ಯುದ್ಧದ ಭೂತ

ಯುದ್ಧದ ಭೂತ

"ಸ್ನೇಹ ಅತಿ ಮಧುರ, ಸ್ನೇಹ ಅದು ಅಮರ
ಸ್ನೇಹವೇ ಗುಡಿಯೂ ,ಪ್ರೀತಿಯೇ ದೇವರು
ಕಾಲ ದೇಶ ಮೀರಿದ ಭಾವ"
ಎಂಬುದು ಕವಿವಾಣಿ. ಆದರೆ ಜೀವನಕ್ಕೂ ಕಾವ್ಯಕ್ಕೂ, ವಾಸ್ತವತೆಗೂ ಎಷ್ಟು ಅಂತರವೆಂಬುದು ಶ್ರೀಲಂಕಾದ ಉಗ್ರರನ್ನು ಕಂಡಾಗ ಸ್ಪಷ್ಟವಾಗುತ್ತದೆ. ಜೀವನ ಕಷ್ಟಗಳ ಸಂತೆ ಎನ್ನುವುದು ಕೆಲವರ ವಾದವಾದರೆ, ಇನ್ನೂ ಕೆಲವರಿಗೆ ಜೀವನ ಸುಖದ ಕಂತೆ. ಆದರೆ ಯಾವ ಸುಖಕ್ಕಾಗಿಯೋ(ದುಖಃ) ಈ ತಮಿಳಿನ ಹುಲಿಗಳು ರಕ್ತದ ಹೊಳೆಯನ್ನೇ ಹರಿಸಿದ್ದಾರೆ. 30 ವರ್ಷಗಳ ಸುಧೀರ್ಘ ಹೋರಾಟ ಕೇವಲ ಸಾವಿನಲ್ಲಿ ಪರ್ಯಾವಸಾನವಾಗುವಾಗ, ಇಷ್ಟು ದಿನದ ಹೋರಾಟ ಕೇವಲ ಒಂದು ಸಿನಿಮೀಯವಾಗಿಬಿಡುತ್ತದೆ. ಇಷ್ಟು ದಿನಗಳ ಹೋರಾಟ ತನ್ನ ಅರ್ಥವನ್ನೇ ಕಳೆದುಕೊಳ್ಳುತ್ತದೆ. ಇಲ್ಲಿ ಎಷ್ಟು ರಕ್ತ ಪ್ರವಾಹ ಹರಿದಿದೆಯೋ, ಬಹುಶಃ, ಬಾವಿ ತೋಡಿದರೆ ರಕ್ತ ಬರುವುದೇನೋ ಎನ್ನಿಸುತ್ತದೆ. ವೆಲುಪಿಲ್ಲೈ ಪ್ರಭಾಕರನ್ ಎಂಬ ತಮಿಳು ಹುಲಿಯನ್ನು ಕಂಡಾಗ, ಆತನ ಆ ದೈತ್ಯ ದೇಹದಲ್ಲಿ ಇನ್ನೂ ಎಷ್ಟು ಅಮಾಯಕರ ರಕ್ತವನ್ನು ಬಸಿಯುವ ಪಿಪಾಸಿತನವಿದೆಯೋ ಎಂದು ಯಾರಿಗೂ ಅನ್ನಿಸದೇ ಇರಲಾರದು. ಆದರೆ ಕೇವಲ ಒಂದೇ ಒಂದು ಬಂದೂಕಿನಿಂದ ಆರಂಭವಾದ ಈ ತಮಿಳು ಹುಲಿಯ ಕಥೆ, ಆಧುನಿಕ ಶಸ್ತ್ರಾಸ್ತ್ರಗಳು,ತಾಂತ್ರಿಕ ಬೆಳವಣಿಗೆಗಳು,ತನ್ನದೇ ಸ್ವಂತ ಯುದ್ಧ ವಿಮಾನ, ನೌಕಾ ನೆಲೆ ಎಲ್ಲವನ್ನೂ ಕಂಡುಕೊಳ್ಳುತ್ತದೆ ಎಂದರೆ, ಆ ಮನುಷ್ಯ ಎಷ್ಟರ ಮಟ್ಟಿಗೆ ತನ್ನ ಹೋರಾಟವನ್ನು ಸುಸಜ್ಜಿತವಾಗಿಸಿರಬೇಕೆಂಬುದು ಎಂಥವರಿಗೂ ಅರಿವಾಗದೆ ಇರಲಾರದು. ಆ ಮನುಷ್ಯನ ಬಗೆಗೆ ಯೋಚಿಸಿದಾಗಲೆಲ್ಲಾ ನನಗೆ ಬಹಳವಾಗಿ ಕಾಡಿದ ಪ್ರಶ್ನೆಯೆಂದರೆ, ಎಲ್ಲ ತಮಿಳಿನ ಮಕ್ಕಳೂ ಈ ಯುದ್ಧದಲ್ಲಿ ತೊಡಗಿರುವಾಗ, ತನ್ನ ಮಕ್ಕಳಿಗೆ ಮಾತ್ರ ಒಳ್ಳೆಯ ಓದಿನ ಸುಖ, ಅಲ್ಲದೇ ಯುದ್ಧವೇನೆಂದು ಅರಿಯುವ ಮುನ್ನವೇ ಅದೇ ಯುದ್ಧದಲ್ಲಿ ಆ ಮಕ್ಕಳು ಸೈನಿಕರು. ಆ ಮುಗ್ಧ ಮಕ್ಕಳ ಕೈಯಲ್ಲಿನ ಬಂದೂಕುಗಳನ್ನು ನೋಡಿದಾಗ, ನಿಜಕ್ಕೂ
ಬಹಳ ಬೇಸರವಾಗುತ್ತದೆ. ಇಂದು ಆ ದೈತ್ಯ ಹುಲಿ ನೆಲಕ್ಕುರುಳಿದಾಗ, ಅದರ ಜೊತೆಗೆ, ಆ ಅನೇಕ ಮಕ್ಕಳು ಕೂಡ ರಕ್ತ ಸಿಕ್ತ ಹೆಣಗಳಾಗಿಹೋದರು. ಇದನ್ನು ಕಂಡಾಗ ನಿಜಕ್ಕೂ ಈ ಹೋರಾಟ ಬೇಕಿತ್ತೇ ಎಂದು ಅನಿಸದೇ ಇರಲಾರದು. ಕಡೆಗೂ ಈ ಯುದ್ಧದ ಭೂತ ಎಲ್ಲರನ್ನೂ ಆಹುತಿ ತೆಗೆದುಕೊಂಡಿದೆ. ಬಹುಶಃ ಆ ಮಕ್ಕಳು ಈ ಯುದ್ಧದಲ್ಲಿರುತ್ತಿರದಿದ್ದರೆ ಎಷ್ಟು ಅಮಾಯಕ ಪ್ರಾಣಗಳು ಉಳಿಯುತ್ತಿದ್ದವೋ. ಈ ಪೈಶಾಚಿಕ ಯುದ್ಧದ ಭೂತ ಎಂದಿಗೆ ಈ ಜಗತ್ತನ್ನು ಬಿಟ್ಟು ತೊಲಗುವುದೊ ಎಂದು ಶಪಿಸದೇ ಇರಲಾಗುತ್ತಿಲ್ಲ!!

Rating
No votes yet