. ಇನ್ನೇನು ಹೇಳುವುದು ಅಲ್ಲಿಯ ಕೆಲಸವೇ ಹಾಗಿತ್ತು. ಪೋರ್ಟಲ್್ನಲ್ಲಿ ಮೊದಲಬಾರಿಗೆ ನನ್ನ ಪ್ರೇಮಪತ್ರ ಪ್ರಕಟವಾಯ್ತು, ನಂತರ ಕೆಲವು ಲೇಖನಗಳು...ಕನ್ನಡ ಟೈಪಿಂಗ್ ಅಲ್ಲೇ ಕಲಿತು ಬ್ಲಾಗ್್ಲೋಕಕ್ಕೆ ಕಾಲಿರಿಸಿದೆ. ಅದರ ಅನುಭವ ವಿವರಣೆಗೆ ಅತೀತವಾದುದು. ಬ್ಲಾಗ್್ಲೋಕ ನನ್ನ ಜೀವನಕ್ಕೆ ಒಂದು ತಿರುವನ್ನು ನೀಡಿತ್ತು. ಅಲ್ಲಿ ನನಗೆ ಸಿಕ್ಕಿದ ಗೆಳೆಯ ಗೆಳತಿಯರೆಷ್ಟು!ನನ್ನ ಭಾವನೆಗಳಿಗೆ ಸ್ಪಂದಿಸಿದವರು, ನನ್ನ ತಪ್ಪನ್ನು ತಿದ್ದಿದವರೆಷ್ಟು...ಅವರೆಲ್ಲರಿಗೂ ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು.


ಚೆನ್ನೈಯಲ್ಲಿ ಒಂದೂವರೆ ವರ್ಷ ದುಡಿದಿದ್ದರೂ ಕನಸಿನ ಬೆಂಗಳೂರು ನನ್ನನ್ನು ಕರೆಯುತ್ತಲೇ ಇತ್ತು. 'ಪ್ರೆಸ್್' ಎಂಬ ಫಲಕ ಕಂಡ ಕೂಡಲೇ ನನ್ನೊಳಗಿನ ಪತ್ರಕರ್ತೆ ಜಾಗೃತವಾಗುತ್ತಿದ್ದಳು. ಆಮೇಲೆ ನಾಡಿನ ಪ್ರಸಿದ್ಧ ಪತ್ರಿಕೆಯೊಂದರಲ್ಲಿ ನೌಕರಿ ಸಿಕ್ಕಿತು. ಇಂಟರ್್ವ್ಯೂ ಮುಗಿದು ನೀವು ಆಯ್ಕೆಯಾಗಿದ್ದೀರಿ ಎಂದು ಹೇಳುವಾಗ ನನ್ನ ಕಣ್ಣಾಲಿಗಳು ತುಂಬಿದ್ದವು. ನಾನು ಪತ್ರಕರ್ತೆಯಾಗುತ್ತಿದ್ದೇನೆ ಎಂಬ ಸಂತೋಷ. ಅದೂ ಬೆಂಗಳೂರಲ್ಲಿ...ನನ್ನ ಕನಸು ನನಸಾದ ಕ್ಷಣ...

ಹಲವಾರು ಹುಡುಗಿರಂತೆ ನಾನು ಕೂಡಾ ಮನಸ್ಸಲ್ಲಿ ಹಲವಾರು ಕನಸುಗಳನ್ನು ಹೊತ್ತು ಒಂದು ದಿನ ಬೆಂಗಳೂರಿಗೆ ಬಂದೆ. ರಶ್ಮಿ ಕಾಸರಗೋಡು, ಕೇರಳ ಎಂದು ದಪ್ಪ ಅಕ್ಷರದಲ್ಲಿ ನನ್ನ ಬ್ಯಾಗ್ ಮೇಲೆ ಅಕ್ಕ ಚೀಟಿ ಅಂಟಿಸಿದ್ದಳು. ಕೇರಳ ಸರ್ಕಾರದ ಬಸ್ಸಿನಿಂದ ಇಳಿದು ಬಂದ ಕಾರಣವೇನೋ ಆಟೋಚಾಲಕರು ಅರ್ಧ ಮಲಯಾಳಂ, ಅರ್ಧ ತಮಿಳಲ್ಲಿ ಮಾತನಾಡಿ ಎಲ್ಲಿಗೆ ಹೋಗಬೇಕು ಎಂದು ಕೇಳುತ್ತಿದ್ದರು. ಹೇಗೋ ಗೆಳತಿಯೊಬ್ಬಳ ಸಹಾಯದಿಂದ ಪಿಜಿ ಸೇರಿದೆ. ಅಲ್ಲಿಂದ ಶುರುವಾಯ್ತು ನನ್ನ ಪಯಣ...ಒಂದಷ್ಟು ಮುಗ್ಗರಿಸಿ, ಮತ್ತೊಮ್ಮೆ ಎದ್ದು, ಬಿದ್ದು, ಅತ್ತು, ನಕ್ಕು....ಹೀಗೇ ಸಾಗುತ್ತಿದೆ. ಕೆಲವೊಮ್ಮೆ ಬದುಕು ಯಾಂತ್ರಿಕವಾಗುತ್ತಿದೆಯೇನೋ ಎಂದು ಅನಿಸಿದ್ದೂ ಉಂಟು. ಹಳೆಯ ನೋವುಗಳು ಕಲಿಸಿದ ಪಾಠ ಬದುಕುವ ಛಲಕ್ಕೆ ಸಾಥ್ ನೀಡಿದೆ.. ಪತ್ರಕರ್ತೆಯಾಗಿದ್ದೇನೆ...ಕನಸುಗಳ ಪಟ್ಟಿ ಬೆಳೆಯುತ್ತಲೇ ಇದೆ... ಸಾಗಬೇಕಾದ ದಾರಿ ಇನ್ನೂ ಇದೆ.

Rating
No votes yet

Comments